ಮಂಗಳವಾರ, ನವೆಂಬರ್ 18, 2008

ಹಳೆಯ ಧಾರಾವಾಹಿಗಳ ನೆನೆದು..

ನಮ್ಮ ಮನೆಗೆ ಟಿ.ವಿ ಬಂದಿದ್ದು, ನಾನು ಮೂರನೇ ಕ್ಲಾಸಲ್ಲಿದ್ದಾಗಲೇ. ಅ ಮಟ್ಟಿಗೆ ನಾನು ಪುಣ್ಯವಂತ ಎಂತಲೇ ಅನ್ನಬಹುದು. ಏಕೆಂದರೆ ಅ ಕಾಲಕ್ಕೆ- ನನ್ನ ಹೆಚ್ಚಿನ ಕ್ಲಾಸ್ ಮೇಟುಗಳ ಮನೆಗಳಲ್ಲಿ ಟಿ.ವಿ. ಇರಲಿಲ್ಲ, ಮತ್ತು ನಾನು ದಿನಾ ಬಂದು ಹೇಳುತ್ತಿದ್ದ ದೂರದರ್ಶನದ ಕಥೆಗಳನ್ನು ನನ್ನ ಮಿತ್ರರು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರು, ಸತ್ಯ ಹೇಳಬೇಕೆಂದರೆ ಆ ಕಥೆಗಳು- ನಾನು ಬಾಯಿ ಬಿಟ್ಟುಕೊಂಡು ಟೀವಿಯನ್ನ ಏನೂ ಅರ್ಥವಾಗದೇ ಸುಮ್ಮನೇ ದಿಟ್ಟಿಸುತ್ತಿದ್ದಾಗ ಪಾಪ ಅನ್ನಿಸಿ, ಅಥವಾ ಪದೇ ಪದೇ ಪೀಡಿಸುತ್ತಿದ್ದಾಗ ನನ್ನಪ್ಪ ಹೇಳಿದವೇ ಅಗಿದ್ದವು. ನನಗೆಲ್ಲಿಂದ ಹಿಂದಿ ಅರ್ಥವಾಗಬೇಕು?

ಕೆಲಬಾರಿ ಟಿ.ವಿಯಲ್ಲಿ ಓಡಾಡುತ್ತಿದ್ದ ಚಿತ್ರಗಳಿಗೂ, ಅಪ್ಪ ಹೇಳಿದ್ದಕ್ಕೂ ಸಂಬಂಧ ಇಲ್ಲದಂತೆ ಅನ್ನಿಸಿದರೂ, ಸುಮ್ಮನೇ ತಲೆಯಾಡಿಸುತ್ತಿದ್ದೆ, ಮಾರನೇ ದಿನ, ನಾನು ಹೀರೋ ಅಗಬೇಕಾದ್ದರಿಂದ, ಅಪ್ಪ ಹೇಳಿದ್ದನ್ನು ನೆನಪಿಟ್ಟುಕೊಂಡು ಬಂದು, ಅದನ್ನೇ ಸ್ನೇಹಿತರೆದುರು ವದರುತ್ತಿದ್ದೆ. ಅವರುಗಳಿಗೆ ಅದೆಷ್ಟು ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ, ದೇವರಿಗೇ ಗೊತ್ತು. ಏಕೆಂದರೆ- ಇವತ್ತೊಂದರ ಕಥೆಯಾದರೆ, ನಾಳೆ ಹೇಳುತ್ತಿದ್ದು ಇನ್ನೊಂದೇ ಅಗಿರುತ್ತಿತ್ತು. ಅದರೂ ಮಧ್ಯಾಹ್ನ ಊಟದ ಬುತ್ತಿ ಬಿಚ್ಚಿದಾಗ, ಭಕ್ತಿಯಿಂದ ಒಂದಿಷ್ಟು ಜನ ನನ್ನ ಸುತ್ತ ಸೇರಿರುತ್ತಿದ್ದು ಇನ್ನೂ ನೆನಪಿದೆ ನನಗೆ.

ಎರಡು ಮೂರು ವರುಷ ಕಳೆದ ಮೇಲೆ ನಾನು ಕಥೆ ಹೇಳುವ ಕಾಲ ಮುಗಿದಿತ್ತು. ನಾವೊಂದಿಷ್ಟು ಜನ ಸೇರಿ ಹಿಂದಿನ ದಿನ ನೋಡಿದ ಸೀರಿಯಲ್ ಗಳ ಬಗ್ಗೆ ಚರ್ಚೆ ಮಾಡುವಷ್ಟು ಪಾಂಡಿತ್ಯ ಬೆಳೆದಿತ್ತು - ಕಾರಣ- ದೂರದರ್ಶದಲ್ಲಿ ಕನ್ನಡ ಕಾರ್ಯಕ್ರಮಗಳು ಬರುತ್ತಿದ್ದವು. ನಾನಂತೂ ಸರಿಯಾಗಿ ಅರ್ಥವಾಗದ ಹಿಂದಿ ಕಾರ್ಯಕ್ರಮಗಳನ್ನೇ ನೋಡುತ್ತಿದ್ದವನು ಇನ್ನು ಕನ್ನಡ ಬಿಟ್ಟೇನೆಯೇ?

ನನ್ನಂತಹ ಅದೆಷ್ಟೋ ಹುಡುಗರಿಗೆ ಮತ್ತು ಅಪ್ಪ ಅಮ್ಮಂದಿರಿಗೆ ಕನ್ನಡ ಧಾರಾವಾಹಿಗಳ ಹುಚ್ಚು ಹತ್ತಿಸಿದ ಕೀರ್ತಿ 'ಗುಡ್ಡದ ಭೂತ' ಧಾರಾವಾಹಿಗೆ ಸಲ್ಲಬೇಕು. ಪ್ರತಿ ಸೋಮವಾರ ಇರಬೇಕು-ಸರಿಯಾಗಿ ನೆನಪಿಲ್ಲ- ಸಂಜೆ 7.30ಕ್ಕೆ ಸರಿಯಾಗಿ ದೂರದರ್ಶನದೆದುರು ಎಲ್ಲರೂ ಸ್ಥಾಪಿತ. ಜಾನ್ಸನ್ ಬೇಬೀ ಪೌಡರಿನದೋ- ಸೋಪಿನದೋ ಜಾಹೀರಾತು ಮುಗಿದ ಕೂಡಲೇ 'ಡೆನ್ನಾನ ಡೆನ್ನಾನ...' ಅನ್ನುವ ಟೈಟಲ್ ಸಾಂಗು. ಕೇಳುತ್ತಿದ್ದ ಹಾಗೇ- ಮೈ ರೋಮಾಂಚನ. ಭೂತದ ಕಥೆ ಬೇರೆ. ಗುಡ್ಡದ ಭೂತ ಎಂದು ಯಾರಾದರೂ ಕೂಡಲೇ ತೆಂಗಿನ ಗರಿ ಉದುರುವುದು- ಹೊರಗೆ ಒಣಗಲು ಹಾಕಿದ ಬಟ್ಟೆಗೆ ಥಟ್ಟಂತ ಬೆಂಕಿ ಹತ್ತಿಕೊಳ್ಳುವುದು- ಏನು ಕೇಳುತ್ತೀರಿ.

ಪ್ರಕಾಶ್ ರೈ ಅಭಿನಯದ ಮೊದಲ ಸೀರಿಯಲ್ ಅದು. ರಾಮಚಂದ್ರ ಅನ್ನುವ ರೋಲ್ ಮಾಡಿದ ಸಣಕಲು ಪ್ರಕಾಶ ರೈ ಇನ್ನೂ ನೆನಪಿದ್ದಾನೆ ನನಗೆ. ಈಗಿನ ಹಾಗೆ ನೂರಾರು ಎಪಿಸೋಡುಗಳಲ್ಲ- ಕೇವಲ 13 ಸಂಚಿಕೆಗಳಿಗೇ ಮುಗಿದ ಧಾರಾವಾಹಿ ಗುಡ್ಡದ ಭೂತ. ಅದು ಪ್ರಸಾರವಾಗುತ್ತಿದ್ದಷ್ಟೂ ಕಾಲ, ಯಾವತ್ತೂ ಅ ಹೊತ್ತಿಗೆ ಕರೆಂಟು ಸೈತ ಹೋಗಿರಲಿಲ್ಲ! ಮೊನ್ನೆ ಮೊನ್ನೆ ಏನನ್ನೋ ಹುಡುಕುತ್ತಿದ್ದವನಿಗೆ ಆ ಟೈಟಲ್ ಟ್ರಾಕ್ ನ ಎಂಪಿತ್ರೀ ಸಿಕ್ಕಿದಾಗ ಅದ ಖುಷಿಯಂತೂ ಹೇಳತೀರದು.

ನಮ್ಮ ಮನೆಯಲ್ಲಿ ಧಾರಾವಾಹಿಗಳನ್ನು ಅಪ್ಪ ಅಮ್ಮನೂ ಕೂತು ನೋಡುತ್ತಿದ್ದುದರಿಂದ- ನಂಗೆ, ತಂಗಿಗೆ ಯಾವ ತೊಂದರೆಯೂ ಇಲ್ಲದೇ ಅವರ ಜೊತೆ ಕೂತು ಇವುಗಳನ್ನು ನೋಡುವ ಅವಕಾಶ ಲಭ್ಯವಿತ್ತು. ಅಷ್ಟಕ್ಕೂ ದಿನಕ್ಕೆ ನೋಡುತ್ತಿದ್ದದು ಒಂದೋ- ಎರಡೋ ಸೀರಿಯಲ್ಲುಗಳನ್ನು ಮಾತ್ರ. ಎಲ್ಲಾದರೂ ಪರೀಕ್ಷೆಗಳಿದ್ದ ಸಮಯ ಓದಿಕೋ ಹೋಗಿ ಅಂದರೂ, ಅದು ಮೆತ್ತನೆ ಗದರಿಕೆಯಷ್ಟೇ ಅಗಿದ್ದು, ಧಾರಾವಾಹಿಗಳಿಗೆ ಕತ್ತರಿ ಬೀಳುತ್ತಿರಲಿಲ್ಲ.

ಎಂಥೆಂಥ ಸೊಗಸಾದ ಸೀರಿಯಲ್ ಗಳು ಅಗ. ನಾಗಾಭರಣರ ತಿರುಗುಬಾಣ, ಥ್ರಿಲ್ಲರ್ ಅದರೆ ರಮೇಶ್ ಭಟ್ ಅಭಿನಯದ ಕ್ರೇಝಿ ಕರ್ನಲ್ ಕಾಮಿಡಿ ಧಾರಾವಾಹಿ. ಬಿ.ವಿ.ರಾಜಾರಾಂ ಅಭಿನಯದ ಅಜಿತನ ಸಾಹಸಗಳು ಪತ್ತೇದಾರಿ. ಆಜಿತನ ಸಾಹಸಗಳನ್ನು ನೋಡಿ ನೋಡೀ ಅವರ ಫ್ಯಾನ್ ಅಗಿ ಹೋಗಿದ್ದೆ. ಎಷ್ಟರ ಮಟ್ಟಿಗೆಂದರೆ, ಅದೆಷ್ಟೋ ವರುಷಗಳ ನಂತರ, ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ರಾಜಾರಾಂ ಸರ್ ಅನಂದ ರಾವ್ ಸರ್ಕಲ್ ಸಮೀಪದ ಸಿಗ್ನಲ್ ನಲ್ಲಿ ಸ್ಕೂಟರ್ ನಿಲ್ಲಿಸಿಕೊಂಡಿದ್ದು ನೋಡಿ ಅಜಿತ- ಅವನ ಪತ್ತೇದಾರಿ ಬುದ್ಧಿ- ಕಣ್ಣೆದುರಿರುವ ಅತ್ಯಂತ ಸಾಮಾನ್ಯ ರಾಜಾರಾಂ - ಸಂಪೂರ್ಣ ಅಯೋಮಯವಾಗಿ ಹೋಗಿತ್ತು!

ದಿನವೂ ಧಾರಾವಾಹಿಗಳು ಪ್ರಸಾರವಾಗುವ ಕಾಲ ಬೇರೆ ಇರಲಿಲ್ಲ ಅವಾಗ, ಇವತ್ತು ಒಂದು ಧಾರಾವಾಹಿ ಬಂದು ಹೋದರೆ, ಮತ್ತೊಂದು ವಾರ ಕಾಯಬೇಕು ಅದಕ್ಕಾಗಿಯೇ. ಪ್ರತಿ ದಿನ ಕೂಡ ಬೇರೆ ಬೇರೆ ಧಾರಾವಾಹಿಗಳು. ಪ್ರತಿ ಭಾನುವಾರ ಬೆಳಗ್ಗೆ ಸಬೀನಾ ಅಂತೊಂದು ಫ್ಯಾಂಟಸಿ ಸೀರಿಯಲ್ ಬರುತ್ತಿತ್ತು. ಅದರ ಟೈಟಲ್ ಟ್ರ್ಯಾಕ್ ಗೇ ನಾನು- ತಂಗಿ ಮರುಳಾಗಿದ್ದೆವು. ಡಿಸ್ಕೋರಾಗ ಅದಿತಾಳ, ಸಾಧನೆ, ಚಕ್ರ, ಚಿಗುರು, ಬೆಳದಿಂಗಳಾಗಿ ಬಾ ಇವೆಲ್ಲ ಚಂದದ ಶೀರ್ಷಿಕೆ ಗೀತೆ- ಜೊತೆಗೆ ಕಥೆ ಹೊಂದಿದ ಧಾರಾವಾಹಿಗಳೇ.

ಮೋಡಕೆ ಮೋಡ ಬೆರೆತರೆ ನೋಡು ತುಂತುರು ಹೂ ಹಾಡು ಅನ್ನುವ ಚಕ್ರ ಧಾರಾವಾಹಿಯ ಹಾಡು ತೀರಾ ನಿನ್ನೆ ಮೊನ್ನೆ ಕೇಳಿದ್ದೇನೋ ಅನ್ನುವ ತರ ತಲೆಯೊಳಗೆ ಕೂತುಬಿಟ್ಟಿದೆ. ಅದೇ ತರ 'ಅಲ್ಲೊಂದು ಚಿಗುರು, ಇಲ್ಲೊಂದು ಚಿಗುರು', - ಚಿಗುರು ಧಾರಾವಾಹಿಯದು, ಕಾಲ ಮುಂದೆ, ನಾವು ಹಿಂದೆ ಜೂಟಾಟ ಜೂಟಾಟ ಅನ್ನೋ ಸಾಧನೆಯ ಹಾಡು.. ಎಲ್ಲಕ್ಕೂ ಮಿಗಿಲಾಗಿ, ಧಾರಾವಾಹಿ ಪ್ರಪಂಚದ ಅನೂಹ್ಯ ಸಾಧ್ಯತೆಗಳನ್ನು ತೆರೆದಿಟ್ಟ, ಮಾಯಾಮೃಗದ ಮ್ಯಾಜಿಕಲ್ ಹಾಡು, ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ...

ಮಾಯಾಮೃಗ ಪ್ರಸಾರವಾಗಬೇಕಿದ್ದರೆ ನಾನು ಹತ್ತನೇ ತರಗತಿ. ಸಂಜೆ ಕ್ಲಾಸು ಬಿಟ್ಟು ಅರ್ಧ ಗಂಟೆಗೆ ಸರಿಯಾಗಿ 4 ಕಿಲೋಮೀಟರು ದೂರದ ಮನೆಯಲ್ಲಿರಬೇಕಿತ್ತು. ಎದ್ದೂ ಬಿದ್ದೂ ಓಡಿಬರುವಷ್ಟರಲ್ಲಿ- ಮಾಯಾಮೃಗದ ಹಾಡು ಕೇಳುತ್ತಿತ್ತು. ತೀರಾ ನಮ್ಮದೇ ಮನೆಯದೇ ಕಥೆ ಇದು ಎಂದು ನಂಬಿಸಿಯೇ ಬಿಟ್ಟಿದ್ದ ಧಾರಾವಾಹಿ ಅದು. ಎಲ್ಲರಿಗೂ ಈ ಧಾರಾವಾಹಿ ಬಗ್ಗೆ ಖಂಡಿತಾ ತಿಳಿದೇ ಇರುತ್ತದೆ ಎನ್ನುವ ವಿಶ್ವಾಸವಿರುವ ನಾನು ಈ ಬಗ್ಗೆ ಏನೂ ಹೆಚ್ಚಿಗೆ ಹೇಳುವುದಿಲ್ಲ. ವಾರಪತ್ರಿಕೆಯೊಂದು ವಾರಾ ವಾರಾ ಮಾಯಾಮೃಗದ ಕಥೆ ಮುದ್ರಿಸಲೂ ಅರಂಭಿಸಿತ್ತು ಅವಾಗ.

ಮನ್ವಂತರ ಧಾರಾವಾಹಿಯೊಂದಿಗೆ ನನ್ನ ಸೀರಿಯಲ್ ಕ್ರೇಝ್ ಮುಗಿಯಿತು. ಅಮೇಲೆ ಇವತ್ತಿನವರೆಗೆ ಯಾವ ಧಾರಾವಾಹಿಯನ್ನೂ ಫಾಲೋ ಮಾಡಿಲ್ಲ, ಗರ್ವ ಮತ್ತು ಗೃಹಭಂಗ ಹೊರತು ಪಡಿಸಿ. ಮುಕ್ತ ಪ್ರಸಾರವಾಗುವಾಗ ಬೆಂಗಳೂರಿಗೆ ಬಂದಿದ್ದೆ, ನೋಡಲಾಗಲಿಲ್ಲ. ಅಲ್ಲದೇ ಅಷ್ಟು ಹೊತ್ತಿಗೆ ಅಷ್ಟೂ ಚಾನಲ್ ಗಳ ಪ್ರೈಮ್ ಟೈಮ್ ಅತ್ತೆ ಸೊಸೆಯರಿಗೇ ಮೀಸಲಾಗಿಹೋಗಿತ್ತು. ಒಮ್ಮೆ ನೋಡಿದ ಧಾರಾವಾಹಿಯನ್ನ ಮತ್ತೆ ನೋಡಬೇಕು ಎಂದು ಅನ್ನಿಸಲೇ ಇಲ್ಲ. ಧಾರಾವಾಹಿಗಳ ಸುವರ್ಣಯುಗ, ಗುಣಮಟ್ಟದ ದೃಷ್ಟಿಯಿಂದ ನೋಡಿದರೆ ಐದಾರು ವರ್ಷಗಳ ಕೆಳಗೇ ಮುಗಿದು ಹೋಗಿದೆ ಎಂದನ್ನಿಸುತ್ತದೆ.

ಕೆಲಬಾರಿ ಸಂಜೆ ಹೊತ್ತಿಗೆ ಈ ಬೆಂಗಳೂರಿನ, ನಮ್ಮ ಮನೆಯ ಬೀದಿಯಲ್ಲಿ ನಡೆಯುವಾಗ ಅನ್ನಿಸುವುದುಂಟು- ಯಾವುದರೂ ಮುಚ್ಚಿದ ಬಾಗಿಲಿನ, ಅದರೆ ತೆರೆದಿರುವ ಮನೆ ಕಿಟಕಿಯೊಳಗಿಂದ, ' ಸೆಳೆಯುತ್ತಿದೆ ಕಣ್ಣಂಚೂ, ಗಿರಿವಜ್ರದ ಹಾಗೇ' ಅನ್ನುವ ಮಾಯಾಮೃಗದ ಗೀತೆ ಮತ್ತೆ ಕೇಳಬಾರದೇ. S. ನಾನು ಓಡಿ ಹೋಗಿ, ಟಿ.ವಿ ಹಾಕಿ....

ಇದು ದಟ್ಸ್ ಕನ್ನಡಕ್ಕೆ ಬರೆದ ಅಂಕಣ. ಹಲವರು ಮೇಲ್ ಮಾಡಿ ಗುಡ್ಡದ ಭೂತ ಮತ್ತು ಇತರ ಧಾರಾವಾಹಿಗಳ ಎಂಪಿತ್ರೀ ಕೇಳಿದರು. ಈ ಲಿಂಕ್ ಲಿ ಕೆಲ ಹಳೆಯ ಧಾರಾವಾಹಿಗಳ ಹಾಡುಗಳು ಲಭ್ಯವಿದೆ.

14 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಸಕ್ಕತ್ತಾಗಿ ಬರ್ದಿದೀರ. ಗುಡ್ಡದ ಭೂತ ಇನ್ನು ನೆನಪಿದೆ. ಕ್ರೇಜಿ ಕರ್ನಲ್ ಕೂಡ. ಆ ಕಾಲಾನೇ ಬೇರೆ, ವಾಪಸ್ ಬರಲ್ಲ!

Harisha - ಹರೀಶ ಹೇಳಿದರು...

ನನಗೂ ಆ ಕಾಲದ ಕಾರ್ಯಕ್ರಮಗಳೇ ಇಷ್ಟ. ನೀವು ಹೇಳಿದ ಧಾರಾವಾಹಿಗಳು + ಹಿಂದಿಯ ಮಹಾಭಾರತ, ಜಂಗಲ್ ಬುಕ್, ಚಂದ್ರಕಾಂತಾ, ಏಕ್ ಸೆ ಬಢ್ಕರ್ ಏಕ್, ಶಕ್ತಿಮಾನ್...

ಈಗ ಏನಿದೆ? ಸ್ಟಾರ್ ನ K-ಸೀರೀಸ್, ಬಿಟ್ರೆ ಬಾಲಾಜಿಯವರ ಗೋಳಿನ ಕಥೆಗಳು..

ಅನಾಮಧೇಯ ಹೇಳಿದರು...

ಶ್ರೀ,
ನಾವು ಗುಡ್ಡದಭೂತ ಬಂದ ಮೇಲೆ ಗಡ್ಡ ಇರುವವರಿಗೆಲ್ಲ ಗಡ್ಡದಭೂತ ಅಂತ ಅಣಕಿಸೋಕೆ ಶುರುಮಾಡಿದ್ವಿ.
ಹರೀಶ,
ಸ್ಟಾರ್ ನ ಕೆ-ಸೀರೀಸೆಲ್ಲ ಬಾಲಾಜಿಯವರ ಪ್ರೊಡಕ್ಷನ್ ಗೋಳೇ!!

sunaath ಹೇಳಿದರು...

ಕರಂಟ್ ಹೋಗದೇ ಇರೋದು ಭೂತದ ಕರಾಮತ್ತೇ ಇರಬೇಕು?

Parisarapremi ಹೇಳಿದರು...

ಒಳ್ಳೇ ನೆನಪು!!

ರಜನಿ ಹತ್ವಾರ್ ಹೇಳಿದರು...

ಹಳೆಯ ನೆನಪನ್ನೆಲ್ಲಾ ಕೆದಕಿಬಿಟ್ರಿ ಶ್ರೀ. thanks a lot. ಮಹಾಭಾರತ, ರಂಗೋಲಿ, ಚಿತ್ರಹಾರ್ ಕೂಡ ಇದೆ ಮೋಡಿ ಮಾಡಿತ್ತು. ವಾರಕ್ಕೊಮ್ಮೆ ಬರ್ತಿದ್ದ ಕನ್ನಡ ಮತ್ತು ಹಿಂದಿ ಸಿನಿಮಾಕ್ಕಾಗಿ ಬಾಯಿ ಕಳಕೊಂಡು ಕಾಯ್ತಿದ್ವಿ. ಜಾನೆ ಕಹಾಂ ಗಯೇ ವೋ ದಿನ್...

ಋಷ್ಯಶೃಂಗ ಹೇಳಿದರು...

ನಮಸ್ಕಾರ
ನಾನು ನಿಮ್ಮ ಬ್ಲಾಗ್ ಓದುಗ. ನಾನೊಂದು ಬ್ಲಾಗ್ ತೆರೆದಿದ್ದೇನೆ. ದಯವಿಟ್ಟು ಓದಿ, ಹರಸಿ.
ನಿಮ್ಮ ಕಾಲ್ಗುಣದಿಂದ ನನ್ನ ಮನೆಗೆ ಮಂಗಳವಾಗಲಿ.
-ರಿಶಿ
risyashringaa@gmail.com
rishyashringa.blogspot.com

ವಿ.ರಾ.ಹೆ. ಹೇಳಿದರು...

ಗುಡ್ಡದ ಭೂತ ಕೊನೇ ಕಂತನ್ನು ನೋಡಲು ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ. ನೆನೆಸಿಕೊಂಡ್ರೆ ನಗು ಬರತ್ತೆ.

Susheel Sandeep ಹೇಳಿದರು...

ಚಿಂದಿ ಚಿತ್ರಾನ್ನ!
ಹಳೇ ಧಾರಾವಾಹಿಗಳ MP3 ಲಿಂಕುಗಳಿಗೆ ಥ್ಯಾಂಕ್ಸ್. ಗುಡ್ಡದಭೂತ, ಮಳೆಬಿಲ್ಲು ಸಿಕ್ಕಿರಲಿಲ್ಲ :)

ಗುಡ್ದದ ಭೂತ,ಡಿಸ್ಕೋರಾಗ ಆದಿತಾಳ,ಬೆಳದಿಂಗಳಾಗಿ ಭಾ - ಒಂದಕ್ಕಿಂತ ಒಂದು ಸಕತ್ ಟೈಟಲ್ ಟ್ರ್ಯಾಕುಗಳು...
ಹಾಗೇ ಡಿಡಿ೧ ರ ಚಿತ್ರಮಂಜರಿ, ಭಾನುವಾರದ ಸುತ್ತ-ಮುತ್ತ,ಮುನ್ನೋಟ ಮತ್ತು ಮುನ್ನೋಟದ ಕಡೆಯಲ್ಲಿ ಮುಂದಿನ ಭಾನುವಾರ ಪ್ರಸಾರವಾಗುವ ಕನ್ನಡ ಚಲನಚಿತ್ರದ ಅನೌನ್ಸ್‍ಮೆಂಟಿಗಾಗಿ ಕಾದು ಕುಳಿತಿರುತ್ತಿದ್ದ ದಿನಗಳು - ಅಬ್ಬಾ ನಿಜಕ್ಕೂ ಸ್ವರ್ಗ ಸದೃಶ!

Shiv ಹೇಳಿದರು...

ಸಂದೀಪ್,

ಅದೇ ತರ ಭಾನುವಾರ ಮಧ್ಯಾಹ್ನ ಯಾವಾಗಲೋ ಒಮ್ಮೆ ಬರುತ್ತಿದ್ದ ಕನ್ನಡ ಚಲನಚಿತ್ರಗಳು..

ಮತ್ತೆ ದೂರದರ್ಶನದ ಆ ಮಾಯದಿನಗಳಿಗೆ ಕರೆದುಕೊಂಡು ಹೋಗಬಿಟ್ಟಿರಿ.
ವಂದನೆಗಳು !

Shiv ಹೇಳಿದರು...

ಶ್ರೀನಿಧಿ,

ಮೇಲಿನ ಕಾಮೆಂಟಿನಲ್ಲಿ ನಿಮ್ಮನ್ನು 'ಸಂದೀಪ'ನಾಗಿಸಿದ್ದಕ್ಕೆ ಕ್ಷಮೆಯಿರಲಿ :)
ಅದನ್ನು 'ಶ್ರೀನಿಧಿ' ಅಂತಾ ಓದಬೇಕು :)

ವಿನುತ ಹೇಳಿದರು...

ಗುಡ್ಡದ ಭೂತ!! ೩೦ ನಿಮಿಷದ ಕಥೆಯನ್ನು ೨೦ ನಿಮಿಷಗಳಲ್ಲಿ ಹೇಳಿ ಪ್ರಶಂಸೆ ಗಿಟ್ಟಿಸಿದ್ದ ನೆನಪು ಮರುಕಳಿಸಿತು. ತಂದೆಯವರೊಂದಿಗೆ ರಾತ್ರಿ ಕುಳಿತು ನೋಡುತ್ತಿದ್ದ, ರಿಪೊರ್ಟರ್, ತೆಹ್ಕೀಕಾತ್, ಮೆರಿ ಆವಾಜ಼್ ಸುನೊ, ಮನೆಯವರೆಲ್ಲ ಕುಳಿತು ನೋಡುತ್ತಿದ್ದ, ಚಂದ್ರಕಾಂತ (ನಮ್ಮಪ್ಪನ ಮೀಸೆ ನೋಡಿ, ಅವರನ್ನೆ ಕ್ರೂರ್ ಸಿಂಗ್ ಅಂತ ಆಡ್ಕೊತ ಇದ್ವಿ) ಕನ್ನಡಿಯೊಳಗಿನ ಕನಸುಗಳು, ಕವಲು ದಾರಿ... ಪಟ್ಟಿಗೆ ಕೊನೆಯಿಲ್ಲ ಬಿಡಿ..
ರವಿಕಿರಣ್, ಲಿಂಗದೇವರು, ಸುನಿಲ್ ಪುರಾಣಿಕ್, ಡಾ|| ವಿವೇಕ್, ಅಶೋಕ್ ಬೆಳವಾಡಿ ಇವರೇ ಮುಂತಾದವರುಗಳ ನೇತೃತ್ವದಲ್ಲಿ ಮೂಡಿಬರುತ್ತಿದ್ದ ಅಂದಿನ ದೂರದರ್ಶನದ ಧಾರವಾಹಿಗಳಿಗೂ, ಇಂದಿನ ಇತರೇ ಕನ್ನಡ ವಾಹಿನಿಗಳಲ್ಲಿ ಬರುವ ಧಾರವಾಹಿಗಳಿಗೂ ಹೋಲಿಕೆಯೇ? ಖಂಡಿತಾ ಸಾಧ್ಯವಿಲ್ಲ ಬಿಡಿ..
ಹಳೆಯ ನೆನಪುಗಳಲ್ಲೊಂದು ಪಯಣಕ್ಕೆ ಧನ್ಯವಾದಗಳು..

Unknown ಹೇಳಿದರು...

ನೆನಪುಗಳೇ ಹಾಗೆ ಸುಂದರ ಸುಮದುರ ಭಾವಗಳನ್ನು ಪಸರಿಸುತ್ತವೆ, ನಮ್ಮ ಬಾಲ್ಯದ ನೆನಪಿನಲ್ಲಿ ಮುಖ್ಯ ವಾಗಿ ನೆನಪಿನಲ್ಲಿ ಉಳಿದಿರುವ ಸಂಗತಿಗಳಲ್ಲಿ ಗುಡ್ಡದ ಭೂತ, ತಿರುಗುಬಾಣ, ಸಬೀನ, ನಿರ್ಮಾ ಜಾಹಿರಾತು ಮುಂತಾದವುಗಳನ್ನು ಮರೆಯಲು ಸಾದ್ಯವೇ?

Dev ಹೇಳಿದರು...

ಒಂದು‌ ಅದೇ 1990's ಕಾಲದ ಧಾರಾವಾಹಿನ ಬಿಟ್ಟಿದಿರ ಅದರ ಹೆಸರು maybe ಪೃಥ್ವಿ ಅಂತ ಇರಬಹುದು ನಿಮಗೆ ಆ fantasy serial ಬಗ್ಗೆ ಗೊತ್ತಾ please ಹೇಳಿ.