ಸೋಮವಾರ, ಜೂನ್ 18, 2007

ಹಕ್ಕಿ ಕಥೆ.

ನಿನ್ನೆ ರಾತ್ರೆ ಹನ್ನೆರಡು ಗಂಟೆ ಸುಮಾರಿಗೆ ಸುಶ್ರುತ ಮೆಸೇಜು ಮಾಡಿದ. ಎಕ್ಸಾಮಿಗೆ ಓದುತ್ತಿದ್ದವನು ಹಾಗೇ ಎಲ್ಲೋ ಎದ್ದು ಹೊರಗಡೆ ಹೋಗಿರಬೇಕು. ಈ ಪರೀಕ್ಷೆ ಅಂದರೇನೇ ಹಾಗೆ, ಆ ಸಮಯದಲ್ಲಿ ನಮಗೆ, ಓದುವುದೊಂದು ಬಿಟ್ಟು ಮತ್ತೆಲ್ಲ ವಿಚಾರಗಳೂ ತಲೆಗೆ ಬರುತ್ತವೆ. ಇಲ್ಲದ ಬೇರೆ ಜಂಜಡಗಳೆಲ್ಲ ಅದೇ ಸಮಯಕ್ಕೇ ತಲೆಗೆ ಸುತ್ತಿಕೊಳ್ಳುತ್ತವೆ. ಇವನ ವಿಷಯದಲ್ಲೂ ಹಾಗೇ ಆಗಿದೆ.

" ನಮ್ಮ ಮನೆ ಎದುರು ಒಂದು ದೊಡ್ಡ ಮರ. ಅದರ ನಾಕನೇ ರೆಂಬೆಯ ಮೂರನೇ ಕವಲಿನಲ್ಲಿ ಒಂದು ಹಕ್ಕಿ ಸಂಸಾರ. ಗಂಡ, ಹೆಂಡತಿ, ಮೂರು ಮಕ್ಕಳು. ಹೆಣ್ಣು ಹಕ್ಕಿ ಮತ್ತೆ ಗರ್ಭಿಣಿ! ಅದು ಎಲ್ಲಿಗೂ ಹೋಗದೇ ಗೂಡಿನಲ್ಲೇ ಕೂತಿರುತ್ತದೆ: ಮಳೆ ನೋಡುತ್ತಾ, ಮರಿಗಳೊಡನೆ. ಇವತ್ತು ಬೆಳಗ್ಗೆ ಆಹಾರ ತರಲೆಂದು ಹೋದ ಗಂಡ, ಇನ್ನೂ ವಾಪಾಸು ಬಂದಿಲ್ಲವಂತೆ.. ಗೂಡಿನಲ್ಲಿ ಚಿಂತೆ, ಬಿಕ್ಕಳಿಕೆ,ನಿಟ್ಟುಸಿರು.. ನಾನು ಅವಕ್ಕೆ, "ನಾಳೆ ಬೆಳ್ಗೆ ಹುಡುಕೋಣ" ಅಂತ ಸಮಾಧಾನ ಮಾಡಿದ್ದೇನೆ. ನಿನ್ನ ಜೊತೆ ಅವ್ರಿಗು ಗುಡ್ ನೈಟ್ ಹೇಳಿದ್ದೇನೆ. ಸರಿ ತಾನೆ"?

ಇವನಿಗ್ಯಾಕಪಾ ಬೇಕಿತ್ತು ಇಲ್ಲದ ಉಸಾಬರಿ? ಅಲ್ದೇ ಪಾಪ ಆ ಹಕ್ಕಿಗೆ ಗುಡ್ ನೈಟ್ ಬೇರೆ ಹೇಳಿದ್ದಾನೆ. ಅದ್ಕೆ ಪಾಪ ಅದು ಗುಡ್ ನೈಟ್ ಹೇಗಾಗ ಬೇಕು? ಹಮ್, ಹಾರೈಸೋದ್ರಲ್ಲಿ ತಪ್ಪಿಲ್ಲ ಅಂದುಕೊಳ್ಳೋಣ. ಅಲ್ಲದೇ ಆ ಹಕ್ಕಿ ಸಂಸಾರಕ್ಕೆ ವಿಷ್ ಮಾಡೋ ಭರದಲ್ಲಿ ನಮ್ಮನ್ನೂ ತನ್ನ ಜೊತೆ ಎಳೆದುಕೊಂದು ಬಿಟ್ಟಿದ್ದಾನೆ! ನಾವು ಕೂಡಾ ತಿಳಿದೋ , ತಿಳಿಯದೆಯೋ ಆ ಹಕ್ಕಿ ಸಂಸಾರದ ದುಃಖದಲ್ಲಿ ಭಾಗಿಗಳಾಗಿ ಬಿಟ್ಟಿದ್ದೇವೆ, ಒಂದು "ಗುಡ್ ನೈಟ್" ಕಾಲದಲ್ಲಿ.

ನಂಗೋ ಬೆಳ್ಗೆ ತಂಕ ಪಾಪ, ಆ ಹಕ್ಕಿದೇ ಆಲೋಚ್ನೆ! ಎಲ್ ಹೋಯ್ತೋ, ಎನ್ ಆಯ್ತೋ. ಈ ಬೆಂಗಳೂರೆಂಬೋ ಮಾಯಾ ನಗರಿ ಏನ್ ಸಾಮಾನ್ಯಾನಾ? ಎಲ್ಲ ಒಂದೇ ತರ ಕಾಣೋ ಪೆಟ್ಗೆ ಪೆಟ್ಗೆ ಮನೆಗಳು. ದಾರಿ ತಪ್ಸ್ ಕೊಂಡು ಎಲ್ಲಿ ಅಲೀತಿದ್ಯೋ, ಹೆಂಡ್ತಿ ನೋಡದ್ರೆ ಗರ್ಭಿಣಿ ಅಂದಿದಾನೆ ಸುಶ್. ಮಳೆ ಬೇರೆ ಜೊತೆಗೆ. ಅಲ್ಲಾ ಇವನ್ಯಾಕಪಾ ಅದ್ರ್ ಹತ್ರ ಕೇಳೋಕೆ ಹೋಗ್ಬೇಕಿತ್ತು? ಸುಮ್ನೆ ಇದಿದ್ರೆ ಏನಾಗಿರೋದು? ಅಲ್ಲಾ, ನಾನಾಗಿದ್ರೂ ಕೇಳ್ತಿದ್ದೆ ಅನ್ನಿ, ಅದು ಬೇರೆ ವಿಚಾರ.

ಅದೇ ಹಕ್ಕಿನೇ ತಲೆ ಒಳಗೆ ಇಟ್ಕೊಂಡು ಸ್ನಾನ, ತಿಂಡಿ ಮುಗ್ಸಿ ಪ್ಯಾಂಟು- ಶರ್ಟು ಹಾಕ್ಕಂಡು ಬಸ್ಯಾಂಡಿಗೆ ಹೋಗ್ ನಿಂತೆ. ಅಲ್ಲೇ ಪಕ್ಕದಲ್ ಒಂದು ಮರ ಇದೆ. ಕೀಚ್ಲು ಧ್ವನಿ ನಿ ಯಾವ್ದೋ ಹಕ್ಕಿ ಸಣ್ಣಕೆ ಗಲಾಟೆ ಮಾಡ್ತಿತ್ತು! ಮೈ ಪುಕ್ಕ ಎಲ್ಲಾ ಕೆದ್ರೋಗಿದೆ ಪಾಪ.
"ಏನೇ ಹಕ್ಕಿ ಏನಾಯ್ತು" ಅಂದೆ.

ಏನೂ ಇಲ್ಲಾ ಮನೆ ದಾರಿ ತಪ್ಪಿದೆ ನಂಗೆ, ನಿನ್ನೆ ಆಹಾರ ಹುಡಕ್ಕೊಂಡ್ ಹೊರ್ಟಿದ್ನಾ - ಯಾವ್ದೋ ತಲೇಲಿ ಎಲ್ಲೆಲ್ಲೋ ಹಾರಿದೀನಿ. ಆಹಾರ ಸಿಗ್ತು, ಕಚ್ಕೊಂಡು ಹಾರೋಕೆ ನೋಡಿದ್ರೆ ಏನ್ ಮಾಡೋದು, ಯಾವ್ದೋ ಗೊತ್ತಿಲ್ದೇ ಇರೋ ಜಾಗ. ಹೆಂಗೆ ವಾಪಾಸು ಹೋಗೋದು ಅಂತ್ಲೂ ಗೊತಾಗ್ಲಿಲ್ಲ. . ಅಲ್ಲೇ ಒಂದು ಅರ್ಧ ಕಟ್ಟಿರೋ ಬಿಲ್ಡಿಂಗ್ ಇತ್ತು, ಸುಮ್ನೆ ವೆಂಟಿಲೇಟರ್ ಸಂದೀಲಿ ಕೂತು ರಾತ್ರಿ ಕಳ್ದೆ.. ಈಗ ಮನೆಗೆ ಹೇಗ್ ಹೋಗ್ಲಿ.. ಹೆಂಡ್ತಿ ಬೇರೆ ಗರ್ಭಿಣಿ.. ಮೂರು ಪುಟ್ ಪುಟ್ ಮಕ್ಳಿದಾರೆ..

ಓಹ್- ಇದು ಸುಶ್ ಮನೆ ಎದ್ರುಗಡೇ ಹಕ್ಕಿ! ನಂಗೆ ಭಾರೀ ಖುಶಿ ಆಗೋಯ್ತು!

ನಾನು ಅದರ ಮಾತ್ನ ಅರ್ಧಕ್ಕೆ ನಿಲ್ಸಿದವನೇ,

"ನಂಗೆ ನಿಮ್ಮನೆ ದಾರಿ ಗೊತ್ತು... ನಿಮ್ ಮನೆ ಎದ್ರಿಗೆ ಟಾರಸಿ ಮನೆ ಇಲ್ವಾ, ಅಲ್ಲೇ ಮೇಲಿರೋ ಹುಡ್ಗ ನಂಗೆ ಫ್ರೆಂಡು ಹಕ್ಕೀ, ಅವನು ನಿನ್ನೆ ರಾತ್ರೇನೇ ನೀನು ಮನೇಲ್ ಇಲ್ದಿರೋ ಕಥೆ ನಂಗೆ ಹೇಳಿದಾನೆ, ಏನೂ ಚಿಂತೆ ಮಾಡ್ಬೇಡ" ಅಂತಂದು ಅದರ ಮನೆಗೆ ಹೋಗೋ ದಾರಿ ಹೇಳಿ, ಶುಭೋದಯಾ ಅಂತ ಹಾರೈಸಿ ಕಳ್ಸಿಕೊಟ್ಟೆ. ಅಷ್ಟು ಮಾಡಿದವನೇ ಸುಶ್ ಗೆ ಮೆಸೇಜು ಬಿಟ್ಟೆ.

" ಇಲ್ಲೊಂದು ಪುಟ್ಟ ಬೆದರಿದಂತೆ ಕಾಣುವ ಹಕ್ಕಿ, ನನ್ನ ಪಕ್ಕ ಇರೋ ಮರದ ಗೆಲ್ಲ ಮೇಲೆ. ಪುಕ್ಕ ಕೆದರಿದೆ. ಕಣ್ಣಲ್ಲಿ ಚಿಂತೆ, ದೇಹ ಭಾವ ಗಾಭರಿಯದು. ಅದು ದಾರಿ ತಪ್ಪಿಸಿಕೊಂಡಿದೆಯಂತೆ. ಹೆಂಡತಿ ಗರ್ಭಿಣಿ ಬೇರೆ ಅಂತು. ನಾನು ನಿನ್ನ ಮನೆ ದಾರಿ ಹೇಳಿ, ಶುಭೋದಯ ಅಂತ ಹಾರೈಸಿ, ಅರಾಮಾಗಿ ಹೋಗು ಅವ್ರೆಲ್ಲ ಚೆನ್ನಾಗಿದಾರೆ ಅಂದೆ. ಸರಿ ತಾನೆ?"

"ಥ್ಯಾಂಕ್ಸು ಮಾರಾಯಾ, ನಾನಿನ್ನು ನಿಶ್ಚಿಂತೆಯಿಂದ ಎಕ್ಸಾಮು ಬರೀ ಬಹುದು " - ರಿಪ್ಲೈ ಬಂತು ಆ ಕಡೆಯಿಂದ.

ಇಷ್ಟು ಹೊತ್ತಿಗೆ ಗಂಡು ಹಕ್ಕಿ ಗೂಡು ಮುಟ್ಟಿರಬಹುದು. ತನ್ನ ಪುಟ್ಟ ರೆಕ್ಕೆಯಡಿ ಮತ್ತೂ ಪುಟ್ಟ ಮರಿಗಳನ್ನ ಕೂರಿಸಿಕೊಂಡು ಹೆಂಡತಿ ಹಕ್ಕಿಯ ಪಕ್ಕ ಬೆಚ್ಚಗೆ ಕೂತಿರಬಹುದು.

ಓವರ್ ಟು ಸುಶ್!

11 ಕಾಮೆಂಟ್‌ಗಳು:

Harsha Bhat ಹೇಳಿದರು...

nimma hakki kathi maja ada tagori...

chanda ada.

ಶ್ಯಾಮಾ ಹೇಳಿದರು...

ಹಕ್ಕಿ ಕಥೆ ತುಂಬಾ ಚೆನ್ನಾಗಿದ್ದು.. ನಮ್ಮನೇ ಎದುರಿಗೆ ಗೂಡು ಕಟ್ಟಿದ್ದ ಹಕ್ಕಿಗಳು , 2 ಮರಿಗಳು ದಿನಾ ಅವುಗಳನ್ನ ನೋಡ್ತಿದ್ದಿದ್ದು, ಆಮೇಲೆ ಅವರ ಕಥೆಯ ದುಃಖಾಂತ್ಯ, ನಾನು ಅಕ್ಕ ಅತ್ತಿದ್ದು ಎಲ್ಲ ನೆನಪಾತು :(

ಅನಾಮಧೇಯ ಹೇಳಿದರು...

Nenne Sush msg nodidmele nangu nidde barlille.Chinte aagittu..
paristhiti hingideyalla innelliya gudnightu? paapa hakkigalu ande. adakke gudnite anta harasu olledaagutte anda.. eega nodidre ninge gandu hakki sikki mane daari torsidya kushi aaytu nodu.

Chanda bardidiya

ಅನಾಮಧೇಯ ಹೇಳಿದರು...

Shreenidhi:

Congratulations for writing posssibly your worst post..

Ninna barvanigeya problemma athva yanna sensitivity problemma gottille..

[not to be taken personally]

keep posting...

Love,
Chin

ಸಿಂಧು sindhu ಹೇಳಿದರು...

ಶ್ರೀನಿಧಿ,

ಒಂದು ಉತ್ತಮ ಮತ್ತು ವಿಶಿಷ್ಟ ಪ್ರಯತ್ನ. ಯಂಡಮೂರಿಯವರ ಕತೆಯ ರೋಚಕತೆ ಮತ್ತು ನಿಶ್ಚಿತ ಸಂಭಾವ್ಯತೆ..
ಕಲ್ಪಕ ಕತೆಯಲ್ಲಿನ ಈ ಕಲ್ಪಿತ ಸಾಲು ತುಂಬ ನಿಜವಾಗಿ ಕಂಡು ಇಷ್ಟವಾಯಿತು - "ತನ್ನ ಪುಟ್ಟ ರೆಕ್ಕೆಯಡಿ ಮತ್ತೂ ಪುಟ್ಟ ಮರಿಗಳನ್ನ ಕೂರಿಸಿಕೊಂಡು ಹೆಂಡತಿ ಹಕ್ಕಿಯ ಪಕ್ಕ ಬೆಚ್ಚಗೆ ಕೂತಿರಬಹುದು."

ಪ್ರೀತಿಯಿರಲಿ,
ಸಿಂಧು

ಅನಾಮಧೇಯ ಹೇಳಿದರು...

ಬೇಗ ಮರಳುವೆನೆಂದು ಹೇಳಿದ
ಖಗದ ಜಾಡನು ತಿಳಿಯದಾಗಿಹ
ಮುಗುದೆ ಹಕ್ಕಿಯ ನೋವ ಕತೆಯನು ಕೇಳಿ ನೀವೆಲ್ಲ
ಆಗ ಬಂದಿಹ ಫೋನಿನಲ್ಲಿಯು
ಬ್ಲಾಗು ಬರಹದ ಜಾಡಿನಲ್ಲಿಯು
ಜಾಗ ತಲುಪಿದ ಹಕ್ಕಿ ಬಳಗಕೆ ಚಿಂತೆ ಇನ್ನಿಲ್ಲ ||


"ಭಾಮಿನಿಷಟ್ಪದಿಯಲ್ಲಿ ಕಾಮೆಂಟ್ ಪಡೆದ ಮೊಟ್ಟಮೊದಲ(?) ಬ್ಲಾಗ್ ಪೋಸ್ಟ್ "ಎಂಬ ಖ್ಯಾತಿ ಇದಕ್ಕೆ :-)
ಶ್ರೀನಿಧಿಗೆ ಅಭಿನಂದನೆಗಳು!

Member1 ಹೇಳಿದರು...

ಶ್ರೀ ತುಂಬಾ ಚೆನ್ನಾಗಿದೆ ಕಣೋ.....
ಅಪ್ಪ ಹಕ್ಕಿ.....
ತಾಯಿ ಹಕ್ಕಿ.....
ಮತ್ತೆ ಮೂರು ಮರಿ ಹಕ್ಕಿ.....
ಎಲ್ಲರೂ ಚೆನ್ನಾಗಿದಾರೆ ತಾನೆ.... ಮತ್ತೆ ಮರಿ ಹಕ್ಕಿ ಬರುತ್ತಲ್ಲ... ಅವಾಗ ತಿಳಿಸಪ್ಪ....

-ವೀರೇಶ ಹೊಗೆಸೊಪ್ಪಿನವರ

ಶ್ರೀನಿಧಿ.ಡಿ.ಎಸ್ ಹೇಳಿದರು...

ಹರ್ಷಾ,
ಥ್ಯಾಂಕ್ಸ್ ರೀ ಯಪ್ಪಾ:)

ಶ್ಯಾಮಾ,
ಹಮ್.. ಹಕ್ಕಿಗಳು ಯಾಕೋ ತಮ್ಮ ಪುಟ್ಟ ಜೀವದಿಂದ ಆಪ್ತ ಅನಿಸ್ತ. ನಂಗು ಇಂತ ಅನುಭವ ಆಯ್ದು..

ಮಲ್ನಾಡ್ ಹುಡ್ಗಿ,
೯೦% ಕ್ರೆಡಿಟ್ಟು ಸುಶ್ ಗೇ ಹೋಗ್ಬೇಕು! ಅವ್ನು ಹೇಳ್ದೇ ಹೊಗಿದಿದ್ದ್ರೆ ನಂಗೆ ಹಕ್ಕಿ ಬಗ್ಗೆ ಗೊತ್ತೇ ಆಗ್ತಿರ್ಲಿಲ್ಲ! :)

ಚಿನ್ಮಯಾ!,
ಎಂತೇನ ಮಾರಾಯ್ನೇ,ನಂಗೆ ತಿಳಿತಾ ಇಲ್ಲೆ. ಯಾವಾಗ್ಲೂ ಬರಿಯ ಹಾಂಗೆ ಬರದ್ದಿ .. ಮುಂದಿನ ಸಲ ಶೈಲಿ- ವಿಷಯದ ಬಗ್ಗೆ ಗಮನ ನೀಡಲಾಗುವುದು!

ಶ್ರೀನಿಧಿ.ಡಿ.ಎಸ್ ಹೇಳಿದರು...

ಸಿಂಧು,
ಬರಿಯೋವಾಗ ಒಂದು ಹೊಸ ರೀತಿಯಲ್ಲೇ ಬರೀಬೇಕು ಅಂತ ಕೂತಿದ್ದೆ. ಏನೋ ಒಂದಾಗಿದೆ. ಹೊಗಳೋ ತರಾ ಇದ್ದನೇ ಅಕ್ಕಾ?

ಶ್ರೀನಿಧಿ.ಡಿ.ಎಸ್ ಹೇಳಿದರು...

ವಿಚಿತ್ರಾನ್ನ ಭಟ್ಟರೇ,

ಸಾಗುತಿಹ ಈ ಜೀವಯಾನದಿ
ಭೋಗ ಭಾಗ್ಯವೆ ಎಲ್ಲ ತಳಹದಿ
ಯಾಗಿರಲ್ಕದನಲ್ಲವೆಂಬುದು ನನ್ನ ಅಶಯವು
ಖಗದ ಘಟನೆಯು ನೆಪವದಷ್ಟೆಯೆ
ಸಗ್ಗವಿಹುದೀ ನಿತ್ಯ ಬಾಳಲಿ
ಸೊಗದ ಜೊತೆಗೇ ಹರಡಿಕೊಳ್ಳಲಿ ನಿತ್ಯ ಸಂತಸವು.

ಧನ್ಯವಾದಗಳು ಸರ್, ನಿಮ್ಮ ಭಾಮಿನಿಗೆ!
ಭಾಮಿನಿಗೆ ಭಾಮಿನಿಯುತ್ತರ ! ಇದೂ ಮೊದಲನೇ ಪ್ರಯತ್ನವೇನೋ, (?) ಅಲ್ಲವೇ?:)

ಅನಾಮಧೇಯ ಹೇಳಿದರು...

ದೇವ್ರೂ .... ಆ ಹೆಣ್ಣು ಹಕ್ಕಿಗೆ ಮರಿಗಳಿವೆ, ಆಗಲೇ ಮತ್ತೆ ಗರ್ಭಿಣಿಯಾಗಿದೆ !!! ಹ್ಮ್.. ಇರ್ಬೋದು.. ಈ ಬೆಂಗಳೂರಲ್ಲಿ ಹೀಗೂ ಆಗತ್ತೇನೋ.. ?!! ಕಲ್ಪನೆ, ಭಾವನೆ ಇತ್ಯಾದಿ ಸಿಕ್ಕಾಪಟ್ಟೆ ಜಾಸ್ತಿಯಾದಾಗ Matrix ಸಿನೆಮಾ ಕೂಡ ವಾಸ್ತವ ಎನಿಸುತ್ತದೆ.

ಇದು ಹರಿವ ಝರಿಯಲ್ಲಿ ಗಾಳ ಹಾಕಿರೋದೋ ,ಗಾಳ ಹಾಕಿರೋ ಕಡೆಯೇ ಝರಿ ತಿರುಗಿಸುವ ಪ್ರಯತ್ನವೋ ಅಥವಾ ಮೌನವಾಗಿ ಇನ್ನೆನನ್ನೋ ಹೇಳ್ತಿರೋದೋ ಗೊತ್ತಾಗ್ಲಿಲ್ಲ.. ಅದ್ಕೇ ನಂಗೆ ಸರಿ ಕಾಣ್ತಿಲ್ಲ ಅನ್ಸತ್ತೆ. :-)