ಶುಕ್ರವಾರ, ಮಾರ್ಚ್ 16, 2007

"ಹಳದೆಂದು ನೀನದನು ಕಳೆಯುವೆಯ ಮರುಳೆ"

ಅದು ಯುಗಾದಿ. ಸಿಹಿಕಹಿಯನ್ನು ಸಮಾನವಾಗಿ ಸ್ವೀಕರಿಸುತ್ತೇವೆಂಬ ಆಶಯದೊಂದಿಗೆ ಬೇವು-ಬೆಲ್ಲವನ್ನೂ ಹಂಚಿಕೊಳ್ಳುತ್ತೇವೆ. ದೇವಸ್ಥಾನದಲ್ಲೊಂದು ಪೂಜೆ ಮಾಡಿಸಿ, ಹಣ್ಣು-ಕಾಯಿ ಮನೆಗೆ ತಂದು, ಪಾಯಸದ ಊಟ ಮಾಡಿ ಮನೆಮಂದಿಯೆಲ್ಲಾ ಒಟ್ಟಾಗಿ ಕೂತು ಪಂಚಾಂಗ ಶ್ರವಣ ಮಾಡುತ್ತೇವೆ. ಆದರೆ ಎಷ್ಟು ಮನೆಗಳಲ್ಲಿ ಇವೆಲ್ಲಾ ನಿಜವಾಗಿಯೂ ನಡೆಯುತ್ತಿದೆ? ನಮ್ಮ ಯುಗಾದಿ ತೊಡಗುವುದು ಯಾವುದೋ ವ್ಯಕ್ತಿಯ ಜನ್ಮದಿನದಿಂದಲೋ, ಶಕಪುರುಷನ ಪಟ್ಟಾಭಿಷೇಕದಿಂದಲೋ ಅಲ್ಲ. ಮಾನವ ಕೇಂದ್ರಿತವಾದ `ಹುಚ್ಚಾಟ'ಗಳ ಪ್ರದರ್ಶನವೂ ಇದಲ್ಲ. ಇದಕ್ಕೊಂದು ಪಾವಿತ್ರ್ಯ ಇದೆ. ವಸಂತೋದಯದ ಕಾಲ ಇದು. ಸೂರ್‍ಯಚಂದ್ರರ ಗತಿಯನ್ನು ಅವಲಂಬಿಸಿ ಸೌರಮಾನ, ಚಾಂದ್ರಮಾನ ಎಂಬೆರಡು ಯುಗಾದಿಗಳ ಆಚರಣೆ ಹುಟ್ಟಿಕೊಂಡದ್ದು.

ಚಾಂದ್ರಮಾನ ರೀತ್ಯಾ ಹೊಸ ಸಂವತ್ಸರದ ಆರಂಭ ಚೈತ್ರ ಶುದ್ಧ ಪಾಡ್ಯದಂದು. ಇದೇ ಚಾಂದ್ರಮಾನ ಯುಗಾದಿ. ಮೇಷಮಾಸದ ಪ್ರಾರಂಭದ ದಿನವೇ ಸೌರಮಾನ ಯುಗಾದಿ. ಭೂಮಿಯ ಮೇಲೆ ನಡೆಯುವ ಹಲವು ವೈಜ್ಞಾನಿಕ ಕ್ರಿಯೆಗಳಿಗೆ ಸೂರ್ಯಚಂದ್ರರೇ ಆಧಾರವಾಗಿರುವುದರಿಂದ ಈ ಆಚರಣೆಗಳಿಗೆ ವೈಜ್ಞಾನಿಕ ಮಹತ್ವವೂ ಇದೆ.ಆದರೆ ಈಗ ಏನಿದ್ದರೂ ಜನವರಿ ಒಂದೇ ಹೊಸವರ್ಷ. ಡಿಸೆಂಬರ್ ೩೧ರಂದು ರಾತ್ರಿ ಹನ್ನೆರಡರವರೆಗೆ ಕುಡಿದು ಕುಣಿಯುತ್ತಾ ಬರಲಿರುವ ವರ್ಷವನ್ನು ಸ್ವ್ವಾಗತಿಸುವುದೇ ಕ್ರಮವಾಗಿ ಬಿಟ್ಟಿದೆ. ಪಾಡ್ಯ, ಬಿದಿಗೆ ಮೂಲೆಗುಂಪಾಗಿ ನಾವು `ಸಂಡೇ' `ಮಂಡೇ'ಗಳಾಗಿದ್ದೇವೆ. ಒಂದು ನೆನಪಿರಲಿ. ಸಾವಿರಾರು ವರ್ಷಗಳ ಹಿಂದೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಾಷೆಗಳೇ ಹುಟ್ಟದಿದ್ದ ಕಾಲದಲ್ಲಿ ನಮ್ಮ `ಆದಿತ್ಯ'ವಾರ (`ಸನ್'ಡೇ) `ಸೋಮ'ವಾರ (`ಮೂನ್'ಡೇ) ಗಳಿದ್ದವು! ರಾಮಾಯಣದ ಕಾಲದಲ್ಲೇ ತಿಥಿ, ನಕ್ಷತ್ರ, ಋತು, ಸಂವತ್ಸರಗಳಿದ್ದವು. ಭಾರತೀಯ ಆಚರಣೆಗಳ ಪ್ರಾಚೀನತೆ ಇವುಗಳಿಂದಲೇ ಅರಿವಿಗೆ ಬರುತ್ತದೆ.

ಮುಸ್ಲಿಂ ರಾಷ್ಟ್ರಗಳಲ್ಲಿ ಈಗಲೂ ಶುಕ್ರವಾರವೇ ರಜೆ. ಕ್ರೈಸ್ತರಿಗೆ ಭಾನುವಾರ ಪವಿತ್ರ. ನಮಗೇ......? ನಾಗರಿಕರಾಗುವ ಭರದಲ್ಲಿ ಅಲ್ಲೂ ಅಲ್ಲದ, ಇಲ್ಲೂ ಸಲ್ಲದ ಎಡಬಿಡಂಗಿಗಳಾಗಿದ್ದೇವೆ. ನಾವು ಎಡವಿದ್ದೇ ಇಲ್ಲಿ. ಬೇರೆ ಸಂಸ್ಕೃತಿಯಲ್ಲಿರುವ ಒಳ್ಳೆಯದನ್ನು ಪಡೆದುಕೊಳ್ಳೋಣ. ನಮ್ಮದನ್ನು ಬಿಡದಿರೋಣ ಎಂಬ ಮನೋಧರ್ಮವೇ ಮಾಯವಾಗಿದೆ. ಬಹು ಸುಂದರವಾದ ನಮ್ಮ ಸಂಸ್ಕೃತಿಯ ಯುಗಾದಿಯಂತಹ ಆಚರಣೆಗಳನ್ನು ಪರಕೀಯರ ಅನುಕರಣೆಯಿಂದ ಮರೆತಿದ್ದೇವೆ. ಇಲ್ಲವೇ ಬಿಟ್ಟುಬಿಟ್ಟಿದ್ದೇವೆ.

ಸಿಹಿಕಹಿ ಹಂಚಿಕೊಳ್ಳುತ್ತಾ ಆರಂಭವಾಗುವ ಯುಗಾದಿ ಎಲ್ಲಿ? ಅಮಲೇರಿ ಕುಣಿಯುವ ಜನವರಿ ೩೧ ಎಲ್ಲಿ?ಕಷ್ಟನಷ್ಟಗಳೆಲ್ಲಾ `ವ್ಯಯ'ಗೊಂಡು ಸರ್ವರಿಗೂ ಜಯ ದೊರಕಲೆಂಬ ಆಶಯದೊಂದಿಗೆ `ಸರ್ವಜಿತ್' ಸಂವತ್ಸರ ಆಗಮಿಸುತ್ತಲಿದೆ. ಹೊಸ ವಸಂತೋದಯದೊಂದಿಗೆ ಹೊಸ ಕನಸುಗಳೂ ಚಿಗುರಲಿ. ಹಳೆಯ ಕನಸುಗಳು ನನಸಾಗಲಿ.

"ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತು
ಹಳದೆಂದು ನೀನದನು ಕಳೆಯುವೆಯ, ಮರುಳೆ?
ತಳಹದಿಯದಲ್ತೆ ನಮ್ಮೆಲ್ಲ ಹೊಸತಿಳಿವಿಂಗೆ
ಹಳೆ ಬೇರು ಹೊಸ ತಳಿರು-ಮಂಕುತಿಮ್ಮ ''

(ಬರಹ ಕೃಪೆ- ತಂಗಿ ಶ್ರೀಕಲಾ)

ಯುಗಾದಿಗೆ ಏನು ಬರೆಯೋದು ಅಂತ ಆಲೋಚನೆ ಮಾಡ್ತಾ ಇದ್ದಾಗ, ತಂಗಿ ಏನೋ ಬರೀತಿದ್ದಳಲ್ಲ ಅಂತ ನೆನಪಾಯಿತು, ಅವಳ ಬರಹ ಕದ್ದು, ಇಲ್ಲಿ ಹಾಕಿದ್ದೇನೆ! ಎಲ್ಲರಿಗೂ ಯುಗಾದಿಯ ಶುಭಾಶಯಗಳು.

8 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

anisutide yako indu.....
tangirige annandiriginta buddi jasti endu...

aha enta ketta yochane!!! :)

Cheers
Chin

Sandeepa ಹೇಳಿದರು...

"ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತು.."
ಹ್ಮ್ಮ್...
ತಿಳಿವು ಸುಲಭಕ್ಕೆ ಸಿಕ್ಕಲೊಲ್ಲದಲ್ಲೊ!!!

ತಿಳಿಯತೊಡಗಿದರೆ ನೀ ಪುಣ್ಯಾತ್ಮ,
ತಿಳಿಯದೆ ಪೋದರೆ ತಿಳಿ ಪಾಪಾತ್ಮ,
ತಿಳಿವಿಲ್ಲದೆಲೇ ನೀ ಜೀವಾತ್ಮ,
ತಿಳಿದ ಬಳಿಕ ನೀನೇ ಪರಮಾತ್ಮ.

ಯುಗಾದಿಯ ಶುಭಾಶಯಗಳು.ಹೊಸ ವರ್ಷ ಹೊಸಬೆಳಕನ್ನು ತರಲಿ.

ಅನಾಮಧೇಯ ಹೇಳಿದರು...

ಹಹಹ..ಚಿನ್,
ಸಕ್ಕತ್ತಾಗಿ ಬರದ್ದೆ.

ಶೀನಿಧಿ, ಲೇಖನ ಚೆನ್ನಾಗಿದ್ದು... ಹೊಸ ವರ್ಷದ ಶುಭಾಶಯಗಳು

Annapoorna Daithota ಹೇಳಿದರು...

Baraha chennaagide Srikala :)

ಶ್ರೀನಿಧಿ.ಡಿ.ಎಸ್ ಹೇಳಿದರು...

ಚಿನ್,
ನಿಜಕ್ಕೂ ಕೆಟ್ಟ ಯೋಚ್ನೆನೇಯೋ!:)

ಸಂದೀಪಾ,
ಅಲ್ಪಜ್ಞ ಹೇಳ್ಕ್ಯತ್ತೆ ಮಾರಾಯ! ಬರಿಯದು ನೋಡಿರೆ!!

ಯಜ್ಞೇಶಣ್ಣಾ,
ಧನ್ಯವಾದಗಳು, ಬರದ್ದು ನಾನಲ್ಲ, ತಂಗಿ!

ಅನ್ನಪೂರ್ಣಾ,
ಅವಳಿಗೆ ಹೇಳ್ತೀನಿ ಬಿಡಿ:)

ಅನಾಮಧೇಯ ಹೇಳಿದರು...

ಇನ್ನೊಂದು ಸಲ ಕದ್ಕಂಡು ಬಂದು ಎಲ್ಲಾ ಹಾಕಡ, ತಂಗಿ ಹತ್ರ ಕೇಳಿ ತಗಂಡು ಬಾ :-)

ಜನವರಿ ಒಂದರ ಹೊಸವರ್ಷದಲ್ಲಿ ಬರೀ ತಾರೀಖಿನ ಬದಲಾವಣೆ ಆಗತ್ತೆ.
ಆದರೆ ಉಗಾದಿ ಯಿಂದ ಪ್ರಕೃತಿಯಲ್ಲಿಯೂ ಕೂಡ ಬದಲಾವಣೆ ಶುರು ಆಗತ್ತೆ. ಇದೇ ನಿಜವಾದ 'ಹೊಸ' ವರುಷಾರಂಭ.

anyhow, ಲೇಖನದ ವಾಸ್ತವತೆ ಚೆನ್ನಾಗಿದೆ.
ಶ್ರೀನಿಧಿ ಮತ್ತು ಕುಟುಂಬಕ್ಕೆ ಉಗಾದಿ ಶುಭಾಶಯಗಳು.

Unknown ಹೇಳಿದರು...

idralle gottagutte kanri doddorella janaralla chikkorella konaralla anta.....[kshamisi]

ಶ್ರೀನಿಧಿ.ಡಿ.ಎಸ್ ಹೇಳಿದರು...

RAMS!,

Ninna maatu satya bidamma:)