ಮಂಗಳವಾರ, ಡಿಸೆಂಬರ್ 21, 2010

ಸ್ಪರ್ಶ

ಪಾರಿಜಾತದ ಹೂವು ಕೈಯ ಸವರಿದ ಹಾಗೆ
ಜಂಗುಳಿಯ ಮಧ್ಯದೊಳಗೊಂದು ಸ್ಪರ್ಶ
ಯಾವುದೋ ಮೆಲುಕೆಲ್ಲ ಆ ಬೆರಳ ತುದಿಯಿಂದ
ತೆರೆದುಕೊಂಡಂದದಲಿ ನೆನಪ ವರ್ಷ

ಹಳೆಯ ಮಂಜೂಷೆಯಾ ಕಳೆದ ಕೀಲಿಯ ಕೈಯ
ಸಟ್ಟನೇ ಕೊಟ್ಟು ಹೋದಂತೆ ಯಾರೋ
ಕತ್ತಲಲಿ ಕಾಣದೆಯೆ ಕಳೆದು ಹೋಗುವ ಹೊತ್ತು
ತಿರುವಿನಲಿ ಕಂಡಂತೆ ಉರಿವ ಸೊಡರು

ಆಪ್ತ ಜೀವವೊಂದು ಹಿಂದೆ ಇಹವ ಮರೆವ ಸಮಯದಲ್ಲಿ
ಕೈಯನ್ನೊಮ್ಮೆ ಹಿಡಿದು, ಕಣ್ಣ ಮುಚ್ಚಿಕೊಂಡಿತು
ಯಾಕೋ ಇಂದು ಅಂಥದೊಂದು ಸೋಕು ತಾಕಿ
ನಡೆವ ದಾರಿಯೊಳಗೆ ಮನವು ಹೂತುಕೊಂಡಿತು

ಯಾರದೋ ನಡೆಯೊಂದು ಅವರ ತಿಳಿವಿಗೆ ಬರದೆ
ನನ್ನ ಪಥವ ಬದಲು ಮಾಡಿ ಹೊರಟುಬಿಟ್ಟಿತು
ಮರೆಯುತಿದ್ದ ಸ್ಮೃತಿಗೆ ಮತ್ತೆ ಜೀವ ಕೊಟ್ಟು ಮೆಲ್ಲ
ಜನರ ಸಂತೆಯೊಳಗೆ ಸ್ಪರ್ಶ ಕರಗಿ ಹೋಯಿತು..

ಮಂಗಳವಾರ, ಡಿಸೆಂಬರ್ 07, 2010

ಪ್ರಣತಿಯಿಂದ ಪ್ರಬಂಧ ಸ್ಪರ್ಧೆ



ಸಾಹಿತ್ಯ, ಸಂಸ್ಕೃತಿ, ಪ್ರಕೃತಿ -ಅಂಶಗಳನ್ನು ಧ್ಯೇಯವಾಗಿಸಿಕೊಂಡಿರುವ ನಮ್ಮ ಸಂಸ್ಥೆ ‘ಪ್ರಣತಿ’ಯಿಂದ, ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದೇವೆ. ವಿದ್ಯಾರ್ಥಿಗಳು ‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’ ಎಂಬ ವಿಷಯದ ಮೇಲೆ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಸ್ಫುಟವಾದ ಕೈಬರಹದಲ್ಲಿ ಅಥವಾ ಡಿ.ಟಿ.ಪಿ. ಮಾಡಿ ಕಳುಹಿಸಬಹುದು. ಪ್ರಬಂಧದ ಜೊತೆ ನಿಮ್ಮ ಕಾಲೇಜ್ ಐಡೆಂಟಿಟಿ ಕಾರ್ಡ್‌ನ ಪ್ರತಿ ಇರಿಸುವುದು ಕಡ್ಡಾಯ. ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರು ಆಯ್ದ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಪ್ರಬಂಧವನ್ನು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇ-ಮೇಲ್ ಮಾಡಬಹುದು. ಕೊನೆಯ ದಿನಾಂಕ: ೩೦ ಡಿಸೆಂಬರ್ ೨೦೧೦. ವಿಳಾಸ: ಪ್ರಣತಿ, ನಂ. ೪೪೮/ಎ, ೮ನೇ ಮೇನ್, ೭ನೇ ಕ್ರಾಸ್, ತ.ರಾ.ಸು. ರಸ್ತೆ, ಹನುಮಂತನಗರ, ಬೆಂಗಳೂರು - ೫೬೦ ೦೧೯. ಇ-ಮೇಲ್: prabandha@pranati.in. ಯಾವುದೇ ಮಾಹಿತಿಗೆ: ೯೬೧೧೪೫೮೬೯೮ / ೯೯೮೦೦೨೨೫೪೮.

ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ನೀವೇ ಭಾಗವಹಿಸಿ. ಇಲ್ಲವೇ, ನಿಮ್ಮ ಪರಿಚಿತ ವಿದ್ಯಾರ್ಥಿಗಳಿಗೆ ತಿಳಿಸಿ. ;)

ಮಂಗಳವಾರ, ಅಕ್ಟೋಬರ್ 19, 2010

ಬದುಕೆಂಬ ರಂಗೋಲಿ

ಉಷೆಯೆದ್ದು ನಸುಕಿನಲಿ,
ಮಂಜಿನಲಿ ಮುಖ ತೊಳೆದು
ಭ್ರೂ ಮಧ್ಯದಲಿ ರವಿಯ ಸಿಂಧೂರವಿಟ್ಟು
ಬಣ್ಣದಾ ಬಟ್ಟಲನು ಕೈಗಳಲಿ ಹಿಡಿದು
ನಗುಮೊಗದಿ ಬಂದಿಹಳು ಜಗದ ಹೆಬ್ಬಾಗಿಲಿಗೆ
ಚಿತ್ತ ಭಿತ್ತಿಯ ಮೇಲೆ ಚಿತ್ತಾರವಿಡಲು

ಎಳೆದಂತೆ ಆಕೃತಿಯು
ಜೀವಿಗಳೆ ಚುಕ್ಕಿಗಳು, ಅನುರಾಗದೆಳೆ ಎಳೆಯು
ನೂರಾರು ಚುಕ್ಕೆಗಳ ಮಧ್ಯೆ ಹೊಳಪಿನ ಚುಕ್ಕಿ
ಸೊಗಸಾಗಿ ರಚಿಸುವಳು ಚುಕ್ಕೆಗಳ ಬಳ ಬಳನೆ
ಎಳೆಯಾಯ್ತು ಚಿತ್ತಾರ ಬಂಧಾನುಬಂಧ

ಚಿತ್ರ ಮುಗಿದರೂ ಮತ್ತೆ,
ಹೊರಗೆ ಕೆಲ ಚುಕ್ಕಿಗಳು
ಸುತ್ತಿ ಎಳೆಯುತ ಬಂಧ ಬರೆವ ಸಡಗರದಲ್ಲಿ
ಇಟ್ಟ ಚುಕ್ಕೆಯ ಇವಳು ಮರೆತಿಹಳೋ ಎಂತೋ ?
ಇಟ್ಟು ಚುಕ್ಕಿಯ, ಮತ್ತೆ ಬಿಟ್ಟಿದ್ದು ಏಕೋ ?
ಚಿತ್ರವಾಗದ ಚುಕ್ಕಿ ಇಟ್ಟಿದ್ದು ಹೇಗೋ ?

ಹೊರಗುಳಿದರೇನಾಯ್ತು
ಕಣ್ಣೆದುರು ಮಿಂಚುತಿದೆ
ಚಿತ್ತಾರಕೇಂದ್ರದೊಳು ನಿಂತ ಹೊಳೆ ಚುಕ್ಕೆ
ಎಳೆಗಳಾ ಬಂಧದಲಿ ನಗುವ ಬಿಂದು
ಹೆಬ್ಬಾಗಿಲಲಿ ನಿಂತು ಶುಭವ ಹಾರೈಸಿದರೆ
ತುಂಬು ಮನಸಿನ ಹರಕೆ ಕೇಳೀತು ಒಳಗೆ !


-ಭಾರತಿ ಹೆಗಡೆ, ಸಿದ್ದಾಪುರ
(ನಿಮ್ಮ ಅನಿಸಿಕೆಗಳನ್ನು ನನ್ನ ಅತ್ತೆಗೆ ತಲುಪಿಸಲಾಗುವುದು)

ಸೋಮವಾರ, ಸೆಪ್ಟೆಂಬರ್ 27, 2010

ತ್ರೀ- ಡಿ ಹನಿಗಳು

ಬತ್ತಿದ್ದ ತೊರೆಯೊಳಗೆ
ಅವಳು ಕಾಲಿಟ್ಟ ಕೂಡಲೇ
ಎಲ್ಲಿಂದಲೋ ಬಂದ ನೀರು
ಗೆಜ್ಜೆ ತೋಯಿಸಿತು,ಅವರ್ಯಾರೋ
ಹೊಟ್ಟೆಕಿಚ್ಚಿಗೆ ಅಲ್ಲೆಲ್ಲೋ ಮಳೆಯಾಯಿತು
ಅಂದರು.

ಇನ್ನೂ ಯಾಕೆ ಮಳೆ ಬಂದಿಲ್ಲ ಅಂತ
ತುಂಟ ಅಣಬೆಯೊಂದು
ಮಣ್ಣಿಂದ ಹೊರ ಬಂದು ಇಣುಕೋ
ಹೊತ್ತಿಗೆ ಹನಿಯೊಂದು
ಅದರ
ನೆತ್ತಿ ಮೊಟಕಿತು!

ದಣಪೆಯಾಚೆಗೆ
ಕಾದು ನಿಂತಿದ್ದ ಎಳೆಕಿರಣ
ಅಮ್ಮ ಎದ್ದು ಅಡುಗೆಮನೆಗೆ
ಹೋದ ಕೂಡಲೇ,
ಮೆಲ್ಲನೆ ಒಳಬಂದು
ಎಲ್ಲರನ್ನ ಎಬ್ಬಿಸಿತು.

ಬುಧವಾರ, ಸೆಪ್ಟೆಂಬರ್ 01, 2010

ಅಪ್ಪ

ಸೆಕೆಂಡ್ ಪೀಯೂಸಿ, ಕನ್ನಡ ಕ್ಲಾಸು. ಅವತ್ತು ನೆಕ್ಸ್ಟ್ ಪಿರಿಯಡ್ಡು ಪೊಲಿಟಿಕಲ್ ಸೈನ್ಸು- ನಂದು ನೋಟ್ಸೇನೋ ಬರೆದಾಗಿರಲಿಲ್ಲ ಅಂತ ಏನೋ ಗೀಚುತ್ತಿದ್ದೆ. ಸರ್ರು ನೋಡಿದರು- ಏನದು ಅಂತ ದನಿ ಎತ್ತರಿಸಿಯೇ ಕೇಳಿದರು, ನಾನು ಸರ್, ಪೊ ಪೊ ಪೊಲಿಟಿಕಲ್ ಸೈನ್ಸ್ ನೋಟ್ಸು ಸಾರ್ ಅಂದೆ.. ಅದನ್ನ ಯಾಕೋ ನನ್ನ ಕ್ಲಾಸಲ್ಲಿ ಬರಿತಿದೀಯಾ
ಸಾರ್, ಮನೇಲಿ ತುಂಬ ಕೆಲ್ಸ ಸಾರ್ ಅಪ್ಪ ಬರಿಯೋಕೆ ಬಿಡ್ಲಿಲ್ಲ

ಕ್ಲಾಸು ಇಡೀ ಜೋರಾಗಿ ನಕ್ಕಿತು. ನಾನೂ ನಕ್ಕೆ- ಸರ್ರೂ ನಕ್ಕರು.

ಹೌದೌದು, ಮನೇಲಿ ಭಾರೀ ಕೆಲ್ಸ ಮಾಡ್ತೀಯಾ ನೋಡು ನೀನು ಅಂತಂದು ನೋಟ್ಸು ಎತ್ತಿಟ್ಟಿಕೊಂಡು ನಗುತ್ತಲೇ ಪಾಠ ಮುಂದುವರಿಸಿದರು.

++++

ನಂಗೆ ನನ್ನ ಅಪ್ಪನೇ ಪಿಯುಸಿಯಲ್ಲಿ ಕನ್ನಡ ಅಧ್ಯಾಪಕ .ರಾಮಾಯಣ ದರ್ಶನಂ, ಯಯಾತಿ, ದೇವರ ಹೆಣ, ಶವದ ಮನೆ ಯಂತಹ ಪಾಠಗಳನ್ನ, ಕುಮಾರ ವ್ಯಾಸ , ಲಕ್ಷ್ಮೀಶ, ರಾಘವಾಂಕ ರ ಷಟ್ಪದಿಗಳನ್ನು ತರಗತಿಯಲ್ಲಿ ಕಥೆ- ಉಪಕಥೆಗಳ ಸಮೇತರಾಗಿ ವಿವರಿಸುವಾಗ ಅದನ್ನ ಎರಡೂ ಕಿವಿದೆರೆದು ಕೇಳುವ ಭಾಗ್ಯ ನನ್ನದಾಗಿತ್ತು. ಅಪ್ಪ ಭೀಮನನ್ನು ವರ್ಣಿಸುವಾಗ ಭೀಮನಾಗಿಯೂ, ಕೃಷ್ಣನ ಮಾತು ಬಂದರೆ ಅದೇ ಶೃತಿಯಲ್ಲಿಯೂ ಸುಲಲಿತವಾಗಿ ಪಾಠ ಮಾಡ್ತಿದ್ದ. ಯಕ್ಷಗಾನ ದ ಹಿನ್ನೆಲೆ ಅಪ್ಪನಿಗೆ ಸಹಾಯ ಮಾಡಿತ್ತು. ಅಪ್ಪನ ಕ್ಲಾಸಲ್ಲಿ ಉಳಿದ ಕ್ಲಾಸಲ್ಲಿ ಆಗುವ ಹಾಗೆ ಗಲಾಟೆಯೂ ಆಗ್ತಿರ್ಲಿಲ್ಲ. ಯಾಕಂದ್ರೆ ಅಪ್ಪ ಮಾತಿಗೊಂದು ಕಥೆ ಹೇ ಗಮ್ಮತ್ತು ಮಾಡ್ತಿದ್ದರಾದ್ದರಿಂದ, ಯಾವ ಮಕ್ಕಳಿಗೂ ಅವರನ್ನ ಎದುರು ಹಾಕಿಕೊಳ್ಳುವ ಇಚ್ಛೆ ಇರಲೂ ಇಲ್ಲ. ಅಪ್ಪ ಯಾರಿಗಾದರೂ ದನಿ ಎತ್ತಿ ಬೈದಿದ್ದು ಕೂಡ ನಾನು ನೋಡಲಿಲ್ಲ.

ನೀನು ಓದುತ್ತಿದ್ದಾಗಿನ ಎರಡು ವರ್ಷ ನಾನು ಅತ್ಯಂತ ಕಷ್ಟದ ಕನ್ನಡ ಪ್ರಶ್ನೆ ಪತ್ರಿಕೆಗಳನ್ನು ಸಿದ್ದ ಪಡಿಸ್ತಾ ಇದ್ದೆ ಅಂತ ಅಪ್ಪ ಆಮೇಲೆ ನಂಗೆ ಹೇಳಿದ್ರು. ಯಾಕೆ ಅಂದ್ರೆ- ನಾನು ಹೈಸ್ಕೂಲಲ್ಲಿ ಇದ್ದಾಗಿನಿಂದ ಅಪ್ಪ ಬೇರೆ ಮಕ್ಕಳ ಪತ್ರಿಕೆ ತಿದ್ದುವುದನ್ನು ನೋಡೀ ನೋಡೀ ನಂಗೆ ಪ್ರಶ್ನೆ- ಉತ್ತರ ಎರಡೂ ಬಾಯಿಪಾಠ ಆಗಿ ಹೋಗಿದ್ದವು.

ನಾನು ಓದುತ್ತಿದ್ದ ಎರಡು ವರ್ಷವೂ ಅಪ್ಪ ನಂಗೆ ಒಂದೇ ಒಂದು ಕಿರು ಪರೀಕ್ಷೆಯ ಪ್ರಶ್ನೆ ಕೂಡ ಹೀಗಿರಬಹುದು ಅಂತ ಹೇಳಲಿಲ್ಲ. ನನ್ನ ಉತ್ತರ ಪತ್ರಿಕೆಯನ್ನು ನನ್ನೆದುರು ಒಂದೇ ಸಲ ಕೂಡ ತಿದ್ದಲಿಲ್ಲ. ಹಾಗಂತ ನಾನೇನು ತಪ್ಪು ಮಾಡಿದೆ ಅಂತ ಆಮೇಲೆ ಹೇಳುವುದನ್ನೂ ಮರೆಯಲಿಲ್ಲ. ನಾನು ತರಗತಿಯಲ್ಲಿ ಒಂದೇ ಸಲ ಕೂಡ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸಲಿಲ್ಲ!

++++

ಅಪ್ಪ, ತನ್ನ ೩೦ ವರ್ಷಗಳ ಸುದೀರ್ಘ ಸೇವೆಯಿಂದ ನಿನ್ನೆ ನಿವೃತ್ತನಾದ. ನಾನೂ ಹೆಂಡತಿ ಸಮೇತನಾಗಿ , ಅಮ್ಮನ ಜೊತೆ ನಾನು ಓದಿದ ಶಾಲೆಗೆ ಮತ್ತೆ ಹೋದೆ. ಅಪ್ಪನ ಬಗ್ಗೆ ಹಲವರು ಮಾತಾಡಿದ್ರು, ಅಪ್ಪನೂ ತನ್ನ ಮೂವತ್ತು ವರ್ಷಗಳ ಅನುಭವದ ಬಗ್ಗೆ ಮಾತಾಡಿದ. ಭಾವುಕ ಅಪ್ಪಂಗೆ ಎಲ್ಲಾದ್ರೂ ಅಳು ಬರತ್ತೇನೋ ಅಂತ ಸಣ್ಣಗೆ ಹೆದ್ರಿಕೆ ಇತ್ತು- ಆದ್ರೆ ಹಾಗೇನೂ ಆಗಲಿಲ್ಲ.
ಮಕ್ಕಳು- ಅಪ್ಪನ ಹಿತೈಷಿಗಳೆಲ್ಲ ಬಂದು ಹಾರದ ಮೇಲೆ ಹಾರ ಹಾಕುವಾಗ ಅಪ್ಪ ಕಳೆದುಹೋದವನಚಿತೆ ಕಂಡ.

ಅಪ್ಪನಿಗೆ ಹಾರೈಸಿದ ಶಾಲೆಯ ಸಂಚಾಲಕರು,

May you always have work for your hands to do.
May your pockets hold always a coin or two.
May the sun shine bright on your windowpane.
May the rainbow be certain to follow each rain.
May the hand of a friend always be near you.
And may God fill your heart with gladness to cheer you.

ಅನ್ನೋ ಐರಿಶ್ ಕವನದ ಮೂಲಕ ಅಪ್ಪನ್ನ ಹಾರೈಸುವಾಗ, ನಂಗೆ ಅಪ್ಪ ಕಾಣಿಸಲಿಲ್ಲ.

+++
ಊರಲ್ಲಿ ಜೋರು ಮಳೆ, ನಾಲ್ಕು ದಿನ ಮಳೆ ನೋಡುತ್ತ ಕಳೆದು, ಅಪ್ಪನಿಗೆ ಶುಭ ಹಾರೈಸಿ ಬಂದದ್ದಾಯಿತು.


ಅಂದ ಹಾಗೆ, ಬ್ಲಾಗಿಗೆ ಇವತ್ತು ನಾಲ್ಕು ವರ್ಷ ತುಂಬಿತು. ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗು ಧನ್ಯವಾದಗಳು.

ಮಂಗಳವಾರ, ಆಗಸ್ಟ್ 24, 2010

ದಾಂಪತ್ಯ ಗೀತೆಗಳು-1

ನಾನು ಇವಳಿಗೂ ಮೊದಲು
ಮನೆಗೆ ಬಂದು, ಕಾಪಿಗೀಪಿ ಮಾಡಿ
ಅಚ್ಚರಿ ಮೂಡಿಸೋಣವೆಂದು, ಇಂದು ಬರೋದು ಲೇಟು
ಅಂತ ಗಿಲೀಟು ಮೆಸೇಜು ಮಾಡಿ
ಬೈಕು ಪಕ್ಕದ ರೋಡಲ್ಲಿಟ್ಟು,
ಮನೆಗೆ ಬಂದರೆ
ತೆರೆದ ಬಾಗಿಲು ನಗುತ್ತಿತ್ತು,
ಮತ್ತೆ ಎದುರಿಗೆ ಇವಳು.

ಇವತ್ತು ಲೇಟಾಗತ್ತೆ ಕಣೇ ಅಂದು
ರಾತ್ರಿ ಒಂಬತ್ತಕ್ಕೆ ಬಂದರೆ, ಇವಳ
ಮುಖದಲಿ ಬೇಸರ
ಮೊನ್ನೆ ಹೇಳಿದಂತೆ ಸುಳ್ಳು ಹೇಳಿದ್ದೆ
ಅಂದುಕೊಂಡೆ,
ಯಾಕೆ ಬೇಗ ಬರಲಿಲ್ಲ
ಅನ್ನುವ ಅಮಾಯಕ ಪ್ರಶ್ನೆಗೆ ನನ್ನಲಿಲ್ಲ
ಉತ್ತರ.

ಅದೇನೋ, ನನ್ನ ಮೇಲೆ ಸಿಟ್ಟು ಮಾಡಿಕೊಂಡು
ಮಾತಾಡಿಸಿದರೂ ಆಡದೇ,
ಮಂಚದ ಮೇಲೆ ಕೂತು,
ಏನೋ ವೀಡಿಯೋ ನೋಡಿ ಮೆಲ್ಲಗೆ ನಗುತ್ತಿದ್ದಳು,
ಮೆಲ್ಲ ಹೋಗಿ ಇಣುಕಿದರೆ,
ಅಲ್ಲಿ ನಾನು ತಾಳಿ ಕಟ್ಟುತ್ತಿದ್ದೆ!

ಮಂಗಳವಾರ, ಜೂನ್ 22, 2010

ರಾವಣ್: ಹತ್ತೇ ಸಾಲಿನ ವಿಮರ್ಶೆ

ರಾವಣ್ ನೋಡಿದೆ. ಕಥೆ ಚೆನ್ನಾಗಿಲ್ಲ. ಜಾಳು ಜಾಳಾಗಿ ಬೋರು ಬರಿಸುತ್ತದೆ.. ಅಭಿಷೇಕ್ ನಟಿಸಲು ಕಷ್ಟ ಪಟ್ಟಿದ್ದರೆ, ಐಶ್ವರ್ಯ ಇಷ್ಟಪಟ್ಟಿದ್ದಾರೆ. ಗೋವಿಂದ ಅಭಿನಯ ಖುಷಿ ಕೊಡುತ್ತದೆ, ವಿಕ್ರಮ್ ಸಾಧಾರಣ.

ಆದರೆ, ಛಾಯಾಗ್ರಹಣ ಸೂಪರ್.. ಡಿಸ್ಕವರಿ ಡಾಕ್ಯುಮೆಂಟರಿ ಥರ ಕಾಣೋ ಹಲವು ಸೀನ್ ಗಳು ಸಿನಿಮಾದಲ್ಲಿದೆ. ಒಳ್ಳೊಳ್ಳೆ ಜಾಗದಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಹಾಡುಗಳು, ಹಿನ್ನೆಲೆ ಸಂಗೀತ ಚೆನ್ನಾಗಿದೆ.

ಒಟ್ಟಾರೆ ಐದಕ್ಕೆ ಎರಡು ಸ್ಟಾರ್ ಕೊಡಬೌದು.

ಗುರುವಾರ, ಜೂನ್ 17, 2010

ಲವ್ವರ್


ಕಾಂಡಿಮೆಂಟ್ಸು ಅಂಗಡಿಯೊಂದಕ್ಕೆ ಹೋಗಿದ್ದೆ, ಅಂಗಡಿ ಹುಡುಗ ಫೋನಲ್ಲಿ ಮಾತಾಡ್ತಾ ನಿಂತಿದ್ದ...
ನನಗೆ ಬೇಕಾದ್ದನ್ನ ಆರ್ಡರ್ ಮಾಡಿದೆ, ಫೋನಲ್ಲಿ ಮಾತಾಡ್ತಾನೇ ತೆಗೆದು ಕೊಟ್ಟ.ದುಡ್ಡು ಕೊಡಲು ಹೊರಟೆ, ಕೈ ಸನ್ನೆ ಮಾಡಿ, ನಿಲ್ಲಿಸಿಕೊಂಡು, ಫೋನ್ ಸಂಭಾಷಣೆ ಮುಂದುವರಿಸಿದ.

" ಇಲ್ಲ ಇಲ್ಲ, ಲವ್ವರ್ ಇಲ್ಲ"
"..."
"ನಿಜ್ವಾಗ್ಲೂ ಇಲ್ಲ"
"..."
"ನಿಮ್ ಹತ್ರ ಯಾಕ್ರೀ ಸುಳ್ ಹೇಳ್ಲಿ ನಾನು, ಲವ್ವರ್ ಇಲ್ಲ ಕಣ್ರೀ.."
"..."
" ಲವ್ವರ್ ಇದ್ರೆ ಸುಮ್ನಿರ್ತಿದ್ನಾ ನಾನು"
"..."
ನಾನು ಸುಮ್ನೇ ಇದ್ದೆ..
"ನೀವು ನಮ್ಮ ಖಾಯಂ ಕಸ್ಟಮರ್ ಸಾರ್, ನನ್ ಹತ್ರ ಲವ್ವರ್ ಇದ್ರೆ ಹೇಳ್ದೇ ಮೋಸ ಮಾಡ್ತೀನಾ?"
"..."
ಅಯ್ಯ! ಇದೊಳ್ಳೆ ಕತೆನಲಪಾ ಅಂತ ನಾನು..

ಆ ಕಡೆ ಪಾರ್ಟಿ ಏನೋ ಸುಮಾರು ಕೊರೀತು.. ಈ ಹುಡ್ಗ ಈ ಬಾರಿ ಸ್ವಲ್ಪ ಜೋರಾಗೇ,
"ಲವ್ವರ್ ಇದ್ರೆ ನೀವ್ ತಗಂಬುಡಿ ಸಾರ್, ನಾನೂ ನೋಡ್ತೀನಿ" ಅಂದ.
ನಂಗೆ ಇವನ ಲವ್ವರ್ ಪುರಾಣ ಕಟ್ಟಿಕೊಂಡು ಆಗಬೇಕಾದ್ದು ಏನೂ ಇರಲಿಲ್ಲ. ದುಡ್ಡು ಎಷ್ಟಾಯ್ತು ಅಂತ ಸನ್ನೆ ಮಾಡಿದೆ..
ಕೈಲಿದ್ದ ನೋಟು ಇಸಕೊಂಡು , ಚಿಲ್ಲರೆ ಹುಡುಕುತ್ತ ಮತ್ತೆ ಶುರು ಮಾಡಿದ.
"ನೋಡಿ, ನಾನು ಯಾವಗ್ಲೂ ನಿಮ್ಗೆ ನನ್ ಕಡೆಯಿಂದ ಲವ್ವರ್ ಕೊಡ್ತೀನಿ ಅಲ್ವಾ, ಈ ಸಲ ಅಡ್ಜಸ್ಟ್ ಮಾಡ್ಕಳಿ ಸಾರ್"
ನನಗೆ ತಲೆಯೆಲ್ಲ ಒಂದು ಸಲ ಗಿರ್ರಂತು! ಇಷ್ಟೊಂದು ಪಬ್ಲಿಕ್ಕಾಗಿ, ಹೀಂಗೆಲ್ಲ ಮಾತಾಡದ!ಇದ್ಯಾಕೋ ಸಾವಾಸ ಅಲ್ಲಾಂತ, ಚಿಲ್ಲರೆ ತಗಂಡು ಹಂಗೆ ಮೆಲ್ಲಗೆ ಹೊರಟೆ..
ಹುಡುಗ ಹೇಳ್ತಾ ಇದ್ದ, ವಿ ಆರ್ ಎಲ್ ನಲ್ ಅಂತೂ ಖಂಡಿತ ಇಲ್ಲ ಸಾರ್, ಬೇರೆದ್ರಲ್ಲಿ ಲವ್ವರ್ ಇದ್ಯಾ ಟ್ರೈ ಮಾಡ್ತೀನಿ !!

ಅವನು ಈ ಬ್ಯುಸಿನೆಸ್ಸು ಮಾಡ್ತಾನೆ ಅಂತ ನಂಗೆ ಹೇಗೆ ಗೊತ್ತಾಗಬೇಕು!

ಸೋಮವಾರ, ಫೆಬ್ರವರಿ 15, 2010

ದರ್ಶನ ಭಾಗ್ಯ!

(ಹಿಂದೆ ಎಚ್.ಆರ್ ಆಗಿದ್ದಾಗಿನ ಅನುಭವಗಳನ್ನು ಬರೀತಿದ್ದೆ. ಮಾಧ್ಯಮ ಜಗತ್ತಿಗೆ ಬಂದು ಎರ‍ಡು ಎರಡೂವರೆ ವರ್ಷಗಳಾದರೂ ಹೆಚ್ಚಿಗೆ ಏನೂ ಬರೆದಿಲ್ಲ- ಇಲ್ಲಿನ ಅನುಭವಗಳ ಬಗ್ಗೆ. ಇನ್ನು ಬರೆಯಲಾಗುವುದು:)


ನನ್ನ ಅಣ್ಣ ಉಡುಪೀಲಿರ್ತಾರೆ. ಅವ್ರ ದೂರದ ಸಂಬಂಧಿಯೊಬ್ಬರ ಮಗ ಏನೋ ಬೆಂಗಳೂರಲ್ಲಿ ಸರಿಯಾದ ಕೆಲ್ಸ ಇಲ್ದೇ ಅಲೀತಿದಾನೆ ಅಂತ ನನ್ನ ಹತ್ರ ಒಂದಿನ ಫೋನ್ ಮಾಡಿದೋರು ಹೇಳಿದ್ರು. ಮನೆ ಕಡೆಗೂ ಕಷ್ಟ, ಎನಾರೂ ಕೆಲ್ಸ ಇದ್ರೆ ನೋಡೋ ಅಂದ್ರು. ಅವನನ್ನು ನಾನೂ ಯಾವ್ದೋ ಮದುವೆಲೆಲ್ಲೋ ನೋಡಿದ್ದೆ ಹಿಂದೊಮ್ಮೆ. ಅದೇನೋ ಇರಲಾರದೇ.. ಅಂತಾರಲ್ಲ, ಹಾಂಗೆ ನಾನು, ಹೌದಾ ಅವ್ನಿಗೆ ನನ್ನ ನಂಬರ್ರು ಕೊಡಿ, ಮಾತಾಡ್ತೀನಿ ಅಂದೆ.

ನಾಲ್ಕಾರು ದಿನ ಕಳೀತು. ನಾನು ವಿಶ್ಯ ಮರ್ತೇ ಬಿಟ್ಟಿದ್ದೆ. ಆಫೀಸಲ್ಲಿ ಕೂತಿದ್ದೆ. ರಿಸೆಪ್ಶನ್ ಫೋನ್ ಮಾಡಿ ಉಲಿದಳು- ನಿಮ್ಮನ್ನು ಹುಡ್ಕೊಂಡು ಯಾರೋ ಬಂದಿದಾರೆ, ಇಲ್ಲೇ ಕೂತಿದಾರೆ ಬನ್ನಿ ಅಂತ. ಪುಣ್ಯಕ್ಕೆ ಎಲ್ಲೂ ಹೊರ್ಗೆ ಹೋಗ್ದೇ ಆಫೀಸಲ್ಲೇ ಇದ್ದೆ. ಹೋಗಿ ನೋಡಿದ್ರೆ, ಅದೇ ನನ್ನ ಅಣ್ಣನ ಸಂಬಂಧೀ ಹುಡುಗ. ಫೋನೂ ಗೀನೂ ಏನೂ ಮಾಡ್ದೇ ಧಿಮ್ ರಂಗ ಅಂತ ಬಂದಿದ್ದ.

ನಮ್ ಆಫೀಸೆಲ್ಲ ಒಂದ್ ಸಲ ತೋರ್ಸಿ, ಕ್ಯಾಂಟೀನಿಗೆ ಕರ್ಕೊಂಡು ಹೋದೆ. ಜ್ಯೂಸ್ ಗೆ ಹೇಳಿ, ಅವನ್ ಹತ್ರ ಏನ್ ಮಾಡ್ಕೊಂಡ್ ಇದೀಯಾ, ಏನ್ ಕತೆ -ವಿಚಾರ್ಸ್ತಾ ಇದ್ದೆ. ಅಷ್ಟ್ ಹೊತ್ತಿಗೆ, ನಮ್ಮಲಿನ ಸ್ಟುಡಿಯೋಗೆ ಶೂಟಿಂಗ್ ಗೆ ಅಂತ ಬಂದಿದ್ದ ನಟ ರಮೇಶ್ ಅರವಿಂದ್ ಹಾಗೇ ಯಾರ್ ಜೊತೆಗೋ ಮಾತಾಡ್ತಾ ಕ್ಯಾಂಟೀನ್ ಗೆ ಬಂದ್ರು. ಈ ಪುಣ್ಯಾತ್ಮ ಯಾರೋ ರಾಷ್ಟ್ರಗೀತೆ ಹಾಡಿದ್ ಕೇಳಿದ ಹಾಗೆ ಎದ್ದು ನಿಂತು ಬಿಡೋದಾ! ಏನಾಯ್ತೋ, ಕೂತ್ಗೊಳಪ್ಪಾ ಅಂತ ಎಳೆದು ಕೂರ್ಸಿದೆ. ಆ ಕಡೆ ಟೇಬಲಿನ ಯಾರೋ ಸಣ್ಣಗೆ ನಕ್ಕಿದ್ದು ಕೇಳ್ಸಿತು.

ನಾನು ಮತ್ತೆ ಅವನ ಕೆಲ್ಸದ ಬಗ್ಗೆ ವಿಚಾರ್ಸ್ತೀನಿ, ಊಹೂಂ, ಈ ಯಪ್ಪಂಗೆ ಅದೆಲ್ಲ ತಲೆಗೇ ಹೋಗ್ತಿಲ್ಲ. ಅಣ್ಣಾ, ನಿಮ್ಮಲ್ಲಿಗೆ ಎಲ್ಲಾ ಫಿಲಂ ಸ್ಟಾರ್ಸ್ ಬರ್ತಾರಾ?- ಹೂಂ ಕಣೋ ಬರ್ತಾರೆ ಅಂದೆ. ನೀ ನೋಡಿದೀಯಾ ಅವ್ರನ್ನ?- ಹೌದು. ಏನ್ ಚಾನ್ಸಣ್ಣಾ ನಿಂದೂ.. ಮಸ್ತ್ ಅಂತ ಉಸ್ರೆಳ್ಕೊಂಡ.

ಆಮೇಲಿಂದ ೫ ನಿಮಿಷ ಆತನಿಗೆ ನಮ್ಮಲ್ಲಿ ಯಾರ್ಯಾರು ಬರ್ತಾರೆ, ಯಾಕ್ ಬರ್ತಾರೆ ಇತ್ಯಾದಿಯೆಲ್ಲ ವಿವರಿಸ್ಬೇಕಾಯ್ತು. ಹಾಗೇ ಮಾತಾಡ್ತಾ ದರ್ಶನ್ ಬಂದಿದ್ದ ಸುದ್ದಿ ಹೇಳಿದ ಕೂಡ್ಲೇ ಈ ಹುಡುಗ, ಹಾಂ! ಅಂತ ದೊಡ್ಡದಾಗಿ ಬಾಯಿಬಿಟ್ಟ. ತಾನು ದರ್ಶನ್ ದೊಡ್ಡ ಫ್ಯಾನ್ ಅಂತಲೂ, ಆತನ ಯಾವುದೇ ಚಿತ್ರಗಳನ್ನ ನೋಡದೇ ಬಿಟ್ಟಿಲ್ಲ - ಮೆಜೆಸ್ಟಿಕ್, ಕರಿಯ ಅಂತೆಲ್ಲ ಆತ ನಟಿಸಿದ ಎಲ್ಲ ಚಿತ್ರಗಳ ಹೆಸರು ಪಟ ಪಟ ವರದಿಯೊಪ್ಪಿಸಿದ.

ನಾನು ಸುಮ್ಮನೇ ಕೂತು ಜ್ಯೂಸ್ ಕುಡೀತಿದ್ದೆ. "ಒಂದೇ ಒಂದು ಫಿಲಂ ಬಿಟ್ಟಿಲ್ಲ ಅಣ್ಣಂದು. ಫಸ್ಟ್ ಡೇ, ಫಸ್ಟ್ ಶೋ. ಪಕ್ಕಾ. ಆವತ್ತೇ ನಾಲಕ್ ಸಲ ನೋಡಿದ್ದೂ ಇದೆ ಮತ್ತೆ. ಕರಿಯ ಫಿಲಂ ೨೪ ಸಲ, ಮತ್ತಿನ್ಯಾವ್ದೋ ೧೭, ಮತ್ತಿನ್ಯಾವ್ದೋ ೧೪ ಅಂತ ಉದ್ದಕ್ಕೆ ಪಟ್ಟಿ ತೆಗ್ದ.

ಅಲ್ವೋ, ಕೆಲ್ಸ ಮಾಡೋ ಕಂಪ್ನಿನೋರು ಅಷ್ಟೆಲ್ಲ ರಜೆ ಕೊಡ್ತಾರೇನೋ, ದುಡ್ ಎಲ್ಲಿಂದ ಬರತ್ತೋ ಅಂದಿದ್ದಕ್ಕೆ "ಅಣ್ಣನ್ ಫಿಲಂ ನೋಡೋಕ್ ಬಿಡ್ದೇ ಇರೋ ಕಂಪ್ನಿ ಕೆಲ್ಸ ಯಾಕಣ್ಣಾ ಬೇಕು, ಬಿಟ್ ಬಿಡ್ತೀನಿ ಅಷ್ಟೇ, ಆಗ್ಲೇ ಎರಡ್ ಕಂಪ್ನೀ ಲಿ ಅದ್ಕೇ ಗಲಾಟೆ ಮಾಡಿ ಬಿಟ್ಟಿದೀನಿ ಜಾಬ್ ನ ಅಂದ. ನಾನು ಒಟ್ಟು ಎಷ್ಟ್ ಕಂಪ್ನಿಲಿ ಕೆಲ್ಸ ಮಾಡಿದೀಯಾ ಅನ್ನೋ ಪ್ರಶ್ನೆ ಕೇಳುವ ಸಾಹಸ ಮಾಡಲಿಲ್ಲ.. ಈತ ನೆಲೆ ಯಾಕೆ ಕಂಡುಕೊಂಡಿಲ್ಲ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿತ್ತು.

"ಅಣ್ಣಾ, ಒಂದು ಹೆಲ್ಪ್ ಮಾಡಣ್ಣ, ನಿಮ್ ಕಂಪ್ನೀಲೇ ಏನಾರೂ ಕೆಲ್ಸ -ಸೆಕ್ಯುರಿಟೀ ಗಾರ್ಡ್ ಆದ್ರೂ ಪರ್ವಾಗಿಲ್ಲ- ಇದ್ರೆ ಕೊಡ್ಸ್ ಬಿಡು. ದರ್ಶನ್ ಬಂದಾಗ ಒಂದ್ ಸಲ ತಬ್ಗೊಂಡು, ಶೇಕ್ ಹ್ಯಾಂಡ್ ಕೊಟ್ಟು ಕಣ್ ತುಂಬ ನೋಡ್ಕಂಬಿಡ್ತೀನಿ. ಪ್ಲೀಸ್"
ನಮ್ಮಲ್ಲಿ ದರ್ಶನ್ ಫಿಲಂ ರಿಲೀಸ್ ಆಗಿದ್ ದಿನ ರಜೆ ಕೊಡ್ದಿದ್ರೆ?
"ಹೇ, ಅದ್ ಹೆಂಗಾರಾ ಹೋಗದೇ"

ಖಂಡಿತ ಕೆಲ್ಸ ಇದ್ರೆ ಕೊಡಸ್ತೀನಪಾ ಅಂತಂದು ಹೊರಡಿಸಿದೆ. ಹೊರಡೋ ಮುಂಚೆ, "ನೆಕ್ಸ್ಟ್ ಟೈಮ್ ದರ್ಶನ್ ಬರೋವಾಗ ಹೇಳು ಬಂದೋಗ್ತೀನಿ"ಅಂದ. ಆಯ್ತಪಾ ದೊರೇ ಅಂತಂದು ಕಳಿಸಿದೆ.

ಸೆಕ್ಯುರಿಟಿ ಗಾರ್ಡೇ ದರ್ಶನ್ ಮೈ ಮೇಲೆ ಬೀಳೋಕೆ ಹೋಗೋ ದೃಶ್ಯ ಕಲ್ಪಿಸಿಕೊಂಡು , ನಗು ಬಂತು.

ಮಂಗಳವಾರ, ಜನವರಿ 19, 2010

ಬಿದಿರಿನ ಉಸಿರಿಗೆ..

ಮಂದಮಾರುತದಿ ಬೆರೆತು ಕೇಳುತಿದೆ ಮಧುರ ಮುರುಳಿ ಗಾನ
ಹುಲ್ಲುಗಾವಲಿನ ಬಯಲೊಳಗೆಲ್ಲೋ, ಕೊಳಲು ಹಿಡಿದ ತರುಣ

ಅಲೆ ಅಲೆ ಅಲೆ ಅಲೆ ನಾದದ ಲೀಲೆ, ಹಬ್ಬಿದೆ ಸ್ವನ ಘಮ ಊರಿನ ಮೇಲೆ..
ಬಗೆ ಬಗೆ ಬಗೆ ಬಗೆ ವೇಣು ವಿನೋದ, ಜೀವದಿಂ ಜೀವಕೆ ನೂರ್ಬಗೆ ಮೋದ

ಬೆಳ್ಳಿಯ ಗಿಂಡಿಲಿ ಹಾಲನು ಕರೆಯುವ ಗೋಪಿಕೆಗದೆ ಸಂಸಾರ
ನಲ್ಲನ ಕಾಯುವ ಹುಡುಗಿಗೆ ಮನದಲಿ ಭೃಂಗದ ಸಂಚಾರ

ಮರದಡಿ ನೆಳಲಿನ ದನಗಾಹಿಗೆ ನೆಮ್ಮದಿಯಾ ತಾನ
ದೇವರೆದುರ ಮಂದಸ್ಮಿತ ವದನ, ಧ್ಯಾನದೊಳಗೆ ಲೀನ

ಬಾಲರಿಗೆ ನವನೀತ, ಸೋತವಗದು ಗೀತ
ಬೇಟದ ಪ್ರೇಮಿಗಳು ರಾಗಕೆ ಉನ್ಮತ್ತ

ಬಿದಿರಿನ ಉಸಿರಿಗೆ ಯಾವುದೋ ಲೀಲೆ,
ಭಾವಕೆ, ಭಕ್ತಿಗೆ ಪ್ರೇಮಕೆ ಮುಕ್ತಿಗೆ -ಎಲ್ಲಕೂ ತಾಯೇ..

ಭಾನುವಾರ, ಜನವರಿ 03, 2010

ಗದ್ದೆ ಬದುವೆಂಬ ಹಸಿರ ಲೋಕ..

ಮನೆಯಲ್ಲಿ ಗಣಹೋಮ. ಒಂದಿಷ್ಟು ಗರಿಕೆ ಬೇಕು. ಬೆಳಗಾತ ಅಪ್ಪ ದೂರ್ವೆ ಕೊಯ್ಯಿ ಅಂದಿದ್ದು ಬೇರೆ ಯಾವುದೋ ಕೆಲಸದ ಮಧ್ಯ, ಮರೆತೇ ಹೋಗಿದೆ. ಹೊರಗೋಡುವುದು, ಅಲ್ಲಿಗೇ. ಇನ್ನು, ಪೇಟೆಯಲ್ಲಿರುವ ಪರಿಚಯಸ್ಥರು ಯಾರೋ ಮನೆಗೆ ಬಂದಿದ್ದಾರೆ.ಅವರ ನಾಲ್ಕನೇ ಕ್ಲಾಸಿನ ಮಗನಿಗೆ ಓದು ತಲೆಗೆ ಹತ್ತುವುದಿಲ್ಲವಂತೆ, ಒಂದಿಷ್ಟು ಒಂದೆಲಗದೆಲೆ ಬೇಕಿದೆ. ಅಮ್ಮ ಮುಖ ನೋಡಿದರೆ, ಮತ್ತೆ ಅಲ್ಲಿಗೇ ಓಡಬೇಕು. ಎಲ್ಲಿಗೆ ಎಂದರೆ, ಗದ್ದೆ ಬದುವಿಗೆ.ಕಟ್ಟಪುಣಿಗೆ. ಯಾಕೆ ಎನ್ನುತ್ತೀರೋ, ಇವೆಲ್ಲ ಕೂಡಲೇ ಕೈಗೆ ದಕ್ಕುವುದು ಅಲ್ಲಿಯೇ.

ಗದ್ದೆಯ ಹೊರಗಿನ ಮತ್ತು ಒಳಗಿನ ಜೀವಪ್ರಪಂಚವನ್ನು ಬೇರ್ಪಡಿಸುವ ಮಹತ್ತರ ಜವಾಬುದಾರಿ ಈ ಕಟ್ಟೋಣದ್ದು. ಗದ್ದೆಯೊಳಗೆ ಓಡಾಡಿ ಹುಳಹುಪ್ಪಟೆ ಹೆಕ್ಕುವ ಏಡಿಗೆ, ಈ ಗದ್ದೆಬದುವಿನಡಿಯ ಮಾಟೆಯೇ ಆಶ್ರಯ.ಈ ಮಾಟೆಗಳು, ಮೇಲ್ಗದ್ದೆ ಯಿಂದ ಕೆಳಗದ್ದೆಗೆ, ಅಕ್ಕ ಪಕ್ಕದ ಎರಡು ಸಮಾನಾಂತರ ಗದ್ದೆಗಳಿಗೆಲ್ಲ ನೀರು ಸಪ್ಲೈ ಮಾಡುವ ತೂಬುಗಳಾಗಿಯೂ ಕೆಲಸ ಮಾಡುತ್ತವೆ. ಎಲ್ಲಾದರೂ ಗದ್ದೆಬದುಗಳಲ್ಲಿ ನಡೆವಾಗ ಬೈಹುಲ್ಲು ಉಂಡೆಯೋ, ಸಣ್ಣ ಸಣ್ಣ ಕಲ್ಲುಗಳೋ ಕಂಡರೆ, ಅವುಗಳು ಈ ಮಾಟೆಗಳ ಮೂವೆಬಲ್ ಕ್ರೆಸ್ಟ್ ಗೇಟುಗಳು ಅಂಥರ್ಥ.

ಗದ್ದೆಬದುಗಳನ್ನು ಯಾವ ರೈತನೂ ಹಾಗೇ ಬಿಡುವುದಿಲ್ಲ. ನಾಟಿಗೂ ಮುನ್ನ ಕಟ್ಟಪುಣಿ ಸಮ ಮಾಡುವುದೇ ಒಂದು ದೊಡ್ಡ ಕೆಲಸ. ಬದುವಿನ ಒಳಮೈಯಲ್ಲಿ ಹಬ್ಬಿರುವ ಕಳೆಗಳನ್ನು ಗುದ್ದಲಿಯಿಂದ ನೀಟಾಗಿ ಕೆತ್ತಿ, ಚಂದ ಮಾಡಿ ಸಿಂಗರಿಸಲಾಗುತ್ತದೆ. ಗದ್ದೆಯಲ್ಲಿನ ಕೆಸರು ನೀರು ಈ ಬದುವಿಗೆ ತಾಕುತ್ತ, ತುಳುಕುತ್ತ ನಿಂತು ಪುಟ್ಟ ಕೆರೆಗಳನ್ನು ನೆನಪಿಸುತ್ತಿರುತ್ತವೆ.

ಮಳೆಗಾಲದ ಸಂಜೆಗಳಲ್ಲಿ, ನಾಟಿ ಮಾಡುತ್ತಿರುವ ಅರ್ಧ ನಾಟಿಯಾದ ಗದ್ದೆಗಳ ಬಳಿ ಸಂಜೆ ಹೊತ್ತು ಹೋಗಿ ನೋಡಿ. ಗದ್ದೆ ಹಾಳಿಗಳ ಮೇಲೆ, ಒಂದರ ಮೇಲೊಂದು ಪೇರಿಸಿಟ್ಟ ಭತ್ತದ ಸಸಿಗಳ ಕಟ್ಟುಗಳು ಅಲ್ಲಿ ಪವಡಿಸಿರುತ್ತವೆ. ಗದ್ದೆಯ ಕೆಸರೊಳಗೆ ಬೇರೂರುವ ಮುನ್ನ, ಅಲ್ಲಿ ಬೆಳತನಕದ ವಿಶ್ರಾಂತಿ ಅವಕ್ಕೆ. ನಾಟಿ ಮಾಡುವ ಹೆಂಗಸರು ಚಹಾ ಕುಡಿಯುತ್ತ ಹರಟುವುದೂ ಇಲ್ಲಿಯೇ.

ಗದ್ದೆಬದುಗಳಲ್ಲಿ ಬರೀ ಒಂದೆಲಗ ಒಂದೇ ಅಲ್ಲ, ಎಂಥೆಥದೋ ಗಿಡ-ಚಿಗುರುಗಳು ಸದಾ ಲಭ್ಯ.ನೀರು ಚೆನ್ನಾಗಿರುವಲ್ಲಿ ದರ್ಭೆ ಕೂಡ ಸಿಗುವುದಿದೆ. ಮನೆಯ ದನಕ್ಕೆ ಹುಲ್ಲು ಬೇಕೆಂದರೆ, ಕೊನೆಗೆ- ಬೇರೆಲ್ಲ ಮೂಲಗಳು ಮುಗಿದ ಮೇಲೆ, ಕಟ್ಟಪುಣಿಯೇ ಗತಿ.ಯಾವುದೇ ಊರಿನ ಗದ್ದೆಗಳನ್ನು ಅಕ್ಟೋಬರು ತಿಂಗಳು ನಂತರ ನೋಡಿ,ದನಗಳು ಹಸಿರಿನ ಪಸೆಯಷ್ಟೇ ಉಳಿದಿರುವ ಈ ಬದುಗಳನ್ನೇ ಹೆರೆಯುತ್ತ ನಿಂತಿರುವುದು ಕಾಣುತ್ತದೆ.

ಕಟಾವಾದ ನಂತರ, ಗದ್ದೆಗಳು ಮಕ್ಕಳ ಕ್ರಿಕೆಟ್ ಬಯಲಾಗುತ್ತವೆ. ಈ ಅಸಡಾ ಬಸಡಾ ಹಬ್ಬಿಕೊಂಡಿರುವ ಗದ್ದೆಗಳಲ್ಲಿ ಬೌಂಡರಿ ಗುರುತಿಸುವ ಸಮಸ್ಯೆಯಿಲ್ಲ. ಏಕೆಂದರೆ ಇದಿನಬ್ಬನ ಬದುವಿಗೆ ತಾಗಿದರೆ ಟೂಡಿ, ಶಂಕರಭಟ್ಟರ ಕಟ್ಟಪುಣಿಗೆ ಫೋರು. ಬೌಂಡರಿ ದಾಟಿತು- ದಾಟಿಲ್ಲ ಸಮಸ್ಯೆಯೇ ಇಲ್ಲ. ಬಾಲು ನಿಯತ್ತಾಗಿ ಬದುವಿಗೆ ತಾಗಿ ವಾಪಾಸು ಬಂದುಬಿಡುತ್ತದೆ. ಕೆಲಸಗಳೆಲ್ಲ ಮುಗಿದ ಸಂಜೆಗಳಲ್ಲಿ ಅಪರೂಪಕ್ಕೊಮ್ಮೆ ಮಕ್ಕಳ ಅಪ್ಪ ಅಮ್ಮಂದಿರೂ ಬದುಗಳಲ್ಲಿ ಕುಳಿತು ಹರಟೆಯಲ್ಲಿ ತೊಡಗಿ, ಆಟ ನೋಡುತ್ತಿರುತ್ತಾರೆ.

ಆದರೆ, ಈಗೀಗ ಈ ಬದುಗಳನ್ನು ಕೆತ್ತುವ ಕಾರ್ಯಕ್ಕೂ ಕುತ್ತು ಬರುತ್ತಿದೆ. ದಿನಕ್ಕಿನ್ನೂರು ಕೊಟ್ಟರೂ ಗದ್ದೆಹಾಳಿಯನ್ನು ಸರಿ ಮಾಡಿಕೊಡುವ ಮಂದಿ ಸಿಗುತ್ತಿಲ್ಲ. ಬೇಸಾಯ ಮಾಡುವುದೇ ದುಸ್ತರವಾಗಿರುವಾಗ, ಇನ್ನು ಗದ್ದೆಯ ಸುತ್ತಮುತ್ತ ಚಂದ ಮಾಡುವ ಕಾರ್ಯ ದೂರವೇ ಉಳಿಯಿತು. ನಮ್ಮೂರ ಗದ್ದೆಗಳೆಲ್ಲ ನಿಧನಿಧಾನವಾಗಿ ತೋಟಗಳಾಗಿ ಬದಲಾಗುತ್ತಿವೆ, ರಸ್ತೆ ಬದಿಯ ಗದ್ದೆಗಳು ಸೈಟುಗಳಾಗುತ್ತಿವೆ. ಎಕರೆಗಳ ಬದಲಿಗೆ ಅವಕ್ಕೀಗ ಸಿಕ್ಸ್ಟಿ-ಫೋರ್ಟಿಯಲ್ಲಿ ರೇಟು ಬಂದಿದೆ. ಹೊಲ ಸತ್ತಿದೆ, ಮುಳ್ಳಬೇಲಿ ಅವುಗಳನ್ನು ಸುತ್ತಿದೆ.

ಮನೆಯೆದುರಿನ ಖಾಲಿ ಗದ್ದೆಯ ಬದುವಿನಲ್ಲಿ ನಾಚಿಕೆ ಮುಳ್ಳು ಬೆಳೆದಿದೆ. ಮೊದಲಿನಂತೆ ಯಾರೂ ಈಗ ಗದ್ದೆ ಯಾಕೆ ಖಾಲಿ ಬಿಟ್ಟಿದ್ದೀರಿ ಅಂತೆಲ್ಲ ಕೇಳುವುದಿಲ್ಲ. ಉತ್ತರ ಎಲ್ಲರಿಗೂ ಗೊತ್ತಿದೆ. ಇನ್ನು,ಗದ್ದೆ ಬದುವಿನ ಕಿರು ಕಾಲುಹಾದಿಯಲ್ಲಿ ನಡೆದು ಹೋಗುವ ಪರಿಸ್ಥಿತಿ ಇಲ್ಲ, ಪಕ್ಕಕ್ಕೇ ಟಾರು ರಸ್ತೆ ಬಂದಿದೆ. ಆದರೂ, ಎಳೆ ಬೆಳಗಲ್ಲಿ ಈ ಬದುಗಳಲ್ಲೇ ಹುಲ್ಲತೆನೆಯೊಂದು ನಗುತ್ತ ನಿಂತು, ಇಲ್ಲ ಇನ್ನೂ ಎಲ್ಲ ಹಾಳಾಗಿಲ್ಲ ಎನ್ನುತ್ತದೆ. ಮನಕ್ಕೆ ಹಾಯೆನಿಸುತ್ತದೆ.

(03-01-10 ರ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ)

ಸೋಮವಾರ, ಡಿಸೆಂಬರ್ 21, 2009

ಗುನುಗುಗಳು..

ಪಟ್ಟಣದ ಚಂದಿರಗೆ ಬೇಡ
ತಾರೆಗಳ ಸಖ್ಯ, ಮಿನುಗು
ತಾರೆಗು ಮಿಗಿಲು
ನಗರ ದೀಪ!

ದಾರ ಕಡಿದ ಪಟಕೆ
ದೀಪಗಂಬದ ಕುಣಿಕೆ
ಮಗುವಾಸೆ ಸಾವು, ಪಟಕೆ
ದಿಗಂತದ ಕನಸು

ಬ್ರೇಕು ತಪ್ಪಿದ ಸೈಕಲ್,
ಸವಾರನಿಗೆ ದಿಗಿಲು,
ಇಳಿಜಾರ ಚಕ್ರಗತಿ
ಅದರೆದೆಯ ಮಿಡಿತ

ಶುಕ್ರವಾರ, ಡಿಸೆಂಬರ್ 11, 2009

ಅವಳು ಹೋದ ಸಂಜೆ..

ಗೋಧೂಳಿ ಹಳದಿಯಿದೆ ಆಗಸದ ರಂಗಲ್ಲಿ
ಕಣ್ಣ ಬಣ್ಣಗಳಲ್ಲಿ ವಿಷಾದರಾಗ
ಹೋದ ಹೆಜ್ಜೆಗಳಲ್ಲಿ ಕಲಸಿಹವು ನೀರಲ್ಲಿ
ಜೀವ ಕಣಕಣಕೆ, ಮಾನಿಷಾದ ಯೋಗ

ಸುಲಲಿತದಿ ಕೈ ಹಿಡಿದ ರಾಗಮಾಲಿಕೆಯೊಂದು
ಅರ್ಧದಲಿ ವೀಣೆಯನು ಬಿಟ್ಟು ಹೊರಟಂತೆ
ಕವಿತೆಯೊಂದರ ಕೊನೆಯ ಶಬ್ದ ಚಿತ್ರವು ಹಠದಿ
ಕವಿಮನೆಯ ಬಾಗಿಲಿನ ಹೊರಗೆ ನಿಂತಂತೆ

ಹೋಗಬಹುದೇ ಹೀಗೆ, ಎಲ್ಲ ಮರೆತಾ ಹಾಗೇ
ಮಲ್ಲಿಗೆಯ ಮಾಲೆಯನು ಹರಿದು ಒಗೆದು
ತರಿಯಬಹುದೇ ಮರದ ಹೀಚುಕಾಯಿಗಳನ್ನು
ಹಣ್ಣಾಗೋ ಮುನ್ನವೇ ಕಲ್ಲನೊಗೆದು

ಸೆಳೆಯುತಿದೆ ಮರಳುರುಳು ನಿಂತಲ್ಲೆ ನನ್ನನ್ನು
ಅಲೆ ಗಾಳ ಹಾಕುತಿದೆ ಆಳದೆಡೆಗೆ
ಮುಳುಗುತಿದೆ ಉರಿಗೆಂಪು ಗೋಲ ಶರಧಿಯ ಆಚೆ
ಕತ್ತಲಾಗುತಿದೆ, ದೂರ ದಾರಿ ನಡೆಗೆ


(ವಿಜಯ ಕರ್ನಾಟಕದ ಕವಿತೆಗೊಂದು ಕಾಲದಲ್ಲಿ ಪ್ರಕಟಿತ)

ಮಂಗಳವಾರ, ಅಕ್ಟೋಬರ್ 13, 2009

ಹಬ್ಬದ ಸಂಜೆ

ಬೆಟ್ಟ ತಪ್ಪಲಿನಾಚೆ ಕರಿಮೋಡ ಕವಿಯುತಿದೆ
ಇಲ್ಲಿ ಹೊಳೆಯುವ ಬೆಳಕು, ಮಾಗು ಬೈಗು
ನೆಟ್ಟನೋಟದ ಕಣ್ಣು ಬಯಲಾಚೆ ನೋಡುತಿದೆ
ಹೊಸ್ತಿಲಿನ ಹುಡುಗಿಗೆ, ಅವನದೇ ಗುಂಗು

ಮನೆಯ ಮಂದಿಯ ಗೌಜು ಹಬ್ಬವಾಗಿದೆಯಿಲ್ಲಿ
ಇವನ ಬರವಿನ ಅರಿವು ಯಾರಿಗಿಲ್ಲ
ಕತ್ತಲಿನ ನಡೆಯವಗೆ ಹೆಚ್ಚು ತಿಳಿಯದು ಬೇರೆ
ಮುಗಿಲೊಡೆಯುವಾ ಮೊದಲೆ ಬರುವನಲ್ಲ?

ಮುಂಜಾವು ಕಟ್ಟಿದ್ದ ಬಾಗಿಲಿನ ಹೂಮಾಲೆ,
ಈಕೆ ವದನದ ಹಾಗೆ ಮೆಲ್ಲ ಬಾಡುತಿದೆ
ಕುರುಡುದೀಪಗಳೆಲ್ಲ ಕಣ್ಣ ಬೆಳಕಿಗೆ ಕಾದು
ಇವಳಂತೆಯೇ ಪಾಪ, ಸುಸ್ತಾಗಿವೆ

ಶಂಖದನಿಗಳ ಮಧ್ಯೆ ಪೂಜೆ ಮಂಗಲ ಕಾರ್ಯ
ದೇವರೆದುರಲೂ ಮನ ಹರಿವ ಝರಿಯು
ಹೊರಗೆ ಏನೋ ಮಾತು, ಸಣ್ಣ ಸರಭರದೋಡು
ನಡೆದಿಹುದು ಮೆಲ್ಲ, ಉಭಯಕುಶಲೋಪರಿಯು

ಆರತಿಯ ತಟ್ಟೆಯನು ಹಿಡಿದು ನಡೆಯುತಲಿರಲು
ತಡೆದ ಕೈಗಳ ಬಿಸುಪು ಲಜ್ಜೆ ತರಿಸಿತ್ತು
ಸಾಲುದೀಪಗಳೆಲ್ಲ ಒಂದೊಂದೇ ನಗುತಿರಲು
ಹೊರಗೆ ಅಂಗಳದಲ್ಲಿ ನೆಲವು ನೆನೆದಿತ್ತು..

ಬುಧವಾರ, ಅಕ್ಟೋಬರ್ 07, 2009

ಕೆರೆಯ ನೀರನು ಕೆರೆಗೆ ಚೆಲ್ಲಿ

ಎಲ್ಲ ಕಡೆ ನೆರೆ ಪರಿಹಾರ ನಿಧಿ ಸಂಗ್ರಹಣೆ ಜೋರಾಗಿ ನಡೆಯುತ್ತಿದೆ. ಬೆಂಗಳೂರಿನಲ್ಲೂ ಕೂಡ ಇವತ್ತು ಭರ್ಜರಿ ಜಾಥಾ ಇತ್ಯಾದಿಗಳು ನಡೆದು ಕೋಟ್ಯಾಂತರ ರೂಪಾಯಿ ಸಂಗ್ರಹ ಆಗಿರುವುದು ಸಂತಸದ ವಿಚಾರ.

ಏನಾಗಿದೆ ಅಂದ್ರೆ, ಎಲ್ಲ ಪಕ್ಷಗಳೂ ಕೂಡ ಗಲ್ಲಿ ಗಲ್ಲಿ, ಬೀದಿ ಬೀದಿ, ಮುಖ್ಯ ರಸ್ತೆಗಳಲ್ಲಿ ಸುತ್ತುತ್ತಿದ್ದು, ಕೆಲ ಪುಂಡು ಲೀಡರುಗಳಿಗೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಇದು ಸದವಕಾಶ. ಇವತ್ತು ಹೀಗೊಂದು ಘಟನೆ ಆಯಿತು.

ಘನತೆವೆತ್ತ ಪಕ್ಷದ ಘನತೆವೆತ್ತ ಮುಖಂಡರೊಬ್ಬರು ನಿಧಿ ಸಂಗ್ರಹದ ಡಬ್ಬಿ ಹಿಡಿದು ಅಂಗಡಿ ಅಂಗಡಿ ಬಾಗಿಲಿಗೆ ಹೋಗುವುದೂ, ಅವರು ಹೋದಕೂಡಲೇ ಅಂಗಡಿ ಮಾಲಿಕ ಹತ್ತೋ, ಐವತ್ತೋ, ನೂರೋ ರೂಪಾಯಿ ಹಾಕುವುದೂ ನಡೆದೇ ಇತ್ತು. ಟೀವೀ ಚಾನಲಿನ ಕ್ಯಾಮರಾಗಳೂ ಹಿಂಬಾಲಿಸಿದ್ದವು.

ಒಂದೆಡೆ ಕ್ಯಾಮರಾಗಳು ಮುಂದೆ ಹೋದವು, ಶ್ರೀಯುತರೂ ಕ್ಯಾಮರಾಗೆ ಪೋಸುಕೊಡುತ್ತ ಶಾಪ್ ಓನರ್ ಎದುರು ಡಬ್ಬಿ ಹಿಡಿದರು, ಅವರು ಅದೆಷ್ಟೋ ದುಡ್ಡು ತುರುಕಿ ತಾವೂ ಕ್ಯಾಮರಾಗೆ ಹಲ್ಕಿರಿದರು. ಮುಖಂಡ ಮಹಾಶಯರು, "ದೇಣಿಗೆ ನೀಡಿದ್ದಕ್ಕೆ ಸಂತೋಷ, ಥ್ಯಾಂಕ್ಸು" ಅಂದಾಗ ಆ ಪುಣ್ಯಾತ್ಮ - ಅಯ್ಯ ನಿಮ್ದೇ ದುಡ್ಡು ನಿಮ್ದೇ ಡಬ್ಬಿ ಅದಿಕ್ಕೆಲ್ಲ ಯಾಕೆ ಥ್ಯಾಂಕ್ಸು ಬಿಡೀ ಸಾರ್" ಅಂದು ಬಿಟ್ಟರು! ಪಾಪ, ಲೀಡರ್ರು ತಬ್ಬಿಬ್ಬು! ಅದ್ನೆಲ್ಲ ಏನ್ ಹೇಳ್ತೀರಿ ಮರ್ಯಾದಿ ಕಳೀಬೇಡಿ ಅಂತ ಬಡಬಡನೆ ಮುಂದೋಡಿತು ಸವಾರಿ..

ವಿಷ್ಯ ಏನೂಂತ ಕೇಳಿದ್ರೆ, ಈ ಮುಖಂಡರಿಗೆ ಮೂರು ಚೇಲಾಗಳು.. ಅವರು, ಎಲ್ಲರಿಗಿಂತ ಮೊದಲು ಅಂಗಡಿಗಳಿಗೆ ಹೋಗಿ, ವಿಶ್ಯ ಹೀಗೀಗೆ, ದುಡ್ಡು ಕೊಡಿ ಅನ್ನೋದು.. ಅಲ್ಲಿದ್ದವ್ರು ಜೈ ಅಂದ್ರೆ ಸಂತೋಷ.. ಇಲ್ಲದೇ ಇದ್ದರೆ, ಆ ಶಾಪ್ ನ ಗೆಟಪ್ ನೋಡಿ ಯಥಾಸಾದ್ಯ ದುಡ್ಡು ಕೈಲಿ ಹಿಡಿಸಿ, ಹಾಕಿ ಇದ್ನ ಪ್ಲೀಸ್, ನಮ್ ಸಾಯಬ್ರುದು ಮರ್ಯಾದೆ ಪ್ರಶ್ನೆ ಅನ್ನೋದು..

ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ!

ಸೋಮವಾರ, ಅಕ್ಟೋಬರ್ 05, 2009

ಆಗ್ರಹ

ಇಂಥ ಹುಚ್ಚು ಮಳೇಲಿ
ಮನೇ ತಂಕ
ಬಿಟ್ಟು , ಚೂರಾದ್ರೂ
ಅಪ್ಪಿಕೊಳೇ
ಇಲ್ಲ ಪಪ್ಪಿ ಕೊಡೇ
ಅಂದ್ರೆ,
ತಪ್ಪಿಸಿಕೊಂಡು ಹೋದಳಲ್ಲ,
ಹೀಗೆಲ್ಲ ಮಾಡಬಾರದು ಅಂತ
ನ್ಯೂಟನ್ನು, ಐನ್ ಸ್ಟೀನು
ಬರೆದಿಲ್ಲವ ಎಂಥದೂ ತತ್ವ?
ಹೊರಡಿಸಬೇಕಿದೆ ಇಂಥ
ಅನ್ಯಾಯಕ್ಕೆಲ್ಲ
ಅರ್ಜೆಂಟಾಗಿ, ಫತ್ವಾ!

ಭಾನುವಾರ, ಆಗಸ್ಟ್ 16, 2009

ಅಜ್ಜನಂಗಿ ತೊಟ್ಟ ಮೊಮ್ಮಗು..

ತೋಡು. ಹೀಗಂದರೆ ಮಲೆನಾಡಿನ ಕಡೆಯವರಿಗೆ ಹಂಡೆ ನೆನಪಾಗುತ್ತದೆ.ಹಂಡೆಯಿಂದ ಬಿಸಿ ಬಿಸಿ ನೀರೆತ್ತಿ ಬಾನಿಗೋ,ಬಕೇಟಿಗೋ ಬೆರೆಸುವುದು ನೆನಪಾಗುತ್ತದೆ. ನೀರ್ ತೋಡ್ಕ್ಯಂಡು ಸ್ನಾನಾ ಮಾಡಾ ಅಪೀ, ಬಿಸೀ ಇದ್ದು ನೀರು ಅಂತ ಅಮ್ಮ ಒಳಗೆಲ್ಲೋ ಅಡಿಗೆಮನೆಯಿಂದ ಕೂಗುವುದು ಕಿವಿಯೊಳಗೆ ಕೇಳಿಸಿದಂತಾಗುತ್ತದೆ. ಅದರೆ ಇಲ್ಲಿ ಹೇಳುತ್ತಿರುವ ತೋಡು,ದಕ್ಷಿಣ ಕನ್ನಡದ್ದು. ಪಕ್ಕಾ ತುಳುಭಾಷೆಯಿಂದ ಎತ್ತಿಕೊಂಡಿದ್ದು.

ತೋಡು ಎಂದರೆ ಹಳ್ಳ. ಪುಟ್ಟ ನೀರ ಹರಿವು. ಝರಿ. ಝರಿ ಎನ್ನುವುದಕ್ಕಿಂತ, ನೀರದಾರಿ ಎನ್ನಬಹುದೇನೋ. ಮಳೆಗಾಲದಲ್ಲಿ ಮಾತ್ರ ಎಲ್ಲೆಲ್ಲೆಂದಲೋ ಬರುವ ಜಲದ ಬಲಗಳಿಗೆ, ಗಮ್ಯದ ಸರಿದಾರಿ ತೋರೋ ಮೊದಲ ಕ್ರಾಸು. ದೂರ ನೀರಯಾನದ ಮೊದಲ ಕೊಂಡಿ. ಬೆಟ್ಟದೆಲೆಗೂ ಸಾಗರದ ಹರವು ತೋರಿಸುವ ಪುಣ್ಯಪಥ. ಮಳೆ ಗಾಳಿಗೆ ಮುರಿದು ಬಿದ್ದ ಹೂವ ಗೊಂಚಲನ್ನೂ ಸಮಾಧಾನ ಮಾಡಿ ಎತ್ತಿಕೊಂಡು ಸಾಗುವ ಜಲರಥ.

ಬೇಸಿಗೆಯಿಡೀ ಈ ನೀರ ದಾರಿಗಳು, ತಮ್ಮ ಇರವಿನ ಅರಿವು ಯಾರಿಗೂ ಅಗದಂತೆ ಜಡವಾಗಿ ಬಿದ್ದುಕೊಂಡಿರುತ್ತವೆ. ಹಾಡಿಯ ಬೈತಲೆ ತೆಗೆದು ಕೆಳಗೆ ಗದ್ದೆ ಸಾಗಿರುವ ಸಣ್ಣ ದಾರಿ, ಮಳೆಗಾಲದಲ್ಲಿ ಪುಟ್ಟ ಜಲಪಾತದಂತೆ ಕಾಣುತ್ತದೆ ಎಂದು ಯಾರೆಣಿಸಿಯಾರು? ತೆಂಗಿನ ತೋಟದೊಳಗಿನ, ಇಲಿ ತೂತು ಮಾಡಿರುವ ಬಾಡಿ ಬಿದ್ದಿರುವ ಎಳನೀರು ತುಂಬಿಕೊಂಡ ತೋಡು, ಮನೆ ಕೊಟ್ಟಿಗೆ ಪಕ್ಕದಲ್ಲಿ ಸಗಣಿನಾತ ಬೀರುತ್ತ ನಿಂತ ತೋಡು, ರಣರಣ ಬಿಸಿಲಲ್ಲಿ ಮರದ ಕೆಳಗೆ ಸಾಗಿ ಹೋಗಿ, ದೂರದಲ್ಲೆಲ್ಲೋ ಕರಗಿ ಹೋದಂತೆ ಕಾಣುವ ತೋಡು, ಕಾಲುದಾರಿಯ ಪಕ್ಕಕ್ಕೇ ಇದ್ದು, ಉದ್ದಕ್ಕೆ ಮಲಗಿರುವ ಹಾವೊಂದಕ್ಕೆ ತನ್ನೊಳಗೆ ಅಶ್ರಯ ಕೊಟ್ಟು, ಭುಸ್ ಅಂತ ಹೆದರಿಸುವ ತೋಡು-ಹೀಗೆ ಥರ ಥರ.

ಕಳೆದ ಮಳೆಋತುವಿನ ಪಳೆಯುಳಿಕೆಗಳನ್ನು ತಮ್ಮ ಒಡಲಲ್ಲಿ ತುಂಬಿಕೊಂಡು ಸುಮ್ಮಗೆ ಸತ್ತಂತಿರುವ ತೋಡುಗಳಿಗೆ, ಜೀವಸಂಚಾರವಾಗುವುದು ಮೊದಲೆರಡು ಮಳೆ ಬಂದ ಮೇಲೆ. ಬೆಂದನೆಲ ತಂಪುಗೊಂಡು , ಗುಡ್ಡ ಹಾಡಿಗಳಿಂದ, ಗದ್ದೆ ಬಯಲುಗಳಿಂದ ನೀರು ಹಳ್ಳಕಿಳಿಯಲು ಎರಡು ದೊಡ್ಡ ಮಳೆಯಾದರೂ ಬೇಕು. ಹದವಾಗಿ ಮಳೆ ಶುರುವಾಗುತ್ತಿದ್ದ ಹಾಗೆ, ಹಳ್ಳವೂ ಹದಗೊಳ್ಳುತ್ತದೆ. ಎರಡು ಭಾರೀ ಮಳೆ ಬಿದ್ದ ಬಳಿಕ ತೋಡಿನ ಹರಿವು ಸರಾಗ. ಬಿದಿರ ಮುಳ್ಳುಗಳು,ಬಾಟಲಿ ಚೂರುಗಳು ಇತ್ಯಾದಿ ನೀರಿನ ಹರಿವೊಳಗೆ ಕಳೆದು ಹೋದಮೇಲೆ ಹಳ್ಳಕ್ಕಿಳಿಯುವ ಧೈರ್ಯ.

ಶರಧಾರೆ ಜೋರಾದರೆ ಅಜ್ಜನಂಗಿ ತೊಟ್ಟಂತಹ ಮೊಮ್ಮಕ್ಕಳ ಸಂಭ್ರಮ ಹಳ್ಳಕ್ಕೆ. ತಮ್ಮ ಮಿತಿ ದಾಟಿ, ಅಗಲಗಲವಾಗಿ ಉಕ್ಕೇರಿ ಸಿಕ್ಕ ಅವಕಾಶಗಳನ್ನೂ ದಾಟಿ ಹರಿವ ಹುರುಪು.ಪಕ್ಕದ ಗದ್ದೆ ಬದುಗಳನ್ನು ಗುದ್ದಿ, ಕಾಲ್ದಾರಿಯನ್ನು ಸೀಳಿ,ಹೊಸ ದಿಕ್ಕಿಗೆ ಹೊರಳಿ, ತಗ್ಗುದಿಣ್ಣೆಗಳನ್ನು ಸಮಮಾಡಿ ಅದೆಲ್ಲಿಗೋ ಅವಸರವರಸವಾಗಿ ಹೊರಟಂತೆ ಕಾಣುವ ಹಳ್ಳಗಳ ಸೊಬಗು,ಅಹಾ.

ದಕ್ಷಿಣ ಕನ್ನಡದ ಹಲವೆಡೆ ಮಳೆಗಾಲ ಆರಂಭವಾಗಿ, ಇಂತಹ ಜೋರು ನೆರೆಯುಕ್ಕುವಂತಹ ಮಳೆ ಬರಲು ಶುರುವಾದರೆ ತೋಡಿನ ಬಳಿಯಲ್ಲಿ ಕೈಯಲ್ಲೊಂದು ಮಕ್ಕೇರಿ ಹಿಡಿದು ನಿಂತ ಪೋರರು, ಕೆಲಸವಿಲ್ಲದ ಮಧ್ಯವಯಸ್ಕರು ಕಂಡೇ ಕಾಣುತ್ತಾರೆ. ಮಕ್ಕೇರಿ ಎಂದರೆ, ಉದ್ದ ಬಿದಿರ ಕೋಲ ತುದಿಗೆ ಬಲೆಯಚೀಲ. ಧೋ ಎಂದು ಸುರಿಯುವ ಮಳೆಯೊಳಗೆ ಧ್ಯಾನಸ್ಥರಂತೆ ನಿಂತಿರುವ ಈ ಮಂದಿ ಸಟಕ್ಕನೆ ಮಕ್ಕೇರಿಯನ್ನ ಹಳ್ಳಕ್ಕೆ ತೂರಿಸಿ ಮೇಲೆತ್ತಿದರು ಅಂದರೆ ತೆಂಗಿನಕಾಯಿಯೊಂದು ಅದರೊಳಗೆ ಬಂಧಿಯಾಯಿತು ಎಂತಲೇ ಅರ್ಥ.ಮಳೆಗಾಲದ ಗಾಳಿಜೋರಿಗೆ ತೋಡಂಚಿನ ಮರಗಳಿಂದುದುರಿದ ಕಾಯಿಗಳು ದಿಕ್ಕುದೆಸೆಯಿಲ್ಲದೇ ತೇಲಿ ಬರುತ್ತಿದ್ದರೆ, ಇವರುಗಳಿಗೆ ಹಬ್ಬ.
ಒಳ್ಳೆಯ ಮಳೆ ಬಂದರೆ ಮಕ್ಕೇರಿ ಪಡೆ ದಿನವಿಡೀ ಕಾದು ನೂರು ತೆಂಗಿನಕಾಯಿಗಳವರೆಗೆ ಹಿಡಿದ ದಾಖಲೆಗಳೂ ಇವೆ. ಮೊಣಕಾಲು ದಾಟಿ ಬರುವ ನೀರಲ್ಲಿ ತೊಪ್ಪೆಯಾಗಿ ನಿಂತು, ಕೈಲೊಂದು ವಿಚಿತ್ರ ಹತಾರಿನೊಡನೆ ನಿಂತ ಇವರುಗಳನ್ನು ನೋಡಿದಾಗ, ಹಳ್ಳದೊಳಗಿಂದಲೇ ಅವಿರ್ಭವಿಸಿದ ಜಲಮಾನವರಂತೆ ಕಾಣುತ್ತಿರುತ್ತಾರೆ.

ಕೇವಲ ತೆಂಗಿನಕಾಯೊಂದೇ ಹರಿದುಬರುವುದಿಲ್ಲ ಈ ಮಳೆಯೊಳಗೆ. ಇನ್ನೂ ಎಂಥೆಂಥ ಅಚ್ಚರಿಗಳು ಕೂಡ. ಬೇಸಿಗೆಯಲ್ಲಿ ಗುಡ್ಡದ ಮೇಲಿನ ಬಯಲಲ್ಲಿ ಕ್ರಿಕೆಟ್ ಅಡುವಾಗ, ತಾನೇ ಸಿಕ್ಸರ್ ಹೊಡೆದು ಕಳೆದು ಹಾಕಿದ್ದ ಕೆಂಪು ಬಣ್ಣದ ಟೆನಿಸ್ ಚೆಂಡು, ಈಗೋ, ನನ್ನ ತೆಗೆದುಕೋ ಎಂಬಂತೆ ಕಾಲ ಬಳಿಯೇ ಸುಳಿದು ಬರುತ್ತದೆ. ಶೆಟ್ಟರ ತೋಟದ ಪೇರಲೆ ಹಣ್ಣು, ಬುಡಕಿತ್ತುಕೊಂಡೇ ಬಂದ ಅನಾನಸ್ಸು ಗಿಡ, ಹೀಗೆ.

ಮಳೆ ನಿಂತ ರಾತ್ರಿಗಳ ಜೀರುಂಡೆ ಸದ್ದಿನ ಕತ್ತಲಲ್ಲಿ ಕೆಲಬಾರಿ ಮನೆಗಳಿಂದ ದೂರದ ಗದ್ದೆಗಳಂಚಿನ ತೋಡಲ್ಲಿ ಕಥೆಗಳಲ್ಲಿ ಕೇಳಿದ ಮಾಯಾಜಗತ್ತಿನ ಪ್ರವೇಶ ದ್ವಾರದಂತಹ ಕೆಂಪುಕೆಂಪು ಬೆಳಕಸಾಲು ಕಾಣುತ್ತದೆ.ಹೊಸದಾಗಿ ಇವುಗಳನ್ನು ನೋಡುವವರು ತಮ್ಮೆಲ್ಲ ವೈಜ್ಞಾನಿಕ ತರ್ಕಗಳನ್ನು ಸಾರಾಸಗಟಾಗಿ ತಳ್ಳಿಹಾಕಿ, ಕೊಳ್ಳಿ ದೆವ್ವಗಳ ಇರವನ್ನು ಒಪ್ಪಿಕೊಂಡುಬಿಡುತ್ತಾರೆ. ಇಲ್ಲವಾದರೆ, ರಾತ್ರಿ ಹತ್ತರ ನಂತರದ ಗಾಢಾಂಧಕಾರದಲ್ಲಿ ವಿಶಾಲ ಬಯಲಿನ ಮಧ್ಯದ ಮರಗಳ ಮರೆಗಳಾಚೆ ಫಳಫಳ ಮಿನುಗುತ್ತ ಸಾಗುವ ತೇಜಪುಂಜಗಳಿಗೆ ಜಗತ್ತಿನ ಯಾವ ಸಿದ್ಧಾಂತ ಉತ್ತರ ಹೇಳೀತು?

ವಾಸ್ತವವಾಗಿ ಇವು ಏಡಿ ಹಿಡಿವ ತಂಡದ ಕರಾಮತ್ತು. ಸೂಟೆಸಾಲಿನ ಮಂದಿ, ಕಣ್ಣಿಗೆ ಕಾಣದ ಸಮಸ್ತ ಜೀವಜಾಲಗಳು ವಿಚಿತ್ರ ಸದ್ದು ಹೊರಡಿಸುತ್ತ ಬಿದ್ದುಕೊಂಡಿರುವ ರಾತ್ರಿಗಳಲ್ಲಿ ಹಳ್ಳಗಳಲ್ಲಿ ಓಡಾಡುವ ಏಡಿಗಳನ್ನು ಹಿಡಿಯಲು ಹೊರಡುತ್ತಾರೆ. ಕೈಲಿ ಕತ್ತಿ ಹಿಡಿದವರೊಂದಿಷ್ಟಾದರೆ, ಅವರಿಗೆ ಒಣತೆಂಗಿನ ಮಡಲು ಸುತ್ತಿದ ಸೂಟೆಗಳ ಬೆಳಕು ತೋರಲು ಮತ್ತಷ್ಟು ಜನ. ಸಳ ಸಳ ಸದ್ದು ಮಾಡುತ್ತ ಸಾಗುವ ನೀರಿಳಿದ ತೋಡಿನಲ್ಲಿ ಚಕಚಕನೋಡುವ ಏಡಿಗಳನ್ನು ಕತ್ತಿಯಲ್ಲಿ ಕುಕ್ಕಿ, ಕೊಂಬುಮುರಿದು ಬುಟ್ಟಿ ತುಂಬುತ್ತ ಸಾಗುತ್ತಾರೆ.ಮಾರನೇ ದಿನದ ವರ್ಷಧಾರೆಯ ಜೊತೆಗಿನ ಬಿಸಿಬಿಸಿ ಮನೆಯೂಟಕ್ಕೆ, ಏಡಿ ಕಜ್ಜಾಯ.

ಮಳೆಗಾಲದ ಬಣ್ಣದವೇಷ ಮುಗಿಯುತ್ತಿದ್ದ ಹಾಗೆ, ಹಳ್ಳ ಶುಭ್ರ. ಕೆಂಪು ನೀರೆಲ್ಲ ಹಣಿದು ತೋಡಿನ ತಳ ಕಾಣುವ ಸ್ವಚ್ಛ ನೀರಿನ ಹರಿವು ಅರಂಭ. ಬಿಸಿಲಕಿರಣಗಳ ಹೊಳಪಿಗೆ ಹಳ್ಳ ಕೂಡ ಮೈಯೊಡ್ಡಿ ಬೆಚ್ಚಗಾಗುತ್ತದೆ. ಅದೆಲ್ಲಿಂದ ಹುಟ್ಟಿ ಬರುತ್ತವೋ, ಮೀನುಗಳ ಸಾಲು ಸಾಲು ನೀರೊಳಗೆ ಯಾತ್ರೆ ಹೊರಟಿರುತ್ತವೆ. ಹುಡುಗು ಜಾತಿ, ಒಂದಿಷ್ಟು ಸಣ್ಣ ಸಣ್ಣ ಮೀನುಗಳನ್ನು ಅದು ಹೇಗಾದರೂ ಹಿಡಿದು ಮನೆಬಾವಿಗಳಿಗೆ ಬಿಡುವುದೂ ಉಂಟು,ಅಪ್ಪ ಅಮ್ಮಂದಿರ ಬೈಗುಳಗಳಿಗೂ ಬೆಲೆ ಕೊಡದೆ. ಕೆಲ ಬಾರಿ ಮೀನ ಜೊತೆ ಬಂಪರ್ ಬಹುಮಾನವಾಗಿ ಅಮೆ ಕೂಡ ಸಿಗುತ್ತದೆ ಇಲ್ಲಿ. ಅದೂ ಕೂಡ ಸೀದಾ ಬಾವಿಗೇ.

ಇಂತಹ ತೋಡುಗಳ ಪಕ್ಕದಲ್ಲಿ ನಾಲ್ಕೆಂಟು ಮಳೆಯಾಗುತ್ತಿದ್ದ ಹಾಗೆ ಯಾವು ಯಾವುದೋ ತೆರನಾದ ನೆಲಹೂ ಗಿಡಗಳ ಹಿಗ್ಗು. ಕೆಂಪು, ಹಳದಿ , ಬಿಳಿಯ ಸಾಸಿವೆ ಕಾಳಿನಾಕೃತಿಯಿಂದ ತೊಡಗಿ ಅಂಗೈ ಅಗಲದವರೆಗಿನ ಸೊಬಗುಗಳ ವರ್ಣಜಾತ್ರೆ. ಹಳ್ಳದಂಡೆಯಲ್ಲೇ ಇಡೀ ಚಳಿಗಾಲ ಬೇಸಿಗೆಗಳಲ್ಲಿ ಹುದುಗಿದ್ದ ಗಡ್ಡೆಗಳು ಜೀವತಾಳಿ,ಮೊಳಕೆ ಬಂದು ಹೂಬಿಟ್ಟು ತೋಡಂಚು ಹೂದೋಟವಾಗಿ ಬಿಡುತ್ತವೆ. ಯಾವ ದೇವರ ಮುಡಿಗೂ ಕೀಳಲ್ಪಡದ ಪುಣ್ಯ ಇವಕ್ಕೆ. ಮಳೆ ಕಡಿಮೆಯಾಗುತ್ತಿದ್ದ ಹಾಗೆ ಭೂದೇವಿಗೇ ಅರ್ಪಣೆಗೊಳ್ಳುವ ಈ ಕುಸುಮಗಳು ಮತ್ತೆ ಕಾಣಿಸಿಕೊಳ್ಳುವುದು ಮುಂದಿನ ಮಳೆಮಾಸದಲ್ಲೇ.

ಮಳೆ ಕಡಿಮೆಯಾಗಿ ಸೆಪ್ಟೆಂಬರ್ ಮುಗಿಯುತ್ತಿದ್ದ ಹಾಗೆ ಗದ್ದೆಗಳಿಗೆ ನೀರುಣಿಸುವ ಕೆಲಸವೂ ಈ ಹಳ್ಳಗಳದು. ಪುಟ್ಟ ಕಲ್ಲು- ಕಸಗಳನ್ನು ಅಡ್ಡಕಟ್ಟಿ ಗದ್ದೆಗೆ ಹರಿವು ತಿರುಗಿಸಿದರೆ, ಬಲಿಯುತ್ತಿರುವ ಭತ್ತದ ತೆನೆಗಳ ಬುಡಕ್ಕೆ ಸಾಗಿಹೋಗಿ ಅವುಗಳನ್ನು ತಂಪು ಮಾಡುತ್ತದೆ ತೋಡಿನ ನೀರು. ತನ್ನೊಳಗಿನ ಕೊನೆಯ ಹನಿಯನ್ನೂ ಕೂಡ ಗದ್ದೆಗೆ ಬಸಿದ ಮೇಲೆ ತೋಡು ಅಂತರ್ಧಾನ. ಅಮೇಲೆ, ಇದ್ದರೂ ಇಲ್ಲದ ಹಾಗಿನ ಕಷ್ಟ. ಮರಳಿ ಮಳೆಗಾಲಕ್ಕೆ ಕಾಯುತ್ತ ತಟುಕು ಹನಿಗಳು ಮತ್ತೆ ಮೈಯ ಮುಟ್ಟುವವರೆಗೆ ಸುತ್ತಲಿನ ಹಸಿರಿಗೆ ಉತ್ತರವಾಗಿ ಮಲಗಿರುತ್ತವೆ, ಈ ಚಿರಂಜೀವಿ ಹಳ್ಳಗಳು.

(ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ )

ಸೋಮವಾರ, ಆಗಸ್ಟ್ 10, 2009

ಅಮೃತಕ್ಷಣಗಳು..

ನಮಸ್ತೇ.

ನಮ್ಮ ಕರೆಗೆ ಓಗೊಟ್ಟು , ಬಂದು ಪುಸ್ತಕ ಬಿಡುಗಡೆ ಸಮಾರಂಭವನ್ನು ಯಶಸ್ವಿಗೊಳಿಸಿದ್ದಕ್ಕೆ ನಮ್ಮ ಮತ್ತು ಪ್ರಣತಿಯ ಪರವಾಗಿ, ನಿಮಗೆಲ್ಲ, ವಂದೇ. ಇಲ್ಲಿ ಒಂದಿಷ್ಟು ಚಿತ್ರಗಳಿವೆ. ನೋಡಿ.

ಹಾ, ಬರಲಾಗದೇ ಇದ್ದ ಎಷ್ಟೋ ಜನ ಮೆಸೇಜು, ಕಾಲ್ಸು ಮತ್ತು ಈ ಮೈಲ್ ಮುಖಾಂತರ ಶುಭ ಹಾರೈಸಿದ್ದಾರೆ ಅವರಿಗೂ ನಮ್ಮ ನಮನಗಳು.


ಹೀಗೇ ನಮ್ಮ ಬೆನ್ನು ತಟ್ಟುತ್ತಿರಿ.

ಸೋಮವಾರ, ಆಗಸ್ಟ್ 03, 2009

ಸ೦ತಸದ ಘಳಿಗೆ - ಕರೆಯೋಲೆ


ಯಾವತ್ತಾರೂ ಹೀಗಾಗತ್ತೆ ಅಂದ್ಕಂಡಿರ್ಲಿಲ್ಲ, ಹಾಂಗಾಗೇ ಬರೀಬೇಕು ಅಂತ ಗೊತಾಗ್ತಿಲ್ಲ. ಹಾಳೆಯಲ್ಲಿ ಬರಿಯೋದಾಗಿದ್ರೆ ಹಳೇ ಸಿನಿಮಾಗಳಲ್ಲಿ ನೋಡಿದ ಹಾಗೆ ಸುಮಾರು ೪೦-೫೦ ಬಿಳೀ ಕಾಗದದ ಉಂಡೆಗಳು ಇಲ್ಲಿ ನನ್ನ ಸುತ್ತ ಬಿದ್ದಿರ್ತಿದ್ವು , ಗ್ಯಾರೆಂಟಿ. ಪುಣ್ಯ,ಬ್ಲಾಗರಿನ ಬಿಳಿಯ ಅವಕಾಶ- ಅದಕ್ಕೆಲ್ಲ ಅವಕಾಶ ಕೊಡಲಿಲ್ಲ.

ನನ್ನ ಕವವ ಸಂಕಲನ, ಹೂವು ಹೆಕ್ಕುವ ಸಮಯ ಅಗಸ್ಟ್ ೯ರ ಶ್ರಾವಣ ಭಾನುವಾರ ಬಿಡುಗಡೆಯಾಗ್ತಿದೆ. ಜೋಗಿ ಸರ್ ಮುನ್ನುಡಿ ಬರೆದ ಪುಸ್ತಕವನ್ನು ನಾನು ಬೆರಗುಗಣ್ಣುಗಳಿಂದ ಆರಾಧಿಸುವ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು ಲೋಕಾರ್ಪಣೆ ಮಾಡುತ್ತಿದ್ದಾರೆ.

ಜೊತೆಗೆ ಅಂದೇ, ಗೆಳೆಯ ಸುಶ್ರುತನ ಹೊಳೆಬಾಗಿಲು ಲಲಿತ ಪ್ರಬಂಧ ಸಂಕಲನ ಬಿಡುಗಡೆಯಾಗ್ತಿದೆ. ಅದನ್ನ ಬಿಡುಗಡೆ ಮಾಡೋರು ನಾಗತಿಹಳ್ಳಿ ಚಂದ್ರಶೇಖರ್ ಸರ್.

ನಮ್ಮದೇ ಸಂಸ್ಥೆ ಪ್ರಣತಿ ಇಬ್ಬರ ಪುಸ್ತಕಗಳನ್ನೂ ಪ್ರಕಟಿಸಿದೆ. ಈ ವರ್ಷದ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರಿಗೆ ಪ್ರೋತ್ಸಾಹ ನೀಡೋ ಪುಸ್ತಕ ಪ್ರಕಟಣೆ ಯೋಜನೆಯಲ್ಲಿ ನಮ್ಮ ಪುಸ್ತಕಗಳು ಆಯ್ಕೆಯಾದ್ದವು.

ನಾನು, ಸುಶ್ ಮತ್ತು ಪ್ರಣತಿಯ ಗೆಳೆಯರೆಲ್ಲ ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿ ಯಲ್ಲಿ ಬರುವ ಭಾನುವಾರ, 9ನೇ ತಾರೀಖು ಬೆಳಗ್ಗೆ 10.30ಕ್ಕೆ ನಿಮಗಾಗಿ ಕಾಯುತ್ತಿರುತ್ತೇವೆ.

ಬಂದು ನಮ್ಮನ್ನು ಖುಷಿಗೊಳಿಸುತ್ತೀರಿ ನೀವು. ಗೊತ್ತು ನಮಗೆ:)

ಮಂಗಳವಾರ, ಜುಲೈ 28, 2009

ಜಂಗಮ ಬಿಂಬಗಳು -5

ಕಾಫಿ ಹುಡುಗ ತಪ್ಪಿ ಕಪ್ ಕೆಳಗೆ ಬೀಳಿಸಿದ. ಯಾರೂ ನೋಡಿಲ್ಲವೆಂದುಕೊಂಡು ಅದೇ ಲೋಟಕ್ಕೆ ಕಾಫಿ ಬಗ್ಗಿಸಿದ. ಯಾಕಯ್ಯ ಹೀಗೆ ಮಾಡುತ್ತೀ,ತಪ್ಪಲ್ಲವ ಅಂದೆ. ಏನಾಗತ್ತೆ ಸರ್, ಜಸ್ಟ್ ಕೆಳಗೆ ಬಿತ್ತು.. , ನೀವೇ ಮಾಡ್ಕಂಡ್ರೆ ತಪ್ಪಿಲ್ಲ, ನಾವಾದ್ರೆ.. ಮಾತು ತುಂಡರಿಸಿ, ಬೇರೆ ಕಪ್ ತೆಗಿ ಅಂದೆ. ಬೇರೆ ಕಾಫಿ ಕೊಟ್ಟ. ರಾತ್ರಿ ಮನೆಯಲ್ಲಿ ಕುಕ್ಕರಿಂದ ಅನ್ನ ಎತ್ತಿ ಕೆಳಗಿಡಬೇಕಾದಾಗ, ಇಕ್ಕಳ ಜಾರಿ ಅನ್ನದ ಪಾತ್ರೆ ಕವುಚಿ ಬಿತ್ತು. ಪಾತ್ರೆ ಎತ್ತಿಟ್ಟು, ನೆಲಕ್ಕೆ ತಾಕದೇ ಉಳಿದಿದ್ದ ಅನ್ನ ಮತ್ತೆ ಪಾತ್ರೆ ಹಾಕಿದೆ. ಊಟ ಮಾಡಿದೆ. ಹುಡುಗ ನೆನಪಾದ.

***

ಎದುರಿನ ಬೈಕಿನ ಸೈಡ್ ಸ್ಟ್ಯಾಂಡು ಹೊರ ಚಾಚಿದ್ದನ್ನೇ ಗಮನಿಸುತ್ತ ಅದನ್ನು ಅವನಿಗೆ ಹೇಳಬೇಕೆಂದುಕೊಂಡ.ಆದರೆ ತನ್ನೆದರು ಸಡನ್ನಾಗಿ ನುಗ್ಗಿ ಬರುತ್ತಿದ್ದ ಆಟೋ ಗಮನಿಸಲೇ ಇಲ್ಲ.

***
ಒಂದಿಷ್ಟು ಹುಡುಗರು ಕ್ರಿಕೆಟ್ ಆಡುತ್ತಿದ್ದರು.೪-೫ರ ವಯಸ್ಸಿನವರು. ಪಾಪುವೊಂದು ಹೇಗೆ ಬೌಲಿಂಗು ಮಾಡಿದರೂ ಒಬ್ಬ ಪೋರ ಔಟೇ ಆಗುತ್ತಿರಲಿಲ್ಲ. ಈ ಪಾಪಚ್ಚಿ, ಮಧ್ಯರಸ್ತೆಯಲ್ಲೇ ಶರಟಿನ ಬಟನ್ನನ್ನು ಪುಟ್ಟ ಬೆರಳುಗಳಿಂದ ಬಿಚ್ಚಿ, ಬರಿ ಮೈಲಿ ನಿಂತು, ಆಕಾಶ ನೋಡುತ್ತ, ದೇವಲೇ ಇವುನ್ನ ಔಟ್ ಮಾದೂ ಅಂತ ಕೂಗಿತು. ನಂಗೇ ನಾನೇ ದೇವರಾಗಿರಬಾರದಿತ್ತೇ ಅಂತ ಮೊದಲ ಸಲ ಅನ್ನಿಸಿತು.

***