ಗುರುವಾರ, ಏಪ್ರಿಲ್ 26, 2007

ಬೇಸಗೆಯ ಮದುವೆಯೆಂದರೆ..

ಸಿಕ್ಕಾಪಟ್ಟೆ ಬಿಸ್ಲು, ಮಕ್ಳಿಗೆಲ್ಲ ರಜೆ. ಹೊರಗೆ ತಿರುಗಾಡೋಕೆ ಹೊರಟರೆ ಬೆವ್ರು- ಸೆಖೆ. ಬಿಸಿ ಗಾಳಿ. ಮನೆ ಹಂಚಿನ್ ಮೇಲೆ, ಚಪಾತಿ ಸುಡಬಹುದು. ಊರಲ್ಲಿ ಜಾತ್ರೆ ,ದಿನಾ ದೇವಸ್ಥಾನಕ್ಕೆ ಬೇರೆ ಹೋಗ್ಬೇಕು. ಹಲಸಿನ ಹಪ್ಳ ಮಾಡೋ ಚಿಂತೆ, ಮಳೆಗಾಲಕ್ ಕಟ್ಗೆ ಒಟ್ ಮಾಡೋ ಕಷ್ಟ, ಕರೆಂಟಿಲ್ದೇ ಒದ್ದಾಡೋ ರಾತ್ರೆ, ಒಂದಾ ಎರಡಾ?! ಎಲ್ಲ ಈ ಬೇಸಿಗೆಯ ಜೊತೆ ಜೊತೆಗೇ ಬರತ್ತೆ.. ಅದೇನೋ ಹೇಳ್ತಾರೆ ನಮ್ಮಲ್ಲಿ, "ಬಕನ್ ಬಾರಿ, ಮಗನ್ ಮದ್ವೆ, ಹೊಳಿಂದಚೀಗ್ ಪ್ರಸ್ಥ, ಎಲ್ಲ ಒಟ್ಟಿಗೇ ಬಂದಿತ್ತಡ" ಅಂತ.

ಹಾ! ಮದ್ವೆ ಅಂದ್ ಕೂಡ್ಲೆ ನೆನ್ಪಾಯ್ತು, ಈ ಮದ್ವೆ ಗೌಜು ಗಲಾಟೇನೂ ಬರೋದು ಬೇಸ್ಗೇಲೆ. ಪ್ರತೀ ವರ್ಷ ಎಪ್ರೀಲು ಮೇ ತಿಂಗ್ಳಲ್ಲಿ ಕಡ್ಮೆ ಅಂದ್ರೂ ೧೦ ಮದ್ವೆ ಇದ್ದಿದ್ದೆ. ಅದರಲ್ಲಿ ೪-೫ ನಮ್ಮ ಅತ್ಯಂತ ಹತ್ತಿರದೋರ್ದು. ಮನೇಲಿ ನೀರಿರಲ್ಲ , ನಮಗೇ ಪರದಾಟ , ಅದ್ರ್ ಜೊತೆಗೆ, ಒಂದಿಷ್ಟ್ ಜನ ನೆಂಟ್ರು - ನಮ್ ಮನೆ ಹತ್ರ ಅಂತ ಬಂದು ಉಳ್ಕೊಂಡಿರೋರು, ಚಿಳ್ಳೆ ಪಿಳ್ಳೆಗಳ ಸಮೇತ. ಮೂರು ಟ್ಯೂಬ್ ಲೈಟು, ಒಂದಿಷ್ಟ್ ಗ್ಲಾಸು, ಒಡಿಯೋದೆ. ನಮಗೆ ಬೈಯೋ ಹಾಂಗೂ ಇಲ್ಲ, ಬಿಡೋ ಹಾಂಗೂ ಇಲ್ಲ, ಬಿಸಿ ತುಪ್ಪ!!

ಹೊರಗಡೆ ತೋಟದಲ್ಲಿ ಕೆಲ್ಸಕ್ ಬಂದಿರೋರು ಒಂದಿಷ್ಟ್ ಜನ . ಅವ್ರ್ಗೂ ಮಾಡ್ ಹಾಕಿ, ಬಂದೊರ್ನ ಸುಧಾರ್ಸಿ, ಉಫ್,ಅಮ್ಮ ಕಂಗಾಲು. ಮದ್ವೆ ಮನೆಗೆ ಬೇರೆ ಹೋಗ್ಬೇಕು, ೨ ದಿನಾ ಮುಂಚೆ! ಮಂಗಲ ಪತ್ರ ಕೊಟ್ ಕೂಡ್ಲೆ ಧಮಕೀನೂ ಬಂದಿರುತ್ತದೆ, "ಎರಡು ದಿನ ಮುಂಚೆ ಬಂದು ಎಲ್ಲಾ ಸುಧಾರ್ಸಿಕೊಡಕು" ಅಂತ. ಏನೇ ರಗ್ಳೆ ಇದ್ರೂ, ಮದ್ವೆ ಮನೆ ಅಂದ್ರೆ ಖುಷಿನೇ ಬಿಡ್ರೀ!,ನಂಗೆ, ನಿಮ್ಗೆ ಮತ್ತೆ ಎಲ್ಲರಿಗೂ, ಅಲ್ವಾ?!

ಮದ್ವೆ ಮನೆ ಓಡಾಟದಲ್ಲಿರೋ ಸಂತೋಷ ಮತ್ ಎಲ್ಲೂ ಇಲ್ಲ! ಎಲ್ಲರೂ ಕೆಲ್ಸ ಮಾಡೋರೆ. ನಾನ್ ಹೇಳ್ತಿರೋದು ಮನೇಲೇ ನಡಿಯೋ ಮಲೆನಾಡಿನ ಮದ್ವೆ ಬಗ್ಗೆ, ಈ ಪೇಟೆ ಛತ್ರದ್ ಮದ್ವೇ ಅಲ್ಲಾ ಮತ್ತೆ. ಚಪ್ಪರ ಹಾಕೋರೇನೂ, ಪಾತ್ರೇ ಸಾಗ್ಸೋರೇನು, ಹೂವು , ಹಣ್ಣು ತರೋರೇನು, ಓಡಾಟವೇ ಓಡಾಟ. ಮಕ್ಳಿಗಂತೂ ದೊಡ್ಡೋರ್ ಕೈ ಕಾಲಡಿಗೆ ಸಿಗೋದೆ ಸಂಭ್ರಮ. ಉಮೇದಲ್ಲಿ ಕೆಲಸ ಮಾಡೋ ಯುವಕರ ಒಂದು ಪಂಗಡ ಆದ್ರೆ, ಕೆಲ್ಸ ಮಾಡ್ಸೋ ಹಿರೀರದು ಇನ್ನೊಂದು. "ತಮ್ಮಾ, ಆ ಬದಿ ಸ್ವಾಂಗೆ ಹೊಚ್ಚಿದ್ದು ಸರಿ ಆಯ್ದಿಲ್ಲೆ ನೋಡು, ಹಾನ್, ಸ್ವಲ್ಪ ಇತ್ಲಾಗ್ ತಗ, ಹಾ, ಹಾಂಗೆ.. ಈಗ್ ಸರಿ ಆತು" "ಒಲೆ ಸ್ವಲ್ ವಾರೆ ಆದಾಂಗ್ ಇದ್ದು, ಆ ತಿಮ್ಮಣ್ಣನ್ ಕರಿ", "ಬೆಳ್ಗೆ ಹಾಲ್ ತಪ್ಪವು ಯಾರು, ಬೇಗ್ ಹೋಗ್ ಬನ್ನಿ"- ಉಸ್ತುವಾರಿ ಕೆಲ್ಸ!. ಕೆಲ್ಸಾ ಮಾಡ್ತಾ ಇರೋ ಹುಡುಗ್ರು ಇವ್ರ್ ಮೇಲೆ ಸೇಡ್ತೀರ್ಸ್ಕೊಳಕ್ಕೆ ಸರಿಯಾದ್ ಟೈಮ್ ಗೆ ಕಾಯೋದಂತೂ ಸುಳ್ಳಲ್ಲ.

ಇಡೀ ಊರಿನ ಹುಡುಗ ಪಾಳಯಕ್ಕೆ ಈ ಮದ್ವೆ, ಒಂದು ನೆಪ. ಮದ್ವೆ ಮುಗಿಯೋ ತಂಕ ಇವರ ಹಾರಾಟನ ಯಾರೋ ಕೇಳೋ ಹಾಂಗಿಲ್ಲ! ಪರೀಕ್ಷೆ, ಮಾಷ್ಟ್ರು, ಅಪ್ಪ- ಯಾರ್ ಕಾಟನೂ ಇರಲ್ಲ ಬೇರೆ. ಮನೆ ಹಿಂದಿನ ಬ್ಯಾಣದ ಗೇರು , ಮಾವುಗಳೆಲ್ಲ ಇವರದೇ ಪಾಲು. ಹುಡುಗೀರ ಪ್ರಪಂಚ ಬೇರೆಯದೇ, ಹೊಸ ಬಟ್ಟೆ, ಮದರಂಗಿ, ಹೂವು, ಅಮ್ಮನ ಹೊಸ ರೇಷ್ಮೆ ಸೀರೆಯ ಚಂದ, ಬೆಂಗಳೂರಿಂದ ಬಂದ ಅಕ್ಕ ಕಲಿಸಿಕೊಟ್ಟಿರೋ ಜಡೆ ಹಾಕುವ ನೂತನ ವಿಧಾನ..

ಇಷ್ಟೆಲ್ಲ ಗಡಿಬಿಡಿ ಎಲ್ಲರಿಗೆ ಇದ್ದರೂ , ಎಲ್ಲೋ ಒಂದು ಜೊತೆ ಕಣ್ಣು ಇನ್ನೊಂದನ್ನ ಸಂಧಿಸಿಯೇ ಸಂಧಿಸುತ್ತವೆ ಮತ್ತು ಚಿಗುರು ಪ್ರೇಮವೊಂದು ಹುಟ್ಟುತ್ತದೆ, ಮತ್ತದು ಅವರಿಬ್ಬರಿಗೆ ಮಾತ್ರ ತಿಳಿದಿರುತ್ತದೆ ! ಅದೇ ಊರಿನ್ ಹುಡ್ಗಿ ಇರಬಹುದು, ವರ್ಷಗಟ್ಲೆ ಅವಳು ಇವನ್ನ - ಇವನು ಅವಳನ್ನ ನೋಡ್ತಾ ಇದ್ರೂ, ಈ ಮದ್ವೆ ಮನೆ ಅವರಲ್ ಹೊಸ ಭಾವ ಹುಟ್ಟಿಸುತ್ತದೆ. ಎಲ್ಲೋ ಅಟ್ಟದ ಮೇಲಿನ ಬಾಳೆಗೊನೆಯನ್ನ ಕೆಳಗಿಳ್ಸೋವಾಗ, ಪಾತ್ರೆ ದಾಟಿಸುವಾಗ, ತರಕಾರಿ ಹೆಚ್ಚುವಾಗ, ತೋಟದಲ್ಲಿ ವೀಳ್ಯದೆಲೆ ಏಣಿಯನ್ನ ಅವನು ಹತ್ತಿದ್ದಾಗ, ಒತ್ತಾಯ ಮಾಡಿ ಹೋಳಿಗೆ ಬಡಿಸುವಾಗ!..

ತಲೆ ಮೇಲೆ ಸುಡೋ ಬಿಸ್ಲಿದ್ರೂ, ಗಾಳಿ ಬೀಸೋದು ನಿಲ್ಸಿದ್ರೂ, ಸಿಕ್ಕಾಪಟ್ಟೆ ಜನ ಅತ್ತಿಂದಿತ್ತ ಓಡಾಡ್ತಾ ಇದ್ರೂ, ಯಾವ್ದೋ ಒಂದು ಮಸ್ತ್ ಘಳಿಗೆಯಲ್ಲಿ ಹುಟ್ಟಿ ಬಿಡುತ್ತದೆ ಈ ಭಾವ. ದೂರದೂರಿಂದ ಬಂದ ಹುಡುಗನಾದರೆ ಅಥವ ಹುಡುಗಿಯಾದರೆ ಕತ್ತಲ ಮೂಲೆಯವರೆಗೆ ಸಾಗೀತೇನೋ, ಇಲ್ಲವಾದರೆ ಹೆಚ್ಚಿನ ಸಂದರ್ಭಗಳಲ್ಲಿ, ಕಣ್ಣ ಆರಾಧನೆಯಲ್ಲೇ ಕಳೆಯುತ್ತದೆ. ಪರಸ್ಪರ ನೋಟದಲ್ಲೇ ಅಚ್ಚರಿ- ನಗು.

ಮದುವೆ ಬರಿಯ ಇಬ್ಬರದಲ್ಲ , ಹಲವು ಬಂಧಗಳನ್ನ ಬೆಸೆಯುತ್ತದೆ. ನಾಲ್ಕು ವರ್ಷದಿಂದ ಮಾತಾಡ್ದೇ ಇರೋ ಗಣಪಣ್ಣ- ಮಾಬ್ಲೇಶ್ವರ ಈ ಮದುವೇಲಿ ಒಟ್ಟಿಗೇ ಅನ್ನದ ಕೌಳಿಗೆ ಹಿಡ್ದ್ರೂ ಆಶ್ಚರ್ಯ ಇಲ್ಲ! ಪಾಲಾಗಿ , ಅಡ್ಡ ಬಾಗಿಲುಗಳನ್ನ ಮುಚ್ಚಿದ್ದ ಮನೆಗಳು, ಈಗ ತೆರೆದು ಕೊಳ್ಳುತ್ತವೆ, ಎಲ್ಲರ ಮನೆಯ ಬಾಳೇ ಎಲೆಗಳೂ ಸಾಲಾಗಿ ಹಾಕಲ್ಪಡುತ್ತವೆ, ಸಾಲುಮನೆಗಳ ಅಟ್ಟದ ಮೇಲೆ ಹಾಸಿರುವ ಕಂಬಳಿಗಳು, ಇಡಿಯ ಊರಿನದು!. ಎಲ್ಲ ಕೊಟ್ಟಿಗೆಗಳ ಗಿಂಡಿ ನೊರೆ ಹಾಲು ಬಂದು ಬೀಳುವುದು ಒಂದೇ ಪಾತ್ರೆಗೆ. ವೆಂಕಣ್ಣ ನ ಮನೆಯ ಚಾಲಿಯೂ, ಗಿರಿ ಭಟ್ಟರ ಕೆಂಪಡಕೆಯೂ, ಒಂದೇ ವೀಳ್ಯದ ಬಟ್ಟಲೊಳಗೆ.

ಮದುವೆ, ಇಡಿಯ ಊರನ್ನ ಒಗ್ಗೂಡಿಸಿರುತ್ತದೆ. ಮದುವೆ ಮುಗಿದ ಮೇಲೆ, ಎಲ್ಲ ತೆರಳಿದ ಮೇಲೆ, ಊರಿಗೂರೇ ಆ ಖಾಲಿತನವನ್ನ ಅನುಭವಿಸುತ್ತದೆ. ಚಪ್ಪರ, ಮನೆಯ ಮೆತ್ತು ಎಲ್ಲ ಖಾಲಿ. ಬಾಡಿದ ಹೂವಿನ ರಾಶಿ, ಸುತ್ತಿಟ್ಟ ಚಾಪೆಗಳು, ತಮ್ಮ ತಮ್ಮ ಮನೆಗಳಿಗೆ ತೆರಳಲು ಸಿದ್ಧವಾಗಿ ನಿಂತ ಪಾತ್ರೆ- ಕಂಬಳಿಗಳ ಗಂಟು, ಪೆಚ್ಚು ಮೋರೆಯಲ್ಲಿ ಮತ್ತೆ ತೋಟದ ಕಡೆಗೆ ಹೊರಟು ನಿಂತ ಆಳು.. ಮಗಳನ್ನ ಕಳುಹಿಸಿ ಕೊಟ್ಟ ಅಪ್ಪ- ಅಮ್ಮ ಮಾತ್ರವಲ್ಲ, ಮದುವೆ ಮನೆಯಲ್ಲಿ ಸಿಕ್ಕಿದ್ದ ಹೊಸ ಗೆಳೆಯನನ್ನ ಕಳೆದುಕೊಂಡ ಹುಡುಗಿಯೂ ಅಷ್ಟೇ ನೋವನುಭವಿಸುತ್ತಾಳೆ. ಇನ್ನು ಯಾವಾಗ ಬರುವವನೋ ಅವನು..

ಎಲ್ಲರ ಮನೆಯ ಪಾತ್ರೆ ಪಗಡ, ಕಂಬಳಿಗಳು ಅವರ ಮನೆಯ ಮೇಲುಪ್ಪರಿಗೆಯಲ್ಲಿ ಕುಳಿತಾದ ಮೇಲೆ, ಕರೆದ ನೊರೆಹಾಲು ಮತ್ತೆ ತಮ್ಮ ತಮ್ಮ ಮನೆಯ ಗಿಂಡಿಗಳೊಳಗೇ ಕಲಕಲು ಶುರುವಾದ ಮೇಲೆ,
ಸಾಲು ಸಾಲಾಗಿ ಎಲ್ಲರ ಮನೆಯ ಚಿಟ್ಟೆಗಳನ್ನ ನೆಗೆದೋಡುತ್ತಿದ್ದ ಪುಟ್ಟ ಪೋರಿಯ ಕಾಲ್ಗೆಜ್ಜೆ ಶಬ್ದ, ಮುಂದೆಷ್ಟೋ ದಿನಗಳವರೆಗೆ ಅನುರಣಿಸುತ್ತಿರುತ್ತದೆ, ಬಿಸಿಲ ಮಧ್ಯಾಹ್ನಗಳಲ್ಲಿ.

13 ಕಾಮೆಂಟ್‌ಗಳು:

Sushrutha Dodderi ಹೇಳಿದರು...

>> ಇಷ್ಟೆಲ್ಲ ಗಡಿಬಿಡಿ ಎಲ್ಲರಿಗೆ ಇದ್ದರೂ , ಎಲ್ಲೋ ಒಂದು ಜೊತೆ ಕಣ್ಣು....
-ಅಲ್ಲಿಂದ ಮುಂದಿನ ಪ್ರತಿ ಸಾಲೂ ತುಂಬಾ ಇಷ್ಟವಾಯ್ತು. ನಿನ್ನ ಗ್ರಹಿಕೆಗಳು ನಿಜಕ್ಕೂ ಖುಷಿ ನೀಡಿದ್ವು. ಬೇಸಗೆಯ ಮಧ್ಯಾಹ್ನದಲ್ಲಿ ಒಂದೊಳ್ಳೆ ಲೇಖನ ಓದಿಸಿದ್ದಕ್ಕೆ ಥ್ಯಾಂಕ್ಸ್.

Avani ಹೇಳಿದರು...

ಕಾರ್ಯಕ್ರಮ ಮುಗಿದ ಮೇಲೆ ಆ ಖಾಲಿ ಭಾವ ಇದೆಯಲ್ಲಾ ಅದನ್ನ ಪ್ರಾಯಶ ಯಾರು ಇಷ್ಟ ಪದುವುದಿಲ್ಲಾ ಅಂದುಕೊಳ್ಳತಿನಿ ......ನಿನ್ನ ಈ ಭಾವಪೂರ್ವ ಅಂಕಣಕ್ಕೆ ಮನಪೂರ್ವ ಧನ್ಯವಾದಗಳು.

ಅನಾಮಧೇಯ ಹೇಳಿದರು...

ಮಲ್‌ನಾಡ ಮದುವೆ ಇಷ್ಟು ಚೆಂದವ? ಇಂಥ ಮದುವೆಗಳ ವೊಂದು ಸುಂದರ ಚಿತ್ರಣಕ್ಕೆ ಧನ್ಯವಾದಗಳು. ನಿಮ್ಮ ನೆನಪಿನ ಬುತ್ಟಿಯಿಂದ ಇನ್ನೂ ಬಹಳಷ್ಟು ಮಲೆನಾಡಿನ ಚಿತ್ರಗಳು ಕಥೆಯಾಗಿ ಮೂಡಲಿ

Shree ಹೇಳಿದರು...

ಇನ್ನಷ್ಟು ಮದುವೆಗಳಿಗೆ ಹೋಗಿ ಬಂದು ನೀವು ಇನ್ನೂ ಚೆನ್ನಾಗಿ ಬರೆಯುವಂತಾಗಲೆಂದು ಹಾರೈಸುತ್ತೇನೆ..:-)

ಶ್ಯಾಮಾ ಹೇಳಿದರು...

ಸಾಲು ಸಾಲಾಗಿ ಎಲ್ಲರ ಮನೆಯ ಚಿಟ್ಟೆಗಳನ್ನ ನೆಗೆದೋಡುತ್ತಿದ್ದ ಪುಟ್ಟ ಪೋರಿಯ ಕಾಲ್ಗೆಜ್ಜೆ ಶಬ್ದ, ಮುಂದೆಷ್ಟೋ ದಿನಗಳವರೆಗೆ ಅನುರಣಿಸುತ್ತಿರುತ್ತದೆ, ಬಿಸಿಲ ಮಧ್ಯಾಹ್ನಗಳಲ್ಲಿ...

ತುಂಬಾ ಇಷ್ಟವಾದ ಸಾಲುಗಳಿವು....
ಇದನ್ನೋದುವಾಗ ಎಷ್ಟೋ ವರ್ಷಗಳ ನಂತರ 2 ತಿಂಗಳ ಕೆಳಗೆ ಮಲೇನಾದ ಮದುವೆಯೊಂದರಲ್ಲಿ ಕಳೆದ ಆ 3 ದಿನಗಳು ನೆನಪಾದವು..
ತುಂಬಾ ಸುಂದರವಾದ ಲೇಖನ...

Parisarapremi ಹೇಳಿದರು...

ನೀನು ಹೋಗಪ್ಪ ಮದುವೆಗಳಿಗೆ.. ನಂಗಂತೂ ಸಾಕ್ ಸಾಕ್ ಸಾಕ್ ಸಾಕ್ ಸಾಕ್ ಸಾಕಾಗಿದೆ... ಆದರೂ ನೀನು ಬರೆದಿರುವ ಈ ಮದುವೆಯ ಅನುಭವ ಸೊಗಸಾಗಿದೆ ಎಂದೆನಿಸಿತು.. :-)

Shiv ಹೇಳಿದರು...

ಶ್ರೀನಿಧಿ,

ಸಡಗರದಿಂದ ಕೂಡಿದೆ ಲೇಖನ!!
ಮದುವೆ ಮನೆನಲ್ಲಿ ದೊಡ್ಡವರ ವಸ್ತುವಾರಿ ಕೆಲವೊಂದು ಸರ್ತಿ ಅತೀನೇ ಆಗಿಬಿಡುತ್ತೆ...ಇನ್ನು ಕೆಲವೊಮ್ಮೆ ಕೆಲ್ಸ ಮಾಡೋರಿಕ್ಕಿಂತ ವಸ್ತುವಾರಿ ಮಾಡೋರೇ ಹೆಚ್ಚು :)

ಇನ್ನು ಕಣ್ಣು-ಕಣ್ಣು ಕಲೆವ ಕ್ಷಣಗಳು...
ಎಂತಹ ಅನುಭವಾಮೃತ :)

ಅನಾಮಧೇಯ ಹೇಳಿದರು...

Hi shree,


Olle baraha :)

madve knta adaralli odada sadagarane maja, adra suste chanda.

melgattu kattadu, avaga horge bappa dialogues, attitlage odada hennudra bagge comments ellanu rashi dina nenpirtu..

hostagi madve ada Ravige innu cholo gottirtu :)

yara madvelli adru ellariginta khushi padava bahusha veerendra. entakke andre elli "mandala" irtala :)


Cheers
Chin

VENU VINOD ಹೇಳಿದರು...

ಶ್ರೀನಿಧಿ,
ಮದುವೆ, ಅದ್ರಲ್ಲೂ ನಗರಕ್ಕಿಂತ ದೂರದಲ್ಲಿ ನಡೆಯುವ ಮದುವೆಗಳು ನಿಜಕ್ಕೂ ಸೊಗಸು. ಅಲ್ಲಿ ಕೃತಕತೆ ಕಡಮೆ. ನಿಮ್ಮ ಬರಹ ಸುಂದರ.
ಆದ್ರೆ ಬೇಸಗೆಯ ಮದುವೆಯಲ್ಲಿ ಸರಿಯಾಗಿ ಊಟ ಮಾಡೋದ್ ಮಾತ್ರ ಕಷ್ಟಾನೆ. ಯಾಕೆಂದ್ರೆ ಅರ್ಧ ಊಟ ಆಗೋಅಷ್ಟರಲ್ಲಿ ಬೆವರೂ ಶುರು

Ravindra ಹೇಳಿದರು...

Super Srinidhi...

@chin Bhat.. Ille comment barithi ninge, Namma madve li navu entha madahangu irtille, sumne kutga nodadeya.. Bereyavara madve adre kushinda madlakku idnella..!! [:)]
Namma madveli navu madale hodre, Noda enu urgent Manige heltha aste.. So ninna madveli melugattu ella kattale hogadu.. Adakku hechhagi Maduvege baradu kaltgali ellava gottata, illi kunthu adu cholo idu cholo hela badalu..!! [:)]
With LOVE --- Ravindra

ಶ್ರೀನಿಧಿ.ಡಿ.ಎಸ್ ಹೇಳಿದರು...

ಸುಶ್,ಪ್ರವೀಣ,ವೆನ್ನಲ,ಶ್ರೀ,
ಮೊನ್ನೆ ಮತ್ತೊಂದು ಮದುವೆಗೆ ಹೋಗಿ ಬಂದೆ. ಇನ್ನೂ ಚೆಂದ ಮಾಡಬಹುದಿತ್ತು ಈ ಬರಹವನ್ನ ಅಂತ ಅನ್ನಿಸುತ್ತಿದೆ ಈಗ!

Archu ಹೇಳಿದರು...

chanda ide..

Lanabhat ಹೇಳಿದರು...

ಛೆ ಎಂತಾ ಮದುವೆ ಮಾರಾಯ್ರೆ !
ಮದುವೆ ಮನೆ ಕಣ್ಣಮುಂದೆ ಬಂದಂತೆ ಆಯ್ತು