ಗುರುವಾರ, ಏಪ್ರಿಲ್ 05, 2007

ತೇಜಸ್ವಿ.....

ತೇಜಸ್ವಿ ಇನ್ನಿಲ್ಲವಂತೆ. ನಂಬುವುದು ಹೇಗೆ?

ಅವರ ಮಂದಣ್ಣ , ಕರಿಯಪ್ಪ, ನಾಯಿ ಕಿವಿ, ಪ್ರೊಫೆಸರ್ ಕರ್ವಾಲೋ, ಜುಗಾರಿ ಕ್ರಾಸಿನ ಸುರೇಶ,ಪ್ರೊಫೆಸರ್ ಗಂಗೂಲಿ, ಪ್ಯಾರ , ಲಕ್ಷ್ಮಣ, ಗಯ್ಯಾಳಿ ದಾನಮ್ಮಇವರೆಲ್ಲ ದಿನವೂ ಕಾಣುವಾಗ ಇವರನ್ನ ಸೃಷ್ಟಿಸಿದ ತೇಜಸ್ವಿ ಇಲ್ಲವೆಂದರೆ ನಂಬುವುದು ಹೇಗೆ?
ಮೊನ್ನೆ ಮೊನ್ನೆ ನಾನೇ ಆ ಮಂದಣ್ಣನ ಮದುವೆ ಹೋಗಿ ಬಂದಂತಿದೆ, ಜಗತ್ತನ್ನ ಮಿಲೇನಿಯಮ್ ಸೀರೀಸಿನ ಜೊತೆ, ನನ್ನಂತೆ ಎಷ್ಟೋ ಜನ ಸುತ್ತಿ ಬಂದಿದ್ದಾರೆ. ಮುಂದೆಲ್ಲಿ ಕರೆದೊಯ್ಯುತ್ತಾರೆ ಅಂತ ಕಾಯುತ್ತಿದ್ದ ನಮ್ಮನ್ನ ಬಿಟ್ಟು ಅವರೊಬ್ಬರೇ ಹೋದದ್ದು ಹೇಗೆ?

ಅವರ ತಬರನಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಅವನನ್ನ ಬಿಟ್ಟು ಅವರು ಹೊರಟದ್ದು ಹೇಗೆ?

ಪರಿಸರದ ಬಗ್ಗೆ ಸರಳವಾಗೂ ಮಾತಾಡಬಹುದು ಅಂತ ತೋರಿಸಿಕೊಟ್ಟ ತೇಜಸ್ವಿ, ಯಾರ ಸುದ್ದಿಗೂ ಬರದೇ ಅವರಪಾಡಿಗವರು ಕೂತು ಬರೆಯುತ್ತಿದ್ದ ತೇಜಸ್ವಿ, ಕಾಡಿನ ಬಗ್ಗೆ ನನ್ನಲ್ಲೊಂದು ಮೋಹ ಹುಟ್ಟಿಸಿದ ತೇಜಸ್ವಿ.. ಚಾರಣದ ಆಸಕ್ತಿ ಬೆಳೆಸಿದ ತೇಜಸ್ವಿ...

ಹೀಗೆ ಒಮ್ಮಿಂದೊಮ್ಮೆಗೇ ಎದ್ದು ಹೋಗಿಬಿಡಬಹುದಾ, ಆ ಮಾಯಾಲೋಕಕ್ಕೆ..

ನಾನು ಬಹಳ ಸಣ್ಣವನು ಅವರೆದುರು, ಆದರೆ ಅವರ ಕೃತಿಗಳ ಮೇಲೆ ಪ್ರೀತಿ ದೊಡ್ಡದಿತ್ತು.
ಹೀಗಾಗಬಾರದಿತ್ತು.....

ನನ್ನ ನಮನಗಳು, ಆ ಹಿರಿಯ ಚೇತನಕ್ಕೆ.....

ಅವರ ಪುಸ್ತಕಗಳನ್ನ ಮಕ್ಕಳಿಗೆ ಓದಲು ಕೊಡಿ, ದಯವಿಟ್ಟು. ಅದೇ ಅವರಿಗೆ ನಾವು ಸಲ್ಲಿಸಬಹುದಾದ ದೊಡ್ಡ ಶೃದ್ಧಾಂಜಲಿ.

5 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಸುತಕದ ಛಾಯೆಯಲಿ ಮಡುಗಟ್ಟಿದ ಮನಸುಗಳಿಗೆ......

ಹಾ!!! ನನಗಂತು ನಂಬಲಾಗದ ಕಟು ಸತ್ಯವಿದು , ನಮ್ಮೆಲರ ಮನೆಯ ಹಿರಿಯ ಪುರ್ಣಚಂದ್ರ ತೆಜಸ್ವಿ ಅವರು ಇನ್ನಿಲ್ಲ ಅನ್ನೊದು.
ನಮ್ಮೆಲ್ಲರ ಮನೆಯ ಹಿರಿಯನಾಗಿ ,ನಮ್ಮನ್ನು ಎಚ್ಚರಿಸುತ್ತಾ ತಪ್ಪು ಮಾಡಿದಾಗ ಗದರಿಸುತ್ತಾ . ಎಲ್ಲರನ್ನು ಹುರುದುಂಬಿಸುತ್ತಾ ಎಲ್ಲರನ್ನು ಬೆಳೆಸಿದ ಮಹಾನ್ ಜೀವಿ.......... ಇಷ್ಟು ಬೇಗ ಅಸ್ಥಂಗತ ನಾದ ಸೂರ್ಯ ಅನ್ನೊದು ನನ್ನ ಕಲ್ಪನೆಗು ನಿಲುಕದು.

ಬಾಳ ಹಾದಿಯಲಿ ಬಹುದಾದ ಸಾಧನೆಯ ಮಾಡಿ
ನಮ್ಮೆಲರನು ಒಂದು ಮಾಡಿ, ಬದುಕ ಪಾಟ ನೀಡಿ
ಎಲ್ಲ ಬಂದನಗಳ ಕಳಚಿ,ಎಲ್ಲರನು ಅಗಲಿ
ಎಲ್ಲಿಗೆ ನಡೆದೆ ಅಜ್ಜ...............

ನಿನ್ನ ಸೂರ್ಯಕಾಂತಿ ಪ್ರಖರಿಸುವುದು ಎಂದೆದು
ನೂರು ನೂರು ಜನುಮಕು, ಎಲ್ಲ ಯುಗಕು
ಮತ್ತೆ ಹುಟ್ತಿ ಬಾ ಅಜ್ಜ , ಈ ತಾಯಿ ಕಾದಿಹಳು
ನಿನ್ನ ಸೇವೆಗೆ ..........

ಮಹಾನ್ ಚೇತನಕ್ಕೆ ನೆಮ್ಮದಿ ಸಿಗಲಿ .......... ಸಾಗು ಅಜ್ಜ ಅಂನತದೆಡೆಗೆ

ಅವರ ಸಾಹಿತ್ಯ ಜಗದ ಮುಲೆ ಮೂಲೆ ಪಸರಿಸಲಿ .....

ಭಾರವಾದ ಹೃದಯದಿಂದ
ಅಮರ

Parisarapremi ಹೇಳಿದರು...

ನಿಜ.. ತೇಜಸ್ವಿ ಇರದಿದ್ದರೆ, ನಾನು ಚಾರಣಿಗನಾಗುತ್ತಿರಲಿಲ್ಲ.. ಓದುಗನಾಗುತ್ತಿರಲಿಲ್ಲ.. ತೇಜಸ್ವಿಯ ಬಗ್ಗೆ ನನ್ನ ಭಾವನೆಗಳು ನನ್ನ ಬ್ಲಾಗಿನಲ್ಲಿ...

http://speaktonature.blogspot.com/2007/04/blog-post.html

Lanabhat ಹೇಳಿದರು...

ಅವರ ಶೈಲಿ ನಾನು ಇಷ್ಟ ಪಡುವ ಒಂದು ಅಂಶ ..
ಅವರ ಪುಸ್ತಕಗಳನ್ನು ಕೈಯಲ್ಲಿ ಹಿಡಿದರೆ ಸಾಕು ಮುಗಿಸದೆ ಕೆಳಗಿಡಲು ಮನಸ್ಸೇ ಬರುವುದಿಲ್ಲ..
ಅವರ ನೆನಪುಗಳು ಬರವಣಿಗೆಗಳು ನಮ್ಮ ಜತೆಗೆ ಸದಾ ಕಾಲ ಇರಲಿ ಎಂದು ಹಾರೈಸೋಣ

Shiv ಹೇಳಿದರು...

ಶ್ರೀನಿಧಿಯವರೇ,

ಹೌದು ನಂಬುವುದು ಕಷ್ಟ..ಆದರೆ ಬೇರೆ ವಿಧಿಯಿಲ್ಲ..
ಅವರು ಹೋದೆಡೆಗೆ ಮತ್ತೆ ಒಂದು ಮಾಯಲೋಕ ಅವರು ಸೃಷ್ಟಿಸಿರಬಹುದೇ??

ನಮನಗಳು ಪೂರ್ಣಚಂದಿರನಿಗೆ..

ನನ್ನದೊಂದು ನಮನ ನನ್ನ ಬ್ಲಾಗ್‍ನಲ್ಲಿ ಇದೆ

Unknown ಹೇಳಿದರು...

houdhu. nijavaagiyu....... thejaswiyavarige nijavaada shriddanjali andre ide ansutte....
odhi yochisuva haage aaythu