ಬುಧವಾರ, ಏಪ್ರಿಲ್ 18, 2007

ಕಡೆಯ ಘಳಿಗೆ..

ಆ ಗುಡ್ಡದಾ ತುದಿಯ ಹೆಸರಿಲ್ಲದ ಮರದ,
ತುಂಡು ಗೆಲ್ಲೊಳಗೊಂದು ಹಳದಿ ಹಣ್ಣೆಲೆಯಿತ್ತು.
ಜೋರು ಗಾಳಿಗೆ ಮರವೊಮ್ಮೆ ತೂಗಲದು
ತೊಟ್ಟ ಬಂಧವ ಕಡಿದು, ನೆಲಕೆ ಬಿತ್ತು.

ಬಿದ್ದ ಎಲೆಗೇನೋ ನೋವು, ಚಡಪಡಿಕೆ ಜೊತೆಗೆ,
ಏನ ಮಾಡಿದೆ ತಾನಿಷ್ಟು ದಿನ, ತಿಳಿಯಲೇ ಇಲ್ಲ!
ಗುಂಪಿನೊಳಗಿದ್ದೆ, ತೊನೆದಾಡುತಲಿದ್ದೆ ,
ಎಲ್ಲರಂತೆಯೇ ಇದ್ದೆ, ಈಗ ಬುಡವೆ ಕಳಚಿತಲ್ಲ!

ಸಾಧನೆಯು ಶೂನ್ಯವೇ, ಬದುಕು ಮುಗಿವುದೆ ಈಗ?
ಯಾರಿಗಾದರು ನನ್ನ ನೆನಪು ಬರಬಹುದೆ?
ಎಲೆಯಾಗಿ ಹುಟ್ಟಿದ್ದೆ ತಪ್ಪಾಗಿ ಹೋಯಿತೇ
ದೈವ ಸೃಷ್ಟಿಯನು ನಾ ಪ್ರಶ್ನಿಸಲು ಬಹುದೆ?

ಹಣ್ಣಲೆಯು ಹಾಗಲ್ಲೆ ಕೊರಗುತಾ ಬಿದ್ದಿರಲು
ಬಂತೊಂದು ಪುಟ್ಟ ಹುಳ ಅದರ ಬಳಿಗೆ
ಎಲೆಯ ಮರುಗುವ ಕಾರಣವು ತಿಳಿಯುತಲಿ
ನಕ್ಕು ಸಮಾಧಾನಿಸಿತು, ತನ್ನ ಮಾತಿನಲಿ.

ನಿನ್ನ ನಿಲುಕಿನ ಕೆಲಸ ಮಾಡಿರುವೆ ನೀನು
ಮರದ ಹಸಿರಿನುಸಿರಲಿ ನಿನ್ನದೂ ಪಾಲಿತ್ತು,
ನೆಳಲ ತಂಪನು ಮರವು ನೀಡುತಿರುವಾಗಲ್ಲಿ,
ನಿನ್ನ ಮೈಯ್ಯಿಗು ಬಿಸಿಲ ಝಳವು ಸೋಕಿತ್ತು.

ಆ ಹಕ್ಕಿ ಗೂಡಿಗೆ, ನೀನಲ್ಲವೇ ತಳಪಾಯ,
ನಿನ್ನ ಮೇಲೆಯೇ ತಾನೆ ನಾನು ನಲಿದದ್ದು?
ಇದ್ದ ಜಾಗದೊಳಗೆಯೇ, ಇಷ್ಟೆಲ್ಲ ಮಾಡಿರುವೆ
ಸಾಕಯ್ಯ ಉಪಕಾರ ನೀನು ಮಾಡಿದ್ದು

ಆ ಸಣ್ಣ ಜಂತುವಿನ ಮಾತ ಕೇಳಿದಾ ಎಲೆಗೆ,
ಧನ್ಯವೆನಿಸಿತು ಬಾಳು, ಕಡೆಯ ಕ್ಷಣದೊಳಗೆ.
ಹಿತವೆನಿಸಿ ಆ ಘಳಿಗೆ, ಸುಮ್ಮಗೇ ಇದ್ದಿರಲು
ಗಾಳಿ ತೇಲಿಸಿತದನು, ಕಣಿವೆಯೊಳಗೆ.

13 ಕಾಮೆಂಟ್‌ಗಳು:

Prashanth Urala. G ಹೇಳಿದರು...

bahala chennagi varnisiddera, ondu eleya dugudavanna matte adara sarthaka jeevanavanna...

ಅನಾಮಧೇಯ ಹೇಳಿದರು...

ಬಹಳ ಚೆನ್ನಾಗಿದೆ ನಿಧಿ.

ಜೀವನದ ಸತ್ಯ ! ಕೋಟಿ ದುಡ್ಡು ಮಾಡುವುದು ಮಾತ್ರ ಸಾಧನೆಯಲ್ಲ. ನಮ್ಮ ಜೀವನದಲ್ಲಿ ನಾಲ್ಕು ಜನರಿಗೆ ಸಹಾಯವಾಗುವಂತೆ ಬದುಕಿದರೆ, ಕೊನೇಪಕ್ಷ ಯಾರಿಗೂ ತೊಂದರೆ ಮಾಡದಂತೆ ಬದುಕಿದರೆ ಅದೇ ಸಾರ್ಥಕ್ಯ ಬಾಳು ಎಂದು ನನ್ನ ಅನಿಸಿಕೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ
ನಮ್ಮದೇ ಆದ ಕೆಲವು ಸಂಬಂಧಗಳಿರುತ್ತವೆ.. ಎಲ್ಲದಕ್ಕೂ ನ್ಯಾಯ ಒದಗಿಸಿ ಬದುಕಿದರೆ ನಮ್ಮ ಜೀವನದ ಪ್ರತಿಯೊಂದು ಗಳಿಗೆ ಮತ್ತು ಮುಖ್ಯವಾಗಿ ಕಡೆಯ ಗಳಿಗೆ ಯು ತೃಪ್ತಿಕರವಾಗಿರಬಹುದು.

ಈ ಕವನವನ್ನು ಪತ್ರಿಕೆಗೆ ಕಳುಹಿಸಲು ವಿನಂತಿ ಮತ್ತು ಸಲಹೆ. !

-ವಿ

Shree ಹೇಳಿದರು...

'ನಮ್ಮ ನಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿಬೇಕು' 'ನಮ್ಮಿಂದ ಏನು ನಿರೀಕ್ಷೆಗಳಿರ್ತವೋ ಅವಕ್ಕೆ ನಿರಾಸೆಯಾಗಬಾರದು' ಅಂತ ನಮ್ ಬಾಸ್ ಹೇಳ್ತಿರ್ತಾರೆ... ಅದು ನೆನಪಾಯ್ತು. ಶ್ರೀನಿಧಿ, ಒಳ್ಳೊಳ್ಳೆ philosophy ಮನಮುಟ್ಟೋಥರ ಹೇಳ್ತೀಯ... keep it up!!

ಅನಾಮಧೇಯ ಹೇಳಿದರು...

ಮೊದಲ ಮೂರು stanza ವೋದುವಾಗ ಎಲೆ ತನ್ನ ಜೀವನವನ್ನು ಪ್ರಶ್ನಿಸಿಕೊಳ್ಳುತ್ತಿರುವಾಗಲೆ ಆತ್ಮವಿಮರ್ಶೆ ಶರುವಾಗುತ್ತೆ ಹೆದರಿಕೆಯಾಗುತ್ತೆ ನಾವು ಹೀಗೆ ಏನು ಮಾಡದೇ ಹೋಗಿಬಿಡುತ್ತಿವ ಅಂತ..
ಪುಟ್ಟ ಹುಳುವಿನ ಮಾತು ನಿಜವಾಗಲು ಅಮೃತ ಸಿಂಚನ. ಧೃತಿಗೆಟ್ಟ ಮನಸ್ಸಿಗೆ ಸಮಾಧಾನ.. carry on Shreeni.... will be expecting more good works 4m u

Archu ಹೇಳಿದರು...

ಶ್ರೀ..ವಾವ್ಹ್!! ಒಂದು ಸಣ್ಣ ಸಂಗತಿಯನ್ನು ಎಷ್ಟು ಚೆನ್ನಾಗಿ ಬರೆದಿದ್ದೀಯಾ!! ಗುಡ್ ಬೊಯ್!! :-)

Harsha Bhat ಹೇಳಿದರು...

Hwaa.

Ninna ella kavnadalli idu best kavana.... really superb..

ಸಿಂಧು sindhu ಹೇಳಿದರು...

ಚೆನ್ನಾಗಿದೆ ಶ್ರೀನಿಧಿ.. ವಿಷಯ ಪ್ರಾಶಸ್ತ್ಯದಷ್ಟೇ ಭಾವಪೂರ್ವಕ ಮಂಡನೆ ಮನಸೆಳೆಯುತ್ತದೆ. ಅಂದ ಹಾಗೆ ಲಾಲ್ ಬಾಗ್ ನ ಮರದ ನೆರಳಲ್ಲಿ ಸಿಕ್ಕಿದ ಸ್ಫೂರ್ತಿಯಾ? ;)
"ಹಸಿರಿನ ಬಣ್ದದ ಚಿಗುರೆಲೆ ನೋಡಿ ನಲಿದಾಡುವೆ ನೀನು, ಹಳದಿಯ ಬಣ್ಣದ ಹಣ್ಣೆಲೆ ನೋಡಿ ಹನಿಗೂಡುವೆ ನಾನು" ಅಂತ ಒಂದು ಕವಿತೆ.. ಯಾರು ಬರೆದಿದ್ದೋ ಮರೆತು ಹೋಗಿದೆ ನೀವು ಓದಿದ್ದೀರಾ?

ಶ್ರೀನಿಧಿ.ಡಿ.ಎಸ್ ಹೇಳಿದರು...

ಪ್ರಶಾಂತ್

ಧನ್ಯವಾದಗಳು, ಹೀಗೇ ಬಂದು ಹೋಗುತ್ತಿರಿ..

ವಿಕಾಸ,
"ಈ ಕವನವನ್ನು ಪತ್ರಿಕೆಗೆ ಕಳುಹಿಸಲು ವಿನಂತಿ ಮತ್ತು ಸಲಹೆ. "- ಯಾರ್ ಹಾಕ್ತಾರೋ ಮಾರಾಯ! :)
ನಿನ್ನ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಶ್ರೀ,
ನಿಮ್ ಬಾಸ್ ಹೇಳೋ ಮಾತು ಎಷ್ಟು ಸತ್ಯ ಅಲ್ವಾ? ನಿಮ್ ಮೆಚ್ಚುಗೆ ಮಾತಿಗೆ ಧನ್ಯ.

ಸಿರಿ,
ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರ್ಲಿ..

ಅರ್ಚನಾ,

ಥ್ಯಾಂಕ್ಸು:)

ಶ್ರೀನಿಧಿ.ಡಿ.ಎಸ್ ಹೇಳಿದರು...

ಹರ್ಷ,

ಹೌದನಾ ಮಾರಾಯ್ನೆ :)

ಸಿಂಧು,
ಲಾಲ್ ಬಾಗಿನ ಮರದ ನೆರಳೋ, ದಿನಾ ಓಡಾಡೋ ಬಸ್ಸಿನ ರಶ್ಶೊಳಗಡೆ ಹುಟ್ಟಿದ ಆಲೋಚನೆಯೋ.. ಏನೋ ಒಂದು:)

ಸತ್ಯವಾಗ್ಲೂ ನೆನ್ಪಾಗ್ತಾ ಇಲ್ಲಕ್ಕ! ಯಾರ್ ಬರ್ದಿದ್ದು? ಹುಡ್ಕ್ಬೇಕಾಯ್ತು!

Shiv ಹೇಳಿದರು...

ಶ್ರೀನಿಧಿ,

ಎಲೆಯ ಆತ್ಮ ವಿಮರ್ಶೆ ಎಲ್ಲೋ ಎದೆಯನು ತಟ್ಟುತ್ತೆ..ಒಂದು ಕ್ಷಣ ಹೌದು ಅನಿಸೋದು ನಿಜ..

ಆದರೆ ಮರುಕ್ಷಣದಲ್ಲೇ ಹುಳುದ ಬಾಯಿಯಲ್ಲಿ ಸಮಾಧಾನಿಸಿ, ಮನದ ಚಟಪಟಿಕೆಯನ್ನು ಕಡಿಮೆ ಮಾಡಿದೀರಾ..

ತುಂಬಾ ಸೊಗಸಾದ ಸಾಲುಗಳು

ಶ್ಯಾಮಾ ಹೇಳಿದರು...

ತುಂಬಾ ತುಂಬಾ ಚೆನ್ನಾಗಿದೆ...... ನಮ್ಮನ್ನು ಬೇರೆಯವರ ಜೊತೆ ಹೋಲಿಕೆ ಮಾಡಿಕೊಂಡು ಅವರು ಸಾಧಿಸಿದ್ದನ್ನು ನಾವು ಸಾಧಿಸಲು ಆಗಿಲ್ಲ ಹಾಗಾಗಿ ನಮ್ಮ ಸಾಧನೆ ಶೂನ್ಯ ಅಂತ ಅದೆಷ್ಟೋ ಸಾರಿ ಕೊರಗುತ್ತೇವೆ.. ಅದು ಖಂಡಿತ ತಪ್ಪು.. ನಮ್ಮ ನಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವುದೇ ಜೀವನ... ಆ ಜೀವನದ ಸತ್ಯವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಾ...ನಂಗೆ ತುಂಬಾನೆ ಇಷ್ಟ ಆಯ್ತು..

Lanabhat ಹೇಳಿದರು...

Sooooooooooooper Kavite
Macro kavite annoNa photography bhaasheyalli :D