ಗುರುವಾರ, ಫೆಬ್ರವರಿ 26, 2009
ರಾಧಾಸ್ವಗತ
ಎಲ್ಲಿಹನು ಯಾಕಿನ್ನು ಬಂದಿಲ್ಲವಲ್ಲ,
ನನ್ನ ಕಾಡುವುದವಗೆ ಸಂತಸದ ಕೆಲಸವು
ಉದ್ಧಾರವಾಗನಿವ ತುಂಟ ಗೊಲ್ಲ
ಅಲ್ಲೆಲ್ಲೋ ದೂರದಲಿ ಮುರುಳಿಗಾನದ ತಾನ
ಬರುತಿಹನೆ ಇತ್ತಕಡೆ ಗಿರಿಧಾರಿಯು?
ಮರಹೂವ ಹಾಸಿಗೆಯು,ಸ್ವಾಗತಕೆ ಸಿದ್ಧವಿದೆ
ಕಾತರದಿ ಕಾಯುತಿದೆ ವನದಾರಿಯು
ಘಳಿಗೆಗಳು ಕಳೆದರೂ, ಶ್ಯಾಮನಾ ಸುಳಿವಿಲ್ಲ
ನನಗೇತಕೋ ಇಂದು ಭ್ರಮೆಯಾಗಿದೆ
ಬಿದಿರ ಮೆಳೆಗಳ ಮಧ್ಯೆ ಗಾಳಿ ಸುಳಿದರು ಕೂಡ
ಮೋಹನನು ಕರೆದಂತೆ ಕೇಳಿಸುತಿದೆ
ಯಾವ ಗೋಪಿಕೆಯ ಜೊತೆ ಲಲ್ಲೆ ಹೊಡೆಯುತಲಿಹನೋ
ನನ್ನ ನೆನಪೇ ಇಲ್ಲ, ಕಳ್ಳನವನು
ಮತ್ತೆ ಮೆಲ್ಲನೆ ಬಂದು ನನ್ನ ಬಳಸುತ ನಿಂದು
ಏನೇನೋ ಕಥೆ ಹೇಳಿ ಮರುಳು ಮಾಡುವನು
ಗೋಪಾದಗಳ ಜೊತೆಗೆ ಗೋಪಾಲಾನ ಹೆಜ್ಜೆ
ಹುಡುಕುವುದದೆಂತು ಈ ನೀಲಮೊಗದವನ
ಯಾವ ಗಿರಿ ಕಂದರವೋ, ಹಸಿರ ಹಾಸಿನ ಬಯಲೋ,
ಇದ್ದಲ್ಲಿ ಇರಲಾರ, ಮಿಗದ ಚಲನ!
ಅಗೋ,ಅಲ್ಲಿ ಬಯಲೊಳಗೆ ನಿಂತಿಹನು ಚೆಲ್ವ ಸಖ
ಪುಟ್ಟ ಕರುವಿನ ಕುಣಿತ ಅವನ ಮುಂದೆ
ಸಂಜೆಗೆಂಪಾಗುತಿರೆ, ಬಾನುರಂಗೇರುತಿದೆ
ವನಮಾಲಿಯಾ ಹಿಂದೆ, ದನದ ಮಂದೆ
ಬುಧವಾರ, ಫೆಬ್ರವರಿ 04, 2009
ಚಾರಣ ಚರಣಗಳು..
"125 ರೂಪಾಯಿ" ಥಟ್ಟಂತ ಉತ್ತರ ಕೊಟ್ಟ. ಕಾಡು ದಾರಿ. ತರಗಲೆ ಸರಪರ ಸದ್ದು, ಬಿಟ್ಟರೆ ಹಿಂದೆಲ್ಲೋ ಬರುತ್ತಿರುವ ಸಂಗಡಿಗರ ದನಿ.
"ಸಾಕಾಗತ್ತನೋ ಸಂಬಳ" ಸುಮ್ಮನೆ ಕೇಳಿದೆ- ಅವನ ಕೈಲಿದ್ದ ಕಳ್ಳಭಟ್ಟಿಯ ಬಾಟಲು ನೋಡುತ್ತ. ಹುಂ, ಸಾಕಾಗುತ್ತದೆ, ಆದರೆ 100 ರೂಪಾಯಿ ಕುಡೀಯೋಕೆ ಬೇಕು".
"ಅರೇ, ನೂರು ರೂಪಾಯಿ ಕುಡಿಯೋಕೆ ಬೇಕು ಅಂತೀಯಲ್ಲೋ, ಮತ್ತೆ ಸಾಕಾಗೋದು ಹೇಗೆ ಮಾರಾಯ?"
ಅವನು ಸ್ವಲ್ಪ ಹೊತ್ತು ಮಾತಾಡದೇ ಹಾಗೇ ಮುಂದುವರಿಯುತ್ತಿದ್ದ. ನಾನು ಅವನ ಯಮವೇಗಕ್ಕೆ ನನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನ ಮಾಡುತ್ತ ಜೋರಾಗಿ ಹೆಜ್ಜೆ ಹಾಕಿದೆ.
ನಮಗೊಂದಿಷ್ಟು ಜನಕ್ಕೆ ಚಾರಣದ ಹುಚ್ಚು. ತಿಂಗಳಿಗೆ ಎರಡು ತಿಂಗಳಿಗೆ ಒಂದು ಬಾರಿಯಾದರೂ ಬೆಟ್ಟ-ಗುಡ್ಡ, ನದಿಕೊಳ್ಳ ಅಂತ ಓಡಾಡದಿದ್ದರೆ, ಉಂಡ ಅನ್ನ ಕರಗುವುದಿಲ್ಲ, ಸರಿ ನಿದ್ರೆ ಬರುವುದಿಲ್ಲ. ಹೀಗಾಗಿ, ಎಲ್ಲ ಮಾತಾಡಿಕೊಂಡು, ಎಂದಿನಂತೆ ಯಾವುದೋ ದೂರದೂರಿಗೆ, ಯಾವುದೋ ಬೆಟ್ಟ ಹತ್ತಲು ಹೋಗಿದ್ದೆವು. ಬೆಟ್ಟದ ಕೆಳಗಿನೂರಿನ ಇಬ್ಬರು ಯುವಕರು ನಮ್ಮ ಜೊತೆಗೆ ಬಂದಿದ್ದರು, ಗೈಡುಗಳಾಗಿ. ಐದಾರು ತಾಸು ನೆತ್ತಿಸುಡುವ ಬಿಸಿಲು ಮತ್ತು ಸುಸ್ತು. ಅವರಿಬ್ಬರು ಉತ್ಸಾಹ ತುಂಬದಿದ್ದರೆ, ನಾವ್ಯಾರು ಮೇಲೆ ಹತ್ತಲು ಸಾಧ್ಯವೇ ಇರಲಿಲ್ಲ.
ನನ್ನ ಜೊತೆಗೆ ಮಾತಾಡುತ್ತಿದ್ದವನ ಹೆಸರನ್ನು ರಾಜೀವ ಅಂತಿಟ್ಟುಕೊಳ್ಳಿ. ಮೂವತ್ತು ವರ್ಷವಿರಬಹುದು. ಚುರುಕು ನಡಿಗೆ, ತೇಜಸ್ವಿ ಕಾದಂಬರಿಯಿಂದ ಸಟಕ್ಕನೆ ಹೊರಗೆದ್ದು ಬಂದ ಹಾಗಿನವನು. ರಾತ್ರಿ ಕುಡಿಯದಿದ್ದರೆ ಆಗದು ಅಂತ, ಬೆಟ್ಟದ ಮತ್ತೊಂದು ತುದಿ ಇಳಿದು, 2-2 ತಾಸು ನಡೆದು ಕಳ್ಳಭಟ್ಟಿ ತಂದುಕೊಂಡವನು.
ರಾತ್ರಿಯಿಡೀ ಬೆಟ್ಟದ ಶಿಖರದಲ್ಲಿ ಕಳೆದು ಮಾರನೇ ದಿನ ಬೆಳಗ್ಗೆ ಅವರೋಹಣದಲ್ಲಿ ತೊಡಗಿದ್ದಾಗ ಈ ರಾಜೀವನ ಬಳಿ ಮಾತಿಗೆ ತೊಡಗಿದ್ದೆ. ಮೈ ಕೈ ನೋವು ನಮಗೆಲ್ಲ. ಈ ಯುವಕರಿಬ್ಬರು ಮಾತ್ರ ಗಟ್ಟಿಯಾಳುಗಳು. ಲವಲವಿಕೆಯಿಂದ ಕುಣಿಯುತ್ತ, ಆರಾಮಾಗಿ ಬರುತ್ತಿದ್ದರು ನಮ್ಮ ಜೊತೆ, ಕಳ್ಳಭಟ್ಟಿ ಕಾರಣವಿದ್ದರೂ ಇರಬಹುದು, ಬೇರೆ ವಿಚಾರ.
ರಾಜೀವನ ಬಳಿ ಮತ್ತೆ ಕೇಳಿದೆ, ನೂರು ರೂಪಾಯಿಯ ಖರ್ಚು ಕುಡೀಯೋಕೆ ಆದರೆ, ಹೊಟ್ಟೆ-ಬಟ್ಟೆಗೇನೋ ಅಂತ. ಅಯ್ಯ, ಅದೇನು ದೊಡ್ಡ ವಿಚಾರ ಅನ್ನುವ ಹಾಗೆ ಒಮ್ಮೆ ಹಿಂತಿರುಗಿ ನೋಡಿದವನೇ ತಾನು ಮತ್ತು ತನ್ನಂತವರು ಹೇಗೆ ಬದುಕುತ್ತಿದ್ದೇವೆ ಅನ್ನುವುದನ್ನು ವಿಸ್ತಾರವಾಗಿ ಹೇಳಿದ.
ಅದೇನೋ ಮರದ ಎಣ್ಣೆಯಂತೆ, ಕಿಲೋಗೆ 500 ರೂಪಾಯಿ, ವಾರದಲ್ಲಿ ಒಂದು ದಿನ ನಾಲಾರು ಜನ ಸೇರಿ ಕಾಡಲೆದು, ಎಣ್ಣೆಮರ ಹುಡುಕಿ, 3-4 ಕೇಜಿ ಎಣ್ಣೆ ಸಂಪಾದಿಸುತ್ತಾರಂತೆ,(ಕೊನೆಗೂ ಆ ಮರದ ಹೆಸರು ಹೇಳಲಿಲ್ಲ ಆಸಾಮಿ) ಇನ್ನು ಉಳಿದದಿನ ಧೂಪ, ಸೀಗೇಕಾಯಿ, ದಾಲ್ಚಿನ್ನಿ, ಜೇನು, ರಾಮಪತ್ರೆ- ಹೀಗೆ ಒಂದಲ್ಲ ಎರಡಲ್ಲ- ಕೇಜಿ 10ರಿಂದ ಹಿಡಿದು 300ರವರೆಗೆನ ಉತ್ಪನ್ನಗಳು ಕಾಡಲ್ಲೇ ಲಭ್ಯ. ಇವುಗಳನ್ನೆಲ್ಲ ಕಷ್ಟ ಪಟ್ಟು ಒಟ್ಟು ಮಾಡಿ ಮಾರಿದರೆ, ಆರಾಮಾಗಿ ಜೀವನ ಸಾಗಿಸಲು ಸಾಧ್ಯವಾದಷ್ಟು ದುಡ್ಡು ಗ್ಯಾರೆಂಟಿ. ಇವ್ಯಾವುದೂ ಇಲ್ಲದೇ ಹೋದರೆ, ದಿನಗೂಲಿ ಕೆಲಸ-125ರೂಪಾಯಿಗಳು.
ಹೇಗೆ ದುಡ್ಡು ಮಾಡಬೇಕೆಂಬುದನ್ನು ಚೆನ್ನಾಗಿ ಅರಿತಿರುವ ಆತನಿಗೆ, ಇಷ್ಟೆಲ್ಲ ಆದರೂ ಕಾಲದೇಶಗಳ ಬಗೆಗಿನ ಪರಿವೆಯೇ ಇರಲಿಲ್ಲ ಎಂಬುದು ನಮಗೆ ನಮ್ಮ ಪ್ರಯಾಣದ ಆರಂಭದಲ್ಲೇ ಗೊತ್ತಾಗಿತ್ತು. ಕಿಲೋಮೀಟರು ಎಂಬ ಮಾಪನದ ಅರಿವೇ ರಾಜೀವನಿಗೆ ಇರಲಿಲ್ಲ. ಹತ್ತಿರದ ದೊಡ್ಡ ಊರಿಗೆ 8 ರೂಪಾಯಿಯ ದೂರ, ಮತ್ತೂ ದೊಡ್ಡ ಪಟ್ಟಣಕ್ಕೆ 50 ರೂಪಾಯಿ ದೂರ!
ಜಗತ್ತಿನ ಇತರ ಯಾವುದೇ ಆಗುಹೋಗುಗಳ ಬಗೆಗಿನ ಚಿಂತೆ ರಾಜೀವನಿಗಾಗಲೀ, ಮತ್ತೊಬ್ಬನಿಗಾಗಲೀ ಅಗತ್ಯವೇ ಇರಲಿಲ್ಲ. ರಾಜೀವನ ಅಂದಾಜಲ್ಲಿ ಪ್ರಧಾನಮಂತ್ರಿ ಇನ್ನುಕೂಡ ವಾಜಪೇಯಿಯೇ. ನಾನು ಅವನನ್ನು ತಿದ್ದ ಹೊರಟರೂ, ಇರ್ಲಿ ಬಿಡಿ- ಯಾರಾದರೇನು ಅನ್ನುವ ಧಾಟಿಯ ಉತ್ತರ ಬಂತು.ಸುಮ್ಮನಾದೆ.
ಆ ಪುಟ್ಟ ಊರಿನಲ್ಲಿ ಬದುಕುವ ಅವರುಗಳಿಗೆ, ವಾರದಕೊನೆಯಲ್ಲಿ ಬೆಂಗಳೂರಿನಂತಹ ನಗರಗಳಿಂದ ಬರುವ ಬೆಟ್ಟ ಹತ್ತುವವರು, ಮನರಂಜನೆ ಮತ್ತು ಆದಾಯದ ಇನ್ನೊಂದು ಮೂಲವೂ ಹೌದು. ನಮಗೆ ಅವರ ಊರೆದುರಿನ ಬೆಟ್ಟ ಒಂದು ಚಾರಣಯೋಗ್ಯ ಸ್ಥಳ. ಅವರಿಗೋ, ಅದೊಂದಕ್ಕೆ ಬಿಟ್ಟು ಮತ್ತೆ ಉಳಿದೆಲ್ಲಕ್ಕೂ ಯೋಗ್ಯ. ಬ್ಯಾಗು ಹೊತ್ತು ಏದುಸಿರು ಬಿಡುತ್ತ ಸಾಗುವ ನಾವುಗಳು ಅವರ ಕಣ್ಣಿಗೆ ಪೆಕರಗಳು. ಏನೇ ಆದರೂ, ನಮ್ಮ ಜೊತೆ ನಗುನಗುತ್ತ, ಅದೂ ಇದೂ ಹರಟುತ್ತ, ನಾವು ಹೇಳುವ ನಗರದ ಕಥೆಗಳನ್ನು ಬೆರಗಿನಿಂದ ಕೇಳುತ್ತ ನಿಷ್ಕಲ್ಮಶ ನಗು ನಗುವ ಅವರುಗಳನ್ನ ನೋಡಿ ಹೊಟ್ಟೆಕಿಚ್ಚಾಯಿತು ನನಗೆ.
ಇತ್ತೀಚಿಗೆ ಪ್ರಾಮಾಣಿಕವಾಗಿ ನಗುವುದೂ ಮರೆತು ಹೋಗಿದೆಯಲ್ಲ!
ಭಾನುವಾರ, ಜನವರಿ 18, 2009
ಯಾವ ಮೋಹನ ಮುರಲಿ ಕರೆಯಿತೋ...
ಗೆಳೆಯನೊಬ್ಬ ಮಧ್ಯಾಹ್ನ ವಿಲ್ ಸ್ಮಿತ್ ನ ಸೆವೆನ್ ಪೌಂಡ್ ನೋಡುತ್ತ ಕೂತಿದ್ದಾಗ ರಾಜು ಅನಂತಸ್ವಾಮಿ ತೀರಿಕೊಂಡ ಸುದ್ದಿ ತಲುಪಿಸಿದ. ಕ್ಷಣ ಹೊತ್ತು ಮನಸ್ಸು ಪರದೆಯ ಮೇಲೆ ಓಡುತ್ತಿದ್ದ ಚಿತ್ರಗಳನ್ನಷ್ಟೇ ನೋಡುತ್ತಿತ್ತು. ಈ ಸಿನಿಮಾದಲ್ಲಿ ಆದಂತೆ ಯಾರಾದರೂ ರಾಜುಗೆ ಕಿಡ್ನಿ ದಾನ ಮಾಡಬಾರದಿತ್ತೇ ಅಂತ ಕ್ಷಣ ಅನ್ನಿಸಿದ್ದು ಸುಳ್ಳಲ್ಲ.
ಒಂದೂವರೆ ವರ್ಷದ ಹಿಂದೆ, ವಿದ್ಯಾರಣ್ಯ ಯುವಕ ಸಂಘದ ಗಣೇಶೋತ್ಸವದಲ್ಲಿ ತೀರಾ ಹೈರಾಣಾಗಿ ಹೋಗಿದ್ದ ರಾಜು, ನಿಂತುಕೊಳ್ಳಲೂ ಆಗದೆ, ಕೂರಲೂ ಆಗದೇ ಒದ್ದಾಡುತ್ತಿದ್ದರು. ಆವತ್ತು ಸುಶ್ರುತನಿಗೆ ಹೇಳಿದ್ದೆ, ಪ್ರಾಯಶ: ಇದು ರಾಜು ಕಡೆ ಕಾರ್ಯಕ್ರಮ ದೋಸ್ತಾ. ಇನ್ನು ಈ ಮನುಷ್ಯ ಹಾಡುವುದು ಡೌಟು.. ಆದರೆ ಆಮೇಲೆ ಸುಮಾರಿಗೆ ರಿಕವರ್ ಆಗಿದ್ದ ರಾಜು ಮತ್ತೆ ಚಿಗಿತುಕೊಂಡು ಹಳೇ ಉಮೇದಿನಿಂದಲೇ ಹಾಡಲು ತೊಡಗಿದ್ದರು. ಆದರೆ ಮೊದಲಿನ ಶಕ್ತಿ ಇಲ್ಲದ್ದು ಗೊತ್ತಾಗುತ್ತಿತ್ತು...
ನಾನು ಬಹುವಾಗಿ ಮೆಚ್ಚಿದ ಭಾವಗೀತೆಗಳ ಗಾಯಕ ರಾಜು ಅನಂತಸ್ವಾಮಿ. ನಾನು ಹೆಚ್ಚು "ಲೈವ್" ಕೇಳಿದ್ದು ಕೂಡ ರಾಜು ಅನಂತಸ್ವಾಮಿಯವರನ್ನೇ. ಬೆಂಗಳೂರಿಗೆ ಬಂದ ಮೇಲೆ ಏನಿಲ್ಲವೆಂದರೂ ಇಪ್ಪತ್ತಕ್ಕೂ ಹೆಚ್ಚು ಬಾರಿ ಇವರ ಕಾರ್ಯಕ್ರಮಗಳಿಗೆ ಹಾಜರಿ ಹಾಕಿದ್ದೆ. ರತ್ನನ ಪದಗಳು, ತಂದೆ ಸ್ವರ ಸಂಯೋಜಿಸಿದ ಎದೆ ತುಂಬಿ ಹಾಡುವೆನು.. ಬೇಂದ್ರೆಯವರ ಆವು ಈವಿನ.. ಇದನ್ನೆಲ್ಲ ಹೇಗೆ ಹಾಡುತ್ತಿದ್ದರು ರಾಜು! ವಿಚಿತ್ರ ಹಾಡುವ ಶೈಲಿ- ಥಟ್ ಅಂತ್ ಹಾಡು ನಿಲ್ಲಿಸಿಯೇ ಬಿಟ್ಟು ಅದನ್ನ ಮತ್ತೆ ಶುರು ಮಾಡಿ ನಗುವುದು.. ಇದನ್ನೆಲ್ಲ ಕೇವಲ ರಾಜು ಮಾತ್ರವೇ ಮಾಡಬಲ್ಲಂತದ್ದು.
ಹನುಮಂತ ನಗರ ಬಿಂಬದ ಅನಂತ ನಮನ ಕಾರ್ಯಕ್ರಮದಲ್ಲಿ ಸತತ ಒಂದು ವರ್ಷ ಪ್ರತಿ ತಿಂಗಳ ಒಂದು ಭಾನುವಾರ, ಹೊಸ ಗಾಯಕನೊಬ್ಬನ ಪರಿಚಯದ ವೇದಿಕೆಯಲ್ಲಿ, ರಾಜು ಪಕ್ಕ ಕೂತು ಹಾರ್ಮೋನಿಯಂ ಬಾರಿಸುತ್ತಿದ್ದರು. ಸಿಕ್ಕಾಪಟ್ಟೆ ಮೂಡು ಬಂದ ದಿನ ಕೋಳಿಕೇ ರಂಗನೋ, ನನ್ ಪುಟ್ನಂಜೀ ನೋ ಹಾಡುತ್ತಿದ್ದರು. ಯಾರಾದರೂ ಸಿಕ್ಕಾಪಟ್ಟೆ ಇಂತಾದ್ದೇ ಹಾಡು ಹಾಡಿ ಅಂತ ಕೋರಿದರೆ, ಖಂಡಿತವಾಗಲೂ ಆ ಹಾಡು ಹಾಡುವುದಿಲ್ಲ ಅಂತಲೇ ಲೆಕ್ಕ.
ಬಿಂಬದ ಕಾರ್ಯಕ್ರಮದಲ್ಲೇ ಒಂದು ದಿನ ಎ.ಎಸ್.ಮೂರ್ತಿ ಹೇಳಿದ್ದರು, "ದಿನಾ ಅಭಿಷೇಕ ಮಾಡಿಸುವಷ್ಟು ಬಾದಾಮಿ ಹಾಲು ಕೊಡಿಸ್ತೀನಿ ಮಾರಾಯ, ಪಾನಕ ಸೇವೆ ಬಿಡು"ಅಂತ. ಸುಮ್ನೆ ನಕ್ಕಿದ್ದರು ರಾಜು.
ನನಗೊಂದು ಆಸೆಯಿತ್ತು. ನಾನು ಬರೆದ ಕವನವೊಂದನ್ನು ರಾಜು ಅನಂತಸ್ವಾಮಿಯವರಿಗೆ ಕೊಟ್ಟು ಅವರ ರಾಗ ಸಂಯೋಜನೆ-ಧ್ವನಿಯಲ್ಲಿ ಆ ಹಾಡು ಕೇಳಬೇಕು.. ಆಸೆ... ಹಾಗೇ ಹೂತು ಹೋಯಿತು....ಬೃಂದಾವನ ಸೇರಿದ ಮಣ್ಣ ಕಣ್ಣಿನ ಜೊತೆಗೆ.
ಗುರುವಾರ, ಜನವರಿ 08, 2009
ಮೆಜೆಸ್ಟಿಕ್ ಮೋಸಗಳು...
ಇವತ್ತೂ ಊರಿಗೆ ಹೋಗಲು ಟಿಕೆಟ್ ಬುಕ್ ಮಾಡಿಲ್ಲದಿದ್ದರೆ ಮೆಜೆಸ್ಟಿಕ್ ನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವೇ ಗತಿ. ಇಲ್ಲದೇ ಹೋದರೆ ಆ ಕಡೆ ಹೋಗುವುದು ಕಡಿಮೆ. ಇತ್ತೀಚಿಗೆ ಏನೋ ಕಾರಣಕ್ಕಾಗಿ ಒಂದೆರಡು ತಾಸು ಮೆಜೆಸ್ಟಿಕ್ ಅಲೆಯುವ ಪರಿಸ್ಥಿತಿ ಬಂತು. ಮತ್ತು, ಹಳೆಯ ಅನುಭವಗಳೆಲ್ಲ ಮತ್ತೆ ಒಂದು ರೌಂಡ್ ರಿಪೀಟಾಯಿತು. ಮೆಜೆಸ್ಟಿಕ್ ಇನ್ನೂ ಹಾಗೇ ಇದೆ, ಮತ್ತು ಇನ್ನು ಮುಂದೂ ಹಾಗೇ ಇರುತ್ತದೆ ಎನ್ನುವುದನ್ನು ನೆನಪಿಸಲೆಂಬಂತೆ. ನನಗಾದ ಅನುಭವಗಳೆಲ್ಲ ನಿಮ್ಮಲ್ಲಿ ಹೆಚ್ಚಿನವರಿಗೆ ಆಗಿಯೇ ಇರುತ್ತದೆ. .
೧. ಸಂಜೆ ಹೊತ್ತು, ಮೆಜೆಸ್ಟಿಕ್ಕಿನಲ್ಲಿ ನೀವು ಸ್ವಲ್ಪ ಠಾಕುಠೀಕಾಗಿ ಡ್ರೆಸ್ ಮಾಡಿಕೊಂಡು ನಿಮ್ಮ ಪಾಡಿಗೆ ನೀವು ಹೋಗುತ್ತಿದ್ದರೆ, ಸಟಕ್ಕನೆ ಒಬ್ಬಾತ ಬಂದು ನಿಮ್ಮನ್ನ ಸ್ವಲ್ಪಬದಿಗೆ ಕರೆಯುತ್ತಾನೆ- ಕತ್ತಲಿನ ಕಡೆಗೆ. ಮೆಲ್ಲನೆ ಅತ್ತ ಇತ್ತ ನೋಡುತ್ತಾ, ಯಾರೂ ತನ್ನನ್ನು ನೋಡುತ್ತಿಲ್ಲ ಅನ್ನುವುದನ್ನು ಖಚಿತ ಪಡಿಸಿಕೊಂಡು ಒಂದು ವೆಲ್ವೆಟ್ ಬಟ್ಟೆಯಲ್ಲಿ ಸುತ್ತಿದ ಮಿರಿಮಿರಿ ಮಿಂಚುವ ಹೊಚ್ಚ ಹೊಸ ಕಪ್ಪುಕನ್ನಡಕ ತೆಗೆಯುತ್ತಾನೆ. ನೀವೂ ಕುತೂಹಲದಿಂದ ನೋಡಲಾರಂಭಿಸಿದರೆ- "ಸರ್, ನಾನು ಕನ್ನಡಕದ ಶೋರೂಮಲ್ಲಿ ಕೆಲಸ ಮಾಡ್ತಿದೀನಿ, ಈ ಕನ್ನಡಕ ಕದ್ದುಕೊಂಡು ಬಂದಿದೀನಿ, ಇದು ಪಕ್ಕಾ ಶೋರೂಮ್ ಪೀಸ್, ೨ ಸಾವಿರ ರೂಪಾಯಿ ಆಗತ್ತೆ, ನಿಮಗೆ ೫೦೦ಕ್ಕೆ ಕೊಡ್ತೀನಿ.. ನಂಗೇನೋ ಮನಿ ಅರ್ಜೆನ್ಸಿ ಇದೆ, ಅದಕ್ಕೆ ಹೀಗೆ ಮಾಡ್ಬೇಕಾಗಿದೆ" ಅನ್ನುತ್ತಾನೆ. ಜೊತೆಗೆ ವಿಶ್ವಾಸಾರ್ಹತೆಯ ಪ್ರತೀಕವಾಗಿ ಶೋರೂಮೊಂದರ ವಿಸಿಟಿಂಗ್ ಕಾರ್ಡನ್ನೂ ನಿಮಗೆ ತೋರಿಸುತ್ತಾನೆ. ನೀವು ನಿಮ್ಮ ಅದೃಷ್ಟಕ್ಕೆ ಖುಷಿ ಪಡುತ್ತ ಕನ್ನಡಕ ಕೊಂಡಿರೋ, ಅಷ್ಟೇ- ಮುಗಿಯಿತು. ಕಮ್ಮಿ ಎಂದರೂ ೪೦೦ ರೂಪಾಯಿ ಕಳೆದುಕೊಂಡಿರಿ ಅಂತ ಅರ್ಥ. ಇದೇ ತರ ಕಂಪನಿ ವಾಚುಗಳನ್ನು ಮಾರುವವರು ಕೂಡ ಸಿಗುತ್ತಾರೆ. "Rado ವಾಚು ಸರ್.. "ಮತ್ತೆ ಅದೇ ಹಳೇ ಕಥೆ..
೨. ನೀವು ನ್ಯಾಷನಲ್ ಮಾರ್ಕೆಟ್ ಕಡೆಗೋ ಮತ್ತೆಲ್ಲಿಗೋ ಅರ್ಜೆಂಟಾಗಿ ಹೋಗುತ್ತಿದ್ದೀರಿ... ಮಳೆ ಬೇರೆ ಬರುವ ಹಾಗಿದೆ. ಪಕ್ಕದಲ್ಲೊಬ್ಬ ಒಂದಿಷ್ಟು ಕಣ್ಣಿಗೆ ಕುಕ್ಕುವ ಬಣ್ಣದ ಜರ್ಕಿನ್ ಗಳನ್ನು ರಾಶಿ ಹಾಕಿಕೊಂಡು ೫೦ ಕ್ ಒಂದು ಅಂತ ಕಿರುಚತ್ತ ನಿಂತಿದ್ದಾನೆ. ಹೋಗಿ ನೋಡಿದರೆ ಆಕರ್ಷಕ ಬಣ್ಣಗಳ- ನೋಡಲೂ ಪರವಾಗಿಲ್ಲ ಅನ್ನಬಹುದಾದ ಜರ್ಕಿನ್ ಗಳು. ನಿಮ್ಮ ಬಳಿ ಮಳೆ ತಡೆದುಕೊಳ್ಳಲು ಏನೂ ಇಲ್ಲ ಬೇರೆ. ಆತ ನಿಮಗೆ ೪೦ಕ್ಕೇ ಕೊಡಲೂ ಸಿದ್ಧನಿದ್ದಾನೆ. ನಿಮಗೀಗ ಅದನ್ನು ಕೊಳ್ಳದೇ ಬೇರೆ ವಿಧಿಯೇ ಇಲ್ಲ. ಮನೆಗೆ ಹೋಗುವ ದಾರಿಯಲ್ಲಿ ಮಳೆ ಬಂದಿದ್ದೇ ಹೌದಾದರೆ, ನೀವು ಹಾಕಿಕೊಂಡಿದ್ದ ಶರ್ಟನ್ನು ಎಸೆಯಲು ಅಡ್ಡಿಯಿಲ್ಲ.
೩. ಹತ್ರುಪಾಯ್ ಸಾಕ್ಸ್ ಹತ್ರುಪಾಯ್ ಸಾಕ್ಸ್ ಅಂತ ಕೂಗುವವರು ಅಡಿಗಡಿಗೆ ಸಿಕ್ಕಾರು ನಿಮಗಿಲ್ಲಿ. ಅರೇ, ನೋಡೋಣ- ಟ್ರೈ ಮಾಡಿದರೆ ಹೇಗೆ ಅಂತ ಕೊಂಡೊಯ್ದರೆ, ಮೊದಲ ಒಗೆತಕ್ಕೇ ಸಾಕ್ಸು ಒಂದೋ ಮೊರದಗಲ, ಇಲ್ಲವೋ ಬೆರಳಗಲ.
೪. ಇಂದು ರಾತ್ರಿಯೇ ನಿಮಗೆ ತಿರುಪತಿಗೋ, ಹೈದರಾಬಾದ್ ಗೋ , ಮಂತ್ರಾಲಯಕ್ಕೋ ಹೋಗಬೇಕಿದೆ. ಟಿಕೆಟ್ ಬುಕ್ ಆಗಿಲ್ಲ. ಮೆಜೆಸ್ಟಿಕ್ಕಿಗೆ ಹೋದರೆ ಸೀಟು ಸಿಗತ್ತೆ ಅಂತ ಯಾರೋ ಹೇಳುತ್ತಾರೆ. ಸರಕಾರೀ ಕೆ.ಎಸ್.ಆರ್.ಟಿ.ಸಿ ಬಗ್ಗೆ ನಿಮಗೆ ಒಳ್ಳೇ ಅಭಿಪ್ರಾಯವಿಲ್ಲ. ಖಾಸಗಿ ಟೂರಿಸ್ಟ್ ಬಸ್ಸುಗಳು ಸಿಗುವಲ್ಲಿಗೆ ಹೋಗುತ್ತೀರಿ. ನೀವು ಅಲ್ಲಿಗೆ ಹೋಗುತ್ತಿದ್ದ ಹಾಗೆ, "ಎಲ್ಲಿಗೆ ಸಾರ್, ಎಲ್ಲಿಗೆ ಮೇಡಮ್, ಎಷ್ಟ್ ಸೀಟ್ ಬೇಕು.. ಅಂತೆಲ್ಲ ಉಪಚಾರ ಮಾಡಿ ತಮ್ಮ ಕಿಷ್ಕಿಂದೆ ಆಫೀಸೊಳಗೆ ಕರೆದು, ತಮ್ಮ ಬಸ್ಸಿನ ಚಿತ್ರ ತೋರಿಸಿ, ಅವುಗಳ ಸುಖಾಸನಗಳ ಬಗ್ಗೆ ವಿವರಿಸಿ, ನಿಮಗೆ ಇದಕ್ಕೂ ಐಷಾರಾಮಿ ವ್ಯವಸ್ಥೆ ಮತ್ತೆಲ್ಲೂ ಸಿಗಲಾರದೆಂಬ ಅಶಾಭಾವನೆ ಮೂಡಿಸಿ, ಇನ್ನೇನು ಬಸ್ ಬರತ್ತೆ, ಹತ್ತಿಕೊಳ್ಳಿ ಅಂತ ರಸ್ತೆಗೆ ತಂದು ಬಿಡುತ್ತಾರೆ. ನೀವು ಟಿಕೆಟಿನ ಹಣ ಕೊಂಚ ದುಬಾರಿ ಅನ್ನಿಸಿದರೂ ಪಾವತಿಸಿ , ಬೆಳತನಕ ಹಾಯಾಗಿ ನಿದ್ರಿಸುವ ಕನಸು ಕಾಣುತ್ತ ಬಂದ ಬಸ್ಸು ಹತ್ತಿಕೊಂಡರೆ, ಅದೊಂದು ಸಾಮಾನ್ಯ - ಸೆಮಿ ಲಕ್ಷುರಿ ಬಸ್ಸು. ಕೇಳಿದರೆ, ಲಾಸ್ಟ್ ಮೊಮೆಂಟ್ ಗೆ ಆ ಬಸ್ಸು ಹಾಳಾಯ್ತು, ಸೋ ಈ ಬಸ್ ಬಂದಿದೆ ಅಂತೆಲ್ಲ ಕತೆ ಹೇಳಿ- ಬೆಳಗಾಗುವುದರೊಳಗೆ ತಿಗಣೆ ಕಡಿತ ಉಚಿತ ಮತ್ತು ಬೆನ್ನುನೋವು ಖಚಿತ.
ಎಲ್ಲರಿಗೂ ಇಂತಹ ಅನುಭವಗಳು ಆಗ್ಲೇಬೇಕು ಅಂತೇನೂ ಇಲ್ಲ.. ಎಲ್ಲ ನಿಮ್ಮ ನಿಮ್ಮ ಪುಣ್ಯಗಳ ಮೇಲೆ ಅವಲಂಬಿತ :)
ಬುಧವಾರ, ಜನವರಿ 07, 2009
ದಕ್ಷಿಣ ಬೆಂಗಳೂರಿನ ಆಹಾರ ಕೇಂದ್ರಗಳು
ನಾನು ಕಳೆದ ಮೂರು ವರುಷಗಳಿಂದ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರೋದ್ರಿಂದ, ಇಲ್ಲಿನ ಹಲವು ಹೋಟೇಲುಗಳ ಮೇಲೆ ನಂಗೆ ಋಣ ಇದೆ! ಪಾಪ, ಹೊತ್ತು ಹೊತ್ತಿಗೆ ನನ್ನಂತಹವರಿಗೆ ಬೇಕು ಬೇಕಾದ್ದನ್ನ ಮಾಡಿ ಹಾಕುತ್ತಿವೆ, ಈ ಹೋಟೇಲುಗಳು.
ಹಾಗಾಗಿ ಇಲ್ಲಿನ ವಿಶೇಷಗಳ ಕುರಿತ ಮಾಹಿತಿಯನ್ನ ನಿಮ್ಗೆ ಕೊಡೋಣ ಅನ್ನಿಸಿತು.
ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಎಸ್.ಎಲ್.ವಿ:
ಬನಶಂಕರಿ ಬಿ.ಡಿ.ಎ ಕಾಂಪ್ಲೆಕ್ಸ್ ನಿಂದ ಸ್ವಲ್ಪ ಮುಂದೆ ಬಂದ್ರೆ, ಈ ಪುಟ್ಟ ಹೋಟೇಲ್ ಸಿಗತ್ತೆ. ಇಲ್ಲಿನ ಸ್ಪೆಷಲ್ಲ್- ಇಡ್ಲಿ,ವಡೆ ಮತ್ತು ಚಟ್ನಿ. ಬೆಳಗ್ಗಿಂದ ಸಂಜೆ ತನಕಾ ಎಷ್ಟು ಹೊತ್ತಿಗೆ ಬಂದ್ರೂ, ಇಡ್ಲಿ ವಡೆ ಲಭ್ಯ. ಇಲ್ಲಿನ ಮಸಾಲೆ ವಡೇ ಕೂಡ ಚೆನ್ನಾಗಿದೆ. ಈ ಹೋಟೆಲು ಸದಾ ಜನರಿಂದ ತುಂಬಿ ತುಳುಕುತ್ತಿದ್ದಂತೆ ಅನ್ನಿಸಿದರೂ, ಕ್ವಿಕ್ ಸರ್ವೀಸು ಇರೋ ಕಾರಣ, ತೊಂದರೆಯಿಲ್ಲ. ಈ ಕಡೆ ಏನಾದ್ರೂ ಬಂದ್ರೆ, ಖಂಡಿತಾ ಟ್ರೈ ಮಾಡಿ- ಹೊಟ್ಟೆ ತುಂಬಿದ್ದರೂ ತೊಂದರೆಯಿಲ್ಲ.
ಗಾಂಧಿ ಬಜಾರ್ ಮಹಾಲಕ್ಷ್ಮೀ ಟಿಫಿನ್ ರೂಮ್
ಈ ಹೋಟೇಲು ನಮ್ಮ ಪ್ರಣತಿ ತಂಡದ ಒಂಥರಾ ಅಫೀಷಿಯಲ್ ಮೀಟಿಂಗ್ ಪ್ಲೇಸು. ಗಾಂಧೀ ಬಜಾರು ಸರ್ಕಲ್ನಲ್ಲಿ ಎಡಕ್ಕೆ ಒಂದು ೧೦೦ ಮೀಟರ್ ದೂರ ಹೋದ್ರೆ ಈ ಹೋಟೆಲ್ ಸಿಗತ್ತೆ. ಇಲ್ಲಿನ ಖಾಲಿ ದೋಸೆ ಮತ್ತು ಚಟ್ನಿಯ ರುಚಿ, ಅದ್ಭುತ. ಜೊತೆಗೆ ಕಾಫಿ ಕೂಡ. ಆರಾಮಾಗಿ ಕೂತು ತಿನ್ನಬಹುದಾದ ವ್ಯವಸ್ಥೆ, ಇಲ್ಲಿನ ಪ್ಲಸ್ ಪಾಯಿಂಟು.
ಪುಳಿಯೋಗರೆ ಪಾಯಿಂಟ್- ಡಿ.ವಿ.ಜಿ ರೋಡ್ ಬಸವನಗುಡಿ
ಕಹಳೆಬಂಡೆ ಪಾರ್ಕ್ ಪಕ್ಕದಲ್ಲೇ ಇರುವ ಈ ಹೋಟೆಲ್ ಗೆ, ಡಿ.ವಿ.ಜಿ ರೋಡ್ ನಲ್ಲಿ ಸ್ವಲ್ಪ ದೂರ ಬಂದು ಎಡಗಡೆ ರೋಡಲ್ಲಿ ಬರಬೇಕು. ಹೆಸರೇ ಹೇಳುವ ಹಾಗೆ ಈ ಹೋಟೆಲ್, ಪುಳಿಯೋಗರೆ-ಮೊಸರಿಗೆ ಫೇಮಸ್ಸು. ಜೊತೆಗೆ ಇಲ್ಲಿನ ಸ್ವೀಟ್ ಪೊಂಗಲ್ ಕೂಡ ಸೂಪರ್ರು. ಚಿತ್ರಾನ್ನ, ಬಿಸಿಬೇಳೆ ಬಾತ್ ಕೂಡ ಚೆನ್ನಾಗಿರತ್ತೆ.
ದಾವಣಗೆರೆ ಬೆಣ್ಣೆ ದೋಸೆ-ಎನ್.ಆರ್.ಕಾಲೊನಿ
ನರಸಿಂಹ ರಾಜ ಕಾಲೋನಿಯ, ನೆಟ್ಟಕಲ್ಲಪ್ಪ ಬಸ್ ಸ್ಟ್ಯಾಂಡ್ ನ ಸಮೀಪವೇ ಇರುವ ಒಂದು ಪುಟ್ಟ ದರ್ಶಿನಿ ಶ್ರೀ ಗುರು ಕೊಟ್ಟೂರೇಶ್ವರ ದಾವಣಗೆರೆ ಬೆಣ್ಣೇ ದೋಸೆ ಹೋಟೇಲು. ಇಲ್ಲಿನ ಬೆಣ್ಣೆ ದೋಸೆ, ಬೆಣ್ಣೇ ಖಾಲಿ , ಓಪನ್ ದೋಸೆ, ಪಡ್ಡು ಎಲ್ಲವೂ ಸಖತ್! ತಿಂದು ಕೈತೊಳೆದ ಮೇಲೂ ಅದರ ಘಮ ಹಾಂಗೇ ಇರತ್ತೆ! ಸಂಜೆ ಹೊತ್ತು ಇಲ್ಲಿಗೆ ಬಂದರೆ ಮಂಡಕ್ಕಿ ಒಗ್ಗರಣೆ ಮತ್ತು ಹಲಸಿಂದಿ ವಡೆ ತಿಂದು ನೋಡಿ, ಆಮೇಲೆ ಹೇಳಿ. ಫುಟ್ ಪಾತ್ ನಲ್ಲೇ ನಿಂತುಕೊಂಡು ತಿನ್ನಬೇಕಾಗಿರೋದೊಂದೇ ಮೈನಸ್ ಪಾಯಿಂಟ್- ಅದೇನ್ ಸಮಸ್ಯೆ ಆಗಲ್ಲ ಬಿಡಿ.
ಯುಡಿ ಅಥವಾ ಉಪಹಾರ ದರ್ಶಿನಿ- ನೆಟ್ಕಲ್ಲಪ್ಪ ಸರ್ಕಲ್
ದಾ.ಬೇ.ದೋ ಹೋಟೇಲ್ ಎದುರಿಗೆ ನಿಲ್ಲೋಕೂ ಜಾಗ ಇಲ್ಲದಷ್ಟು ರಶ್ ಇದೆ ಅಂತಿಟ್ಟುಕೊಳ್ಳಿ. ಹಾಂಗೇ ಒಂದು ಸ್ವಲ್ಪ ಮುಂದೆ ಬಂದು ಡಿ.ವಿ.ಜಿ. ರೋಡ್ ಕಡೇ ಹೊರಳಿದರೆ ಅಲ್ಲಿ ಇನ್ನೊಂದು ರುಚ್ ರುಚಿಯಾದ್ ತಿಂಡಿ ಸಿಗೋ ಉಪಹಾರ ದರ್ಶಿನಿ ಇದೆ. ಇಲ್ಲಿನ ರವಾ ದೋಸೆ ಫೇಮಸ್ಸು.
ಹಳ್ಳಿ ತಿಂಡಿ, ಆಶ್ರಮ ಸರ್ಕಲ್
ಹೆಸರೇ ಹೇಳುವ ಹಾಗೆ ಹಳ್ಳಿ ತಿಂಡಿ- ಪತ್ರೊಡೆ, ಅಕ್ಕಿರೊಟ್ಟಿ, ಹಲಸಿನ ಹಣ್ಣಿನ ಕಡುಬು(ಸೀಸನಲ್ ಮತ್ತೆ!), ಸುಕ್ಕಿನುಂಡೆ, ಹಾಲ್ಬಾಯಿ, ಒಂದಾ ಎರಡಾ... ಇಲ್ಲಿನ ಬನ್ಸ್ ನ ರುಚಿ ಇಡೀ ಬೆಂಗಳೂರಲ್ಲಿ ಎಲ್ಲೂ ಸಿಗದು. ದೊಡ್ಡ ಗಣಪತಿ ದೇವಸ್ಥಾನದ ಸಮೀಪವೇ ಇದೆ ಈ ಹೋಟೆಲು.
ಎಸ್.ಎಲ್.ವಿ. ಆಶ್ರಮ
ಆಶ್ರಮ ಸರ್ಕಲ್ಲಿನಲಿರುವ ಈ ಹೋಟೇಲಿನ ಇಡ್ಲಿವಡೆ ಸಾಂಬಾರು ಸಖತ್! ಕಾಪೀನೂ ಅಷ್ಟೆ.
ಕೂಲ್ ಕಾರ್ನರ್- ಜೈನ್ ಕಾಲೇಜ್ ಹತ್ರ.
ಇಲ್ಲಿನ ಅಕ್ಕಿರೊಟ್ಟಿ ಸೂಪರ್ ಟೇಸ್ಟ್. ಜ್ಯೂಸ್ ಗಳೂ ಚೆನ್ನಾಗಿರುತ್ತವೆ. .
ಇವುಗಳನ್ನು ಬಿಟ್ಟರೆ ಚಾಮರಾಜಪೇಟೆಯ ಬ್ರಾಹ್ಮಿನ್ಸ್ ಕೆಫೆ, ಎನ್.ಆರ್ ಕಾಲನಿಯ ಐಯರ್ಸ್ ಮೆಸ್ಸು, ಮನೆಊಟ, ವಿ.ವಿ ಪುರಂ ನ ಫುಡ್ ಸ್ಟ್ರೀಟು... ಆಹಾರಪ್ರಿಯರಿಗೆ ಇನ್ನೊಂದಿಷ್ಟು ಉತ್ತಮ ಜಾಗಗಳು.
ಎಲ್ಲರಿಗೂ ಶುಭವಾಗಲಿ:)
ನಾರ್ತ್ ಬೆಂಗಳೂರಿನ ಬೆಸ್ಟ್ ಹೋಟೇಲುಗಳು
ಮಂಗಳವಾರ, ಡಿಸೆಂಬರ್ 23, 2008
ಹ್ಯಾಪಿ ಕ್ರಿಸ್ ಮಸ್!
ಅಕೆ ಬರೆಯಹೊರಟಿದ್ದು ಎಂದಿಗೂ ಕಳೆದುಹೋಗಬಾರದ ಕಥೆಗಳನ್ನು. ಅವಳ ಜೀವನಾನುಭವಗಳು ಎಂದಿಗೂ ಮರೆತು ಹೋಗಲಾರದಂತಹವಾಗಿದ್ದವು.ಹಾಗಾಗಿಯೇ ಅವಳು ತಾನು ಕಂಡ- ಅನುಭವಿಸಿದನ್ನು ಕತೆಗಳ ರೂಪದಲ್ಲಿ ಮಕ್ಕಳಿಗಾಗಿ ಪ್ರೀತಿಯಿಂದ ಬರೆದಳು. ಮತ್ತು ಅವು ಅವಳಿಗೇ ಅಚ್ಚರಿ ತರುವಷ್ಟು ಬೇಗ ಜಗತ್ ಪ್ರಸಿದ್ಧವಾಗಿಬಿಟ್ಟವು. ಜಗತ್ತಿನ 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾದವು ಮತ್ತು ಇಂದಿಗೂ ಅನುವಾದಗೊಳ್ಳುತ್ತಲೇ ಇವೆ. ಆಕೆಯ ಹೆಸರು ಲಾರಾ ಇಂಗಲ್ಸ್ ವೈಲ್ಡರ್ ಮತ್ತು ಅವಳು ಬರೆದಿದ್ದು,"ಲಿಟಲ್ ಹೌಸ್"- ಕಥಾ ಸರಣಿಯನ್ನು.
ಲಾರಾ ಹುಟ್ಟಿದ್ದು 1867ರಲ್ಲಿ, ಅಮೆರಿಕದಲ್ಲಿ. ಅಕೆಯ ಬಾಲ್ಯ ಅಮೆರಿಕದ - ಪ್ರಾಂತದ ಕಾಡುಗಳ ಮಧ್ಯದ ಮನೆಯಲ್ಲಿ ಕಳೆಯಿತು. ಅಲ್ಲಿನ ಜನಪದ ಸಂಸ್ಕೃತಿ ಮತ್ತು ಕಿನ್ನರ ಲೋಕಕ್ಕೆ ಸಮ ಎನಿಸುವ ವಾತಾವರಣದಲ್ಲಿ ಲಾರಾ ಬೆಳೆದಳು.ಮುಂದೆ, ಬಹಳ ಕಾಲ ಕಳೆದ ಮೇಲೆ, ಅಮೆರಿಕ ಅಭಿವೃದ್ಧಿಯ ಭರದಲ್ಲಿ ತನ್ನ ಹಳೆಯದೆಲ್ಲವನ್ನು ಕಳೆದುಕೊಂಡು ಸಾಗುತ್ತಿದ್ದಾಗ ಆಕೆಗೆ ತನ್ನ ಬಾಲ್ಯದ ಸೊಗಸನ್ನು ಇಂದಿನ ಪೀಳಿಗೆಯ ಮಕ್ಕಳ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು.
ಹೀಗಾಗಿ, ಮೊದಲಿಗೆ, 1932ರಲ್ಲಿ, ಲಿಟಲ್ ಹೌಸ್ ಇನ್ ದಿ ಬಿಗ್ ವುಡ್ಸ್- ಅನ್ನುವ ಮಕ್ಕಳ ಕಾದಂಬರಿ ಬರೆದಳು. 1870 ಮತ್ತು 1880 ದಶಕದ ಅಮೇರಿಕ ಹೇಗಿತ್ತು- ಅಂದಿನ ಜೀವನ ಶೈಲಿ ಹೇಗಿತ್ತೆನ್ನುವುದನ್ನು ಲಾರಾ- ಬಾಲ್ಯ ಕಾಲದ ಲಾರಾನ ಮೂಲಕವೇ ಕಥೆಯಲ್ಲಿ ಹೇಳಿಸಿದಳು.
ಲಾರಾ, ಅವಳ ಅಪ್ಪ, ಅಮ್ಮ,ಅಕ್ಕ ಮತ್ತು ತಂಗಿ ಮಾತ್ರ ಒಂದು ಮರದ ದಿಮ್ಮಿಗಳನ್ನು ಜೋಡಿಸಿ ಮಾಡಿದ ಮನೆಯಲ್ಲಿ- ವಿಸ್ಕಾನ್ಸಿನ್ ಎಂಬ ಕಾಡಿನಂಚಿನಲ್ಲಿ ವಾಸಮಾಡುವ ಕಥೆ ಅದು. ಅಕೆಗೆ ತಿಳಿದ ಹಾಗೆ ಅಲ್ಲಿ ಸುತ್ತ ಮುತ್ತ ಯಾರೂ ವಾಸ ಮಾಡುವುದಿಲ್ಲ.ಮನೆಯ ಸುತ್ತು ಉದ್ದನೆಯ ಕರಿಯ ಮರಗಳಷ್ಟೇ ಕಾಣುತ್ತವೆ - ಮನುಷ್ಯರ ಸುಳಿವಿಲ್ಲ. ಯಾವಾಗಾದರೂ ವಿಶೇಷ ಸಂದರ್ಭಗಳಲ್ಲಿ -ಅಪರೂಪಕ್ಕೊಮ್ಮೆ ಬಂಡಿಯಲ್ಲಿ ಬರುವ ನೆಂಟರು ಬಿಟ್ಟರೆ ಬೇರಾರೂ ಬರುವುದೂ ಇಲ್ಲ.
ಅಪ್ಪನ ಶಿಕಾರಿ, ಅಮ್ಮನ ರುಚಿರುಚಿ ಅಡುಗೆ, ಅಕ್ಕನ ಜೊತೆಗಿನ ಕಲಿಕೆ, ಭಾನುವಾರಗಳ ಪ್ರಾರ್ಥನೆ ಮತ್ತು ಕಲಿಕೆ, ಲಾರಾ ಮತ್ತವಳ ಗೊಂಬೆ, ಚಳಿಗಾಲದ ದಿನಗಳ ಮಂಜಿನ ಹೊದಿಕೆಗಳು- ಹೀಗೆ ತನ್ನ ಸುತ್ತ ಕಂಡಿದನ್ನು ಲಾರಾ ತನ್ನ ಬಾಲ್ಯ ಸಹಜ ಕುತೂಹಲದೊಡನೆ ವಿವರಿಸುತ್ತ ಹೋಗುತ್ತಾಳೆ. ಓದುತ್ತ ಕುಳಿತ ಯಾರೇ ಆದರೂ, ಮೆಲ್ಲ ಮೆಲ್ಲನೆ ಅಮೆರಿಕೆದ, ಆ ಕಾಲದ- ಮರದ ದಿಮ್ಮಿಯ ಮನೆಯೊಳಕ್ಕೇ ಮೆಲ್ಲನೆ ಹೊರಟುಬಿಡುವಂತೆ ಮಾಡುವ ಮಾಯಾ ಶಕ್ತಿ ಆ ಬರಹದಲ್ಲಿದೆ.
ಹೀಗಾಗಿ ಪುಟ್ಟ ಹುಡುಗಿಯೊಬ್ಬಳು ತನ್ನ ಬೆರಗುಗಣ್ಣುಗಳಲ್ಲಿ ತನ್ನೆದುರಿನ ಜಗತ್ತನ್ನ ನೋಡಿ - ಅಪ್ಪ ಅಮ್ಮ- ಹೊರಗಿನ ಕಾಡು- ಪೇಟೆ-ಶಿಕಾರಿಗಳನ್ನು ವರ್ಣಿಸುತ್ತ ಹೋಗುವ ಆಕೆಯ ಮೊದಲ ಕಾದಂಬರಿಗೇ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಅಮೇಲೆ, 1943ರ ವರೆಗೆ ಒಟ್ಟು ಎಂಟು ಪುಸ್ತಕಗಳನ್ನು ಲಾರಾ ಬರೆದಳು. ಲಿಟಲ್ ಹೌಸ್ ಇನ್ ದಿ ಪ್ರೈರಿ, ಆನ್ ದ ಬ್ಯಾಂಕ್ ಆಫ್ ಪ್ಲಮ್ ಕ್ರೀಕ್.. ಹೀಗೆ. ಈ ಪುಸ್ತಕಗಳೆಲ್ಲ ಅಮೆರಿಕದ ಮಕ್ಕಳಿಗಷ್ಟೇ ಅಲ್ಲ- ದೊಡ್ಡವರಿಗೂ ಹುಚ್ಚು ಹಿಡಿಸಿತು. ಆ ಕಾಲದಲ್ಲೇ ಜಗತ್ತಿನ ಇತರ ಭಾಷೆಗಳಿಗೂ ಈ ಸರಣಿ ಅನುವಾದಗೊಂಡಿತು.
ಲಾರಾ ಇಂಗಲ್ಸ್ ವೈಲ್ಡರ್ ಇರುವ ಮನೆ ಕೂಡ ಆವಾಗಲೇ ಪ್ರವಾಸೀ ತಾಣವಾಗಿ ಬಿಟ್ಟಿತು. ಲಾರಾ ತನ್ನ ತೊಂಬತ್ತರ ತುಂಬು ವಯಸ್ಸಿನಲ್ಲಿ ತೀರಿಕೊಂಡ ನಂತರ ಅವಳಿದ್ದ ಮನೆಯನ್ನು ಸ್ಮಾರಕವಾಗಿಸಲಾಯಿತು. ಇಂದಿಗೂ ಕೂಡ ಲಾರಾಳ ಮನೆಗೆ ಪ್ರವಾಸಿಗರು ತೆರಳುತ್ತಾರೆ. ಮತ್ತು ಅಕೆ ಬರೆದ ಪುಸ್ತಕಗಳನ್ನು ಜಗತ್ತಿನಾದ್ಯಂತ ಇವತ್ತಿಗೂ ಓದುತ್ತಿದ್ದಾರೆ.
ಈಗ ಯಾಕೆ ಈಕೆ ನೆನಪಾದಳು ಅನ್ನುತ್ತೀರಾ? ಲಾರಾ ಇಂಗಲ್ಸ್ ಬರೆದಿರುವ ಸರಣಿಯ ಮೊದಲ ಪುಸ್ತಕದಲ್ಲೇ, ಆಕೆ ಕ್ರಿಸ್ಮಸ್ ಸಮಯದ ಚಳಿಗಾಲವನ್ನು ವರ್ಣಿಸುತ್ತಾಳೆ. ಲಾರಾ ಇಂಗಲ್ಸ್ ವೈಲ್ಡರ್ ನ ಕೃತಿಗಳನ್ನು ಕನ್ನಡಕ್ಕೆ ಬಹಳ ಹಿಂದೆಯೇ ಅನಂತ ನಾರಾಯಣ ಅವರು ಅನುವಾದಿಸಿದ್ದಾರೆ. ಅವರದೇ ಅನುವಾದದ, ದೊಡ್ಡ ಕಾಡಿನಲ್ಲಿ ಪುಟ್ಟ ಮನೆ ಕೃತಿಯಿಂದ ಒಂದೆರಡು ಪ್ಯಾರಾಗಳು ನಿಮಗಾಗಿ.
"ಕ್ರಿಸ್ಮಸ್ ಹತ್ತಿರವಾಯಿತು.
ಅ ಪುಟ್ಟ ಮರದ ದಿಮ್ಮಿಗಳ ಮನೆ ಈಗ ಹಿಮದ ರಾಶಿಯಲ್ಲಿ ಹೂತು ಹೋಗಿತ್ತು. ಹಿಮದ ಗಾಳಿಯು ಗೋಡೆಗಳು ಮತ್ತು ಕಿಟಕಿಗಳಿಗೆ ಹೊಡೆದು ಅಲ್ಲಿ ಹಿಮದ ಗುಡ್ಡೆಗಳಾಗಿದ್ದವು. ಬೆಳಗ್ಗೆ ಪಾ ಮುಂಬಾಗಿಲು ತೆರದರೆ ಅಲ್ಲಿ ಲಾರಾಳ ತಲೆಯ ಸಮಕ್ಕೆ ಮಂಜಿನ ಗೋಡೆ. ಪಾ ಅಗ ಗುದ್ದಲಿ ತೆಗೆದುಕೊಂಡು ಅದನ್ನೆಲ್ಲ ಬಾಚಿ ತೆಗೆದು ಅ ಕಡೆ ಹಾಕುವನು. ಅಲ್ಲಿಂದ ಅವನು ಕೊಟ್ಟಿಗೆಗೆ ಹೋಗುವ ದಾರಿಯಲ್ಲಿನ ಮಂಜನ್ನೂ ಎತ್ತಿ ಹಾಕಿದ. ಅಲ್ಲಿ ದನಗಳೂ, ಕುದುರೆಗಳೂ ಬೆಚ್ಚಗೆ ನೆಮ್ಮದಿಯಾಗಿರುತ್ತಿದ್ದವು.
ಹಗಲೆಲ್ಲ ಹೊಳೆಯುತ್ತಿತ್ತು, ತಿಳಿಯಾಗಿರುತ್ತಿತ್ತು. ಕಿಟಕಿಯ ಪಕ್ಕದ ಕುರ್ಚಿಯ ಮೇಲೆ ನಿಂತು ಲಾರ, ಮೇರಿ ಹೊರಗೆ ಹೊಳೆಯುವ ಮರಗಳ ಮೇಲೆ ಹೊಳೆಯುವ ಮಂಜನ್ನು ನೋಡುತ್ತಿದ್ದರು. ಆ ಮರಗಳ ಬತ್ತಲೆ ಕರಿಯ ಕೊಂಬೆಗಳ ಮೇಲೆಲ್ಲಾ ಮಂಜು ದಟ್ಟವಾಗಿ ಬಿದ್ದಿತ್ತು, ಅದು ಸೂರ್ಯನ ಬೆಳಕಲ್ಲಿ ಹೊಳೆಯುತ್ತಿತ್ತು. ಮಂಜಿನ ಹರಳುಗಳು ಮನೆಯ ಛಾವಣಿಯ ಅಂಚಿಂದ, ಕೆಳಗೆ ಬಿದ್ದ ಮಂಜಿನ ರಾಶಿಯವರೆಗೆ ಇಳಿಬಿದ್ದಿದ್ದವು, ಇಳಿ ಹಳುಕುಗಳಂತೂ ಲಾರಾಳ ರಟ್ಟೆ ಗಾತ್ರದವು! ಅವು ಗಾಜಿನ ಹಾಗಿದ್ದು, ಹೊಳೆ ಬೆಳಕನ್ನು ಚೆಲ್ಲುತ್ತಿದ್ದವು.
ಕೊಟ್ಟಿಗೆಯಿಂದ ಪಾ ಹಿಂದಿರುಗಿದಾಗ ಅವನ ಉಸಿರು ಗಾಳಿಯಲ್ಲಿ ಹೊಗೆಯಂತೆ ಹಾಗೆಹಾಗೆಯೇ ನಿಲ್ಲುತ್ತಿತ್ತು, ಉಸಿರು ದಟ್ಟ ಮೋಡದಂತೆ ಬಾಯಿಂದ ಬಂದು ಅವನ ಗಡ್ಡ ಮೀಸೆಗಳ ಮೇಲೆ ಹೆಪ್ಪುಗಟ್ಟಿ ಹಿಮದ ಬಿಳಿ ಹಳಕುಗಳಾಗಿ ಅಂಟಿಕೊಳ್ಳುತ್ತಿತ್ತು.
ಪಾ ಒಳಕ್ಕೆ ಬಂದು , ತನ್ನ ಬೂಟ್ಸಿಗೆ ಅಂಟಿಕೊಂಡಿದ್ದ ಮಂಜನ್ನು ಜಾಡಿಸಿ, ಲಾರಾಳನ್ನು ಬಿಗಿಯಾಗಿ ತಬ್ಬಿಗೊಂಡಾಗ, ಅವನ ಮೀಸೆಯ ಮೇಲಿನ ಮಂಜಿನ ಹಳಕುಗಳು ಕರಗಿ ಹನಿಯಾಗಿ ಉದುರುತ್ತಿದ್ದವು"
ಎಲ್ಲರಿಗೂ ಹ್ಯಾಪಿ ಕ್ರಿಸ್ ಮಸ್!
ಸೋಮವಾರ, ಡಿಸೆಂಬರ್ 15, 2008
ಮಾಯಾ ಬಜಾರ್!
ತೆಲುಗು ನಾಟಕ ಅಂತೆ, ಚೆನ್ನಾಗಿ ಮಾಡುತ್ತಾರಂತೆ ಅಂತ ಅಲ್ಲಿದ್ದವರೆಲ್ಲ ಮಾತಾಡಿಕೊಳ್ಳುತ್ತಿದ್ದರು. ನಾನೂ, ಹೆಗ್ಡೆಯೂ ಸಂದೀಪನೂ ಹೋಗಿ ಕೂತೆವು. ಮೊದಲ ಸೀನೇ ನಾರದ ಆಕಾಶದಿಂದ ಇಳಿದು ಬಂದ. ಆಮೇಲಾಮೇಲಂತೂ ಬಿಡಿ! ತೀರಾ ನಾವ್ ಸಿನಿಮಾದಲ್ಲಿ ಮಾತ್ರ ನೋಡಲು ಸಾಧ್ಯ ಅಂದುಕೊಂಡ ಸೀನುಗಳೆಲ್ಲ ಕಣ್ಣೆದುರು! ಮಾಯಾ-ಮಂತ್ರ-ಛೂ ಮಂತರ್! ನಮ್ಮ ಕಣ್ಣುಗಳನ್ನೇ ನಮಗೆ ನಂಬಲಾಗದ ಸ್ಥಿತಿ. ನಾಟಕ ಮುಗಿದ ಮೇಲೆ ಅಕ್ಷರಶಃ ೧೫ ನಿಮಿಷ ಚಪ್ಪಾಳೆ ಹೊಡೆದೆವು- ರಾತ್ರೆ ಒಂದೂ ಮುಕ್ಕಾಲಿಗೆ! ಮೈಗೆಲ್ಲ ಬಣ್ಣ ಬಳಿದುಕೊಂಡು,ದಿನದಲ್ಲಿ ಮೂರನೇ ಬಾರಿಗೆ ರಾತ್ರಿ ೧೧ಕ್ಕೂ ಸ್ವಲ್ಪ ಆಯಾಸ ತೋರಿಸಿಕೊಳ್ಳದೇ ನಾಟಕ ಪ್ರದರ್ಶಿಸಿದ ತಂಡಕ್ಕೆ ನಮ್ಮ ಅಭಿನಂದನೆ ಕಡಿಮೆಯೇ ಅನ್ನಿಸಿತು.
ಬೇಕೆಂದೇ ನಾಟಕದ ಇತರ ವಿವರಗಳನ್ನು ಇಲ್ಲಿ ನೀಡುತ್ತಿಲ್ಲ. ಮತ್ತೆ ಮಾಯಾಬಜಾರ್ ರಂಗಶಂಕರಕ್ಕೆ ಬರುತ್ತಿದೆ. ಡಿಸೆಂಬರ್ ೨೫ರಂದು ಮಾಯಾ ಬಜಾರ್ ನ ಮೂರು ಪ್ರದರ್ಶನಗಳಿರುತ್ತವೆ. ಖಂಡಿತಾ ಬನ್ನಿ ಈ ನಾಟಕಕ್ಕೆ. ನಾನಂತೂ ಹೋಗುತ್ತಿದ್ದೇನೆ.
ಇವತ್ತೇ ರಂಗಶಂಕರಕ್ಕೆ ಹೋದರೆ ಟಿಕೆಟ್ ಲಭ್ಯ. ಡಿಸೆಂಬರ್ ೨೪ಕ್ಕೆ ಇದೇ ತಂಡ ಜೈ ಪಾತಳ ಭೈರವಿ ನಾಟಕವನ್ನೂ ಪ್ರದರ್ಶಿಸುತ್ತಿದೆ.
ಒಂದು ಕುಟುಂಬವೇ ನಾಟಕ ತಂಡವಾಗಿರುವ "ಸುರಭಿ" ಬಗ್ಗೆ ಮತ್ತು ನಾಟಕದ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಚಿತ್ರ ಕೃಪೆ:ರಂಗಶಂಕರ
ಮಂಗಳವಾರ, ಡಿಸೆಂಬರ್ 02, 2008
ನಾನೂ ಜೊತೆಗಿದ್ದೇನೆ.
ಭಯೋತ್ಬಾದನೆಯ ಪ್ರತಿಭಟನೆಗೆ ನಮ್ಮ ಪುಟ್ಟ ಹೆಜ್ಜೆ ಇದಾಗಿರಬಹುದು, ಆದರಿದು ಸರಿಯಾದ ಹೆಜ್ಜೆ ಅನ್ನುವುದು ವಿದಿತ. ನನ್ನ ಬ್ಲಾಗಿನ ತಲೆಪಟ್ಟಿ ಕಪ್ಪಾಗಿದೆ.
ಭಾನುವಾರ, ನವೆಂಬರ್ 30, 2008
ಶನಿವಾರ, ನವೆಂಬರ್ 29, 2008
ನಿಸಾರ್ ಸಾರ್ ಮತ್ತು ಹೊಸ ಗೆಟಪ್ಪು!
ಶುಕ್ರವಾರ, ನವೆಂಬರ್ 28, 2008
ಕಾಯ್ಕಿಣಿ ಹೇಳಿದ ಕಥೆಗಳು..

ಎಂದಿನಂತೆ ಈ ಬಾರಿಯೂ ಮೂಡುಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿದ್ದೇನೆ. ನಾನೋದಿದ ಸಂಸ್ಥೆ ಅನ್ನುವ ಕಾರಣವೋ, ಅಥವ ನುಡಿಸಿರಿಯ ಜಾದುವೇ ಅಂತದ್ದೋ, ಇಲ್ಲಿಗೆ ಬಂದೇ ಬರುತ್ತೇನೆ- ಪ್ರತಿ ನುಡಿಸಿರಿಗೂ. ಈ ಬಾರಿ ವಿದ್ಯಾಗಿರಿಯ ನುಡಿಸಿರಿಗೆ ಜುಮುರು ಮಳೆ ಕೂಡ ಸಾಥ್ ನೀಡಿದೆ. ಆ ಮಳೆಯ ಮಧ್ಯೆಯೇ, ಈ ಸಂಜೆ ಕಾಯ್ಕಿಣಿ ಚಂದ ಮಾತನಾಡಿದರು.
ಅದಕ್ಕೊಂದು ಒಂದು ವರದಿಯ ಥರದ ಬರಹ:
ಆಳ್ವಾಸ್ ನುಡಿಸಿರಿಯ ರತ್ನಾಕರ ವರ್ಣಿ ವೇದಿಕೆಯೆದುರಿನ ಜನ ಜಯಂತ ಕಾಯ್ಕಿಣಿಯವರ ಮಾತುಗಳಿಗೆ ಸಂಜೆ ಮಳೆಯ ಮಧ್ಯೆ ಮರುಳಾದರು. ಕಥಾ ಸಮಯ ಅನ್ನುವ ವಿಭಾಗದಡಿ ಕಾಯ್ಕಿಣಿ ಮಾತನಾಡಿದರು. ಕಥೆ ಎಂದರೇನು, ಕಥೆ ಬರೆಯೋದು ಸುಲಭಾನಾ ಅಂತೆಲ್ಲ ಮಾತನಾಡುತ್ತ ಜಯಂತರು ಮೂರು ಘಟನೆಗಳನ್ನು ನಮ್ಮ ಮುಂದಿಟ್ಟರು.
ಮರುಳ ಅನ್ನುವವನೊಬ್ಬ ಗೋಕರ್ಣದಲ್ಲಿದ್ದ. ಪ್ರತಿ ದಿನ ಬೆಳಗ್ಗೆ ಬೇಗ ಎದ್ದವನೇ, ಪೂರ್ವ ದಿಕ್ಕಿಗೆ ಮುಖ ಮಾಡಿ, "ಬಾರೋ, ಬಾರೋ" ಅಂತ ಕಿರುಚುತ್ತಿದ್ದ. ಅವನ ಕಿರುಚುವಿಕೆ ಕಡಿಮೆಯಾಗುತ್ತಿದ್ದುದ್ದು ಸೂರ್ಯ ಮೂಡಿದ ಮೇಲೆಯೇ. ಅಂತೆಯೇ, ಸಂಜೆಯಾಗುತ್ತಿದ್ದ ಹಾಗೆ ಸಮುದ್ರ ತಟಕ್ಕೆ ತೆರಳಿ, "ಹೋಗೋ ಹೋಗೋ ಕತ್ತೆ, ಹಂದಿ" ಅಂತೆಲ್ಲ ಸೂರ್ಯನನ್ನು ನೋಡಿ ಬೈಯುತ್ತಿದ್ದ. ಸೂರ್ಯ ತೆರಳಿದ ಘಳಿಗೆ ಏನೋ ಸಾಧಿಸಿದ ನೆಮ್ಮದಿ.
ಒಂದು ದಿನ ನಾನು ಮನೆಗೆ ಹೋಗುತ್ತಿದ್ದೆ.ಮುಂಬೈನ ಯಾವುದೋ ರೈಲ್ವೇ ನಿಲ್ದಾಣ. ರೈಲು ಹಳಿಗೆ ಸಿಕ್ಕು ಯಾರೋ ಛಿದ್ರ. ಆ ಶವದ ರುಂಡವನ್ನು ಕೈಲಿ ಎತ್ತಿಕೊಂಡು ಹೋಗುತ್ತಿದ್ದಾತ, ನನ್ನನ್ನು ನೋಡಿ, " ಜಬ್ ಝಿಂದಾ ತಾ, ಭಂಗೀ ಕೋ ಗಾಲೀ ದೇತಾ ಹೋಗಾ" ಅಂದು ತೆರಳಿದ.
(ಭಂಗೀ ಅಂದರೆ ಕೀಳು ಜಾತಿ)
ಒಂದಿಷ್ಟು ಜನ ಹದಿಹರೆಯದ ಹುಡುಗಿಯರು ಗುಂಪುಗುಂಪಾಗಿ ಏನೇನೋ ಹರಟುತ್ತ, ನಗುತ್ತ ದಾರಿ ಸಾಗಿಸುತ್ತಿದ್ದರು. ಎಲ್ಲಿದ್ದಳೋ ಗೊತ್ತಿಲ್ಲ, ಅವರೆದುರು ಹುಚ್ಚಿಯೊಬ್ಬಳು ಪ್ರತ್ಯಕ್ಷವಾಗಿ ಗುರಾಯಿಸಿದಳು. ಹುಡುಗಿಯರೆಲ್ಲ ಹೆದರಿ ದಿಕ್ಕಾಪಾಲು. ಅಲ್ಲಿದ್ದ ಮತ್ಯಾರೋ ನಕ್ಕರು. ಆವಾಗ ಹುಚ್ಚಿ ಅಂದಳಂತೆ,
"ಸಾರೀ ದುನಿಯಾ ಮೇರೇ ಕಪಡೇ ಪೆಹನ್ ಕೇ ಘೂಮ್ತೀ ಹೈ, ಔರ್ ಮುಝ್ ಪೇ ಹೀ ಹಸ್ತೀ ಹೈ"
ಮಂಗಳವಾರ, ನವೆಂಬರ್ 18, 2008
ಹಳೆಯ ಧಾರಾವಾಹಿಗಳ ನೆನೆದು..
ಕೆಲಬಾರಿ ಟಿ.ವಿಯಲ್ಲಿ ಓಡಾಡುತ್ತಿದ್ದ ಚಿತ್ರಗಳಿಗೂ, ಅಪ್ಪ ಹೇಳಿದ್ದಕ್ಕೂ ಸಂಬಂಧ ಇಲ್ಲದಂತೆ ಅನ್ನಿಸಿದರೂ, ಸುಮ್ಮನೇ ತಲೆಯಾಡಿಸುತ್ತಿದ್ದೆ, ಮಾರನೇ ದಿನ, ನಾನು ಹೀರೋ ಅಗಬೇಕಾದ್ದರಿಂದ, ಅಪ್ಪ ಹೇಳಿದ್ದನ್ನು ನೆನಪಿಟ್ಟುಕೊಂಡು ಬಂದು, ಅದನ್ನೇ ಸ್ನೇಹಿತರೆದುರು ವದರುತ್ತಿದ್ದೆ. ಅವರುಗಳಿಗೆ ಅದೆಷ್ಟು ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ, ದೇವರಿಗೇ ಗೊತ್ತು. ಏಕೆಂದರೆ- ಇವತ್ತೊಂದರ ಕಥೆಯಾದರೆ, ನಾಳೆ ಹೇಳುತ್ತಿದ್ದು ಇನ್ನೊಂದೇ ಅಗಿರುತ್ತಿತ್ತು. ಅದರೂ ಮಧ್ಯಾಹ್ನ ಊಟದ ಬುತ್ತಿ ಬಿಚ್ಚಿದಾಗ, ಭಕ್ತಿಯಿಂದ ಒಂದಿಷ್ಟು ಜನ ನನ್ನ ಸುತ್ತ ಸೇರಿರುತ್ತಿದ್ದು ಇನ್ನೂ ನೆನಪಿದೆ ನನಗೆ.
ಎರಡು ಮೂರು ವರುಷ ಕಳೆದ ಮೇಲೆ ನಾನು ಕಥೆ ಹೇಳುವ ಕಾಲ ಮುಗಿದಿತ್ತು. ನಾವೊಂದಿಷ್ಟು ಜನ ಸೇರಿ ಹಿಂದಿನ ದಿನ ನೋಡಿದ ಸೀರಿಯಲ್ ಗಳ ಬಗ್ಗೆ ಚರ್ಚೆ ಮಾಡುವಷ್ಟು ಪಾಂಡಿತ್ಯ ಬೆಳೆದಿತ್ತು - ಕಾರಣ- ದೂರದರ್ಶದಲ್ಲಿ ಕನ್ನಡ ಕಾರ್ಯಕ್ರಮಗಳು ಬರುತ್ತಿದ್ದವು. ನಾನಂತೂ ಸರಿಯಾಗಿ ಅರ್ಥವಾಗದ ಹಿಂದಿ ಕಾರ್ಯಕ್ರಮಗಳನ್ನೇ ನೋಡುತ್ತಿದ್ದವನು ಇನ್ನು ಕನ್ನಡ ಬಿಟ್ಟೇನೆಯೇ?
ನನ್ನಂತಹ ಅದೆಷ್ಟೋ ಹುಡುಗರಿಗೆ ಮತ್ತು ಅಪ್ಪ ಅಮ್ಮಂದಿರಿಗೆ ಕನ್ನಡ ಧಾರಾವಾಹಿಗಳ ಹುಚ್ಚು ಹತ್ತಿಸಿದ ಕೀರ್ತಿ 'ಗುಡ್ಡದ ಭೂತ' ಧಾರಾವಾಹಿಗೆ ಸಲ್ಲಬೇಕು. ಪ್ರತಿ ಸೋಮವಾರ ಇರಬೇಕು-ಸರಿಯಾಗಿ ನೆನಪಿಲ್ಲ- ಸಂಜೆ 7.30ಕ್ಕೆ ಸರಿಯಾಗಿ ದೂರದರ್ಶನದೆದುರು ಎಲ್ಲರೂ ಸ್ಥಾಪಿತ. ಜಾನ್ಸನ್ ಬೇಬೀ ಪೌಡರಿನದೋ- ಸೋಪಿನದೋ ಜಾಹೀರಾತು ಮುಗಿದ ಕೂಡಲೇ 'ಡೆನ್ನಾನ ಡೆನ್ನಾನ...' ಅನ್ನುವ ಟೈಟಲ್ ಸಾಂಗು. ಕೇಳುತ್ತಿದ್ದ ಹಾಗೇ- ಮೈ ರೋಮಾಂಚನ. ಭೂತದ ಕಥೆ ಬೇರೆ. ಗುಡ್ಡದ ಭೂತ ಎಂದು ಯಾರಾದರೂ ಕೂಡಲೇ ತೆಂಗಿನ ಗರಿ ಉದುರುವುದು- ಹೊರಗೆ ಒಣಗಲು ಹಾಕಿದ ಬಟ್ಟೆಗೆ ಥಟ್ಟಂತ ಬೆಂಕಿ ಹತ್ತಿಕೊಳ್ಳುವುದು- ಏನು ಕೇಳುತ್ತೀರಿ.
ಪ್ರಕಾಶ್ ರೈ ಅಭಿನಯದ ಮೊದಲ ಸೀರಿಯಲ್ ಅದು. ರಾಮಚಂದ್ರ ಅನ್ನುವ ರೋಲ್ ಮಾಡಿದ ಸಣಕಲು ಪ್ರಕಾಶ ರೈ ಇನ್ನೂ ನೆನಪಿದ್ದಾನೆ ನನಗೆ. ಈಗಿನ ಹಾಗೆ ನೂರಾರು ಎಪಿಸೋಡುಗಳಲ್ಲ- ಕೇವಲ 13 ಸಂಚಿಕೆಗಳಿಗೇ ಮುಗಿದ ಧಾರಾವಾಹಿ ಗುಡ್ಡದ ಭೂತ. ಅದು ಪ್ರಸಾರವಾಗುತ್ತಿದ್ದಷ್ಟೂ ಕಾಲ, ಯಾವತ್ತೂ ಅ ಹೊತ್ತಿಗೆ ಕರೆಂಟು ಸೈತ ಹೋಗಿರಲಿಲ್ಲ! ಮೊನ್ನೆ ಮೊನ್ನೆ ಏನನ್ನೋ ಹುಡುಕುತ್ತಿದ್ದವನಿಗೆ ಆ ಟೈಟಲ್ ಟ್ರಾಕ್ ನ ಎಂಪಿತ್ರೀ ಸಿಕ್ಕಿದಾಗ ಅದ ಖುಷಿಯಂತೂ ಹೇಳತೀರದು.
ನಮ್ಮ ಮನೆಯಲ್ಲಿ ಧಾರಾವಾಹಿಗಳನ್ನು ಅಪ್ಪ ಅಮ್ಮನೂ ಕೂತು ನೋಡುತ್ತಿದ್ದುದರಿಂದ- ನಂಗೆ, ತಂಗಿಗೆ ಯಾವ ತೊಂದರೆಯೂ ಇಲ್ಲದೇ ಅವರ ಜೊತೆ ಕೂತು ಇವುಗಳನ್ನು ನೋಡುವ ಅವಕಾಶ ಲಭ್ಯವಿತ್ತು. ಅಷ್ಟಕ್ಕೂ ದಿನಕ್ಕೆ ನೋಡುತ್ತಿದ್ದದು ಒಂದೋ- ಎರಡೋ ಸೀರಿಯಲ್ಲುಗಳನ್ನು ಮಾತ್ರ. ಎಲ್ಲಾದರೂ ಪರೀಕ್ಷೆಗಳಿದ್ದ ಸಮಯ ಓದಿಕೋ ಹೋಗಿ ಅಂದರೂ, ಅದು ಮೆತ್ತನೆ ಗದರಿಕೆಯಷ್ಟೇ ಅಗಿದ್ದು, ಧಾರಾವಾಹಿಗಳಿಗೆ ಕತ್ತರಿ ಬೀಳುತ್ತಿರಲಿಲ್ಲ.
ಎಂಥೆಂಥ ಸೊಗಸಾದ ಸೀರಿಯಲ್ ಗಳು ಅಗ. ನಾಗಾಭರಣರ ತಿರುಗುಬಾಣ, ಥ್ರಿಲ್ಲರ್ ಅದರೆ ರಮೇಶ್ ಭಟ್ ಅಭಿನಯದ ಕ್ರೇಝಿ ಕರ್ನಲ್ ಕಾಮಿಡಿ ಧಾರಾವಾಹಿ. ಬಿ.ವಿ.ರಾಜಾರಾಂ ಅಭಿನಯದ ಅಜಿತನ ಸಾಹಸಗಳು ಪತ್ತೇದಾರಿ. ಆಜಿತನ ಸಾಹಸಗಳನ್ನು ನೋಡಿ ನೋಡೀ ಅವರ ಫ್ಯಾನ್ ಅಗಿ ಹೋಗಿದ್ದೆ. ಎಷ್ಟರ ಮಟ್ಟಿಗೆಂದರೆ, ಅದೆಷ್ಟೋ ವರುಷಗಳ ನಂತರ, ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ರಾಜಾರಾಂ ಸರ್ ಅನಂದ ರಾವ್ ಸರ್ಕಲ್ ಸಮೀಪದ ಸಿಗ್ನಲ್ ನಲ್ಲಿ ಸ್ಕೂಟರ್ ನಿಲ್ಲಿಸಿಕೊಂಡಿದ್ದು ನೋಡಿ ಅಜಿತ- ಅವನ ಪತ್ತೇದಾರಿ ಬುದ್ಧಿ- ಕಣ್ಣೆದುರಿರುವ ಅತ್ಯಂತ ಸಾಮಾನ್ಯ ರಾಜಾರಾಂ - ಸಂಪೂರ್ಣ ಅಯೋಮಯವಾಗಿ ಹೋಗಿತ್ತು!
ದಿನವೂ ಧಾರಾವಾಹಿಗಳು ಪ್ರಸಾರವಾಗುವ ಕಾಲ ಬೇರೆ ಇರಲಿಲ್ಲ ಅವಾಗ, ಇವತ್ತು ಒಂದು ಧಾರಾವಾಹಿ ಬಂದು ಹೋದರೆ, ಮತ್ತೊಂದು ವಾರ ಕಾಯಬೇಕು ಅದಕ್ಕಾಗಿಯೇ. ಪ್ರತಿ ದಿನ ಕೂಡ ಬೇರೆ ಬೇರೆ ಧಾರಾವಾಹಿಗಳು. ಪ್ರತಿ ಭಾನುವಾರ ಬೆಳಗ್ಗೆ ಸಬೀನಾ ಅಂತೊಂದು ಫ್ಯಾಂಟಸಿ ಸೀರಿಯಲ್ ಬರುತ್ತಿತ್ತು. ಅದರ ಟೈಟಲ್ ಟ್ರ್ಯಾಕ್ ಗೇ ನಾನು- ತಂಗಿ ಮರುಳಾಗಿದ್ದೆವು. ಡಿಸ್ಕೋರಾಗ ಅದಿತಾಳ, ಸಾಧನೆ, ಚಕ್ರ, ಚಿಗುರು, ಬೆಳದಿಂಗಳಾಗಿ ಬಾ ಇವೆಲ್ಲ ಚಂದದ ಶೀರ್ಷಿಕೆ ಗೀತೆ- ಜೊತೆಗೆ ಕಥೆ ಹೊಂದಿದ ಧಾರಾವಾಹಿಗಳೇ.
ಮೋಡಕೆ ಮೋಡ ಬೆರೆತರೆ ನೋಡು ತುಂತುರು ಹೂ ಹಾಡು ಅನ್ನುವ ಚಕ್ರ ಧಾರಾವಾಹಿಯ ಹಾಡು ತೀರಾ ನಿನ್ನೆ ಮೊನ್ನೆ ಕೇಳಿದ್ದೇನೋ ಅನ್ನುವ ತರ ತಲೆಯೊಳಗೆ ಕೂತುಬಿಟ್ಟಿದೆ. ಅದೇ ತರ 'ಅಲ್ಲೊಂದು ಚಿಗುರು, ಇಲ್ಲೊಂದು ಚಿಗುರು', - ಚಿಗುರು ಧಾರಾವಾಹಿಯದು, ಕಾಲ ಮುಂದೆ, ನಾವು ಹಿಂದೆ ಜೂಟಾಟ ಜೂಟಾಟ ಅನ್ನೋ ಸಾಧನೆಯ ಹಾಡು.. ಎಲ್ಲಕ್ಕೂ ಮಿಗಿಲಾಗಿ, ಧಾರಾವಾಹಿ ಪ್ರಪಂಚದ ಅನೂಹ್ಯ ಸಾಧ್ಯತೆಗಳನ್ನು ತೆರೆದಿಟ್ಟ, ಮಾಯಾಮೃಗದ ಮ್ಯಾಜಿಕಲ್ ಹಾಡು, ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ...
ಮಾಯಾಮೃಗ ಪ್ರಸಾರವಾಗಬೇಕಿದ್ದರೆ ನಾನು ಹತ್ತನೇ ತರಗತಿ. ಸಂಜೆ ಕ್ಲಾಸು ಬಿಟ್ಟು ಅರ್ಧ ಗಂಟೆಗೆ ಸರಿಯಾಗಿ 4 ಕಿಲೋಮೀಟರು ದೂರದ ಮನೆಯಲ್ಲಿರಬೇಕಿತ್ತು. ಎದ್ದೂ ಬಿದ್ದೂ ಓಡಿಬರುವಷ್ಟರಲ್ಲಿ- ಮಾಯಾಮೃಗದ ಹಾಡು ಕೇಳುತ್ತಿತ್ತು. ತೀರಾ ನಮ್ಮದೇ ಮನೆಯದೇ ಕಥೆ ಇದು ಎಂದು ನಂಬಿಸಿಯೇ ಬಿಟ್ಟಿದ್ದ ಧಾರಾವಾಹಿ ಅದು. ಎಲ್ಲರಿಗೂ ಈ ಧಾರಾವಾಹಿ ಬಗ್ಗೆ ಖಂಡಿತಾ ತಿಳಿದೇ ಇರುತ್ತದೆ ಎನ್ನುವ ವಿಶ್ವಾಸವಿರುವ ನಾನು ಈ ಬಗ್ಗೆ ಏನೂ ಹೆಚ್ಚಿಗೆ ಹೇಳುವುದಿಲ್ಲ. ವಾರಪತ್ರಿಕೆಯೊಂದು ವಾರಾ ವಾರಾ ಮಾಯಾಮೃಗದ ಕಥೆ ಮುದ್ರಿಸಲೂ ಅರಂಭಿಸಿತ್ತು ಅವಾಗ.
ಮನ್ವಂತರ ಧಾರಾವಾಹಿಯೊಂದಿಗೆ ನನ್ನ ಸೀರಿಯಲ್ ಕ್ರೇಝ್ ಮುಗಿಯಿತು. ಅಮೇಲೆ ಇವತ್ತಿನವರೆಗೆ ಯಾವ ಧಾರಾವಾಹಿಯನ್ನೂ ಫಾಲೋ ಮಾಡಿಲ್ಲ, ಗರ್ವ ಮತ್ತು ಗೃಹಭಂಗ ಹೊರತು ಪಡಿಸಿ. ಮುಕ್ತ ಪ್ರಸಾರವಾಗುವಾಗ ಬೆಂಗಳೂರಿಗೆ ಬಂದಿದ್ದೆ, ನೋಡಲಾಗಲಿಲ್ಲ. ಅಲ್ಲದೇ ಅಷ್ಟು ಹೊತ್ತಿಗೆ ಅಷ್ಟೂ ಚಾನಲ್ ಗಳ ಪ್ರೈಮ್ ಟೈಮ್ ಅತ್ತೆ ಸೊಸೆಯರಿಗೇ ಮೀಸಲಾಗಿಹೋಗಿತ್ತು. ಒಮ್ಮೆ ನೋಡಿದ ಧಾರಾವಾಹಿಯನ್ನ ಮತ್ತೆ ನೋಡಬೇಕು ಎಂದು ಅನ್ನಿಸಲೇ ಇಲ್ಲ. ಧಾರಾವಾಹಿಗಳ ಸುವರ್ಣಯುಗ, ಗುಣಮಟ್ಟದ ದೃಷ್ಟಿಯಿಂದ ನೋಡಿದರೆ ಐದಾರು ವರ್ಷಗಳ ಕೆಳಗೇ ಮುಗಿದು ಹೋಗಿದೆ ಎಂದನ್ನಿಸುತ್ತದೆ.
ಕೆಲಬಾರಿ ಸಂಜೆ ಹೊತ್ತಿಗೆ ಈ ಬೆಂಗಳೂರಿನ, ನಮ್ಮ ಮನೆಯ ಬೀದಿಯಲ್ಲಿ ನಡೆಯುವಾಗ ಅನ್ನಿಸುವುದುಂಟು- ಯಾವುದರೂ ಮುಚ್ಚಿದ ಬಾಗಿಲಿನ, ಅದರೆ ತೆರೆದಿರುವ ಮನೆ ಕಿಟಕಿಯೊಳಗಿಂದ, ' ಸೆಳೆಯುತ್ತಿದೆ ಕಣ್ಣಂಚೂ, ಗಿರಿವಜ್ರದ ಹಾಗೇ' ಅನ್ನುವ ಮಾಯಾಮೃಗದ ಗೀತೆ ಮತ್ತೆ ಕೇಳಬಾರದೇ. S. ನಾನು ಓಡಿ ಹೋಗಿ, ಟಿ.ವಿ ಹಾಕಿ....
ಇದು ದಟ್ಸ್ ಕನ್ನಡಕ್ಕೆ ಬರೆದ ಅಂಕಣ. ಹಲವರು ಮೇಲ್ ಮಾಡಿ ಗುಡ್ಡದ ಭೂತ ಮತ್ತು ಇತರ ಧಾರಾವಾಹಿಗಳ ಎಂಪಿತ್ರೀ ಕೇಳಿದರು. ಈ ಲಿಂಕ್ ಲಿ ಕೆಲ ಹಳೆಯ ಧಾರಾವಾಹಿಗಳ ಹಾಡುಗಳು ಲಭ್ಯವಿದೆ.


