ಮಂಗಳವಾರ, ಏಪ್ರಿಲ್ 10, 2007

ರಿಸಲ್ಟು ಬಂತು!

ಏಪ್ರಿಲ್ ತಿಂಗಳ ಬಿಸಿಲು ಶುರುವಾಗುತ್ತಿದ್ದ ಹಾಗೇ, ರಾಜನಿಗೂ ಬಿಸಿ ಏರ ತೊಡಗಿದೆ. ಪರೀಕ್ಷೆ ಮುಗಿದು ೨೦ ದಿನಗಳಾಗಿವೆ. ಇಷ್ಟು ದಿನ ಬಿಸಿಲಲ್ಲಿ ಕ್ರಿಕೆಟ್ ಆಡಿದ್ದಾಯ್ತು, ಮುಳ್ಳು ಹಣ್ಣು ಹುಡುಕಿದ್ದಾಯ್ತು. ೧೦ನೇ ತಾರೀಕಿಗೆ ರಿಸಲ್ಟು! ೫ನೇ ಕ್ಲಾಸಿಂದ ೬ನೇ ಕ್ಲಾಸಿಗೆ ದಾಟುವ ಉತ್ತರಾಯಣ ಪರ್ವ ಕಾಲ ಅಂದರೆ ಸುಮ್ಮನೇನಾ? ಅವನಿಗೆ ಗಣಿತ ಬಿಟ್ಟು ಮತ್ತೆಲ್ಲ ವಿಷಯಗಳಲ್ಲಿ ಪಾಸಾಗುವಷ್ಟು ಅಗಣಿತ ಪ್ರತಿಭೆ ಇದೆ! ಆದರೆ ಅದು ಮಾಷ್ಟ್ರಿಗೆ ಹೇಗೆ ಗೊತ್ತಾಗಬೇಕು ಪಾಪ?

ಅವನ ಮನೆಯಿಂದ ಮೂರನೆ ಮನೆ ಆಚೆಯಿರುವ ಪದ್ಮಿನಿ ಭಾಳಾ ಜಾಣ ಹುಡುಗಿಯಂತೆ, ಹಾಗಂತ ಅವನ ಅಪ್ಪ ಅಮ್ಮ ಯಾವಾಗಲೂ ಹೇಳುತ್ತಾರೆ. ಅವಳೆದುರಿಗೆ ಮರ್ಯಾದೆ ಉಳಿಸಿಕೊಂಡರೆ ಸಾಕಾಗಿದೆ ರಾಜನಿಗೆ. ಅವಳೂ ಹಾಗೇ, ಇವನ ಬಳಿ ಮೊದಲೇ ಸರಿಯಾಗಿ ಮಾತಾಡುವುದಿಲ್ಲ, ಇನ್ನು ಫೇಲಾಗಿ ಹೋದರಂತೂ ಮುಗಿದೇ ಹೋಯಿತು. ಪುಣ್ಯಕ್ಕೆ ಇವನ ಶಾಲೆಗೆ ಬರುವುದಿಲ್ಲವಾದ್ದರಿಂದ ಗಣಿತ ಟೀಚರ್ ೨ ದಿನಕ್ಕೊಮ್ಮೆಯಾದರೂ ಪೆಟ್ಟು ಕೊಡುವುದು ಗೊತ್ತಿಲ್ಲ ಅವಳಿಗೆ. ಆ ವಿಚಾರ ಅಪ್ಪ ಅಮ್ಮನಿಗೂ ಗೊತ್ತಿಲ್ಲ, ಅದು ಬೇರೆ ವಿಷ್ಯ.

ಇನ್ನು ರಾಜನ ಸ್ನೇಹಿತ ಗಡಣ- ಸುರೇಸ, ಸೊಳ್ಳೆ ಬತ್ತಿ ಹೆಸರಿನ ಮಾರ್ಟೀನು, ಶ್ರೀನ್ವಾಸ ಎಲ್ಲ ಇವನ ತರದವರೆ. ರಾಜನಿಗೆ ಗಣಿತ ಮಾತ್ರ ಹೆದರಿಕೆಯಾದರೆ ಮಾರ್ಟೀನಿಗೆ ಇಂಗ್ಲೀಷೂ ಬರದು!ಇಂಗ್ಲೀಷು ಹೆಸರಿಟ್ಟುಕೊಂಡ ಅವನಿಗೆ ಆ ಭಾಷೆಯೇ ಯಾಕೆ ಅರ್ಥವಾಗುವುದಿಲ್ಲ ಅಂತ ಸೋಜಿಗೆ ರಾಜ, ಸುರೇಸ ಎಲ್ಲರಿಗೂ.

ಎಪ್ರೀಲು ೮ನೇ ತಾರೀಕಿಂದು ಎಲ್ಲರೂ ಸೇರಿ ಸ್ರೀನ್ವಾಸನ ಮನೆ ಹಿತ್ತಲಿನ ಮಾವಿನ ಮರದ ಮೇಲೆ ಮಂತ್ರಾಲೋಚನೆ ಮಾಡಿದ್ದಾಗಿದೆ. ರಿಸಲ್ಟಿನ ದಿನ ಏನು ಮಾಡಬೇಕೂಂತ. ರಾಜ ತಾನು ಫೇಲಾಗಬಹುದು ಎನ್ನುವ ವಿಚಾರವನ್ನೇ ಅವರ ಮುಂದಿಟ್ಟಿಲ್ಲ, ಯಾಕಂದರೆ ಅಲ್ಲಿದ್ದವರಲ್ಲಿ ಅವನೇ ಬುದ್ಧಿವಂತ ಮತ್ತು ಆ ಗೌರವವನ್ನ ಹಾಗೇ ಕಾಪಾಡಿಕೊಳ್ಳುವ ಅನಿವಾರ್ಯತೆ ಬೇರೆ ಇದೆ. ಮಾರ್ಟೀನು ತಾನು ಖಂಡಿತಾ ಫೇಲಾಗುತ್ತೇನೆ ಅಂತ ಒಪ್ಪಿಕೊಂಡಿದ್ದಾನೆ. ಮುಂದೇನು ಮಾಡುವುದು ಅಂತ ಅವನಿಗೆ ಗೊತ್ತಿಲ್ಲವಂತೆ. ಸ್ರೀನ್ವಾಸ ತಾನು ವಿಜ್ಞಾನದಲ್ಲಿ ಬರಿ ೫೦ ಮಾರ್ಕಿದ್ದು ಬರೆದಿದ್ದೇನೆ ಅಂದ. ನೂರು ಮಾರ್ಕಿದ್ದು ಬರೆದ ತನಗೇ ೫೦ ಬರುವ ವಿಶ್ವಾಸವಿಲ್ಲ ,ಇನ್ನು ಅವನು ಹೇಗೆ ಪಾಸಾದಾನು?

"ಕ್ಲಾಸಿನಲ್ಲಿ ಕೃಷ್ಣ ಮಾಷ್ಟ್ರು ಫಲಿತಾಂಶ ಓದುವಾಗ ಸುಮ್ಮನೇ ಕುಳಿತುಕೊಳ್ಳಬೇಕೆಂದೂ, ಎಲ್ಲ ಮುಗಿದ ಮೇಲೆ ಏನು ಮಾಡುವುದು ಅಂತ ನೋಡಿದರಾಯ್ತೆಂದೂ" ನಿರ್ಧಾರ ಕೈಗೊಳ್ಳಲಾಯ್ತು. ಸತ್ಯಕ್ಕಾದರೆ ಈ ನಿರ್ಧಾರದ ಒಟ್ಟೂ ಅರ್ಥ ರಾಜನಿಗಾಗಿರಲಿಲ್ಲ. ಆಗಿಲ್ಲ ಅಂತ ಹೇಳುವ ಹಾಗೂ ಇಲ್ಲ. ಸುರೇಸ ಎಲ್ಲದಕ್ಕೂ ತಲೆ ಹಾಕುತ್ತಿದ್ದ. ಅವನ ಪಾಲಿಗೆ ತಾನು ೫ನೇ ಕ್ಲಾಸಿಗೆ ಬಂದದ್ದೇ ದೊಡ್ಡ ವಿಷಯವಾಗಿತ್ತು. ಅವನಪ್ಪ ಇನ್ನು ಅವನನ್ನ ಗದ್ದೆ ಹೂಡುವಾಗ ಕರೆದುಕೊಂಡು ಹೋಗುತ್ತಾರಂತೆ.

೧೦ನೇ ತಾರೀಕು ಬೆಳಗ್ಗೆ ರಾಜನಿಗೆ ಹೊಟ್ಟೆಯೆಲ್ಲ ಸಂಕಟ. ಅಮ್ಮ ಬೇಗನೆ ಎಬ್ಬಿಸಿ,ಕಾಪಿ ಕೊಟ್ಟು, "ಸ್ನಾನ ಮಾಡಿ ಬಾ, ದೇವರಿಗೆ ಕೈ ಮುಗಿ"ಎಂದೆಲ್ಲ ಏನೋ ಹೇಳುತ್ತಿದ್ದಾರೆ. ಎಲ್ಲ ಮಾತುಗಳು ಕಿವಿಯ ಪಕ್ಕದಿಂದ ಸಾಗಿ ಗೋಡೆಗೆ ಬಡಿಯುತ್ತಿರುವ ಸದ್ದು ಮಾತ್ರ ಕೇಳುತ್ತಿದೆ ರಾಜನಿಗೆ. ಅಪ್ಪ ಪೇಪರೋದುತ್ತಿರುವವರು,ಎದ್ದು ಬಂದು ೫೦ರ ನೋಟು ಕೊಟ್ಟು "ಬರುವಾಗ ಶೆಣೈ ಮಾಮನ ಅಂಗಡಿಯಿಂದ ಚಾಕ್ಲೇಟು ತಾ, ಎಲ್ಲರಿಗೂ ಕೊಡುವಿಯಂತೆ" ಅಂದಿದ್ದಾರೆ. ದೇವರೇ ನಾನು ಪಾಸಾಗುತ್ತೇನೆ ಅಂತ ತನಗೇ ವಿಶ್ವಾಸವಿಲ್ಲ , ಅಪ್ಪನಿಗೆ ಹೇಗೆ ಆ ವಿಶ್ವಾಸ ಬಂತು ಅನ್ನುವುದು ಅವನಿಗೆ ತಿಳಿಯುತ್ತಿಲ್ಲ!

ಕ್ಲಾಸಿಗೆ ಬಂದು ಕೂತಿದ್ದಾನೆ ರಾಜ , ಅವನ ಪಕ್ಕ ವಿಷ್ಣು. ಅವ್ನೋ , ಕ್ಲಾಸಿನ ೨ನೇ ರ್‍ಯಾಂಕು ಹುಡುಗ! ಆರಾಮಾಗಿ ಕೂತು ಹಲುಬುತ್ತಿದ್ದಾನೆ. ರಾಜನಿಗೆ ಯಾಕೋ ನಂಬರ್ ಟು ಬರುವ ಅನುಭವ ಬೇರೆ ಆಗುತ್ತಿದೆ. ಸುರೇಸ, ಮಾರ್ಟೀನು ಹಿಂದಿನ ಬೇಂಚಲ್ಲಿ ಕೂತಿದ್ದಾರೆ. ಕೃಷ್ಣ ಮಾಷ್ಟ್ರು ಇನ್ನು ಬಂದಿಲ್ಲ. ಪಕ್ಕದ ೪ನೇ ಕ್ಲಾಸಲ್ಲಿ ಅವರು ಮಾತಾಡುತ್ತಿರುವುದು ಕೇಳುತ್ತಿದೆ. ಸ್ರೀನ್ವಾಸ ಮುಂದಿನ ಬೆಂಚಲ್ಲಿ ಕೂತಿದ್ದಾನೆ, ತನ್ನ ಪುಣ್ಯ, ತಾನಿರುವುದು ೪ನೇ ಬೆಂಚು.

ಕೃಷ್ಣ ಮಾಸ್ತರು ಒಂದು ದೊಡ್ದ ಹಾಳೆ ಸಮೇತ ಕ್ಲಾಸಿಗೆ ಬಂದಿದ್ದಾರೆ. ರಾಜನಿಗೆ ಅವರು ಯಮನಂತೆ ಕಾಣುತ್ತಿದ್ದಾರೆ ಈಗ. "ನಾನು ಹೆಸರು ಹೇಳುವ ಹುಡುಗರೆಲ್ಲ ಎದ್ದು ಹೊರಗಡೆಗೆ ಹೋಗಬೇಕು, ಅವರೆಲ್ಲ ಪಾಸು, ಯಾರ ಹೆಸರು ಕರೆದಿಲ್ಲವೋ, ಅವರು ಫೇಲು" ಅಂತ ಅಂದು ಹಾಳೆ ಬಿಡಿಸಿದ್ದಾರೆ. ಮೊದಲ ಹೆಸರೇ ವಿಷ್ಣು! ಅವನು ಎದ್ದು ಹೋದ. ರಾಜನಿಗೆ ಇದ್ದ ಆಧಾರವೂ ತಪ್ಪಿ ಹೋಯಿತು.ಸ್ವಾತಿ, ರಕ್ಷಾ, ಪ್ರೇಮ.. ಎಲ್ಲ ಹುಡುಗಿಯರ ಹೆಸರುಗಳೇ..ಹಮ್.. ಗಣೇಶ, ಆನಂದ.. ಅಯ್ಯೋ, ತಾನು ಖಂಡಿತಾ ಫೇಲೆಂಬುದು ರಾಜನಿಗೆ ಮನವರಿಕೆಯಾಗಿ ಹೋಯಿತು!

ಅಷ್ಟು ಹೊತ್ತಿಗೆ "ರಾಜ.ವಿ" ಅನ್ನುವ ಹೆಸರು ಕೃಷ್ಣ ಮಾಸ್ತರ ಬಾಯಲ್ಲಿ ಬಂತು ! ರಾಜನಿಗೆಏನು ಮಾಡಬೇಕೆಂದೇ ತಿಳಿಯಲಿಲ್ಲ! ತಾನು ಪಾಸು.. ದೇವರೇ.. ಆದರೆ ಅವನಿಗೆ ಕೂತಲ್ಲಿಂದ ಏಳಲೇ ಆಗುತ್ತಿಲ್ಲ. ಹೇಗೋ ಕಷ್ಟ ಪಟ್ಟು ಎದ್ದು ಹೊರಗೆ ಬಂದು ಬಿಟ್ಟ. ಆಹ್, ಅವನಿಗೆ ಏನೂ ಅನಿಸುತ್ತಲೇ ಇರಲಿಲ್ಲ ಸ್ವಲ್ಪ ಹೊತ್ತು. ಮತ್ತೆ ಕಿರುಚಬೇಕೆನ್ನಿಸಿತು. ಎರಡು ನಿಮಿಷವಾಗಿಲ್ಲ ಸ್ರೀನ್ವಾಸ ಹೊರಗೆ ಬಂದ. ರಾಜನಿಗೆ ಈಗ ಮತ್ತೂ ಖುಷಿಯಾಯಿತು. ಆರನೇ ಕ್ಲಾಸಲ್ಲಿ ಇವನೂ ಇರುತ್ತಾನೆ ಹಾಗಾದರೆ ನನ್ನ ಜೊತೆಗೆ!. ಕಡೆತನಕವೂ ಬರದಿದ್ದವರು ಮಾರ್ಟೀನು ಮತ್ತು ಸುರೇಸ.

ತಾನು ಪಾಸಾದ ಖುಷಿಯೊಳಗೆ ರಾಜನಿಗೆ ಮಾರ್ಟೀನು ಮತ್ತು ಸುರೇಸ ನೆನಪಾಗಲಿಲ್ಲ. ಆದರೆ ಜೇಬಿನೊಳಗಿನ ಅಪ್ಪ ಕೊಟ್ಟಿದ್ದ ೫೦ ರೂಪಾಯಿಯ ನೋಟು ನೆನಪಾಗಿ, ಅವನ ಖುಷಿಯು ಇಮ್ಮಡಿಯಾಯಿತು.

10 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

nice Shreenidhi. Cikka hudugana kannalli result nodo prayatna tumba chennagi moodi bandide.

ಸಿಂಧು sindhu ಹೇಳಿದರು...

ಶ್ರೀನಿಧಿ.. ಏನ್ಬರೀಲಿ..
ಓದಿ ನನ್ನ ಖುಷಿ ಇಮ್ಮಡಿಯಾಗಿದೆ. ಮಾರ್ಟೀನು ಈಗ ಇಂಗ್ಲಿಷ್ ಮಾತಾಡ್ತಾನ? ರಾಜನ ಯೋಚನಾ ಪ್ರಪಂಚ, ಸುರೇಸ, ಅಪ್ಪನ ವಿಶ್ವಾಸ, ಫಲಿತಾಂಶದ ಘಳಿಗೆ ಎಲ್ಲ ಕಣ್ಮುಂದೆ ಕಟ್ಟಿದ ಚಿತ್ರ.
ಇದ್ಕಿದ್ದಂಗೆ ಈ ಸಲ ಮಾತ್ರ ಅದ್ಯಾಕೋ ನಾನು ಫೇಲೇ ಆಗಿರ್ತೀನಿ ಅಂತ ಪ್ರತೀ ಸಲದ ಫಲಿತಾಂಶದ ದಿನವೂ ಅಂದ್ಕೊಳ್ತಾ ಇದ್ದಿದ್ದು ನೆನಪಾಯಿತು.

ನಿಮ್ಮ ಎಲ್ಲ ಬರಹ ಓದುವಾಗ ನನಗೆ ಮಾರ್ಕ್ ಟ್ವೈನ್ ತುಂಬ ನೆನಪಾಗುತ್ತಾನೆ.

Parisarapremi ಹೇಳಿದರು...

shreenidhi katheyanu heLuvanendare kaliyuga dwaaparavaaguvudu.... :-)

Shiv ಹೇಳಿದರು...

ಶ್ರೀನಿಧಿ,

ಅದು ಯಾಕೋ ನಿಮ್ಮ ಆತ್ಮಚರಿತೆಯ ಒಂದು ಪುಟವೆನಿಸಿತು :)
ಸುಮ್ಮನೆ ತಮಾಷೆಗೆ ಹಾಗೆ ಹೇಳಿದೆ.

ಚೆನ್ನಾಗಿದೆ ! ರಿಸಲ್ಟು ಬರುವ ದಿನದ ನೆನಪುಗಳ ತಾಜ ಮಾಡಿದೀರಿ

Anju ಹೇಳಿದರು...

raashi cholo iddu.id ninde kathena ansthu:-) houda?

sinchana ಹೇಳಿದರು...

mast mast baraha... chikmakkala manasthithina thumba chennag bardideera.....

Archu ಹೇಳಿದರು...

ನಿನ್ನ ಬರಹಗಳು ಎಷ್ಟು ಚಂದ!!

ಶ್ರೀನಿಧಿ.ಡಿ.ಎಸ್ ಹೇಳಿದರು...

ಸಿರಿ,
ತ್ಯಾಂಕೂಸು:)

ಸಿಂಧು,

ಮಾರ್ಟೀನು ಈಗ ಬಸ್ ಕಂಡಕ್ಟರಂತೆ! ಮೊನ್ನೆ ಯಾರೋ ಸಿಕ್ಕಿದವ್ರು ಹೇಳಿದ್ರು!

ಮಾರ್ಕ್ ಟ್ವೈನಾ?! ಹೆದ್ರಿಕೆ ಆಗತ್ತೆ ಹೀಂಗೆಲ್ಲ ಹೇಳದ್ರೆ!

ಶ್ರೀನಿಧಿ.ಡಿ.ಎಸ್ ಹೇಳಿದರು...

ಅರುಣ್,
ಸ್ವಲ್ಪ ಹೆಚ್ಚಾಯ್ತು ಅನ್ಸಲ್ವಾ?:)

ಶಿವ್,
ಹಮ್, ಪುಟವೋ, ಪುಟದೊಂದು ಸಾಲೋ...

ಗೆಳತಿ, ಸಿಂಚನಾ,
ಅರ್ಚನಾ,

ಎಲ್ಲಾರ್ಗೂ ವಂದನೆಗಳು..

Sridhar Raju ಹೇಳಿದರು...

srinidhi avre..martin matte suresha nu pass maadisri..pleaseeeeeeeeeeeee... :-)

supplementary katsi aadru pass maadsi... :-)