ಗುರುವಾರ, ಫೆಬ್ರವರಿ 28, 2008

ದೇಗುಲದ ಪ್ರೇಮಿಗಳು..

ದೇಗುಲದ ಗೋಪುರದ ಪಾರಿವಾಳದ ಜೋಡಿ

ನೋಡುತಿದ್ದವು ಹೀಗೇ, ಜನರ ಸಾಲು

ಅಂದು ಮಂಗಳದ ದಿನ, ಭಕ್ತ ಸಾಗರವಲ್ಲಿ

ಸಾಲು ಹೂಗಳ ದಂಡೆ, ಮತ್ತೆ ಪಂಚೆ ಶಾಲು.


ಎಲ್ಲ ದಿನವೂ ಹೀಗೆ, ಅದದೇ ಭಕ್ತರ ಚಕ್ರ

ಎಂಥ ಹಬ್ಬಕು ಕೂಡ ಬಂದೆ ಬಹರು.

ಗಂಡು ಪಕ್ಷಿಯು ಮೆಲ್ಲನಾಕಳಿಸಿ ನುಡಿಯಿತು

ನೋಡಿದವರನೆ ನೋಡಿ ಬಹಳ ಬೇಜಾರು


ಹೆಣ್ಣು ಹಕ್ಕಿಯ ದೃಷ್ಟಿ ಬೇರೆಲ್ಲೊ ಇದ್ದಿತ್ತು-

ಹಾಗಿಲ್ಲ ಈ ದಿನವು, ಚಂದ್ರಶಾಲೆಯ ನೋಡು

ನವ ಜೋಡಿ ಕೂತಿಹುದು ಕಂಬಸಾಲಿನ ಮಧ್ಯ

ಹುಡುಗ ಬಲುತುಂಟ, ಆಕೆ ಭಯದ ಗೂಡು.


ಗಂಡುಪಕ್ಕಿಯು ಕೂಡ ಮೆಲ್ಲ ನೋಡಿತು ಅವರ

ಬಲು ಚೆಲುವ ಜೋಡಿಯದು, ಮಾತೇ ಇಲ್ಲ!

ಕೇಸರಿಯ ಸೀರೆಯಲಿ ಅಡಗಿಹಳು ಆ ಹುಡುಗಿ

ಅವಳನೇ ನೋಡುತಲಿ, ಮೈಮರೆತಿಹನು ನಲ್ಲ.


ಆಕೆಗೋ ನಾಚಿಕೆಯು, ತಲೆಯನೆತ್ತುವುದಿಲ್ಲ

ಇವನ ಕೈ ಬಳಸಿಹುದು ಅವಳ ಹೆಗಲು

ಪಿಸುಮಾತನಾಡುವರು, ಅತ್ತಿತ್ತ ನೋಡುವರು

ಕಣ್ಣಪಾಪೆಗಳಲ್ಲಿ ಸಣ್ಣ ದಿಗಿಲು.


"ಹೊಸ ಜೋಡಿಯಿರಬೇಕು, ಹೆದರಿಕೆಯು ಸಹಜ

ಸರಿಯಾಗುವುದು ಎಲ್ಲ, ದಿನವು ಕಳೆದಂತೆ"

ಹೆಣ್ಣುಪಕ್ಷಿಯ ನುಡಿಗೆ ಹೌದೆಂತು ಗಂಡು,

ಧೈರ್ಯ ಬರುವುದು ನೋಡು, ಪ್ರೀತಿ ಬೆಳೆದಂತೆ.


ನೋಡುತಿರುವಂತೆ ಇವು, ಮೆಲ್ಲನೆದ್ದರು ಅವರು

ಸೇರಿಕೊಂಡರು ಮೆಲ್ಲ, ಪ್ರದಕ್ಷಿಣೆಯ ಸಾಲು

ಕೈಕೈಯು ಬೆಸೆದಿತ್ತು, ಎಂದೂ ಜೊತೆಗಿದ್ದಂತೆ

ಮೈಮೇಲೆ ಚೆಲ್ಲಿತ್ತು, ಬಿಸಿಲ ಕೋಲು.


ದೇವರಲದೇನು ಕೇಳಿದರೋ, ಗೊತ್ತಾಗಲಿಲ್ಲ

ಅವನಿಗದು ಕೇಳಿಸಿತೋ, ತಿಳಿಯಲಿಲ್ಲ.

ಇವರ ಮೊಗದೊಳು ತುಂಬು ನೆಮ್ಮದಿಯ ಕಳೆಯಿತ್ತು

ಅಷ್ಟಿದ್ದರದೇ ಸಾಕು, ಬೇರೆ ಬೇಕಿಲ್ಲ.


ಜನರ ಜಂಗುಳಿ ದಾಟಿ ಹೊರಗೆ ಹೊರಟರು ಅವರು

ತಲೆಯೆತ್ತಿ ನಡೆಯುತ್ತ, ಜಗವ ಗೆದ್ದಂತೆ

ಗೋಪುರದ ಜೋಡಿಗಳು ಹಾರೈಸಿದವು ಅವರ

ಪ್ರೀತಿಝರಿಯಾ ಒರತೆ ಬತ್ತದಂತೆ.

ಟಿಪ್ಪಣಿ:

ಈ ಕವನ ಬರೆದಿದ್ದು ವಾರದ ಹಿಂದೆ. ಯಾವತ್ತೋ ತಲೆಯೊಳಗೆ ಕೂತಿದ್ದ ವಿಷಯವನ್ನು ಹಾಳೆಗಿಳಿಸಿದ್ದೆ. ಆಮೇಲೆ ಅರುಣನಿಗೆ ಓದಿ ಹೇಳಿ, ಮತ್ತಾವುದೋ ಕಾರಣಕ್ಕೆ ಬೇಕಿರುವುದರಿಂದ ಬ್ಲಾಗಿಗೆ ಹಾಕುವುದಿಲ್ಲ ಅಂತ ಅಂದುಕೊಂಡಿದ್ದೆ. ಸುಶ್ರುತ ತಾನೂ ಕವನ ಬರಿಯೋ ಪ್ರಯತ್ನ ಮಾಡ್ತಾ ಇದೀನಿ ಅಂತ ನಿನ್ನೆ ಹೇಳುತ್ತಿದ್ದ. ಇವತ್ತು ಈ ಪುಣ್ಯಾತ್ಮ ಬರೆದ ಕವನ ಓದುತ್ತಿದ್ದರೆ, ನಾನು ಬರೆದ ಈ ಕವನ ಮತ್ತು ಅವನ ಕವನ - ಎಲ್ಲೋ ಹುಟ್ಟುತ್ತಲೇ ಬೇರೆಯಾದ ಮಕ್ಕಳ ಹಾಗೆ ಕಂಡವು! ನಮ್ಮಿಬ್ಬರ ಕವನಗಳೂ ಒಂದು ಮತ್ತೊಂದರ ಮುಂದರಿಕೆಯಂತೆಯೋ ಅಥವಾ ಎರಡನ್ನೂ ಮಧ್ಯದಲ್ಲೆಲ್ಲೋ ಸೇರಿಸಿಕೊಂಡು ಓದಬಹುದಾದಂತೆ ಕಾಣಬಹುದು. ನನಗಂತೂ ಇದು ದೊಡ್ಡ ಅಚ್ಚರಿ!

15 ಕಾಮೆಂಟ್‌ಗಳು:

ತನ್ ಹಾಯಿ ಹೇಳಿದರು...

ಪಾರಿವಾಳ, ದೇಗುಲ, ಜೋಡಿ, ನಾಚಿಕೆ, ಬತ್ತದ ಪ್ರೀತಿಯ ಝರಿ.. ಎಲ್ಲಾ ಚೆಂದ. ಜೊತೆಗೆ 'ಪುಣ್ಯಾತ್ಮ'ನ ಕವನವೂ.. ಇಬ್ಬರಿಗೂ ಥ್ಯಾಂಕ್ಸು.. :) :)

Annapoorna Daithota ಹೇಳಿದರು...

As usual.... Shreenidhiya kavana :)
thumba chennaagide....

ಸುಪ್ತದೀಪ್ತಿ suptadeepti ಹೇಳಿದರು...

"ಕಣ್ಣ ಪಾಪೆಗಳಲ್ಲಿ ಸಣ್ಣ ದಿಗಿಲು"
"ಧೈರ್ಯ ಬರುವುದು ನೋಡು, ಪ್ರೀತಿ ಬೆಳೆದಂತೆ"
"ಪ್ರೀತಿ ಝರಿಯಾ ಒರತೆ ಬತ್ತದಂತೆ"

ಇಷ್ಟವಾದ ಸಾಲುಗಳು.
ಕವನದ ಓಟ, ಕಥನ ಚೆನ್ನಾಗಿವೆ. ಕೀಪ್-ಇಟ್-ಅಪ್.

ಮೃಗನಯನೀ ಹೇಳಿದರು...

super super...ಮತ್ತೆ ಮತ್ತೆ ಓದೋವಾಗ ನೀನು ಓದಿ ಹೇಳಿದ್ದು ಕಿವಿಯಲ್ಲಿ ಘಣೀರಿಸುತ್ತಿದೆ... ಅಂದಹಾಗೆ ನಿನ್ನ ಮೇಲೆ ನರಸಿಂಹ ಸ್ವಾಮಿಯವರ ಭೂತ ಹೊಕ್ಕಿರೋದು ನಿಜವಾ???;-)

Unknown ಹೇಳಿದರು...

super!!

ಪ್ರೀತಿ ಇದ್ದಲ್ಲಿ ಮಾತ್ರ ನೆಮ್ಮದಿ ಇರೋದಕ್ಕೆ ಸಾಧ್ಯ.

"ಧೈರ್ಯ ಬರುವುದು ನೋಡು, ಪ್ರೀತಿ ಬೆಳೆದಂತೆ" - ಎಷ್ಟ್ ಸತ್ಯ ಅಲ್ವಾ?

ಆದ್ರೆ ಹುಡುಗಿಗೆ 'ಕೇಸರಿ' ಸೀರೆ ಉಡ್ಸಿರೋದ್ರಲ್ಲಿ .. ಏನಾದ್ರೂ ಮಸ್ಲತ್ತ್ ಇದ್ಯಾ!?

ತೇಜಸ್ವಿನಿ ಹೆಗಡೆ ಹೇಳಿದರು...

ಶ್ರೀನಿಧಿ,

ತುಂಬಾ ಚೆನ್ನಾದ ಕವನ.. ಇತ್ತೀಚಿಗೆ ನಿನ್ನ ಬರಹಗಳ ಧಾಟಿಯೇ ಬದಲಾದಂತಿದೆ...ಆದರೂ ಒಳ್ಳೆಯ ಬದಲಾವಣೆಯೇ ;-)

ಧೈರ್ಯ ಬರುವುದು ನೋಡು, ಪ್ರೀತಿ ಬೆಳೆದಂತೆ" ಈ ಸಾಲು ಇಷ್ಟವಾಯಿತು. ಆದರೆ ಪ್ರೀತಿ ಮೊಳೆಯಲೂ ಧೈರ್ಯಬೇಕಲ್ಲವೇ?;-)

ನಾವಡ ಹೇಳಿದರು...

"ಧೈರ್ಯ ಬರುವುದು ನೋಡು, ಪ್ರೀತಿ ಬೆಳೆದಂತೆ" ಈ ಸಾಲುಗಳು ಇಷ್ಟವಾದವು.
ಕವನ ಚೆನ್ನಾಗಿದೆ. ಖುಷಿ ನೀಡಿತು.

ಅನಾಮಧೇಯ ಹೇಳಿದರು...

Nieevu bareva reethi tumba tumba muddaagide..padagala jodane adbhutavaagide…

Nanna putaani blog

www.navilagari.wordpress.com

idakke nimma blaag rolnalli swalpa jaaga kodi:)

Nimma somu

ಸಿಂಧು sindhu ಹೇಳಿದರು...

ನಿಧಿ,

ಕವಿತೆಯ ಆಶಯ ಇಷ್ಟವಾಯಿತು.
ಕೆಲಸಾಲುಗಳಂತೂ ಹೂವಿನ ಎಸಳಿನಲ್ಲಿಯೇ ಬರೆದಿಡಬೇಕು ಅಷ್ಟು ಚೆನಾಗಿದೆ.

ಎಲ್ಲ ಸಾಲುಗಳೂ ಚಂದವೆನ್ನಿಸಿಯೂ, ನನಗೆ ಕವಿತೆ ತುಂಬಾ ವಾಚ್ಯವೆನ್ನಿಸಿಬಿಟ್ಟಿದೆ.

ನಿನ್ನ ಟಿಪ್ಪಣಿ ಕೂಡ ಆಸಕ್ತಿಕರವಾಗಿದೆ. ಎಷ್ಟೋ ಸಲ ನಾವು ಯೋಚನೆ ಮಾಡಿದ ತರಂಗಗಳೇ ಬೇರೆಯವರ ಮನದಲ್ಲೂ ಅಲೆಯೆಬ್ಬಿಸಿದ್ದನ್ನು ನೋಡಿದಾಗ ಅಚ್ಚರಿಯೆನಿಸುತ್ತದೆ.

ಸಿಂಧು

jomon varghese ಹೇಳಿದರು...

ನಮಸ್ತೆ,

ಪಾರಿವಾಳ, ದೇವಸ್ಥಾನ, ಭಯ, ಪ್ರೀತಿ, ನಾಚಿಕೆ, ಎಲ್ಲ ರೂಪಕಗಳನ್ನೂ ಸಮರ್ಥವಾಗಿ ಬಳಸಿಕೊಂಡ ಸುಂದರ ಕಾವ್ಯ. ಓದಿದ ನಂತರ ಚೆನ್ನಾಗಿಲ್ಲ ಅನ್ನಲಾಗುವುದಿಲ್ಲ. ತುಂಬಾ ಚೆನ್ನಾಗಿದಿದೆ.

ಧನ್ಯವಾದಗಳು.
ಜೋಮನ್.

Unknown ಹೇಳಿದರು...

raaaaaaaaaaashi chendada kavana. nimaga mattu nimma geLeyanige intaha olle kanvana nididdakke abhinandanegaLu...

Unknown ಹೇಳಿದರು...

sorry 'll correct my previous comment... intaha olle kavana nididdakke nimmibarigu abhinandanegaLu... Late night office nalli... hinde munde agoytri baryoke... :)

chethan ಹೇಳಿದರು...

ಹೂ ಬಿಡಿಸಿದಷ್ಟೇ ಮೃದುವಾಗಿ ಸುಂದರವಾಗಿದೆ ಕವನ.

Srikanth - ಶ್ರೀಕಾಂತ ಹೇಳಿದರು...

adbhuta! kavana vodakke khushiyaagatte... heege bareetiri guruve..

Karthik CS ಹೇಳಿದರು...

ಕವನ ಏನೋ ಚೆನ್ನಾಗಿದೆ.. ನಮ್ ಜನ ದೇವಸ್ಥಾನಕ್ಕೆ ಬಂದು ಪ್ರೀತಿ ಮಾಡೋದು ಯಾಕೆ ? ಅದಕ್ಕೋಸ್ಕರಾ ಅಂತ್ಲೇ ಪಾರ್ಕ್ ಇಲ್ಲ್ವ ಅಂತ.. ಅಲ್ಲ... ಸುಮ್ನೆ ಕೇಳ್ದೆ..