ಬುಧವಾರ, ಮೇ 09, 2007

ಅಡ್ದ "ಪಲ್ಲಕ್ಕಿ" ಉತ್ಸವ.

ಇಲ್ಲ, ನಾನು ಯಾವುದೇ ಮಠಾಧೀಶರ ವರ್ಧಂತಿಯ ಬಗ್ಗೆಯೋ, ದೇವಸ್ಥಾನಗಳ ಜಾತ್ರೆಗಳ ಬಗ್ಗೋ ಬರೆಯಲು ಹೊರಟಿಲ್ಲ. ಇದು ಬೇರೆಯದೇ ವಿಚಾರ. ಒಂದು ಸಿನಿಮಾನ ಸ್ವಲ್ಪ ಪೋಸ್ಟ್ ಮಾರ್ಟಂ ಮಾಡೋಣ ಅನ್ನಿಸಿತು. ಸಿನಿಮಾಕ್ಕೂ, ಈ ಟೈಟಲ್ ಗೂ ಏನು ಸಂಬಂಧ ಅಂತಾನಾ?! "ಪಲ್ಲಕ್ಕಿ" ಸಿನಿಮಾದ ಬಗ್ಗೆ ಹೇಳೋಕೆ ಹೊರಟಿರೋದು ನಾನು. ಮೊನ್ನೆ ಮೊನ್ನೆ ಈ ಚಲನ ಚಿತ್ರ ನೋಡಿದೆ, "ಕೊಂದ ಪಾಪ ತಿಂದು ಪರಿಹಾರ" ಅಂತ ಒಂದು ಗಾದೆ ಇದೆ ಕನ್ನಡದಲ್ಲಿ, ಗೊತ್ತಲ್ಲ?!, ಹಾಗಾಗಿ ಇದರ ಬಗ್ಗೆ ಬರಿಯೋಣ ಅನ್ನಿಸಿತು.

ಪಲ್ಲಕ್ಕಿ ಸಿನಿಮಾದ ಹೀರೋ ಪ್ರೇಮ್. ಆತ ಹಿಂದೆ ಎರಡು ಒಳ್ಳೆಯ ಚಿತ್ರಗಳಲ್ಲಿ ನಟಿಸಿದ್ದು, ಮತ್ತು ಈ ಚಿತ್ರಕ್ಕೆ "ಪಲ್ಲಕ್ಕಿ" ಅನ್ನುವ ಒಳ್ಳೆ ಹೆಸರಿದ್ದದ್ದು, ಈ ಸಿನ್ಮಾ ನೋಡಲು ಪ್ರೇರೇಪಿಸಿತು ನನ್ನ. ಜೊತೆಗೆ ಬೆಂಗಳೂರು ತುಂಬಾ ಅದರ ಸೊಗಸಾದ ಪೋಸ್ಟರುಗಳು ಬೇರೆ. ಬೆಣ್ಣೆಯಂತೆ ಕಾಣುವ ಹೀರೋಯಿನ್ನು, ಹೂವು, ಅದೂ ಇದು ಪೋಸ್ಟ್ರು ತುಂಬಾ.

ಚಿತ್ರದ ಕತೆ ಬಗ್ಗೆ ಹೇಗೆ ಹೇಳಬೇಕು ಅಂತ ತಿಳೀತಿಲ್ಲ ನಂಗೆ. ಹೀರೋ ಅಪಾಪೋಲಿಯಂತೆ ಕಂಡರೂ ಊರಿಗುಪಕಾರಿ. ಅವನ "ಏರಿಯಾ"ಕ್ಕೆ ಅವನೇ ಲೀಡರ್ರು ( ಎಲ್ಲಾ ಸಿನ್ಮಾಲೂ ಹೀಂಗೆ ಇರತ್ತೆ ಅಲ್ವಾ?) ಅವನಿಗೆ ೩ ಜನ ಸ್ನೇಹಿತರು, ಮತ್ತು ಅವರು ಯಾವಾಗಲೂ ಕಾಮಿಡಿಯನ್ನೇ ಮಾಡುವವರು! ಅವನಿಗೆ ಸಿಕ್ಕಾಪಟ್ಟೆ ಕನ್ನಡ ಪ್ರೇಮ. ಹೆಚ್ಚಿನ ಸಿನಿಮಾದಂತೆ ಇಲ್ಲೂ ಚಂದಾ ಸಂಗ್ರಹಿಸಿ,ಕನ್ನಡ ರಾಜ್ಯೋತ್ಸವದಂದು ಕನ್ನಡ ಕನ್ನಡ ಅಂತ ಹಾಡು ಹಾಡುತ್ತಾನೆ ಹೀರೋ!. ರೌಡಿಗಳನ್ನ ಚಚ್ಚುವುದರ ಬಗ್ಗೆ ಬೇರೆ ಹೇಳಬೇಕಾಗಿಲ್ಲ.

ಒಂದು ಹುಡುಗೀನ ನೋಡಿ ಮೊದಲ ನೋಟದ ಪ್ರೇಮ ಆಗಿಬಿಡುತ್ತದೆ, ಇಂಟರ್ವಲ್‌ವರೆಗೂ ಅವಳನ್ನ "ಪ್ರಪೋಸ್ ಮಾಡಲು" ಸುತ್ತುತ್ತಾನೆ, ಇಂಟರ್ವಲ್ ಗೆ ಮುಂಚೆ ಅವಳು ಇವನಿಗೆ, "ನೀನು ಏನು ಸಾಧನೆ ಮಾಡಿದ್ದೀಯಾ, ನಿಂಗೆ ಜವಾಬ್ದಾರಿ ಇದೆಯಾ" ಅಂತಾಳೆ. ಇಂಟರ್ವಲ್ ಆದ್ಮೇಲೆ ಹೀರೋಗೆ ಮೈ ಮೇಲೆ ಜವಾಬ್ದಾರಿಯ ದೇವರು ಬಂದು ಅಪ್ಪನ ರೇಷ್ಮೇ ಸೀರೆಯ ಫ್ಯಾಕ್ಟರಿ ಸೀಝ್ ಆಗಿದ್ದನ್ನ ಬಿಡಿಸಿ ಕೆಲ್ಸ ಶುರು! ಇಷ್ಟು ದಿನ ಆ ಕಡೆಗೆ ತಲೆ ಕೂಡಾ ಹಾಕದವನು ಆರಾಮಾಗಿ ಮಶೀನು ರಿಪೇರಿ ಸಹ ಮಾಡುತ್ತಾನೆ. ಮೈ ಪರಚಿಕೊಳ್ಳುವಷ್ಟು ಖುಷಿಯಾಯಿತು ನನಗೆ.

ಅಮೇಲೆ ಏನಾಗುತ್ತದೆ ಅಂತ ಹೇಳೋದು ಬೇಕಿಲ್ಲವಲ್ಲ! ಹೀರೋ ದಿನ ಬೆಳಗಾಗುವುದರೊಳಗೆ ಶ್ರೀಮಂತ! ಹೀರೋಯಿನ್‌ದು ಸ್ವಲ್ಪ ಫ್ಲಾಶ್ ಬ್ಯಾಕು, ಅಪ್ಪ- ಅಮ್ಮ ಕಣ್ಣೀರು, ಆಸ್ಪತ್ರೆಯಲ್ಲಿ ಕ್ಲೈಮಾಕ್ಸು. ನಿಮಗೆ ನಾನು ಬೇರಾವುದೋ ೭೦- ೮೦ರ ದಶಕದ ಸಿನಿಮಾ ಕಥೆ ಹೇಳುತ್ತಿದ್ದೇನೆ ಅನ್ನಿಸಿದರೆ ಅದು ನನ್ನ ತಪ್ಪಲ್ಲ. ಯಾರು ಕಥೆ ಹೇಳಿದರೋ, ಯಾಕಾದರೂ ಇದನ್ನ ಚಿತ್ರ ಮಾಡಿದ್ದಾರೋ, ದೇವರಿಗೇ ಗೊತ್ತು. ರೇಷ್ಮೆ ಸೀರೆ ಕಾರ್ಖಾನೆಯ ಕಾನ್ಸೆಪ್ಟು ಹೊಳೆದದ್ದು ರುದ್ರ ಭೀಕರ!

ನಾಯಕಿ ರಮಣೀತೋ ಚೌಧರಿ ನೋಡಲು ಚೆನ್ನಾಗಿದ್ದಾಳೆ, ಅವಳಿಗೆ "ನಟಿಸುವ" ಕೆಲಸವೇನೂ ಇಲ್ಲ ಇಲ್ಲಿ. ಪ್ರೇಮ್ ಅಳುವುದು ಥೇಟ್ ನಕ್ಕಂತೆಯೇ ಕಾಣುತ್ತದೆ ಮತ್ತು ಕೇಳಿಸುತ್ತದೆ. ನೋಡುವ ನಮಗೆ ನಗಬೇಕೋ , ಅಳಬೇಕೋ ಒಂದೂ ತಿಳಿಯುವುದಿಲ್ಲ. ಚಿತ್ರದ ಹಾಸ್ಯ ಅತ್ಯಂತ ಹಾಸ್ಯಾಸ್ಪದವೂ, ಸಂಗೀತ ಶಂಕಾಸ್ಪದವೂ ಆಗಿದೆ. ಗುರುಕಿರಣ್ ಹಿಂದಿಯ ಫನಾ ಚಿತ್ರದ ಬೀಟ್ಸುಗಳನ್ನ ಕದ್ದಿದ್ದಾರೆ! ನಾವೆಲ್ಲ ಕನ್ನಡ ಪ್ರೇಮಿಗಳಾಗಿರುವುದರಿಂದ ಫನಾ ನೋಡಿಲ್ಲ ಅಂತ ಅವರು ಅಂದುಕೊಂಡಿರಬಹುದು. ಹಾಡುಗಳು ಯಾವುವೂ ನೆನಪಿನಲ್ಲಿ ಉಳಿಯುವುದಿಲ್ಲ. ಒಂದು ಹಾಡಿನ "ಕಥಕ್ಕಳಿ" ಕೊರಿಯೋಗ್ರಫಿ ಚೆನ್ನಾಗಿದೆ.

ಚಿತ್ರ ನಿರ್ದೇಶಕರು- ಕೆ.ನರೇಂದ್ರ ಬಾಬು. ಇವರ ಹೆಸರು ಯಾಕೆ ಹೇಳಿದೆ ಅಂದರೆ, ಮುಂದೆ ಇವರು ಬೇರಾವುದಾದರೂ ಸಿನಿಮಾ ಮಾಡಿದರೆ "ಸ್ವಲ್ಪ ಎಚ್ಚರ ಇರಲಿ" ಅಂತ ಅಷ್ಟೆ. ಇನ್ನು ಯಾರಾದರೂ, "ಕನ್ನಡ ಚಿತ್ರರಂಗ ಉದ್ಧಾರ ಆಗುತ್ತಿರುವ ಈ ಸಮಯದಲ್ಲಿ ಈ ತರ ಕೆಟ್ಟ ವಿಮರ್ಶೆ ಮಾಡಬಾರದು" ಅಂತ ಬೊಂಬ್ಡಾ ಹೊಡಕೊಂಡರೆ, ನಾನೇನೂ ಮಾಡಲಾಗದು.
ಯಾರಿಗೂ ಮೂರು ತಾಸು ಸಮಯ ಮತ್ತು ದುಡ್ಡು ಬಿಟ್ಟಿ ಬರುವುದಿಲ್ಲ.

7 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಹೌದಾ, ಇಷ್ಟು ಖರಾಬಾಗಿದ್ದಾ? ಖರಾಬು ಅನ್ನೋದ್ಕಿಂತ ಇಷ್ಟು 'ಸಿನಿಮೀಯ'ವಾಗಿದ್ದಾ ಅನ್ನೋದು ಒಳ್ಳೆದು. ನಾನು ಈ ವಾರ ಹೋಗವು ಮಾಡ್ಕಂಡಿದ್ದಿದ್ದಿ. ಹೇಳಿದ್ದು ಒಳ್ಳೆದಾತು ಬಿಡು..

ಆದ್ರೂ ಕನ್ನಡಿಗರು ಚೆನ್ನಾಗಿಲ್ದೇ ಇರೋ ಸಿನೆಮಾದ ಬಗ್ಗೆ ಬರೆದು ಎಚ್ಚರಿಕೆ ಕೊಡ್ತಾರೆ ಹೊರತು ಚೆನಾಗಿರೋ ಸಿನೆಮಾದ ಬಗ್ಗೆ ಬರೆದು ಪ್ರೋತ್ಸಾಹಿಸದು ಕಡಿಮೆ ಅಂತ ಹೇಳಿದರೆ ಕುಹಕವೇನಿಲ್ಲ ಅಲ್ವಾ :-)ಉತ್ತರ ಹೇಳಕ್ಕೋಗಿ ಮತ್ತೇನಾದ್ರೂ 'ಮುಂಗಾರು ಮಳೆ' ವಿಷ್ಯ ಎತ್ತಿದ್ರೆ ಕನ್ನಡ ಚಿತ್ರರಂಗದ ಮೇಲಾಣೆ :D

ರೇಷ್ಮೆ ವ್ಯಾಪಾರದ ಉಪಾಯ ಹೊಳೆದಿದ್ದು "ರುದ್ರ ಭೀಕರ" ಅಂದಿದ್ದು ಯಾಕೆ ಅಂತ ತಿಳಿಯಲಿಲ್ಲ !!!

ಗುಹೆ ಹೇಳಿದರು...

ಹೌದು.. ಶ್ರೀ... ನಾನು ಕಳೆದ ಭಾನುವಾರ ನೋಡಿದ್ದೆ. ಕಥೆ(ಇದರಲ್ಲಿ ಕಥೆ ಇದೆ ಅಂದರೆ ಅಪರಾಧ ವಾಗಬಹುದೋ ಏನೋ?)ನ ಒಳ್ಳೇ ಕತ್ತೆ ಉಚ್ಚೆ ಹೊಯ್ದ ಹಾಗೆ ಹೇಳಿದ್ದ..

ಅನಾಮಧೇಯ ಹೇಳಿದರು...

super post ri....
jotejoteyali movie li avru altirodana nodi naanu nafriendsu kakkabikki...yakandre prem altidano nagtidano anta confusionu..
sadhya movie nodilla namma duddu ulisiddakke dhanyavadagalu
neevu movie nodi torture aagiddakke namgella vondu volle reviwu vodak sikktu...nakk nak sakayu...

Parisarapremi ಹೇಳಿದರು...

ಮುಂಗಾರು ಮಳೆಯೇ ವಾಸಿ ಅನ್ಸುತ್ತೆ ನಿನ್ನ ಬರಹ ಓದಿದ ಮೇಲೆ.. ;-)

ಶ್ರೀನಿಧಿ.ಡಿ.ಎಸ್ ಹೇಳಿದರು...

ವಿಕಾಸ,
ಸಿಕ್ಕಾಪಟ್ಟೇ ಖರಾಬಾಗಿದ್ದು! ಗುಹೆ ಕಮೆಂಟ್ ನೋಡು, ಗೊತಾಗ್ತು!:)

ನಾನು ಮೊದಲ ಸಿನಿಮಾ ರಿವ್ಯೂ ಬರ್ದಿದ್ದು, ಉಳಿದ ಕನ್ನಡಿಗರು ಆ ತರ ಮಾಡಿರೆ ನಾನೇನು ಮಾಡ್ಲೋ ಅಣ್ಣ?! ನನ್ನ ಗ್ರಹಚಾರಕ್ಕೆ, ಕೆಟ್ಟ ಸಿನಿಮಾ ಬಗ್ಗೆ ಮೊದಲು ಬರಿಯೋ ಹಾಗಾಯಿತು!

ರೇಷ್ಮೇ ಸೀರೆ ವ್ಯಾಪಾರ ಯಾಕೆ ರುದ್ರ ಭೀಕರ ಅಂತ ಸಿನಿಮಾ ನೋಡಿದರೆ ಸರಿಯಾಗಿ ಗೊತ್ತಾಗುತ್ತದೆ! :)ದಿನ ಬೆಳಗಾಗೋದರೊಳಗೆ ಕೋಟಿ ರೂಪಾಯಿ ಬಂಗಲೆ, ಮರ್ಸಿಡಿಸ್ ಕಾರು.. ಉಫ್!..

ಗುರು,
ಸೂಪರಾಗ್ ಹೇಳಿದ್ದೆ ನೋಡು!

ಮಲ್ನಾಡ್ ಹುಡ್ಗಿ,
ಅದೇನೋ ಅಂತಾರಲ್ಲ, ಬೆಕ್ಕಿಗೆ ಆಟ, ಇಲಿಗೆ.. ಅಂತ, ಹಾಂಗಾಯ್ತು ನನ್ ಕತೆ!:)

ಅರುಣ್,
ಮುಂಗಾರು ಮಳೆ ಗೂ ಇದಕ್ಕೂ ಅಜಗಜಾಂತರ!

Parisarapremi ಹೇಳಿದರು...

ಒಟ್ಟಿನಲ್ಲಿ ಪಲ್ಲಕ್ಕಿಯು ಚಟ್ಟದಂತಿತ್ತು ಅನ್ನು...

Unknown ಹೇಳಿದರು...

ನಿಮ್ಮ ಪೂರ್ತಿ ರಿವ್ಯುಗೆ ಬಾಟ೦ ಲೈನ್ ಇದ್ದ೦ಗೆ ಕೊನೆ ವಾಕ್ಯ ಬರೆದಿದ್ದೀರ.

ಧನ್ಯವಾದ
~ಹರ್ಷ