ಮಂಗಳವಾರ, ಸೆಪ್ಟೆಂಬರ್ 16, 2008

ಮತಾಂತರ- ನನ್ನ ಅನುಭವಗಳು

ನಾನು ಸ್ನಾತಕೋತ್ತರ ಪದವಿ ಓದುತ್ತಿದ್ದ ಸಮಯ. ಫೀಲ್ಡ್ ವರ್ಕು, ಸರ್ವೇ ಅಂತ ಮಂಗಳೂರು ನಗರದ ಗಲ್ಲಿ ಗಲ್ಲಿಗಳನ್ನು ಸುತ್ತುವ ಕೆಲಸವಿತ್ತು. ಉರ್ವ ಸ್ಟೋರ್ ಸಮೀಪ, ಅಶೋಕ ನಗರ ಅಂತ ಇದೆ, ಅಲ್ಲಿನ ಗಲ್ಲಿಯೊಂದಕ್ಕೆ ನುಗ್ಗಿದೆವು, ನಾನು ಮತ್ತು ನನ್ನ ಜೊತೆಗಿದ್ದ ಒಂದಿಷ್ಟು ಜನ. ನಮಗೆ ಬೇಕಿದ್ದ ಪ್ರಶ್ನೆಗಳನ್ನ ಕೇಳಿ, ಹೆಸರು ಬರೆದುಕೊಳ್ಳಲು ಹೊರಟೆವು. ಮನೆ ಹಿರಿಯ ಉತ್ತರಿಸತೊಡಗಿದ. ನಿಮ್ಮ ಹೆಸರು- ಮರಿಯಪ್ಪ, ಹೆಂಡತಿದು? ಸೀತಮ್ಮ, ಮಗಂದು?- ಅಲೆಗ್ಸಾಂಡರ್. ಬರೆಯುತ್ತಿದವನು ದಂಗಾಗಿ ಪೆನ್ನು ಹಾಂಗೇ ಬಿಟ್ಟು ಮೇಲೆ ನೋಡಿದೆ. ಅಲೆಗ್ಸಾಂಡರು ಸಾರೂ, ಬರ್ಕಳಿ ಅಂದ ಅವನು. ಅಲ್ಲ ನಿಮ್ಮಿಬ್ಬರ ಹೆಸರು ಹೀಗಿದೆ.. ಹೂಂ ಸಾ, ನಾವು ಕಿರಸ್ತಾನ್ ಆಗಿದೀವಿ ಈಗ. ಉತ್ರಕರ್ನಾಟಕ್ದಿಂದ ಕೆಲ್ಸಕ್ಕೆ ಅಂತ ಬಂದಿದ್ವಾ, ಇಲ್ ಬಂದು ಹತ್ತಿಪ್ಪತ್ ವರ್ಷ ಆಯ್ತು. ಹೋದೊರ್ಷಾ ಕಿರಸ್ತಾನ್ರಾದ್ವಿ. ನಮ್ದೂ ಹೆಸ್ರು ಚೇಂಜ್ ಮಾಡ್ಕಬೇಕು, ರೇಶನ್ ಕಾರ್ಡಲ್ಲಿ ಇನ್ನೂ ಇದೇ ಹೆಸ್ರದೆ, ಹಾಂಗಾಗಿ.. ಅಂತಂದ. ಅವರ ಮನೆಯಲ್ಲಿ, ಏಸುವಿನ ಚಿತ್ರದ ಪಕ್ಕಕ್ಕೆ ಲಕ್ಷ್ಮೀ ಫೋಟೋ ಇನ್ನೂ ಉಳಿದುಕೊಂಡಿತ್ತು.

ಇದು ಇವರೊಬ್ಬರ ಮನೆಯ ಕಥೆಯಾ ಅಂತ ನೋಡಿದರೆ, ಅಲ್ಲ! ಅಲ್ಲಿನ ಸುತ್ತಮುತ್ತಲಿನ ಹೆಚ್ಚಿನ ಮನೆಗಳ ಕಥೆ ಇದೇ, ಅಪ್ಪ ರಾಮನಾದರೆ, ಮಗಳು ಮೇರಿ, ಅಮ್ಮ ಕೆಂಪಮ್ಮ,ಮಗ ರೋಶನ್! ಇನ್ನೂ ಹಿಂದೂ ಧರ್ಮವನ್ನ ಸಂಪೂರ್ಣ ಬಿಟ್ಟಿರದ, ಹಾಗೆಂದು ಪ್ರತಿನಿತ್ಯ ಮಕ್ಕಳನ್ನು ಚರ್ಚಿಗೆ ಕರೆದುಕೊಂಡು ಹೋಗುವ ಸಂಸಾರ. ಅಕ್ಕ ಪಕ್ಕ ವಿಚಾರಿಸಿದಾಗ ತಿಳಿದದ್ದು, ಎರಡು ವರ್ಷಗಳಿಂದ ಅಲ್ಲಿನ ಬಡ ಹಿಂದೂಗಳಿರುವ ಕಾಲನಿಗಳಲ್ಲಿ ಮತಾಂತರ ಪ್ರಕ್ರಿಯೆ ನಡೆಯುತ್ತಲೇ ಇತ್ತಂತೆ. ಪ್ರತಿ ತಿಂಗಳೂ ಮನೆಗೆ ದಿನಸಿ ಬರುತ್ತದೆಂಬ ಆಸೆಗೋ, ಮನೆಯ ಗಂಡಸಿಗೆ ಒಳ್ಳೆಯ ಕೆಲಸ ಕೊಡಿಸುತ್ತೇನೆಂಬ ಆಸೆಗೋ ಅಲ್ಲಿನ ಜನ, ಧರ್ಮಾಂತರ ಆಗುತ್ತಿದ್ದರು. ಮೊದಮೊದಲು ಪ್ರತಿಭಟಿಸಿದರೂ, ಅಕ್ಕಪಕ್ಕದ ಮನೆಯವರಿಗೆ ಸಿಕ್ಕ ಸೌಲಭ್ಯಗಳನ್ನು ನೋಡಿದ ಮೇಲೆ, ತಾವೂ ನಿಧಾನಕ್ಕೆ ಚರ್ಚಿಗೆ ಹೋಗಲು ಆರಂಭಿಸಿದರು... ಉತ್ತರ ಕರ್ನಾಟಕದ ಕಡೆಯಿಂದ ಏನೋ ಒಂದು ಕೆಲಸ ಹುಡುಕಿಕೊಂಡು ವಲಸೆ ಬಂದಿರುವುದರಿಂದ, ಮತ್ತೆ ಬೇರಿಗೆ ಮರಳವುದಿಲ್ಲ ಇವರು,ಯಾವ ಧರ್ಮದಲ್ಲಿದ್ದರೇನು-ದುಡ್ಡು-ಕೆಲಸ ಸಿಗುವುದಾದಾರೆ ಅನ್ನುವುದು ಅವರ ಯೋಚನೆ.

ಇದು ಒಂದು ಉದಾಹರಣೆಯಷ್ಟೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹುಟ್ಟಿಬೆಳೆದವನು ನಾನು.ಮತಾಂತರ ಪ್ರಕ್ರಿಯೆ ಹೇಗೆ ಜರುಗುತ್ತದೆ ಎನ್ನುವುದನ್ನು ಬಹಳ ಚೆನ್ನಾಗಿ ನೋಡುತ್ತ ಬಂದಿದ್ದೇನೆ. ಹೊರ ಜಿಲ್ಲೆಗಳಿಂದ ಬಂದ ಬಡ ಕೂಲಿಕಾರ್ಮಿಕರು, ಮತಾಂತರ ಮಾಡ ಹೊರಡುವವರ ಮೊದಲ ಟಾರ್ಗೆಟ್ಟು. ಅವರುಗಳಿಗೆ ಹಣದ ಆಸೆ ತೋರಿಸಲಾಗುತ್ತದೆ, ಕೇವಲ ಅದೊಂದಕ್ಕೆ ಬಹಳ ಸಂಸಾರಗಳು ದಿಕ್ಕು ತಪ್ಪುತ್ತವೆ.ಇನ್ನು ಉಳಿದವರಿಗೆ, ಹಿಂದೂ ಧರ್ಮದ ದೇವರುಗಳು ಕೈಲಾಗದವರು, ಲಂಪಟರು, ಅವರುಗಳಿಗೆ ತಮ್ಮನ್ನು ತಾವು ಸರಿಯಾಗಿ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲ, ಇನ್ನು ನಿಮ್ಮನ್ನು ಹೇಗೆ ಚೆನ್ನಾಗಿ ನೋಡಿಕೊಂಡಾರು, ನೀವು ಇಷ್ಟೆಲ್ಲ ಕಷ್ಟದಲ್ಲಿರುವುದಕ್ಕೆ ಈ ಧರ್ಮವನ್ನು ನೀವು ನಂಬಿದ್ದೇ ಕಾರಣ ಅನ್ನುವ ಪುಂಗಿ ಊದಲಾಗುತ್ತದೆ.ಒಂದೆರಡು ಸಂಸಾರಗಳು ಬಲೆಗೆ ಬಿದ್ದರೆ ಸಾಕು, ಇನ್ನುಳಿದವು ತಾನೇ ತಾನಾಗಿ ಬರುತ್ತವೆ ಜಾಲದೊಳಗೆ. ಮೊದಲು ಕನ್ವರ್ಟ್ ಆದ ಕುಟುಂಬಗಳಿಂದಾಗಿ , ಮತ್ತೆ ಯಾರಾದರೂ ಮತಾಂತರ ಹೊಂದಿದರೆ, ಆ ಕುಟುಂಬಕ್ಕೆ ಬೋನಸ್ ದುಡ್ಡೂ ಸಿಗುತ್ತದೆ. ಮಂಗಳೂರು, ಉಡುಪಿಗಳ ಹೊರವಲಯದಲ್ಲಿ ವರುಷಗಳಿಂದ ಈ ಪ್ರಕ್ರಿಯೆ ನಡೆದುಕೊಂಡೇ ಬಂದಿದೆ.

ನಾನು ಕ್ರಿಶ್ಚಿಯನ್ ಧರ್ಮ ವಿರೋಧಿಯಲ್ಲ. ಬಹಳಷ್ಟು ವರುಷ ಅವರುಗಳ ಜೊತೆಗೇ ಬೆಳೆದಿದ್ದೇನೆ. ಅವರುಗಳ ಆಚಾರ ವಿಚಾರಗಳ ಬಗ್ಗೆ ಚೆನ್ನಾದ ಅರಿವೂ ನನಗಿದೆ. ನೆನಪಿದೆ ನನಗೆ,ಅಮ್ಮ ಕ್ರಿಸ್ಮ್‌ಸ್ ಹಬ್ಬಕ್ಕೂ ಮನೆಯಲ್ಲಿ ಪಾಯಸ ಮಾಡುತ್ತಿದ್ದಳು. ನಾನು ಸ್ನೇಹಿತರ ಜೊತೆ ಅದೆಷ್ಟೋ ಸಲ ಚರ್ಚುಗಳಿಗೆ ಹೋಗಿದ್ದೇನೆ. ಅವರ ಮನೆಗಳಲ್ಲೇ ಲೆಕ್ಕವಿಲ್ಲದಷ್ಟು ಬಾರಿ ಊಟ ಮಾಡಿದ್ದೇನೆ. ಆದರೆ, ಮತಾಂತರ ಅನ್ನುವ ವಿಷಯ ಬಂದಾಗ, ನಾನು ಅದರ ವಿರೋಧಿಯೇ.

ಬೇಸಿಗೆಯ ರಜೆಗಳಲ್ಲಿ ಕ್ರಿಶ್ಚಿಯನ್ ಯುವಕರ, ಮಕ್ಕಳ ದಂಡು ಮನೆಮನೆ ತಿರುಗುವ ಕೆಲಸ ಮಾಡುತ್ತದೆ. ಕೈಯಲ್ಲಿ "ಶುಭ ಸಂದೇಶ" ಪುಸ್ತಕ ಹೊತ್ತು, ನೀವು ಬೇಡವೆಂದರೂ ನಿಮ್ಮ ಕೈಯಲ್ಲಿ ಆ ಪುಸ್ತಕ ಇಟ್ಟುಏಸುವಿನ ಗುಣಗಾನ ಮಾಡುತ್ತದೆ. ನಮ್ಮ ಮನೆಗೂ ಅದೆಷ್ಟೋ ಸಲ ಇಂತಹ ತಂಡಗಳು ಬಂದಿವೆ, ನಮ್ಮ ಮನೆಯ ಅಟ್ಟದಲ್ಲಿ ನಾಲ್ಕಾರು ಶುಭ ಸಂದೇಶಗಳಾದರೂ ಧೂಳು ತಿನ್ನುತ್ತ, ಗೆದ್ದಲು ಹಿಡಿಸಿಕೊಂಡು ಬಿದ್ದಿರಬೇಕು. ಈ ತಂಡದ ವಿಶೇಷತೆ ಏನೆಂದರೆ, ಇವರೆಲ್ಲ ತಾವು ಯಾರ ಮನೆಯ ಅಂಗಳದಲ್ಲಿ ನಿಂತಿದ್ದೇವೆ ಅನ್ನುವುದನ್ನು ಮೊದಲು ಸರಿಯಾಗಿ ಗಮನಿಸುತ್ತಾರೆ. ಎದುರಿಗೆ ಇರುವವರು ತಮಗಿಂತ ಹೆಚ್ಚು ತಿಳಿದುಕೊಂಡವರು, ಬಗ್ಗಲಾರದವರು ಅನ್ನುವುದು ಗೊತ್ತಾದ ತಕ್ಷಣ, "ಎಂತ ಇಲ್ಲ,ಸುಮ್ಮನೆ ಬಂದದ್ದು ಇದೊಂದು ಪುಸ್ತಕ ಇಟ್ಟುಕೊಳ್ಳಿ"ಅಂತ ಜಾಗ ಖಾಲಿ ಮಾಡುತ್ತಾರೆ. ತಮ್ಮ ಪಟ್ಟಿಗೆ ಸಿಲುಕುವ ಜನ ಎನ್ನೋದು ತಿಳಿದರೆ, ಮಿಕ ಖೆಡ್ಡಾಕ್ಕೆ ಬೀಳುವವರೆಗೆ ಬಿಡುವುದಿಲ್ಲ! ನಿಮ್ಮ ಕೃಷ್ಣನಿಗೆ ಸಾವಿರಗಟ್ಟಲೆ ಹೆಂಡತಿಯರು, ಅವನು ಲಂಪಟ, ಅವನ್ಯಾಕೆ ನಿಮಗೆ ದೇವರು, ರಾಮನ ಗುರು ವಸಿಷ್ಠರು ವೇಶ್ಯೆಯಾದ ಊರ್ವಶಿಗೆ ಹುಟ್ಟಿದ್ದು, ಇನ್ನೂ ಏನೇನೋ,ಇಲ್ಲಿ ಬರೆಯಲೂ ಆಗದಂತಹವು.. ಅವುಗಳನ್ನೆಲ್ಲ ತಲೆಗೆ ತುಂಬುತ್ತಾರೆ, ಜೊತೆಗೆ ಇದ್ದೇ ಇದೆ,ಹಣದಾಮಿಷ.

ಇನ್ನು ಕೆಲ ಚರ್ಚುಗಳೋ,ಕ್ರಿಶ್ಚಿಯನ್ ಸಂಸ್ಥೆಗಳು ನಡೆಸುವ ಆಸ್ಪತ್ರೆಗಳಲ್ಲಿ ಒಂದು ಹುಂಡಿ ಇಟ್ಟಿರುತ್ತಾರೆ. ಬಡ ರೋಗಿಗಳ ಬಳಿ ಬಂದು,ನಿಮ್ಮ ಆಸೆಯನ್ನ ಆ ಚೀಟಿಯಲ್ಲಿ ಬರೆದು ಹಾಕಿ, ಯೇಸು ನಿಮ್ಮ ಆಸೆಯನ್ನ, ಕಷ್ಟಗಳನ್ನು ಪರಿಹರಿಸುತ್ತಾನೆ ಎಂದು ಹೇಳಲಾಗುತ್ತದೆ. ಸಣ್ಣ ಆಸೆಗಳಿ,ಕಷ್ಟಗಳು ಪರಿಹಾರವಾಗುತ್ತವೆ ಕೂಡ! ನನಗೆ ತಿಳಿದಿದ್ದ ಕೂಲಿ ಮಾಡುತ್ತಿದ್ದ ಹೆಂಗಸೊಬ್ಬಳು, ಮಗನಿಗೆ ಸೈಕಲ್ ಬೇಕಂತೆ ಎಂದು ಬರೆದು ಹಾಕಿ, ಮಾರನೇ ದಿನ ಅವಳ ಮನೆ ಬಾಗಿಲಲ್ಲಿ ಸೈಕಲ್ ಇದ್ದದ್ದು ನೋಡಿ, ಯೇಸುವಿನ ಭಕ್ತಳಾಗಿ, ದಿನದೊಳಗೆ ಬದಲಾಗಿಬಿಟ್ಟಳು!.

ಮತಾಂತರ ದಂಧೆಯಲ್ಲಿ ಪ್ರಮುಖವಾಗಿ ತೊಡಗಿರುವದು ನ್ಯೂ ಲೈಫ್ ಅನ್ನುವ ಸಂಸ್ಥೆ. ಇವರುಗಳು ದೊಡ್ಡ ದೊಡ್ಡ ಚರ್ಚುಗಳನ್ನೇನೂ ಹೊಂದಿರುವುದಿಲ್ಲ. ಸಣ್ಣ ಸಣ್ಣ 'ಪ್ರಾರ್ಥನಾ ಕೇಂದ್ರಗಳು' ಇವರ ಅಡ್ಡಾ. ಅಲ್ಲಿಗೆ ಪ್ರತಿದಿನ ಒಂದಿಷ್ಟು ಜನ ಹಿಂದೂಗಳನ್ನ ಹೇಗಾದರೂ ಕರೆದುಕೊಡು ಬಂದು ಬ್ರೈನ್ ವಾಶಿಂಗ್ ಕೆಲಸ ಮಾಡುತ್ತಾರೆ. ತಮ್ಮ ಸಾಹಿತ್ಯವನ್ನ ಅವರುಗಳಿಗೆ ಹಂಚುತ್ತಾರೆ. ಮತಾಂತರ ಹೊಂದುತ್ತಿರುವ ಬಡಪಾಯಿಗಳಿಗೆ ಅರಿವಿಲ್ಲದ ಒಂದು ಸತ್ಯ ಎಂದರೆ, ಮತಾಂತರ ಹೊಂದಿ ಕ್ರಿಶ್ಚಿಯನ್ ಆದವರನ್ನು ಅಲ್ಲಿ ಅನಾದರದಿಂದಲೇ ಕಾಣಲಾಗುತ್ತದೆ. ಹಿಂದೂ ಧರ್ಮದಲ್ಲಿ ಮೂಲೆಗುಂಪಾಗಿದ್ದೇವೆ ಅನ್ನುವ ಕಾರಣಕ್ಕೆ ಅಲ್ಲಿಗೆ ಹೋಗುವ ಹಲಮಂದಿಗೆ, ಇಲ್ಲಿ ನಾವು ನಿಕೃಷ್ಟರು ಎಂದು ಅರಿವಾಗಲು ಹೆಚ್ಚಿಗೆ ದಿನ ಬೇಕಿಲ್ಲ.ಮತಾಂತರ ಹೊಂದಿದವರಿಗೆ, ಚರ್ಚುಗಳಲ್ಲಿ ಕೊನೆಯ ಜಾಗ. ಅವರನ್ನು ಇತರರು ಪ್ರೀತಿಯಿಂದ ಮಾತನಾಡಿಸುವುದೂ ಇಲ್ಲ.

ಕ್ರಿಶ್ಚಿಯನ್ ಮಿಷನರಿಗಳಿಗೆ ವಿದೇಶದಿಂದ ಹಣ ಹರಿದುಬರುವುದರಿಂದ , ಅವರುಗಳು ಧಂಡಿಯಾಗಿ ಮತಾಂತರಕ್ಕೆ ಹಣ ಖರ್ಚು ಮಾಡುತ್ತಾರೆ. ಮತ್ತು ಈ ಕ್ರಿಯೆ, ಮುಸುಕಿನೊಳಗೇ ನಡೆಯುವುದರಿಂದ ಹೊರ ಜಗತ್ತಿಗೆ ಈ ಬಗ್ಗೆ ಸರಿಯಾಗಿ ಗೊತ್ತಾಗುವುದೇ ಇಲ್ಲ. ವಾರಕ್ಕೊಂದು ತಂಡವಾದರೂ ಸಿಕ್ಕಿಬಿದ್ದುಪೆಟ್ಟು ತಿನ್ನುತ್ತಿರುತ್ತದೆ, ಮತ್ತು ಈ ತರದ ನೂರಾರು ತಂಡಗಳು ಕೆಲಸ ಮಾಡುತ್ತಿರುವುದರಿಂದ, ಅದು ಯಾವ ಪರಿಣಾಮವನ್ನೂ ಬೀರುವುದಿಲ್ಲ. ಅವರುಗಳು ಒಳ ಹೋದಷ್ಟೇ ಬೇಗ, ಜಾಮೀನಿನ ಮೇಲೆ ಹೊರಬರುತ್ತಾರೆ, ಮತ್ತು ಕ್ರಿಸ್ತಪುಣ್ಯಕಥೆಯನ್ನು ಜನಕ್ಕೆ ತಿಳಿಸುವ ಕೆಲಸದಲ್ಲಿ ತೊಡಗುತ್ತಾರೆ.. ಪೆಟ್ಟು ಕೊಟ್ಟವರು ಪೆಕರುಗಳಂತೆ, ಹಾಡೇ ಹಗಲೇ ಅವರುಗಳು ನಡುಬೀದಿಯಲ್ಲಿ ಅಲೆಯುವುದನ್ನು ನೋಡುತ್ತ ನಿಂತಿರಬೇಕಾಗುತ್ತದೆ.

ನಾನು ಹಿಂದೂ ಮೂಲಭೂತವಾದಿಯೂ ಅಲ್ಲ,ಮತ್ತು ಯಾವುದೇ ಹಿಂದೂ ಸಂಘಟನೆಗಳ ಕಾರ್ಯಕರ್ತನೂ ಅಲ್ಲ ಅನ್ನುವುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಹಲವು ವರುಷಗಳಿಂದ ಇದೆಲ್ಲವನ್ನು ನೋಡುತ್ತ ಬಂದಿದ್ದೇನಾದ್ದರಿಂದ, ಮತ್ತು ಈಗ ಮಂಗಳೂರಿನಲ್ಲಾಗುತ್ತಿರುವ ಗಲಭೆಗೆ ಕಾರಣವಾಗಿರುವ, ಸಹನೆ ತಪ್ಪಿರುವ ಮನಸ್ಥಿತಿಗಳ ಬಗ್ಗೆ ಅರಿವಿರುವುದರಿಂದ, ಇದನ್ನೆಲ್ಲ ಬರೆಯಬೇಕಾಯಿತು.

ದಟ್ಸ್ ಕನ್ನಡ- ಕಾಡು ಹರಟೆ ಅಂಕಣಕ್ಕೆ ಬರೆದಿದ್ದು.

ಸೋಮವಾರ, ಸೆಪ್ಟೆಂಬರ್ 01, 2008

ಎರಡು ವರುಷಗಳ ನಂತರ..

ತುಂತುರು ಹನಿಗಳು ಎರಡು ವರ್ಷ ಪೂರೈಸಿದೆ. ನಾನು ಬ್ಲಾಗು ಆರಂಭಿಸಿದಾಗ ಇಷ್ಟು ದೂರ ಪಯಣಿಸುತ್ತೇನೆ ಅಂದುಕೊಂಡಿರಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕಂದರೆ,ಬ್ಲಾಗು ಶುರು ಮಾಡಬೇಕು ಅನ್ನುವ ಉದ್ದೇಶವೂ ನನಗಿರಲಿಲ್ಲ. ಗೆಳೆಯ ಚಿನ್ಮಯ ತಲೆ ತಿಂದೂ ತಿಂದೂ, ಒಂದು ದಿನ ಬ್ಲಾಗು ಆರಂಭಿಸಿದೆ. ಆವಾಗ ಸಾಫ್ಟ್ ವೇರ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಮಾಧ್ಯಮ ಜಗತ್ತಿನಲ್ಲಿದ್ದೇನೆ.

ಮಧ್ಯ ಬರೆಯುವುದನ್ನು ಸ್ವಲ್ಪ ಕಾಲ ನಿಲ್ಲಿಸಿದ್ದೆ. ಆದರೆ ಚಟ ಬಿಡಬೇಕಲ್ಲ, ಮತ್ತೆ ಎಳೆದುಕೊಂಡು ಬಂತು, ಇಲ್ಲಿಗೇ.

ಬ್ಲಾಗ್ ಬಂಧುಗಳಿಂದ ಅದೆಷ್ಟೋ ಕಲಿತಿದ್ದೇನೆ ಕಳೆದೆರಡು ವರುಷಗಳಿಂದ. ನನ್ನ ಕವನಗಳನ್ನ, ನೀವು ಬರಹಗಳನ್ನ ಸಹಿಸಿಕೊಂಡಿದ್ದೀರಿ,ಮೆಚ್ಚಿಕೊಂಡಿದ್ದೀರಿ. ತಪ್ಪಿದ್ದರೆ ಗದರಿದ್ದೀರಿ, ತಿದ್ದಿದ್ದೀರಿ, ನಿಮಗೆಲ್ಲ ನಾನು ಕೃತಜ್ಞ. ಈ ಬ್ಲಾಗು ಅದೆಷ್ಟೋ ಸ್ನೇಹಿತರುಗಳನ್ನ ಕೊಟ್ಟಿದೆ ನಂಗೆ. ಅದೆಷ್ಟೋ ಹೊಸ ವಿಷಯಗಳನ್ನ ಬ್ಲಾಗು ಲೋಕದಿಂದ ತಿಳಿದುಕೊಂಡಿದ್ದೇನೆ.

ಈ ಪಯಣ ಹೀಗೇ ಸಾಗುತ್ತಿರಲಿ.. ಮತ್ತೊಮ್ಮೆ, ಥ್ಯಾಂಕ್ಸ್.

ಶುಕ್ರವಾರ, ಆಗಸ್ಟ್ 29, 2008

ಕಾಡು ಹರಟೆ

ಕಳೆದ ನಾಲ್ಕು ವಾರಗಳಿಂದ ದಟ್ಸ್ ಕನ್ನಡ ದಲ್ಲಿ ಕಾಡು ಹರಟೆ ಅನ್ನುವ ಅಂಕಣ ಬರೆಯುತ್ತಿದ್ದೇನೆ. ಸುಮ್ಮನೆ, ಮಾಹಿತಿಗಾಗಿ ಈ ಪೋಸ್ಟು. ಯಾವತ್ತೂ ಹೀಗೆಲ್ಲ ವಾರಾ ವಾರ -ಟೈಮ್ ಟು ಟೈಮ್ ಬರೆದೇ ಗೊತ್ತಿರದ ನಾನು, ಅದೆಷ್ಟು ದಿನ ಈ ಹರಟೇನ ಮುಂದುವರೆಸಿಕೊಂಡು ಹೋಗುತ್ತೇನೋ ನನಗೇ ಗೊತ್ತಿಲ್ಲ. ನೋಡೋಣ.

ಬುಧವಾರ, ಜುಲೈ 23, 2008

ಒಂದು ಮಳೆ ನಿಂತ ಮಧ್ಯಾಹ್ನ..

ಒಂದು ಮಳೆ ನಿಂತ ಮಧ್ಯಾಹ್ನ
ಅವಳು ಸಿಕ್ಕಳು, ಅನಿರೀಕ್ಷಿತವಾಗಿ
ಆಗ ತಾನೆ ಬಂದ ಮಳೆಯಂತೆ.

ಮಾತಾಡಲಿಲ್ಲ ಇಬ್ಬರೂ, ಘಳಿಗೆ
ಅವಳ ಕಣ್ಣಲ್ಲಿ ನೀರು ಕಂಡಂತಾಯಿತು
ಘಟಿಸಿದ ಭೂತಕ್ಕೆ ಶ್ರದ್ಧಾಂಜಲಿಯೆಂಬಂತೆ

ಹೊರಟೆವು ಮುಂದೆ, ಮಾತೇನೂ ಆಡದೆ
ಹೊರಡುವ ಮುನ್ನ ಅವಳ ಕೈ ಸೋಕಿತು
ಕಳೆದ ದಿವ್ಯಗಳ ಕೊನೆ ಝಲಕಂತೆ

ನಾಲ್ಕೆಂಟು ಹೆಜ್ಜೆಗಳಾದ ಮೇಲೆ ತಿರುಗಬೇಕೆನಿಸಿತು
ತಿರುಗಲಿಲ್ಲ, ಏನೂ ಘಟಿಸದು, ಗೊತ್ತು..ಆದರೂ,
ಅವಳ ಬೆನ್ನು ನೋಡುವ ಧೈರ್ಯವಿಲ್ಲ.

ಗುರುವಾರ, ಜುಲೈ 10, 2008

ತುಂಡು ಸಾಲುಗಳು

ಸ್ತ್ರೀ ಸ್ವಾತಂತ್ರ್ಯದ ಬಗ್ಗೆ
ಬರೆವ ಹುಡುಗಿ,
ಬೇರಾರದೋ
ಮನೆಯಲಿದ್ದೇನೆ, ಅವರೆದುರು ಮಾತಾಡಲು
ಒಂಥರಾ ಅನ್ನುವ
ಕಾರಣಕ್ಕೆ ಫೋನು
ರಿಸೀವ್ ಮಾಡಲಿಲ್ಲ.

ಗೆಜ್ಜೆಗಳೆಂದರೆ ರೋಮಾಂಚನ, ಮಧುರ
ಪ್ರೇಮ ಸಂಕೇತ
ಅಂತ ಕವಿತೆ ಬರೆಯುವ
ಹುಡುಗ
ಕದ್ದು ಸೇರುವಾಗ
ಅವಳ ಬಳಿ
"ಗೆಜ್ಜೆ ತೆಗೆದಿಡು
ಸದ್ದಾಗುತ್ತದೆ" ಅಂದ.

ತೂತಿನಾಚಿಗೆ ಏನು
ನಡೆಯುತ್ತಿದೆ
ಅಂತ
ಕಣ್ಣು ಕಿರಿದಾಗಿಸಿ
ಆ ಕಡೆ ನೋಡಿದರೆ,
ಇನ್ನೊಂದು ಕಣ್ಣು ಕಂಡಿತು!

ಗುರುವಾರ, ಜುಲೈ 03, 2008

ತಿರುವಿನ ಮನೆ ಹುಡುಗಿ

ನಿತ್ಯ ಸಾಗುವ ದಾರಿ,ತಿರುವಿನಲಿ ಅವಳ ಮನೆ
ಕತ್ತುಹೊರಳುವುದತ್ತ ಅಭ್ಯಾಸ ಬಲವು
ಅವಳಿಲ್ಲ ಈಗಲ್ಲಿ, ತಿಳಿದಿಹುದು ನನಗು ಅದು
ನೆನಪಾಗುವುದು ನಿತ್ಯ ಒಲವ ಚೆಲುವು

ಅಂದೊಂದು ಕಾಲದಲಿ ಆ ಮನೆಯು ನಂದನವು
ನವಿಲ ನರ್ತನದಂತೆ ಅವಳ ನಡಿಗೆ
ಆ ತಿರುವ ದಾರಿಯಲಿ ಜನರ ಸಂದಣಿ ನಿತ್ಯ
ನಡೆವ ಕಾಲುಗಳೆಲ್ಲ ಆ ಮನೆಯ ಕಡೆಗೇ

ಅಂಥ ಸುಂದರಿ ಆಕೆ,ದೇವಲೋಕದ ಹುಡುಗಿ
ಹುಚ್ಚಾಗಲೇಬೇಕು ಎಂಥವರು ಕೂಡ
ಅವಳ ನಲ್ನುಡಿಗಾಗಿ ಕಾಯುತಿದ್ದರು ಎಲ್ಲ
ಮಾತಾಡಿದಳೋ!,ಖುಷಿಯ ಕೇಳುವುದೆ ಬೇಡ

ಆಕೆಗೂ ತಿಳಿಯಿತು ತನ್ನ ಚೆಲುವಿನ ಬಗೆಯು
ಚೆಲುವಿಗೂ ಅಹಮಿಗೂ ಬೇಗ ಸ್ನೇಹ
ಸೌಂದರ್ಯವಿದ್ದೀತು ನಾಲ್ಕೆಂಟು ವರುಷಗಳು
ಕಾಲಸಾಗಿದ ಹಾಗೆ ಕಾಯುವುದೆ ದೇಹ?

ಹಾಗಂದುಕೊಂಡೊಡನೆ, ಮತ್ತೆ ಅಲ್ಲಿರಲಿಲ್ಲ
ಹಕ್ಕಿ ಹಾರಿತು ದೂರ, ಪ್ರಚಾರವರಸಿ
ಹಾಗೆ ಹೋದವಳಿಂದಿಗೂ ಬಂದಿಲ್ಲ
ವರುಷ ಸಾಗಿದೆ ನೆನಪ ಪರದೆ ಸರಿಸಿ

ಅವಳ ಮನೆ ಮುಂದೀಗ ಹೂ ಗಿಡವು ನಗದು
ನಗುವು ಕಾಣದು ಮನೆಮಂದಿಯಲ್ಲಿ
ಅಂಗಳದ ತುಂಬೆಲ್ಲ ಚೆಲ್ಲಿಹುದು ತರಗೆಲೆಯು
ಕಳೆದುಹೋಗಿದೆಯಲ್ಲಿ ರಂಗವಲ್ಲಿ

ಅಂದುಕೊಳ್ಳುತ್ತೇನೆ ಬರಬಾರದೇ ಅವಳು
ಮತ್ತೆ ಹುಟ್ಟಿತೀಲ್ಲಿ ನಂದನವನ
ನಗುವ ರಂಗೋಲಿಗಳು ಮರಳಿ ಬಂದೀತಿಲ್ಲಿ
ಪಾಳು ತುಳಸಿಯ ಕಟ್ಟೆ ವೃಂದಾವನ!

ಪ್ರತಿದಿನವು ಅದೆ ಆಸೆ, ತಿರುಗುವುದು ಕೊರಳು
ಬದಲಿರದ ನೋಟ, ಯಾಕೋ ಬೇಸರವು
ಮನದ ಯೋಚನೆಯಲ್ಲ ಸತ್ಯವಾಗಬೇಕಿಲ್ಲ
ದೂರದಲಿ ಮುಳುಗುತಿಹ ಸಂಜೆ ನೇಸರನು.

ಬುಧವಾರ, ಜೂನ್ 25, 2008

ಕಡಲು ಜಗದ ದೊಡ್ಡ ಪ್ರೇಮಿ....

ಕಡಲು ಜಗದ ದೊಡ್ಡ ಪ್ರೇಮಿ ನಿತ್ಯ ಮಿಲನ ಅದಕೆ,
ನದಿಗಳುಂಟು ಲಕ್ಷ ಲಕ್ಷ , ತೀರದದರ ಬಯಕೆ

ಕೆಲ ನದಿಗಳು ಉಗ್ರ,ಘೋರ ವೇಗಾವೇಗ ಅವಕೆ
ಮಣಿಸುವುದು ಕಡಲ ತೆಕ್ಕೆ, ಸೆಳೆದು ತನ್ನೊಳಕೆ.

ಇನ್ನು ಕೆಲವು ಮಂದ-ಶಾಂತ, ಒಯ್ಯಾರ, ಒನಪು
ಕಡಲಿಗಿಲ್ಲ ಭೇದಭಾವ, ಅದೇ ಮುದ್ದು- ಬಿಸುಪು.

ದೂರದಾರಿ ಸಾಗಿ ಬಂದ ನದಿಗಲೆಗಳ ಸ್ವಾಗತ,
ಮೆಲ್ಲನೊಳಗೆ ಎಳೆಯುವವು,ಮೃದುಚುಂಬನವೀಯುತ.

ದಿನವು ಕೂಡ ಸಮುದ್ರ ಹೊಸದು, ಹೊಸ ಹರಿವಿನ ಸೇರಿಕೆ
ಮತ್ತೆ ಮತ್ತೆ ಒತ್ತಿಬಹುದು, ಪ್ರೇಮ ಜಲದ ಕಾಣಿಕೆ.

ಕಡಲು ಬರಿಯ ಪ್ರೇಮಿಯಲ್ಲ, ಶಕ್ತಿವಂತ ಚೇತನ
ಗಮ್ಯವಿರದೆ ಸಾಗೋ ಬಾಳ ಧನ್ಯ ಮಾಡೋ ಮೋಹನ

ಅಂತ್ಯವೆಂದು ತಿಳಿದು ಬರುವ ನೀರ್ಝರಿಗಳು ಸಾಸಿರ
ಕಡಲಿನೊಡಲ ಸೇರಿ ಹಿಗ್ಗಿ, ವಿಶಾಲ ಹರವ ಸಾಗರ!

ಗುರುವಾರ, ಜೂನ್ 19, 2008

ಮಹಡಿ ಮೇಲಿಂದ..

ಕಿಟಕಿಯಾಚೆಗೆ ಮೇಲೆ ಕಟ್ಟಿಹುದು ಮಳೆಮೋಡ,
ನೀರ ಗರ್ಭವ ಹೊತ್ತು ತೂಗುತಿದೆ ಮುಗಿಲು
ಬಣ್ಣ ಗಾಜಿನ ಹೊರಗೆ, ಆಗಸಕು ಬಣ್ಣವಿದೆ
ಸಂಜೆಗಿರಣಗಳೆಲ್ಲ ಬಾನೊಳಗೆ ಸೆರೆಯು.

ಕೆಳಗೆ ರಸ್ತೆಯ ಮೇಲೆ, ಚಕ್ರವೇಗವು ಜೋರು
ಮನೆಗೆ ಸೇರುವ ತವಕ ಸಹಜ ತಾನೆ,
ಹಲವು ಬಣ್ಣದ ಬಾನು, ದಟ್ಟ ಕಪ್ಪಾಗುತಿದೆ
ಭುವಿಯೆಡೆಗೆ ಹೊರಟಿಹುದು, ಮಳೆಯ ಮೇನೆ.

ಇನ್ನು ಹಲವರಿಗಿಲ್ಲಿ, ನೆನೆದು ನಡೆಯುವ ಬಯಕೆ
ಮುಂಗಾರ ತೇರೊಳಗೆ ಕೊಳೆಯ ಕಳೆವಾಸೆ.
ಚಿತ್ರಚಿತ್ತಾರದಾ ಮಿಂಚುಗಳು ಮೂಡುತಿರೆ
ಆಗಸಕು ಆಗುತಿದೆ, ಪ್ರಸವದಭಿಲಾಷೆ!

ಸೈಕಲಿನ ಹುಡುಗ, ಕಡಲೆ ಮಾರುವ ಮುದುಕ
ಹೂ ಹುಡುಗಿ- ಎಲ್ಲರೂ ನಿಂತಿಹರು ಮರದ ಕೆಳಗೆ
ಒದ್ದೆಯಾದೇವೆಂಬ ಚಿಂತೆಯಿದ್ದಂತಿಲ್ಲ
ಮಳೆಯ ಪ್ರತಿಫಲನವಿದೆ, ಕಣ್ಣಪಾಪೆಗಳೊಳಗೆ.

ನಾನು ಹೊರಟಿದ್ದೇನೆ, ಅಲ್ಲಿ- ರಸ್ತೆಯ ಕಡೆಗೆ
ತೋಯ್ದು ಬಿಡಲೆನ್ನನು, ಮಳೆಯು ಕುಂಭದ್ರೋಣ.
ಒಳಗಿರುವರೆಲ್ಲ ಅಲ್ಲೆ ಇರಿ, ಬರಿದೆ ಕನಸುತ್ತ,
ಇಷ್ಟವಿದ್ದರೆ ಬನ್ನಿ- ಜೊತೆಗೆ ನೆನೆಯೋಣ!

ಸೋಮವಾರ, ಜೂನ್ 16, 2008

ಬಸ್ಸು ಕಥೆಗಳು.

ಅವಳನ್ನು ಅರ್ಜೆಂಟಾಗಿ ಮುಂಬೈಗೆ ಕಳುಹಿಸಬೇಕಿತ್ತು ಅವಳಪ್ಪನಿಗೆ. ಮಂಗಳೂರಿಂದ ವಿಮಾನ ಹೊರಡುತ್ತಿರಲ್ಲಿಲ್ಲ. ಕೆಟ್ಟ ಹವೆ. ರೈಲಲ್ಲಿ ಸೀಟಿಲ್ಲ. ಬೊಂಬಾಯಿ ಬಸ್ಸೊಂದರಲ್ಲಿ ಕಾಡಿ, ಬೇಡೀ ಕ್ಯಾಬಿನ್ ಸೀಟು ಹೊಂದಿಸಿಯಾಯಿತು. ಬಸ್ಸು ಒಂದು ರಾತ್ರಿ, ಅರ್ಧ ಹಗಲು ಕಳೆದು ಮುಂಬೈ ಮುಟ್ಟುವ ಹೊತ್ತಿಗೆ, ಬಸ್ಸಿನ ಡ್ರೈವರು ಮತ್ತು ಅವಳಲ್ಲಿ ಪ್ರೀತಿ ಹುಟ್ಟಿತ್ತು. ಅವನೀಗ, ಅವಳಪ್ಪ ಕೊಟ್ಟ ವರದಕ್ಷಿಣೆಯಿಂದ ನಾಲ್ಕಾರು ಬಸ್ಸುಗಳ ಮಾಲಿಕ. ಮಹಲು ಮನೆಯ ಒಡೆಯ.

**********

ಅಮ್ಮ , ಮಗ ಬಸ್ಸಲ್ಲಿ ದೂರದೂರಿಗೆ ಹೊರಟಿದ್ದರು. ಮಧ್ಯರಾತ್ರಿ ದಾರಿ ಬದಿ ಬಸ್ಸು ನಿಂತಿತು. ಕತ್ತಲ ಮರೆಗೆ ಗಂಡಸರು ತೆರಳಿದರು. ಹೆಂಗಸರು ಮತ್ತೂ ಕತ್ತಲನ್ನು ಹುಡುಕಿ ಸ್ವಲ್ಪ ಒಳ ಹೋದರು. ಮಗ ಬಂದ, ಬಸ್ಸು ಹೊರಡಲಾದರೂ ಅಮ್ಮ ಬರಲಿಲ್ಲ. ಕರೆದರೂ ಇಲ್ಲ. ಬ್ಯಾಟರಿ ಬೆಳಕಲ್ಲಿ ಹೊರಟರೆ, ಗದ್ದೆ ಪಕ್ಕದ ತೆರೆದ ಬಾವಿಯೊಳಗೆ ಅಮ್ಮ ತೇಲುತ್ತಿದ್ದಳು. ಕತ್ತಲೆ, ಕಾಲ ಬುಡ ಕಾಣುತ್ತಿರಲಿಲ್ಲ.

**********

ರಾತ್ರೆ ಎರಡು ಗಂಟೆ, ಯಾರೋ ದೇಹಭಾದೆ ಅತಿಯಾದವರು ಬಸ್ಸು ನಿಲ್ಲಿಸು ಅಂದರು, ಡ್ರೈವರ್ ಬಳಿ. ಆತನಿಗೂ ಬ್ರೇಕ್ ಬೇಕಿತ್ತು. ನಿಲ್ಲಿಸಿದ. ಇನ್ನೊಂದಿಷ್ಟು ಜನ ಕೆಳಗಿಳಿದರು. ಎಲ್ಲರೂ ಬಂದರೂ ಡ್ರೈವರು ಇಲ್ಲ. ಹುಡುಕುತ್ತಿದ್ದಂತೆ ಕತ್ತಲ ಮರೆಯಿಂದ ಹೊರಬಂದ ಆತ. ಮೈತುಂಬ ಸಗಣಿ, ಮಣ್ಣು. ಆತನಿಗೆ ಹುಚ್ಚು ಹಿಡಿದಿತ್ತು. ಡ್ರೈವಿಂಗು ಗೊತ್ತಿರುವ ಬೇರೆ ಯಾರೋ, ಬಸ್ಸನ್ನ ಮೆಜೆಸ್ಟಿಕ್ ಗೆ ಓಡಿಸಿಕೊಂಡು ಬಂದರು, ಹುಚ್ಚು ಹಿಡಿದ ಡ್ರೈವರ್ ಸಮೇತ.

**********

ಇವಿಷ್ಟೂ ನಡೆದ ಘಟನೆಗಳು.

ಮಂಗಳವಾರ, ಜೂನ್ 10, 2008

ಜಂಗಮ ಬಿಂಬಗಳು -೪.

ನಾನು ಮತ್ತು ನನ್ನ ಸ್ನೇಹಿತ ಟಾಕೀಸಲ್ಲಿ ಸಿನಿಮಾ ನೋಡುತ್ತ ಕುಳಿತಿದ್ದೆವು. ಪಕ್ಕದಲ್ಲಿ ಒಬ್ಬ ತೀರಾ ಸಾಧಾರಣ ಹುಡುಗ, ಮತ್ತು ಅತ್ಯದ್ಭುತ ಚೆಲುವಿನ ಹುಡುಗಿ- ಹರಟುತ್ತ ಕುಳಿತಿದ್ದರು. ಅಯ್ಯೋ ಅವನ ನಸೀಬೇ ಏನ್ ಒಳ್ಳೆ ಹುಡ್ಗಿ ಸಿಕ್ಕಿದಾಳಪ್ಪ, ಕೆಲ ಹುಡುಗರ ಪುಣ್ಯವೇ ಹೀಗೆ- ಅವರು ನೋಡೋಕೆ ಕೆಟ್ಟದಾಗಿದ್ದರೂ ಒಳ್ಳೇ ಹುಡುಗೀರು ಸಿಕ್ಕಿ ಬಿಡ್ತಾರೆ, ಅಂತೆಲ್ಲ ಹಲುಬಿದ್ದಾಯ್ತು. ಇಂಟರ್ವಲ್ ಬಂತು. ಆ ಹುಡುಗ ಎದ್ದು, ತನ್ನ ಪಕ್ಕದಲ್ಲಿದ ಆಕೆಯನ್ನು ಮೆಲ್ಲನೆಬ್ಬಿಸಿಕೊಂಡು, ತನ್ನ ತೋಳನ್ನೇ ಅವಳಿಗಾಸರೆಯಾಗಿಸಿ ನಡೆಸಿಕೊಂಡು ಹೊರಟ. ಅವಳಿಗೆ ಪೋಲಿಯೋ ಆಗಿತ್ತು.

ಶನಿವಾರ, ಮೇ 31, 2008

ಫೇಕ್ ಮೈಲ್ಸ್....

ನಾವೊಂದಿಷ್ಟು ಜನ ಸ್ನೇಹಿತರು- ನಾನು, ಅರುಣ, ಹರ್ಷ, ಸುಶ್ರುತ ಹೆಚ್ಚಾಗಿ ನಮಗೆ ಬರುವ ಫೇಕ್ ಮತ್ತು ಜಂಕ್ ಮೇಲ್ಸ್ ಗಳನ್ನು ಪರಸ್ಪರ ಫಾರ್ವರ್ಡ್ ಮಾಡಿಕೊಂಡು ನಗಾಡುತ್ತಿರುತ್ತೇವೆ. ಕೆಲವು ಈ-ಮೇಲುಗಳು ಪದೇ ಪದೇ ತಿರುಗಿ ಬರುತ್ತಿರುತ್ತವೆ. ಹೆಣ್ಣಿನಾಕಾರದ ಕಾಯಿ ಬಿಡುವ ಸುಡುಗಾಡು ಮರ!, ಮನುಷ್ಯನ ದೇಹ- ಮೀನಿನ ತಲೆ, 18 ಆಡಿಯ ರಾಕ್ಷಸಾಕಾರದ ದೇಹ ಅಲ್ಲೆಲ್ಲೋ ಸಿಕ್ಕಿದೆ, ಇತ್ಯಾದಿ ಇತ್ಯಾದಿ...

ಇನ್ನು ಪ್ರವಾಸಿ ಸ್ಥಳಗಳ ಮತ್ತು ಟ್ರೆಕ್ಕಿಂಗು ಸ್ಪಾಟುಗಳ ಬಗ್ಗೆ ಅಂತೂ ಕೇಳುವುದೇ ಬೇಡ. ಅಮೆರಿಕ ಯಾವುದೋ ಜಲಪಾತ ಬೆಂಗಳೂರಿನ ಸಮೀಪದ ಮುತ್ಯಾಲ ಮಡುವು ಅನ್ನುವ ಹಣೆಪಟ್ಟಿ ಹೊತ್ತುಕೊಂಡಿತ್ತು ಮೊನ್ನೆಯಷ್ಟೇ. ಜೊತೆಗೆ "ರತ್ನಘಡ ಎನ್ನುವ ಭೂಮಿಯ ಮೇಲಿನ ಸ್ವರ್ಗ" ಅನ್ನುವ ಹೆಸರು ಹೊತ್ತ ಈಮೇಲು ಬಗ್ಗೆ ಹೇಳಿ ಪ್ರಯೋಜ್ನಿಲ್ಲ! ಆ ಸ್ವರ್ಗ ಇರುವ ಜಾಗ ಪ್ರತಿ ಮೇಲ್ ನಲ್ಲೂ ಬದಲಾಗುತ್ತಿರುತ್ತದೆ! ಭಾರತದ ಎಲ್ಲಾ ರಾಜ್ಯಗಳನ್ನು ದಾಟಿ , ಈಗ ಈ ಸ್ಥಳ ಶ್ರೀಲಂಕಾದಲ್ಲಿದೆ ಎನ್ನುವ ಹೊಸ ಶೋಧವೂ ಆಗಿದೆ.

ಇನ್ನು ಈ ಈ ಮೇಲ್ ನ ೧೫ ಜನಕ್ಕೆ - ೨೦ ಜನಕ್ಕೆ ಕಳಿಸಿ , ಇಲ್ಲದಿದ್ದರೆ ಅದಾಗುತ್ತದೆ , ಇದಾಗುತ್ತದೆ ಎಂಬ ಧಮಕೀ ಹೊತ್ತು ಬರುವ ಮಿಂಚೆಂಚೆಗಳು ಮತ್ತೊಂದು ಗ್ರಹಚಾರ. ಅವುಗಳನ್ನು ಕಳಿಸಿದವರಿಗೇ ತಿರುಗಿ ೩೦ ಸಲ ಕಳಿಸಿದರೆ ಮುಗಿಯಿತು. ಮತ್ತೆ ಆ ತಪ್ಪು ಆತನಿಂದ ಆಗದು.ಇಂತವೆಲ್ಲ ನಿರುಪದ್ರವಿ ಮೇಲ್ ಗಳು ಅಂತ ಸುಮ್ಮನಿದ್ದು ಬಿಡಬಹುದು. ಆದರೆ, ಈಗೀಗ ತೊಂದರೆ ಉಂಟುಮಾಡುವ ಮೇಲ್ ಗಳೂ ಬರೋಕೆ ಶುರುವಾಗಿದೆ.

ಈ ಕೆಳಗಿನ ಸಬ್ಜೆಕ್ಟ್ ಲೈನು ಹೊತ್ತ ಮೇಲ್ ಗಮನಿಸಿರುತ್ತೀರಿ:

Please Pass this Message "1098"
dial 1098 for givin ur left over food to the diprieved ..

Need one small promise from you....!

Helping Hands Are Better Than Praying Lips.............
Not liking the food you have daily????


ಭಾರತದಲ್ಲಿನ ಬಡತನವನ್ನು ಅತ್ಯಂತ ಗಾಢವಾಗಿ ಬಿಂಬಿಸುವ ಒಂದಿಷ್ಟು ಚಿತ್ರಗಳನ್ನು ಮತ್ತು ಹಸಿವಿಂದ ಸಾಯುತ್ತಿರುವವರ ಅಂಕಿ ಅಂಶಗಳನ್ನು ಹೊತ್ತಿರುವ ಮೇಲ್ ಇದು. ಆ ಮೇಲ್ ನ ಸಾರಂಶ ಇಷ್ಟೇ. ನಿಮ್ಮ ಮನೆಯಲ್ಲೋ, ಅಥವ ಯಾವುದೇ ಸಮಾರಂಭಗಳಲ್ಲೇಸಿದ್ಧ ಪಡಿಸಿದ ಆಹಾರ ಉಳಿದು ಹೋಯಿತು ಅಂದರೆ ಅದನ್ನ ಹಾಳು ಮಾಡಬೇಡಿ, 1098 ಅನ್ನುವ ಟೋಲ್ ಫ್ರೀ ನಂಬರಿಗೆ ಫೋನ್ ಮಾಡಿ ಹೇಳಿ, ಅಲ್ಲಿನ ಸಂಬಂಧಿಸಿದ ವ್ಯಕ್ತಿಗಳು ಬಂದು ಆ ಅಳಿದುದ್ದನ್ನ ತಗೊಂಡು ಹೋಗಿ, ಏನೂ ಊಟಕ್ಕಿಲ್ಲದ ಮಕ್ಕಳಿಗೆ ಕೊಡುತ್ತಾರೆ, ನಾಲ್ಕು ಮಕ್ಕಳಿಗೆ ಉಪಕಾರ ಆಗ್ಲೀ, ದಯವಿಟ್ಟು ಸಾಧ್ಯ ಆದಷ್ಟ್ ಜನಕ್ ಕಳ್ಸೀ ಅಂತ ಈ ಅಂಚೆ ನಿಮ್ಮನ್ನು ಬೇಡಿಕೊಳ್ಳುತ್ತದೆ. ಮತ್ತು ನಾವು -ನೀವುಗಳು ಅದನ್ನು ಯಥಾಸಾಧ್ಯ ಜನಕ್ಕೆ ಫಾರ್ವರ್ಡ್ ಮಾಡಿ ಸುಮ್ಮನಾಗುತ್ತೇವೆ.

ಯಾರಾದರೂ , ಒಮ್ಮೆಯಾದರೂ 1098 ಗೆ ಫೋನ್ ಮಾಡಿದ್ದೀರಾ?

1098 ಅನ್ನುವುದು ಚೈಲ್ಡ್ ಲೈನ್ ಅನ್ನುವ ಸರಕಾರ ಮತ್ತು ಎನ್ ಜಿ ಓ ಗಳ ಸಹಕಾರದಿಂದ ನಡೆಯುವ, ಕಷ್ಟದಲ್ಲಿರುವ ಮಕ್ಕಳ ಸಹಾಯಕ್ಕಿರುವ ಸಂಸ್ಥೆಯ ದೂರವಾಣಿ ಸಂಖ್ಯೆ. ತೊಂದರೆಗೊಳಗಾದ ಮಕ್ಕಳಿಂದ ಅಂದರೆ- ಬಾಲ ಕಾರ್ಮಿಕರಾಗಿರುವವರು, ಮನೆಯಿಂದ ಓಡಿ ಬಂದು ದಿಕ್ಕುಗಾಣದವರದು, ಅಥವಾ ಪರೀಕ್ಷೆ ಅಂತ ಹೆದರಿ ಕೂತಿರುವವರಿಂದ- ದಿನವೊಂದಕ್ಕೆ 300-400 ಫೋನುಗಳು ಹಗಲು ರಾತ್ರಿ ಅನ್ನದೇ ಬರುತ್ತಲೇ ಇರುತ್ತದೆ. ಈ ಸಂಸ್ಥೆಗೆ ಬೇಕಷ್ಟು ಸಹಾಯಧನ ದೇಶವಿದೇಶಗಳಿಂದ ಬರುತ್ತದೆ. ಅವರುಗಳಿಗೆ ಊರಲ್ಲಿನ ಉಳಿದ ಆಹಾರವನ್ನು ಸಂಗ್ರಹಿಸಿ ತಮ್ಮಲ್ಲಿನ ಮಕ್ಕಳಿಗೆ ನೀಡುವ ಅವಶ್ಯಕತೆ ಖಂಡಿತಕ್ಕೂ ಇಲ್ಲ.

ಈ ಈ ಮೈಲ್ ಏನು ತೊಂದರೆ ಮಾಡುತ್ತಿದೆ ಗೊತ್ತಾ?- ದಿನವೊಂದಕ್ಕೆ 60-70 ದೂರವಾಣಿ ಕರೆಗಳು, "ನಮ್ಮನೇಲಿ ಮೂರು ಜನಕ್ಕಾಗೋ ಅಷ್ಟ್ ಅನ್ನ ಸಾಂಬಾರು ಇದೆ, ತಗೊಂಡೋಗಿ", "ನೋಡೀ, ಇಂತಾ ಛತ್ರಕ್ಕೆ ಬನ್ನೀ, ಮೂವತ್ತು ಊಟ ಕೊಡ್ತೀವೀ ತಗಂಡು ಹೋಗೀ" ಅನ್ನೋ ತರದವೇ ಆಗಿವೆ. ಮತ್ತು ಇಂತಹ ಕರೆಗಳು ಬರುತ್ತಿರುವಾಗ,

ಅಲ್ಲೆಲ್ಲೋ ಜೀತ ಮಾಡುವ ಹುಡುಗನೊಬ್ಬ, ಅಥವಾ ದುಡ್ದಿಗಾಗಿ ಯಾರಿಗೋ ಮಾರಲ್ಪಟ್ಟಿರುವ ಹುಡುಗಿ, ತನ್ನನ್ನ ಬಚಾವು ಮಾಡೀ ಅಂತ ಕೋರಿಕೊಳ್ಳಲು ಫೋನ್ ಮಾಡುತ್ತಿರುತ್ತಾರೆ ಮತ್ತು ಈ ನಂಬರು ಪದೇ ಪದೇ ಎಂಗೇಜು ಬರುತ್ತದೆ.

ಸ್ನೇಹಿತರೇ, ಅವರುಗಳಿಗೆ ಆ ಹೊತ್ತಿಗೆ ಡಯಲ್ ಮಾಡಲು ಸಾಧ್ಯವಾಗದೇ ಹೋದರೆ. . .ಮತ್ತೆಂದೂ ಮಾಡಲಾಗದೇ ಹೋದೀತು.

ಯೋಚಿಸಿ..

ನಿಮಗೆ ಮೇಲ್ ಕಳಿಸೋರಿಗೆ, ಇದು ಸುಳ್ಳು ಮಾಹಿತಿ ಅನ್ನೋ ವಿಷ್ಯ ತಿಳಿಸಿ, ಮತ್ತು ನಿಜಕ್ಕೂ ಕಷ್ಟದಲ್ಲಿರೋ ಮಕ್ಕಳು ಕಣ್ಣಿಗೆ ಬಿದ್ದಾಗ ಮಾತ್ರ ಚೈಲ್ಡ್ ಲೈನ್ ಗೆ ಫೋನ್ ಮಾಡಿ.

(ನಾನು ಸ್ನಾತಕೋತ್ತರ ಪದವಿ ಓದುತ್ತಿರುವ ಸಂದರ್ಭದಲ್ಲಿ ಮಂಗಳೂರಿನ ಚೈಲ್ಡ್ ಲೈನ್ ಸಂಸ್ಥೆಯಲ್ಲಿ ಒಂದು ವರುಷ, ಫೀಲ್ಡ್ ವರ್ಕ್ ಮಾಡಿದ್ದೆ.)

ಚೈಲ್ಡ್ ಲೈನ್ ವೆಬ್ ಸೈಟ್.

ಬುಧವಾರ, ಮೇ 14, 2008

ಹೇರೂರು ತೇರಿಗೆ ನಾನೂ ಹೋದೆ!

ವಿಷ್ಯ ಅಂತಂದ್ರೆ,ನಾನು ಮೊನ್ನೆ ಮೊನ್ನೆ ಹೇರೂರು ತೇರಿಗೆ ಹೋಗಿದ್ದೆ. ಮತ್ತು, ಹೇರೂರು ತೇರಿಗೆ ಹೋದಾಗ ಏನು ಮಾಡಲೇ (ಆಡಲೇ)ಬೇಕೋ ಅದನ್ನ ಮಾಡಿ(ಆಡಿ) ಬಂದೆ.

ಗುರುವಾರ, ಮೇ 01, 2008

ಏನನ್ನುತ್ತೀರಿ ಇದಕ್ಕೆ?

ಯಡಿಯೂರಪ್ಪ ಸಾರಥ್ಯದ ಬಿಜೆಪಿ ಗವರ್ಮೆಂಟು ಬಿದ್ದು ಹೋಗಿ ಸ್ವಲ್ಪ ದಿನಕ್ಕೇ ಆ ಪಕ್ಷ ಬೆಂಗಳೂರಿನಲ್ಲಿ ರಾಜಭವನ ಚಲೋ ಕಾರ್ಯಕ್ರಮ ಮಾಡಿತು. ಎಲ್ಲೆಂಲ್ಲಿಂದಲೋ ಬಂದ ಬಾಡಿಗೆ ಭಂಟರು ಕಾರ್ಪೋರೇಷನ್ನು, ಕಬ್ಬನ್ ಪಾರ್ಕು ತುಂಬಿಕೊಂಡು ಗಲಭೆ ಎಬ್ಬಿಸಿದರು. ಟ್ರಾಫಿಕ್ಕು ಮೂರ್ನಾಲ್ಕು ತಾಸು ಗಬ್ಬೆದ್ದು ಹೋಯಿತು. ಎಲ್ಲ ಟಿ.ವಿ.ಚಾನಲ್ಲುಗಳು, ಪತ್ರಿಕೆಗಳೂ ಈ ಟ್ರಾಫಿಕ್ ಜಾಮ್ ಸುದ್ದಿಗೆ ಒಂದಿಷ್ಟು ಜಾಗ ಮೀಸಲಿಟ್ಟವು. ಜನರೂ ಉಗಿದರು. ಸಂತೋಷ. ಒಂದು ರಾಜಕೀಯ ಪಕ್ಷಕ್ಕೆ ಸ್ವಲ್ಪವಾದರೂ ಸಾಮಾಜಿಕ ಜವಾಬ್ದಾರಿ ಅನ್ನುವುದು ಬೇಕಿತ್ತು.

ಹೋದವಾರದ ಒಂದು ದಿನ, ಬೆಳಗ್ಗೆ ಹತ್ತು ಗಂಟೆಗೆ ಮನೆಯಿಂದ ಆಫೀಸಿಗೆ ಹೊರಟೆ. ಸಜ್ಜನ ರಾವ್ ಸರ್ಕಲ್ಲಿನ ಬಳಿಯೇ ಟ್ರಾಫಿಕ್ ನಿಧಾನಗತಿಯಲ್ಲಿತ್ತು. ತೆವಳಿಕೊಂಡು ಜೇಸೀ ರೋಡು ಸೇರಿದೆ. ಮಾಮೂಲಿ ಸ್ಲೋ ಟ್ರಾಫಿಕ್ ಅಂತಂದುಕೊಂಡೆ. ಆದರೆ ಜೆ.ಸಿ ರೋಡಿಗೆ ಬಂದ ಮೇಲೆ ವಾಹನಗಳು ಒಂದಿಂಚೂ ಕದಲಲಿಲ್ಲ. ನೆತ್ತಿಯ ಮೇಲೆ ಸುಡು ಸುಡು ಬಿಸಿಲು. ಯಾಕೆ ಟ್ರಾಫಿಕ್ ಜಾಮಾಗಿದೆ ಅಂತ ಅಲ್ಲಿದ್ದ ಯಾರಿಗೂ ಗೊತ್ತಿಲ್ಲ. ಪಕ್ಕದ ಡಬ್ಬಲ್ ರೋಡ್ ಕೂಡ ಜಾಮ್ ಆಗಿದೆ ಅನ್ನುವ ಸುದ್ದಿ ಬಂತು.

ನನ್ನೆದುರಿಗೆ ವೃದ್ಧ ದಂಪತಿ ಸ್ಕೂಟರಲ್ಲಿದ್ದರು. ಹಿಂದುಗಡೆ ಕೂತಿದ್ದಾಕೆ, ಬಿಸಿಲಿಗೆ ತಲೆಸುತ್ತಿ ಹಿಂದಕ್ಕೆ ಬಿದ್ದೇಬಿಟ್ಟರು. ಸ್ಕೂಟರನ್ನ ಸಂಭಾಳಿಸಲಾಗದೇ ಆ ವೃಧ್ಧರೂ ಬಿದ್ದರು, ಸ್ಕೂಟರೂ ಬಿತ್ತು. ಆಕೆಗೆ ಪಾಪ ಹಣೆಗೆ ಪೆಟ್ಟಾಗಿ ರಕ್ತ ಸುರಿಯತೊಡಗಿತು. ಅಲ್ಲೆಲ್ಲೂ ಸುತ್ತ ಮೆಡಿಕಲ್ಲೂ ಇಲ್ಲ. ಕರ್ಚೀಫು ಕಟ್ಟಿ, ಬದಿಗೆ ಕೂರಿಸಿದ್ದಾಯಿತು. ಸುಮಾರು ಒಂದು ಒಂದೂವರೆ ಗಂಟೆಗಳ ಕಾಲ - ಕಾಲ ಸ್ತಬ್ಧ.ಅಷ್ಟು ಹೊತ್ತಿಗೆ ವಿಷಯವೂ ತಿಳಿಯಿತು, ಕನ್ನಡಕ್ಕಾಗಿ ಓರಾಡುವ ಸಂಘಟನೆಯ ಜಾಥಾವೇನೋ ನಡೆಯುತ್ತಿದೆ ಮುಂದೆ ಅಂತ.

ಒಂದು ಕೆಲಸದ ದಿನ, ಸಾವಿರಾರು ಜನರ ಅಮೂಲ್ಯ ಸಮಯ ಹಾಳಾಗಿ ಹೋಗಿತ್ತು. ಜೊತೆಗೆ ಉರಿ ಬಿಸಿಲಲ್ಲಿ ಒಣಗಿದ್ದು ಬೇರೆ.ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಕಾಳಜಿ ಹೊಂದಿರುವ ಸಂಘಟನೆಗಳ ಬಗ್ಗೆ ನನಗೂ ಗೌರವವಿದೆ. ಆದರೆ ಮೊನ್ನೆಯ ಘಟನೆ ನಿಜಕ್ಕೂ ಬೇಸರ , ಸಿಟ್ಟು ತರಿಸಿತು. ಅವರ ಈ ಕಾರ್ಯದಿಂದಾಗಿ ತೊಂದರೆಗೊಳಗಾಗಿದ್ದು ಕನ್ನಡದ ಜನತೆಯೇ ಅಲ್ಲವೇ? ಕನ್ನಡದ ಕೆಲಸ ಮಾಡೋಕೆ ಉದ್ದುದ್ದ ಜಾಥಾ, ಒಂದು ಕೆಲಸದ ಬೆಳಗೇ ಆಗಬೇಕಿತ್ತೇ?

ಕನ್ನಡ ಪರ ಸಂಘಟನೆಯಿಂದಾದ ಈ ತೊಂದರೆಯ ಬಗ್ಗೆ , ಯಾವುದೇ ಮಾಧ್ಯಮಗಳು ತುಟಿ ಪಿಟಕ್ ಅನ್ನಲಿಲ್ಲ. ಯಾಕೆ ಸುಮ್ಮನಿದ್ದರು ಅಂದರೆ, ಹೆದರಿಕೆ. ಈಗೀಗ ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಕೆಲ್ಸ ಮಾಡುವ ಯಾರ ಬಗ್ಗೆಯಾದರೂ ನೀವೇನಾದರೂ ಸ್ವಲ್ಪ ವಿಮರ್ಶೆ ಮಾಡುವ , ಅಥವಾ ಪ್ರಶ್ನೆ ಮಾಡುವ ಧಾಟಿಯಲ್ಲಿ ಬರೆದಿರಿ, ಹೇಳಿದಿರಿ ಅಂದರೆ ನಿಮಗೆ ಕನ್ನಡ ವಿರೋಧಿ ಹಣೆಪಟ್ಟಿ ಹಚ್ಚಲಾಗುತ್ತದೆ.

ಇಂತಹ ಆಷಾಢಭೂತಿತನಕ್ಕೆ ನನ್ನ ಧಿಕ್ಕಾರವಿದೆ.

ಗುರುವಾರ, ಏಪ್ರಿಲ್ 17, 2008

ಸರಕಾರದ ಕೆಲಸ, ದೇವರ ಕೆಲಸ.

ಪೋಸ್ಟಾಫೀಸಿಗೆ ಹೋಗಿದ್ದೆ. ಹಿಂದಿನ ದಿನ ರಿಜಿಸ್ಟರ್ ಪೋಸ್ಟ್ ಬಂದಿತ್ತು, ನಾನು ಮನೆಯಲ್ಲಿರಲಿಲ್ಲ. ಒಂದು ಹರಕು ಚೀಟಿಯಲ್ಲಿ ಪೋಸ್ಟ್ ಮ್ಯಾನ್ ಸುಬ್ರಮಣ್ಯಂ ( ಆ ಚೀಟೀಲೇ ಇತ್ತು ಅವನ ಹೆಸರು) ಏನೋ ಬರೆದು ಕೊಟ್ಟು ಹೋಗಿದ್ದ, ಇಂತಿಂತಾ ಪೋಸ್ಟಾಫೀಸಿಗೆ ಬಂದು ಕಲೆಕ್ಟ್ ಮಾಡಿಕೋಬೇಕು ಅಂತ. ಬೆಳಿಗ್ಗೆ ಆಫೀಸಿಗೆ ಹೊರಟವನು ಹೋದೆ ಅಲ್ಲಿಗೆ.

ಗಂಟು ಮುಖದ ಹೆಂಗಸು ಬಾಗಿಲಲ್ಲೇ ಕೂತಿದ್ದಳು."ಸುಬ್ರಮಣ್ಯಂ ಬೇಕಿತ್ತು, ರಿಜಿಸ್ಟರ್ ಪೋ.." ಮಾತು ಮುಗಿಯುವುದರೊಳಗೆ ಆಕೆ ಕೈ ಮೇಲೆತ್ತಿದ್ದಳು.ಅಂಪೈರು ಔಟು ಕೊಡುವ ಹಾಗೆ. ಅರ್ಥವಾಗಲಿಲ್ಲ. "ಮೇಡಮ್, ಸುಬ್ರಮಣ್ಯಂ ಅವರಿದಾರ?" ಅವಳು ತನ್ನ ಬರೆಯುವ ಕೆಲಸ ಮುಂದುವರೆಸುತ್ತ ಕೈ ಮತ್ತೊಮ್ಮೆ ಮೇಲೆತ್ತಿದಳು, ಈ ಬಾರಿಪುಣ್ಯಕ್ಕೆ ಮಾತಾಡಿದಳು. - ಮೇಲಿರ್ತಾರೆ ಹೋಗ್ರೀ.. ನಾನು ಮೇಲೆ ಹೋಗುವ ದಾರಿ ಹಿಡಿದೆ. ಮೇಲೊಂದು ಕುರುಕ್ಷೇತ್ರ. ಒಂದಿಷ್ಟು ಜನ ಪತ್ರಗಳ ಕಟ್ಟನ್ನ ಇತ್ತಿಂದತ್ತ, ಅತ್ತಿಂದಿತ್ತ ಎಸೆಯುತ್ತ ಕೂತಿದ್ದರು.

"ಸಾರ್, ಸುಬ್ರಮಣ್ಯಂ ಅವ್ರು ಇದಾರಾ.."

ಯಾರಿಗೂ ನನ್ನ ಮಾತೇ ಕೇಳಲಿಲ್ಲ, ಸಿಕ್ಕ ಸಿಕ್ಕ ಚೀಲಕ್ಕೆ ಪತ್ರಗಳನ್ನ ಗುರಿಯಿಟ್ಟು ಎಸೆಯುವುದರಲ್ಲೇ ತಲ್ಲೀನರು. ಮತ್ತೊಮ್ಮೆ ಗಟ್ಟಿಯಾಗಿ ಕೇಳಿದೆ. ಒಬ್ಬಾತ ತಣ್ಣಗೆ, ನನ್ನ ಮುಖವನ್ನೂ ನೋಡದೇ, ಕೆಳಗಿರ್ತಾರೆ ಹೋಗಿ ಅಂದ. "ಇಲ್ಲಾ ಸಾರ್, ಅಲ್ಲಿಂದಲೇ ಬಂದೆ" ಅಂದೆ. ಕೆಳಗಿರ್ತಾರೆ ಹೋಗೀ ಅಂತು ಇನ್ನೊಂದು ಶರೀರ, ಮತ್ತೊಮ್ಮೆ. ನಾನು ಮತ್ತೆ ಕೆಳಗಿಳಿದೆ.

ಈ ಬಾರಿ ಗಂಟು ಮೇಡಮ್ ನ ಮಾತಾಡ್ಸೋಕೆ ಧೈರ್ಯ ಸಾಲಲಿಲ್ಲ. ಎದ್ದು ಬಾರಿಸಿದರೆ ಅನ್ನುವ ಅಳುಕು. ಪಕ್ಕದಲ್ಲಿದ್ದ ಮತ್ತೊಬ್ಬ ಪುಣ್ಯಾತ್ಮರನ್ನ ಕೇಳಿದೆ."ಸುಬ್ರಮಣ್ಯಂ.." ಅನ್ನುತಿದ್ದ ಹಾಗೆ, ಅವ್ರು ಹೇಳಿಲ್ವೇನ್ರೀ- ಮೇಲಿರ್ತಾರೆ...ಹೋಗಿ.

ಮತ್ತೆ ಮೇಲೆ- ಅಲ್ಲಿಯಾತ ಹೆಚ್ಚೂ ಕಡಿಮೆ ಕಿರುಚಿಯೇ ಬೆಟ್ಟ. ಹೋಗುತ್ತಿಯೋ ಇಲ್ಲವೋ ಕೆಳಗಡೆಗೆ ಅನ್ನುವ ಹಾಗೆ. ಅವನು ಕಿರುಚಿದ್ದು ನೋಡಿ ಆ ರೂಮುಲ್ಲಿ ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಏನಾದರೂ ಕಾಗದ ಪತ್ರಗಳ ವಿಲೇವಾರಿ ಮಾಡುತ್ತಿದ್ದಾರೋ ಅನ್ನುವ ಅನುಮಾನ ಬಂತು. ಮತ್ತೆ ಕೆಳಗೆ. ಹುಚ್ಚು ಹಿಡಿಯುವ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿದ್ದವು. ಈ ಬಾರಿ ಕೆಳಗಿನ ಮೇಡಮ್, ಅವ್ರು ಕಾಪಿಗ್ ಹೋಗಿದಾರೆ ಅನ್ಸತ್ತೆ.. ಅನ್ನುವ ರಾಗ ಎತ್ತಿದರು.

ಕಾದೆ. ಹತ್ತು ನಿಮಿಷ. ಕಾಲ ನಿಂತೇ ಹೋದ ಅನುಭವ. ಮತ್ತೆ ಅಲ್ಲಿದ್ದೊಬ್ಬ ಪುಣ್ಯಾತ್ಮ ಬಳಿ ಕೇಳಿದರೆ, ಮೈ ಪರಚಿಕೊಳ್ಳುವುದೊಂದು ಬಾಕಿ. ಈಗಷ್ಟೇ ಬಂದ್ರಲ್ಲ..ಮೇಲೆ ಹೋದ್ರು ನೋಡಿ. ಓಡಿದೆ ಮೇಲೆ. ಯಾವನೋ ಅಡ್ಡ ಬಂದ. ಜಸ್ಟ್ ಮಿಸ್ಸು. ಬಿದ್ದೇ ಹೋಗ್ತಿದ್ದ. ಮೇಲೆ ಇದ್ದವರಿಂದ ಐಸಿನಂತ ಉತ್ತರ ಬಂತು, ಈಗಷ್ಟೇ ಕೆಳಗೆ ಹೋದ್ರು ನೋಡಿ, ಅವರೇ ಸುಬ್ರಮಣ್ಯಂ!

ಅಂತೂ ಆ ಪುಣ್ಯಾತ್ಮನ್ನ ಹಿಡಿದೆ. ಆ ಸಾವ್ಕಾರ್ರು ಮತ್ತೆ ಹತ್ತು ನಿಮಿಷ ನನ್ನ ರಿಜಿಸ್ಟರ್ ಪೋಸ್ಟ್ ಹುಡುಕಿ, ಕಾಣಿಸ್ತಿಲ್ಲ ಸಾರ್, ಮಧ್ಯಾಹ್ನ ಬನ್ನಿ ಅಂದ್ರು.

ಇಲ್ಲಣ್ಣಾ ದಮ್ಮಯ್ಯ ಅಂತೆಲ್ಲ ಹೇಳಿ ಹುಡುಕ್ಸಿ, ಅದ್ನ ಕೈಲ್ ಹಿಡ್ಕೊಂಡು ಹೊರಡಬೇಕಿದ್ರೆ... ಉಫ್..

*******

ಶಾಸಕರ ಭವನಕ್ಕೆ ಯಾರದೋ ಸಂದರ್ಶನ ಮಾಡೋಕೆ ಹೋಗಬೇಕಿತ್ತು. ಆ ಮಾಜಿ ಎಂ.ಎಲ್.ಎ ಅಲ್ಲಿರುವ ಮೂರು ಬಿಲ್ಡಿಂಗ್ ಗಳಲ್ಲಿ ಎಲ್ಲಿರುತ್ತಾರೆ ಅಂತ ಗೊತ್ತಿರಲಿಲ್ಲ. ಸುಮ್ನೆ ಬ್ಲೈಂಡಾಗಿ ಒಂದು ಕಟ್ಟಡಕ್ಕೆ ನುಗ್ಗಿದೆ. ಒಬ್ಬ ಪೋಲೀಸು ಪೇದೆ ಬಾಗಿಲಲ್ಲೇ ಕೂತಿದ್ದ.

"..... ಅವರು ಇಲ್ಲಿ ಇರ್ತಾರ"

ನಿಮ್ಮ ಹೆಸರು? -ಶ್ರೀನಿಧಿ

ಎಲ್ಲಿಂದ ಬಂದಿದೀರಿ?- ಹೆಸರು ಹೇಳಿದೆ.

ಯಾಕೆ?- ಅವರ ಸಂದರ್ಶನ ಮಾಡಬೇಕಿತ್ತು.

ನಿಮ್ಮ ಹೆಸರು ಈ ರಿಜಿಸ್ಟರಲ್ಲಿ ಬರೀರಿ- ಬರೆದೆ.

ವಿಳಾಸನೂ ಬರೀರಿ,ಹಾಂ, ಹಾಗೆ.. - ಅದ್ನೂ ಬರೆದೆ.

ಪೂರ್ತಿ ಬರೀರಿ ಸಾರ್, ವಿದ್ ಪಿನ್ ಕೋಡ್.- ಓಕೆ, ಅದ್ನೂ..

ಯಾರನ್ನ ಮೀಟಾಗಕ್ ಬಂದಿದ್ದೊ ಅಂತ್ಲೂ ಬರೀರಿ- ಹುಂ..

ಯಾಕೆ, ಏನು, ಏತ್ತ ಎಲ್ಲದ್ನೂ ಬರೀರಿ- ಬರ್ದೆ.

"ಎಲ್ಲದೂ ಆಯ್ತಾ?- ಕೇಳಿದೆ. ಆಯ್ತು ಸಾರ್.

"ಅವ್ರು ಇಲ್ಲೇ ಇರ್ತಾರ, ಇದೇ ಬಿಲ್ಡಿಂಗಲ್ಲಿ?"

ಓ ಅಲ್ಲಿ ರಿಸೆಪ್ಶನ್ ಕೌಂಟರ್ ಇದೆ, ಅಲ್ ಹೋಗಿ ಕೇಳಿ- ಹೇಳ್ತಾರೆ!!!

ಸರಕಾರದ ಕೆಲಸ, ದೇವರ ಕೆಲಸ.

ಶನಿವಾರ, ಏಪ್ರಿಲ್ 12, 2008

ಪೂರ್ಣಚಂದ್ರ ತೇಜಸ್ವಿ ಮತ್ತೆ ಬಂದಿದ್ದಾರೆ!

ಸುಮ್ನೆ ಮಾಡೋಕೇನೂ ಕೆಲಸ ಇಲ್ಲದಿದ್ದಾಗ, ಅಥವಾ ಆಫೀಸಿಂದ ಬೇಗ ಹೊರಟರೆ ಗಾಂಧೀ ಬಜಾರಲ್ಲಿ ಒಂದ್ ಸುತ್ ಹೊಡೆಯೋದು ಅಭ್ಯಾಸ ನನಗೆ. ಗಾಂಧಿ ಬಜಾರು ಅಂದರೆ ಐಸ್ ಥಂಡರು, ಮಹಾಲಕ್ಷ್ಮೀ ಟಿಫನ್ ರೂಮು ಮತ್ತು ಅಂಕಿತ ಬುಕ್ ಸ್ಟಾಲು.

ಮೊನ್ನೆ ಹೀಗೇ ಅಂಕಿತಕ್ಕೆ ಹೋದೆ, ವಿನಾಕಾರಣ. ಯಾವುದಾದರೂ ಹೊಸ ಪುಸ್ತಕ ಇದೆಯಾ ಅಂತ ಹುಡುಕಾಡಿದೆ. ಕಾಣಲಿಲ್ಲ. ಬೇಕಾದ್ದು ಇರಲಿಲ್ಲ. ಎಂದಿನ ಹಾಗೆ ತೇಜಸ್ವಿ ಪುಸ್ತಕ ಇದ್ದ ಸಾಲುಗಳನ್ನು ನೋಡಿದೆ. ಅದೊಂದು ಅಭ್ಯಾಸ ನನಗೆ. ಎಟ್ ಲೀಸ್ಟ್ ಅವರ ಹಳೆಯ ಪುಸ್ತಕಗಳ ಹೊಸ ಮುಖಪುಟ ವಿನ್ಯಾಸಗಳನ್ನಾದರೂ ನೋಡಿ, ಹಾಗೇ ಆ ಪುಸ್ತಕಗಳನ್ನ ಮತ್ತೆ ಎಲ್ಲಿತ್ತೋ ಅಲ್ಲಿಡುತ್ತೇನೆ. ಮೊನ್ನೆ ಮಾತ್ರ ಅತ್ಯಂತ ಅಚ್ಚರಿ ಕಾದಿತ್ತು ನನಗೆ. ತೇಜಸ್ವಿಯವರ ಹೊಸ ಪುಸ್ತಕವೊಂದು ಬೆಚ್ಚಗೆ ಕುಳಿತಿತ್ತು ಅಲ್ಲಿ. ಹೌದು ಕಣ್ರೀ, ನಮ್ಮ ಪೂರ್ಣಚಂದ್ರ ತೇಜಸ್ವಿಯವರ ಹೊಸ- ಹೊಚ್ಚ ಹೊಸ ಪುಸ್ತಕ! ಖುಷಿಯಿಂದ ಕಿರಿಚುವುದೊಂದು ಬಾಕಿ. ನನ್ನ ಯದ್ವಾ ತದ್ವಾ ಹಾವಭಾವದ ಕಣ್ಣು- ಮುಖಗಳನ್ನು ನೋಡಿ ಶ್ರೀಮತಿ ಕಂಬತ್ತಳ್ಳಿಯವರು , "ಇವತ್ತಷ್ಟೇ ಬಂತು ಈ ಪುಸ್ತಕ" ಅಂದರು.

"ಪಾಕಕ್ರಾಂತಿ ಮತ್ತು ಇತರ ಕಥೆಗಳು" ಅನ್ನುವುದು ಕಥಾ ಸಂಕಲನದ ಹೆಸರು. 1998 ರಿಂದ 2007ರ ವರೆಗೆ - ಲಂಕೇಶ್ ಪತ್ರಿಕೆಯಿಂದ ಹಿಡಿದು ವಿಕ್ರಾಂತ ಕರ್ನಾಟಕದವರೆಗೆ ಪ್ರಕಟವಾದ ಎಂಟು ಕಥೆಗಳಿವೆ ಇದರಲ್ಲಿ. ನಾನಂತೂ ದೇವರಾಣೆಯಾಗೂ ಒಂದೂ ಕಥೆಯನ್ನು ಈ ಮೊದಲು ಓದಿರಲಿಲ್ಲ. ತೇಜಸ್ವಿ ಈಗತಾನೇ ಕೂತು ಈ ಕಥೆಗಳನ್ನ ಬರೆದು ಮುಗಿಸಿ, ಪಬ್ಲಿಶ್ ಮಾಡಿಸಿದ್ದಾರೆ ಅನ್ನಿಸಿತು ನನಗಂತೂ. ಪುಸ್ತಕ ಪ್ರಕಾಶನಕ್ಕೆ ಸಾವ್ರ ಧನ್ಯವಾದ!

ಬೆನ್ನುಡಿಯಲ್ಲಿ ಹೇಳಿದ ಹಾಗೆ, " ಪೂರ್ಣಚಂದ್ರ ತೇಜಸ್ವಿಯವರು ನಮ್ಮ ತಲೆಮಾರಿನ ಒಂದು ಅದ್ಭುತ ಪ್ರತಿಭೆ ಹಾಗೂ ಪ್ರಕ್ರಿಯೆ. ಅವರ ಅನುಪಸ್ಥಿತಿಯಲ್ಲಿ ಅವರು ಸೃಷ್ಟಿಸಿರುವ ಲೋಕದ ಬಂಧಿಗಳು ನಾವು".

ನಾನಂತೂ ಇಲ್ಲಿನ ಕಥೆಗಳಲ್ಲಿ ಏನಿದೆ ಅಂತ ಒಂದು ಸಾಲೂ ಹೇಳುವುದಿಲ್ಲ. ತಗಂಡು ಓದಿ. ಅಂಕಿತಕ್ಕೋ, ಸಪ್ನಾಕ್ಕೋ ಹೋಗಿ, ಬೆಂಗಳೂರಿಗರು. ಮಂಗಳೂರಿಗರಿಗೆ ಅತ್ರಿ, ಮೈಸೂರಲ್ಲಿ ಗೀತಾ ಬುಕ್ ಹೌಸು..

ಪೋಸ್ಟ್ ಮುಖಾಂತರ:
ಪುಸ್ತಕ ಪ್ರಕಾಶನ,
ಬುಕ್ ಪೋಸ್ಟ್ ಸರ್ವೀಸ್,
ಪೋಸ್ಟ್ ಬಾಕ್ಸ್ ನಂ:58,
ಮೂಡಿಗೆರೆ-577132,
ಚಿಕ್ಕಮಗಳೂರು ಜಿಲ್ಲೆ,
ಫೋನು- 08263-228353,240202

ಹ್ಯಾಪಿ ರೀಡಿಂಗು!.

ಸೋಮವಾರ, ಏಪ್ರಿಲ್ 07, 2008

ಬೆಂಗಳೂರಿನ ಹೂಗಳು

ಯುಗಾದಿ ಹಬ್ಬಕ್ಕೆ ಪ್ರಕೃತಿ ತನ್ನನ್ನು ತಾನು ಸಿಂಗರಿಸಿಕೊಳ್ಳುವ ಬಗೆ ಅದ್ಭುತ. ಮೊನ್ನೆ ಕ್ಯಾಮರಾ ಜೊತೆ ಸುತ್ತಬೇಕಿದ್ದರೆ ಕೆಲವೊಂದಿಷ್ಟು ತಂಪು ಚಿತ್ರಗಳು ಸೆರೆಸಿಕ್ಕವು.













ಎಲ್ಲರಿಗೂ ಯುಗಾದಿಯ ಶುಭಾಶಯಗಳು.

ಮಂಗಳವಾರ, ಮಾರ್ಚ್ 25, 2008

"ಷ".

ನಾನು ಆಗ ಒಂದನೇ ಕ್ಲಾಸ್ ನಲ್ಲಿದ್ದೆ. ಟೀಚರ್ರು ಎಲ್ಲರಿಗೂ ಕನ್ನಡದ ಒಂದೊಂದು ಅಕ್ಷರವನ್ನು ತೋರಿಸಿ ಅದನ್ನು ಗುರುತಿಸಲು ಹೇಳುತ್ತಿದ್ದರು. ನನ್ನ ಪಾಳಿ ಬಂತು. ಅವರು "ಷ" ಅಕ್ಷರವನ್ನು ತೋರಿಸಿ ಓದು ಅಂದರು. ನನಗೆ ಏನಾಯಿತು ಅಂತ ಗೊತ್ತಿಲ್ಲ, ಯಾಕೆ ಹಾಗಾಯಿತು ಅಂತಲೂ ಗೊತ್ತಿಲ್ಲ, ಏನು ಮಾಡಿದರೂ ಈ ಅಕ್ಷರವನ್ನು ಗುರುತಿಸಲೇ ಆಗಲಿಲ್ಲ. ನಾನು ಅವರನ್ನೂ , ಆ ಅಕ್ಷರವನ್ನೂ ನೋಡುತ್ತ ಸುಮ್ಮನೇ ನಿಂತುಬಿಟ್ಟೆ. ಟೀಚರ್ ನನ್ನ ಕನ್ನಡ ಪುಸ್ತಕದ, "ಷ" ಅಕ್ಷರದ ಎದುರಿಗೆ ಕೆಂಪು ಶಾಯಿಯಲ್ಲಿ ತಪ್ಪು ಮಾರ್ಕ್ ಹಾಕಿದರು. ನನ್ನನ್ನ ನನ್ನದೇ ತರಗತಿ ಮತ್ತೊಂದು ಹುಡುಗಿಯ ಎದುರು ಎಳೆದು ನಿಲ್ಲಿಸಿ "ಇವನಿಗೆ ಅ ಆ ಇ ಈ ಹೇಳಿಕೊಡು" ಅಂದು ಬಿಟ್ಟರು. ಆಮೇಲೆ ಬಹುಕಾಲ ನನ್ನನ್ನು ಆ ಟೀಚರ್ರು "ಕನ್ನಡ ಮಾಸ್ಟ್ರ ಮಗನಾಗಿ ಕನ್ನಡ ಅಕ್ಷರನೇ ಓದೋಕೆ ಬರೋದಿಲ್ಲ ನಿಂಗೆ" ಅಂತ ಹೀಯಾಳಿಸುತ್ತಲೇ ಇದ್ದರು. ಇವತ್ತಿಗೂ ಆ ಕೆಂಪು ಶಾಯಿಯ ತಪ್ಪು ಗುರುತು, ನನ್ನ ಕಣ್ಣೆದುರಿಗೇ ಇದೆ.


******

ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಶಿಕ್ಷಕರ ದಿನಾಚರಣೆಯ ದಿನ ಇಷ್ಟವಿದ್ದವರು ಭಾಷಣ ಮಾಡಬಹುದು ಅಂತ ನಮ್ಮ ಹೆಡ್ ಸಿಸ್ಟರ್ ಕ್ಲಾಸಿಗೆ ಬಂದು ಹೇಳಿದ್ದರು. ನಾನು ಮನೆಗೆ ಹೋಗಿ ಅಪ್ಪನಿಗೆ ಹೇಳಿದೆ ಮತ್ತು ಅವರು ಆಗಿನ ನನ್ನ ಲೆವೆಲ್ಲಿಗೆ ತಕ್ಕ ಹಾಗೆ, "ಗುರು ಬ್ರಹ್ಮಾ, ಗುರೂರ್ ವಿಷ್ಣು.. ಇತ್ಯಾದಿಯಿಂದ ಶುರುವಾಗುವ ಭಾಷಣವೊಂದನ್ನು ತಯಾರು ಮಾಡಿಕೊಟ್ಟಿದ್ದರು. ನಾನೂ ಬಾಯಿಪಾಠ ಮಾಡಿಕೊಂಡು ತಯಾರಾದೆ. ಶಿಕ್ಷಕರ ದಿನಾಚರಣೆಯ ಬೆಳಿಗ್ಗೆ ಫಂಕ್ಷನ್ನು ಶುರುವಾಗುವ ಕೊಂಚ ಮುನ್ನ ಹೆಡ್ ಸಿಸ್ಟರ್ ಬಳಿಗೆ ಹೋಗಿ ನಾನೂ ಭಾಷಣ ಬರೆದುಕೊಂಡು ಬಂದಿದ್ದೇನೆ, ಅಂದೆ. ನನ್ನ ಎದುರಿಗೆ ಒಂದು ಸಲ ಓದಬೇಕಿತ್ತಲ್ಲಾ... ಈಗ ಟೈಮಿಲ್ಲ, ಸರಿಯಾಗಿ ಬಾಯ್ಪಾಠ ಮಾಡಿದೀಯಲ್ಲ ? ಅಂತ ಕೇಳಿದ್ರು. ಹುಂ ಅಂದೆ. ನನ್ನ ಗ್ರಾಚಾರಕ್ಕೆ ಸ್ಟೇಜಿನ ಮೇಲೆ ಯಾಕೋ ಒಂದೆರಡು ಸಾಲು ಮರೆತು ಹೋಗಿ ಬೆಬ್ಬೆಬ್ಬೆ ಆಯ್ತು. ಹೆಡ್ ಸಿಸ್ಟರ್ ಪ್ರೋಗ್ರಾಮು ಮುಗಿದು ಹೋದ ಮೇಲೆ ತಮ್ಮ ಚೇಂಬರಿಗೆ ಕರೆದು, ಉಗಿದು ಉಪ್ಪಿನಕಾಯಿ ಹಾಕಿದ್ರು. ಅವರ ದೊಡ್ಡ ನಾಗರ ಬೆತ್ತ ತೆಗೆದು ಎರಡು ಹೊಡೆದರು. ಆಮೇಲೆ ಮತ್ತೆ ಯಾವತ್ತೂ ನಾನು ಭಾಷಣ ಮಾಡಲಿಲ್ಲ, ಹೈಸ್ಕೂಲು ಮುಗಿಯುವವರೆಗೆ. ಆಮೇಲೆ ಸ್ಟೇಜು ಹತ್ತಿದರೂ ಕೈ ಕಾಲು ನಡುಗುತ್ತಿತ್ತು ಸ್ವಲ್ಪ ದಿನ.

*****


ಮೊನ್ನೆ ನನ್ನ ಚಿಕ್ಕಮ್ಮ ಮನೆಗೆ ಬಂದಿದ್ದರು, ಅವರಿಗೊಬ್ಬ ಪುಟ್ಟ ಮಗಳು, ೪ ವರ್ಷದವಳು. ಅವಳು ಚೆನ್ನಾಗಿ ಸಿನಿಮಾ ಹಾಡೆಲ್ಲ ನೆನಪಿಟ್ಟುಕೊಂಡು ಹಾಡುತ್ತಾಳೆ ಅಂತಿದ್ದರು ಅವರು. ಇಲ್ಲ ಚಿಕ್ಕಮ್ಮಾ, ನಾಡಿದ್ದು ಶಾಲೆಗೆ ಸೇರಿದ ಮೇಲೆ ನಿನ್ನ ಮಗಳು ಹಾಡುವ ಉಲ್ಲಾಸದ ಹೂಮಳೇ.. ವರ್ಕೌಟ್ ಆಗುವುದಿಲ್ಲ, ಬೇರೇನಾದರೂ ಬೇಕಾಗುತ್ತದೆ ಅಂದೆ. ಆವಾಗ ಇದೆಲ್ಲ ನೆನಪಾಯಿತು.


ಭಾನುವಾರ, ಮಾರ್ಚ್ 09, 2008

ಬನ್ನಿ, ಭೇಟಿಯಾಗೋಣ.

ಮತ್ತೊಂದು ಕನಸು ನನಸಾಗಲು ಹೊರಟಿದೆ. ಬಹುದಿನಗಳಿಂದ ಅಂದುಕೊಂಡಿದ್ದು.

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ.

ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ.

ಗುರುವಾರ, ಫೆಬ್ರವರಿ 28, 2008

ದೇಗುಲದ ಪ್ರೇಮಿಗಳು..

ದೇಗುಲದ ಗೋಪುರದ ಪಾರಿವಾಳದ ಜೋಡಿ

ನೋಡುತಿದ್ದವು ಹೀಗೇ, ಜನರ ಸಾಲು

ಅಂದು ಮಂಗಳದ ದಿನ, ಭಕ್ತ ಸಾಗರವಲ್ಲಿ

ಸಾಲು ಹೂಗಳ ದಂಡೆ, ಮತ್ತೆ ಪಂಚೆ ಶಾಲು.


ಎಲ್ಲ ದಿನವೂ ಹೀಗೆ, ಅದದೇ ಭಕ್ತರ ಚಕ್ರ

ಎಂಥ ಹಬ್ಬಕು ಕೂಡ ಬಂದೆ ಬಹರು.

ಗಂಡು ಪಕ್ಷಿಯು ಮೆಲ್ಲನಾಕಳಿಸಿ ನುಡಿಯಿತು

ನೋಡಿದವರನೆ ನೋಡಿ ಬಹಳ ಬೇಜಾರು


ಹೆಣ್ಣು ಹಕ್ಕಿಯ ದೃಷ್ಟಿ ಬೇರೆಲ್ಲೊ ಇದ್ದಿತ್ತು-

ಹಾಗಿಲ್ಲ ಈ ದಿನವು, ಚಂದ್ರಶಾಲೆಯ ನೋಡು

ನವ ಜೋಡಿ ಕೂತಿಹುದು ಕಂಬಸಾಲಿನ ಮಧ್ಯ

ಹುಡುಗ ಬಲುತುಂಟ, ಆಕೆ ಭಯದ ಗೂಡು.


ಗಂಡುಪಕ್ಕಿಯು ಕೂಡ ಮೆಲ್ಲ ನೋಡಿತು ಅವರ

ಬಲು ಚೆಲುವ ಜೋಡಿಯದು, ಮಾತೇ ಇಲ್ಲ!

ಕೇಸರಿಯ ಸೀರೆಯಲಿ ಅಡಗಿಹಳು ಆ ಹುಡುಗಿ

ಅವಳನೇ ನೋಡುತಲಿ, ಮೈಮರೆತಿಹನು ನಲ್ಲ.


ಆಕೆಗೋ ನಾಚಿಕೆಯು, ತಲೆಯನೆತ್ತುವುದಿಲ್ಲ

ಇವನ ಕೈ ಬಳಸಿಹುದು ಅವಳ ಹೆಗಲು

ಪಿಸುಮಾತನಾಡುವರು, ಅತ್ತಿತ್ತ ನೋಡುವರು

ಕಣ್ಣಪಾಪೆಗಳಲ್ಲಿ ಸಣ್ಣ ದಿಗಿಲು.


"ಹೊಸ ಜೋಡಿಯಿರಬೇಕು, ಹೆದರಿಕೆಯು ಸಹಜ

ಸರಿಯಾಗುವುದು ಎಲ್ಲ, ದಿನವು ಕಳೆದಂತೆ"

ಹೆಣ್ಣುಪಕ್ಷಿಯ ನುಡಿಗೆ ಹೌದೆಂತು ಗಂಡು,

ಧೈರ್ಯ ಬರುವುದು ನೋಡು, ಪ್ರೀತಿ ಬೆಳೆದಂತೆ.


ನೋಡುತಿರುವಂತೆ ಇವು, ಮೆಲ್ಲನೆದ್ದರು ಅವರು

ಸೇರಿಕೊಂಡರು ಮೆಲ್ಲ, ಪ್ರದಕ್ಷಿಣೆಯ ಸಾಲು

ಕೈಕೈಯು ಬೆಸೆದಿತ್ತು, ಎಂದೂ ಜೊತೆಗಿದ್ದಂತೆ

ಮೈಮೇಲೆ ಚೆಲ್ಲಿತ್ತು, ಬಿಸಿಲ ಕೋಲು.


ದೇವರಲದೇನು ಕೇಳಿದರೋ, ಗೊತ್ತಾಗಲಿಲ್ಲ

ಅವನಿಗದು ಕೇಳಿಸಿತೋ, ತಿಳಿಯಲಿಲ್ಲ.

ಇವರ ಮೊಗದೊಳು ತುಂಬು ನೆಮ್ಮದಿಯ ಕಳೆಯಿತ್ತು

ಅಷ್ಟಿದ್ದರದೇ ಸಾಕು, ಬೇರೆ ಬೇಕಿಲ್ಲ.


ಜನರ ಜಂಗುಳಿ ದಾಟಿ ಹೊರಗೆ ಹೊರಟರು ಅವರು

ತಲೆಯೆತ್ತಿ ನಡೆಯುತ್ತ, ಜಗವ ಗೆದ್ದಂತೆ

ಗೋಪುರದ ಜೋಡಿಗಳು ಹಾರೈಸಿದವು ಅವರ

ಪ್ರೀತಿಝರಿಯಾ ಒರತೆ ಬತ್ತದಂತೆ.

ಟಿಪ್ಪಣಿ:

ಈ ಕವನ ಬರೆದಿದ್ದು ವಾರದ ಹಿಂದೆ. ಯಾವತ್ತೋ ತಲೆಯೊಳಗೆ ಕೂತಿದ್ದ ವಿಷಯವನ್ನು ಹಾಳೆಗಿಳಿಸಿದ್ದೆ. ಆಮೇಲೆ ಅರುಣನಿಗೆ ಓದಿ ಹೇಳಿ, ಮತ್ತಾವುದೋ ಕಾರಣಕ್ಕೆ ಬೇಕಿರುವುದರಿಂದ ಬ್ಲಾಗಿಗೆ ಹಾಕುವುದಿಲ್ಲ ಅಂತ ಅಂದುಕೊಂಡಿದ್ದೆ. ಸುಶ್ರುತ ತಾನೂ ಕವನ ಬರಿಯೋ ಪ್ರಯತ್ನ ಮಾಡ್ತಾ ಇದೀನಿ ಅಂತ ನಿನ್ನೆ ಹೇಳುತ್ತಿದ್ದ. ಇವತ್ತು ಈ ಪುಣ್ಯಾತ್ಮ ಬರೆದ ಕವನ ಓದುತ್ತಿದ್ದರೆ, ನಾನು ಬರೆದ ಈ ಕವನ ಮತ್ತು ಅವನ ಕವನ - ಎಲ್ಲೋ ಹುಟ್ಟುತ್ತಲೇ ಬೇರೆಯಾದ ಮಕ್ಕಳ ಹಾಗೆ ಕಂಡವು! ನಮ್ಮಿಬ್ಬರ ಕವನಗಳೂ ಒಂದು ಮತ್ತೊಂದರ ಮುಂದರಿಕೆಯಂತೆಯೋ ಅಥವಾ ಎರಡನ್ನೂ ಮಧ್ಯದಲ್ಲೆಲ್ಲೋ ಸೇರಿಸಿಕೊಂಡು ಓದಬಹುದಾದಂತೆ ಕಾಣಬಹುದು. ನನಗಂತೂ ಇದು ದೊಡ್ಡ ಅಚ್ಚರಿ!

ಮಂಗಳವಾರ, ಫೆಬ್ರವರಿ 26, 2008

ಹೀಗೊಂದು ಬೆಳಗು

ಕಾರ್ತಿಕದ ಹೊಸ ಬೆಳಗು, ಚಳಿಯು ಬಹಳಿತ್ತು
ದೇಗುಲದ ಘಂಟೆ ತಾನ್ ಇನ್ನು ಮಲಗಿತ್ತು.
ಅವಳಾಗಲೇ ಎದ್ದು ಅಂಗಳದಲಿದ್ದಳು
ರಂಗೋಲಿ ಚುಕ್ಕಿಯಲಿ ತಾನೆ ಚಿತ್ರವಾಗಿದ್ದಳು

ಅದಾವುದೋ ಭಂಗಿಯಲಿ ಕಟೆದಿಟ್ಟ ಹಾಗೆ,
ಕೂತಿದ್ದಳವಳು, ಇಳಿದು ಬಂದಂತೆ ಸೊಬಗೆ.
ಕೈಬೆರಳುಗಳೋಡುತಿವೆ, ಸೇರಿಸಲು ಬಂಧ
ಕಣ್ಣಾಲಿಗಳ ಚಲನೆ, ರಂಗವಲ್ಲಿಗೂ ಚಂದ

ಅಂಗಳದೊಳಿಂಗುತಿದೆ ರಾತ್ರಿಯಾ ಮಳೆನೀರು
ಮಂಗಳದ ರಂಗೋಲಿ ಒದ್ದೆ ನೆಲದಿ.
ಕಾಡಂಚಿನಾ ಮನೆಯು, ತಣ್ಣನೆಯ ಮೆಲುಗಾಳಿ
ಹಾಡುತಿದೆ ವನಪಕ್ಷಿ, ಹಸಿರಿನೊಳಗಿಂದ

ಚಿತ್ರದೊಳಗಡೆಯಿಂದ ಮೆಲ್ಲನೆದ್ದಳು ಅವಳು
ಮೊಗದೊಳಗೆ ತೃಪ್ತಿಗೆರೆ, ಏನೋ ಅನಂದ.
ಬಣ್ಣಬಟ್ಟಲ ಜೊತೆಗೆ, ಸೀರೆಯಂಚನು ಹಿಡಿದು
ನಡೆದು ಹೋದಳು ಆಕೆ ಎಳೆಬೆಳಕಿನೊಳಗೆ

ಮಿದುನೆಲದ ಮಣ್ಣಲ್ಲಿ ಪಾದಪದ್ಮಗಳ ಅಚ್ಚಿತ್ತು
ರಂಗವಲ್ಲಿಯ ಜೊತೆಗೆ ಸ್ಪರ್ಧೆಗಿಳಿದಂತೆ.
ದೂರಲೋಕದ ಸಿರಿಯು, ಎದ್ದು ಹೋದಂತಿತ್ತು
ಹೆಜ್ಜೆಗುರುತುಗಳನ್ನು ಇಲ್ಲೇ ಬಿಟ್ಟು.