ಸೋಮವಾರ, ಏಪ್ರಿಲ್ 23, 2007

ಮಳೆಯಲಿ ನೆನೆಯುವ ಮಜವೇ ಬೇರೆ...

ಮಳೆಯಲಿ ನೆನೆಯುವ ಮಜವೇ ಬೇರೆ, ಗಾಂಧಿಬಜಾರೊಳಗೆ!
ಅವಳಲ್ಲಿದ್ದರು ನೆನೆವಳು ಇಲ್ಲಿ ನನ್ನಯ ಜೊತೆ ಜೊತೆಗೇ.
ವಾಹನಸಾಲು ಓಡುತ್ತಿದ್ದರೂ, ಕೇಳದು ಅವುಗಳ ಶಬ್ದ,
ಮತ್ತೆ ಮತ್ತೆ ಮನದೊಳಗೆ, ಏನೇನೋ ಗುಣಲಬ್ಧ.

ಹೂವ ಮಾರುವ, ಹಣ್ಣ ಕೊಳ್ಳುವ ಎಲ್ಲರು ನೋಡಲು ಖುಷಿಯೇ.
ಹೊರಗಡೆಯೆಲ್ಲ ಒದ್ದೆಯಾದರೂ, ಮನವದು ಮಾತ್ರ ಬಿಸಿಯೇ.
ದೇವರ ಪೂಜೆಯ ಅಂಗಡಿಯೊಳಗೆ ಅರಸಿನ ಕುಂಕುಮ ಗೋಪುರವು
ಮಳೆಹನಿ ತಟ ಪಟ ಅನ್ನುತಲಿದ್ದರೆ, ನೆನಪಲಿ ಅವಳಾ ನೂಪುರವು.

ಯಾರಿಗು ಇಲ್ಲಿ ಆತುರವಿಲ್ಲ, ಮಳೆ ಹೊಡೆತದ ಭಯವಿಲ್ಲ,
ಏನಿವರೆಲ್ಲರು ಪ್ರೇಮಿಗಳೇನೇ?, ನನಗದು ತಿಳಿದಿಲ್ಲ.
ರಸ್ತೆಯಂಚಿನಾ ಹೋಟೇಲೊಳಗೆ ಕಾಫಿಯ ಪರಿಮಳವು,
ಯಾಕಿವಳಿಲ್ಲ ನನ್ನ ಜೊತೆ, ಸಣ್ಣಗೆ ಏಕೋ ತಳಮಳವು.

ಮರಸಾಲಿನ ಅಡಿ ನಡೆಯುತಲಿದ್ದರೆ, ನೀರ ಧಾರೆಯೊಳಗೆ
ಬರುವಳು ಅವಳೂ ನನ್ನ ಜತೆ, ನೆನಪ ದಾರಿಯೊಳಗೆ.
ಮಳೆಯಲಿ ನೆನೆಯುವ ಮಜವೇ ಬೇರೆ, ಗಾಂಧಿ ಬಜಾರೊಳಗೆ
ಪ್ರೀತಿಯೊಳಿದ್ದರೆ ಒಮ್ಮೆ ಬಂದು ಬಿಡಿ, ಮಳೆ ಕಳೆವುದರೊಳಗೆ!

9 ಕಾಮೆಂಟ್‌ಗಳು:

Parisarapremi ಹೇಳಿದರು...

ಇಪ್ಪತ್ನಾಲ್ಕು ವರ್ಷದಿಂದಲೂ ನೋಡ್ತಾ ಇದ್ದೀನಿ ಗಾಂಧಿ ಬಜಾರ್‍ನ. ಬೆಂಗಳೂರಿನ ಯಾವ ಜಾಗದಲ್ಲೂ ಅಷ್ಟು ಆನಂದ ಸಿಗಲ್ಲ. ಸತ್ತ ಮೇಲೆ ನನ್ನ ಆತ್ಮವೂ ಸಹ ಗಾಂಧಿ ಬಜಾರಿನಲ್ಲೇ ಅಲೆದಾಡುತ್ತಿರುತ್ತೆ.. :-)

ನಾನು ನೆನೀಲಿಲ್ಲವಲ್ಲಾ ಗಾಂಧಿ ಬಜಾರಿನ ಮಳೆಯಲ್ಲಿ ಮೊನ್ನೆ ಎಂಬ ಹೊಟ್ಟುರಿ.

ಎಲ್ಲಾ ಓಕೆ, ಆದರೆ "ಅವಳು" ಯಾಕೆ?? :-)

Shree ಹೇಳಿದರು...

Cool poem.. Nice, keep it up..!!

ಎಲ್ಲಾ ಬ್ಲಾಗಲ್ಲೂ ಮಳೆನೇ ಮಳೆ ಇನ್ನೆರಡು ತಿಂಗಳು ಅಲ್ವಾ? ಮಳೆ ಅಂದ್ರೆ ಭಾವನೆಗಳನ್ನ ಕೆದಕೋ ಮಾಯಾವಿ... ಬಹುಶ 'ಮುಂಗಾರು ಮಳೆ' ಸಿನಿಮಾ ಹಿಟ್ ಆಗಿದ್ರಲ್ಲಿ ಅರ್ಧ ಕ್ರೆಡಿಟ್ ಹೆಸರಿಗೆ ಕೊಡಬೇಕು, ನಾನಂತೂ ಅದ್ನ ನೋಡಕ್ಕೆ ಹೋಗಿದ್ದು ಹೆಸರು ಕೇಳಿಯೆ!!! :)

Sushrutha Dodderi ಹೇಳಿದರು...

ಬರಕ್ಕಾತಲ ಹಂಗರೆ.. ನೋಡನ, ಆದ್ರೆ ಇವತ್ತೇ ಬರ್ತಿ.. ಓ, ಯಾವ್ದುಕ್ಕೂ ಮಳೆ ಬರಕ್ಕಾತಲ.. ಅವಳ ನೆನಪು ಮಳೆಯಲ್ಲಿ ನೆಂದ್ರೇ ಚಂದ... ಹೌದು.. ... :)

Sushrutha Dodderi ಹೇಳಿದರು...

---forgot to mention: ಕವನ ಚೆನ್ನಾಗಿದೆ :)

ಅನಾಮಧೇಯ ಹೇಳಿದರು...

nimma avalu ee kavana vodidala??...vodiddre kandita vodde-mudde..
kavi hrudayakke yella premigalante kanisiddare ascharyavenilla...
Teresina mele kotkondu, maleli nenkondu, bisi bisi coffee kudita male henya ruciyannu savitaa...male ADBHUTA.....
male saddannu avala gejje saddige relete madirodu romantic...
carry onn ...hege varshadhareyagali.....

Sandeepa ಹೇಳಿದರು...

ಚೆನ್ನಾಗಿದೆ ಚೆನ್ನಾಗಿದೆ!!

ಬೆಳೆದ ಯೌವನ ಚಂದ,
ಮೊದಲ ಮಳೆ ಚೆಂದ... :)

ಮನಸ್ವಿನಿ ಹೇಳಿದರು...

ಎಲ್ಲರ ಬ್ಲಾಗಲ್ಲೂ ಮಳೆಗಾಲ ಶುರು ಆದ ಹಾಗಿದೆ!

ಗಾಂಧಿ ಬಜಾರಿನ ಮಳೆಯೆ ಹೀಗೆ ಇರಬೇಕಾದ್ರೆ, ಮಲೆನಾಡ ಮಳೆ ಹೇಗಿರಬೇಡ! :)

Shiv ಹೇಳಿದರು...

ಶ್ರೀನಿಧಿ,

ಮಳೆಯಲ್ಲಿ ನೆನೆಯೋದು ಒಂದು ಅನುಭವ..
ಅದು ಮಳೆಯಲ್ಲಿ ನಮಗೆ ಬೇಕಾದವರೊಂದಿಗೆ ನೆನಯುವುದು.....

ಗಾಂಧಿಬಜಾರ್ ಎಷ್ಟು ಚೆನ್ನಾಗಿ ಹಿಡಿದಿಟ್ಟಿದೀರಾ..

Preethi Shivanna ಹೇಳಿದರು...

Gandhi Bazar,indu tanna tana ulisikondu ..nammadenisuva jaga...Bahala chennagide Swamy :)