ಮಂಗಳವಾರ, ಮಾರ್ಚ್ 20, 2007

ನಗುವ ಮುದುಕ

ನಾನು ನೋಡುತ್ತಿರುವ ದಿನದಿಂದಲೂ,
ಈ ಮುದುಕ ಹಾಗೆಯೇ ಇದ್ದಾನೆ
ಮಣ್ಣು ಬಣ್ಣದ ಲುಂಗಿ,ಹಳೆಯ ಹರಿದಂಗಿ.
ಜೊತೆಗೊಂದು ಬಾಗಿದ ಬಿದರ ಕೋಲು,
ಅವನಂತೆಯೇ..
ನಡೆಯುತ್ತಲಿರುತ್ತಾನೆ,
ಅವನ ಮನೆಯೆದುರಿನ ಇಳಿಜಾರ ಹಾದಿಯಲಿ.

ಸೋಜಿಗವೆಂದರೆ,
ನಾ ನೋಡಿದಾಗಲೆಲ್ಲ ಇವನು
ನಗುತ್ತಿರುತ್ತಾನೆ, ಹಲ್ಲಿಲ್ಲದ ಬಾಯ ತೋರಿಸುತ್ತಾ,
ಕನ್ನಡಕದೊಳಡಗಿದ ಗುಳಿ ಕಣ್ಣಲ್ಲಿ ದಿಟ್ಟಿಸುತ್ತಾ.
ಮಗ ಮನೆಯಲಿಲ್ಲ,ಹೆಂಡತಿ ಸತ್ತು
ದಶಕವಾಯಿತಂತೆ.
ಹೊತ್ತು ಕೂಳಿಗೆ ಗತಿ ಯಾರೋ,
ಆದರೂ ನಗುತಾನಲ್ಲ ಮುದುಕ
ಅಂತ ಆಶ್ಚರ್ಯ ನನಗೆ!

ದಿನ ಕಳೆದ ಹಾಗೆ ಗೊತ್ತಾಯಿತು,
ಅದು ನಗುವಲ್ಲ, ಮೊಗದ ಸ್ನಾಯು ಬಿಗಿದು,
ನಗುವ ರೂಪ ಪಡೆದಿದೆ!
ಹಾಗಾಗಿ ಆತ ನಗುತ್ತಲೇ ಇರುತ್ತಾನೆ,
ಎಂದೆಂದಿಗೂ..
ಅಚ್ಚಿನೊಳಗಿಂದ ಬಂದ ಮೂರ್ತಿಯಂತೆ!

9 ಕಾಮೆಂಟ್‌ಗಳು:

ಶ್ಯಾಮಾ ಹೇಳಿದರು...

ನಗುವ ಮುದುಕನ ಮೂಲಕ ಜೀವನದ ಸತ್ಯವನ್ಣ ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಾ..

Sushrutha Dodderi ಹೇಳಿದರು...

ಹಾಗಾದರೆ ಬದುಕು ಸುಂದರವಾಗಿದೆಯೇ?

ಸಿಂಧು sindhu ಹೇಳಿದರು...

ಅಜ್ಜನಿಗೆ ಅಳು ನಗುವಿನ ವ್ಯತ್ಯಾಸವೇ ಮರೆತಿದೆಯೇನೋ?
ನಾವು ನೋಡುಗರಿಗೆ/ಭಾವುಕರಿಗೆ ಎಲ್ಲ ಯೋಚನೆಗಳಷ್ಟೇ..?
ಅದೇನೇ ಇರಲಿ.. ಅವನ ಅತಂತ್ರ ಸ್ಥಿತಿ ನನ್ನನ್ನು ಕಂಗೆಡಿಸುತ್ತದೆ.. :(

You have a different vision.. thanks for sharing.

ಅನಾಮಧೇಯ ಹೇಳಿದರು...

ondu photo turukisidre bahala chennaad\girtittu

ಅನಾಮಧೇಯ ಹೇಳಿದರು...

ಗೆಳೆಯ ....... ಇದೆ ಬದುಕಲ್ಲವೆ,
ನಮ್ಮ ಕಣ್ಣಿಗೆ ಕಾಣುವುದೆಲ್ಲ ಸತ್ಯವಾಗಿರಬೇಕಿಲ್ಲ . ಅದರಾಚೆಗೂ ಒಂದು ಸತ್ಯವಿರುತ್ತದೆ . ನಮ್ಮ ಒಳಗಣ್ಣ ತೆರೆದು ನೋಡಬೆಕಷ್ಟೆ.
ನಮ್ಮ ಬದುಕು ಎಷ್ಟು ಮೆಟಿರಿಯಲಿಸ್ಟಿಕ್ ಆಗಿದೆ ಅನ್ನೊದಕ್ಕೆ ಇದೆ ಉದಾಹರಣೆ, ನಮಗೆ ದುಡಿಯು ಶಕ್ತಿ ಇರುವಾಗ ಎಲ್ಲರು ನಮ್ಮ ಹತ್ತಿರದಲ್ಲಿರುತ್ತಾರೆ. ಅವನ ವೃದ್ದಾಪ್ಯದೊಂದಿಗೆ ಎಲ್ಲರೂ ದೂರವಾಗುತ್ತಾರೆ .... ತನ್ನ ರಕ್ತ ಬಸಿದು ಬೆಳೆಸಿದ ತನ್ನ ಕುಡಿಗಳೆ ಹೆಗಲು ಕೊಡದಿದ್ದರೆ ಆ ಮುದಿ ಜೀವಕ್ಕೆ, ಮತ್ಯಾರನ್ನ ದೊಷಿಸಿ ಪ್ರಯೊಜನ ......ಅಲ್ವ

ಇದೆ ಬದುಕಿನ ಸತ್ಯ ....... ಈ ಬದುಕು ನಮ್ಮದಾಗಬಾರದಲ್ಲವೆ .... ಮಿತ್ರ.....

ಒಲವಿನಿಂದ
-ಅಮರ

Sandeepa ಹೇಳಿದರು...

ಇದನ್ನೇ ಅಲ್ಲವೆ ಮಾಯೆ ಎನ್ನುವುದು??

ಆತನ ನಗು ಸುಳ್ಳಾಗಿರಬಹುದು, ಆದರೆ
ಅದನ್ನು ನಗುವೆಂದು ತಿಳಿದು ನಿನಗಾದ ಅಚ್ಚರಿ ಸುಳ್ಳೆ?

ಶ್ರೀನಿಧಿ.ಡಿ.ಎಸ್ ಹೇಳಿದರು...

ಶ್ಯಾಮಾ,
ಏನೋ, ನನ್ನ ನಿಲುಕಿಗೆ ಗ್ರಹಿಸಿದಷ್ಟನ್ನ ಬರೆದಿದ್ದೇನೆ.

ಸುಶ್,
ಈ ಪ್ರಶ್ನೆ ನನ್ನನ್ನೂ ಕಾಡುತ್ತಿದೆ!

ಸಿಂಧು,
ನನ್ನನ್ನ ಈ ಮುದುಕು ಬಹಳ ದಿನಗಳಿಂದ ಕಾಡುತ್ತಿದ್ದ, ಈಗಲೂ ಕಾಡುತ್ತಿದ್ದಾನೆ. ಬರವಣಿಗೆಯ ಮೂಲಕ ಸ್ವಲವಾದರೂ ಅದನ್ನ ಕಡಿಮೆ ಮಾಡಿಕೊಳ್ಳುವ ಯತ್ನ!

ಶ್ರೀನಿಧಿ.ಡಿ.ಎಸ್ ಹೇಳಿದರು...

Anonymous
ಚಿತ್ರ ಹಾಕಿದಲ್ಲಿ ನಿಮ್ಮ ಕಲ್ಪನೆಯ ಮುದುಕ ಕಾಣುವುದಿಲ್ಲವಲ್ಲ?!!

ಅಮರ್,
ಇದೆ ಬದುಕಿನ ಸತ್ಯ .. ಈ ಬದುಕು ನಮ್ಮದಾಗಬಾರದಲ್ಲವೆ - ಸತ್ಯ,ಒಪ್ಪಿಕೊಳ್ಳುತ್ತೇನೆ, ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?

ಶ್ರೀನಿಧಿ.ಡಿ.ಎಸ್ ಹೇಳಿದರು...

ಸಂದೀಪ,
ಮಾಯೆಯೋ, ಮರ್ಮವೋ ನಾ ಅರಿಯೆ!ಅಚ್ಚರಿ ಸುಳ್ಳಲ್ಲ, ಜೊತೆಗೆ ಆ ಮುಖ ಇನ್ನೂ ನನ್ನನ್ನು ಕಾಡುತ್ತಿರುವುದೂ!