ದೇಗುಲದ ಗೋಪುರದ ಪಾರಿವಾಳದ ಜೋಡಿ
ನೋಡುತಿದ್ದವು ಹೀಗೇ, ಜನರ ಸಾಲು
ಅಂದು ಮಂಗಳದ ದಿನ, ಭಕ್ತ ಸಾಗರವಲ್ಲಿ
ಸಾಲು ಹೂಗಳ ದಂಡೆ, ಮತ್ತೆ ಪಂಚೆ ಶಾಲು.
ಎಲ್ಲ ದಿನವೂ ಹೀಗೆ, ಅದದೇ ಭಕ್ತರ ಚಕ್ರ
ಎಂಥ ಹಬ್ಬಕು ಕೂಡ ಬಂದೆ ಬಹರು.
ಗಂಡು ಪಕ್ಷಿಯು ಮೆಲ್ಲನಾಕಳಿಸಿ ನುಡಿಯಿತು
ನೋಡಿದವರನೆ ನೋಡಿ ಬಹಳ ಬೇಜಾರು
ಹೆಣ್ಣು ಹಕ್ಕಿಯ ದೃಷ್ಟಿ ಬೇರೆಲ್ಲೊ ಇದ್ದಿತ್ತು-
ಹಾಗಿಲ್ಲ ಈ ದಿನವು, ಚಂದ್ರಶಾಲೆಯ ನೋಡು
ನವ ಜೋಡಿ ಕೂತಿಹುದು ಕಂಬಸಾಲಿನ ಮಧ್ಯ
ಹುಡುಗ ಬಲುತುಂಟ, ಆಕೆ ಭಯದ ಗೂಡು.
ಗಂಡುಪಕ್ಕಿಯು ಕೂಡ ಮೆಲ್ಲ ನೋಡಿತು ಅವರ
ಬಲು ಚೆಲುವ ಜೋಡಿಯದು, ಮಾತೇ ಇಲ್ಲ!
ಕೇಸರಿಯ ಸೀರೆಯಲಿ ಅಡಗಿಹಳು ಆ ಹುಡುಗಿ
ಅವಳನೇ ನೋಡುತಲಿ, ಮೈಮರೆತಿಹನು ನಲ್ಲ.
ಆಕೆಗೋ ನಾಚಿಕೆಯು, ತಲೆಯನೆತ್ತುವುದಿಲ್ಲ
ಇವನ ಕೈ ಬಳಸಿಹುದು ಅವಳ ಹೆಗಲು
ಪಿಸುಮಾತನಾಡುವರು, ಅತ್ತಿತ್ತ ನೋಡುವರು
ಕಣ್ಣಪಾಪೆಗಳಲ್ಲಿ ಸಣ್ಣ ದಿಗಿಲು.
"ಹೊಸ ಜೋಡಿಯಿರಬೇಕು, ಹೆದರಿಕೆಯು ಸಹಜ
ಸರಿಯಾಗುವುದು ಎಲ್ಲ, ದಿನವು ಕಳೆದಂತೆ"
ಹೆಣ್ಣುಪಕ್ಷಿಯ ನುಡಿಗೆ ಹೌದೆಂತು ಗಂಡು,
ಧೈರ್ಯ ಬರುವುದು ನೋಡು, ಪ್ರೀತಿ ಬೆಳೆದಂತೆ.
ನೋಡುತಿರುವಂತೆ ಇವು, ಮೆಲ್ಲನೆದ್ದರು ಅವರು
ಸೇರಿಕೊಂಡರು ಮೆಲ್ಲ, ಪ್ರದಕ್ಷಿಣೆಯ ಸಾಲು
ಕೈಕೈಯು ಬೆಸೆದಿತ್ತು, ಎಂದೂ ಜೊತೆಗಿದ್ದಂತೆ
ಮೈಮೇಲೆ ಚೆಲ್ಲಿತ್ತು, ಬಿಸಿಲ ಕೋಲು.
ದೇವರಲದೇನು ಕೇಳಿದರೋ, ಗೊತ್ತಾಗಲಿಲ್ಲ
ಅವನಿಗದು ಕೇಳಿಸಿತೋ, ತಿಳಿಯಲಿಲ್ಲ.
ಇವರ ಮೊಗದೊಳು ತುಂಬು ನೆಮ್ಮದಿಯ ಕಳೆಯಿತ್ತು
ಅಷ್ಟಿದ್ದರದೇ ಸಾಕು, ಬೇರೆ ಬೇಕಿಲ್ಲ.
ಜನರ ಜಂಗುಳಿ ದಾಟಿ ಹೊರಗೆ ಹೊರಟರು ಅವರು
ತಲೆಯೆತ್ತಿ ನಡೆಯುತ್ತ, ಜಗವ ಗೆದ್ದಂತೆ
ಗೋಪುರದ ಜೋಡಿಗಳು ಹಾರೈಸಿದವು ಅವರ
ಪ್ರೀತಿಝರಿಯಾ ಒರತೆ ಬತ್ತದಂತೆ.
ಟಿಪ್ಪಣಿ:
ಈ ಕವನ ಬರೆದಿದ್ದು ವಾರದ ಹಿಂದೆ. ಯಾವತ್ತೋ ತಲೆಯೊಳಗೆ ಕೂತಿದ್ದ ವಿಷಯವನ್ನು ಹಾಳೆಗಿಳಿಸಿದ್ದೆ. ಆಮೇಲೆ ಅರುಣನಿಗೆ ಓದಿ ಹೇಳಿ, ಮತ್ತಾವುದೋ ಕಾರಣಕ್ಕೆ ಬೇಕಿರುವುದರಿಂದ ಬ್ಲಾಗಿಗೆ ಹಾಕುವುದಿಲ್ಲ ಅಂತ ಅಂದುಕೊಂಡಿದ್ದೆ. ಸುಶ್ರುತ ತಾನೂ ಕವನ ಬರಿಯೋ ಪ್ರಯತ್ನ ಮಾಡ್ತಾ ಇದೀನಿ ಅಂತ ನಿನ್ನೆ ಹೇಳುತ್ತಿದ್ದ. ಇವತ್ತು ಈ ಪುಣ್ಯಾತ್ಮ ಬರೆದ ಕವನ ಓದುತ್ತಿದ್ದರೆ, ನಾನು ಬರೆದ ಈ ಕವನ ಮತ್ತು ಅವನ ಕವನ - ಎಲ್ಲೋ ಹುಟ್ಟುತ್ತಲೇ ಬೇರೆಯಾದ ಮಕ್ಕಳ ಹಾಗೆ ಕಂಡವು! ನಮ್ಮಿಬ್ಬರ ಕವನಗಳೂ ಒಂದು ಮತ್ತೊಂದರ ಮುಂದರಿಕೆಯಂತೆಯೋ ಅಥವಾ ಎರಡನ್ನೂ ಮಧ್ಯದಲ್ಲೆಲ್ಲೋ ಸೇರಿಸಿಕೊಂಡು ಓದಬಹುದಾದಂತೆ ಕಾಣಬಹುದು. ನನಗಂತೂ ಇದು ದೊಡ್ಡ ಅಚ್ಚರಿ!