ಶನಿವಾರ, ಮೇ 31, 2008

ಫೇಕ್ ಮೈಲ್ಸ್....

ನಾವೊಂದಿಷ್ಟು ಜನ ಸ್ನೇಹಿತರು- ನಾನು, ಅರುಣ, ಹರ್ಷ, ಸುಶ್ರುತ ಹೆಚ್ಚಾಗಿ ನಮಗೆ ಬರುವ ಫೇಕ್ ಮತ್ತು ಜಂಕ್ ಮೇಲ್ಸ್ ಗಳನ್ನು ಪರಸ್ಪರ ಫಾರ್ವರ್ಡ್ ಮಾಡಿಕೊಂಡು ನಗಾಡುತ್ತಿರುತ್ತೇವೆ. ಕೆಲವು ಈ-ಮೇಲುಗಳು ಪದೇ ಪದೇ ತಿರುಗಿ ಬರುತ್ತಿರುತ್ತವೆ. ಹೆಣ್ಣಿನಾಕಾರದ ಕಾಯಿ ಬಿಡುವ ಸುಡುಗಾಡು ಮರ!, ಮನುಷ್ಯನ ದೇಹ- ಮೀನಿನ ತಲೆ, 18 ಆಡಿಯ ರಾಕ್ಷಸಾಕಾರದ ದೇಹ ಅಲ್ಲೆಲ್ಲೋ ಸಿಕ್ಕಿದೆ, ಇತ್ಯಾದಿ ಇತ್ಯಾದಿ...

ಇನ್ನು ಪ್ರವಾಸಿ ಸ್ಥಳಗಳ ಮತ್ತು ಟ್ರೆಕ್ಕಿಂಗು ಸ್ಪಾಟುಗಳ ಬಗ್ಗೆ ಅಂತೂ ಕೇಳುವುದೇ ಬೇಡ. ಅಮೆರಿಕ ಯಾವುದೋ ಜಲಪಾತ ಬೆಂಗಳೂರಿನ ಸಮೀಪದ ಮುತ್ಯಾಲ ಮಡುವು ಅನ್ನುವ ಹಣೆಪಟ್ಟಿ ಹೊತ್ತುಕೊಂಡಿತ್ತು ಮೊನ್ನೆಯಷ್ಟೇ. ಜೊತೆಗೆ "ರತ್ನಘಡ ಎನ್ನುವ ಭೂಮಿಯ ಮೇಲಿನ ಸ್ವರ್ಗ" ಅನ್ನುವ ಹೆಸರು ಹೊತ್ತ ಈಮೇಲು ಬಗ್ಗೆ ಹೇಳಿ ಪ್ರಯೋಜ್ನಿಲ್ಲ! ಆ ಸ್ವರ್ಗ ಇರುವ ಜಾಗ ಪ್ರತಿ ಮೇಲ್ ನಲ್ಲೂ ಬದಲಾಗುತ್ತಿರುತ್ತದೆ! ಭಾರತದ ಎಲ್ಲಾ ರಾಜ್ಯಗಳನ್ನು ದಾಟಿ , ಈಗ ಈ ಸ್ಥಳ ಶ್ರೀಲಂಕಾದಲ್ಲಿದೆ ಎನ್ನುವ ಹೊಸ ಶೋಧವೂ ಆಗಿದೆ.

ಇನ್ನು ಈ ಈ ಮೇಲ್ ನ ೧೫ ಜನಕ್ಕೆ - ೨೦ ಜನಕ್ಕೆ ಕಳಿಸಿ , ಇಲ್ಲದಿದ್ದರೆ ಅದಾಗುತ್ತದೆ , ಇದಾಗುತ್ತದೆ ಎಂಬ ಧಮಕೀ ಹೊತ್ತು ಬರುವ ಮಿಂಚೆಂಚೆಗಳು ಮತ್ತೊಂದು ಗ್ರಹಚಾರ. ಅವುಗಳನ್ನು ಕಳಿಸಿದವರಿಗೇ ತಿರುಗಿ ೩೦ ಸಲ ಕಳಿಸಿದರೆ ಮುಗಿಯಿತು. ಮತ್ತೆ ಆ ತಪ್ಪು ಆತನಿಂದ ಆಗದು.ಇಂತವೆಲ್ಲ ನಿರುಪದ್ರವಿ ಮೇಲ್ ಗಳು ಅಂತ ಸುಮ್ಮನಿದ್ದು ಬಿಡಬಹುದು. ಆದರೆ, ಈಗೀಗ ತೊಂದರೆ ಉಂಟುಮಾಡುವ ಮೇಲ್ ಗಳೂ ಬರೋಕೆ ಶುರುವಾಗಿದೆ.

ಈ ಕೆಳಗಿನ ಸಬ್ಜೆಕ್ಟ್ ಲೈನು ಹೊತ್ತ ಮೇಲ್ ಗಮನಿಸಿರುತ್ತೀರಿ:

Please Pass this Message "1098"
dial 1098 for givin ur left over food to the diprieved ..

Need one small promise from you....!

Helping Hands Are Better Than Praying Lips.............
Not liking the food you have daily????


ಭಾರತದಲ್ಲಿನ ಬಡತನವನ್ನು ಅತ್ಯಂತ ಗಾಢವಾಗಿ ಬಿಂಬಿಸುವ ಒಂದಿಷ್ಟು ಚಿತ್ರಗಳನ್ನು ಮತ್ತು ಹಸಿವಿಂದ ಸಾಯುತ್ತಿರುವವರ ಅಂಕಿ ಅಂಶಗಳನ್ನು ಹೊತ್ತಿರುವ ಮೇಲ್ ಇದು. ಆ ಮೇಲ್ ನ ಸಾರಂಶ ಇಷ್ಟೇ. ನಿಮ್ಮ ಮನೆಯಲ್ಲೋ, ಅಥವ ಯಾವುದೇ ಸಮಾರಂಭಗಳಲ್ಲೇಸಿದ್ಧ ಪಡಿಸಿದ ಆಹಾರ ಉಳಿದು ಹೋಯಿತು ಅಂದರೆ ಅದನ್ನ ಹಾಳು ಮಾಡಬೇಡಿ, 1098 ಅನ್ನುವ ಟೋಲ್ ಫ್ರೀ ನಂಬರಿಗೆ ಫೋನ್ ಮಾಡಿ ಹೇಳಿ, ಅಲ್ಲಿನ ಸಂಬಂಧಿಸಿದ ವ್ಯಕ್ತಿಗಳು ಬಂದು ಆ ಅಳಿದುದ್ದನ್ನ ತಗೊಂಡು ಹೋಗಿ, ಏನೂ ಊಟಕ್ಕಿಲ್ಲದ ಮಕ್ಕಳಿಗೆ ಕೊಡುತ್ತಾರೆ, ನಾಲ್ಕು ಮಕ್ಕಳಿಗೆ ಉಪಕಾರ ಆಗ್ಲೀ, ದಯವಿಟ್ಟು ಸಾಧ್ಯ ಆದಷ್ಟ್ ಜನಕ್ ಕಳ್ಸೀ ಅಂತ ಈ ಅಂಚೆ ನಿಮ್ಮನ್ನು ಬೇಡಿಕೊಳ್ಳುತ್ತದೆ. ಮತ್ತು ನಾವು -ನೀವುಗಳು ಅದನ್ನು ಯಥಾಸಾಧ್ಯ ಜನಕ್ಕೆ ಫಾರ್ವರ್ಡ್ ಮಾಡಿ ಸುಮ್ಮನಾಗುತ್ತೇವೆ.

ಯಾರಾದರೂ , ಒಮ್ಮೆಯಾದರೂ 1098 ಗೆ ಫೋನ್ ಮಾಡಿದ್ದೀರಾ?

1098 ಅನ್ನುವುದು ಚೈಲ್ಡ್ ಲೈನ್ ಅನ್ನುವ ಸರಕಾರ ಮತ್ತು ಎನ್ ಜಿ ಓ ಗಳ ಸಹಕಾರದಿಂದ ನಡೆಯುವ, ಕಷ್ಟದಲ್ಲಿರುವ ಮಕ್ಕಳ ಸಹಾಯಕ್ಕಿರುವ ಸಂಸ್ಥೆಯ ದೂರವಾಣಿ ಸಂಖ್ಯೆ. ತೊಂದರೆಗೊಳಗಾದ ಮಕ್ಕಳಿಂದ ಅಂದರೆ- ಬಾಲ ಕಾರ್ಮಿಕರಾಗಿರುವವರು, ಮನೆಯಿಂದ ಓಡಿ ಬಂದು ದಿಕ್ಕುಗಾಣದವರದು, ಅಥವಾ ಪರೀಕ್ಷೆ ಅಂತ ಹೆದರಿ ಕೂತಿರುವವರಿಂದ- ದಿನವೊಂದಕ್ಕೆ 300-400 ಫೋನುಗಳು ಹಗಲು ರಾತ್ರಿ ಅನ್ನದೇ ಬರುತ್ತಲೇ ಇರುತ್ತದೆ. ಈ ಸಂಸ್ಥೆಗೆ ಬೇಕಷ್ಟು ಸಹಾಯಧನ ದೇಶವಿದೇಶಗಳಿಂದ ಬರುತ್ತದೆ. ಅವರುಗಳಿಗೆ ಊರಲ್ಲಿನ ಉಳಿದ ಆಹಾರವನ್ನು ಸಂಗ್ರಹಿಸಿ ತಮ್ಮಲ್ಲಿನ ಮಕ್ಕಳಿಗೆ ನೀಡುವ ಅವಶ್ಯಕತೆ ಖಂಡಿತಕ್ಕೂ ಇಲ್ಲ.

ಈ ಈ ಮೈಲ್ ಏನು ತೊಂದರೆ ಮಾಡುತ್ತಿದೆ ಗೊತ್ತಾ?- ದಿನವೊಂದಕ್ಕೆ 60-70 ದೂರವಾಣಿ ಕರೆಗಳು, "ನಮ್ಮನೇಲಿ ಮೂರು ಜನಕ್ಕಾಗೋ ಅಷ್ಟ್ ಅನ್ನ ಸಾಂಬಾರು ಇದೆ, ತಗೊಂಡೋಗಿ", "ನೋಡೀ, ಇಂತಾ ಛತ್ರಕ್ಕೆ ಬನ್ನೀ, ಮೂವತ್ತು ಊಟ ಕೊಡ್ತೀವೀ ತಗಂಡು ಹೋಗೀ" ಅನ್ನೋ ತರದವೇ ಆಗಿವೆ. ಮತ್ತು ಇಂತಹ ಕರೆಗಳು ಬರುತ್ತಿರುವಾಗ,

ಅಲ್ಲೆಲ್ಲೋ ಜೀತ ಮಾಡುವ ಹುಡುಗನೊಬ್ಬ, ಅಥವಾ ದುಡ್ದಿಗಾಗಿ ಯಾರಿಗೋ ಮಾರಲ್ಪಟ್ಟಿರುವ ಹುಡುಗಿ, ತನ್ನನ್ನ ಬಚಾವು ಮಾಡೀ ಅಂತ ಕೋರಿಕೊಳ್ಳಲು ಫೋನ್ ಮಾಡುತ್ತಿರುತ್ತಾರೆ ಮತ್ತು ಈ ನಂಬರು ಪದೇ ಪದೇ ಎಂಗೇಜು ಬರುತ್ತದೆ.

ಸ್ನೇಹಿತರೇ, ಅವರುಗಳಿಗೆ ಆ ಹೊತ್ತಿಗೆ ಡಯಲ್ ಮಾಡಲು ಸಾಧ್ಯವಾಗದೇ ಹೋದರೆ. . .ಮತ್ತೆಂದೂ ಮಾಡಲಾಗದೇ ಹೋದೀತು.

ಯೋಚಿಸಿ..

ನಿಮಗೆ ಮೇಲ್ ಕಳಿಸೋರಿಗೆ, ಇದು ಸುಳ್ಳು ಮಾಹಿತಿ ಅನ್ನೋ ವಿಷ್ಯ ತಿಳಿಸಿ, ಮತ್ತು ನಿಜಕ್ಕೂ ಕಷ್ಟದಲ್ಲಿರೋ ಮಕ್ಕಳು ಕಣ್ಣಿಗೆ ಬಿದ್ದಾಗ ಮಾತ್ರ ಚೈಲ್ಡ್ ಲೈನ್ ಗೆ ಫೋನ್ ಮಾಡಿ.

(ನಾನು ಸ್ನಾತಕೋತ್ತರ ಪದವಿ ಓದುತ್ತಿರುವ ಸಂದರ್ಭದಲ್ಲಿ ಮಂಗಳೂರಿನ ಚೈಲ್ಡ್ ಲೈನ್ ಸಂಸ್ಥೆಯಲ್ಲಿ ಒಂದು ವರುಷ, ಫೀಲ್ಡ್ ವರ್ಕ್ ಮಾಡಿದ್ದೆ.)

ಚೈಲ್ಡ್ ಲೈನ್ ವೆಬ್ ಸೈಟ್.

ಬುಧವಾರ, ಮೇ 14, 2008

ಹೇರೂರು ತೇರಿಗೆ ನಾನೂ ಹೋದೆ!

ವಿಷ್ಯ ಅಂತಂದ್ರೆ,ನಾನು ಮೊನ್ನೆ ಮೊನ್ನೆ ಹೇರೂರು ತೇರಿಗೆ ಹೋಗಿದ್ದೆ. ಮತ್ತು, ಹೇರೂರು ತೇರಿಗೆ ಹೋದಾಗ ಏನು ಮಾಡಲೇ (ಆಡಲೇ)ಬೇಕೋ ಅದನ್ನ ಮಾಡಿ(ಆಡಿ) ಬಂದೆ.

ಗುರುವಾರ, ಮೇ 01, 2008

ಏನನ್ನುತ್ತೀರಿ ಇದಕ್ಕೆ?

ಯಡಿಯೂರಪ್ಪ ಸಾರಥ್ಯದ ಬಿಜೆಪಿ ಗವರ್ಮೆಂಟು ಬಿದ್ದು ಹೋಗಿ ಸ್ವಲ್ಪ ದಿನಕ್ಕೇ ಆ ಪಕ್ಷ ಬೆಂಗಳೂರಿನಲ್ಲಿ ರಾಜಭವನ ಚಲೋ ಕಾರ್ಯಕ್ರಮ ಮಾಡಿತು. ಎಲ್ಲೆಂಲ್ಲಿಂದಲೋ ಬಂದ ಬಾಡಿಗೆ ಭಂಟರು ಕಾರ್ಪೋರೇಷನ್ನು, ಕಬ್ಬನ್ ಪಾರ್ಕು ತುಂಬಿಕೊಂಡು ಗಲಭೆ ಎಬ್ಬಿಸಿದರು. ಟ್ರಾಫಿಕ್ಕು ಮೂರ್ನಾಲ್ಕು ತಾಸು ಗಬ್ಬೆದ್ದು ಹೋಯಿತು. ಎಲ್ಲ ಟಿ.ವಿ.ಚಾನಲ್ಲುಗಳು, ಪತ್ರಿಕೆಗಳೂ ಈ ಟ್ರಾಫಿಕ್ ಜಾಮ್ ಸುದ್ದಿಗೆ ಒಂದಿಷ್ಟು ಜಾಗ ಮೀಸಲಿಟ್ಟವು. ಜನರೂ ಉಗಿದರು. ಸಂತೋಷ. ಒಂದು ರಾಜಕೀಯ ಪಕ್ಷಕ್ಕೆ ಸ್ವಲ್ಪವಾದರೂ ಸಾಮಾಜಿಕ ಜವಾಬ್ದಾರಿ ಅನ್ನುವುದು ಬೇಕಿತ್ತು.

ಹೋದವಾರದ ಒಂದು ದಿನ, ಬೆಳಗ್ಗೆ ಹತ್ತು ಗಂಟೆಗೆ ಮನೆಯಿಂದ ಆಫೀಸಿಗೆ ಹೊರಟೆ. ಸಜ್ಜನ ರಾವ್ ಸರ್ಕಲ್ಲಿನ ಬಳಿಯೇ ಟ್ರಾಫಿಕ್ ನಿಧಾನಗತಿಯಲ್ಲಿತ್ತು. ತೆವಳಿಕೊಂಡು ಜೇಸೀ ರೋಡು ಸೇರಿದೆ. ಮಾಮೂಲಿ ಸ್ಲೋ ಟ್ರಾಫಿಕ್ ಅಂತಂದುಕೊಂಡೆ. ಆದರೆ ಜೆ.ಸಿ ರೋಡಿಗೆ ಬಂದ ಮೇಲೆ ವಾಹನಗಳು ಒಂದಿಂಚೂ ಕದಲಲಿಲ್ಲ. ನೆತ್ತಿಯ ಮೇಲೆ ಸುಡು ಸುಡು ಬಿಸಿಲು. ಯಾಕೆ ಟ್ರಾಫಿಕ್ ಜಾಮಾಗಿದೆ ಅಂತ ಅಲ್ಲಿದ್ದ ಯಾರಿಗೂ ಗೊತ್ತಿಲ್ಲ. ಪಕ್ಕದ ಡಬ್ಬಲ್ ರೋಡ್ ಕೂಡ ಜಾಮ್ ಆಗಿದೆ ಅನ್ನುವ ಸುದ್ದಿ ಬಂತು.

ನನ್ನೆದುರಿಗೆ ವೃದ್ಧ ದಂಪತಿ ಸ್ಕೂಟರಲ್ಲಿದ್ದರು. ಹಿಂದುಗಡೆ ಕೂತಿದ್ದಾಕೆ, ಬಿಸಿಲಿಗೆ ತಲೆಸುತ್ತಿ ಹಿಂದಕ್ಕೆ ಬಿದ್ದೇಬಿಟ್ಟರು. ಸ್ಕೂಟರನ್ನ ಸಂಭಾಳಿಸಲಾಗದೇ ಆ ವೃಧ್ಧರೂ ಬಿದ್ದರು, ಸ್ಕೂಟರೂ ಬಿತ್ತು. ಆಕೆಗೆ ಪಾಪ ಹಣೆಗೆ ಪೆಟ್ಟಾಗಿ ರಕ್ತ ಸುರಿಯತೊಡಗಿತು. ಅಲ್ಲೆಲ್ಲೂ ಸುತ್ತ ಮೆಡಿಕಲ್ಲೂ ಇಲ್ಲ. ಕರ್ಚೀಫು ಕಟ್ಟಿ, ಬದಿಗೆ ಕೂರಿಸಿದ್ದಾಯಿತು. ಸುಮಾರು ಒಂದು ಒಂದೂವರೆ ಗಂಟೆಗಳ ಕಾಲ - ಕಾಲ ಸ್ತಬ್ಧ.ಅಷ್ಟು ಹೊತ್ತಿಗೆ ವಿಷಯವೂ ತಿಳಿಯಿತು, ಕನ್ನಡಕ್ಕಾಗಿ ಓರಾಡುವ ಸಂಘಟನೆಯ ಜಾಥಾವೇನೋ ನಡೆಯುತ್ತಿದೆ ಮುಂದೆ ಅಂತ.

ಒಂದು ಕೆಲಸದ ದಿನ, ಸಾವಿರಾರು ಜನರ ಅಮೂಲ್ಯ ಸಮಯ ಹಾಳಾಗಿ ಹೋಗಿತ್ತು. ಜೊತೆಗೆ ಉರಿ ಬಿಸಿಲಲ್ಲಿ ಒಣಗಿದ್ದು ಬೇರೆ.ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಕಾಳಜಿ ಹೊಂದಿರುವ ಸಂಘಟನೆಗಳ ಬಗ್ಗೆ ನನಗೂ ಗೌರವವಿದೆ. ಆದರೆ ಮೊನ್ನೆಯ ಘಟನೆ ನಿಜಕ್ಕೂ ಬೇಸರ , ಸಿಟ್ಟು ತರಿಸಿತು. ಅವರ ಈ ಕಾರ್ಯದಿಂದಾಗಿ ತೊಂದರೆಗೊಳಗಾಗಿದ್ದು ಕನ್ನಡದ ಜನತೆಯೇ ಅಲ್ಲವೇ? ಕನ್ನಡದ ಕೆಲಸ ಮಾಡೋಕೆ ಉದ್ದುದ್ದ ಜಾಥಾ, ಒಂದು ಕೆಲಸದ ಬೆಳಗೇ ಆಗಬೇಕಿತ್ತೇ?

ಕನ್ನಡ ಪರ ಸಂಘಟನೆಯಿಂದಾದ ಈ ತೊಂದರೆಯ ಬಗ್ಗೆ , ಯಾವುದೇ ಮಾಧ್ಯಮಗಳು ತುಟಿ ಪಿಟಕ್ ಅನ್ನಲಿಲ್ಲ. ಯಾಕೆ ಸುಮ್ಮನಿದ್ದರು ಅಂದರೆ, ಹೆದರಿಕೆ. ಈಗೀಗ ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಕೆಲ್ಸ ಮಾಡುವ ಯಾರ ಬಗ್ಗೆಯಾದರೂ ನೀವೇನಾದರೂ ಸ್ವಲ್ಪ ವಿಮರ್ಶೆ ಮಾಡುವ , ಅಥವಾ ಪ್ರಶ್ನೆ ಮಾಡುವ ಧಾಟಿಯಲ್ಲಿ ಬರೆದಿರಿ, ಹೇಳಿದಿರಿ ಅಂದರೆ ನಿಮಗೆ ಕನ್ನಡ ವಿರೋಧಿ ಹಣೆಪಟ್ಟಿ ಹಚ್ಚಲಾಗುತ್ತದೆ.

ಇಂತಹ ಆಷಾಢಭೂತಿತನಕ್ಕೆ ನನ್ನ ಧಿಕ್ಕಾರವಿದೆ.

ಗುರುವಾರ, ಏಪ್ರಿಲ್ 17, 2008

ಸರಕಾರದ ಕೆಲಸ, ದೇವರ ಕೆಲಸ.

ಪೋಸ್ಟಾಫೀಸಿಗೆ ಹೋಗಿದ್ದೆ. ಹಿಂದಿನ ದಿನ ರಿಜಿಸ್ಟರ್ ಪೋಸ್ಟ್ ಬಂದಿತ್ತು, ನಾನು ಮನೆಯಲ್ಲಿರಲಿಲ್ಲ. ಒಂದು ಹರಕು ಚೀಟಿಯಲ್ಲಿ ಪೋಸ್ಟ್ ಮ್ಯಾನ್ ಸುಬ್ರಮಣ್ಯಂ ( ಆ ಚೀಟೀಲೇ ಇತ್ತು ಅವನ ಹೆಸರು) ಏನೋ ಬರೆದು ಕೊಟ್ಟು ಹೋಗಿದ್ದ, ಇಂತಿಂತಾ ಪೋಸ್ಟಾಫೀಸಿಗೆ ಬಂದು ಕಲೆಕ್ಟ್ ಮಾಡಿಕೋಬೇಕು ಅಂತ. ಬೆಳಿಗ್ಗೆ ಆಫೀಸಿಗೆ ಹೊರಟವನು ಹೋದೆ ಅಲ್ಲಿಗೆ.

ಗಂಟು ಮುಖದ ಹೆಂಗಸು ಬಾಗಿಲಲ್ಲೇ ಕೂತಿದ್ದಳು."ಸುಬ್ರಮಣ್ಯಂ ಬೇಕಿತ್ತು, ರಿಜಿಸ್ಟರ್ ಪೋ.." ಮಾತು ಮುಗಿಯುವುದರೊಳಗೆ ಆಕೆ ಕೈ ಮೇಲೆತ್ತಿದ್ದಳು.ಅಂಪೈರು ಔಟು ಕೊಡುವ ಹಾಗೆ. ಅರ್ಥವಾಗಲಿಲ್ಲ. "ಮೇಡಮ್, ಸುಬ್ರಮಣ್ಯಂ ಅವರಿದಾರ?" ಅವಳು ತನ್ನ ಬರೆಯುವ ಕೆಲಸ ಮುಂದುವರೆಸುತ್ತ ಕೈ ಮತ್ತೊಮ್ಮೆ ಮೇಲೆತ್ತಿದಳು, ಈ ಬಾರಿಪುಣ್ಯಕ್ಕೆ ಮಾತಾಡಿದಳು. - ಮೇಲಿರ್ತಾರೆ ಹೋಗ್ರೀ.. ನಾನು ಮೇಲೆ ಹೋಗುವ ದಾರಿ ಹಿಡಿದೆ. ಮೇಲೊಂದು ಕುರುಕ್ಷೇತ್ರ. ಒಂದಿಷ್ಟು ಜನ ಪತ್ರಗಳ ಕಟ್ಟನ್ನ ಇತ್ತಿಂದತ್ತ, ಅತ್ತಿಂದಿತ್ತ ಎಸೆಯುತ್ತ ಕೂತಿದ್ದರು.

"ಸಾರ್, ಸುಬ್ರಮಣ್ಯಂ ಅವ್ರು ಇದಾರಾ.."

ಯಾರಿಗೂ ನನ್ನ ಮಾತೇ ಕೇಳಲಿಲ್ಲ, ಸಿಕ್ಕ ಸಿಕ್ಕ ಚೀಲಕ್ಕೆ ಪತ್ರಗಳನ್ನ ಗುರಿಯಿಟ್ಟು ಎಸೆಯುವುದರಲ್ಲೇ ತಲ್ಲೀನರು. ಮತ್ತೊಮ್ಮೆ ಗಟ್ಟಿಯಾಗಿ ಕೇಳಿದೆ. ಒಬ್ಬಾತ ತಣ್ಣಗೆ, ನನ್ನ ಮುಖವನ್ನೂ ನೋಡದೇ, ಕೆಳಗಿರ್ತಾರೆ ಹೋಗಿ ಅಂದ. "ಇಲ್ಲಾ ಸಾರ್, ಅಲ್ಲಿಂದಲೇ ಬಂದೆ" ಅಂದೆ. ಕೆಳಗಿರ್ತಾರೆ ಹೋಗೀ ಅಂತು ಇನ್ನೊಂದು ಶರೀರ, ಮತ್ತೊಮ್ಮೆ. ನಾನು ಮತ್ತೆ ಕೆಳಗಿಳಿದೆ.

ಈ ಬಾರಿ ಗಂಟು ಮೇಡಮ್ ನ ಮಾತಾಡ್ಸೋಕೆ ಧೈರ್ಯ ಸಾಲಲಿಲ್ಲ. ಎದ್ದು ಬಾರಿಸಿದರೆ ಅನ್ನುವ ಅಳುಕು. ಪಕ್ಕದಲ್ಲಿದ್ದ ಮತ್ತೊಬ್ಬ ಪುಣ್ಯಾತ್ಮರನ್ನ ಕೇಳಿದೆ."ಸುಬ್ರಮಣ್ಯಂ.." ಅನ್ನುತಿದ್ದ ಹಾಗೆ, ಅವ್ರು ಹೇಳಿಲ್ವೇನ್ರೀ- ಮೇಲಿರ್ತಾರೆ...ಹೋಗಿ.

ಮತ್ತೆ ಮೇಲೆ- ಅಲ್ಲಿಯಾತ ಹೆಚ್ಚೂ ಕಡಿಮೆ ಕಿರುಚಿಯೇ ಬೆಟ್ಟ. ಹೋಗುತ್ತಿಯೋ ಇಲ್ಲವೋ ಕೆಳಗಡೆಗೆ ಅನ್ನುವ ಹಾಗೆ. ಅವನು ಕಿರುಚಿದ್ದು ನೋಡಿ ಆ ರೂಮುಲ್ಲಿ ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಏನಾದರೂ ಕಾಗದ ಪತ್ರಗಳ ವಿಲೇವಾರಿ ಮಾಡುತ್ತಿದ್ದಾರೋ ಅನ್ನುವ ಅನುಮಾನ ಬಂತು. ಮತ್ತೆ ಕೆಳಗೆ. ಹುಚ್ಚು ಹಿಡಿಯುವ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿದ್ದವು. ಈ ಬಾರಿ ಕೆಳಗಿನ ಮೇಡಮ್, ಅವ್ರು ಕಾಪಿಗ್ ಹೋಗಿದಾರೆ ಅನ್ಸತ್ತೆ.. ಅನ್ನುವ ರಾಗ ಎತ್ತಿದರು.

ಕಾದೆ. ಹತ್ತು ನಿಮಿಷ. ಕಾಲ ನಿಂತೇ ಹೋದ ಅನುಭವ. ಮತ್ತೆ ಅಲ್ಲಿದ್ದೊಬ್ಬ ಪುಣ್ಯಾತ್ಮ ಬಳಿ ಕೇಳಿದರೆ, ಮೈ ಪರಚಿಕೊಳ್ಳುವುದೊಂದು ಬಾಕಿ. ಈಗಷ್ಟೇ ಬಂದ್ರಲ್ಲ..ಮೇಲೆ ಹೋದ್ರು ನೋಡಿ. ಓಡಿದೆ ಮೇಲೆ. ಯಾವನೋ ಅಡ್ಡ ಬಂದ. ಜಸ್ಟ್ ಮಿಸ್ಸು. ಬಿದ್ದೇ ಹೋಗ್ತಿದ್ದ. ಮೇಲೆ ಇದ್ದವರಿಂದ ಐಸಿನಂತ ಉತ್ತರ ಬಂತು, ಈಗಷ್ಟೇ ಕೆಳಗೆ ಹೋದ್ರು ನೋಡಿ, ಅವರೇ ಸುಬ್ರಮಣ್ಯಂ!

ಅಂತೂ ಆ ಪುಣ್ಯಾತ್ಮನ್ನ ಹಿಡಿದೆ. ಆ ಸಾವ್ಕಾರ್ರು ಮತ್ತೆ ಹತ್ತು ನಿಮಿಷ ನನ್ನ ರಿಜಿಸ್ಟರ್ ಪೋಸ್ಟ್ ಹುಡುಕಿ, ಕಾಣಿಸ್ತಿಲ್ಲ ಸಾರ್, ಮಧ್ಯಾಹ್ನ ಬನ್ನಿ ಅಂದ್ರು.

ಇಲ್ಲಣ್ಣಾ ದಮ್ಮಯ್ಯ ಅಂತೆಲ್ಲ ಹೇಳಿ ಹುಡುಕ್ಸಿ, ಅದ್ನ ಕೈಲ್ ಹಿಡ್ಕೊಂಡು ಹೊರಡಬೇಕಿದ್ರೆ... ಉಫ್..

*******

ಶಾಸಕರ ಭವನಕ್ಕೆ ಯಾರದೋ ಸಂದರ್ಶನ ಮಾಡೋಕೆ ಹೋಗಬೇಕಿತ್ತು. ಆ ಮಾಜಿ ಎಂ.ಎಲ್.ಎ ಅಲ್ಲಿರುವ ಮೂರು ಬಿಲ್ಡಿಂಗ್ ಗಳಲ್ಲಿ ಎಲ್ಲಿರುತ್ತಾರೆ ಅಂತ ಗೊತ್ತಿರಲಿಲ್ಲ. ಸುಮ್ನೆ ಬ್ಲೈಂಡಾಗಿ ಒಂದು ಕಟ್ಟಡಕ್ಕೆ ನುಗ್ಗಿದೆ. ಒಬ್ಬ ಪೋಲೀಸು ಪೇದೆ ಬಾಗಿಲಲ್ಲೇ ಕೂತಿದ್ದ.

"..... ಅವರು ಇಲ್ಲಿ ಇರ್ತಾರ"

ನಿಮ್ಮ ಹೆಸರು? -ಶ್ರೀನಿಧಿ

ಎಲ್ಲಿಂದ ಬಂದಿದೀರಿ?- ಹೆಸರು ಹೇಳಿದೆ.

ಯಾಕೆ?- ಅವರ ಸಂದರ್ಶನ ಮಾಡಬೇಕಿತ್ತು.

ನಿಮ್ಮ ಹೆಸರು ಈ ರಿಜಿಸ್ಟರಲ್ಲಿ ಬರೀರಿ- ಬರೆದೆ.

ವಿಳಾಸನೂ ಬರೀರಿ,ಹಾಂ, ಹಾಗೆ.. - ಅದ್ನೂ ಬರೆದೆ.

ಪೂರ್ತಿ ಬರೀರಿ ಸಾರ್, ವಿದ್ ಪಿನ್ ಕೋಡ್.- ಓಕೆ, ಅದ್ನೂ..

ಯಾರನ್ನ ಮೀಟಾಗಕ್ ಬಂದಿದ್ದೊ ಅಂತ್ಲೂ ಬರೀರಿ- ಹುಂ..

ಯಾಕೆ, ಏನು, ಏತ್ತ ಎಲ್ಲದ್ನೂ ಬರೀರಿ- ಬರ್ದೆ.

"ಎಲ್ಲದೂ ಆಯ್ತಾ?- ಕೇಳಿದೆ. ಆಯ್ತು ಸಾರ್.

"ಅವ್ರು ಇಲ್ಲೇ ಇರ್ತಾರ, ಇದೇ ಬಿಲ್ಡಿಂಗಲ್ಲಿ?"

ಓ ಅಲ್ಲಿ ರಿಸೆಪ್ಶನ್ ಕೌಂಟರ್ ಇದೆ, ಅಲ್ ಹೋಗಿ ಕೇಳಿ- ಹೇಳ್ತಾರೆ!!!

ಸರಕಾರದ ಕೆಲಸ, ದೇವರ ಕೆಲಸ.

ಶನಿವಾರ, ಏಪ್ರಿಲ್ 12, 2008

ಪೂರ್ಣಚಂದ್ರ ತೇಜಸ್ವಿ ಮತ್ತೆ ಬಂದಿದ್ದಾರೆ!

ಸುಮ್ನೆ ಮಾಡೋಕೇನೂ ಕೆಲಸ ಇಲ್ಲದಿದ್ದಾಗ, ಅಥವಾ ಆಫೀಸಿಂದ ಬೇಗ ಹೊರಟರೆ ಗಾಂಧೀ ಬಜಾರಲ್ಲಿ ಒಂದ್ ಸುತ್ ಹೊಡೆಯೋದು ಅಭ್ಯಾಸ ನನಗೆ. ಗಾಂಧಿ ಬಜಾರು ಅಂದರೆ ಐಸ್ ಥಂಡರು, ಮಹಾಲಕ್ಷ್ಮೀ ಟಿಫನ್ ರೂಮು ಮತ್ತು ಅಂಕಿತ ಬುಕ್ ಸ್ಟಾಲು.

ಮೊನ್ನೆ ಹೀಗೇ ಅಂಕಿತಕ್ಕೆ ಹೋದೆ, ವಿನಾಕಾರಣ. ಯಾವುದಾದರೂ ಹೊಸ ಪುಸ್ತಕ ಇದೆಯಾ ಅಂತ ಹುಡುಕಾಡಿದೆ. ಕಾಣಲಿಲ್ಲ. ಬೇಕಾದ್ದು ಇರಲಿಲ್ಲ. ಎಂದಿನ ಹಾಗೆ ತೇಜಸ್ವಿ ಪುಸ್ತಕ ಇದ್ದ ಸಾಲುಗಳನ್ನು ನೋಡಿದೆ. ಅದೊಂದು ಅಭ್ಯಾಸ ನನಗೆ. ಎಟ್ ಲೀಸ್ಟ್ ಅವರ ಹಳೆಯ ಪುಸ್ತಕಗಳ ಹೊಸ ಮುಖಪುಟ ವಿನ್ಯಾಸಗಳನ್ನಾದರೂ ನೋಡಿ, ಹಾಗೇ ಆ ಪುಸ್ತಕಗಳನ್ನ ಮತ್ತೆ ಎಲ್ಲಿತ್ತೋ ಅಲ್ಲಿಡುತ್ತೇನೆ. ಮೊನ್ನೆ ಮಾತ್ರ ಅತ್ಯಂತ ಅಚ್ಚರಿ ಕಾದಿತ್ತು ನನಗೆ. ತೇಜಸ್ವಿಯವರ ಹೊಸ ಪುಸ್ತಕವೊಂದು ಬೆಚ್ಚಗೆ ಕುಳಿತಿತ್ತು ಅಲ್ಲಿ. ಹೌದು ಕಣ್ರೀ, ನಮ್ಮ ಪೂರ್ಣಚಂದ್ರ ತೇಜಸ್ವಿಯವರ ಹೊಸ- ಹೊಚ್ಚ ಹೊಸ ಪುಸ್ತಕ! ಖುಷಿಯಿಂದ ಕಿರಿಚುವುದೊಂದು ಬಾಕಿ. ನನ್ನ ಯದ್ವಾ ತದ್ವಾ ಹಾವಭಾವದ ಕಣ್ಣು- ಮುಖಗಳನ್ನು ನೋಡಿ ಶ್ರೀಮತಿ ಕಂಬತ್ತಳ್ಳಿಯವರು , "ಇವತ್ತಷ್ಟೇ ಬಂತು ಈ ಪುಸ್ತಕ" ಅಂದರು.

"ಪಾಕಕ್ರಾಂತಿ ಮತ್ತು ಇತರ ಕಥೆಗಳು" ಅನ್ನುವುದು ಕಥಾ ಸಂಕಲನದ ಹೆಸರು. 1998 ರಿಂದ 2007ರ ವರೆಗೆ - ಲಂಕೇಶ್ ಪತ್ರಿಕೆಯಿಂದ ಹಿಡಿದು ವಿಕ್ರಾಂತ ಕರ್ನಾಟಕದವರೆಗೆ ಪ್ರಕಟವಾದ ಎಂಟು ಕಥೆಗಳಿವೆ ಇದರಲ್ಲಿ. ನಾನಂತೂ ದೇವರಾಣೆಯಾಗೂ ಒಂದೂ ಕಥೆಯನ್ನು ಈ ಮೊದಲು ಓದಿರಲಿಲ್ಲ. ತೇಜಸ್ವಿ ಈಗತಾನೇ ಕೂತು ಈ ಕಥೆಗಳನ್ನ ಬರೆದು ಮುಗಿಸಿ, ಪಬ್ಲಿಶ್ ಮಾಡಿಸಿದ್ದಾರೆ ಅನ್ನಿಸಿತು ನನಗಂತೂ. ಪುಸ್ತಕ ಪ್ರಕಾಶನಕ್ಕೆ ಸಾವ್ರ ಧನ್ಯವಾದ!

ಬೆನ್ನುಡಿಯಲ್ಲಿ ಹೇಳಿದ ಹಾಗೆ, " ಪೂರ್ಣಚಂದ್ರ ತೇಜಸ್ವಿಯವರು ನಮ್ಮ ತಲೆಮಾರಿನ ಒಂದು ಅದ್ಭುತ ಪ್ರತಿಭೆ ಹಾಗೂ ಪ್ರಕ್ರಿಯೆ. ಅವರ ಅನುಪಸ್ಥಿತಿಯಲ್ಲಿ ಅವರು ಸೃಷ್ಟಿಸಿರುವ ಲೋಕದ ಬಂಧಿಗಳು ನಾವು".

ನಾನಂತೂ ಇಲ್ಲಿನ ಕಥೆಗಳಲ್ಲಿ ಏನಿದೆ ಅಂತ ಒಂದು ಸಾಲೂ ಹೇಳುವುದಿಲ್ಲ. ತಗಂಡು ಓದಿ. ಅಂಕಿತಕ್ಕೋ, ಸಪ್ನಾಕ್ಕೋ ಹೋಗಿ, ಬೆಂಗಳೂರಿಗರು. ಮಂಗಳೂರಿಗರಿಗೆ ಅತ್ರಿ, ಮೈಸೂರಲ್ಲಿ ಗೀತಾ ಬುಕ್ ಹೌಸು..

ಪೋಸ್ಟ್ ಮುಖಾಂತರ:
ಪುಸ್ತಕ ಪ್ರಕಾಶನ,
ಬುಕ್ ಪೋಸ್ಟ್ ಸರ್ವೀಸ್,
ಪೋಸ್ಟ್ ಬಾಕ್ಸ್ ನಂ:58,
ಮೂಡಿಗೆರೆ-577132,
ಚಿಕ್ಕಮಗಳೂರು ಜಿಲ್ಲೆ,
ಫೋನು- 08263-228353,240202

ಹ್ಯಾಪಿ ರೀಡಿಂಗು!.

ಸೋಮವಾರ, ಏಪ್ರಿಲ್ 07, 2008

ಬೆಂಗಳೂರಿನ ಹೂಗಳು

ಯುಗಾದಿ ಹಬ್ಬಕ್ಕೆ ಪ್ರಕೃತಿ ತನ್ನನ್ನು ತಾನು ಸಿಂಗರಿಸಿಕೊಳ್ಳುವ ಬಗೆ ಅದ್ಭುತ. ಮೊನ್ನೆ ಕ್ಯಾಮರಾ ಜೊತೆ ಸುತ್ತಬೇಕಿದ್ದರೆ ಕೆಲವೊಂದಿಷ್ಟು ತಂಪು ಚಿತ್ರಗಳು ಸೆರೆಸಿಕ್ಕವು.













ಎಲ್ಲರಿಗೂ ಯುಗಾದಿಯ ಶುಭಾಶಯಗಳು.

ಮಂಗಳವಾರ, ಮಾರ್ಚ್ 25, 2008

"ಷ".

ನಾನು ಆಗ ಒಂದನೇ ಕ್ಲಾಸ್ ನಲ್ಲಿದ್ದೆ. ಟೀಚರ್ರು ಎಲ್ಲರಿಗೂ ಕನ್ನಡದ ಒಂದೊಂದು ಅಕ್ಷರವನ್ನು ತೋರಿಸಿ ಅದನ್ನು ಗುರುತಿಸಲು ಹೇಳುತ್ತಿದ್ದರು. ನನ್ನ ಪಾಳಿ ಬಂತು. ಅವರು "ಷ" ಅಕ್ಷರವನ್ನು ತೋರಿಸಿ ಓದು ಅಂದರು. ನನಗೆ ಏನಾಯಿತು ಅಂತ ಗೊತ್ತಿಲ್ಲ, ಯಾಕೆ ಹಾಗಾಯಿತು ಅಂತಲೂ ಗೊತ್ತಿಲ್ಲ, ಏನು ಮಾಡಿದರೂ ಈ ಅಕ್ಷರವನ್ನು ಗುರುತಿಸಲೇ ಆಗಲಿಲ್ಲ. ನಾನು ಅವರನ್ನೂ , ಆ ಅಕ್ಷರವನ್ನೂ ನೋಡುತ್ತ ಸುಮ್ಮನೇ ನಿಂತುಬಿಟ್ಟೆ. ಟೀಚರ್ ನನ್ನ ಕನ್ನಡ ಪುಸ್ತಕದ, "ಷ" ಅಕ್ಷರದ ಎದುರಿಗೆ ಕೆಂಪು ಶಾಯಿಯಲ್ಲಿ ತಪ್ಪು ಮಾರ್ಕ್ ಹಾಕಿದರು. ನನ್ನನ್ನ ನನ್ನದೇ ತರಗತಿ ಮತ್ತೊಂದು ಹುಡುಗಿಯ ಎದುರು ಎಳೆದು ನಿಲ್ಲಿಸಿ "ಇವನಿಗೆ ಅ ಆ ಇ ಈ ಹೇಳಿಕೊಡು" ಅಂದು ಬಿಟ್ಟರು. ಆಮೇಲೆ ಬಹುಕಾಲ ನನ್ನನ್ನು ಆ ಟೀಚರ್ರು "ಕನ್ನಡ ಮಾಸ್ಟ್ರ ಮಗನಾಗಿ ಕನ್ನಡ ಅಕ್ಷರನೇ ಓದೋಕೆ ಬರೋದಿಲ್ಲ ನಿಂಗೆ" ಅಂತ ಹೀಯಾಳಿಸುತ್ತಲೇ ಇದ್ದರು. ಇವತ್ತಿಗೂ ಆ ಕೆಂಪು ಶಾಯಿಯ ತಪ್ಪು ಗುರುತು, ನನ್ನ ಕಣ್ಣೆದುರಿಗೇ ಇದೆ.


******

ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಶಿಕ್ಷಕರ ದಿನಾಚರಣೆಯ ದಿನ ಇಷ್ಟವಿದ್ದವರು ಭಾಷಣ ಮಾಡಬಹುದು ಅಂತ ನಮ್ಮ ಹೆಡ್ ಸಿಸ್ಟರ್ ಕ್ಲಾಸಿಗೆ ಬಂದು ಹೇಳಿದ್ದರು. ನಾನು ಮನೆಗೆ ಹೋಗಿ ಅಪ್ಪನಿಗೆ ಹೇಳಿದೆ ಮತ್ತು ಅವರು ಆಗಿನ ನನ್ನ ಲೆವೆಲ್ಲಿಗೆ ತಕ್ಕ ಹಾಗೆ, "ಗುರು ಬ್ರಹ್ಮಾ, ಗುರೂರ್ ವಿಷ್ಣು.. ಇತ್ಯಾದಿಯಿಂದ ಶುರುವಾಗುವ ಭಾಷಣವೊಂದನ್ನು ತಯಾರು ಮಾಡಿಕೊಟ್ಟಿದ್ದರು. ನಾನೂ ಬಾಯಿಪಾಠ ಮಾಡಿಕೊಂಡು ತಯಾರಾದೆ. ಶಿಕ್ಷಕರ ದಿನಾಚರಣೆಯ ಬೆಳಿಗ್ಗೆ ಫಂಕ್ಷನ್ನು ಶುರುವಾಗುವ ಕೊಂಚ ಮುನ್ನ ಹೆಡ್ ಸಿಸ್ಟರ್ ಬಳಿಗೆ ಹೋಗಿ ನಾನೂ ಭಾಷಣ ಬರೆದುಕೊಂಡು ಬಂದಿದ್ದೇನೆ, ಅಂದೆ. ನನ್ನ ಎದುರಿಗೆ ಒಂದು ಸಲ ಓದಬೇಕಿತ್ತಲ್ಲಾ... ಈಗ ಟೈಮಿಲ್ಲ, ಸರಿಯಾಗಿ ಬಾಯ್ಪಾಠ ಮಾಡಿದೀಯಲ್ಲ ? ಅಂತ ಕೇಳಿದ್ರು. ಹುಂ ಅಂದೆ. ನನ್ನ ಗ್ರಾಚಾರಕ್ಕೆ ಸ್ಟೇಜಿನ ಮೇಲೆ ಯಾಕೋ ಒಂದೆರಡು ಸಾಲು ಮರೆತು ಹೋಗಿ ಬೆಬ್ಬೆಬ್ಬೆ ಆಯ್ತು. ಹೆಡ್ ಸಿಸ್ಟರ್ ಪ್ರೋಗ್ರಾಮು ಮುಗಿದು ಹೋದ ಮೇಲೆ ತಮ್ಮ ಚೇಂಬರಿಗೆ ಕರೆದು, ಉಗಿದು ಉಪ್ಪಿನಕಾಯಿ ಹಾಕಿದ್ರು. ಅವರ ದೊಡ್ಡ ನಾಗರ ಬೆತ್ತ ತೆಗೆದು ಎರಡು ಹೊಡೆದರು. ಆಮೇಲೆ ಮತ್ತೆ ಯಾವತ್ತೂ ನಾನು ಭಾಷಣ ಮಾಡಲಿಲ್ಲ, ಹೈಸ್ಕೂಲು ಮುಗಿಯುವವರೆಗೆ. ಆಮೇಲೆ ಸ್ಟೇಜು ಹತ್ತಿದರೂ ಕೈ ಕಾಲು ನಡುಗುತ್ತಿತ್ತು ಸ್ವಲ್ಪ ದಿನ.

*****


ಮೊನ್ನೆ ನನ್ನ ಚಿಕ್ಕಮ್ಮ ಮನೆಗೆ ಬಂದಿದ್ದರು, ಅವರಿಗೊಬ್ಬ ಪುಟ್ಟ ಮಗಳು, ೪ ವರ್ಷದವಳು. ಅವಳು ಚೆನ್ನಾಗಿ ಸಿನಿಮಾ ಹಾಡೆಲ್ಲ ನೆನಪಿಟ್ಟುಕೊಂಡು ಹಾಡುತ್ತಾಳೆ ಅಂತಿದ್ದರು ಅವರು. ಇಲ್ಲ ಚಿಕ್ಕಮ್ಮಾ, ನಾಡಿದ್ದು ಶಾಲೆಗೆ ಸೇರಿದ ಮೇಲೆ ನಿನ್ನ ಮಗಳು ಹಾಡುವ ಉಲ್ಲಾಸದ ಹೂಮಳೇ.. ವರ್ಕೌಟ್ ಆಗುವುದಿಲ್ಲ, ಬೇರೇನಾದರೂ ಬೇಕಾಗುತ್ತದೆ ಅಂದೆ. ಆವಾಗ ಇದೆಲ್ಲ ನೆನಪಾಯಿತು.


ಭಾನುವಾರ, ಮಾರ್ಚ್ 09, 2008

ಬನ್ನಿ, ಭೇಟಿಯಾಗೋಣ.

ಮತ್ತೊಂದು ಕನಸು ನನಸಾಗಲು ಹೊರಟಿದೆ. ಬಹುದಿನಗಳಿಂದ ಅಂದುಕೊಂಡಿದ್ದು.

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ.

ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ.

ಗುರುವಾರ, ಫೆಬ್ರವರಿ 28, 2008

ದೇಗುಲದ ಪ್ರೇಮಿಗಳು..

ದೇಗುಲದ ಗೋಪುರದ ಪಾರಿವಾಳದ ಜೋಡಿ

ನೋಡುತಿದ್ದವು ಹೀಗೇ, ಜನರ ಸಾಲು

ಅಂದು ಮಂಗಳದ ದಿನ, ಭಕ್ತ ಸಾಗರವಲ್ಲಿ

ಸಾಲು ಹೂಗಳ ದಂಡೆ, ಮತ್ತೆ ಪಂಚೆ ಶಾಲು.


ಎಲ್ಲ ದಿನವೂ ಹೀಗೆ, ಅದದೇ ಭಕ್ತರ ಚಕ್ರ

ಎಂಥ ಹಬ್ಬಕು ಕೂಡ ಬಂದೆ ಬಹರು.

ಗಂಡು ಪಕ್ಷಿಯು ಮೆಲ್ಲನಾಕಳಿಸಿ ನುಡಿಯಿತು

ನೋಡಿದವರನೆ ನೋಡಿ ಬಹಳ ಬೇಜಾರು


ಹೆಣ್ಣು ಹಕ್ಕಿಯ ದೃಷ್ಟಿ ಬೇರೆಲ್ಲೊ ಇದ್ದಿತ್ತು-

ಹಾಗಿಲ್ಲ ಈ ದಿನವು, ಚಂದ್ರಶಾಲೆಯ ನೋಡು

ನವ ಜೋಡಿ ಕೂತಿಹುದು ಕಂಬಸಾಲಿನ ಮಧ್ಯ

ಹುಡುಗ ಬಲುತುಂಟ, ಆಕೆ ಭಯದ ಗೂಡು.


ಗಂಡುಪಕ್ಕಿಯು ಕೂಡ ಮೆಲ್ಲ ನೋಡಿತು ಅವರ

ಬಲು ಚೆಲುವ ಜೋಡಿಯದು, ಮಾತೇ ಇಲ್ಲ!

ಕೇಸರಿಯ ಸೀರೆಯಲಿ ಅಡಗಿಹಳು ಆ ಹುಡುಗಿ

ಅವಳನೇ ನೋಡುತಲಿ, ಮೈಮರೆತಿಹನು ನಲ್ಲ.


ಆಕೆಗೋ ನಾಚಿಕೆಯು, ತಲೆಯನೆತ್ತುವುದಿಲ್ಲ

ಇವನ ಕೈ ಬಳಸಿಹುದು ಅವಳ ಹೆಗಲು

ಪಿಸುಮಾತನಾಡುವರು, ಅತ್ತಿತ್ತ ನೋಡುವರು

ಕಣ್ಣಪಾಪೆಗಳಲ್ಲಿ ಸಣ್ಣ ದಿಗಿಲು.


"ಹೊಸ ಜೋಡಿಯಿರಬೇಕು, ಹೆದರಿಕೆಯು ಸಹಜ

ಸರಿಯಾಗುವುದು ಎಲ್ಲ, ದಿನವು ಕಳೆದಂತೆ"

ಹೆಣ್ಣುಪಕ್ಷಿಯ ನುಡಿಗೆ ಹೌದೆಂತು ಗಂಡು,

ಧೈರ್ಯ ಬರುವುದು ನೋಡು, ಪ್ರೀತಿ ಬೆಳೆದಂತೆ.


ನೋಡುತಿರುವಂತೆ ಇವು, ಮೆಲ್ಲನೆದ್ದರು ಅವರು

ಸೇರಿಕೊಂಡರು ಮೆಲ್ಲ, ಪ್ರದಕ್ಷಿಣೆಯ ಸಾಲು

ಕೈಕೈಯು ಬೆಸೆದಿತ್ತು, ಎಂದೂ ಜೊತೆಗಿದ್ದಂತೆ

ಮೈಮೇಲೆ ಚೆಲ್ಲಿತ್ತು, ಬಿಸಿಲ ಕೋಲು.


ದೇವರಲದೇನು ಕೇಳಿದರೋ, ಗೊತ್ತಾಗಲಿಲ್ಲ

ಅವನಿಗದು ಕೇಳಿಸಿತೋ, ತಿಳಿಯಲಿಲ್ಲ.

ಇವರ ಮೊಗದೊಳು ತುಂಬು ನೆಮ್ಮದಿಯ ಕಳೆಯಿತ್ತು

ಅಷ್ಟಿದ್ದರದೇ ಸಾಕು, ಬೇರೆ ಬೇಕಿಲ್ಲ.


ಜನರ ಜಂಗುಳಿ ದಾಟಿ ಹೊರಗೆ ಹೊರಟರು ಅವರು

ತಲೆಯೆತ್ತಿ ನಡೆಯುತ್ತ, ಜಗವ ಗೆದ್ದಂತೆ

ಗೋಪುರದ ಜೋಡಿಗಳು ಹಾರೈಸಿದವು ಅವರ

ಪ್ರೀತಿಝರಿಯಾ ಒರತೆ ಬತ್ತದಂತೆ.

ಟಿಪ್ಪಣಿ:

ಈ ಕವನ ಬರೆದಿದ್ದು ವಾರದ ಹಿಂದೆ. ಯಾವತ್ತೋ ತಲೆಯೊಳಗೆ ಕೂತಿದ್ದ ವಿಷಯವನ್ನು ಹಾಳೆಗಿಳಿಸಿದ್ದೆ. ಆಮೇಲೆ ಅರುಣನಿಗೆ ಓದಿ ಹೇಳಿ, ಮತ್ತಾವುದೋ ಕಾರಣಕ್ಕೆ ಬೇಕಿರುವುದರಿಂದ ಬ್ಲಾಗಿಗೆ ಹಾಕುವುದಿಲ್ಲ ಅಂತ ಅಂದುಕೊಂಡಿದ್ದೆ. ಸುಶ್ರುತ ತಾನೂ ಕವನ ಬರಿಯೋ ಪ್ರಯತ್ನ ಮಾಡ್ತಾ ಇದೀನಿ ಅಂತ ನಿನ್ನೆ ಹೇಳುತ್ತಿದ್ದ. ಇವತ್ತು ಈ ಪುಣ್ಯಾತ್ಮ ಬರೆದ ಕವನ ಓದುತ್ತಿದ್ದರೆ, ನಾನು ಬರೆದ ಈ ಕವನ ಮತ್ತು ಅವನ ಕವನ - ಎಲ್ಲೋ ಹುಟ್ಟುತ್ತಲೇ ಬೇರೆಯಾದ ಮಕ್ಕಳ ಹಾಗೆ ಕಂಡವು! ನಮ್ಮಿಬ್ಬರ ಕವನಗಳೂ ಒಂದು ಮತ್ತೊಂದರ ಮುಂದರಿಕೆಯಂತೆಯೋ ಅಥವಾ ಎರಡನ್ನೂ ಮಧ್ಯದಲ್ಲೆಲ್ಲೋ ಸೇರಿಸಿಕೊಂಡು ಓದಬಹುದಾದಂತೆ ಕಾಣಬಹುದು. ನನಗಂತೂ ಇದು ದೊಡ್ಡ ಅಚ್ಚರಿ!

ಮಂಗಳವಾರ, ಫೆಬ್ರವರಿ 26, 2008

ಹೀಗೊಂದು ಬೆಳಗು

ಕಾರ್ತಿಕದ ಹೊಸ ಬೆಳಗು, ಚಳಿಯು ಬಹಳಿತ್ತು
ದೇಗುಲದ ಘಂಟೆ ತಾನ್ ಇನ್ನು ಮಲಗಿತ್ತು.
ಅವಳಾಗಲೇ ಎದ್ದು ಅಂಗಳದಲಿದ್ದಳು
ರಂಗೋಲಿ ಚುಕ್ಕಿಯಲಿ ತಾನೆ ಚಿತ್ರವಾಗಿದ್ದಳು

ಅದಾವುದೋ ಭಂಗಿಯಲಿ ಕಟೆದಿಟ್ಟ ಹಾಗೆ,
ಕೂತಿದ್ದಳವಳು, ಇಳಿದು ಬಂದಂತೆ ಸೊಬಗೆ.
ಕೈಬೆರಳುಗಳೋಡುತಿವೆ, ಸೇರಿಸಲು ಬಂಧ
ಕಣ್ಣಾಲಿಗಳ ಚಲನೆ, ರಂಗವಲ್ಲಿಗೂ ಚಂದ

ಅಂಗಳದೊಳಿಂಗುತಿದೆ ರಾತ್ರಿಯಾ ಮಳೆನೀರು
ಮಂಗಳದ ರಂಗೋಲಿ ಒದ್ದೆ ನೆಲದಿ.
ಕಾಡಂಚಿನಾ ಮನೆಯು, ತಣ್ಣನೆಯ ಮೆಲುಗಾಳಿ
ಹಾಡುತಿದೆ ವನಪಕ್ಷಿ, ಹಸಿರಿನೊಳಗಿಂದ

ಚಿತ್ರದೊಳಗಡೆಯಿಂದ ಮೆಲ್ಲನೆದ್ದಳು ಅವಳು
ಮೊಗದೊಳಗೆ ತೃಪ್ತಿಗೆರೆ, ಏನೋ ಅನಂದ.
ಬಣ್ಣಬಟ್ಟಲ ಜೊತೆಗೆ, ಸೀರೆಯಂಚನು ಹಿಡಿದು
ನಡೆದು ಹೋದಳು ಆಕೆ ಎಳೆಬೆಳಕಿನೊಳಗೆ

ಮಿದುನೆಲದ ಮಣ್ಣಲ್ಲಿ ಪಾದಪದ್ಮಗಳ ಅಚ್ಚಿತ್ತು
ರಂಗವಲ್ಲಿಯ ಜೊತೆಗೆ ಸ್ಪರ್ಧೆಗಿಳಿದಂತೆ.
ದೂರಲೋಕದ ಸಿರಿಯು, ಎದ್ದು ಹೋದಂತಿತ್ತು
ಹೆಜ್ಜೆಗುರುತುಗಳನ್ನು ಇಲ್ಲೇ ಬಿಟ್ಟು.

ಶನಿವಾರ, ಫೆಬ್ರವರಿ 16, 2008

ಜಂಗಮ ಬಿಂಬಗಳು -೩

ಅವನು ಬೈಕಿನ ಹಿಂದೆ ಬರೆದುಕೊಂಡಿದ್ದ - "ಐ ಡೋಂಟ್ ಕೇರ್"ಅಂತ. ಒಂದು ದಿನ ಬ್ಯಾಂಕಿನವರು ಬಂದು ಬೈಕು ಎತ್ತಿಕೊಂಡು ಹೋದರು. ಮೂರು ನಾಲ್ಕು ತಿಂಗಳಿಂದ ಸಾಲದ ಕಂತು ಕಟ್ಟಿರಲಿಲ್ಲವಂತೆ.

****

ಆತನಿಗೆ ಕೆಲದಿನಗಳ ಕಾಲ ಮುಖವಾಡ ಧರಿಸಿ ಬದುಕಬೇಕು ಅನ್ನುವ ಆಸೆಯಾಯಿತು. ಧರಿಸಿದ. ಎಷ್ಟೋ ದಿನಗಳ ನಂತರ ಮುಖವಾಡ ತೆಗೆಯಬೇಕನಿಸಿತು. ತೆಗೆದ. ಮುಖವಾಡದ ಜೊತೆಗೆ ಮುಖವೂ ಕಿತ್ತು ಬಂತು.

****

ಗುರುವಾರ, ಫೆಬ್ರವರಿ 14, 2008

ಅರ್ಧ ಕವಿತೆಗಳು

ಕಡಲು ಜಗದ ದೊಡ್ಡ ಪ್ರೇಮಿ
ನಿತ್ಯ ಮಿಲನ ಅದಕೆ.
ನದಿಗಳಿಹುದು ಲಕ್ಷ ಲಕ್ಷ
ತೀರದದರ ಬಯಕೆ.
****
ನಟ್ಟಿರುಳ ದಾರಿಯಲಿ ನಡೆಯುತ್ತಿದ್ದರು ಅವರು
ದೂರ ತಿರುವಿನಲೆಲ್ಲೋ ಕಂಡಿತ್ತು ಸೊಡರು.
ಬೆಳಕ ನೋಡಿದ್ದೇ ತಡ, ಕೈ ಬೆಸುಗೆ ಬಿಗಿಯಿತು
ಹೆಜ್ಜೆಗಳ ಪಥ ಮೆಲ್ಲ ಹಿಂದಕ್ಕೆ ತಿರುಗಿತು
****
ಕೆರೆಯ ಕಟ್ಟೆಯ ಮೇಲೆ ಅವಳು ನಡೆದಿದ್ದಳು.
ಮಿಂದೊದ್ದೆ ಪಾದಗಳ ಅಲ್ಲೆ ಊರಿದ್ದಳು.
ಹೂವು ತಂದಿದ್ದನವ ದೇವರಾ ಪೂಜೆಗೆ.
ಚೆಲ್ಲಿ ಹೋದವು ಎಲ್ಲ, ಒದ್ದೆ ಪಾದಗಳ ಜಾಡಿಗೆ
****

ಗುರುವಾರ, ಫೆಬ್ರವರಿ 07, 2008

ಚಿತ್ರ ಚಾಪ - ಬರಹದ ದಾರಿಯ ಮೇಲಿನ ಕಾಮನಬಿಲ್ಲು.

ನನಗೆ ಬರೆಯುವ "ಹುಚ್ಚು" ಆರಂಭವಾಗಿದ್ದು ನಾನು ಬಿ.ಎ ಓದುತ್ತಿದ್ದ ಕಾಲದಲ್ಲಿ. ಕವನ, ಕಥೆಯಂತದ್ದನ್ನು ಬರೆಯಲು ಆರಂಭಿಸಿದ್ದೆ ಆವಾಗ. ಸುಮ್ಮನೇ ಮನಸ್ಸಿಗೆ ತೋಚಿದ್ದನ್ನು ಗೀಚುವುದು, ಸಿಕ್ಕಲ್ಲಿ ಎಸೆಯುವುದು ಮಾಮೂಲಾಗಿತ್ತು. ಇನ್ನು ನನಗೇ ತೀರಾ ಇಷ್ಟ ಅನ್ನಿಸಿದ್ದನ್ನು ಎಲ್ಲಾದರೂ ಪುಸ್ತಕದಲ್ಲಿ ಬರೆದಿಡುತ್ತಿದ್ದೆ. ಅಪ್ಪ ಒಂದಷ್ಟು ದಿನ "ಪುಣ್ಯಾತ್ಮಾ, ಬರೆದಿದ್ದನ್ನು ಯಾವುದಾದರೂ ಪತ್ರಿಕೆಗೆ ಕಳಿಸೋ" ಅಂತ ಹೇಳೀ ಹೇಳೀ ಸೋತು ಹೋದರು.ನಾನು ನನ್ನ ಪಾಡಿಗೆ ಗೀಚಿ ಎಲ್ಲಾದರೂ ಹಾಕುವುದನ್ನು ಹಾಯಾಗಿ ಮುಂದುವರೆಸಿದ್ದೆ. ಅಮ್ಮ ಮನೆ ಗುಡಿಸುವಾಗ ನಾನು ಬರೆದು ಬಿಸಾಕಿದ ಹಾಳೆಗಳನ್ನು ತಂದು ನನ್ನ ಮುಂದಿಡುತ್ತಿದ್ದರು. ಅವರಿಗೂ ಭ್ರಮನಿರಸನವಾಗಿ, ನನ್ನ ಬರಹವನ್ನು "ಸೂಟ್ ಕೇಸ್ ಸಾಹಿತ್ಯ" ಅಂತ ನಾಮಕರಣ ಮಾಡಿದರು.

ಆಮೇಲೆ ಬೆಂಗಳೂರಿಗೆ ಬಂದು ಬ್ಲಾಗೂ ಅದೂ ಇದೂ ಅಂತ ಶುರು ಮಾಡಿಕೊಂಡು ಬರೆದದ್ದು ಉಳಿಯತೊಡಗಿತು. ತಂಗಿ ಮನೆಯಿಂದ ಆವಾಗಾವಾಗ ಫೋನ್ ಮಾಡಿ, "ಅಣ್ಣಾ, ನೀ ಬರ್ದ್ ಕವ್ನ ಸಿಕ್ಕಿದ್ದು, ಅರ್ಧ ಬರ್ದಿಟ್ಟ ಕಥೆ ಸಿಕ್ಕಿದ್ದು" ಅಂತ ಅವ್ಳು ಬೆಂಗಳೂರಿಗೆ ಬರೋವರೆಗೂ ಹೇಳುತ್ತಿದ್ದಳು. ಈ ಬರವಣಿಗೆ ಎಲ್ಲಿಗೆ ಹೋಗುತ್ತದೆ ಅನ್ನುವುದು ನಂಗೂ ಗೊತ್ತಿರಲಿಲ್ಲ.

ಇಂಟರ್ನೆಟ್ಟಿನಲ್ಲಿ ಜೀಮೇಲೂ,ಆರ್ಕುಟ್ಟು ಅಂತೆಲ್ಲ ಬಂದು, ನನ್ನ ಹಾಗಿದ್ದೇ ಇನ್ನೊಂದಿಷ್ಟು ಜನ ಹುಚ್ಚರ ಪರಿಚಯ ಆಯಿತು. ಚಾರಣ, ಹರಟೆ ಹೆಚ್ಚಿತು. ಯಾವುದೋ ಒಂದು ಭಯಂಕರ ಘಳಿಗೆಯಲ್ಲಿ ನಾವೊಂದಿಷ್ಟುಜನ ಸೇರಿ ಪುಸ್ತಕ ಯಾಕೆ ಬರೀಬಾರದು ಅನ್ನುವ ಆಲೋಚನೆ ಬಂತು. ತಿಂಗಳಾನುಗಟ್ಟಲೇ ತಪಸ್ಸಿನ ನಂತರ ನಾವು ಕಂಡ ಕನಸು ನನಸಾಗೋ ಸಮಯವೂ ಹತ್ತಿರ ಬರ್ತಿದೆ ಈಗ.

ನಾಡಿದ್ದು ಭಾನುವಾರ ಬೆಳಿಗ್ಗೆ, ನಾನು, ಅರುಣ, ಸುಶ್ರುತ, ಅನ್ನಪೂರ್ಣ ಮತ್ತು ಶ್ರೀನಿವಾಸ್ ಸೇರಿ ಬರೆದಿರುವ "ಚಿತ್ರ ಚಾಪ" ಪುಸ್ತಕದ ಬಿಡುಗಡೆ. ಪರಿಸರ ನಮ್ಮ ಪುಸ್ತಕದ ವಿಷಯ. ನಮ್ಮ ಕಣ್ಣಿಗೆ ಹೇಗೆ ಪ್ರಕೃತಿ ಕಂಡಿದೆಯೋ , ಹಾಗೆ ಬರೆದಿದ್ದೇವೆ. ಲಲಿತ ಪ್ರಬಂಧ, ಅನುಭವ ಕಥನ, ಚಾರಣದ ಟ್ರಾವೆಲಾಗು, ಕವನಗಳು - ಹೀಗೆ ಏನೇನೋ ಇವೆ, ಪರಿಸರದ ಬಗೆಗೆ.





ಬೆಂಗಳೂರಿನ ಬಸವನಗುಡಿಯ ಬಿ.ಪಿ ವಾಡಿಯಾ ರಸ್ತೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ, ನಮ್ಮ ಕನಸು "ಚಿತ್ರಚಾಪ" ನನಸಾಗ್ತಿದೆ. ನಮ್ಮೆಲ್ಲರ ಪ್ರೀತಿಯ ಲೇಖಕ ವಸುಧೇಂದ್ರ, ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಕನ್ನಡದ ಹಿರಿಯ ವಿದ್ವಾಂಸ ಪ್ರೊ. ಜಿ.ವೆಂಕಟಸುಬ್ಬಯ್ಯನವರು ಪುಸ್ತಕ ಬಿಡುಗಡೆ ಮಾಡಿ ನಮ್ಮ ಬೆನ್ನು ತಟ್ಟುತ್ತಾರೆ. ನಮ್ಮ ಪುಸ್ತಕಕ್ಕೆ ಬೆಳಕಾಗಿರುವುದು "ಪ್ರಣತಿ ಪ್ರಕಾಶನ ". ಪ್ರಣತಿಯ ಉದ್ಘಾಟನೆಯೂ ಅಂದೇ.

ಫೆಬ್ರವರಿ ೧೦ ನೇ ತಾರೀಕು ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನೀವೆಲ್ಲ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿರುತ್ತೀರಿ ಅನ್ನುವುದು ನಮ್ಮ ವಿಶ್ವಾಸ. ಬ್ಲಾಗುಗಳಲ್ಲೇ ಮಾತನಾಡುವುದು ಹೇಗೂ ಇದೆ. ಎಲ್ರೂ ಬನ್ನಿ , ಕೂತು ಮಾತಾಡೋಣ. ನಂಗೆ ಮತ್ತೇನು ಹೇಳಬೇಕು ಅಂತ ತೋಚುತ್ತಿಲ್ಲ.

ಮಂಗಳವಾರ, ಫೆಬ್ರವರಿ 05, 2008

ಜಂಗಮ ಬಿಂಬಗಳು - ೨

ಟ್ರಾಫಿಕ್ ಜಾಮ್ ಆಗಿತ್ತು. ನನ್ನ ಬೈಕಿನ ಪಕ್ಕದ ಐಷಾರಾಮಿ ಕಾರಿನ ಹಿಂದಿನ ಸೀಟಿನಲ್ಲಿ ಹುಡುಗನೊಬ್ಬ ಕೂತಿದ್ದ, ಸುಮ್ಮನೆ. ಐದು ಹತ್ತು ನಿಮಿಷ ಕಳೆಯಿತು ಹಾಗೇ. ನಾನು ನೋಡುತ್ತಿದ್ದ ಹಾಗೆಯೇ ಆ ಹುಡುಗ ಬ್ಯಾಗಿಂದ ಮೆಲ್ಲನೆ ನೋಟ್ ಬುಕ್ ತೆಗೆದ. ಅರೇ, ಇಲ್ಲೇ ಹೋಮ್ ವರ್ಕ್ ಮಾಡುತ್ತಾನಾ? ಅಂತ ಅಂದುಕೊಂಡೆ. ಆದರೆ ಅವನು ನೋಟ್ ಬುಕ್ಕಿಂದ ಹಾಳೆ ಹರಿದ. ಅಡ್ಡ ಉದ್ದ ಮಡಚಿ ರಾಕೆಟ್ ಮಾಡಿದ. ಕಿಟಕಿ ಮೆಲ್ಲನೆ ಇಳಿಸಿ, ಬೀಸಿ ಒಗೆದ. ಅದು ಎಷ್ಟು ದೂರ ಹಾರಿತು ಅನ್ನುವುದು ನನಗೆ ಮುಖ್ಯವಾಗಲಿಲ್ಲ.
**********
ನಾನು ಆಕೆಯನ್ನು ಮೊದಲು ನೋಡಿದ್ದು ಆ ಜಾಗದಲ್ಲಿ. ತುಂಬ ಬೇಸರದಲ್ಲಿದ್ದೆ ಮೊನ್ನೆ. ಬೈಕು ಅವಳನ್ನು ನೋಡಿದಲ್ಲೇ ಹಾದು ಹೋಗುತ್ತಿತ್ತು. ಅತ್ತ ತಿರುಗಿದರೆ, ಅವಳು ಕಂಡಳು.
**********
ಹೊಸದರಲ್ಲಿ ಟ್ರಾಫಿಕ್ ಸಿಗ್ನಲ್ ಹಸಿರಾದರೆ ಸಾಕು, ನುಗ್ಗಬೇಕು ಅನ್ನಿಸುತ್ತಿತ್ತು. ಈಗೀಗ ಅದು ಕೆಂಪಾಗಿಯೇ ಇರಲಿ ಅನ್ನಿಸುತ್ತದೆ.

ಶುಕ್ರವಾರ, ಫೆಬ್ರವರಿ 01, 2008

ಒಂದು ಬೆಳಕಿನ ಕಥೆ.

ನಡೆದ ಘಟನೆಯೊಂದರ ಬರಹ ರೂಪ...

ಐದಾರು ಜನ ಗೆಳೆಯರು, ಭದ್ರಾವತಿಗೆ ಹೋಗಿದ್ದರು. ಸ್ನೇಹಿತನೊಬ್ಬನ ಮದುವೆಯ ಸಲುವಾಗಿ. ವಾಪಾಸು ಬರುತ್ತಾ ಬೆಂಗಳೂರಿಗೆ ರೈಲು ಪ್ರಯಾಣ. ಬೀರೂರು ಜಂಕ್ಷನಿನಲ್ಲಿ ಯಾವುದೂ ವೇಗದೂತಕ್ಕೆ ದಾರಿ ಬಿಟ್ಟುಕೊಡುವ ಸಲುವಾಗಿ ಇವರಿದ್ದ ರೈಲು ನಿಂತಿತು. ಐದತ್ತು ನಿಮಿಷಗಳಾದರೂ ರೈಲು ಬರದ್ದನ್ನು ಕಂಡು ಇವರ ಠೋಳಿ ಮೆಲ್ಲನೆ ಕೆಳಗಿಳಿಯಿತು. ಸ್ವಲ್ಪ ಹೊತ್ತು ಅತ್ತಿತ್ತ ತಿರುಗಾಡಿಯಾಯಿತು. ಏನು ಮಾಡಲೂ ತೋಚುತ್ತಿರಲಿಲ್ಲ. ಅಷ್ಟರಲ್ಲಿ ಗುಂಪಿನಲ್ಲಿನ ಒಬ್ಬಾತನಿಗೆ ಪ್ಲಾಟ್ ಫಾರಂನ ಕೊನೆಯಲ್ಲಿ, ಸ್ವಲ್ಪ ದೂರದಲ್ಲಿ ನೇರಳೆ ಮರವೊಂದು ಕಂಡಿತು. ಮರು ಮಾತಿಲ್ಲದೇ ಎಲ್ಲರೂ ಅತ್ತ ಹೊರಟರು.

ಆ ಮರ ರೈಲ್ವೇ ಸ್ಟೇಶನ್ನಿಗೆ ಒತ್ತಿಕೊಂಡಂತ್ತಿದ್ದ ಮನೆಯೊಂದರ ಬೇಲಿಯೊಳಗಿತ್ತು. ಆ ಮನೆಯೆದುರೇ ಹದಿನೈದು - ಹದಿನಾರರ ವಯಸ್ಸಿನ ಹುಡುಗಿಯೊಬ್ಬಳು ಹರಕು ಟೇಬಲೊಂದರ ಮೇಲೆ, ಗಾಜಿನ ಡಬ್ಬವೊಂದರಲ್ಲಿ ನೇರಳೆ ಹಣ್ಣುಗಳನ್ನು ಇಟ್ಟುಕೊಂಡು ಕೂತಿದ್ದಳು. ಪಕ್ಕದಲ್ಲೊಂದು ಅಳೆಯುವ ಪುಟ್ಟ ಡಬ್ಬ. ಇವರು ಹೋಗಿ ನೇರಳೆ ಹಣ್ಣು ಬೇಕು ಅಂದಿದ್ದೇ, ಡಬ್ಬದಲ್ಲಿದ್ದ ಹಣ್ಣುಗಳನ್ನು ಅಳೆದು ಕೊಡಲು ರೆಡಿಯಾದಳು. ಆದರೆ ಈ ಪಟಾಲಂಗೋ, ಬಾಟಲಿಯ ಬಾಡಿದ ಹಣ್ಣುಗಳಿಗಿಂತ ಮರದಲ್ಲಿ ಜೋತಾಡುತ್ತಿರುವ ರಸಭರಿತ ಹಣ್ಣುಗಳ ಮೇಲೆಯೇ ಕಣ್ಣು. ಮರ ಹತ್ತಿಕೊಂಡು ಕೊಯ್ದುಕೊಳ್ಳುತ್ತೇವೆ ಅಂದಿದ್ದಕ್ಕ ಆಕೆ, ಇಲ್ಲ, "ಅಪ್ಪ ಅಮ್ಮ ಬೈತಾರೆ, ಎಷ್ಟು ಬೇಕಿದ್ದರೂ ಇಲ್ಲಿಯೇ ಕೊಂಡುಕೊಳ್ಳಿ, ನಿಮ್ಮ ದಮ್ಮಯ್ಯ, ಮರ ಹತ್ತಿ ಹಾಳು ಮಾಡಬೇಡಿ" ಅಂತ ಬೇಡಿಕೊಂಡಳು.

ಅವರಲ್ಲೊಬ್ಬ ಆಕೆಯನ್ನು ಮೆಲ್ಲನೆ ಸಮಾಧಾನಿಸತೊಡಗಿದ. "ನೋಡು, ಏನೂ ಚಿಂತಿಸಬೇಡ, ನಿಂಗೆ ತೊಂದರೆ ಕೊಡಲ್ಲ, ನಾವು ಹಣ್ಣು ಕೊಯ್ದುಕೊಂಡರೆ ಅದಕ್ಕೆ ದುಡ್ಡು ಕೊಡುತ್ತೇವೆ,ಮೋಸ ಮಾಡುವುದಿಲ್ಲ".. ಆಕೆ "ಅಲ್ಲ.. ಅಲ್ಲ.. "ಅನ್ನುವಷ್ಟರಲ್ಲಿ ಒಂದಿಬ್ಬರು ಬೇಲಿ ಹಾರಿ ಮರ ಹತ್ತಿಯಾಗಿತ್ತು. ಇಷ್ಟೊಂದು ಜನರ ಮುಂದೆ ಆಕೆ ಏನು ಮಾಡಲು ಸಾಧ್ಯ?, ಅಳುಮೋರೆ ಹಾಕಿಕೊಂಡು ಮರವನ್ನೇ ನೋಡುತ್ತ ನಿಂತಳು.

ಅಷ್ಟು ಹೊತ್ತಿಗೆ ಮತ್ತೊಬ್ಬ ಆಕೆಯನ್ನು ಮಾತಿಗೆಳೆದ. ಶಾಲೆಗೆ ಹೋಗುತ್ತೀಯಾ, ಏನು ಓದುತ್ತಿದ್ದೀ, ಯಾಕೆ ಈ ಹಣ್ಣುಮಾರುವ ಕೆಲಸ ಇತ್ಯಾದಿ ಇತ್ಯಾದಿ. ಆಕೆ ಒಂದು ಕಣ್ಣನ್ನ ಮರದತ್ತಲೇ ಇರಿಸಿ ಉತ್ತರಿಸುತ್ತಿದ್ದಳು. ನಾನು ಫಸ್ಟ್ ಪೀಯುಸಿ ಮುಗಿಸಿದ್ದೇನೆ, ಈ ಸಲ ಸೆಕೆಂಡ್ ಪೀಯುಸಿ, ಫೀಸ್ ಕಟ್ಟೋಕೆ ಮೂರುವರೆ ಸಾವಿರ ಬೇಕು, ಹಾಗಾಗಿ ಈ ಕೆಲ್ಸ. . ಎಷ್ಟು ದುಡ್ ಆಗತ್ತಮ್ಮಾ ನಿಂಗೆ ಇದ್ನ ಮಾರೋದ್ರಿಂದ ಅಂತ ಕೇಳಿದ್ದಕ್ಕೆ ಏನೋ ನೂರೋ ಇನ್ನೂರೋ ಆಗಿದೆ, ಆದಷ್ಟು ಆಗ್ಲಿ ಅಂತ ಮಾಡ್ತಾ ಇದೀನಿ ಅಂದ್ಲು ಅವಳು.

ಸ್ವಲ್ಪ ಹೊತ್ತಿಗೆ ಬೇಕಷ್ಟು ಹಣ್ಣುಗಳನ್ನು ತಿಂದು ಕೈ ಬಾಯಿ ನೇರಳೆ ಮಾಡಿಕೊಂಡ ಗೆಳೆಯರು ಅವಳ ಬಳಿ ಬಂದರು. ಮರ ಅರ್ಧ ಖಾಲಿಯಾಗಿತ್ತು. ದುಡ್ದೆಷ್ಟು ಕೊಡಬೇಕಮ್ಮಾ ಅಂದ ಒಬ್ಬ. ಇವಳಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಮರವೋ ಅರ್ಧ ಖಾಲಿ. "ನೋಡಿ ಸಾರ್. . ನೀವೇ ಕೊಡಿ" ಅಂದಳು ಅವಳು, ಬೇರೇನೂ ತೋಚದೆ!

ಅವಳು ಅವರನ್ನು ನೋಡುತ್ತಿದ್ದ ಹಾಗೆ ಅವರಲ್ಲೊಬ್ಬ ಪಟಪಟನೆ ದುಡ್ಡು ಕಲೆಕ್ಟ್ ಮಾಡಿದ. ಆಕೆಯ ಬಳಿ ಬಂದು ಆ ದುಡ್ಡನ್ನ ಕೈಗಿಟ್ಟ. ನೂರರ ನೋಟುಗಳು. ಮೂರುವರೆ ಸಾವಿರ ರೂಪಾಯಿಗಳು. "ತಗೋ,ನಿನ್ನ ಫೀಸಿಗೆ ".

ಅವಳು ಅಕ್ಷರಶಃ ದಿಗ್ಭ್ರಾಂತಳಾಗಿದ್ದಳು. ಮಾತು ನಿಂತೇ ಹೋದಂತಾಗಿತ್ತು. ಅವಳಿಗೆ ಏನನ್ನೂ ಮಾತನಾಡಲು ಬಿಡದ ಇವರುಗಳು "ಇಟ್ಕೋ , ಚೆನ್ನಾಗಿ ಓದು, ಸುಮ್ಮನೇ ಈ ಬಿಸಿಲಲ್ಲಿ ಕೂತು ನೇರಳೇ ಹಣ್ಣು ಮಾರುವ ಕೆಲಸ ಬೇಡ" ಅಂದರು. ಆಕೆ ಏನೋ ಹೇಳಲು ಬಾಯೆತ್ತುವ ಹೊತ್ತಿಗೆ ಜೋರು ಸದ್ದು ಮಾಡುತ್ತಾ ರೈಲು ಹಾದು ಹೋಯಿತು.

ಎಲ್ಲರೂ ಲಗುಬಗೆಯಲ್ಲಿ ತಮ್ಮ ರೈಲಿನತ್ತ ಹೊರಟರು. ಆಕೆ ರೈಲು ಹೋಗುವವರೆಗೂ ಅಲ್ಲಿನ ಕಂಬವೊಂದಕ್ಕೆ ಒರಗಿ ನಿಂತು ಇವರನ್ನೇ ನೋಡುತ್ತ ನಿಂತಿದ್ದಳು, ಎತ್ತಿದ ಕೈ ಮತ್ತು ತುಂಬಿದ ಕಣ್ಣಿನೊಂದಿಗೆ.

ಬುಧವಾರ, ಜನವರಿ 23, 2008

ಜಂಗಮ ಬಿಂಬಗಳು - ೧

ಅದು ಅವರಿಬ್ಬರ ಕೊನೆಯ ಭೇಟಿ. ಇಬ್ಬರೂ ಕೂತು ಮಾತಾಡಿದರು. ಕಣ್ಣು ತುಂಬಿಕೊಂಡರು. ಪರಸ್ಪರ ಬೇರೆಯಾಗಿ ಹೊರಟರು. ಮರುದಿನ ಬೆಳಿಗ್ಗೆ , ಆಕೆ ಅವನಿಗೆ ಮತ್ತೆ ಸಿಕ್ಕಳು.
******
ಅವನಿಗೆ ಕನಸುಗಳು ಬೀಳುತ್ತಿಲ್ಲ ಅಂತ ಚಿಂತೆ. ನಿತ್ಯವೂ ಅದನ್ನೇ ಯೋಚಿಸುತ್ತ ಕೂರುತ್ತಿದ್ದ. ಕಣ್ಣೆದುರಿದ್ದ ನನಸೂ ಕಮರಿ ಹೋಯಿತು.
******
ಹೋಟಿಲಿನ ಹೊರಗೆ ಭಿಕ್ಷುಕಿಯಂತೆ ಕಾಣುವಾಕೆ ನಿಂತಿದ್ದಳು. ಮನದಲ್ಲೇ ಅಂದುಕೊಂಡೆ, "ಇವರ ಗೋಳು ತಪ್ಪಿದ್ದಲ್ಲ ನಿತ್ಯ". ಅಷ್ಟು ಹೊತ್ತಿಗೆ ಹೋಟೇಲಿನ ಹುಡುಗ, ಏನೋ ಪಾರ್ಸೆಲ್ ತಂದು ಆಕೆಯ ಕೈಗಿತ್ತ. ಆಕೆ ಮೆಲ್ಲನೆ ಅಲ್ಲಿಂದ ಹೊರಟಳು. ಛೇ, ತಪ್ಪು ತಿಳಿದೆನಲ್ಲಾ ಅಂತ ಬೇಸರವಾಯಿತು. ಬೈಕು ಹತ್ತ ಹೊರಟಾಗ ಎದುರಿಗೆ ಅವಳು ನಿಂತಿದ್ದಳು - ಕೈ ನನ್ನೆದುರು ಚಾಚಿ.
******
- ಇದೊಂದು ಹೊಸ ಯತ್ನ. ಮನಸ್ಸಿಗೆ, ಕಣ್ಣಿಗೆ ಕಂಡ ಒಂದಿಷ್ಟು ಜಂಗಮ ಬಿಂಬಗಳು.. ಆವಾಗಾವಾಗ, ನಿಮ್ಮ ಮುಂದೆ.
( ಇದು ನನ್ನ ನೂರನೇ ಪೋಸ್ಟು!)

ಭಾನುವಾರ, ಜನವರಿ 20, 2008

ಗಾಳಿಪಟ - ನನಗೆ ಕಂಡಂತೆ.

"ಏನ್ ಸಾರ್, ವ್ಹೀಲ್ ಚೇರ್ ಮೇಲೆ ಸೆಟ್ಲಾಗ್ ಬಿಟ್ಟಿದೀರಾ"? - ಅಸಹಾಯಕವಾಗಿ ಗಾಲಿ ಕುರ್ಚಿಯ ಮೇಲೆ ಕುಳಿತ ವೃದ್ಧನನ್ನು ಸಿಟಿ ಹುಡುಗ ಮಾತಾಡಿಸುವ ರೀತಿ ಇದು.

"ಹುಡುಗೀರು ಯಾವ್ ಏಜ್ ಆದ್ರೂ ಓಕೆ ಕಣೋ, ಎಲ್ಲಾ ಒಂದೇ..."ಅನ್ನುತ್ತಾ ಅರ್ಥಗರ್ಭಿತವಾಗಿ ನಗುತ್ತಾನೆ ಹೀರೋ..

"ಕರೆಕ್ಟಾಗಿ ಕಾಳ್ ಹಾಕ್ಬೇಕು ಮಗಾ".. ಅನ್ನುವುದು ಪ್ರೀತಿ ಬಗ್ಗೆ ನಾಯಕನಾಡುವ ಮಾತು...

ಯೋಗರಾಜ ಭಟ್ಟರ ಗಾಳಿಪಟ ಸಿನಿಮಾದ "ಉತ್ತಮ ಸಂಭಾಷಣೆ" ಗಳ ಮಧ್ಯದ ಕೆಲವು ಸಾಲುಗಳಿವು.


ಗಾಳಿಪಟ ಚಲನಚಿತ್ರದ ಕೆಲವು ಕುತೂಹಲ ಮೂಡಿಸುವ ಸೀನುಗಳನ್ನೂ, ಹಾಡುಗಳನ್ನೂ ಈ ಮೊದಲೇ ನೋಡಿದ್ದೆನಾದ್ದರಿಂದ ಮತ್ತು ಈ ಸಿನಿಮಾದ ಬಗ್ಗೆ ಎಲ್ಲರಂತೆಯೇ ನನಗೂ ಬಹಳ ನಿರೀಕ್ಷೆಗಳು ಇದ್ದಿದ್ದರಿಂದ ಮೊದಲ ದಿನವೇ ಚಿತ್ರ ವೀಕ್ಷಿಸಿದೆ.

ದಿಗಂತ್, ಕಿಟ್ಟಿ ಮತ್ತು ಗಣಿ ಬೆಂಗಳೂರಿನಲ್ಲಿ ವಾಸವಾಗಿರುವ ಮೂರು ಜನ ಸ್ನೇಹಿತರು. ಕಿಟ್ಟಿ ಸಾಫ್ಟ್‌ವೇರ್ ಇಂಜಿನಿಯರ್, ಗಣಿ ಕ್ರೆಡಿಟ್ ಕಾರ್ಡ್ ಮಾರುವಾತ , ದಿಗಂತ್ ಇನ್ನೂ ಮೆಡಿಕಲ್ ಓದುವ ಹುಡುಗ. ಎಲ್ಲರಿಗೂ ಸಿಟಿ ಜೀವನದ ಏಕತಾನತೆ ಬೇಜಾರು ಬಂದು ದಿಗಂತನ ಅಜ್ಜನ ಮನೆ, ಮೋಡಗಳೇ ತುಂಬಿಕೊಂಡಿರುವ ಹಳ್ಳಿ ಮುಗಿಲುಪೇಟೆಗೆ ಹೊರಡುತ್ತಾರೆ.

ಅವನ ಅಜ್ಜನ ಮನೆಯ ಪಕ್ಕದ ಎಸ್ಟೇಟಿನಲ್ಲಿ ಮೂರು ಜನ ಹುಡುಗಿಯರು ಇರುವ, ಬೇಟೆಯ ಹುಚ್ಚಿನ ಅನಂತನಾಗ್ ಮನೆ ಯಜಮಾನರಾಗಿರುವ ಸಂಸಾರವೊಂದಿರುತ್ತದೆ.ಅನಂತನಾಗ್ ಹಂದಿಯೊಂದರ ಬೇಟೆಯಾಡಲು ಹೋಗಿ ಕಾಲಿನ ಸ್ವಾಧೀನ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ಮನುಷ್ಯ. ಮನೆಯ ಮೂರು ಹೆಣ್ಣು ಮಕ್ಕಳೂ ಮೂರು ತರಹದ ಗುಣ ಸ್ವಭಾವದವರು. ಈ ಹುಡುಗರು ಅವರ ಮನೆ ಸೇರಿಕೊಂಡು, ಸಿಕ್ಕ ಸಿಕ್ಕ ಹಾಗೆ ಚೇಷ್ಟೆ ಮಾಡಿಕೊಂಡು, ಹಂದಿ ಗಿಂದಿ ಓಡಿಸಿಕೊಂಡು ಒಂದಿಷ್ಟು ಕಾಲ ಹಾಯಾಗಿ ಕಾಲ ಕಳೆಯುತ್ತಾರೆ. ಈ ಮಧ್ಯೆ ಏನೇನೋ ಆಗಿ ಮೂರು ಜನ ಹುಡುಗರಿಗೂ ಈ ಮೂರು ಹುಡುಗಿಯರ ಮೇಲೆ ಪ್ರೀತಿ ಹುಟ್ಟುತ್ತದೆ. ಎರಡು ಜೋಡಿಗಳು ಮನೆಯವರನ್ನೂ ಒಲಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ. ಮತ್ತೊಬ್ಬನ ಕಥೆ ಏನಾಗುತ್ತದೆ ಅನ್ನುವುದು ಗಾಳಿಪಟದ ಕೊನೆಗೆ ತಿಳಿಯುತ್ತದೆ.

ಇದು ಸಿನಿಮಾದ ಒಟ್ಟು ಸಾರಾಂಶ.ಯೋಗರಾಜ ಭಟ್ಟರು ಮುಂಗಾರು ಮಳೆಯ ನಂತರ ನಿರ್ದೇಶಿಸಿದ ಬಹು ಚರ್ಚಿತ ಸಿನಿಮಾ ಗಾಳಿಪಟ. ಹಿಂದಿನ ಸಿನಿಮಾ ಮುಂಗಾರು ಮಳೆ ಯದ್ವಾ ತದ್ವಾ ಹಿಟ್ ಆಗಿದ್ದರಿಂದ ಭಟ್ಟರು ಹಳೆಯ ಸಿದ್ಧ ಸೂತ್ರಕ್ಕೇ ಅಂಟಿಕೊಂಡಿದ್ದು ಮೇಲ್ನೋಟಕ್ಕೇ ಗೋಚರವಾಗುತ್ತದೆ. ಅದೇ ಮುಂಗಾರು ಮಳೆಯ ಧಾಟಿಯ ಹಲವು ಡೈಲಾಗುಗಳು, ಮಳೆ, ಬೆಟ್ಟ, ಜಲಪಾತ. ಆದರೆ ಕೇವಲ ಅವುಗಳನ್ನು ತೋರಿಸುವ ಭರದಲ್ಲಿ ಬಿಗಿಯಾದ ಕಥೆಯನ್ನು ಹೆಣೆಯುವ ಹೊಣೆಗಾರಿಕೆಯನ್ನು ಭಟ್ಟರು ಮರೆತು ಬಿಟ್ಟಿದ್ದಾರೆ. ಇಡಿಯ ಸಿನಿಮಾದಲ್ಲಿ ಏನೂ ಕೂಡಾ ಸಂಭವಿಸುವುದೇ ಇಲ್ಲ. ಕೊನೆಗೂ!

ಮುಂಗಾರು ಮಳೆಯ ಜಪ ಮಾಡಿಕೊಂಡು ನೀವು ಥಿಯೇಟರ್‌ಗೆ ಕಾಲಿಟ್ಟರೆ ನಿರಾಸೆ ಖಚಿತ. ಏಕೆಂದರೆ ಈ ಚಿತ್ರ ಅದರ ಸನಿಹಕ್ಕೂ ಬಂದು ನಿಲ್ಲುವುದಿಲ್ಲ. ಅಲ್ಲಿನ ಬಿಗಿ ನಿರೂಪಣೆಯಿಲ್ಲ , ಅಲ್ಲಿನ ಅದ್ಭುತ ಅನ್ನಿಸುವಂತಹ ಡೈಲಾಗುಗಳಿಲ್ಲ ಮತ್ತು ಇಡಿಯ ಚಿತ್ರದಲ್ಲಿ ಏನೂ ಘಟಿಸುವುದೇ ಇಲ್ಲ. ಕ್ಲೈಮ್ಯಾಕ್ಸು ಯಾವುದೋ ಹಳೆಯ ಕನ್ನಡ ಚಿತ್ರವನ್ನು ನೆನಪಿಗೆ ತರಿಸಬಹುದಾದ ಸಾಧ್ಯತೆಗಳಿವೆ.ಗಣೇಶ್, ರಾಜೇಶ್ ಕೃಷ್ಣ, ದಿಗಂತ್ , ಡೈಸಿ ಬೋಪಣ್ಣ , ನೀತು, ಭಾವನಾ, ಅನಂತ್ ನಾಗ್, ರಂಗಾಯಣ ರಘು – ಎಲ್ಲರದೂ ಓಕೆ ಅನ್ನಿಸುವ ಅಭಿನಯ. ಗಣೇಶ್‌ಗೆ ಮಳೆಯಲ್ಲಿ ನೆನೆದುಕೊಂಡು ಡೈಲಾಗು ಹೇಳುವುದು ಮೊದಲೇ ಅಭ್ಯಾಸವಾಗಿರುವುದರಿಂದ ಎಲ್ಲರಿಗೂ ಸ್ವಲ್ಪ ಹೆಚ್ಚು ಪ್ರಿಯ ಅನ್ನಿಸಬಹುದು, ಅಷ್ಟೇ.

ಹಾಗೆಂದು ಗಾಳಿಪಟವನ್ನು ಸಾರಾಸಗಟಾಗಿ ತಿರಸ್ಕರಿಸುವ ಹಾಗಿಲ್ಲ. ಚಿತ್ರದ ಲೊಕೇಶನ್‌ಗಳು ಅದ್ಭುತ. ನವಿರು ಹಾಸ್ಯದಿಂದ ಕೂಡಿದ ಭಟ್ಟರ ಸಂಭಾಷಣೆ, ಕಾಯ್ಕಿಣಿ ಹಾಡುಗಳು, ಹರಿಕೃಷ್ಣ ಸಂಗೀತ ಮನಕ್ಕೆ ತಟ್ಟುತ್ತವೆ. ನೂರಾರು ಯಕ್ಷಗಾನ ವೇಷಧಾರಿಗಳು ಕುಣಿಯುವ “ನಧೀಂಧೀಂತನಾ" ಹಾಡಂತೂ ಕಣ್ಣಿಗೆ ಹಬ್ಬ. ಕಾಡುಹಂದಿ ನಿಮಗೆ ಗ್ರಾಫಿಕ್ಸ್ ಅನ್ನಿಸುವುದೇ ಇಲ್ಲ.

ಚಿಕ್ಕಮಗಳೂರಿನ ಎಸ್ಟೇಟು, ಹೊರಗೆ ಕಾಲಿಟ್ಟರೆ ಕೊಡಚಾದ್ರಿ ಬೆಟ್ಟ, ಅಲ್ಲಿ ನಿಂತು ನೋಡಿದರೆ ಶಿವನಸಮುದ್ರ ಜಲಪಾತ - ಹೀಗೊಂದು ಕಲ್ಪನೆ ಭಟ್ಟರಿಗೆ ಬಂದಿದ್ದಾದರೂ ಹೇಗೆ ಅಂತ! ನಿಮಗೆಲ್ಲೂ ಇದು ಅಸಹಜ ಅನ್ನಿಸುವುದಿಲ್ಲ. ಭೌಗೋಳಿಕ ಜ್ಞಾನ ಬದಿಗಿಟ್ಟು ಸಿನಿಮಾ ನೋಡುವ ಮನಸ್ಥಿತಿ ಬೇಕು ಅಷ್ಟೆ.

ಆದರೆ ಬರಿಯ ಬೆಟ್ಟ ಗುಡ್ಡ, ಜಲಪಾತ, ಮೋಡ, ಮಳೆ, ಛಾಯಾಗ್ರಹಣ ಮತ್ತು ಸಂಗೀತ ಒಂದು ಚಿತ್ರವನ್ನು ಉತ್ತಮವಾಗಿಸಲು ಸಾಧ್ಯವಿಲ್ಲ ಅನ್ನುವ ಸತ್ಯದ ಅರಿವು ಯೋಗರಾಜ ಭಟ್ಟರಿಗೆ ಆಗಿದ್ದರೆ ಚೆನ್ನಾಗಿತ್ತು.

ಇಷ್ಟಾಗಿ, ನಾನೇನೇ ಬರೆದರೂ ನೀವು ಈ ಸಿನಿಮಾ ನೋಡೇ ನೋಡುತ್ತೀರಿ, ಅದು ನನಗೆ ಗೊತ್ತು!

ಮಂಗಳವಾರ, ಜನವರಿ 01, 2008

ಹೊಸ ಸಿಂಚನ - ನವ ಲಹರಿಯ ಆಶಯದೊಡನೆ..


ಹೊಸ ವರುಷ ಕಣ್ಣೆದುರಿದೆ.

ಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.

ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು ಸಂಭ್ರಮ, ಒಂದು ನವಿರು ಭಾವ ಗರಿಗೆದರುವ ಸಮಯ. ಎಲ್ಲದನ್ನ ಸಂತಸದ ಕಣ್ಣಲ್ಲಿ ನೋಡುವ ಆತುರ.

ಹೊಸ ವರ್ಷದ ಹಿಂದಿನ ದಿನದ ಸಂಜೆಯ ಸಂತೋಷಕೂಟದಲ್ಲಿ ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡುವ ಅವಸರ ಆತನಿಗೆ, ಇಂತಹ ಮಧುರ ಘಳಿಗೆಯಲ್ಲಿ ಆಕೆ ತನ್ನನ್ನ ತಿರಸ್ಕರಿಸಲಾರಳು ಅನ್ನುವ ಆಶಯ. ಆರೆಂಟು ತಿಂಗಳಿಂದ ಕಣ್ಣಲ್ಲೇ ಮಾತಾಡಿದ್ದು ಸಾಕಾಗಿದೆ ಅವನಿಗೆ.

ಆಕೆಗೆ, ಅವನು ತನ್ನ ಕೈಯನ್ನ ಇಂದಾದರೂ ಹಿಡಿದು ಪ್ರೀತಿಸುವ ಸಂಗತಿಯನ್ನ ಹೇಳಬಾರದೇ ಅನ್ನುವ ಆಸೆ. ತನಗೆ ಅದನ್ನ ಹೇಳುವ ಧೈರ್ಯ ಖಂಡಿತಾ ಇಲ್ಲ, ಅದು ಆತನಿಗೂ ತಿಳಿದಿಲ್ಲವೇ?, ಹೊಸ ವರುಷ ಆ ಧೈರ್ಯ ಅವನಿಗಾದರೂ ಕೊಡಬಾರದೇ?

ಹಲವು ಕಾಲದ ಮೇಲೆ ಭೇಟಿಯಾಗುತ್ತಿರುವ ಜೀವದ ಗೆಳೆಯರ ಜೊತೆ ಕೂತು ಮಾತಾಡುವ ಸಂಭ್ರಮ ಇವನಿಗೆ. ಚಳಿಯ ರಾತ್ರಿಯಲ್ಲಿ ಯಾವುದೋ ಶಿಖರಾಗ್ರದಲ್ಲಿ ಬೆಂಕಿಯ ಸುತ್ತ ಕೂತು ಅದರ ಬೆಳಕೊಳಗೆ ಬೆಳಗು ಮಾಡುವ ಕಾತರ.. ಯಾವ ಗಲಾಟೆ, ಗೌಜೂ ಇಲ್ಲದೇ.

ಇಂದು ತನ್ನಿನಿಯ ಅಮೇರಿಕದಿಂದ ಬರುತ್ತಿದ್ದಾನೆ, ವರುಷದ ಕೆಲಸ ಮುಗಿಸಿ. ಆತ ಹೊಸವರುಷದಂದು ನನ್ನ ಜೊತೆ ಇರುತ್ತಾನೆ. ಅದಕ್ಕಿಂತ ಬೇರೇನು ಬೇಕು ಅನ್ನುವವಳು ಈ ಹುಡುಗಿ. ಅವನ ಹಿತಕರ ಅಪ್ಪುಗೆಯಲ್ಲಿ ಬೆಳಗು ಮಾಡಿದರೆ, ಅದುವೇ ಸ್ವರ್ಗ ಈಕೆಗೆ.

ಈ ಹುಡುಗನಿಗೆ ಹೊಸ ಕೆಲಸ ಸಿಕ್ಕಿದೆ, ಹೊಸ ವರುಷದಂದೇ ಸೇರಬೇಕಂತೆ, ರಜೆ ಇಲ್ಲ ಆವತ್ತು. ಅವನಿಗದು ಬಲು ಖುಷಿಯೇ! ನಾಳಿನಿಂದ ಕೆಲಸ ಹುಡುಕಿಕೊಂಡು ಫೈಲು ಹಿಡಿದು ಸುತ್ತ ಬೇಕಿಲ್ಲ. ಅಮ್ಮನನ್ನ ಕರೆದುಕೊಂಡು ದೇವಸ್ಥಾನಕ್ಕೆ ಹೋಗಬೇಕು ಅಂದು ಬೆಳಗು. ಪಾಪ ಅವಳು ಬಹಳ ಕಷ್ಟ ಪಟ್ಟಿದ್ದಳು ತನ್ನ ಒಳಿತಿಗೆ. ಆಕೆಗಿದು ಹೊಸ ವರ್ಷದ ಕಾಣಿಕೆ, ತನಗೂ ಕೂಡ.

ವಾರದ ಹಿಂದಷ್ಟೇ ಹೊಸ ಬೇಕರಿ ತೆರೆದಾತ ಈಗಾಗಲೇ ಖುಷಿಯಲ್ಲಿದ್ದಾನೆ, ಕೇಜಿಗಟ್ಟಲೆ ಕೇಕು ಖಾಲಿಯಾಗಿವೆ. ನಾಡಿದ್ದು ಅರ್ಧದಿನ ಅಂಗಡಿಯನ್ನ ಮುಚ್ಚಿ, ಹೆಂಡತಿಯನ್ನ ಸಿನಿಮಾಕ್ಕೆ ಕರೆದೊಯ್ಯುವ ಆಲೋಚನೆ ಅವನಿಗೆ. ಮಾಡಿದ ಸಾಲ ಬೇಗನೆ ತೀರುವಂತೆ ಕಾಣುತ್ತಿದೆ.

ಬ್ಲಾಕ್ ಟಿಕೇಟು ಮಾರುವ ಹುಡುಗನಿಗೆ ಸ್ವರ್ಗಕ್ಕೆ ಮೂರೇ ಗೇಣು, ಮುಂದಿನೆದಡು ದಿನದಲ್ಲಿ ತುಂಬ ದುಡ್ಡು ಮಾಡಿಬಿಡಬಹುದು, ಎಲ್ಲರಿಗೂ ರಜೆ, ಸಿನಿಮಾ ನೋಡಲು ಬಂದೇ ಬರುತ್ತಾರೆ. ತಮ್ಮನಿಗೆ ಸೈಕಲ್ಲು ತೆಗೆಸಿಕೊಡಲು ತನಗೆ ಇನ್ನು ೫೦೦ ರೂಪಾಯಷ್ಟೇ ಬೇಕಾಗಿರುವುದು. ಅದನ್ನ ಹೇಗಾದರೂ ತನಗೆ ಹೊಸ ವರ್ಷ ಕೊಟ್ಟೇ ಕೊಡುತ್ತದೆ.

ರಸ್ತೆ ಬದಿಯಲ್ಲಿ ಭಜ್ಜಿ ಮಾಡುವ ಹೆಂಗಸಿಗೂ ಕೈ ತುಂಹ ಕೆಲಸ. ಮೊದಲೇ ಚಳಿ, ಜನ ತಡರಾತ್ರಿಯ ವರೆಗೂ ರಸ್ತೆಯಲ್ಲಿರುತ್ತಾರೆ. ಎಂದಿಗಿಂತ ಹೆಚ್ಚಿನ ವ್ಯಾಪಾರ ಆಗಲೇ ಬೇಕು. ಮಗಳಿಗೆ ಹೊಸ ಬಟ್ಟೆ ಕೊಡಿಸಬೇಕು. ಹೊಸ ವರ್ಷ ತನಗೇನಾದಾರೂ ಕೊಟ್ಟರೆ, ತಾನು ಮಗಳಿಗೆ ಕೊಟ್ಟೇನು.

ಹೊಸ ವರ್ಷಕ್ಕೆ ಹಲವು ಬಣ್ಣ, ಹಚ್ಚುವವರೂ ಹಲವರು.
ಬನ್ನಿ, ನಾವೂ ಏನಾದರೂ ಬಣ್ಣ ಹಚ್ಚೋಣ, ಖುಷಿಯ ಕುಂಚ ಹಿಡಿದು, ಬದುಕ ಫಲಕದಲ್ಲಿ.

ಸೋಮವಾರ, ಡಿಸೆಂಬರ್ 31, 2007

ಕಳೆದ ನಿನ್ನೆಗಳು ಮತ್ತೆ ಬರುವವು....

ಕಳೆದ ನಿನ್ನೆಗಳು ಮತ್ತೆ ಬರುವವು ಕನಸ ಬುಟ್ಟಿ ಹೊತ್ತು
ಸುಳಿವ ಬೇಸರವ ಬದಿಗಿಡು ಗೆಳೆಯಾ ಆಸೆ ಬೀಜ ಬಿತ್ತು

ಕಾವಳ ಕಳೆಯಲು ಬೆಳಕು ಹರಿವುದು ಕಳವಳ ಬೇಕಿಲ್ಲ
ನೋವೊಳು ನಗುವುದ ಕಲಿಯದೆ ಇದ್ದರೆ ಬದುಕಿಗರ್ಥವಿಲ್ಲ

ಕಟ್ಟಿದ ಮೋಡವು ಕರಗಲು ನೋಡು ಮಳೆ ತಾನಾಗೇ ಸುರಿಯುವುದು
ಮೆಟ್ಟಿದ ಬೀಜವೆ ಮೊಳಕೆ ರೂಪದಲಿ ತಲೆಯೆತ್ತಲ್ಲೇ ನಿಲ್ಲುವುದು

ಸುತ್ತಿಗೆ ಪೆಟ್ಟನು ತಿಂದರೆ ತಾನೆ ಮೊಳೆಯದು ಭದ್ರ ಗೋಡೆಯಲಿ?
ಮೆತ್ತಗೆ ಕುಳಿತೇ ಇದ್ದರೆ ನೀನು ಯಶವು ಸಿಗುವುದೇ ಯಾನದಲಿ?

ಇದ್ದಲ್ಲಿಂದ ಹೊರಟು ಬಿಡು ಹೋರಾಡೋ ಛಲವನು ತೊಟ್ಟುಬಿಡು
ಬಿದ್ದಿರೋ ಬದುಕನು ಎತ್ತಿಬಿಡು, ಗುರಿಯಲಿ ಕಣ್ಣನು ನೆಟ್ಟುಬಿಡು

ಮಾಲೆಯಾಗಲಿ ಬಾಳಿನ ಕೊರಳಿಗೆ ಇಂಥ ಯಶೋಸೂತ್ರ
ಸೋಲೇ ಇಲ್ಲದೆ ಸಾಗಲಿ ಮುಂದೆ ನಿನ್ನ ಯಶೋ ಯಾತ್ರ!


ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.. ನಿಮ್ಮೆಲ್ಲ ಕನಸುಗಳಿಗೆ ನವ ವರುಷವು ಹೊಸ ದಾರಿ ತೋರಲಿ.

ಗುರುವಾರ, ಡಿಸೆಂಬರ್ 06, 2007

ಚಳಿಯ ಬೆಳಗಲಿ...

ತೆಳ್ಳಗಿನ ಚಳಿ ಪದರು, ಮುಂಜಾವ ಸುತ್ತೆಲ್ಲ
ಜುಮುರು ಮಳೆ ನಿಂತಿಹುದು, ಆಗತಾನೆ.
ಮನೆಯ ಹಿತ್ತಿಲಲಿಹುದು, ಪಾರಿಜಾತದ ವೃಕ್ಷ
ಎಲೆ ಹಸಿರ ಮೇಲೆಲ್ಲ ಬಿಳಿ ಹೂವ ರಂಗೋಲಿ.

ಹೂವು ಹೆಕ್ಕುವ ಸಮಯ,ಅವಳು ಬರಬೇಕಿತ್ತು
ಇಂದೇಕೆ ಬಂದಿಲ್ಲ, ಬಹಳ ಚಳಿಯೆಂದೆ?
ನಿನ್ನೆ ನನಗೂ ಮೊದಲೆ ಬಂದುನಿಂತಿದ್ದಳು,
ಯಾಕಿಂದು ಈ ರೀತಿ, ತಿಳಿಯದಲ್ಲ

ಚಳಿಯು ಕಾರಣವಲ್ಲ, ಬೇರೇನೋ ಇರಬೇಕು
ಅಥವಾ ಚಳಿಯೇ ಹೌದೋ?, ಇರಲೂಬಹುದು!
ಎಂದೂ ತಡಮಾಡಿಲ್ಲ, ಅವಳು ನನ್ನ ಹಾಗಲ್ಲ.
ಪಾರಿಜಾತಕೂ ಗೊತ್ತು ಅದು, ಅಲ್ಲವೇನೆ?

ನಾನು ತಡವಾದಂದು ಹುಸಿಮುನಿಸು ತೋರುವಳು
ಮಾತೇ ಆಡುವುದಿಲ್ಲ ಮೂರು ನಿಮಿಷ!
ಮತ್ತೆ ನಾನೇ ಮೆಲ್ಲ ಬೆರಳು ತಾಕಿಸಿ, ಕಣ್ಣು ಹೊಡೆದು
ನಗಿಸಿ, ಕಿವಿ ಹಿಡಿದು ಕ್ಷಮೆ ಕೇಳಿ- ಅಬ್ಬಬ್ಬ, ಕಷ್ಟ ಕಷ್ಟ.

ಇಂದು ಮಾಡುವೆ ಶಾಸ್ತಿ, ಬರಲಿ ನನ್ನಯ ಬಳಿಗೆ
ಮಾತಾನಾಡುವುದಿಲ್ಲ, ನೋಡುವುದೂ ಇಲ್ಲ
ನನ್ನ ಪಾಡಿಗೆ ನಾನು ಹೂಹೆಕ್ಕಿ ನಡೆಯುವೆನು
ನನ್ನ ಕಾಡಿಸುವಳಲ್ಲ, ಇಂದು ಗೊತ್ತಾಗಲಿ!

ಮುನಿಸೇನಾದರೂ ಇದೆಯೆ ?ಹೇಗೆ ಸಾಧ್ಯ
ನವಿಲುಗರಿ ಕೊಟ್ಟಿದ್ದು ನಿನ್ನೆ ಬೆಳಗೆಯೆ ತಾನೆ?
ಬಾರೆ ಬೇಗನೆ ಹುಡುಗಿ, ಒಬ್ಬನೇ ಇರಲಾರೆ
ದೇವಪೂಜೆಗೆ ಹೂವು ನನಗಂತೂ ನೆಪವೇ.


ಅಪ್ಪ ಹೊಗಳುತಿದ್ದ ನಿನ್ನೆ, ಮಗನು ಉತ್ತಮನೀಗ
ಶೃದ್ಧೆ ಭಕ್ತಿಯು ಬರುತಿದೆ ಜೀವನದೊಳು.
ನೀನು ಕಾರಣವೆಂದು ಅವಗೆಂತು ಗೊತ್ತು,ಇಲ್ಲದಿರೆ
ಈ ಕೊರೆವ ಚಳಿಯಲ್ಲಿ ಹೂವ ಹೆಕ್ಕಲು ಹುಚ್ಚೆ?

ಒಂದೊಂದೆ ಹೂ ಹೆಕ್ಕಿ, ಬಿದಿರ ಬುಟ್ಟಿಗೆ ಹಾಕಿ
ಮತ್ತೆ ನೋಡಿದನವನು ಮಂಜದಾರಿ.
ಮೆಲು ಗೆಜ್ಜೆಯಾದನಿಯು, ಬೇಲಿದಾಟುತಲಿರಲು
ಬುಟ್ಟಿಯಾ ಹೂ ಮತ್ತೆ, ಭೂಮಿಪಾಲು.

ಶನಿವಾರ, ಡಿಸೆಂಬರ್ 01, 2007

ನಾನು ನಾನಾಗುವುದು..

ನಾನು ಏನೂ ಅಲ್ಲ..
ಹಾಗೆಂದು ಹೇಳಿದರೆ ಯಾರೂ ನಂಬುವುದಿಲ್ಲ.
ನನ್ನ ಬಗೆಗೆ ನನಗಿಂತ ಹೆಚ್ಚು
ಅವರುಗಳಿಗೆ ಗೊತ್ತು.

ಅವರ ದನಿಗಳಿಗೆ ನಾನು ಮರುಳಾಗಿದ್ದೇನೆ.
ಹೊಗಳುವಿಕೆಗೆ ಅರಳಿದ್ದೇನೆ.
ನಾನೇನಲ್ಲವೋ , ಅದೇ ನಾನಾಗಿದ್ದೇನೆ.
ಆದರೂ ನನ್ನನ್ನು ಹುಡುಕುತ್ತಿದ್ದೇನೆ.

ಕಳೆದು ಹೋಗಲು ಇಷ್ಟವಿರಲಿಲ್ಲ ನನಗೆ,
ಏನು ಮಾಡುವುದು, ದಿಕ್ಕು ತಪ್ಪಿಬಿಟ್ಟಿದ್ದೇನೆ.
ಚಕ್ರದಾರಿಯಲಿ ಸುತ್ತುತ್ತಿದ್ದೇನೆ,
ನಿರ್ವಾತದಲೂ ಉಸಿರಾಡುತ್ತಿದ್ದೇನೆ.

ನಾನು ಮತ್ತಿನ್ನೇನಾದರೂ ಆಗೋ ಬದಲು
ನಾನೇ ಆಗಿದ್ದರೆ ಚೆನ್ನಿರುತ್ತಿತ್ತು,
ಆದರೆ ಭವಿಷ್ಯ ಯಾರಿಗೆ ಗೊತ್ತು?
ಕಾಯುತ್ತೇನೆ ಮೂರೂ ಹೊತ್ತು..

ನಾನು ನಾನೇ ಆಗುವವರೆಗೂ.

ಮಂಗಳವಾರ, ನವೆಂಬರ್ 27, 2007

ಬೆಳಕಿನ ಕವನ

ಆಕಾಶ ದೀಪದ ಸುತ್ತ ಮಿಣುಕು ಹುಳ ಸುತ್ತಿತ್ತು,
ಹೊಸಬಣ್ಣ-ಬೆಳಕನು ನೋಡಿ, ಆಶ್ಚರ್ಯವದಕೆ.
ಎಂದೂ ಇಲ್ಲಿಲ್ಲದ್ದು, ಇಂದೆಂತು ಬಂದಿತೋ
ಸೋಜಿಗವೆ ಸೋಜಿಗವು, ಬೆಳಕ ಹುಳಕೆ.


ಅಂಜುತಂಜುತಲೆ ಮೆಲ್ಲನೇ ಬಳಿಸಾರಿ,
ಕೇಳಿತದು ಆಕಾಶಬುಟ್ಟಿಯನು,
ಎಲ್ಲಿಂದ ಬಂದೆಯೋ ,ಯಾರು ನೀನು,
ನಿನಗೆ ಮಾತ್ರವ ಏಕೆ ಈಸೊಂದು ಪ್ರಖರತೆಯು
ನನ್ನ ಪ್ರಭೆಯೇಕೆ ಬಲು ಮಂಕು, ನಿನ್ನ ಹಾಗಿಲ್ಲ?


ಸಣ್ಣಗೆ ನಕ್ಕಿತಾ ಆಕಾಶದೀಪವು,
ನಿನ್ನಂತೆ ನಾನಲ್ಲ,ಅಲ್ಪಾಯುಷಿಯು ನಾನು ಗೂಡುದೀಪ.
ಹಬ್ಬದಾ ದಿನ ಮಾತ್ರ ನನ್ನಿರವು ಬಾನಲ್ಲಿ
ನಾಳೆ ಮತ್ತದೇ ಹಳೆ ಕತ್ತಲಾ ಗೂಡು,
ಆಥವ ಹೊರಗೆಸೆವರು, ಬರಿ ಬಿದಿರ ಅಸ್ಥಿ.


ನೀನೋ ನಿತ್ಯ ಸಂತೋಷಿ, ಸ್ವಪ್ರಭೆಯು ನಿನಗೆನನಗೋ
,ಬೆಳಕು ಕೊಡುವಾತ ಮನುಜ
ಅವಗೆ ಬೇಕೆಂದಷ್ಟು ಹೊತ್ತು ಮಾತ್ರವೆ ನಾನು.
ನಿನ್ನಷ್ಟು ಸುಖಿಯಲ್ಲ, ನನ್ನ ಬದುಕು.


ನನ್ನ ಶ್ರೀಮಂತಿಕೆಯು ಬಾಡಿಗೆಗೆ ಬಂದಿದ್ದು
ಮಂಕು ನೀನಹೆ ಗೆಳೆಯ, ನಿನ್ನ ಬೆಳಕಲ್ಲ!
ನಾಳೆ ಮರತುಂಬ ಮತ್ತೆ ನಿನ್ನದೇ ಮಿಣುಕ ಮಣಿ,
ನನ್ನ ನೆನಪೂ ಬರದು ಇವರಾರಿಗೂ.


ಆದರೂ ನನಗಂತೂ ಸಂತಸವು ಬಹಳವಿದೆ.
ನನ್ನ ಬೆಳಕನು ಕಣ್ಣು ತುಂಬಿಕೊಳುವರು ಎಲ್ಲ.
ಇದ್ದಷ್ಟು ದಿನ ಖುಷಿಯು ಇರಲೇ ಬೇಕಲ್ಲವೇ
ಸುಮ್ಮಗೇ ಬೇಸರವ ಹುಡುಕುವುದು ಸಲ್ಲ.


ಆಗಸದೀಪದ ಮಾತ ಕೇಳಿದ ಮಿಂಚು ಹುಳ,
ಸುಮ್ಮಗೇ ಮೈಕೊಡವಿ ಸಾಗಿತಲ್ಲಿಂದ.
ಯಾವುದೋ ತಾನದ ಹಾಡ ಗುನುಗುತಿದ್ದರೆ ದೀಪ,
ನೇಸರನು ಮೂಡಿದ್ದ ದೂರ ಬೆಟ್ಟಸಾಲಲ್ಲಿ.

ಭಾನುವಾರ, ಆಗಸ್ಟ್ 26, 2007

ಹೂವು ಮಾರುವ ಹುಡುಗಿ..

ಪಾದಪಥದಂಚಿನಲಿ ಹೂವ ಮಾರುವ ಹುಡುಗಿ,
ನಾದಮಯ ದೇಗುಲವು ಅಲ್ಲೆ ಹಿಂದೆ,
ಮೋದವಿದೆ ಮೊಗದಲ್ಲಿ , ಹೂವ ಬುಟ್ಟಿಯು ಮುಂದೆ
ನಗುವ ಹೂವುಗಳಲ್ಲಿ - ಅವಳ ಥರವೆ.


ಎಳೆ ಬಿಸಿಲ ಕಿರಣಗಳು ತೂರಿ ಬರುತಿರೆ ಮರವ
ಹೊಳೆವ ಪರಿಸರ ಸುತ್ತ, ಜನದ ಸಾಲು.
ಬರುವ ಹೋಗುವ ಮಂದಿ ಹೂವ ಕೊಳ್ಳುವರಲ್ಲಿ
ಮೃದು ಪುಷ್ಪ ಮಂಜರಿಯು ಆಹಾ, ಸೊಗಸು.


ಮಳೆ ಬಂದು ಹೋಗಿಹುದು, ಬೆಳಗು ಜಾವದ ಸಮಯ
ನೀರ ಹನಿ ಸೇಚನವು ಹೂಬುಟ್ಟಿಯಾ ತುಂಬ.
ಹುಡುಗಿ ಮುಖದಲು ಕೂಡ ಮಳೆನಗುವು ಕಾಣುತಿದೆ,
ತೇಪೆ ದಾವಣಿಗಷ್ಟೆ, ಮನಸಿಗಲ್ಲವೆ ಅಲ್ಲ.

ಹೊತ್ತು ದಾಟಲು ಮೆಲ್ಲ ಹೆಗಲನೇರಿತು ಬುಟ್ಟಿ
ತಿರುವಂಚಿನಲಿ ಮಾಯ ಆಕೆ ಜೀವ.
ಕಟ್ಟೆ ಮೇಲಿಂದೆದ್ದು ನಾನೂ ಹೊರಟೆನು ಆಗ
ದೇಗುಲದ ದೇವರನು ನೋಡಲೇ ಇಲ್ಲ!

ಶುಕ್ರವಾರ, ಆಗಸ್ಟ್ 03, 2007

ಒಂದು ಅಲ್ಪ ವಿರಾಮ.

ನಮಸ್ತೇ.

ನಾನು ಸ್ವಲ್ಪ ದಿನಗಳ ಮಟ್ಟಿಗೆ ಬ್ಲಾಗಿಂಗ್ ನಿಂದ ವಿರಮಿಸುತ್ತಿದ್ದೇನೆ. ಕಾರಣ ಹಲವು. ಮುಖ್ಯವಾಗಿದ್ದು - ನಾನು ನನ್ನ HR ಪ್ರಪಂಚದಿಂದ ಹೊರ ಬಂದು ನನ್ನಿಷ್ಟದ ಮಾಧ್ಯಮ ಜಗತ್ತಿಗೆ ಹೊರಟಿದ್ದೇನೆ. ಅಲ್ಲಿಗೆ ನ್ಯಾಯ ಸಲ್ಲಿಸಬೇಕಿದೆ. ಬರವಣಿಗೆ ನನ್ನ ಉಸಿರು. ಅದಕ್ಕೇ ಬೇರೆಯದೇ ರೂಪ ಸಿಗುತ್ತಿದೆ. ಬ್ಲಾಗಿಸಲು ಸಮಯ ಸಿಗದು.
ನನ್ನ ಬರಹಗಳನ್ನ ಮೆಚ್ಚಿ ಪ್ರೋತ್ಸಾಹ ಸಲ್ಲಿಸುತ್ತಿದ್ದವರು ಹಲವರು. ಎಲ್ಲರಿಗೂ ಕೃತಜ್ಞ. ನಾನು ಬ್ಲಾಗಿಸಲು ಆರಂಭಿಸಿದಾಗ ಕನ್ನಡದಲ್ಲಿದ್ದವು ಬೆರಳೆಣಿಕೆಯ ಬ್ಲಾಗುಗಳು. ಈಗ ಅವುಗಳ ಸಂಖ್ಯೆ ಅಗಣಿತವಾಗುತ್ತಿದೆ! ಮತ್ತೆ ನಾನು ಬ್ಲಾಗಿಗನಾಗುವಾಗ
ಏನಾಗಿರುತ್ತದೋ!

ಎಲ್ಲರಿಗೂ ಮತ್ತೊಮ್ಮೆ ವಂದನೆಗಳು. ಮುಂದೆ ಯಾವಾಗಲಾದರೂ ಭೇಟಿಯಾಗೋಣ.
ಶ್ರೀನಿಧಿ.ಡಿ.ಎಸ್.

ಬುಧವಾರ, ಜುಲೈ 25, 2007

ಶಿಫಾರಸು ಪತ್ರ ಎನ್ನುವ ಹೊಸ HR ಕಥೆಯು.

ಏನೋ ಕೆಲಸದಲ್ಲಿದ್ದೆ. ಮೊಬೈಲ್ ಸದ್ದಾಯಿತು, ಎತ್ತಿಕೊಂಡೆ.

"ಶ್ರೀನಿಧಿಯವರಾ ಮಾತಾಡೋದು?"

ಹೌದು.

"ನಮಸ್ಕಾರ, ನಾನು ಸೀತಾರಾಮ್ (ಹೆಸರು ಬದಲಿಸಲಾಗಿದೆ) ಮಾತಾಡ್ತಿರೋದು, ನಿಮ್ ಹತ್ರ ಸ್ವಲ್ಪ ಮಾತಾಡ್ಬೇಕಿತ್ತಲ್ಲ.."

ಹೇಳಿ..

ಒಂದು ಕೆಲ್ಸ ಬೇಕಿತ್ತಲ್ಲ ನಮ್ ಹುಡುಗಂಗೆ?

ಅರೇ! ಅಂತಂದುಕೊಂಡೆ ಮನದಲ್ಲೇ, ಕೆಲ್ಸ ಕೇಳೋರು ಯಾರೂ ಕನ್ನಡದಲ್ಲಿ ಮಾತಾಡುವುದಿಲ್ಲ.

ಹಮ್, ಹೇಳಿ..

"ನೋಡಿ ಸಾರ್ ನಮ್ ಹುಡ್ಗ ಭಾಳ ಒಳ್ಳೇವ್ನು, ಏನೋ ಕಂಪ್ಯೂಟರ್ ಓದ್ಕಂಡಿದಾನೆ, ಒಳ್ಳೇ ಮನ್ತನ."

ಐಲಾ! ಥೇಟು ರಾಜಕಾರಣಿಗಳದೇ ಧಾಟಿ. ಅದೇ ಗತ್ತು. ಒಳ್ಳೇ ಮನೆತನ ಆದ್ರೆ ನಾನೇನು ಮಾಡ್ಲಿ, ಅವ್ನುಗೇನು ಹೆಣ್ಣು ಹುಡುಕ್ತೀನಾ ನಾನು?

ನೀವ್ಯಾರು ಮಾತಾಡ್ತಿರೋದು?

"ವಸಿ ತಡ್ಕಳಿ, ಹೇಳೋಗಂಟ ಕೇಳಿ"

ನನ್ಗೆ ಉರಿದು ಹೋಗುತ್ತಿತ್ತು.

"ನಮ್ ನಂಜುಡಪ್ನೋರ್ ಮಗ, ಶ್ರೀಕಾಂತು ನನ್ ಹತ್ರ ಬಂದಿದ್ದ, ನಿಮ್ ಕಂಪ್ನಿಯಿಂದೇನೋ ಮೇಲ್ ಬಂದಿತ್ತಂತೆ, ನಿಮ್ಮಲ್ ಕೆಲ್ಸ ಇದ್ಯಂತಲ್ಲಾ , ಅದ್ನ ಅವಂಗೆ ಕೊಡ್ಸೋಕಾಗತ್ತಾ?!!"
"ಭಾಳಾ ಕಷ್ಟಾ ಪಟ್ ಓದಿದಾನೆ ಹುಡ್ಗ, ನಾನು ನೋಡ್ತಾನೇ ಬಂದಿದೀನಿ ಅವನ್ನ. ಪರ್ವಾಗಿಲ್ಲ ನೀವು ನಿಶ್ಚಿಂತೆಲ್ ಕೆಲ್ಸ ಕೊಡ್ಬೋದು ಅವಂಗೆ..

ಅವನ ಮಾತನ್ನ ಅರ್ಧದಲ್ಲೇ ತಡೆದು ನಿಲ್ಲಿಸಿ ಹೆಚ್ಚು ಕಡಿಮೆ ಕಿರುಚಿದೆ!
"ತಾವ್ ಯಾರ್ ಸಾರ್ ಮಾತಾಡದು!?"

"ಒಹ್ ಸಾರೀ ಕಣ್ರೀ, ಹೇಳದೇ ಮರ್ತ್ ಬಿಟ್ಟಿದ್ದೆ, ನಾನು ಕುಮಾರ್ ಸ್ವಾಮಿ PA ಮಾತಾಡ್ತಿರೋದು ಈ ಕಡೆಯಿಂದ"

ಹಾನ್! ನಂಗೆ ಒಂದು ಘಳಿಗೆ ಏನು ಹೇಳಬೇಕೋ ತೋಚಲಿಲ್ಲ!

"ಏನು , ಕುಮಾರಸ್ವಾಮಿ PA ನಾ?"

"ಹೌದು ಸಾರ್, ಕುಮಾರ್ ಸ್ವಾಮಿ ಪೀಏನೇ.. ನಾನು ಅವರ ...ನಗರ ಮನೆಲೇ ಇರೋದು, ಅಲ್ಲೇ ಕೆಲ್ಸ ಮಾಡೋದು.. ನಮ್ ಹುಡ್ಗ ನಿಮ್ ನಂಬರ್ ಕೊಟ್ಟು ಮಸಿ ಮಾತಾಡಣ್ಣೋ, ನಂಗ್ಯಾಕೋ ಹೆದ್ರಿಕೆ ಅಂತಂದ, ಹಾಂಗಾಗಿ ಫೋನ್ ಮಾಡ್ದೆ"

.......... ನಾನು ಏನೂ ಹೇಳಲಿಲ್ಲ, ಅವನಾಗೇ ಮುಂದುವರೆಸಿದ.

"ಒಂದ್ ಕೆಲ್ಸ ಮಾಡ್ತೀನಿ ನಾನು , ಕುಮಾರಣ್ಣಂದು ಒಂದು ಲೆಟರ್ ಕೊಟ್ ಕಳುಸ್ತೀನಿ ನಮ್ ಹುಡ್ಗನತ್ರ, ಅದ್ನ ನೋಡ್ಬುಟ್ಟೇ ಕೆಲ್ಸ ಕೊಡಿ, ನನ್ ಮೇಲೆ ನಂಬ್ಕೆ ಬರ್ಲಿಲ್ಲ ಅಂದ್ರೆ.. "

ಏನ್ ಲೆಟರ್, ಯಾಕೆ ಲೆಟರ್?

"ಅದೇಯಾ, ಇವ್ನು ಒಳ್ಳೇ ಹುಡ್ಗ, ನನ್ನ ಶಿಫಾರಸು ಇದೆ..ಈ ತರ ಈ ತರ ಅಂತ.. ಈ ಮಮೂಲಿ ಶಿಫಾರಸು ಪತ್ರ "
ನಂಗೆ ಅಕ್ಷರಶಃ ಪರಚಿಕೊಳ್ಳುವ ಹಾಗಾಯಿತು. ಸಾಫ್ಟ್ ವೇರ್ ಕೆಲ್ಸನಾ ಗವರ್ಮೆಂಟು ಕೆಲ್ಸ ಅಂದುಕೊಂಡು ಬಿಟ್ಟಿದ್ದ ಈ ಮನುಷ್ಯ ಅನ್ನುವುದರಲ್ಲಿ ಡೌಟೇ ಇರ್ಲಿಲ್ಲ!

ಅಲ್ಲಾ ಇವ್ರೇ, ನಮ್ಮಲ್ಲಿ ಇಂಟರ್ವ್ಯೂ ಗೆ ಸುಮಾರು procedures ಇದೆ, ಅದೆಲ್ಲ ಪಾಸಾದ್ರೆ ಮಾತ್ರ ಕೆಲ್ಸ ಸಿಗತ್ತೆ.. ಟೆಸ್ಟ್ ಬರೀಬೇಕು, ಆಮೇಲೆ ಇನ್ನೇನೇನೋ ತರದ್ದೆಲ್ಲ ಇರತ್ತೆ..

"ಹೀಂಗ್ ಮಾಡಿ ಸಾರ್, ಅದೇನೇನ್ ಕ್ವಶ್ಚನ್ಸು ಇದಿಯೋ ಅದ್ನೆಲ್ಲ ಮೊದ್ಲೇ ಹೇಳ್ಬುಡಿ ನೀವು, ನಮ್ ಹುಡ್ಗಂಗೆ ಸುಲ್ಭಾ ಆಗತ್ತೆ, ಮತ್ತೆ ಸೀಯಮ್ ಕುಮಾರಣ್ಣನ್ ಲೆಟ್ರು ಹ್ಯಾಂಗೂ ಇರತ್ತಾ, ಕೆಲ್ಸ ಆರಾಮಾಗಿ ಸಿಗತ್ತೆ"

ಎಲಾ ಇವನಾ! ನಂಗೆ ಅಳಬೇಕೋ ನಗಬೇಕೋ ಗೊತ್ತಾಗಲಿಲ್ಲ!

ಒಂದು ಕೆಲ್ಸ ಮಾಡಿ , ಅವನ್ನ ಇಂಟರ್ವ್ಯೂ ಗೆ ಕಳ್ಸಿ, ಹುಡ್ಗ ಚನಾಗಿದ್ರೆ, ಕೆಲ್ಸ ಸಿಗತ್ತೆ. ಅವ್ನಿಗೆ programming ಬಂದ್ರೆ, ಯಾರ ಶಿಫಾರಸು ಪತ್ರಾನೂ ಬೇಡ, ಕೆಲ್ಸ ಗೊತ್ತಿಲ್ಲಾ ಅಂದ್ರೆ ಕಲಾಮ್ ಶಿಫಾರಸು ಪತ್ರಾನೂ ನಡೆಯಲ್ಲ- ಅಂತಂದೆ.

ಆ ಆಸಾಮಿ ಇನ್ನೂ ಏನೇನೂ ಹಲುಬುತ್ತಿತ್ತು. "ನೋಡಿ, ನಿಮ್ಗೇ ಒಳ್ಳೇದು.. ಇಲ್ಲಾಂದ್ರೆ.. "

ನಾನು ಫೋನಿಟ್ಟೆ.

ಇವತ್ತಿನವರೆಗೂ ಯಾರೂ ಕುಮಾರಣ್ಣನ ಶಿಫಾರಸು ಪತ್ರ ಹಿಡಕೊಂಡು ಕೆಲಸ ಕೇಳುವುದಕ್ಕೆ ಬಂದಿಲ್ಲ.

ಬುಧವಾರ, ಜುಲೈ 18, 2007

ರಸ್ತೆಗಳೆಂದರೆ...

ರಸ್ತೆಗಳೆಂದರೆ ಭೂಮಿಗೆ
ಮನುಷ್ಯ ರಚಿಸಿಕೊಟ್ಟ
ಕೃತಕ ನಾಲಿಗೆಗಳು.
ಮೈಮೇಲೆಲ್ಲ ಕೆತ್ತಿದ್ದಾನೆ,ಕಡೆದಿದ್ದಾನೆ
ಸಿಮೆಂಟು,ಡಾಂಬರು ಮಣ್ಣು ಎಲ್ಲದರ ನಾಲಗೆಯ
ತನ್ನ ಸೃಷ್ಟಿಯ ರುಚಿ ತೋರಿಸಲು!

ಅವಳ ನಿಜದ ನಾಲಗೆ ಅಲ್ಲೆಲ್ಲೋ ದೂರ
ಕಾಡಲ್ಲಿ ಮೆತ್ತಗೆ ಮಲಗಿರಬೇಕು
ತರಗೆಲೆಗಳಡಿಯಲ್ಲಿ.
ಇಲ್ಲಿ ಅವಳ ಈ ಕೃತಕ ನಾಲಗೆಯ ಗ್ರಂಥಿಗಳು
ಏನನ್ನ ಅನುಭವಿಸುತ್ತಿರಬಹುದು,
ರುಚಿ ಹೇಗಿರಬಹುದು ಎಂಬ ಸೋಜಿಗ ನನಗೆ.

ಬರಿಗಾಲಲಿ ನಡೆವ ಭಿಕ್ಷುಕನ ಪಾದದ ನಿಟ್ಟುಸಿರು
ಶವಯಾತ್ರೆಯ ಮೆರವಣಿಗೆ,
ಅಪಘಾತದಿ ತೊಟ್ಟಿಕ್ಕುವ ರಕ್ತ,
ಪ್ರತಿಭಟನೆ ನಡೆಸುವ ಸಾಲು ಕಾಲುಗಳು
ಯಾರದೋ ಮನೆಯಿಂದ ಹೊರಬಿದ್ದ ಪಾತ್ರೆ ಪಗಡ.
ನಡು ರಾತ್ರೆ ತರಿದು ಬಿದ್ದ ಮಲ್ಲಿಗೆಯ ಮಾಲೆ..
ದಿಗಿಲಾಗುತ್ತದೆ ನನಗೆ.

ಸಮಾಧಾನ ಪಟ್ಟುಕೊಳ್ಳುತ್ತೇನೆ, ನೆನಪಿಸಿಕೊಂಡು
ಮಣ್ಣ ದಾರಿಯ ಮಳೆಯ ತಂಪು
ಹಳೆ ದಾರಿಯಲಿ ಸೈಕಲೋಡಿಸುವ ಹೊಸ ಹುಡುಗನ ಖುಷಿ
ಮರಗಳಿಂದುದುರಿದ ಹೂವಿಂದ ಮುಚ್ಚಿದ ರಸ್ತೆ,
ಈಗ ತಾನೆ ನಡೆಯಲು ಕಲಿತು ಹೆಜ್ಜೆಯಿಡೋ ಪುಟ್ಟ ಪಾದ,
ಇವೆಲ್ಲದರ ರುಚಿ ಅನುಭವಿಸುವಂತದ್ದೇ,
ಅಲ್ಲವೇ?
ರಸ್ತೆಗಳೆಂದರೆ .....

ಗುರುವಾರ, ಜುಲೈ 12, 2007

ಒಂದು ಫೋನ್ ಕಾಲು ಅಥವಾ ಮತ್ತೆ HR ಕಥೆಯು.

"ನಮಸ್ತೇ, ನಾನು ಸುನೀತಾ ಹತ್ರ ಮಾತಾಡ್ತಿದೀನಾ?"

ತುಸು ಮೌನ, ನಂತರ..

ನೀವ್ ಯಾರು ಮಾತಾಡೋದು?

"ನಾನು ಶ್ರೀನಿಧಿ ಅಂತ, ಒಂದು ಕಂಪನಿಯಿಂದ ಕಾಲ್ ಮಾಡ್ತಿದೀನಿ, ಜಾಬ್ ಓಪನಿಂಗ್ ಬಗ್ಗೆ ಮಾತಾಡ್ಬೇಕಿತ್ತು ಅವರ ಹತ್ತಿರ,
ನೀವ್ಯಾರು ಮಾತಾಡೋದು, ಸುನೀತಾನೇನಾ?"

ಅಲ್ಲ, ನಾನು ಅವಳ ಫ್ರೆಂಡು, ರೂಪಾ ಅಂತ..

"ಹೌದಾ, ಓಕೆ ಅವರು ಎಷ್ಟ್ ಹೊತ್ತಿಗೆ ಸಿಗ್ತಾರೆ?, ಆಮೇಲ್ ಮಾಡ್ತೀನಿ ಬಿಡಿ"

ಓಕೆ.. ಹೇಯ್ ಸುರೇಶ್, ಒಂದ್ ನಿಮಿಷಾ.. ನಾನು ಸುನೀತಾನೇ ಮಾತಾಡ್ತಿರೋದು ಇಲ್ಲಿ..

"ನಾನು ಶ್ರೀನಿಧಿ, ಸುರೇಶ್ ಅಲ್ಲ.."

ಸುಮ್ನಿರೋ ಸುರೇಶಾ, ಸಾಕು ಕಂಡಿದೀನಿ... ಪ್ರತೀ ಸಲನೂ ನೀನು ನನ್ನ ಫೂಲ್ ಮಾಡೋಕಾಗಲ್ಲ! ಆವತ್ತೇನೋ ಗೊತಾಗಿಲ್ಲ, ಏನ್ ಇವತ್ತೂ ಆಗ್ ಬಿಡ್ತೀನಿ ಅಂದ್ಕೊಂಡಿದೀಯಾ?, ಹೋಗಲೇ..

"ಹೇ, ಇಲ್ಲ ನಾನು ಶ್ರೀನಿಧಿ, ಕಾಲಿಂಗ್ ಫ್ರಾಂ.. "

ಹಾ ಹಾ, ಶ್ರೀನಿಧಿ ಅಂತೆ ಶ್ರೀನಿಧಿ!ಹೆಸ್ರು ಚನಾಗಿದೆ! ಇದೇನಿದು ಈ ಸಲ ಕಂಪನಿ, ಕೆಲ್ಸ ಅಂತ ಹೊಸ ತರಾ ತಮಾಶೆ ಮಾಡ್ತಿದೀಯಾ?! ಈ ಸಲ ನನ್ನ ಫೂಲ್ ಮಾಡೋಕಾಗಲ್ವೋ ನಿನ್ ಕೈಲಿ! ನಾನೇ ಗೆದ್ದೆ.. ಯಾಹೂ!

" ಹಲೊ, ಒಂದ್ ನಿಮಿಷ , ನನ್ ಮಾತ್ ಸ್ವಲ್ಪ ಕೇಳ್ತೀರಾ?, ನಾನು ಸತ್ಯವಾಗ್ಲೂ ಶ್ರೀನಿಧಿ ಅಂತಾನೇ ಕಾಲ್ ಮಾಡಿರೋದು, ನಂಗೆ ಸುರೇಶ ಯಾರೋ ಗೊತ್ತಿಲ್ಲ ಕಣ್ರೀ... ನಮ್ ಕಂಪ್ನಿಲಿ ಕೆಲ್ಸ ಖಾಲಿ ಇದೆ , ನೋಡಿ ನಿಮ್ ಪ್ರೊಫೈಲ್ ಲಿ ಇಂತಿಂತಾ ಪ್ರೊಜೆಕ್ಟ್ ಡೀಟೈಲ್ಸ್ ಇವೆ... ಇದು ನಿಮ್ ಮೈಲ್ ಐಡಿ.."

ಹೆ ಹೆ ಹೆ.. ಹೌದಾ?.. ನಾನು.. ನಾನು.. ತಪ್ ತಿಳ್ಕೊಂಡೆ.. ಸಾರಿ.. just a sec..

ಆ ಕಡೆಯಿಂದ ಫೋನ್ ಲೈನ್ ಕಟ್, ಮತ್ತೆ ಮಾಡಿದರೆ ಸ್ವಿಚ್ ಆಫ್..

ಮತ್ತೆ ಹೊಸ ರೆಸ್ಯೂಮು ಹುಡುಕಿ ಕೆಲ್ಸ ಮುಂದುವರಿಸಿದೆ.

ಮಂಗಳವಾರ, ಜುಲೈ 10, 2007

ಖುಷಿಗೊಂದು ಪದ್ಯ.

ಮನೆಯ ಅಂಗಳದಂಚಿನ ಒದ್ದೆ ಮೆಟ್ಟಿಲು
ಹೆಜ್ಜೆ ಹಾಕುತ್ತ ಹೋದ ಹಾಗೆ
ಕೆಳಗೆಲ್ಲ ಹಸಿರು.
ಭಟ್ಟರ ಗದ್ದೆಯಲ್ಲಿ ನೇಜಿಯ ಹುರುಪು
ಸಂಪಿಗೆ ಮರದ ತುಂಬ ಹೂ ತೇರು.
ಕೊನೆಯ ಮೆಟ್ಟಿಲ ಸಂದಿಯಲ್ಲಿ, ಅಗೋ
ಬೆಳ್ಳಿಯಣಬೆ!


ತೆಂಗಿನ ಮರದ ಬುಡದಿ
ಸಣ್ಣ ಹುಲ್ಲ ಚಿಗುರು, ಅಲ್ಲೇ ಮುಂದೆ
ಹರಿವ ಹಳ್ಳ, ಜತೆಗೆ
ಮಣ್ಣ ಚಿತ್ರವ ಬಿಡಿಸಿದೇಡಿ ಬಿಲ.
ಪಕ್ಕದ ಬಂಡೆ ಕೆಳಗೀಗ ಪುಟ್ಟ ಒರತೆ.
ಹಲಸು ಮರದಲ್ಲಿ ಅಳಿಲಿನಾಟ.
ಬಾಳೆಗಿಡಗಳ ಸುತ್ತ ಹೊಸದು ಕಂದು.

ನಿತ್ಯ ನಡೆವ ಹಳೆ ಕಾಲು ಹಾದಿಯಲೂ
ಹೊಸ ಹೆಜ್ಜೆ ಗುರುತು.
ನೀರ ದಾರಿಗೆ ಸಿಕ್ಕ ತರಗೆಲೆಯಲಿ
ಬರಿ ಕಂದು ಪದರ-
ಹುಣಸೆ ಮರದ ಗೆಲ್ಲಲಿ ಸೀತಾಳೆ ದಂಡೆ
ಕೆಸುವಿನೆಲೆ ಮೇಲೆ ಸ್ಫಟಿಕ ಬಿಂದು.
ಜೊತೆಗೆ ಹೆಸರಿರದ ಹಳದಿ ಹೂವು.

ಎದುರು ಗದ್ದೆಯ ನಾಟಿ ಹೆಂಗಸು,
ಕೊರಳೆತ್ತಿ ಹಾಡುತ್ತಿದ್ದಾಳೆ,
ಅರ್ಥವಾಗದು ಸಾಹಿತ್ಯ.
ಆದರೆ ಅವಳ ಖುಷಿಯ ಏರು ದನಿ,
ಲವಲವಿಕೆ ರಾಗ,
ಈಗಷ್ಟೇ ಶುರುವಾದ ಹನಿ ಮಳೆ
ಎಲ್ಲ ಸೇರಿ ನನ್ನೊಳಗೆ ನವೋನ್ಮೇಷ.

ಶುಕ್ರವಾರ, ಜೂನ್ 29, 2007

ಮೇ ಫ್ಲವರಿನ ಮರ

ಮೇ ಫ್ಲವರ್ ಮರಗಳ
ಸಾಲಿನ ಕೆಳಗೆ,
ಹಳೆಯ ಒಣಗಿದ ಹೂ ರಾಶಿ
ಸಣ್ಣನೆಲೆಗಳ ತರಗೆಲೆ ಪದರ
ಹಾಸಿಕೊಂಡಿವೆ.
ಈ ಬೀದಿ ಎಲ್ಲೋ ಮೂಲೆಯಲ್ಲಿದೆ,
ಯಾರೂ ಇದನ್ನ ಗುಡಿಸಲು ಬರುವುದಿಲ್ಲ.

ಮರದ ಕೆಲ ಗೆಲ್ಲುಗಳಲಿನ್ನೂ,
ಹೂ ಗೊಂಚಲುಳಿದಿವೆ,
ಕೆಂಪು ಕೆಂಪು.
ಗಾಳಿಗೊಂದೊಂದು ಹೂ ಪಕಳೆ
ಅಲ್ಲೆ ತೇಲುತ್ತ ಕೆಳಬೀಳುತ್ತವೆ.
ಈ ಬೀದಿ ಎಲ್ಲೋ ಮೂಲೆಯಲ್ಲಿದೆ,
ಯಾರು ಇದನ್ನ ನೋಡಲು ಬರುವುದಿಲ್ಲ.

ಮಳೆಗಾಲ ಶುರುವಾಗಿದ್ದರಿಂದ,
ಸಾಲು ಮರಗಳ ತುಂಬ ಹಸಿರ ಲವಲವಿಕೆ;
ಮಳೆ ನಿಂತ ಮೇಲೆ ಇಲ್ಲಿ
ನಡೆಯುವುದೆಂದರೆ ಬಹಳ ಖುಷಿ.
ನೀರು ತೊಟ್ಟಿಕ್ಕುತ್ತದೆ, ಹನಿ-ಹನಿಯಾಗಿ.
ಈ ಬೀದಿ ಮೂಲೆಯಲ್ಲಿದೆ
ಯಾರೂ ಈ ಸುಖ ಅನುಭವಿಸಲು ಬರುವುದಿಲ್ಲ.

ಮೇ ಫ್ಲವರಿನ ಮರ ಎಷ್ಟೇ ಚಂದ
ಕಂಡರೂ,
ಮಳೆಗಾಲದಲ್ಲದು ಹೂ ಬಿಡುವುದಿಲ್ಲ.
ಭಣಗುಡುವ ಬೇಸಗೆಯೇ ಬೇಕದಕೆ.
ಹೂ ಬಿಟ್ಟಾಗಲೂ ಅಷ್ಟೇ,
ಯಾರು ಅದರ ಚಂದ ಹೊಗಳುವುದಿಲ್ಲ.
ಈ ಬೀದಿ, ಮೂಲೆಯಲ್ಲಿದೆ.

ಬುಧವಾರ, ಜೂನ್ 27, 2007

ಎರಡು ಚಿಟುಕು ಚುಟುಕಗಳು.

ಮಳೆ.
ಕಪ್ಪು ಆಗಸದಾಚೆ ಅರ್ಧ ಬೆಳಕಿನ ಚಿತ್ರ
ಕಂಡು ಕಾಣದ ಹಾಗೆ ಬೆಳ್ಳಕ್ಕಿ ಸಾಲು
ಮೋಡಗಳ ಮುಖದಲ್ಲಿ ಯಾರವೋ ಕಣ್ಣು
ಅರಳು ಕಣ್ಣುಗಳಿಂದ ಇಳಿವ ಜಲಧಾರೆ.

ಮಾತು - ಮೌನ
ಮೌನದಲೆ ಹಿತವಿತ್ತು , ಮಾತ ಕಲಿಸಿದನವನು
ಮಾತನಾಡಲು ಕಲಿತೆ, ಮೌನ ಮರೆತಿತ್ತು
ಅವನ ಮಾತನ್ನೆಲ್ಲ ನನಗೆ ಕೊಟ್ಟನೋ ಏನೋ,
ಅವನ ಮಾತುಗಳಲ್ಲಿ ಮೌನವಿಣುಕಿತ್ತು.

ಅವನ ಮೌನಕೆ ನನ್ನ ಮಾತ ನೀಡುವ ಆಸೆ
ಕೇಳಿದರೆ ಬೇಡೆನುವ, ಮೌನದಲ್ಲೇ.
ನನಗು ಅದು ಸಮ್ಮತವೇ, ಇರಲಿ ಬಿಡು ಮಾತಿಲ್ಲೇ,
ನಾ ಬೆಳ್ಳಿಯಾದರೋ, ಅವನು ಬಂಗಾರ!.

ನನ್ನ ಕವನಗಳಲ್ಲ. ಬರೆದವರಿಗೆ ಹೆಸರು ಹೇಳಿಕೊಳ್ಳುವುದು ಬೇಕಿಲ್ಲವಂತೆ.

ಮಂಗಳವಾರ, ಜೂನ್ 26, 2007

HR- ಮತ್ತೊಂದು ಸುತ್ತು!

ಕೆಲ ದಿನಗಳ ಹಿಂದೆ ನಮ್ಮಾಫೀಸಲ್ಲಿ ಇಂಟರ್ವ್ಯೂ ನಡೆಯುತ್ತಿತ್ತು. ಒಂದು ೧೦-೧೫ ಕೆಲ್ಸ ಖಾಲಿ ಇತ್ತು. ಸಂದರ್ಶನದ ವ್ಯವಸ್ಥೆಯ ಜವಾಬ್ದಾರಿ ಎಂಬ ಕರ್ಮ ನನ್ನ ತಲೆಗಂಟಿಕೊಂಡಿತ್ತು. ಒಂದೆರಡು ವಾರ ಬರೀ ಇದೇ ಕೆಲಸ ಮಾಡಿ ಹೈರಾಣಾಗಿ ಹೋದೆ. ನಾನು ಬರುವ ಕ್ಯಾಂಡಿಡೇಟುಗಳ ಹಣೇಬರದ ಬಗ್ಗೆ ಬರೆದರೆ, "ನೀನು ವ್ಯಂಗ್ಯ ಮಾಡುತ್ತೀಯಾ, ನಮ್ಮ ಕಷ್ಟ ನಮಗೆ" ಅಂತ ಓದುಗರಾದ ನೀವೆಲ್ಲ ತರಾಟಗೆ ತೆಗೆದುಕೊಳ್ಳುತ್ತೀರಿ, ನನಗೆ ಗೊತ್ತು. ಆದರೆ ಬರೆಯದೆ ಬೇರೆ ವಿಧಿಯಿಲ್ಲ. ಇದನ್ನ ಓದಿ, ಮುಂದೆ ಇಂಟರ್ವ್ಯೂಗಳಿಗೆ ತೆರಳುವ ಯಾರಿಗಾದರೂ ಉಪಕಾರವಾದರೂ ಅಗಬಹುದು.

. ಡ್ರೆಸ್ ಕೋಡ್.

ಶುಭ ಸೋಮವಾರ ಬೆಳಗ್ಗೆ ಒಬ್ಬ ಸುಂದರಾಂಗ ಬಂದ. ಒಳ್ಳೇ ನೈಕ್ ಸ್ಪೋರ್ಟ್ಸ್ ಶೂ, ಟಿ- ಶರ್ಟು, ಜೀನ್ಸು. "ಏನಪ್ಪಾ, ಏನಾಗಬೇಕು"? "ಶ್ರೀನಿಧಿ ಅನ್ನೋರು ಕರೆದಿದ್ದಾರೆ ನನ್ನ, ಇಂಟರ್ವ್ಯೂ ಇದೆ" . ಯಮ್ಮಾ! ಪದವಿ ಮುಗಿಸಿ, ಈಗಾಗಲೇ ಕೆಲಸ ಮಾಡುತ್ತಿರುವ ಯುವಕನಿಗೆ ಸಂದರ್ಶನಕ್ಕೆ ಹೇಗೆ ಬರಬೇಕು ಅನ್ನುವ ಕಾಮನ್ ಸೆನ್ಸ್ ಕೂಡಾ ಇಲ್ಲ. "ಅಣ್ಣಾ, ಈ ಡ್ರೆಸ್ಸಲ್ಲಿ ನಿನ್ನ ಇಂಟರ್ವೂ ತಗೋಳೋದಿಲ್ಲ, ವಾಪಾಸು ಹೋಗಿ ನಾಳೆ ಬಾರಪ್ಪಾ" ಅಂದು ಕಳಿಸಿದೆ.

ಒಬ್ಬ ಮಹಾಶಯರಂತೂ ಬಾಟಾ ಚಪ್ಪಲಿ ಹಾಕಿಕೊಂಡು ಸಂದರ್ಶನಕ್ಕೆ ಬಂದಿದ್ದರು.

ಸರಳವಾದ ಫಾರ್ಮಲ್ ಡ್ರೆಸ್ ಹಾಕಿಕೊಂಡು ಇಂಟರ್ವ್ಯೂಗಳಿಗೆ ಹೋಗಬೇಕು ಅನ್ನುವ ಕಾಮನ್ ಸೆನ್ಸ್ ಎಲ್ಲರಿಗು ಇದೆ ಅಂದುಕೊಂಡಿದ್ದೆ ನಾನು. ಅದು ಸುಳ್ಳು ಅಂತ ಈಗ ಗೊತ್ತಾಗಿದೆ.

೨. ರೆಸ್ಯೂಮ್ - ಜಾತಕ.

ನಮ್ ಆಫೀಸು ಗ್ಲಾಸ್ ಬಾಗಿಲನ್ನ ಹೆಚ್ಚು ಕಡಿಮೇ ಒಡೆದೇ ಬಿಡುವ ಸ್ಪೀಡಲ್ಲಿ ತಳ್ಳಿದ ಯಾರೋ ಒಬ್ಬ. ನಾನು ಅಲ್ಲೇ ಪೇಪರ್ ಓದುತ್ತ ಕುಳಿತಿದ್ದೆ. ಕೈಲಿ ಒಂದು ಸುರುಳಿ ಸುತ್ತಿದ ಪೇಪರು - ಈ ಒಲೇ ಊದೋಕೆ ಬಳಸುವ ಊದುಕೊಳವೆಯ ಹಾಗಿನದು.
"sorry i am bit late.. i am Mr. so and so.. ಇಂಟರ್ವ್ಯೂ... "

ಓಕೆ, ನಿನ್ನ ರೆಸ್ಯೂಮು ಕೊಡು ಅಂದಿದ್ದಕ್ಕೆ ಆ ಊದುಕೊಳವೆಯನ್ನ ನನ್ ಕೈಗಿತ್ತ ಆಸಾಮಿ. ಮುಖ ನೋಡಿದೆ. ಹೆ ಹೆ ಅಂತ ಪೆಕರು ನಗೆ. ನಾನು ಆ ಹಾಳೇ ಉಲ್ಟಾ ಪಲ್ಟಾ ಮಡಚಿ - ಸರಿ ಮಾಡಿ ನಮ್ಮ ಮ್ಯಾನೇಜರಿಗೆ ಕೊಟ್ಟೆ.

ಇನ್ನು ಒಂದಿಬ್ಬರು ರೆಸ್ಯೂಮಿನ ಬಿಡಿ ಬಿಡಿ ಹಾಳೆಗಳನ್ನ ನನ್ನ ಕೈಗಿತ್ತಿದ್ದರು. ನಾನು ಎಲ್ಲ ಜೋಡಿಸಿ, ಸ್ಟೆಪ್ಲರು ಹೊಡೆದುಕೊಂಡು ಇಟ್ಟುಕೊಂಡೆ. ನನಗೆ ಬೇಕಲ್ಲ ಅದು!.

ಒಂದು ಸಣ್ಣ ಫೈಲು ಇಟ್ಟುಕೊಂಡರೆ ಒಳಿತು. ಬೇಡ, ಆ ರೆಸ್ಯೂಮನ್ನ ನೀಟಾಗಿ ಹಿಡಕೊಂಡು ಬರೋಕೆ ಏನು ರೋಗ?

೩. ಸಮಯ ಪಾಲನೆ.

ಅರ್ಧ ತಾಸು ಲೇಟಾಗಿ ಬಂದು ಟ್ರಾಫಿಕ್ ಜಾಮ್ ಸಾರ್ ಸ್ವಾರೀ.. ಅನ್ನೋದು ಉಸಿರಾಡಿದಷ್ಟು ಸಹಜ ಕಾರಣವಾಗಿ ಬಿಟ್ಟಿದೆ. ಎಷ್ಟೇ ಉತ್ತಮ ಅಭ್ಯರ್ಥಿಯಾದರೂ, ಅವನ ಬಗ್ಗೆ ಒಂದು ಅಸಹನೆ ಮನದೊಳಗೆ ಅಷ್ಟರಲ್ಲೇ ಬೇರು ಬಿಟ್ಟಾಗಿರುತ್ತದೆ.

೪. ಸಂದರ್ಶನ

" tell me about yourself please.."

"myself ramalingam, myself did BE in ... . , myself working in ... "

ಮೊದಲ ಪ್ರಶ್ನೆ ಇದೇ ಆಗಿರುತ್ತದೆ ಅನ್ನುವುದು, ಎಲ್ಲರಿಗೂ ಗೊತ್ತಿದೆ ಮತ್ತು ಇಲ್ಲೇ ಯಡವುತ್ತಾರೆ. ಇಂಗ್ಲೀಷು ನನ್ನದೂ ಚೆನ್ನಾಗಿಲ್ಲ. ಆದರೆ, ಸ್ವಲ್ಪವಾದರೂ ಸರಿ ಮಾಡಿಕೊಂಡಿರಬೇಕು ತಾನೆ?

( ಇದರ ಬಗ್ಗೆ, ವಿವರವಾಗಿ ಬೇರೆಯದೇ ಬರಹ ಬರೆಯಬೇಕು).

೫. ರಿಸಲ್ಟು

"ಸಾರ್ ನಾನು ಸೆಲೆಕ್ಟಾ?" ಅಂದ ಒಬ್ಬಾತ, ಇಂಟರ್ವ್ಯೂ ಮುಗಿದು ಹೊರ ಹೋಗುತ್ತಲೇ ಫೋನು ಅವನದು.

ಅಷ್ಟೊಂದು ಗಡಿಬಿಡಿ ಒಳ್ಳೆಯದಲ್ಲ. ಬಹಳ openings ಇದ್ರೆ, ಫೀಡ್ ಬ್ಯಾಕೂ ಸ್ವಲ್ಪ ಲೇಟ್ ಆಗತ್ತೆ.

ತಲೆಯೊಳಗೆ ಎಷ್ಟೇ ಬುದ್ಧಿ ಇದ್ದರೂ, ಹೊರಗಡೆ - ಮೇಲು ನೋಟಕ್ಕೆ ಕಾಣುವ ಹಾಗಿನ ಯಡವಟ್ಟು ಮಾಡಿಕೊಂಡರೆ - ಊಹೂಂ! ಕಷ್ಟ ಕಷ್ಟ.


ಇನ್ನೂ ತುಂಬ ಹೇಳಬೇಕು- ಮತ್ಯಾವಾಗಾದರೂ....

ಸೋಮವಾರ, ಜೂನ್ 25, 2007

ಕೆಂಪು

ಅಂಬುಲೆನ್ಸಿನ ಮೇಲೆ ತಿರುಗೋ
ಬುರುಡೆ.
ಬೈಕು ಕಾರಿನ ಬ್ರೇಕ್
ಲೈಟು.
ಟ್ರಾಫಿಕ್ ಸಿಗ್ನಲ್ಲು.

ಮುತ್ತೈದೆಯ ಭ್ರೂ ಮಧ್ಯ.
ಯೋಧನ ತಿಲಕ
ರಂಗೋಲಿ ನಡುವಿನ
ರಂಗು
ದೇವರ ಮೇಲಿನ ದಾಸವಾಳ.

ಹುಡುಗನ ಕೈಯ ಗುಲಾಬಿ,
ಅವಳ ಬಳೆಗಳು.
ಸಂಜೆ ಸೂರ್ಯ,
ಸರದೊಳಗಿನ ಹವಳ.

ಹೆಂಡಗುಡುಕನ
ಕಣ್ಣು
ಕತ್ತಿಯಂಚಿನ ರಕ್ತ.
ಸ್ಲಮ್ಮಿನಂಚಿನ ಬೆಳಕು

ಕೆಂಪಿಗೆ ಹಲವು ಬಣ್ಣ!

ಗುರುವಾರ, ಜೂನ್ 21, 2007

ಕೈಗಳು

ಮದ್ರಾಸ್ ಐ ಆದಂತಿದ್ದ ಕೆಂಪು ಕಣ್ಣುಗಳನ್ನ ಬಿಡಿಸಿ ಎದ್ದು ಕೂತ ಅವನು. ಭಾನುವಾರ ಬೆಳಗ್ಗೆ ಐದೂವರೆಗೆ ಆತನ ವೃತ್ತಿ ಜೀವನದಲ್ಲೇ ಎಂದೂ ಎದ್ದು ಗೊತ್ತಿರಲಿಲ್ಲ. ಮೊಬೈಲ್ ನಲ್ಲಿ ಮೂರು ಮೂರು ಬಾರಿ ಅಲರಾಮು ಹೊಡಕೊಂಡಿತ್ತು. ದೂರದ ಸಂಬಂಧಿ ಸುಧಾಕರ ಆತ ನಡೆಸುತ್ತಿರುವ ದೇವಸ್ಥಾನದ ಪೂಜೆಗೆ ಸಹಾಯ ಮಾಡಲು ಬಾ ಅಂದಿದ್ದರಿಂದ ಹೋಗದೆ ವಿಧಿಯಿಲ್ಲ. ಯಾಕಂದರವನ ಓದು ಮುಗಿಸಲು ಸಹಾಯ ಮಾಡಿದ್ದು ಇದೇ ಸುಧಾಕರನ ಅಪ್ಪ, ಮತ್ತು ಇವನು ಹಳ್ಳಿಯ ತನ್ನ ಮನೆಯಲ್ಲಿ ಪಿ ಯು ಸಿ ಓದಿ ಮುಗಿಸುವವರೆಗೊ, ತಂದೆಯ ಜೊತೆ ಪೌರೋಹಿತ್ಯಕ್ಕೆ ಸಹಾಯ ಮಾಡಲು ಹೋಗುತ್ತಿದ್ದ ವಿಚಾರ ಮನೆತನಕ್ಕೆಲ್ಲ ತಿಳಿದುದೇ ಆಗಿತ್ತು. ತನಗೀಗ ಅದೆಲ್ಲ ಅಭ್ಯಾಸವಿಲ್ಲ ಅಂತ ಅದೂ ಇದೂ ಕುಂಟು ನೆಪ ಹೇಳಿದರೂ ಆ ಪುಣ್ಯಾತ್ಮ ಇವನನ್ನ ಬಿಡಲು ತಯಾರಿರಲಿಲ್ಲ. ಹೇಗೋ ಎದ್ದು, ಮುಖ ತೊಳೆದು ನಿದ್ದೆಗಣ್ಣಲ್ಲೇ ಬೈಕಿನ ಕೀ ಎತ್ತಿಕೊಂಡು ಹೊರಬಿದ್ದ.

ಚಳಿಯೆಂಬುದು ಇವನ ನಿದ್ರೆಯನ್ನ ಮುರುಟಿ ಹಾಕಿತು, ಆ ಕ್ಷಣದಲ್ಲೇ.ನೆಂಟ ಹೇಳಿದ ದಾರಿಯನ್ನ ಆಗಾಗ ನೆನಪು ಮಾಡಿಕೊಳ್ಳುತ್ತಾ, ಕೆಟ್ಟ ಚಳಿಗೆ ಬೈದುಕೊಂಡು, ದೇವಸ್ಥಾನದ ಬಳಿ ಬಂದಾಗ ಗಂಟೆ ಆರೂ ಕಾಲು. ದಿನ ನಿತ್ಯ ಕಂಪೆನಿ ವಾಹನದಲ್ಲೇ ಓಡಾಡುತ್ತಿದ ಅವನಿಗೆ, ಬೆಳಗಿನ ಚಳಿಯ ಬೆಂಗಳೂರು ಹೊಸದು, ಅದೂ ಬೈಕಿನ ಮೇಲೆ. ಪ್ರತಿ ವಾರಾಂತ್ಯಗಳಲ್ಲಿ ಅವನು 'ಅವಳನ್ನು' ಕರಕೊಂಡು ಶಾಪಿಂಗ್ ಮಾಲುಗಳಿಗೆ ಹೋಗುವಾಗ ಮಾತ್ರ ಬೈಕನ್ನ ಬಳಸುತ್ತಿದ್ದ, ಮತ್ತು ಇವತ್ತು ಮೊದಲ ಬಾರಿ ಬೇರೆಯದೇ ಉದ್ದೇಶಕ್ಕೆ ಬಳಕೆ ಆಗಿತ್ತು! ಸ್ಪೀಡೋಮೀಟರು ನೋಡಿಕೊಂಡ, ೧೮ ಕಿಲೋಮೀಟರು ಪ್ರಯಾಣವಾಗಿತ್ತು. ಪ್ರಾಯಶ: ಇದು ಬೆಂಗಳೂರಿನ ಇನ್ನೊಂದು ತುದಿಯಿರಬೇಕು ಅಂತ ಆಲೋಚನೆ ಮಾಡುತ್ತ ದೇವಳದ ಬಳಿ ಬಂದ ಆತ.

ಈ ದೇವಸ್ಥಾನಕ್ಕೆ ಯಾವತ್ತೋ ಬಂದ ನೆನಪು.. ಹಾ.. ಹಿಂದೆ ಎಂಜಿನಿಯರಿಂಗ್ ಪಾಸಾದಾಗ ಅಪ್ಪನ ಜೊತೆ ಇಲ್ಲಿಗೆ ಬಂದು ಪೂಜೆ ಮಾಡಿಸಿರಬೇಕು ಅಂತಂದುಕೊಳ್ಳುತ್ತಾ, ಬೈಕನ್ನ ದೇವಸ್ಥಾನದ ಗೋಡೆ ಪಕ್ಕಕ್ಕೆ ನಿಲ್ಲಿಸಿದ. ವರ್ಷಕ್ಕೊಂದು ಕೆಲಸ ಬದಲಾಯಿಸುವ ಈ ಸಾಫ್ಟ್ ವೇರ್ ಯುಗದಲ್ಲೂ, ಈ ಪುಣ್ಯಾತ್ಮ, ಬೆಂಗಳೂರಿನ ಕೊಂಪೆಯೊಂದರಲ್ಲಿ ಕಳೆದ ಎಂಟು- ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ, ಅದೂ ದೇವಸ್ಥಾನವೆಂಬ ಅತೀ ಬೋರು ಬರುವ ಜಾಗದಲ್ಲಿ! ಬಹಳಾ ದೊಡ್ಡ ಸಾಧನೆಯೇ ಅಂತ ತಲೆ ಕೊಡವಿಕೊಂಡು ಒಳ ಹೆಜ್ಜೆ ಇಟ್ಟ.ದೇವಸ್ಥಾನದ ಬಾಗಿಲಲ್ಲೆ ಇದ್ದ ಸುಧಾಕರ, ಭರ್ಜರಿ ಮಡಿ ಉಟ್ಟುಕೊಂಡು, ದೊಡ್ಡ ಹೊಟ್ಟೆಯ ಜೊತೆಗೆ. ಆ ವೇಷದಲ್ಲಿ ಅವನಂತೂ ಹಳೆಯ ಕನ್ನಡ ಪೌರಾಣಿಕ ಸಿನಿಮಾದ ರಾಕ್ಷಸ ರಾಜನಂತೆ ಕಾಣುತ್ತಿದ್ದ. ಒಳ ಬರುತ್ತಿದ್ದ ಇವನನ್ನ ನೋಡಿ, ತನ್ನ ಅಷ್ಟೂ ಹಲ್ಲು ತೋರಿಸುತ್ತಾ ಇವತ್ತು ಮುಖ್ಯ ಅರ್ಚಕರಿಲ್ಲ, ಭಾನುವಾರ ಬಹಳ ಜನ, ನನ್ನ ಪರಿಚಯದವರಾರು ಸಿಗುವುದಿಲ್ಲ,ಇಂದು ಬಹಳಾ ಕಾರ್ಯಕ್ರಮಗಳಿರುತ್ತವಾದ್ದರಿಂದ....ಎಂದೆಲ್ಲಾ, ಹಿಂದೆ ಕರೆಯುವಾಗಲೇ ಕೊರೆದಿದ್ದ ವಿಷಯಗಳನ್ನೇ ಹೇಳಿ ಮುಗಿಸಿದ.

ಇವನೆ, ಸ್ನಾನ ಆಯ್ತಾ? ಮುಖ ನೋಡಿದರೆ ಆಗಿಲ್ಲ ಅಂತ ಗೊತ್ತಾಗುತ್ತದೆ, ತಡಿ, ಟವಲು ಕೊಟ್ಟೆ, ಬಾವಿ ಅಲ್ಲಿದೆ, ನೀನು ಸ್ನಾನ ಮಾಡುವಷ್ಟರಲ್ಲಿ ನಾನು ಅವಲಕ್ಕಿ ಉಪ್ಪಿಟ್ಟು ತಂದಿಟ್ಟು, ಮಡಿ ರೆಡಿ ಮಾಡಿದೆ" ಅಂದ, ಒಂದೇ ಉಸಿರಿನಲ್ಲಿ! "ಬಾವಿ, ಅವಲಕ್ಕಿ, ಉಪ್ಪಿಟ್ಟು, ಮಡಿ" ಇತ್ಯಾದಿ ಶಬ್ದಗಳೆಲ್ಲ ಬಹಳ ಕಾಲದ ಮೇಲೆ ಕಿವಿಗೆ ಬಿದ್ದಂತಾಗುತ್ತಿತ್ತು ಅವನಿಗೆ. ಏನೋ ಕಿರಿಕಿರಿ ಜೊತೆಗೆ.. ಒಹ್, ನಿದ್ದೆಗಣ್ಣಲ್ಲಿ ಹೊರಟು ಬಂದಾತನಿಗೆ ಮೊಬೈಲು ತರುವುದೇ ಮರೆತು ಹೋಗಿತ್ತು.. ಆಹ್, ಇದೆಲ್ಲಿಗೆ ಬಂದು ಸಿಕ್ಕಿಕೊಂಡೆನಪ್ಪಾ ಅಂತ ಆಲೋಚಿಸುತ್ತಲೇ ಬಟ್ಟೆ ಬಿಚ್ಚಿಟ್ಟು , ಕೊಟ್ಟ ಟವಲು ಸುತ್ತಿ , ಕೊಡಪಾನವನ್ನ ಗಟ್ಟಿಯಾಗಿ ಕುಣಿಕೆಗೆ ಸಿಕ್ಕಿಸಿ ಬಾವಿಗೆ ಇಳಿಸಿದ.

ಹತ್ತಾರು ವರ್ಷಗಳ ಹಿಂದೆ ಮನೆಯಲ್ಲಿ ಇದೇ ತರ ಸ್ನಾನಗಳಾಗುತ್ತಿದ್ದವು.ಮನೆಗೆ ಹೋಗದೇ ೩ ವರ್ಷ ಆಯ್ತು, ಅಬ್ಬಾ! ಈ ಬಾವಿ ಬಹಳ ಆಳ..... ಸೋಪೇ ಇಲ್ಲವಲ್ಲ?.. ಕಡೆಯ ಬಾರಿ ಹೋಗಿ ಬಂದಿದ್ದಾದರೂ ಒಂದು ದಿನದ ಮಟ್ಟಿಗೆ.. ಅಜ್ಜ ಸತ್ತಾಗಲಲ್ಲವೇ..ಸೋಪಿಲ್ಲದೇ ಕೊಳಕು ಹೋಗೋದು ಹೇಗೆ?.. ರೂಮಲ್ಲಾದರೆ ಗೀಸರ್ ಇತ್ತು, ಬೆಚ್ಚಗೆ ಸ್ನಾನ ಮಾಡಿಕೊಂಡು ಬರಬಹುದಿತ್ತು..ಅವಲಕ್ಕಿ?.. ಮನೆಲಿ ಒಂದು ಕಾಲದಲ್ಲಿ ಅದನ್ನೇ ದಿನಾ ತಿನ್ನುತ್ತಿದ್ದೆನಾ?, ಅಮ್ಮ ನೀರಲ್ಲಿ ನೆನೆ ಹಾಕಿ ಕೊಡ್ತಾ ಇದ್ದಂತೆ ನೆನಪು.. ನೀರು ಭಾರಿ ತಣ್ಣಗಿದೆ... ಅರೆ, ಜ..ಜನಿವಾರ ಎಲ್ಲಿ?!! ಯಾವತ್ತೋ ಹರಿದು ಹೋಗಿದೆ, ಅವಳ ನೆಕ್ಲೇಸ್ ಗೆ ಸಿಕ್ಕಿ! ಥತ್! ಈಗ ಇಲ್ಲಿ ಕೇಳೋ ಹಾಗೂ ಇಲ್ಲ! ಮನೆಗೆ ಸುದ್ದಿ ಹೋಗುತ್ತದೆ. ಭಟ್ಟರ ಮಗ ಜನಿವಾರ ಕಿತ್ತು ಬಿಸಾಕಿದ್ದಾನೆ ಎಂದರೆ ಅಪ್ಪ ಆತ್ಮಹತ್ಯೆ ಮಾಡಿಕೊಂಡಾರು!..ತಲೆ ವರೆಸಿ,ಮಡಿ ಉಟ್ಟು ಕೊಂಡು, ಎಚ್ಚರದಲ್ಲಿ ಶಾಲು ಹೊದ್ದುಕೊಂಡ ಮೈ ತುಂಬಾ.

ಬಾಳೆಯೆಲೆಯ ಮೇಲೆ ಉಪ್ಪಿಟ್ಟು- ಅವಲಕ್ಕಿ ಹಾಕಿಟ್ಟಿದ್ದ ಸುಧಾಕರ. ಯಾಕೋ ತಾನು ಬೇರೆ ಪ್ರಪಂಚಕ್ಕೇನಾದರೂ ಬಂದೆನಾ ಅಂತ ಅನುಮಾನ ಶುರುವಾಯ್ತು ಅವನಿಗೆ. ದಿನಾ ಬೆಳಗ್ಗೆ ಹೋಟೇಲಿನ ಇಡ್ಲಿ ವಡಾ - ಮಧ್ಯಾಹ್ನದ ನಾರ್ತ್ ಇಂಡಿಯನ್ ರೋಟಿ - ತಡ ರಾತ್ರಿಯ ಪಿಜ್ಜಾಗಳ ಲೋಕದಿಂದ ಧುತ್ತೆಂದು ಹೊರ ಬಂದು ಬಿದ್ದಂತಾಗಿತ್ತು. ಹೊಟ್ಟೆಯಲ್ಲಿ ಬೇರೇನೂ ಇಲ್ಲವಾದ್ದರಿಂದ ತಿನ್ನತೊಡಗಿದ. "ಅಪ್ಪ ಆರಾಮಿದ್ದಾರ?" ಸುಧಾಕರ ಕೇಳತೊಡಗಿದ. "ಹಮ್". ಮನೆಗೆ ಫೋನ್ ಮಾಡದೆ ತಿಂಗಳು ಆರಾಯಿತು. ತನ್ನ ಹೊಸ ಮೊಬೈಲ್ ನಂಬರ್ ಮನೆಗೆ ಕೊಟ್ಟಿದ್ದೇನಾ?, ನೆನಪಿಲ್ಲ. "ಅಮ್ಮನ ಕಾಲು ನೋವು ಹೇಗಿದೆ?" ಅರೆ, ಅಮ್ಮನಿಗೆ ಕಾಲು ನೋವು ಯಾವಗಿನಿಂದ?.. "ಈಗ ಕಡಿಮೆ ಇದೆ". "ಮೀನಾಕ್ಷಮ್ಮ ಹೋಗಿಬಿಟ್ರಂತೆ?" ಅಯ್ಯೋ ಈ ಮೀನಾಕ್ಷಮ್ಮ ಯಾರು?! ನನ್ನ ಪಕ್ಕದ ಮನೆ ನಾರಾಯಣ ಭಟ್ರ ಹೆಂಡತಿಯಾ?"ಹೌದಂತೆ, ವಯಸ್ಸಾಗಿತ್ತು ಪಾಪ".. ಇನ್ನು ಕೂತರೆ ಕೆಲಸ ಕೆಡುತ್ತದೆನಿಸಿ, "ಕೈ ಎಲ್ಲಿ ತೊಳೆಯಲಿ"ಎನ್ನುತ್ತಾ ಅಲ್ಲಿಂದೆದ್ದ.

ಈಶ್ವರ ದೇವಸ್ಥಾನ, ಜೊತೆಗೆ ಗಣಪತಿ, ಪಾರ್ವತಿ. ಸುಧಾಕರ ಅದಾಗಲೇ ದೇವರ ಮೇಲಿನ ನೈರ್ಮಾಲ್ಯ ತೆಗೆಯಲಾರಂಭಿಸಿದ್ದ, ಗಣಪತಿಯ ಮೂರ್ತಿಯ ಮೇಲಿಂದ. ಆ ವಿಗ್ರಹ ನೋಡಿದ್ದೇ, ತನ್ನ ಮೈ ಮೇಲೆ ಜನಿವಾರ ಇಲ್ಲವೆಂಬುದು ನೆನಪಾಯಿತು. ಶಾಲನ್ನು ಮತ್ತೊಮ್ಮೆ ಸರಿಪಡಿಸಿಕೊಂಡ. ಸುಧಾಕರನ ಹೊಟ್ಟೆಗೂ ಗಣಪತಿಯದ್ದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿರಲಿಲ್ಲ ಅವನಿಗೆ. "ನೀನಿಲ್ಲೇ ಕೂತು ಒಂದಾರು ದೀಪ ತಯಾರು ಮಾಡು, ನಾನೀಗ ಮನೆಗೆ ಹೋಗಿ ಹಾಲು ತಂದೆ" ಎಂದು ಅತ್ತ ಹೊರಟ ಸುಧಾಕರ. ಎಣ್ಣೆ, ಬತ್ತಿ, ದೀಪಗಳು.. ಅಪ್ಪನ ಜೊತೆಗೆ ಪೂಜೆಗೆ ಹೋದಾಗಲೂ ಇದನ್ನೇ ಮಾಡುತ್ತಿದ್ದೆನಲ್ಲ?, ಬಹಳ ಕಾಲವೇನಾಗಿಲ್ಲ ೬-೮ ವರ್ಷಗಳಷ್ಟೇ.. ಒಹ್, ಇವತ್ತು ಸಂಜೆ ಅವಳನ್ನ ಹೊಸ ಸಿನಿಮಾಕ್ಕೆ ಕರೆದೊಯ್ಯಬೇಕು.ಇಲ್ಲಿಂದ ಬೇಗ ಬಿಡುಗಡೇ ಸಿಕ್ಕಿದ್ದರೆ ಸಾಕಿತ್ತು.. ಚಿಕನ್ ತಿನ್ನದೇ ವಾರವಾಗಿದೆ. ಕೈ ಯಾಕೋ ತಣ್ಣಗಾಯ್ತು, ಎಣ್ಣೆ ಚೆಲ್ಲಿಕೊಂಡಿದ್ದ. ದೇವಸ್ಥಾನದಲ್ಲಿ ಚಿಕನ್ ನೆನಪಾದ್ದು ತಪ್ಪಾ? ಗೊತ್ತಾಗುತ್ತಿಲ್ಲ.

"ಇರ್ಲಿ ಬಿಡು, ನಾನು ಒರೆಸುತ್ತೇನೆ ನೀನು ದೀಪಾನ ಹಚ್ಚಿ ಎಲ್ಲ ದೇವರ ಮುಂದೆಯೂ ಇಡ್ತಾ ಬಾ" ಅಂತಂದ, ಸುಧಾಕರ .ಯಥಾವತ್ತಾಗಿ ಅದನ್ನ ಪಾಲಿಸಲು ಹೊರಟ. ಯಾಕೋ ಎಲ್ಲದೂ ಹೊಸತೆನಿಸುತ್ತಿತ್ತು, ದೇವರ ವಿಗ್ರಹ, ಆ ಎಣ್ಣೆಯ ಕಮಟು ವಾಸನೆ, ಕಾಲಿಗಂಟುವ ಕೊಳಕು, ಮೈಯಲ್ಲ ಹುಳ ಹರಿದಂತನಿಸಿತು. ತಾನು ಮೊದಲಿಂದ ಹೀಗಿರಲಿಲ್ಲವಲ್ಲಾ?!ಕಳೆದ ನಾಲ್ಕೆಂಟು ವರ್ಷದಲ್ಲಿ ನನ್ನ ಆಲೋಚನೆ ಯಾವತ್ತು ಬದಲಾಯಿತು?, ನನಗೇ ಗೊತ್ತಿಲ್ಲದೇ?.. ದೀಪಗಳನ್ನ ಉರಿಸುತ್ತಿದ್ದಂತೆ ಮನಸ್ಸೂ ಉರಿಯುತ್ತಿದೆಯೇನೋ ಅನ್ನಿಸಿತು ಅವನಿಗೆ."ಇನ್ನು ಭಕ್ತಾದಿಗಳು ಬರಲಾರಂಭಿಸುತ್ತಾರೆ, ಗಣಪತಿ ಪೂಜೆಗೆ ಇವತ್ತಿನ ದಿನ ಬಹಳ ವಿಶೇಷವಾದ್ದು, ನಿನಗೆ ಗೊತ್ತಲ್ಲ..".. ಏನೇನೋ ವಿವರಿಸುತ್ತಿದ್ದ ಸುಧಾಕರ.

ಅವನ ಮನಸ್ಸನ್ನ ಆ ಶಬ್ದಗಳು ಮುಟ್ಟುತ್ತಲೇ ಇರಲಿಲ್ಲ. ತಾನು ಬ್ರಾಹ್ಮಣತ್ವ ಬಿಟ್ಟು ಸಮಯ ಎಷ್ಟಾಯಿತು?, ನಾನು ಕೆಲಸದ ಜಂಜಡದಲ್ಲಿ ಬದಲಾದ್ದು ನನಗೇ ತಿಳಿದಿಲ್ಲವೆ? ಇರಲಾರದು,. ಕಂಬಳಿ ಹುಳ ಚಿಟ್ಟೆಯಾದಂತೆ, ತಾನೂ ಕೂಡಾ ಯಾವತ್ತೋ ಪೊರೆ ಕಳಚಿಕೊಂಡು ಅಲ್ಲಿಂದ ಹೊರ ಬಂದಿದ್ದೇನೆ,ರೂಪಾಂತರಗೊಂಡಿದ್ದೇನೆ. ತಿಳಿಯಲೇ ಇಲ್ಲ!...ಹೀಗೇ ಮನಸ್ಸು ಎತ್ತಲೋ ಸಾಗುತ್ತಿತ್ತು. ಅದರಿಂದ ಹೊರ ಬರುವ ಪ್ರಯತ್ನ ಮಾಡಬೇಕೆಂದು ನಿರ್ಧರಿಸಿ, ಅಯ್ಯೋ, ಅದರಲ್ಲಿ ತಲೆ ಕೆಡಿಸಿಕೊಳ್ಳೋದು ಏನಿದೆ, ಮನೆಗೆ ಹೋದರೆ ಸಂಭಾಳಿಸೋಕೆ ತಿಳಿದಿದೆ, ಮತ್ತೇಕೆ ಚಿಂತೆ ಮಾಡಬೇಕು ಬಂದ ಕೆಲಸ ಮುಗಿಸಿ ಹೊರಡು, ಸಾಕು ಅಂತ ಆದೇಶಿಸಿದ, ಮನಸ್ಸಿಗೆ.

ಗಂಧ ತೇಯ್ದು ಕೊಡಲು ಹೇಳಿದ್ದರಿಂದ ಒಂದು ಮೂಲೆಯಲ್ಲಿ ಕೂತು ಆ ಕೆಲಸ ಮಾಡ ತೊಡಗಿದ ಅವನು. ಮತ್ತೊಬ್ಬ ಭಟ್ಟರಾರೋ ಬಂದು ಗಣಹೋಮದ ತಯಾರಿ ನಡೆಸಿದ್ದರು. ಜನ ಒಬ್ಬೊಬ್ಬರಾಗೇ ಬಂದುಕೂಡ ತೊಡಗಿದರು. ಭಾನುವಾರ ಬೆಳಗ್ಗೆ ಇಷ್ಟು ಬೇಗ ಎದ್ದು ಬರುವವರನ್ನ ನೋಡಿ ಆಶ್ಚರ್ಯ !. ಎಲ್ಲರೂ, ದೇವರಿಗೆ, ಸುಧಾಕರನಿಗೆ, ಮತ್ತು ಇವನಿಗೂ ನಮಿಸಿ ಸಾಗತೊಡಗಿದರು. ಜೀವಮಾನ ಇಡೀ ಸಿಗದಷ್ಟು ವಂದನೆ ಅರ್ಧಗಂಟೆಗಳಲ್ಲೇ ಸಿಕ್ಕಿತೇನೋ ಅಂತ ಹೆದರಿಕೆ ಆಗತೊಡಗಿತು! ಜೊತೆಗೇ ತಾನು ಈವರೆಗೆ ತನ್ನ ಟೀಮ್ ಲೀಡು, ಪ್ರೊಜೆಕ್ಟ್ ಮ್ಯಾನೇಜರ್‌ಗಳಿಗೆ ಸಲ್ಲಿಸಿದ ಗೌರವ ಅಷ್ಟೂ ವಾಪಾಸು ಬಂತು ಅಂತಲೂ ಅನಿಸಿ ಖುಷಿ ಆಯಿತು!

ಗಣಹೋಮದ ಹೊಗೆ ಸ್ವಲ್ಪ ಹೊತ್ತಿಗೇ ದೇವಸ್ಥಾನ ತುಂಬಿತು. ಆವತ್ತೊಂದು ದಿನ ಪಬ್ ಒಂದರಲ್ಲಿ ಹುಕ್ಕಾ ಸೇದುವಾಗ ಎಲ್ಲೋ ಈ ತರಹದ ಹೊಗೆ ರೂಮೆಲ್ಲಾ ತುಂಬಿಕೊಂಡದ್ದು ನೆನಪಾಯ್ತು. ಹಿಂದೆಯೇ ಅನ್ನಿಸಿತು, ಅಲ್ಲಾ ,ಅಪ್ಪನ ಜೊತೆ ಪೌರೋಹಿತ್ಯಕ್ಕೆ ಹೋಗುತ್ತಿದ್ದಾಗ ಗಣಹೋಮಕ್ಕೆ ಸಹಕರಿದ್ದು ಯಾಕೆ ನೆನಪಾಗಲಿಲ್ಲ ಮೊದಲಿಗೆ? ಅವಲಕ್ಕಿ, ಅರಳು ಹಾಕಿ, ಬೆಲ್ಲ ಮಿಶ್ರಣ, ಮೇಲೆ ತೆಂಗಿನ ಕಾಯಿ ಹೆರೆದು, ಬಾಳೆಹಣ್ಣು ಕೊಚ್ಚಿ, ಕಬ್ಬಿನ ಹೋಳು ಮಾಡಿ, ಇನ್ನೂ ಏನೇನೂ ನೆನಪಿಗೆ ಬರುತ್ತಿಲ್ಲ.. ಅದನೆಲ್ಲ ಹಾಕಿ ಪ್ರಸಾದ ತಯಾರು ಮಾಡುತ್ತಿದ್ದು ನಾನೇ ಆಗಿತ್ತು! ಅಲ್ಲೇ ನಗು ಬಂದು ಬಿಟ್ಟಿತು ಅವನಿಗೆ. ಎಷ್ಟು ಬಾಲಿಶ ಅಲ್ಲವ ಇದೆಲ್ಲ! ಆವಾಗ ತನಗಿದೆಲ್ಲ ಗೊತ್ತಾಗುತ್ತಿರಲಿಲ್ಲ, ಅಪ್ಪ ಕೊಡುವ ಹತ್ತೈವತ್ತು ರೂಪಾಯಿಗಳು ಮುಖ್ಯವಾಗಿತ್ತು ತನಗೆ. ಮೊನ್ನೆ ಯಾವುದೋ ಹೋಟೇಲಿನಲ್ಲಿ ಐವತ್ತು ರೂಪಾಯಿ ಟಿಪ್ಸ್ ಇಟ್ಟಿದ್ದೆ, ಜೊತೆಗೆ ಅವಳಿದ್ದಳಲ್ಲ, ಅನಿವಾರ್ಯವಾಗಿತ್ತು. ಮತ್ತು ಆ ಐವತ್ತು ಗಳಿಸಲು ಅಂದು ಮೂರು ತಾಸು ಹೊಗೆಯಲ್ಲಿ ಕೂರಬೇಕಾಗುತ್ತಿತ್ತು!


ತೇಯ್ದ ಗಂಧವನ್ನ ಬಟ್ಟಲೊಂದಕ್ಕೆ ತೊಡೆದಿಟ್ಟು ಮುಖ ನೋಡಿದ, ಇನ್ನೇನು ಮಾಡಲಿ ಎಂಬಂತೆ. 'ನೀನು ಆ ಪಾರ್ವತಿಯ ಗುಡಿಯ ಹೊರಗಿರುವ ಬೇಂಚಿನ ಮೇಲೆ ಕೂತು ತೀರ್ಥ - ಪ್ರಸಾದ ಕೊಡೋಕೆ ಶುರು ಮಾಡು, ಜನ ಒಂದು ಕಡೆಯಿಂದ ಬರುತ್ತಾ ಹೋಗುತ್ತಾ ಇರುತ್ತಾರೆ. ಎಲ್ಲರೂ ಏನೂ ಕೊನೇತನಕ ಇರುವುದಿಲ್ಲ, ಬ್ಯುಸಿ ಇರುತ್ತಾರೆ ನೋಡು, ದೇವರ ದರ್ಶನ ಮಾಡಿಕೊಂಡು ಹೊರಡುತ್ತಾರೆ' ಅಂದ ಸುಧಾಕರ. ಆಯಿತು ಅಂತ ಚುಟುಕಾಗಿ ಉತ್ತರಿಸಿ, ಪಾರ್ವತಿ ಗುಡಿ ಕಡೆಗೆ ಹೊರಟ. ಹಾಗೇ ಎದ್ದು ಓಡಿ ಬಿಡೋಣ ಅಂತ ಅನ್ನಿಸತೊಡಗಿತ್ತು ಅವನಿಗೆ. ತನ್ನದಲ್ಲದ ಲೋಕದೊಳಗೆ, ಗೊತ್ತಿದ್ದೂ ಗೊತ್ತಿದ್ದೂ ನಡೆದು ಬಂದು ಈಗ ದಾರಿ ತಪ್ಪಿ ಹೋಗಿದ್ದೇನೆ ಅನ್ನುವ ಅನುಭವ.

ತೀರ್ಥದ ಬಟ್ಟಲು, ಪಕ್ಕದಲ್ಲಿ ಹೂ ತುಂಬಿದ ಹರಿವಾಣ ಇಟ್ಟುಕೊಂಡು, ಹಳೆಯ ಕಬ್ಬಿಣದ ಕುರ್ಚಿಯೊಂದರಲ್ಲಿ ಕೂತವನಿಗೆ ಆಫೀಸಿನ ಮೆತ್ತ ಮೆತ್ತಗಿನ ತಿರುಗುವ ಕುರ್ಚಿ ನೆನಪಾಯಿತು. ಪಕ್ಕದ ಸೀಟಲ್ಲೇ ಕೂರುವ 'ಅವಳು' ನೆನಪಾದಳು.ಇನ್ನು ಏನೇನು ನೆನಪಾಗುತ್ತಿತ್ತೋ ಏನೋ ಯಾರೋ ಬಂದು ಭಟ್ರೇ, ತೀರ್ತಾ ಅಂದರು. ಸರಸರನೆ ಉಧ್ಧರಣೆಯಿಂದ ತೀರ್ಥ ತೆಗೆದು ಕೊಟ್ಟು ಗಂಧ,ಪ್ರಸಾದ ಕೈ ಮೇಲೆ ಹಾಕಿದ, ಯಾವುದೋ ಜನ್ಮದ ನೆನಪಿನಂತೆ.

ಮುಂದಿದ್ದದ್ದು ಬಲಿಷ್ಟ ಅಂಗೈ. ಕೂಲಿ ಕೆಲಸದವನದಿರಬೇಕು. ಜಡ್ಡು ಗಟ್ಟಿತ್ತು. ತಾನು ೨ನೇ ಕ್ಲಾಸಿನಲ್ಲಿದಾಗ ಮನೆ ಎದುರಿನ ಕೆರೆಗೆ ಬಿದ್ದು ಉಸಿರು ಕಟ್ಟಿದಾಗ ತನ್ನನ್ನ ಮೇಲಿತ್ತಿದಂತ ಕೈ. ಮಾದನೆಂದಿರಬೇಕು ಅವನ ಹೆಸರು. ತನ್ನನ್ನ ಹೆಗಲ ಮೇಲೆ ಹೊತ್ತು ತೋಟ ಸುತ್ತಿಸುತ್ತಿದ್ದ ಅವನು. ಕೌಳಿ ಹಣ್ಣು, ಬಿಕ್ಕೆ, ಮುಳ್ಳು ಹಣ್ಣು ಗಳನ್ನ ಕಿತ್ತು ಕೊಡುತ್ತಿದ್ದ , ಇಂತದ್ದೇ ಜಡ್ಡುಗಟ್ಟಿದ ಕೈಲಿ.

ಇನ್ನೊಂದು ಕೈ ಮುಂದೆ ಬಂತು ಅಷ್ಟು ಹೊತ್ತಿಗೆ, ಬೆಳ್ಳನೆಯ ಮೃದು ಹಸ್ತ. ಅದಕ್ಕೂ ತೀರ್ಥವಿತ್ತ. ಹೈಸ್ಕೂಲು ಗೆಳತಿ ಸುಮಾಳ ಕೈಯಂತಿತ್ತು ಈ ಕೈ. ಪ್ರೇಮದ ಮೊದಲ ಸ್ಪರ್ಶದ ಅನುಭೂತಿ ನೀಡಿದ ಕೈ. ತುಂಬ ಬಳೆಗಳಿದ್ದವು, ಸುಮಾಳ ಹಾಗೆಯೇ. ಮಾತು ಹಾಗೆಯೇ ಇದ್ದೀತಾ, ಏನೋ, ಈಕೆ ಮಾತಾಡುತ್ತಿಲ್ಲ. ಸಂಜೆ ಶಾಲೆ ಬಿಟ್ಟ ಮೇಲೆ ಇಂತಹದ್ದೇ ಕೈಯನ್ನಲ್ಲವೇ, ಬಿಗಿಯಾಗಿ ಹಿಡಿದುಕೊಂಡು ಗುಡ್ಡ- ಬೆಟ್ಟ ತಿರುಗಿ , ಕಣ್ಣಲ್ಲೇ ಮಾತಾಡಿಕೊಂದು ಮನೆಗೆ ಹಿಂದಿರುಗುತ್ತಿದ್ದುದು ? ಯಾಕೋ ತಲೆಯೆತ್ತಿ ಒಮ್ಮೆ ಸುಮಳ ನೆನಪ ತಂದವಳ ಮುಖ ನೋಡಬೇಕೆನಿಸಿತು. ಸಾಧ್ಯವಾಗಲಿಲ್ಲ.

ಪುಟ್ಟ ಎಳೆಯ ಕೈಯೊಂದನ್ನ ಅದರಪ್ಪ ಮುಂದೆ ಹಿಡಿಸಿದ್ದ. ತಟಕೇ ತಟಕು ನೀರು ಹಿಡಿವ , ತುಂಬಿದ ಮಳೆಗಾಲದಲ್ಲಿ ಹುಟ್ಟಿದ ತನ್ನ ತಮ್ಮನದೇ ಕೈ. ಮೂರೇ ತಿಂಗಳಿಗೆ ಏನೋ ರೋಗ ಬಂದು ಸತ್ತು ಹೋಗಿ, ತನಗಿದ್ದ ಅಣ್ಣನ ಸ್ಥಾನ ಕಸಿದುಕೊಂಡ ಆ ಮಗುವಿನಂತದ್ದೇ. ಅಮ್ಮ, ಅಪ್ಪ ಎಲ್ಲರೂ ಮಂಕು ಬಡಿದು ಸುರಿಯುತ್ತಿದ್ದ ಮಳೆಯನ್ನೇ ನೋಡುತ್ತಾ, ಮಾತೇ ಇಲ್ಲದೇ ಕೂರುವಂತೆ ಮಾಡಿದ ಪಾಪುವಿನ ತರಹದ್ದೇ ಕೈ. ಈ ಮಗು ನೂರು ವರ್ಷ ಬಾಳಲಪ್ಪಾ ಅಂತ ಹಾರಯಿಸಿ, ಒದ್ದೆಯಾದ ಕಣ್ಣೊರಿಸಿಕೊಂಡ. ಆವನು ಬದುಕಿದ್ದಿದ್ದರೆ, ಏನಾಗುತ್ತಿದ್ದನೋ ಏನೋ. ಅಪ್ಪನಿಗೆ ಸಹಾಯ ಮಾಡುತ್ತಿದ್ದನೇನೋ, ಅಲ್ಲಾ, ತನ್ನಂತೆ ಸಾಫ್ಟ್‌ವೇರ್ ಬದುಕಿಗೆ ಬಂದು ಬಿಡುತ್ತಿದ್ದನೋ. .

ಈ ಬಾರಿ ಎದುರಿಗೆ ಬಂದ ಕೈ ತನ್ನ.. ಅಲ್ಲಲ್ಲ, ತನ್ನಂತಲ್ಲ ದಿನಾ ತನ್ನನ್ನ ದುಡಿಸಿಕೊಳ್ಳುವ ಪ್ರೊಜೆಕ್ಟ್ ಮ್ಯಾನೇಜರನದು.. ಒಮ್ಮೆ ಅವನೇ ಬಂದನೇನೋ ಎಂದು ಗಾಭರಿಯಾಗಿ ಮುಖ ನೋಡಿದ. ಅಲ್ಲ, ಈತ ಯಾರೋ ಮಧ್ಯಮ ವರ್ಗದ ಸಾದಾ ಮನುಷ್ಯ. ಕೊಟ್ಟ ಪ್ರಸಾದಾದಿಗಳನ್ನ ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಹೋದ. ನಿತ್ಯ ವ್ಯಂಗ್ಯವಾಡುವ ಅವನೆಲ್ಲಿ, ಈ ಸಾಧು ಪ್ರಾಣಿಯೆಲ್ಲಿ ? ಬರಿಯ ಕೈಗಳಿಗೆ ಮಾತ್ರ ಹೋಲಿಕೆಗಳಿವೆ, ಆದರೆ ಮನಸ್ಸಿಗೂ, ಬದುಕಿನ ದಾರಿಗೂ ಅಲ್ಲ ಅಂತನಿಸಿತವನಿಗೆ. ದಿನನಿತ್ಯ ಪರದೆ ನೋಡಿಕೊಂಡು ಬೇರೆ ಜಗತ್ತೇ ಇಲ್ಲವೆಂದು ಬದುಕುವ ತನಗಿಂತ, ತನ್ನ ಪ್ರೊಜೆಕ್ಟ್ ಮ್ಯಾನೇಜರನಿಗಿಂತ ಆತ ಸುಖಿಯೆ ? ಇರಬಹುದು, ಇರದಿರಬಹುದು. ಮುಖ ನೋಡಿದರೆ ಏನೂ ತಿಳಿಯಲಾರದು.

ಒಂದಾದ ಮೇಲೊಂದು ಕೈಗಳು ಅವನೆದುರು ಬರುತ್ತಲೇ ಇದ್ದವು. ಅರಸಿನ ತೊಡೆದುಕೊಂಡ ನವ ವಧುವಿನ ಅಂಗೈ, ಬಳೆಯಿಲ್ಲದ ಖಾಲಿ ಕೈ, ಜಜ್ಜಿಹೋದ ಹೆಬ್ಬೆರಳಿದ್ದ ಕೈ, ಐದು ಬೆರಳೂ ಉಂಗುರ ತೊಟ್ಟ ಶ್ರೀಮಂತ ಹಸ್ತ, ಮಾಸ್ತರ ಬಳಿಯಲ್ಲಿ ಹೊಡೆತ ತಿಂದು ಕೆಂಪಾದ ಕೈ, ಮದರಂಗಿ ಹಚ್ಚಿಕೊಂಡ ಪುಟ್ಟ ಕೈ, ಶಕ್ತಿಯಿಲ್ಲದೇ ನಡುಗುವ ವೃದ್ಧ ಕೈ, ಆಗಷ್ಟೇ ಅಡುಗೆ ಮುಗಿಸಿ ಬಂದಂತ ಗೃಹಿಣಿಯ ಕೈ.. ಎಲ್ಲ ಇವನ ಮುಂದೆ ಬಂದು ಸಾಗುತ್ತಿದ್ದವು.

ಪ್ರತಿ ಕೈಯನ್ನೂ ಕೂಡಾ ಅವನಿಗೆ ಹಿಂದೆಲ್ಲೋ ನೋಡಿದಂತನಿಸುತ್ತಿತ್ತು, ತನ್ನ ಮನೆಯ, ಊರಿನ, ಸುತ್ತಮುತ್ತಲ ಎಲ್ಲರ ಕೈಗಳೂ ಬೆಂಗಳೂರಿಗೆ ಬಂದು ಇಲ್ಲಿರುವವರ ದೇಹಕ್ಕೆ ಅಂಟಿಕೊಂಡು ಬಿಟ್ಟಿರಬೇಕು ಎಂಬ ಯೋಚನೆ ಬಂದು ಮೈ ಬೆವರತೊಡಗಿತು. ಯಾವುದಾದರೂ ಕೈ ಬಂದು ತನ್ನ ಶಾಲನ್ನ ಕಿತ್ತೆಸೆದು, ನನ್ನ ನಿಜವನ್ನ ಬಯಲು ಮಾಡಿದರೆ ?, ಜನಿವಾರವಿಲ್ಲದ ತನ್ನ ಅರೆ ಬೆತ್ತಲ ಮೈಯನ್ನ ಎಲ್ಲರಿಗೂ ತೊರಿಸಿಬಿಟ್ಟರೆ. ಏನು ಮಾಡಲಿ..ತನ್ನ ಕೆಟ್ಟು ಹೋದ ಮೆದುಳನ್ನ, ಅದರೊಳಗಿನ ಹೊಲಸು ವಿಚಾರಗಳನ್ನ ಎಳೆದು ಹೊರ ಹಾಕಿ.. ನನ್ನ ಕುಲಗೆಟ್ಟ ಕೃತ್ಯಗಳನ್ನ ಖಂಡಿಸಿ ಎರಡು ಕೆನ್ನೆಗಳಿಗೂ ಬಾರಿಸಿ, ಯಾಕೆ ಹೀಗಾದೆ ಎಂದು ಕಾರಣ ಕೇಳಿದರೆ ? ನನ್ನನ್ನ ಬಟ್ಟೆಯಿದ್ದೂ ಬೆತ್ತಲು ಮಾಡಿ ಎಲ್ಲರೆದುರೂ ನಿಲ್ಲಿಸಿ 'ಛೀ, ಥೂ' ಎಂದು ಉಗಿಸಿದರೆ ?..

ಆ ಕೈಗಳ ಗುಂಪಿಂದ ನನ್ನಪ್ಪನ ಕೈ ಬಂದು ' ನಿನ್ನನ್ನ ಇಷ್ಟು ಕಷ್ಟ ಪಟ್ಟು ಬೆಳಸಿದ್ದು ಜಾತಿಕೆಡುವುದಕ್ಕೇನೋ, ಯಾಕೋ ಹೀಗೆ ಮಾಡಿ ನನ್ನ ಮಾನ ಕಳೆದೇ' ಅಂತ ಅತ್ತು ಬಿಟ್ಟರೆ ಏನು ಮಾಡಲಿ ತಾನು ?.. ಕೂತಲ್ಲಿಂದ ಏಳಲೂ ಆಗುತ್ತಿಲ್ಲ ಅವನಿಗೆ. ಅಸಹಾಯಕನಂತಾಗಿದ್ದ. ಕೈಗಳು ಮಾತ್ರ ಬಂದವರಿಗೆಲ್ಲ ತೀರ್ಥ ಪ್ರಸಾದ ವಿತರಣೆ ಮಾಡುತ್ತಿದ್ದವು. ಅಷ್ಟರಲ್ಲಿ ಒಂದು ಮಧ್ಯಮ ವಯಸ್ಸಿನ ಹೆಂಗಸಿನ ಕೈ ಮುಂದೆ ಬಂತು. 'ಮಗೂ, ತೀರ್ಥ ಕೊಡಪ್ಪಾ' ಅಂದಿತು. ಆ ಅರೆ ಸುಕ್ಕುಗಟ್ಟಿದ ಕೈ, ಆ ದನಿಯ ಮಾರ್ದವತೆ ಕೇಳಿದ ಅವನಿಗೆ ಅದು ಥೇಟ್ ತನ್ನಮ್ಮನದೇ ದನಿ ಎಂದೆನಿಸಿಬಿಟ್ಟಿತು. ತನ್ನ ತಲೆಯನ್ನ ನಿತ್ಯ ನೇವರಿಸಿದ ಕೈ, ಅಪ್ಪನೇಟಿನಿಂದ ತಪ್ಪಿಸುತ್ತಿದ್ದ ಕೈ, ತುತ್ತು ನೀಡಿ ಸಲಹಿದ ಕರುಣಾಮಯಿಯ ಕೈಯೇ ಅವನ ಮುಂದಿತ್ತು. ಎಲ್ಲವನ್ನು ಮರೆತು ಆ ಕೈಗಳನ್ನೇ ಹಿಡಿದುಕೊಂಡು ಅದರಲ್ಲಿದ್ದ ಗೆರೆಗಳನ್ನೇ ನೋಡುತ್ತಾ ನಿಂತುಬಿಟ್ಟ.

ಯಾವುದೋ ಹಳೆಯ ಲೋಕದ ಮರೆತ ದಾರಿಯನ್ನ ಆಕೆಯ ಕೈಲಿದ್ದ ಆ ಗೆರೆಗಳು ತೋರಿಸುತ್ತಿದ್ದವು.

{ಈ ಕಥೆ ಬರೆದು ವರ್ಷವಾಗುತ್ತ ಬಂತು. ಈಗ ಈ ಕಥೆ ಬರೆದಿದ್ದರೆ, ಬೇರೆಯದೇ ತರ ಬರೆಯುತ್ತಿದ್ದೆನೇನೋ. ಏನೂ ತಿದ್ದುಪಡಿ ಮಾಡದೇ ಹಾಗೆಯೇ ಹಾಕಿದ್ದೇನೆ. }

ಬುಧವಾರ, ಜೂನ್ 20, 2007

ಹಯವದನ ಮತ್ತು ಬೆಂಗಳೂರು ಸಂಜೆ.

ನಿನ್ನೆ ಸಂಜೆ "ಹಯವದನ" ನಾಟಕ ನೋಡಿದೆ, ರಂಗ ಶಂಕರದಲ್ಲಿ. ಅಭಿನಯಿಸಿದೋರು "ಬೆನಕ" ತಂಡದವರು. ರಚನೆ ಗಿರೀಶ್ ಕಾರ್ನಾಡರದು. ಟಿ.ಎಸ್.ನಾಗಾಭರಣ, ಸುಂದರ್ ರಾಜ್, ಮೈಕೋ ಚಂದ್ರು, ವಿದ್ಯಾ ವೆಂಕಟ್ರಾಮ್, ಪೂರ್ಣ ಚಂದ್ರ ತೇಜಸ್ವಿ.. ಇವರೆಲ್ಲ ಇದ್ದ ಮೇಲೆ ನಾಟಕ ಸೊಗಸಾಗೇ ಆಗಬೇಕು , ಆಯಿತು ಕೂಡ. ಜಾನಪದ- ಐತಿಹಾಸಿಕ ಕಥೆಯನ್ನ ಇವರೆಲ್ಲ ಸೇರಿ ಪ್ರಸ್ತುತ ಪಡಿಸುವ ಶೈಲಿಯೇ ಅನನ್ಯ. ಸೂತ್ರಧಾರನೇ ಒಮ್ಮೊಮ್ಮೆ ಪಾತ್ರಧಾರಿಯಾಗಿ ನಾಟಕದೊಳಗೆ ನಡೆದು ಬಿಡುತ್ತಾನೆ. ಮತ್ತೆ ಹೊರ ಬಂದು ವರ್ತಮಾನದಲ್ಲಿ ಮಾತಾಡುತ್ತಾನೆ. ಹಾಡುಗಳು ಕಥಾಹಂರದೊಳಗೆ ಬೆರೆತು ಬಿಟ್ಟಿವೆ. ನಿರ್ದೇಶನ - ಬಿ.ವಿ.ಕಾರಂತರದು.

ಬೆನಕ ತಂಡದ ಸದ್ಯ ಅಭಿನಯಿಸುತ್ತಿರುವ ಎಲ್ಲ ನಾಟಕಗಳನ್ನೂ ನೋಡಿದೆ. ಸತ್ತವರ ನೆರಳು, ಜೋಕುಮಾರ ಸ್ವಾಮಿ, ಗೋಕುಲ ನಿರ್ಗಮನ, ಹಯವದನ- ಎಲ್ಲವು ಒಂದಕ್ಕಿಂತ ಒಂದು ಚೆನ್ನಾಗಿವೆ. ಕಿರುತೆರೆಯಲ್ಲಿ, ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವವರು ಇಷ್ಟ ಪಟ್ಟು ಇಂತಹ ನಾಟಕಗಳಲ್ಲಿ ಅಭಿನಯಿಸುದನ್ನ ನೋಡಿದಾಗ ಸಂತಸವೆನಿಸುತ್ತದೆ, ಇವರು ಬೇರು ಮರೆತಿಲ್ಲವಲ್ಲ ಅಂತ. ದೊಡ್ದ ಪಾತ್ರ- ಸಣ್ಣದು ಯಾವುದಾದರೂ ಅಭಿನಯಿಸುತ್ತಾರೆ , ಸ್ಟಾರ್ ಗಿರಿಯ ಹಂಗಿಲ್ಲದೆ.

ಈ ವರುಷ ಒಳ್ಳೆಯ ನಾಟಕಗಳು ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ ಬೆಂಗಳೂರಲ್ಲಿ. ಹೋಗುವ ಮನಸ್ಸಿದವರಿಗೆ, ದಿನವೂ ಒಂದಲ್ಲ ಒಂದು ಕಾರ್ಯಕ್ರಮ ಇದ್ದೇ ಇರುತ್ತದೆ. ರವೀಂದ್ರ ಕಲಾಕ್ಷೇತ್ರ, ರಂಗ ಶಂಕರಗಳಲ್ಲಿ ನಿತ್ಯ ಜಾತ್ರೆ. ವಾರದಲ್ಲಿ ಒಂದೆರಡು ಕಡೆಗಾದರೂ ಪ್ರಯತ್ನ ಪಟ್ಟು ಹೋಗುತ್ತೇನೆ ನಾನು. ಹೆಚ್ಚಿನ ಕಾರ್ಯಕ್ರಮಗಳು ಸಂಜೆ ೬ರ ಮೇಲೆ ನಡೆಯುವುದರಿಂದ ಯಥಾಸಾಧ್ಯ ಪ್ರಯತ್ನ ಮಾಡಿ ಹೋಗಬಹುದು.

ಈ ವಾರವೂ ಅಷ್ಟೇ, ಒಳ್ಳೊಳ್ಳೇ ನಾಟ್ಕ- ಇತ್ಯಾದಿಗಳಿವೆ . ಇವತ್ತು ತೇಜಸ್ವಿ ಸಪ್ತಾಹದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಜುಗಾರಿ ಕ್ರಾಸ್ ನಾಟ್ಕ, ನಾಳೆ ೨೧ಕ್ಕೆ ಕೃಷ್ಣೇಗೌಡನ ಆನೆ, ನಾಡಿದ್ದು ತಬರನ ಕಥೆ, ಶನಿವಾರ ಯಮಳ ಪ್ರಶ್ನೆ. ಎಲ್ಲ ರವೀಂದ್ರ ಕಲಾಕ್ಷೇತ್ರದಲ್ಲಿ. ಸಮಯ - ೬.೧೫. ಇತ್ತಕಡೆ ರಂಗಶಂಕರದಲ್ಲಿ, ಇವತ್ತು ಜೋಕುಮಾರಸ್ವಾಮಿ, ನಾಳೆ, ನಾಡಿದ್ದು ಕೈಲಾಸಂ ನಾಟ್ಕ- ಬಂಡ್ವಾಳ್ವಿಲ್ದ ಬಡಾಯಿ. ಶನಿವಾರ ಭಾನುವಾರ - "ನೀನಾನಾದ್ರೆ ನಾನೀನೇನಾ" ಅನ್ನುವ - ಎಸ್.ಸುರೇಂದ್ರನಾಥ್ ನಿರ್ದೇಶನದ -ಸಂಕೇತ್ ಕಲಾವಿದರ- ಸಿಹಿಕಹಿ ಚಂದ್ರು ಮತ್ತು ಶ್ರೀನಿವಾಸ್ ಪ್ರಭು ಅಭಿನಯದ ನಾಟಕ, ೭.೩೦ಕ್ಕೆ.ಶನಿವಾರ ಸಂಜೆ ಹೆಚ್.ಎನ್.ಕಲಾಕ್ಷೇತ್ರದಲ್ಲಿ ಪ್ರವೀಣ್ ಗೋಡ್ಕಿಂಡಿಯ 'ಕೃಷ್ಣಾ' ತಂಡದಿಂದ ಕೊಳಲು ವಾದನ ಕಾರ್ಯಕ್ರಮವೂ ಇದೆ.

ಬನ್ನಿ. ಭೇಟಿಯಾಗೋಣ.

ಮಂಗಳವಾರ, ಜೂನ್ 19, 2007

ಭಾವ - ೧೧

ಇಲ್ಲೊಬ್ಬ ಗಂಡ ತನ್ನ ಹೆಂಡತಿಯನ್ನ ತೊಡೆ ಮೇಲೆ ಮಲಗಿಸಿಕೊಂಡು ತಟ್ಟುತ್ತಿದ್ದರೆ , ಪಕ್ಕದಲ್ಲಿರುವ ಮಗು ಅವರನ್ನೆ ದಿಟ್ಟಿಸುತ್ತಿದೆ ಅಚ್ಚರಿಯಲ್ಲಿ. ಬದುಕು ಸುಂದರವಾಗಿದೆ ಅಲ್ಲವೆ?

ಸೋಮವಾರ, ಜೂನ್ 18, 2007

ಹಕ್ಕಿ ಕಥೆ.

ನಿನ್ನೆ ರಾತ್ರೆ ಹನ್ನೆರಡು ಗಂಟೆ ಸುಮಾರಿಗೆ ಸುಶ್ರುತ ಮೆಸೇಜು ಮಾಡಿದ. ಎಕ್ಸಾಮಿಗೆ ಓದುತ್ತಿದ್ದವನು ಹಾಗೇ ಎಲ್ಲೋ ಎದ್ದು ಹೊರಗಡೆ ಹೋಗಿರಬೇಕು. ಈ ಪರೀಕ್ಷೆ ಅಂದರೇನೇ ಹಾಗೆ, ಆ ಸಮಯದಲ್ಲಿ ನಮಗೆ, ಓದುವುದೊಂದು ಬಿಟ್ಟು ಮತ್ತೆಲ್ಲ ವಿಚಾರಗಳೂ ತಲೆಗೆ ಬರುತ್ತವೆ. ಇಲ್ಲದ ಬೇರೆ ಜಂಜಡಗಳೆಲ್ಲ ಅದೇ ಸಮಯಕ್ಕೇ ತಲೆಗೆ ಸುತ್ತಿಕೊಳ್ಳುತ್ತವೆ. ಇವನ ವಿಷಯದಲ್ಲೂ ಹಾಗೇ ಆಗಿದೆ.

" ನಮ್ಮ ಮನೆ ಎದುರು ಒಂದು ದೊಡ್ಡ ಮರ. ಅದರ ನಾಕನೇ ರೆಂಬೆಯ ಮೂರನೇ ಕವಲಿನಲ್ಲಿ ಒಂದು ಹಕ್ಕಿ ಸಂಸಾರ. ಗಂಡ, ಹೆಂಡತಿ, ಮೂರು ಮಕ್ಕಳು. ಹೆಣ್ಣು ಹಕ್ಕಿ ಮತ್ತೆ ಗರ್ಭಿಣಿ! ಅದು ಎಲ್ಲಿಗೂ ಹೋಗದೇ ಗೂಡಿನಲ್ಲೇ ಕೂತಿರುತ್ತದೆ: ಮಳೆ ನೋಡುತ್ತಾ, ಮರಿಗಳೊಡನೆ. ಇವತ್ತು ಬೆಳಗ್ಗೆ ಆಹಾರ ತರಲೆಂದು ಹೋದ ಗಂಡ, ಇನ್ನೂ ವಾಪಾಸು ಬಂದಿಲ್ಲವಂತೆ.. ಗೂಡಿನಲ್ಲಿ ಚಿಂತೆ, ಬಿಕ್ಕಳಿಕೆ,ನಿಟ್ಟುಸಿರು.. ನಾನು ಅವಕ್ಕೆ, "ನಾಳೆ ಬೆಳ್ಗೆ ಹುಡುಕೋಣ" ಅಂತ ಸಮಾಧಾನ ಮಾಡಿದ್ದೇನೆ. ನಿನ್ನ ಜೊತೆ ಅವ್ರಿಗು ಗುಡ್ ನೈಟ್ ಹೇಳಿದ್ದೇನೆ. ಸರಿ ತಾನೆ"?

ಇವನಿಗ್ಯಾಕಪಾ ಬೇಕಿತ್ತು ಇಲ್ಲದ ಉಸಾಬರಿ? ಅಲ್ದೇ ಪಾಪ ಆ ಹಕ್ಕಿಗೆ ಗುಡ್ ನೈಟ್ ಬೇರೆ ಹೇಳಿದ್ದಾನೆ. ಅದ್ಕೆ ಪಾಪ ಅದು ಗುಡ್ ನೈಟ್ ಹೇಗಾಗ ಬೇಕು? ಹಮ್, ಹಾರೈಸೋದ್ರಲ್ಲಿ ತಪ್ಪಿಲ್ಲ ಅಂದುಕೊಳ್ಳೋಣ. ಅಲ್ಲದೇ ಆ ಹಕ್ಕಿ ಸಂಸಾರಕ್ಕೆ ವಿಷ್ ಮಾಡೋ ಭರದಲ್ಲಿ ನಮ್ಮನ್ನೂ ತನ್ನ ಜೊತೆ ಎಳೆದುಕೊಂದು ಬಿಟ್ಟಿದ್ದಾನೆ! ನಾವು ಕೂಡಾ ತಿಳಿದೋ , ತಿಳಿಯದೆಯೋ ಆ ಹಕ್ಕಿ ಸಂಸಾರದ ದುಃಖದಲ್ಲಿ ಭಾಗಿಗಳಾಗಿ ಬಿಟ್ಟಿದ್ದೇವೆ, ಒಂದು "ಗುಡ್ ನೈಟ್" ಕಾಲದಲ್ಲಿ.

ನಂಗೋ ಬೆಳ್ಗೆ ತಂಕ ಪಾಪ, ಆ ಹಕ್ಕಿದೇ ಆಲೋಚ್ನೆ! ಎಲ್ ಹೋಯ್ತೋ, ಎನ್ ಆಯ್ತೋ. ಈ ಬೆಂಗಳೂರೆಂಬೋ ಮಾಯಾ ನಗರಿ ಏನ್ ಸಾಮಾನ್ಯಾನಾ? ಎಲ್ಲ ಒಂದೇ ತರ ಕಾಣೋ ಪೆಟ್ಗೆ ಪೆಟ್ಗೆ ಮನೆಗಳು. ದಾರಿ ತಪ್ಸ್ ಕೊಂಡು ಎಲ್ಲಿ ಅಲೀತಿದ್ಯೋ, ಹೆಂಡ್ತಿ ನೋಡದ್ರೆ ಗರ್ಭಿಣಿ ಅಂದಿದಾನೆ ಸುಶ್. ಮಳೆ ಬೇರೆ ಜೊತೆಗೆ. ಅಲ್ಲಾ ಇವನ್ಯಾಕಪಾ ಅದ್ರ್ ಹತ್ರ ಕೇಳೋಕೆ ಹೋಗ್ಬೇಕಿತ್ತು? ಸುಮ್ನೆ ಇದಿದ್ರೆ ಏನಾಗಿರೋದು? ಅಲ್ಲಾ, ನಾನಾಗಿದ್ರೂ ಕೇಳ್ತಿದ್ದೆ ಅನ್ನಿ, ಅದು ಬೇರೆ ವಿಚಾರ.

ಅದೇ ಹಕ್ಕಿನೇ ತಲೆ ಒಳಗೆ ಇಟ್ಕೊಂಡು ಸ್ನಾನ, ತಿಂಡಿ ಮುಗ್ಸಿ ಪ್ಯಾಂಟು- ಶರ್ಟು ಹಾಕ್ಕಂಡು ಬಸ್ಯಾಂಡಿಗೆ ಹೋಗ್ ನಿಂತೆ. ಅಲ್ಲೇ ಪಕ್ಕದಲ್ ಒಂದು ಮರ ಇದೆ. ಕೀಚ್ಲು ಧ್ವನಿ ನಿ ಯಾವ್ದೋ ಹಕ್ಕಿ ಸಣ್ಣಕೆ ಗಲಾಟೆ ಮಾಡ್ತಿತ್ತು! ಮೈ ಪುಕ್ಕ ಎಲ್ಲಾ ಕೆದ್ರೋಗಿದೆ ಪಾಪ.
"ಏನೇ ಹಕ್ಕಿ ಏನಾಯ್ತು" ಅಂದೆ.

ಏನೂ ಇಲ್ಲಾ ಮನೆ ದಾರಿ ತಪ್ಪಿದೆ ನಂಗೆ, ನಿನ್ನೆ ಆಹಾರ ಹುಡಕ್ಕೊಂಡ್ ಹೊರ್ಟಿದ್ನಾ - ಯಾವ್ದೋ ತಲೇಲಿ ಎಲ್ಲೆಲ್ಲೋ ಹಾರಿದೀನಿ. ಆಹಾರ ಸಿಗ್ತು, ಕಚ್ಕೊಂಡು ಹಾರೋಕೆ ನೋಡಿದ್ರೆ ಏನ್ ಮಾಡೋದು, ಯಾವ್ದೋ ಗೊತ್ತಿಲ್ದೇ ಇರೋ ಜಾಗ. ಹೆಂಗೆ ವಾಪಾಸು ಹೋಗೋದು ಅಂತ್ಲೂ ಗೊತಾಗ್ಲಿಲ್ಲ. . ಅಲ್ಲೇ ಒಂದು ಅರ್ಧ ಕಟ್ಟಿರೋ ಬಿಲ್ಡಿಂಗ್ ಇತ್ತು, ಸುಮ್ನೆ ವೆಂಟಿಲೇಟರ್ ಸಂದೀಲಿ ಕೂತು ರಾತ್ರಿ ಕಳ್ದೆ.. ಈಗ ಮನೆಗೆ ಹೇಗ್ ಹೋಗ್ಲಿ.. ಹೆಂಡ್ತಿ ಬೇರೆ ಗರ್ಭಿಣಿ.. ಮೂರು ಪುಟ್ ಪುಟ್ ಮಕ್ಳಿದಾರೆ..

ಓಹ್- ಇದು ಸುಶ್ ಮನೆ ಎದ್ರುಗಡೇ ಹಕ್ಕಿ! ನಂಗೆ ಭಾರೀ ಖುಶಿ ಆಗೋಯ್ತು!

ನಾನು ಅದರ ಮಾತ್ನ ಅರ್ಧಕ್ಕೆ ನಿಲ್ಸಿದವನೇ,

"ನಂಗೆ ನಿಮ್ಮನೆ ದಾರಿ ಗೊತ್ತು... ನಿಮ್ ಮನೆ ಎದ್ರಿಗೆ ಟಾರಸಿ ಮನೆ ಇಲ್ವಾ, ಅಲ್ಲೇ ಮೇಲಿರೋ ಹುಡ್ಗ ನಂಗೆ ಫ್ರೆಂಡು ಹಕ್ಕೀ, ಅವನು ನಿನ್ನೆ ರಾತ್ರೇನೇ ನೀನು ಮನೇಲ್ ಇಲ್ದಿರೋ ಕಥೆ ನಂಗೆ ಹೇಳಿದಾನೆ, ಏನೂ ಚಿಂತೆ ಮಾಡ್ಬೇಡ" ಅಂತಂದು ಅದರ ಮನೆಗೆ ಹೋಗೋ ದಾರಿ ಹೇಳಿ, ಶುಭೋದಯಾ ಅಂತ ಹಾರೈಸಿ ಕಳ್ಸಿಕೊಟ್ಟೆ. ಅಷ್ಟು ಮಾಡಿದವನೇ ಸುಶ್ ಗೆ ಮೆಸೇಜು ಬಿಟ್ಟೆ.

" ಇಲ್ಲೊಂದು ಪುಟ್ಟ ಬೆದರಿದಂತೆ ಕಾಣುವ ಹಕ್ಕಿ, ನನ್ನ ಪಕ್ಕ ಇರೋ ಮರದ ಗೆಲ್ಲ ಮೇಲೆ. ಪುಕ್ಕ ಕೆದರಿದೆ. ಕಣ್ಣಲ್ಲಿ ಚಿಂತೆ, ದೇಹ ಭಾವ ಗಾಭರಿಯದು. ಅದು ದಾರಿ ತಪ್ಪಿಸಿಕೊಂಡಿದೆಯಂತೆ. ಹೆಂಡತಿ ಗರ್ಭಿಣಿ ಬೇರೆ ಅಂತು. ನಾನು ನಿನ್ನ ಮನೆ ದಾರಿ ಹೇಳಿ, ಶುಭೋದಯ ಅಂತ ಹಾರೈಸಿ, ಅರಾಮಾಗಿ ಹೋಗು ಅವ್ರೆಲ್ಲ ಚೆನ್ನಾಗಿದಾರೆ ಅಂದೆ. ಸರಿ ತಾನೆ?"

"ಥ್ಯಾಂಕ್ಸು ಮಾರಾಯಾ, ನಾನಿನ್ನು ನಿಶ್ಚಿಂತೆಯಿಂದ ಎಕ್ಸಾಮು ಬರೀ ಬಹುದು " - ರಿಪ್ಲೈ ಬಂತು ಆ ಕಡೆಯಿಂದ.

ಇಷ್ಟು ಹೊತ್ತಿಗೆ ಗಂಡು ಹಕ್ಕಿ ಗೂಡು ಮುಟ್ಟಿರಬಹುದು. ತನ್ನ ಪುಟ್ಟ ರೆಕ್ಕೆಯಡಿ ಮತ್ತೂ ಪುಟ್ಟ ಮರಿಗಳನ್ನ ಕೂರಿಸಿಕೊಂಡು ಹೆಂಡತಿ ಹಕ್ಕಿಯ ಪಕ್ಕ ಬೆಚ್ಚಗೆ ಕೂತಿರಬಹುದು.

ಓವರ್ ಟು ಸುಶ್!

ಬುಧವಾರ, ಜೂನ್ 13, 2007

ಇವತ್ತು ಬೆಳಗ್ಗೆ..

ಇಂದು ಬೆಳಗ್ಗೆ ಎಂದಿನಂತೆ BTM ಲೇ ಔಟಲ್ಲಿ ೨೦೧ ಬಸ್ಸಿಳಿದೆ, ೯ ಗಂಟೆಯ ಸಮಯ. ಟ್ರಾಫಿಕ್ ಜಾಮ್ ಯಾಕೋ ಇನ್ನು ಆಗಿರಲಿಲ್ಲ, ಆಶ್ಚರ್ಯ ಅನ್ನಿಸಿತು. ದಿನನಿತ್ಯ ಇಲ್ಲಿ ವಾಹನಗಳ ಸರತಿ ಸಾಲು ಪೇ ಪೇ ಅಂತ ಹಾರ್ನು ಬಾರಿಸಿಕೊಂಡು ನಿಂತಿರುವುದು ತೀರಾ ಸಾಮಾನ್ಯ ದೃಶ್ಯ. ನಾನು ಬಸ್ಸಿಳಿದು ರೋಡು ದಾಟಲು ಹೊರಡುವುದಕ್ಕೂ, ಸಿಗ್ನಲ್ಲು ಬೀಳುವುದಕ್ಕೂ ಸರಿಯಾಯಿತು. ೨೦೧ ಬಸ್ಸು , ಅದರ ಹಿಂದೆ ಒಂದು ಆಟೋ, ಜೀಪು.. ಎಲ್ಲ ಬ್ರೇಕು ಹಾಕಿ ನಿಂತವು ಅಲ್ಲೇ.

೪ನೇ ವೆಹಿಕಲ್ಲು ಒಂದು ಅಂಬುಲೆನ್ಸ್. ಹಾರನ್ ಮೇಲೆ ಹಾರನ್ ಬಾರಿಸುತ್ತಿದ್ದ ಆತ. ನನ್ನಷ್ಟೇ ಪ್ರಾಯದ ಹುಡುಗ ಡ್ರೈವರ್ರು. "ಅಣ್ಣಾ, ಪ್ಲೀಸ್ ಮುಂದ್ ಹೋಗಣ್ಣ, ಅರ್ಜೆಂಟ್ ಕೇಸ್ ಬೇಗ್ ಹೋಗ್ಬೇಕೂ" ಅಂತ ಮುಂದಿನ ಜೀಪ್ನವನ್ನ ಅಂಗಲಾಚುತ್ತಿದ್ದ. ಅವನೋ, "ಸಿಗ್ನಲ್ ಇದ್ಯಪ್ಪಾ, ನಾನೇನ್ ಮಾಡ್ಲಿ ಹೋಗಿ ಆ ಟ್ರಾಫಿಕ್ ಪೋಲೀಸ್ನ ಕೇಳು" ಅಂದು ಸುಮ್ಮಗಾದ. ಇಲ್ಲಿನ ಪರಿಸ್ಥಿತಿ ಹೇಗೆಂದರೆ, ಮುಂದಿನ ಯಾವ ಘಳಿಗೆಯಲ್ಲಿ ಬೇಕಾದರೂ, ಯಾವನೋ ಒಬ್ಬ ತಲೆ ಕೆಟ್ಟವನು ಅಡ್ಡಂಬಡ್ದ ನುಗ್ಗಿ, ಟ್ರಾಫಿಕ್ಕು ಚಿತ್ರಾನ್ನ ಆಗಿಬಿಡಬಹುದು. ಹಾಗೆ ಆಗಿದ್ದನ್ನ ನಾನೇ ಎಷ್ಟೋ ಸಲ ನೋಡಿದ್ದೇನೆ.

ಒಂದು ಪ್ರಯತ್ನ ಮಾಡೋಣ ಅಂತ ಸೀದಾ ಟ್ರಾಫಿಕ್ ಪೋಲಿಸ್ ಹತ್ರ ಹೋದವನೇ
"ಸಾರ್ ನೋಡಿ ಅಲ್ಲಿ,ಒಂದು ಅಂಬುಲೆನ್ಸ್ ಮಧ್ಯ ಇದೆ..ಸಿಲ್ಕ್ ಬೋರ್ಡ್ ಕಡೆ ಹೋಗೋದು, ಆ ಕಡೆ ಸಿಗ್ನಲ್ ಕ್ಲಿಯರ್ ಮಾಡಿ .. ಏನೋ ಅರ್ಜೆಂಟಿರಬೇಕು" ಅಂದೆ, ಒಂದೇ ಉಸಿರಿಗೆ.

ಅವನು ತಣ್ಣಗೆ,
"ದಿನಕ್ಕೆ ಒಂದು ೧೦೦-೨೦೦ ಅಂಬುಲೆನ್ಸ್ ಓಡಾಡ್ತಾವೆ ಇಲ್ಲಿ, ಎಲ್ಲ ಅಂಬುಲೆನ್ಸ್ ಗೂ ನಾನು ಹೋಗೋಕೆ ಬಿಡ್ತಾ ಇದ್ರೆ, ಬೇರೆಯವ್ರು ಬಂದು ವದೀತಾರೆ ಅಷ್ಟೇ, ಸುಮ್ನೇ ಹೋಗಯ್ಯೋ "ಅಂದ.

"ಇಲ್ಲಣ್ಣಾ, ನೋಡಿ ಅಣ್ಣಾ, ಪ್ಲೀಸ್".. ಅಂದೆ ನಾನು, ಆಸೆ ಬಿಡದೆ. "ನೋಡಿ ಸರ್ ಸ್ವಲ್ಪ.. ಆಗತ್ತೆ ನಿಮ್ ಹತ್ರ..."
ಅಲ್ಲಿ ಹಿಂದುಗಡೆ ಅವ್ನು ಒಂದೇ ಸಮನೆ ಮಾಡುತ್ತಿರುವ ಹಾರನ್ ಕೇಳಿಸುತ್ತಿತ್ತು.

"ಇದೊಳ್ಳೇ ಗೋಳಾಯ್ತಲ್ಲಪ್ಪಾ..ತಡಿ" ಅಂದು, ದೊಡ್ಡದಾಗಿ ವಿಸಲ್ ಊದಿ, ಆಗತಾನೇ ಹೋಗಲು ಬಿಟ್ಟಿದ್ದವರನ್ನ ತಡೆದು ನಿಲ್ಲಿಸಿ, ೨೦೧ ಬಸ್ಸಿನ ಡ್ರೈವರನಿಗೆ ಸನ್ನೆ ಮಾಡಿದ - ಮುಂದೆ ಹೋಗೋ ಅಂತ. ಅಂಬುಲೆನ್ಸ್ ಡ್ರೈವರ್ ನಂಗೊಮ್ಮೆ ಕೈ ಮಾಡಿ (ಪ್ರಾಯಶಃ ಅವನು ನನ್ನನ್ನ ನೋಡುತ್ತಿದ್ದ ಅನಿಸುತ್ತದೆ) ವೇಗವಾಗಿ ಸಾಗಿದ.

ನಾನು ಆಫೀಸಿನತ್ತ ಹೆಜ್ಜೆ ಹಾಕಿದೆ. ಇಂತಹ ಸಣ್ಣ ಸಣ್ಣ ಘಟನೆಗಳು ಮನಸ್ಸಿಗೆ ಖುಷಿ ನೀಡುತ್ತವೆ.

ಶುಕ್ರವಾರ, ಜೂನ್ 08, 2007

ಹಲಸು, ಹೊಲಸು ಮತ್ತು ಹಸಿವು.

ಸೂಚನೆ: ( ಸಣ್ಣ ಪುಟ್ಟ ಅಸಹ್ಯಗಳಿಗೂ ರೇಜಿಗೆ ಪಟ್ಟುಕೊಳ್ಳುವವರು ಈ ಬರಹವನ್ನು ಓದಬಾರದಾಗಿ ವಿನಂತಿ)

ಸಿದ್ದಾಪುರದಿಂದ ಶಿರಸಿಗೆ ಹೊರಟಿದ್ದೆ. ಮಧ್ಯಾಹ್ನ ೧೨.೩೦ ಗಂಟೆ. ಉರಿ ಉರಿ ಬಿಸ್ಲು. ಎದುರಿಗೆ "ಸಿರ್ಸಿ ಸಿರ್ಸಿ ಸಿರ್ಸಿ" ಅಂತ ಕಂಡಕ್ಟರೊಬ್ಬ ಕೂಗುತ್ತಿದ್ದ. ನೋಡಿದರೆ ರಾಜಹಿಂಸೆ! ಗೊತಾಗಿಲ್ವಾ? ಅದೇ ರಾಜ ಹಂಸ ಕಣ್ರಿ! ಕೇಯಸ್ಸಾರ್ಟೀಸಿಯವರು ಹಳೆಯ ರಾಜಹಂಸವೊಂದನ್ನ ತೆಗೆದು ಈ ರೂಟಿಗೆ ಬಿಟ್ಟಿದ್ದರು ಅನಿಸುತ್ತದೆ. ವಿಲಾಸೀ ಸೀಟುಗಳೆಡೆಯಲ್ಲಿ, ಅಕ್ಕ ಪಕ್ಕ ಅಲ್ಲಿ ಇಲ್ಲಿ ಎಲ್ಲ ಜನ ತುಂಬಿಕೊಂಡಿದ್ದರು. ಕೂತರೆ ಬರಿಯ ೪೦ ಜನ ಇರಬಹುದಾದ ಆ ಬಸ್ಸಿನೊಳಗೆ ಮಿನಿಮಮ್ ೯೦ ಜನ ಇದ್ದರು. ಇದೆಲ್ಲ ಮಾಮೂಲಿ ಅಂತೀರಾ?, ಅದೂ ಸರೀನೇ ಬಿಡಿ. ನಾನು ಆ ಬಸ್ಸಿಗೆ ಕಡೆಯಯವನಾಗಿ ಹತ್ತಿದೆ, ಮತ್ತದು ನಂಗೆ ಲಾಭವೇ ಆಯಿತು. ಡ್ರೈವರು ಕ್ಯಾಬಿನ್ ಪಕ್ಕ, ಒಂದು ಕಾಲು ಮತ್ತು ಒಂದು ಕೈ ಅರಾಮಾಗೂ ಇನ್ನೊಂದು ಕಾಲು ಮತ್ತು ಕೈಯನ್ನ ಸ್ವಲ್ಪ ಕಷ್ಟ ಪಟ್ಟಾದರೂ ಇಡಬಹುದಾದಂತಹ ಜಾಗವೇ ಸಿಕ್ಕಿತು. ಅದಕ್ಕೂ ಮುಖ್ಯವಾಗಿ ಗಾಳಿ ಬರುತ್ತಿತ್ತು ನಾನು ನಿಂತ ಜಾಗದಲ್ಲಿ.

ಮದುವೆಯ ಸೀಸನ್ನು ಬೇರೆ, ಬಸ್ಸಿನ ತುಂಬ ಬಿಳಿ ಪಂಚೆ, ರೇಷ್ಮೇ ಸೀರೆಗಳೇ ತುಂಬಿದ್ದವು. ಅವರೆಲ್ಲ ಯಾವುಯಾವುದೋ ಮದುವೆಗಳಿಗೆ ಹೊರಟಿದ್ದರೂ ನನ್ನ ತರಹ ಊಟದ ಸಮಯಕ್ಕೆ ಸರಿಯಾಗಿ ಹೊರಟಿದ್ದು ನೋಡಿ ಸಮಾಧಾನವಾಯಿತು. ಬಿಸಿಲಿನ ಸುಟಿಗೆ, ಎಲ್ಲರೂ ಅರ್ಧ ಮಿಂದವರಂತೆ ಕಾಣುತ್ತಿದ್ದರು. ಕೆಂಪು, ಹಳದಿ ರವಿಕೆಗಳೆಲ್ಲ ಅರ್ಧಂಬರ್ಧ ಕಪ್ಪಾಗಿ ಕಾಣುತ್ತಿತ್ತು. ಹಣೆಯ ಮೇಲಿನ ಕುಂಕುಮ ಕರಗಿ, ಅದನ್ನ ಕರ್ಚೀಫಲ್ಲಿ ಸರಿಯಾಗಿ ವರೆಸಿಕೊಳ್ಳಲೂ ಬರದೆ, ಇಡೀ ಮುಖ ತುಂಬ ಕೆಂಪು ಮಾಡಿಕೊಂಡಿದ್ದ ದಪ್ಪ ಹೆಂಗಸೊಬ್ಬಳು ಸಿಡಿ ಮಿಡಿ ಮುಖ ಹೊತ್ತು ನಿಂತಿದ್ದಳು ನನ್ನ ಸ್ವಲ್ಪ ಹಿಂದೆ. ಅವಳಿಗೆ ಅದನ್ನ ಹೇಳ ಬೇಕೆಂದು ಹೊರಟವನು ಬಾಯಿ ಮುಚ್ಚಿ ನಿಂತುಕೊಂಡೆ, ಸುಮ್ನೆ ಯಾಕೆ ರಿಸ್ಕು ಅಂತ.

ಜನ ತುಂಬಿ ತುಳುಕುತ್ತಿದ್ದರೂ ದುರಾಸೆ ಕಂಡಕ್ಟರು "ಸಿರ್ಸಿ ಸಿರ್ಸಿ ಸಿರ್ಸಿ" ಅಂತ ಮೈ ಮೇಲೆ ಬಂದವರ ಹಾಗೆ ಕಿರುಚುತ್ತಿದ್ದ ಹೊರಗಡೆ. ಬಸ್ಸೊಳಗೆ ಇದ್ದವರಿಗೆಲ್ಲ ಅಷ್ಟು ಹೊತ್ತಿಗೇ ತಾಳ್ಮೆ ತಪ್ಪಿದ್ದರಿಂದ ಅವನಿಗೂ, ಡ್ರೈವರನಿಗೂ ಬಾಯಿಗೆ ಬಂದ ಹಾಗೆ ಬೈದರು. ಎಲ್ಲರೂ ಹೆದರುವ ಹಾಗೆ ಬಸ್ಸಿನ ಹೊರಮೈಯನ್ನ ಡಬ ಡಬಾಂತ ಬಡಿದ ಕಂಡಕ್ಟರು ರೈಟ್ ರೈಟ್ ಅಂತಂದು ಒಳಗೆ ತೂರಿಕೊಂಡ. ಎದುರುಗಡೆ ಸೀಟಲ್ಲಿ ಕೂತ ಮಾಣಿಗೆ ಅವನಮ್ಮ ಕುರ್ಕುರೇ ತೆಗೆತೆಗೆದು ಕೊಡುತ್ತಿದ್ದಳು. ನಂಗೆ ಆವಾಗ ನೆನ್ಪಾಯಿತು, ಬೆಳಗ್ಗಿಂದ ಏನೂ ಸರಿಯಾಗಿ ತಿಂದೇ ಇಲ್ಲ ನಾನು! ಲೇಟಾಗ್ತಿದೆ ಅಂತ ಗಡಿಬಿಡಿ ಗಡಿಬಿಡಿ ಲಿ ಹೊರಟು ಬಂದಿದ್ದೆ ಹೊಸನಗರದಿಂದ. ತಗಡು ಹೋಟೇಲೊಂದರ ಮತ್ತೂ ತಗಡು ಕಾಪಿ ಕುಡಿದು , ಒಂದು ವಡೆ ತಿಂದಿದ್ದೆ ಅಷ್ಟೆ.

ಈ ಹಸಿವು ಅನ್ನೋದು ನೆನ್ಪಾಗ್ದೇ ಇದ್ರೆ ಚೆನ್ನಾಗಿತ್ತು. ನೆನಪಾಗಿ ಕೆಲಸ ಕೆಟ್ಟಿತು. ಬಸ್ಸು ಬೇರೆ ಹೊರಟಾಯ್ತು, ಕೆಳಗಿಳಿದು ಏನೂ ಖರೀದಿ ಮಾಡುವ ಹಾಗೂ ಇಲ್ಲ. ಆ ಕುರುಕಲು ತಿನ್ನುವ ಹುಡುಗನ್ನ ನೋಡುತ್ತಿದ್ದರೆ ಮತ್ತೂ ಹಸಿವಾಗುತ್ತದೆ ಅಂದುಕೊಂಡು ಮುಖ ತಿರುವಿಸಿ ,ಎದುರುಗಡೆಯ ರಸ್ತೆಯನ್ನು ನೋಡುತ್ತಾ ನಿಂತುಕೊಂಡೆ.

ಬಸ್ಸು ಸಿದ್ದಾಪುರ ಪೇಟೆ ದಾಟಿ ಮುಂದುವರಿಯಿತು. ನಾನು ಕ್ಯಾಬಿನ್ ಬಾಗಿಲಿಗೆ ಹೇಗೇಗೋ ವರಗಿಕೊಂಡು ನಿಂತು ಬ್ಯಾಗನ್ನ ಅಲ್ಲೇ ಮೇಲುಗಡೆಯೆಲ್ಲೋ ತೂರಿಸಿ ನಿಟ್ಟುಸಿರು ಬಿಟ್ಟೆ. ಇನ್ನು ಇದೇ ಭಂಗಿಯಲ್ಲಿ ಹೆಚ್ಚೆಂದರೆ ಮುಕ್ಕಾಲು ತಾಸು ನಿಂತರಾಯಿತು, ಸಿರಸಿ ಬರುತ್ತದೆ ಅಂದುಕೊಂಡು ಹಾಯ್ ಎನಿಸಿತು. ಹಸಿವನ್ನ ನಿಧಾನವಾಗಿ ಮರೆಸುವ ಪ್ರಯತ್ನ ಮಾಡುತ್ತಿತ್ತು ಮೆದುಳು. ೪-೫ ಕಿಲೋಮೀಟರು ಬಂದಿರಬಹುದು, "ಘಮ್" ಅಂತ ಹಲಸಿನ ಹಣ್ಣಿನ ಪರಿಮಳ ಬಂದು ರಾಚಿತು ಮೂಗಿಗೆ! ಮೊದಲೇ ಕೆಟ್ಟ ಹಸಿವು, ಹಸಿದ ಹೊತ್ತಲ್ಲಿ ಹಲಸಿನ ಘಮ ಬಂದರೆ ಹೇಗಾಗಬೇಡ? ಸಟಕ್ಕನೆ ಹಿಂತಿರುಗಿ ನೋಡಿದರೆ....

ಎರಡನೇ ಸೀಟು, ಬಸ್ಸಿನ ಬಲ ಭಾಗದ್ದು. ಮದುವೆಗೆ ಹೊರಟ ಇಬ್ಬರು ಹೆಂಗಸರು ದಿವ್ಯವಾಗಿ ಅಲಂಕರಿಸಿಕೊಂಡು ಅಲ್ಲಿ ಪ್ರತಿಷ್ಠಾಪನೆಗೊಂಡಿದ್ದಾರೆ, ಅಲ್ಲೇ ಪಕ್ಕದ ಕಂಬ ಹಿಡಿದುಕೊಂಡು ಸುಮಾರು ೧೫-೧೬ ರ ಹುಡುಗಿಯೊಬ್ಬಳು ನಿಂತಿದ್ದಾಳೆ. ಈ ಹುಡುಗಿಗೆ ಪ್ರಾಯಶ: ಬಸ್ಸು ಹತ್ತೋಕೆ ಅರ್ಧ ಗಂಟೆ ಮೊದಲು ಎಲ್ಲೋ ಬಿಟ್ಟಿಯಾಗಿ ಮತ್ತು ಧಂಡಿಯಾಗಿ ಹಲಸಿನ ಹಣ್ಣು ತಿನ್ನಲು ಸಿಕ್ಕಿದೆ, ಮತ್ತು ಈ ಬಸ್ಸಿನ ಕುಲುಕಾಟದಿಂದಾಗಿ, ತಿಂದ ಅಷ್ಟನ್ನೂ ಕೆಳಗೇ, ಸರಿಯಾಗಿ ತನ್ನ ಕೆಳಗೇ ಕೂತ ಹೆಂಗಸಿನ ತಲೆಯ ಮೇಲೆ ಕಾರಿಕೊಂಡಿದ್ದಾಳೆ ಮತ್ತು, ನನ್ನ ದುರ್ದೈವಕ್ಕೆ ಹೀಗಾದ ಮಾರನೇ ಸೆಕೆಂಡಿಗೇ ಈ ಘನಘೋರ ದೃಶ್ಯ ನೋಡಿದೆ!

ಆ ಹೆಂಗಸಿನ ತಲೆ , ಮುಖ ಎಲ್ಲ ಸಂಪೂರ್ಣ ಹಲಸಿನ ತೊಳೆಗಳಿಂದ ತುಂಬಿ ಹೋಗಿತ್ತು ಪಾಪ! ಅರಸಿನದಲ್ಲಿ ಸ್ನಾನ ಮಾಡಿಸಿದಂತೆ ಎಲ್ಲ ಹಳದಿ ಹಳದಿ ಹಳದಿ. ಆಕೆಗೆ ತನಗೇನಾಯ್ತು ಎನ್ನುವುದು ಅರಿವಿಗೆ ಬರಲು ನಾಲ್ಕೆಂಟು ಸೆಕೆಂಡುಗಳೇ ಬೇಕಾದವು. ಅಲ್ಲಾ, ಅಷ್ಟು ಹೊತ್ತು ಬೇಕು , ಯಾಕೆ ಅಂದರೆ ಇಂತಹ ಅನುಭವಗಳೇನು ದಿನಾ ಆಗುತ್ತವೆಯೇ? ತನಗೇನಾಯ್ತು ಅಂತ ಅವಳಿಗೆ ಗೊತ್ತಾಗಿ ಬಾಯಿ ಬಿಡುವುದಕ್ಕೊ , ಹಲಸಿನ ತೊಳೆಯೊಂದು ಸೀದಾ ಆ ಹೆಂಗಸಿನ ಬಾಯೊಳಗೇ ಹೋಯಿತು! ಅಷ್ಟಾಗಿದ್ದೇ ತಡ, ಅತ್ಯಂತ ಅಸಹ್ಯವಾಗಿ ಮುಖ ಕಿವುಚಿಕೊಂಡು "ವ್ಯಾಕ್" ಅಂದು, ತನ್ನ ಹೊಟ್ಟೆಗೆ ಹೋಗಲು ಯತ್ನಿಸುತ್ತಿದ್ದ ಆ ಹಲಸಿನ ತೊಳೆಯನ್ನು, ಉದರದೊಳಗಿರುವ ಇನ್ನಿತರ ಸಶೇಷ ವಸ್ತುಗಳ ಸಮೇತವಾಗಿ ಹೊರಗಟ್ಟಿದಳು!.

ಇಷ್ಟಾಗುವಾಗ ಬಸ್ಸಿನ ತುಂಬ ಹಲಸಿನ ಪರಿಮಳ "ಪಸರಿಸಿತ್ತು"!. ಎಲ್ಲರೂ "ಏನು, ಏನು ಏನಾಯ್ತು, ಯಾಕಾಯ್ತು"ಅಂತೆಲ್ಲ ಮಾತಾಡಲು ಆರಂಭಿಸಿದರು. ಆ ಎರಡನೇ ಸೀಟು ಅದರ ಅಕ್ಕ - ಪಕ್ಕ ಸಣ್ಣ ವಾಂತಿ ಹಳ್ಳವೇ ನಿರ್ಮಾಣವಾಗಿತ್ತು. ಅಲ್ಲೇ ಹಿಂದೆಲ್ಲೋ ನಿಂತಿದ್ದ ಮುದುಕಿಯೊಬ್ಬಳು ಮುಂದಿದ್ದ ಯಾರನ್ನೋ ಸರಿಸಿ, "ಎಂತ್ ಆಯ್ತ್ ಇಲ್ಲಿ" ಅಂತ ಮೆಲ್ಲಗೆ ಯಾರದೋ ಕೈಯ ಸಂದಿಯಿಂದ ಹಣುಕಿದಳು, ಒಂದು ಕ್ಷಣ ಅಷ್ಟೆ- ಆ ಹಳದಿ ತಲೆ, ಕೆಳಗಿನ ಸಶೇಷ ವಸ್ತುಗಳಿಂದ ನಿರ್ಮಿಸಲ್ಪಟ್ಟು ವಿಕಾರವಾಗಿ ಕಾಣುತ್ತಿದ್ದ ರಾಶಿ , ಎಲ್ಲ ನೋಡಿದವಳೇ "ಸಿವನೇ" ಅಂತೊಂದು ದೊಡ್ಡ ಉದ್ಗಾರ ತೆಗೆದು, ತನ್ನ ಬಾಯನ್ನು ಯಥಾಸಾಧ್ಯ ಅಗಲಿಸಿ ಆ ರಾಶಿಗೇ ಸರಿಯಾಗಿ ಬೀಳುವಂತೆ ಕಕ್ಕಿದಳು- ತನ್ನೊಳಗಿನ ಎಲ್ಲವನ್ನೂ!

೩೦ ಸೆಕೆಂಡುಗಳೊಳಗಾಗಿ ಮೂರು ಮೂರು ವಾಂತಿಗಳು! ಎಲ್ಲರೂ ಎಲ್ಲರನ್ನೂ ಬೈಯುವವರೇ ಈಗ ಬಸ್ಸೊಳಗೆ. ಆದರೆ ಹೆಚ್ಚಿಗೆ ಬೈಗುಳಕ್ಕೆ ತುತ್ತಾದವಳು ಮೊದಲು ವಾಂತಿ ಮಾಡಿದವಳು. "ಗೊತಾಗಲ್ವಾ ವಾಂತಿ ಬರತ್ ಅಂತ, ಏನ್ ಖರ್ಮ ಇದು" "ಮದ್ವೆಗ್ ಹೊರ್ಟಿದ್ದೆ ನಾನು , ಸೀರೆ ಎಲ್ಲ ಗಲೀಜಾಯ್ತು" " ಥೂ, ಏನ್ ಜನನಪಾ , ಸ್ವಲ್ಪಾನೂ ಕಾಮನ್ ಸೆನ್ಸ್ ಇಲ್ಲ" - ಹೀಗೆ ಸೀರೀಸ್ ಆಫ್ ಬೈಗುಳಾಸ್! ವಾಂತಿಗೂ ಕಾಮನ್ ಸೆನ್ಸ್ ಗೂ ಎಲ್ಲಿಯ ಸಂಬಂಧಾನೋ ಗೊತ್ತಾಗಲಿಲ್ಲ ನಂಗೆ. ಪಾಪ, ಆ ರಶ್ಶು ಬಸ್ಸಲ್ಲಿ ಎಷ್ಟೇ ಕಾಮನ್ ಸೆನ್ಸ್ ಇದ್ರೂ, ಜನಗಳನ್ನ ತಳ್ಳಿ ಕಿಟಕಿ ಬಳಿ ಓಡೋಕೆ ತಾಕತ್ತೂ ಬೇಕಲ್ಲವೇ? ಭೀತಿಯಿಂದ ಅಕ್ಕ ಪಕ್ಕ ಇರುವವರ ಮುಖಭಾವ ಗಮನಿಸಲು ಆರಂಭಿಸಿದೆ, ಇನ್ಯಾರಾದರೂ ವಾಂತಿ ಮಾಡಿದರೆ ?! ಯಾರೇ ಸುಮ್ಮನೇ ಬಾಯಿ ಬಿಟ್ಟರೂ ಎಲ್ಲಿ ಒಳಗಿದ್ದದ್ದನ್ನ ಹೊರ ಹಾಕುತ್ತಾರೋ ಅನ್ನೋ ವಾಂತಿಫೋಬಿಯಾ ಶುರುವಾಯಿತು ನಂಗಂತೂ.

ನೀವಿದನ್ನು ಓದಲು ತೆಗೆದುಕೊಂಡಿರುವ ಸಮಯಕ್ಕಿಂತ ಎಷ್ಟೋ ಕಡಿಮೆ ಸಮಯದೊಳಗೆ ಈ "ವಾಂತಿ ಸರಪಣಿ ಕ್ರಿಯೆ" ಜರುಗಿದೆ ಎಂಬುದನ್ನ ನೆನಪಿನಲ್ಲಿಟ್ಟುಕೊಳ್ಳಿ. ಇಂತಹ ಒಂದು ಯಡವಟ್ಟು ಮತ್ತು ಅಸಂಗತವಾಗಿರುವ ಸನ್ನಿವೇಶವನ್ನ ನಾನು ನನ್ನ ಜೀವಮಾನದಲ್ಲೇ ಕಂಡಿರಲಿಲ್ಲ.

ಬಸ್ಸನ್ನ ಮುಂದೆಲ್ಲೋ ನಿಲ್ಲಿಸಿದರು. ಬಿರುಬೇಸಗೆಯಲ್ಲೂ ಯಾವುದೋ ಅಂಗಡಿಯಾತ "ಅರ್ಧ ಕೊಡಪಾನ" ನೀರನ್ನ ಉದಾರವಾಗಿ ದಾನ ಮಾಡಿದ. ಅಷ್ಟರಲ್ಲೇ ಹೇಗೋ ಬಸ್ಸನ್ನ ಕ್ಲೀನು ಮಾಡಲಾಯಿತು. ಮತ್ತು ಎಲ್ಲವನ್ನೂ ಆ ಹುಡುಗಿಯೇ ಮಾಡಬೇಕಾಯಿತು. ಒಂದ ವಾಂತಿಯ ಪರಿಣಾಮವಾಗಿ ಉಳಿದವರದನ್ನೂ ಬಾಚುವ ಕೆಲಸ ಅವಳಿಗೆ. ಹಲಸಿನ ಸ್ನಾನವಾದ ಹೆಂಗಸಂತೂ ಗರ ಬಡಿದವಳ ಹಾಗೆ ಸುಮ್ಮನಾಗಿ ಹೋಗಿದ್ದಳು. ಅವಳಿಗೆ ಅಲ್ಲೇ ಹೊರಗೆ ಸಣ್ಣಗೆ ತಲೆ ಸ್ನಾನ ಮಾಡಿಸಲಾಯಿತು. ಏನೇನೋ ಸಣ್ಣಗೆ ಗೊಣಗುತ್ತಿದ್ದಳು ಅವಳು. ಜೀವಮಾನ ಪೂರ್ತಿ ಹಲಸೆಂಬ ಹೊಲಸನ್ನ ಮುಟ್ಟುವುದಿಲ್ಲ ಎಂಬ ಪ್ರತಿಜ್ಞೆ ಮಾಡಿರುತ್ತಾಳೆ ಆಕೆ, ಅದಂತೂ ಶತಃಸಿದ್ಧ.

ಮತ್ತೆ ಬಸ್ಸು ಹೊರಟಿತು. ವಾಂತಿಯಾದ ಸೀಟಿನ ಮೇಲೆ ಯಾರೂ ಅಸಹ್ಯಪಟ್ಟು ಕೂರದೇ ಇದ್ದಾಗ, ಭೂಪನೊಬ್ಬ ಶಿಸ್ತಾಗಿ ತನ್ನ ಬಳಿಯಿದ್ದ ದಿನ ಪತ್ರಿಕೆಯ ಹಾಳೆಯನ್ನ ಆ ಸೀಟಿನ ಮೇಲೆ ಹಾಸಿ ಆರಾಮಾಗಿ ಕೂತೇ ಬಿಟ್ಟ. ಆಚೀಚೆ ನಿಂತವರೆಲ್ಲ ಮಿಕಿ ಮಿಕಿ ಮುಖ ನೋಡಿಕೊಂಡರು! ಬಸ್ಸೊಳಗೆ ಹಲಸಿನ ಹಣ್ಣಿನ ಪರಿಮಳ ಇನ್ನೂ ಹರಡಿತ್ತು.
ಕೆಟ್ಟ ಹಸಿವಿಂದ ಕಂಗೆಟಿದ್ದ ನನಗೆ ಆ ಪರಿಮಳವನ್ನ ಆಸ್ವಾದಿಸಬೇಕೋ, ಅಸಹ್ಯ ಪಟ್ಟುಕೊಳ್ಳಬೇಕೋ ಗೊತ್ತಾಗದೇ ತೆಪ್ಪಗೆ ನಿಂತುಕೊಂಡೆ.

ಪೂರಕ ಓದಿಗೆ :) - ಉದಯವಾಣಿ ( ಓದೋ ಮುನ್ನ ಎಚ್ಚರಿಕೆ ಇರಲಿ)

ಶನಿವಾರ, ಜೂನ್ 02, 2007

ಸಂಜೆಗೊಂದು ಕವನ..

ಬಾನಂಚಿನಲಿ ಕೆಂಪು
ಸೂರ್ಯ ಮುಳುಗುವ ಸಮಯ,
ಮೋಡಗಳ ತುದಿಯಲ್ಲಿ ಹೊನ್ನ ಕಲಶ.
ಬಾಗಿಲಲಿ ಅವಳ ನಗು
ಗುಡುಗು ಸಿಡಿಲಿನ ಮಂತ್ರಘೋಷ.

ಸಂಧ್ಯೆಯೊಡಲಿನ ಕೆಂಪು, ಸೂರ್ಯನಾಗಲೆ ತಂಪು
ಸೇರುತಿರುವನೆ ಅವನು ಅವಳ ಒಡಲೊಳಗೆ?
ಮನತೆರೆದು, ಕೈ ಚಾಚಿ, ಬರಮಾಡಿ
ಬರ ಸೆಳೆದು
ನಗುತಿಹುದು ನೋಡಲ್ಲಿ ಸಂಧ್ಯೆ ಮೊಗವು.

ದಿನದ ಕೆಲಸವ ಮುಗಿಸಿ, ಬಳಲಿ
ಸಾಗುತಲಿರಲು, ಮಂದಹಾಸವ ಬೀರಿ
ಕರೆಯುವಳು ಅವಳೆಡೆಗೆ.
ಅವನ ಪುಣ್ಯವೆ ಪುಣ್ಯ!
ಬಳಲಿಕೆಯ ಅರಿವಿಲ್ಲ,
ಕರಗುವನು ಅವಳಲ್ಲೆ,
ಕದವ ಮುಚ್ಚಿ.

{ನನ್ನ ಗೆಳತಿ ಅಂಜಲಿ ಬರೆದಿರೋ ಕವನ ಇದು. ಅಪ್ಪಣೆಯಿಲ್ಲದಿದ್ದರೂ ಇಲ್ಲಿ ಪ್ರಕಟಿಸಿದ್ದೇನೆ. ಅವಳು ಬೈದುಕೊಂಡರೂ ಬೇಜಾರಿಲ್ಲ. }

ಗುರುವಾರ, ಮೇ 31, 2007

ಅಸಂಗತ

ಅರ್ಧ ಚಂದ್ರ ಕಾಣುತ್ತಿದ್ದಾನೆ,
ನೆತ್ತಿ ಬೋಳಾದ
ಮರದ ಎಡೆಯಿಂದ.
ನನಗೆ ಈಗೀಗ ಕಣ್ಣು ಸರಿ ಕಾಣುತ್ತಿಲ್ಲ,
ವರುಷ ಸುಮಾರಾಯಿತು.

ಮೋಟು ಕಾಂಪೌಂಡಿನೊಳಗೆ
ಹರುಕು ಕುರ್ಚಿ.
ಹರಿದ ಪೇಪರಿನೊಳಗೆ
ಏನೋ ಸುದ್ದಿ.
ರಸ್ತೆ ತುಂಬೆಲ್ಲ ಕಸ ತುಂಬಿಕೊಂಡಿದೆ.
ಬೀದಿಯಂಚಿನ ಮುದುಕ
ನಿನ್ನೆ ತೀರಿಕೊಂಡ.

ಮನೆಯೊಳಗೆ ಏನೋ ಗೊಣಗಾಟ,
ತಿಳಿಯುತ್ತಿಲ್ಲ, ಯಾಕೆಂದು.
ನಮ್ಮ ಮನೆಯೆದುರಿನ
ದೀಪವೇ ಹತ್ತಿಕೊಂಡಿಲ್ಲ,
ಬೇರೆಲ್ಲ ಕಡೆ ಬೆಳಕು.

ಮೆಟ್ಟಿಲು ಹತ್ತಬೇಕು
ಒಳಗಡೆಗೆ ನಡೆಯಲು
ಕಸುವಿಲ್ಲ,
ಹೋಗದೆ ವಿಧಿಯಿಲ್ಲ..
ಕತ್ತಲೆಂದರೆ ಹೆದರಿಕೆ ನನಗೆ.

ಮಂಗಳವಾರ, ಮೇ 29, 2007

ಕನವರಿಕೆಗಳು...

ಯಾಕೆ?

ಚಂದಿರನೆಂದರೆ ಎಲ್ಲರಿಗಿಷ್ಟ,
ಹುಣ್ಣಿಮೆ, ಬಿದಿಗೆ,
ಅಮವಾಸ್ಯೆ,
ಎಲ್ಲಕ್ಕೂ ಬರೆದಿದ್ದಾರೆ ಕವನ.
ಬೆಳದಿಂಗಳು, ಕತ್ತಲು
ಎಲ್ಲಕ್ಕೂ ಕೊಟ್ಟಿದ್ದಾರೆ ಉಪಮೆಗಳ.
ಕೇಳುವರೇ ಇಲ್ಲ ಪಾಪ,
ಅವನ ಪಕ್ಕ ನಿಂತು
ತನ್ನದೇ ಪ್ರಭೆಯೊಳಗೆ ಬೆಳಗುವ
ಒಂಟಿ ನಕ್ಷತ್ರವ.

ಅಲ್ಲವೆ?

ಅರಿವೆಂದರೇನೆಂದು
ಅರಿವಾಗೋ ಹೊತ್ತಿಗೆ,
ಉಟ್ಟರಿವೆ
ಹರಿದಿರುತ್ತದೆ.

ನನ್ನನೇ ಕೇಳಿಕೊಂಡಿದ್ದು.

ಭಾವಜೀವಿಗಳೆಂದು
ಕರೆದುಕೊಳ್ಳುವ
ಎಲ್ಲರಿಗೂ ಭಾವವೇ
ಇರುತ್ತದೆಂದೇನೂ ಇಲ್ಲ.
ಭಾವದ ಬಟ್ಟೆಯೊಳಗೆ
ಅಭಾವ ಜೀವಿಗಳೂ
ಇರಬಹುದು.
ನಾನು ಭಾವನೋ
ಅಭಾವನೋ?!

ಗುರುವಾರ, ಮೇ 24, 2007

ಮತ್ತೆ HR ಕತೆ.

ನಮ್ಮನ್ನ ಅಂದರೆ ನಮ್ಮ ಕೆಲಸವನ್ನ- ಕೆಲಸ ಮಾಡುವವರನ್ನ ಹೆಚ್ಚಿನವರು ಬೈಯುತ್ತಾರೆ. HR ಗಳು ಅಂದರೆ, ಉಳಿದ ಸಹೋದ್ಯೋಗಿಗಳಿಂದ ಬೇರೆ ಇರುವವರು,distance ಕಾಪಾಡಿಕೊಳ್ಳುವವರು, ಮ್ಯಾನೇಜುಮೆಂಟಿನ CID ಗಳು .. ಹೀಗೆ. ನಾವು ಏನೂ ಮಾಡುವಂತಿಲ್ಲ. ನಮ್ಮ ಕೆಲಸದ ಹಣೇಬರ ಅದು. ಹೇಳುವವರು ಹೇಳುತ್ತಲೇ ಇರುತ್ತಾರೆ. ನಾವು ಮಾಡುವ ಕೆಲಸ ಮಾಡುತ್ತೇವೆ. ಟೆಲಿ ಮಾರ್ಕೆಟಿಂಗ್ ಗೆ ಫೋನ್ ಮಾಡುವುದಾದರೂ ಬೇಕು, ನಮ್ಮದಲ್ಲ.

ಒಂದೇ ಕೆಲ್ಸದ ಸಲುವಾಗಿ ೧೦-೨೦ ಜನಕ್ಕೆ ಫೋನಾಯಿಸುತ್ತೇವೆ, ಹತ್ತಿಪ್ಪತ್ತು ಬಗೆಯ ಉತ್ತರ ಬರುತ್ತದೆ. ಅದೆಲ್ಲ್ ಆಭ್ಯಾಸವಾಗಿದೆ, ಆದರೂ ಕೆಲವೊಮ್ಮೆ ಹೇಗೆ ಏಗುವುದೋ ತಿಳಿಯದೇ ಒದ್ದಾಡುವಂತಾಗುತ್ತದೆ.

"ನಮಸ್ಕಾರ, ನಾನು ಇಂತಿಂತವನು, ಇಂತಿಂತ ಕಡೆಯಿಂದ ಮಾತಾಡುತ್ತಿದ್ದೇನೆ, ಹೀಗೊಂದು ಕೆಲಸ ಇದೆ, ನಿಮ್ಮ ಪ್ರೊಫೈಲನ್ನ ಯಾವುದೋ ಒಂದು ಜಾಬ್ ಸೈಟಿನಲ್ಲಿ ನೋಡಿದೆ, ನಿಮ್ಗೆ ಈ ಕೆಲ್ಸದಲ್ಲಿ ಆಸಕ್ತಿ ಇದೆ ಅಂದ್ಕೋತೀನಿ"

ಉತ್ತರ ಈ ಧಾಟಿಯಲ್ಲಿ ಬರುತ್ತದೆ,

"ಯೋ , ಹೋಗಯ್ಯೋ, ಯಾಕೋ ತಲೆ ತಿಂತೀಯಾ, ನಂಗೆ ಯಾವ್ ಕೆಲ್ಸನೊ ಬ್ಯಾಡಾ ಮಾರಾಯ"

ಮತ್ತೆ ನಿಮ್ಮ profile ಯಾಕೆ ವೆಬ್ ಸೈಟ್ ಲಿ ಹಾಕಿದ್ರಿ?

"ನನ್ ಇಷ್ಟ, ಹಾಕ್ತೀನಿ, ಏನ್ ಇವಾಗ, ಫೋನ್ ಇಡು"

ಮಾರ್ಯಾದೆಯಲ್ಲಿ ಫೋನ್ ಇಟ್ಟು, ಮತ್ತೊಬ್ಬ ಕ್ಯಾಂಡಿಡೇಟ್ ಗೆ ಮಾಡಿ, ಸ್ವಲ್ಪ ಎಚ್ಚರಿಕೆಯಲ್ಲಿ ಫೋನ್ ಮಾಡಲಾಗುವುದು.
ನಮಸ್ಕಾರಾ, ನಾನು ಇಂತವನು ಅಂತವನು, ಇಂತಲ್ಲಿಂದ ಮಾತಾಡ್ತಿದೀನಿ ಸಾರ್

"ಹುಂ, ಹೇಳಿ"

ಸಾರ್ ಹೀಗೀಗೆ ಒಂದು ಕೆಲ್ಸ ಇದೆ, ನಿಮ್ ರೆಸ್ಯೂಮು ಒಂದು ವೆಬ್ ಸೈಟಲ್ಲಿ ನೋಡ್ದೆ, ಕೆಲ್ಸ ಏನಾರೂ ಚೇಂಜ್ ಮಾಡೋ ಅಲೋಚನೆ ಇದೆಯಾ? , ಇದ್ರೆ ಹೇಳಿ..

" ಹೋಗಯ್ಯಾ, ಏನ್ ಜನ ಇರ್ತಾರಪ್ಪಾ?, ನಾನು ಕೆಲ್ಸ್ದ ಚೇಂಜ್ ಮಾಡೋ ಅಲೋಚ್ನೆ ಇಲ್ದಿದ್ರೆ ರೆಸ್ಯೂಮ್ ನ ಯಾಕೋ ನೌಕ್ರಿಲೋ, ಇನ್ನೆಲ್ಲೋ ಹಾಕ್ತಿದ್ದೆ?, ಹೇಗೆ ಮಾತಾಡ್ ಬೇಕು ಅಂತನೂ ಗೊತಾಯಲ್ಲ ನಿಮ್ಗೆಲ್ಲ!, ಛೇ!"

ನಮ್ಮ ಗ್ರಹಚಾರ!.

ಶುಕ್ರವಾರ, ಮೇ 18, 2007

ಎರಡು ನನ್ನದಲ್ಲದ ಬರಹಗಳ ಬಗ್ಗೆ.

ಇಂದು ಮಧ್ಯಾಹ್ನ ಊಟ ಮಾಡಿ ಸುತ್ತುತ್ತಿದ್ದೆ, ತಂಗಿಯ ಮೆಸೇಜು ಬಂತು. ಅವಳು ಸುಖಾ ಸುಮ್ಮನೆ ಫಾರ್ವರ್ಡುಗಳನ್ನ ಕಳಿಸುವುದಿಲ್ಲವಾದ್ದರಿಂದ, ಏನಿರಬಹುದು ಅಂತ ತೆಗೆದು ನೋಡಿದೆ, ಒಂದು ಕವನ ಇತ್ತಲ್ಲಿ. ಬಹು ದಿನದ ಮೇಲೆ ಒಂದು ಗಟ್ಟಿ ಪುಟ್ಟ ಹನಿ ಓದಿದೆ.

ಚಡಪಡಿಕೆ.

ಮೌನವಾಗುಳಿವ ಶಿಲೆಯೊಳಗೆ
ಅಗಣಿತ ನೆನಪ ಭ್ರೂಣಗಳು
ಅಡಗಿ ಕುಳಿತಿವೆ;
ಶಿಲಾಬಾಲಿಕೆಯ
ಗರ್ಭಕೋಶದ ಒಳಗೆ ದಿನ ತುಂಬಿರಲೂ
ಹೆರಿಗೆಯಾಗದೆ,
ಚಡಪಡಿಸುವ ಇತಿಹಾಸಗಳಿವೆ.

ಬರೆದಿದ್ದು ಗೀತಾ ಶೆಟ್ಟಿ, ತುಪ್ಪೆ.

*********************************

ಗೆಳೆಯ ಚಿನ್ಮಯ, ಇಂಟರ್ನೆಟ್ಟು ಗೀಳಿನಾತ . ಇಡೀ ದಿನ ಪುರಸೊತ್ತು ಇತ್ತೆನ್ನಿ ಅವನಿಗೆ, ಒಂದಲ್ಲ ಒಂದು ಉಪಯುಕ್ತ ಮಾಹಿತಿಯ ಕೊಂಡಿಯನ್ನ ಕಳುಹಿಸುತ್ತಲೇ ಇರುತ್ತಾನೆ. ಇವನೇನಾದರೂ ಲಿಂಕು ಕಳುಹಿಸಿದರೆ ಉಪೇಕ್ಷಿಸುವ ಪ್ರಶ್ನೆಯೇ ಇಲ್ಲ. ಯಾವುದೋ ಒಳ್ಳೇ ಬ್ಲಾಗು, ಬರಹ, ಸರಳ ಅರ್ಥವಾಗೋ ಸೈನ್ಸು ಏನಾದರೂ ಬರುತ್ತದೆ ದಿನವೂ, ಅವನ ಕಡೆಯಿಂದ. ನಿನ್ನೆ ತನ್ನ ಎಂದಿನ ಶೈಲಿಯಲ್ಲಿ, "ದೊಸ್ತಾ ಒಂದು ಮೈಲ್ ಕಳ್ಸಿದ್ದಿ ನೋಡಲೇ" ಅಂದ. ಅವನು ಕಳಿಸಿದ್ದು, ಕನ್ನಡ ಪದ್ಯವೊಂದರ ಇಂಗ್ಲೀಷು ಅನುವಾದ! ಚಲನ ಚಿತ್ರ ಗೀತೆಗಳ ಅನುವಾದಕ್ಕೆ ಅಂತಲೇ ಒಂದು ವೆಬ್ ಸೈಟ್ ಇದೆ ಅಂತ ನಂಗೆ ಗೊತ್ತಾದ್ದೇ ನಿನ್ನೆ!
ಅವನು ಕಳುಹಿಸಿದ್ದು ಯಾರೋ ಮಾಡಿದ, ನಮ್ಮ ಅಮೃತಧಾರೆ ಸಿನಿಮಾದ, "ಹುಡುಗಾ ಹುಡುಗಾ" ಪದ್ಯದ ಅನುವಾದ. ಇಂಗ್ಲೀಷು ಅನುವಾದ ಮಾಡಿದವರ ಪಾದದ ಜೆರಾಕ್ಸು ನಂಗೆ ಅರ್ಜೆಂಟಾಗಿ ಬೇಕು.

ಮೂಲ ಪದ್ಯ:

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ದುಮಾಡೊಕು ಕಂಜೂಸು ಬುದ್ದಿ ಬೇಕಾ?
ಹನಿಮೂನಲ್ಲು ದ್ಯಾನ ಏಕಾಂತದಲ್ಲೂ ಮೌನ
ಏನೊ ಚಂದ ಹತ್ತಿರ ಬಾ ಹುಡುಗ

ಮುತ್ತಿನ ಹೊದಿಕೆ ಸುತ್ತಲು ಹೊದಿಸಿ ಅಪ್ಪಿಕೊ ಬಾರೋ ನನ್ನನ್ನ
ಚುಮುಚುಮು ಚಳಿಗೆ ಬಿಸಿ ಬಿಸಿ ಬಯಕೆ ಬೆಚ್ಚಗೆ ಇರಿಸೊ ನನ್ನನ್ನ
ಕತ್ತಲೆ ಒಳಗೆ ಕಣ್ಣಾಮುಚ್ಚಾಲೆ ಅಪ್ಪಿಕೊ ಬಾರೊ ನನ್ನನ್ನ
ಉರುಳಿಸು ಬಾರೊ ಕೆರಳಿಸು ಬಾರೊ ಅರಳಿಸು ಬಾರೊ ನನ್ನನ್ನ ಹುಡುಗ
show me love show me life
show me everything in life
take me on a holiday
show me something everyday
make me smile and make me smile
make me smile for a while
make my dreams come to live
show me how you love ur wife

ನಾಳೆಯ ಮಾತು ಯಾರಿಗೆ ಬೇಕು ಈ ಕ್ಷಣ ಪ್ರೀತಿಯ ಮಾಡೋಣ
ಮಂಚಕೆ ಹಾರಿ ಮಧುವನು ಹೀರಿ
ದಾಹವ ನೀಗಿ ಸುಖಿಸೋಣ
ಊರನು ಬಿಟ್ಟು ಊರಿಗೆ ಬಂದು ಪ್ರೀತಿಯ ತೇರನು ಏಳೆಯೋಣ
ಮದುವೆಯು ಆಯ್ತು ಮನೆ ಒಂದಾಯ್ತು ಮುದ್ದಿನ ಮಗುವನು ಪಡೆಯೋಣ.

ಇಂಗ್ಲೀಷು ಅನುವಾದ:

Boy oh boy, my sweet boy.
Do u need stingy mind to love me?..
Meditation in honeymoon, Silence in privacy.
This is not fair, oh boy, come near me boy.(2)

In this winter, put a blanket around and hug me.
In this cold cold winter, come make me warm.
Play hide and seek in the darkness with me and come hug me.
Come make me tumble and twist come make me turn.
(Boy oh boy, my sweet boy. . . . )

Show me love, show me life,
show me everything u like.
Take me on a holiday, show me something everyday.
Make me smile and make me smile, make me smile for a while.
Make my dreams come to life, show me how u life ur wife.
Who wants romantic talks,
we ll start loving from now on.
We ll jump on bed,
taste the nectar and satisfy ourselves.

We ll go from place to place and establish our love there.
We got married, got a home too, now we ll have a cute kid.
(Boy oh boy, my sweet boy. . . . )

ಭಾವನೆಗಳೇ ಇಲ್ಲದೆ ಲಾಯರು ಆಫೀಸಿನಲ್ಲೋ,(ಈ ಮಾತು ಸುಶ್ರುತನಿಗೆ ಅನ್ವಯಿಸುವುದಿಲ್ಲ)ಅಥವಾ ಯಾವುದೋ ಗವರ್ಮೆಂಟು ದಫ್ತರಿನಲ್ಲೋ ಕೆಲಸ ಮಾಡುವವರು ಬರೆದಂತಿರುವ ಈ ಅನುವಾದ ಓದಿ ಹೊಟ್ಟೇ ತುಂಬಾ ನಕ್ಕೆ, ಚಿನ್ಮಯಂಗೆ ಥ್ಯಾಂಕ್ಸು.
ಓದಿದ ನೀವೂ ಅವನಿಗೆ ಧನ್ಯವಾದ ಹೇಳುತ್ತೀರಿ!ನನಗೆ ಗೊತ್ತಿದೆ.

ಗುರುವಾರ, ಮೇ 17, 2007

ಮರುಳು ಮಾಡುವವರು.. .

(ಹಳೆಯ ಬರಹ, ಬ್ಲಾಗಿಗೆ ಹಾಕಲು ಮರೆತು ಹೋಗಿತ್ತು. ದಟ್ಸ್ ಕನ್ನಡದಲ್ಲಿ ತಿಂಗಳ ಹಿಂದೆ ಪ್ರಕಟವಾಗಿತ್ತು.)

ಮೂರ್ನಾಲ್ಕು ವರ್ಷಗಳ ಹಿಂದೆ ನಡೆದ ಕಥೆ. ನಾನು ನಮ್ಮ ಪಕ್ಕದ ಮನೆ ಶಂಕರ ಭಟ್ಟರ ಜೊತೆಗೆ ಎಲ್ಲಿಗೋ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಸತ್ಯನಾರಾಯಣ ಕತೆಯೋ ಯಾವುದೋ ಒಂದು. ಮಾಡೋಕೆ ಏನೂ ಕೆಲಸವಿಲ್ಲದೆ, ಅಲ್ಲೊಂದು ಕಟ್ಟೆಯ ಮೇಲೆ ಕೂತು ಹಳೇ ಪೇಪರ್ ಚೂರನ್ನ ಓದುತ್ತಿದ್ದೆ. ಅಷ್ಟರಲ್ಲಿ ಆ ಪುಣ್ಯ್ಯಾತ್ಮ ಬಂದ ಅಲ್ಲಿಗೆ.

"ಏನು ಹೆಸರು?" - ಶ್ರೀನಿಧಿ.
"ಏನು ಮಾಡ್ತಾ ಇದ್ದೀಯಾ?"- ಪೇಪರ್ ಓದುತ್ತಿದ್ದೇನೆ.
"ಈ ಸಣ್ಣ ಚೀಟೀನಾ"- ಹುಂ.

ನನಗವರ ಬಳಿ ಮಾತಾಡಲು ಇಷ್ಟವಿರಲಿಲ್ಲ. ಆ ವ್ಯಕ್ತಿ ಸುತ್ತ ಮುತ್ತಲ ಊರಿನಲ್ಲಿ,ಊರಿನ ಪೋಲೀಸ್ ಸ್ಟೇಷನಿನಲ್ಲಿ "ದೊಡ್ಡ ಮಾಂತ್ರಿಕ" ಅಂತ ಹೆಸರಾದವ್ರು. ನನಗೆ ಅಂತವರನ್ನ ಕಂಡರೆ ಮೊದಲೇ ಆಗದು, ಈಗ ನೋಡಿದರೆ ಪಕ್ಕಕ್ಕೇ ವಕ್ಕರಿಸಿದ್ದಾನೆ.
"ಎಲ್ಲಿ ಓದೋದು"- ಕಾಲೇಜಲ್ಲಿ.
"ಅಪ್ಪ ಏನ್ ಮಾಡ್ತಾರೆ"- ನಿಮಗ್ಯಾಕೆ?
"ದೊಡ್ದವ್ರ ಬಳಿ ಹೀಂಗೆ ಮಾತಾಡ್ಬಾರ್ದು, ನಾನ್ಯಾರು ಅಂತ ಗೊತ್ತಾ?"- ಗೊತ್ತು.
"ಆದ್ರೂ ಹೀಂಗೆ ಮಾತಾಡ್ತೀಯಾ?"- ಹೌದು.

ಒಮ್ಮೆ ಹೋದರೆ ಸಾಕಿತ್ತು, ಆದರೆ ಅವನಿಗೆ ಹೊತ್ತು ಹೋಗುತ್ತಿರಲಿಲ್ಲ ಅಂತ ಕಾಣುತ್ತದೆ. "ನಿನ್ನ ವಾಚಿರುವ ಕೈಯನ್ನು ನನ್ನ ಎದುರಿಗೆ ಹಿಡಿ, ನನ್ನ ಶಕ್ತಿ ಏನು ಅಂತ ತೋರಿಸ್ತೇನೆ ನಿಂಗೆ"ಸುಮ್ಮನೇ ಕೈ ಮುಂದೆ ಹಿಡಿದೆ."ನನ್ನ ಕಣ್ಣನ್ನೇ ನೋಡು"ಅಸಹ್ಯ, ಇನ್ನೇನು ಕಳಚಿ ಕೆಳಗೆ ಬೀಳುವ ತರ ಇದೆ, ಕಣ್ಣುಗಳು..ನನ್ನ ವಾಚಿನ ಮೇಲೆ ತನ್ನ ಬಲ ಕೈಯನ್ನು ಹಿಡಿದು ಹೇಳಿದ,"ನಿನ್ನ ವಾಚಿನ ಸಮಯವನ್ನು ಸ್ತಂಭಿಸುತ್ತೇನೆ ನಾನೀಗ, ನೋಡ್ತಾ ಇರು"ನಾನೇನು ಮಾತಾಡಲಿಲ್ಲ, ಸುಮ್ನೆ ನೋಡ್ತಾ ಕೂತೆ.ಎರಡು ನಿಮಿಷ ಗೊಣ ಗೊಣ ಗೊಣ ಅಂತ ಮಂತ್ರ ಪಠಣ ಆಯ್ತು.

"ಈಗ ನೋಡು, ನಿನ್ನ ಗಡಿಯಾರ ನಡೆಯುವುದನ್ನ ನಿಲ್ಲಿಸಿದೆ!" ಅಂತಂದು ಕೈ ತೆಗೆದರು.ಗಡಿಯಾರಕ್ಕೆ ಏನೆಂದರೆ ಏನೂ ಆಗಿರಲಿಲ್ಲ! ತನ್ನ ಪಾಡಿಗೆ ತಾನು ನಡೆಯುತ್ತಿತ್ತು! ಟಿಕ್ ಟಿಕ್ ಟಿಕ್... ಅವನನ್ನ ನೋಡಿ ನಕ್ಕೆ, ಮುಖ ಭಂಗ ಆಯಿತೇನೋ, ತಡಿ ಒಂದು ನಿಮಿಷ, ಮತ್ತೊಮ್ಮೆ ಹಿಡಿ ಅಂದ."ಒಂದು ನಿಮಿಷ ಅಲ್ಲಾ, ದಿನಾ ಇಡಿ ಕಾವು ಕೊಟ್ಟರೂ ನನ್ನ ಗಡಿಯಾರ ತಿರುಗುವುದನ್ನ ನಿಲ್ಲಿಸಲ್ಲ, ಯಾಕೆಂದರೆ, ನಿಮ್ಮ ಕೈಲಿರೋ ಉಂಗುರದ ಅಯಸ್ಕಾಂತದ ಬಲದಿಂದ , ತಿರುಗೋದನ್ನ ನಿಲ್ಲಿಸೋಕೆ ಇದರೊಳಗಿರೋದು ಕಬ್ಬಿಣದ ಮುಳ್ಳಲ್ಲ! ಪ್ಲಾಸ್ಟಿಕ್ಕಿದ್ದು" ಅಂತಂದು, ಅಲ್ಲಿಂದೆದ್ದು ಬಂದೆ.

ಸ್ವಲ್ಪ ದೂರ ಹೋಗಿ ಹಿಂದೆ ನೋಡಿದರೆ ಮತ್ಯಾರ ಬಳಿಯೋ "ನಿನ್ನ ವಾಚು ಹಿಡಿ" ಅನ್ನುತ್ತಿದ್ದ... ನನಗೆ ವಾಕರಿಕೆ ಬರುವಂತಾಯಿತು.

ಅದೇ ವ್ಯಕ್ತಿಯನ್ನ ಮತ್ತೊಮ್ಮೆ ನೋಡುವ- ಆತನ ಅತಿರೇಕಗಳನ್ನ ಗಮನಿಸುವ ಅವಕಾಶ ಸಿಕ್ಕಿತು ವರುಷದ ನಂತರ. ನಮ್ಮ ಊರಲ್ಲಿ ನಾಗಮಂಡಲ. ಲಕ್ಷಗಟ್ಟಲೆ ಖರ್ಚು ಮಾಡಿ ನಾಗಗಳನ್ನ ಸಂಪ್ರೀತಿ (?) ಮಾಡುವ ಕಾರ್ಯಕ್ರಮ. ಅಲ್ಲಿನ ಪೂಜಾವರ್ಗದ ಅರ್ಚಕರೊಬ್ಬರ ಬಳಿ ಇದ್ದ ೫೦,೦೦೦ ರೂಪಾಯಿಗಳನ್ನ ಆ ಗಡಿಬಿಡಿ ಗೊಂದಲದಲ್ಲಿ ಯಾರೋ ಕದ್ದಿದ್ದರು. ಊರ ಹಿರಿಯರಾದ ಈ ಮಹಾನುಭಾವರೂ ಅಲ್ಲಿಯೇ ಇದ್ದರು. ವಿಷಯ ಗೊತ್ತಾಗಿ ಬಂದು ಆ ಅಳುತ್ತಿದ್ದ ಅರ್ಚಕರಿಗೆ ಸಮಾಧಾನ ಮಾಡಿ, ಎಲ್ಲಿ, ಒಂದು ತೆಂಗಿನಕಾಯಿ ಕೊಡಿ ಅಂದರು. ನೆರೆದ ಜನರೆಲ್ಲ ಭಕ್ತಿ ಭಾವದಿಂದ, ಕಣ್ಬಿಟ್ಟುಕೊಂಡು ನೋಡುತ್ತಿದ್ದರು. ತೆಂಗಿನ ಕಾಯಿ ಕೈಯಲ್ಲಿ ಹಿಡಿದು, ಸುತ್ತೆಲ್ಲ ದುರುಗುಟ್ಟಿ ನೋಡಿ - ಮಂತ್ರ ಪಠಣ.

ಗಂಭೀರ ಮುಖಮುದ್ರೆ ಹೊತ್ತು, ಆ ತೆಂಗಿನ ಕಾಯನ್ನ ಅಲ್ಲೆ ಒಂದು ನಾಗನ ಕಲ್ಲಿನ ಬಳಿ ಇಟ್ಟು,ಹಮ್, ದುಡ್ಡು ಕದ್ದವನು ಇಲ್ಲೇ ಇದ್ದಾನೆ, ಇನ್ನು ಗಂಟೆಯೊಳಗಾಗಿ ಅದನ್ನ ತಂದಿಡದಿದ್ದರೆ, ರಕ್ತ ಕಾರಿ ಸಾಯುವುದು ಖಂಡಿತಾ ಅಂತ ಘೋಷಿಸಿದ.ಜನರೆಲ್ಲ ಇನ್ನೇನು ದುಡ್ಡು ಯಾರಾದರೋ ತಂದಿಟ್ಟು ಕಾಲಿಗೆ ಬೀಳುತ್ತಾರೋ ಅನ್ನುವ ಕುತೂಹಲದಲ್ಲಿ ನೋಡುತ್ತಿದ್ದರು. ಉಹೂಂ , ಯಾರೂ ಬರಲಿಲ್ಲ! ಗಂಟೆ, ೨ ಗಂಟೆ.. ಯಾರೂ ರಕ್ತ ಕಕ್ಕಲೂ ಇಲ್ಲ!ಮತ್ತೆ ಅಲ್ಲಿಗೆ ಬಂದ ಆತ, ಚಿಂತಿಸಬೇಡಿ, ನಿಮ್ಮ ದುಡ್ಡು ನಿಮಗೆ ಸಿಗುತ್ತದೆ. ಆತ ರಕ್ತ ಕಾರಿ ಸಾಯುವುದಂತೂ ಖಂಡಿತ ಅಂತಂದು ಅಲ್ಲಿಂದ ಜಾಗ ಖಾಲಿ ಮಾಡಿದ!

ನನಗೆ ತಿಳಿದ ಹಾಗೆ ಮುಂದೊಂದಷ್ಟು ದಿನ ಯಾವ ಪೇಪರಿನಲ್ಲೂ ಯಾರೂ ರಕ್ತ ಕಾರಿ ಸತ್ತಿದ್ದು ಬರಲಿಲ್ಲ, ಭಟ್ಟರಿಗೆ ದುಡ್ಡು ಸಿಗಲೂ ಇಲ್ಲ! ಯಾರಿಗೂ ಈ ಘಟನೆಯ ನೆನಪೂ ಇಲ್ಲ!

ಇವತ್ತು ಆ ಪುಣ್ಯಾತ್ಮನ ಮಗ, ದೊಡ್ಡ ಮದುವೆ ನಡೆಸಿ ಬಂದಿದ್ದಾರೆ, ಮುಂಬಯಿಯಲ್ಲಿ. ಅವರು ಇದೇ ತೆರನಾದ ವ್ಯವಹಾರಗಳನ್ನ ಸ್ವಲ್ಪ ಮೇಲ್ದರ್ಜೆಯಲ್ಲಿ ಮಾಡುತ್ತಾರೆ.ಸಿನಿಮಾ ನಟರು, ಬ್ಯುಸಿನೆಸ್ ಕುಳಗಳು ಇವರ ಲೆವೆಲ್ಲಿಗೆ. ಅಪ್ಪ ಊರಲ್ಲಿ ರಾಜಕಾರಣಿಗಳ ಹೋಮ ಹವನ ನಡೆಸುತ್ತಾ, ಪತ್ರಿಕೆಗಳಿಗೆ ಜ್ಯೋತಿಷ್ಯದ ಅಂಕಣ ಬರೆಯುತ್ತಾ ಹಾಯಾಗಿದ್ದಾರೆ. ಊರ ಜನ ಅವರನ್ನ ಅದೇ ಭಯ ಮಿಶ್ರಿತ ಭಾವದಿಂದ ನೋಡುತ್ತಾರೆ.

ನಮ್ಮಲ್ಲಿ ಏನೂ ಬದಲಾಗುವುದಿಲ್ಲ, ಯಾವತ್ತಿಗೂ! ಅಂತನಿಸುತ್ತದೆ ನನಗೆ.

ಬುಧವಾರ, ಮೇ 16, 2007

ಒಂದು ಸಾಲು!

ನನ್ನ ಸ್ನೇಹಿತ ಕಣಾದನಿಗೆ ಹುಟ್ಟು ಹಬ್ಬಕ್ಕೆ ಹಾರಯಿಸೋಣ ಅಂತ ಫೋನಾಯಿಸಿದ್ದೆ.
ಅವನಿಗೆ " ಹ್ಯಾಪಿ ಬರ್ತಡೇನಮ್ಮಾ" ಅಂತ ಅಂದೆ,
ಅವನು ಒಂದು ಘಳಿಗೆ ಸುಮ್ಮನಿದ್ದು,

" ಹಮ್, ನಂಗೆ ೨೫ ವರ್ಷ. ೨೩ನೇ ವರ್ಷಕ್ಕೆ ಭಗತ್ ಸಿಂಗ್ ಸತ್ತೇ ಹೋಗಿದ್ದನಲ್ಲ" ಅಂದ.
ಅವನು ಆವತ್ತು ಆಡಿದ ಮಾತು ಇನ್ನೂ ನನ್ನ ತಲೆಯೊಳಗೆ ಗುಂಗಿ ಹುಳ!

ಸೋಮವಾರ, ಮೇ 14, 2007

"ವೈಶಾಖ ಸಂಜೆ" - ಕಾವ್ಯ ಗಾಯನ , ಒಂದು ವರದಿ.

ನಿನ್ನೆ, ೧೩.೦೫.೨೦೦೭ ಭಾನುವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ "ವೈಶಾಖ ಸಂಜೆ- ಕಾವ್ಯ ಗಾಯನ" ಕಾರ್ಯಕ್ರಮ. ಬಿಸಿಲ ದಿನದ ನಂತರದ ಇಳಿ ಸಂಜೆಗೆ ಸಿ.ಅಶ್ವಥ್ ಗಾಯನದ ತಂಪು. ಭಾಗವತರು ಸಂಸ್ಥೆ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ, ಝೀ ಕನ್ನಡದ ಸಹಯೋಗ. ಸಿ. ಅಶ್ವಥ್ ಜೊತೆಗೆ ಸ್ವರ ಸಿಂಚನಗೈದವರು ಪಲ್ಲವಿ ಅರುಣ್, ಸುಪ್ರಿಯಾ ಆಚಾರ್ಯ ಮತ್ತು ರವಿ ಮುರೂರು. ಜೊತೆಗೆ ಎಂದಿನಂತೆ ಅಶ್ವತ್ ರವರ ಅದ್ಭುತ ಹಿನ್ನೆಲೆ ವಾದಕರ ಬಳಗ.

ಮೊದಲಿಗೆ "ಎಲ್ಲಾದರು ಇರು ಎಂತಾದರು ಇರು" ಹಾಡಿಂದ ಕಾವ್ಯ ಗಾಯನ ಆರಂಭಿಸಿದರು ಅಶ್ವಥ್, ಸಂಗಡಿಗರ ಜೊತೆಗೆ. ನಂತರ ಸುಪ್ರಿಯಾ ಆಚಾರ್ಯ "ಮುಚ್ಚುಮರೆಯಿಲ್ಲದೆಯೆ" , ಅಶ್ವಥ್ ಬಹು ಆರ್ದವಾಗಿ "ಬದುಕು ಮಾಯೆಯ ಮಾಟ" ಹಾಡಿದರು. ಪಲ್ಲವಿಯವರ ನಾಕುತಂತಿಯ "ಆವು ಈವಿನಾ" ಹಾಡಿಗೆ ಕಲಾಕ್ಷೇತ್ರ ಸ್ತಬ್ದ. ಇಷ್ಟು ಹೊತ್ತಿಗೇ ಇಡಿಯ ಕಲಾಕ್ಷೇತ್ರ ತುಂಬಿಕೊಂಡಾಗಿತ್ತು. ಭರ್ತಿ ಸಾವಿರ ಜನ. ಎಲ್ಲರೂ ನಿಧಾನಕ್ಕೆ ವೈಶಾಖದ ಸಂಜೆಯೊಳಕ್ಕೆ ಇಳಿಯುತ್ತಿದ್ದರು.

ನಮ್ಮನ್ನೆಲ್ಲ ಆಮೇಲೆ ತುಂಬಿಕೊಂಡದ್ದು ಹಾಡು ಹಾಡು ಮತ್ತು ಹಾಡು. ಶ್ರಾವಣಾ ಬಂತು, ಕವಿದಂತೆ ಮಂಜು ಈ ಹಗಲಿಗೆ, ಪಲ್ಲವಿ ತೇಲಿಸಿದ ತಪ್ಪಿ ಹೋಯಿತಲ್ಲೇ, ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಂತೆ, ಬಂಗಾರ ನೀಲ ಕಡಲಾಚೆಗೀಚೆ, ಸುಪ್ರಿಯಾ ಆಚಾರ್ಯ ಮನ ತಟ್ಟಿದ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣಾ, ಇಡಿಯ ತಂಡ ಹಾಡಿದ ನೂರು ದೇವರನೆಲ್ಲ ನೂಕಾಚೆ ದೂರ, ಅಶ್ವಥ್ ಕ್ಲಾಸಿಕ್- ನೀ ಹೀಂಗ ನೋಡಬ್ಯಾಡಾ ನನ್ನ..

ನಡುವೆ ಪುಟ್ಟ ವಿರಾಮ. ಲಹರಿಯ ಕ್ಯಾಸೆಟ್ ಹರವಿಕೊಂಡಿದ್ದ ಟೇಬಲ್ ಜನರಿಂದ ಮುತ್ತಲ್ಪಟ್ಟಿತ್ತು. ಏನು ಕ್ಯಾಸೆಟ್- ಸಿಡಿ ಇದೆ ಅಂತ ನೋಡೋಕೂ ಆಗಲಿಲ್ಲ. ವಿರಾಮದ ನಂತರ ಮತ್ತೆ ಭರಪೂರ ಹಾಡು ಹಬ್ಬ. ಸುಪ್ರಿಯಾ ದನಿಯಲ್ಲಿ ಅಮ್ಮಾ ನಿನ್ನ ಎದೆಯಾಳದಲ್ಲಿ, ಅಶ್ವಥ್ , ಕಾಣದ ಕಡಲಿಗೇ ಮೊದಲೆರಡು, ನಂತರ ಪ್ರಾಯಶಃ ಆ ಸಂಜೆಯ ಅತ್ಯುತ್ತಮ ಗೀತೆಗಳಲ್ಲಿ ಒಂದು-ಪಲ್ಲವಿ ಅರುಣ್‌ರ "ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ.." ಈಕೆ ಎಷ್ಟು ಸೊಗಸಾಗಿ ಈ ಗೀತೆಯನ್ನ ಹಾಡಿದರೆಂದರೆ, ಹಾಡು ನಿಂತು ಅರೆ ಕ್ಷಣ, ಸದ್ದೇ ಇಲ್ಲ, ಆಮೇಲೆ ಚಪ್ಪಾಳೆಗಳ ಸುರಿಮಳೆ.

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು, ದೀಪವು ನಿನ್ನದೇ ಗಾಳಿಯು ನಿನ್ನದೇ, ರವಿ ಮುರೂರು ಹಿಂದುಸ್ತಾನಿ ಲೇಪವಿತ್ತು ಹಾಡಿದ ಲಕ್ಷ್ಮೀನಾರಾಯಣ ಭಟ್ಟರ "ಮರೆಯಲಾರೆ ನಿನ್ನ ನೀರೆ" ಎಲ್ಲ ಹಾಡು ಚಂದವೋ ಚಂದ. ಅಶ್ವಥ್, "ಸ್ವಾತಂತ್ರ ಸಂಗ್ರಾಮ ಆಗಿ ೧೫೦ ವರ್ಷ ಆದ ನೆನಪಿಗೆ ಒಂದು ದೇಶ್ ಭಕ್ತಿ ಗೀತೆ ಹಾಡ್ಬಿಡೋಣ, ಖುಷಿಲಿ" ಅಂತ ಹೇಳಿ "ನಾವು ಭಾರತೀಯರು" ಅಂತ ಎಲ್ಲ ಸಹ ಗಾಯಕರೊಡನೆ ಉಚ್ಚ ಕಂಠದಲ್ಲಿ ಹಾಡಿ ನಮ್ಮೆಲರೊಳಗೆ ಒಂದೇ ಅನ್ನುವ ಭಾವ ತುಂಬಿದರು.

ಹೇಳಿ ಹೋಗು ಕಾರಣ, ಅದಾದ ಮೇಲೆ ಸುಗಮ ಸಂಗೀತದ ರಾಷ್ಟ್ರ ಗೀತೆ! (ಅಶ್ವತ್ ಉವಾಚ) - ಎದೆ ತುಂಬಿ ಹಾಡುವೆನು , ಇದನ್ನಂತೂ ಪಲ್ಲವಿ ಎದೆ ತುಂಬಿಯೇ ಹಾಡಿದರು. ಕೊನೆಗೆ "ಎದೆ ತುಂಬಿ ಹಾಡಿದೆನು "ಇಂದು"ನಾನು ಅಂತ ಪದ್ಯ ಮುಗಿಸಿದ್ದು ಇದಕ್ಕೆ ಸಾಕ್ಷಿ. ಈ ಎರಡು ಹಾಡುಗಳಾದ ಮೇಲೆ, ಕೊನೆಯ ಮೂರು "ಅಶ್ವಥ್ ತ್ರಿವಳಿಗಳು". ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ, ಕೋಡಗನಾ ಕೋಳಿ ನುಂಗಿತ್ತಾ ಮತ್ತು ತರವಲ್ಲ ತಗಿ ನಿನ್ನ ತಂಬೂರಿ! ಇವುಗಳಂತೂ ಕುಳಿತವರನ್ನ ಹುಚ್ಚೆಬ್ಬಿಸಿದವು. ಎರೆರೇರಾ... ಅಂತ ಅಶ್ವಥ್ ಹಾಡುತ್ತಿದ್ದರೆ ಕೂತವರ ಮೈಲೆಲ್ಲಾ ಮಿಂಚು ಸಂಚಾರ. ಒಂದು ಅದ್ಭುತ ಸಂಜೆ ನಾದದಲ್ಲಿ ಮಿಂದ ಅನುಭವ.

ಈ ಕಾರ್ಯಕ್ರಮ, ಒಂದು ಹೊಸ ಮೈಲಿಗಲ್ಲು ಸ್ಥಾಪಿಸಿತು. ಮೊದಲ ಬಾರಿಗೆ ಬೆಂಗಳೂರಲ್ಲಿ, ಪ್ರಾಯಶಃ ಕರ್ನಾಟಕದಲ್ಲಿ ಟಿಕೇಟು ಖರೀದಿಸಿ, ದುಡ್ಡು ಕೊಟ್ಟು ಜನ ಸುಗಮ ಸಂಗೀತ ಕೇಳುವುದಕ್ಕೆ ಬಂದಿದ್ದರು ಮತ್ತು ಕಾರ್ಯಕ್ರಮ ಹೌಸ್ ಫುಲ್! ವೇದಿಕೆಯ ಅಲಂಕಾರ ಕೂಡ ಬಹಳ ಹಿತಕರವಾಗಿತ್ತು. ಚೆಂದನೆಯ ಬೆಳಕು ಮತ್ತು ರಂಗ ಸಜ್ಜಿಕೆ.

ಒಟ್ನಲ್ಲಿ, ಒಂದ್ ಮಸ್ತ್ ಸಂಡೇ ಸಂಜೆ! ಬರೋಕಾಗದೇ ಇದ್ದವರಿಗೆ ನನ್ನ ಸಂತಾಪವಿದೆ.

ಈ ವರದಿ, ದಟ್ಸ್ ಕನ್ನಡದಲ್ಲಿ.

ಶುಕ್ರವಾರ, ಮೇ 11, 2007

ಯಾರದೋ ಅಜ್ಜ ಅಜ್ಜಿಗೆ ಹುಷಾರಿಲ್ಲದಿರುವುದೂ, ನಮಗೆ ಪ್ರಾಣ ಸಂಕಟವೂ!

ಮತ್ತೆ ಯಥಾ ಪ್ರಕಾರ ಇದು ಕಾರಣಗಳ ಬಗ್ಗೆ ಬರೆಯುತ್ತಿರುವ ಬರಹ.:)

ಈ ಅಜ್ಜ ಅಜ್ಜಿಗೆ ಹುಶಾರಿಲ್ಲದ ನೆವಗಳನ್ನ ಮನುಷ್ಯ ಜಾತಿಯವರು ಬಳಸುವ ಬಗ್ಗೆ ನಾನೂ ಬಹಳ ಓದಿದ್ದೆ, ನಕ್ಕೂ ಇದ್ದೆ. ನನ್ ಮಗಂದು ನನ್ ಕಾಲ್ ಬುಡಕ್ಕೇ ಇದು ಬರತ್ತೆ ಅಂತ ನಂಗೇನ್ ಗೊತ್ತಿತ್ತು?! ಈ HR ಕೆಲ್ಸ ಶುರು ಮಾಡಿದ್ ಮೇಲಂತೂ ತರಹೇವಾರಿ ಕಾರಣಗಳನ್ನ ಕೇಳಿ ಕೇಳಿ ಸಾಕಾಗಿ ಹೋಗಿ, ಜ್ವರ, ತಲೆನೋವು, ಆಕ್ಸಿಡೆಂಟಾಗುವುದು ಎಂಬ ಜನ ಸಾಮಾನ್ಯರಿಗೆ ವಿಶೇಷ ಅರ್ಥ ಹೊಂದಿರುವ ಪದಗಳೆಲ್ಲ ನನ್ನ ನಿಘಂಟಿನಲ್ಲಿ ಅರ್ಥ ಕಳೆದುಕೊಂಡಿವೆ.

ಆಕ್ಸಿಡೆಂಟ್ ಬಗ್ಗೆ ಬರೆದಿದ್ದೆನಲ್ಲ, ಅದು ಕಾರಣ ನಂಬರ್ ಒಂದಾದರೆ, ಈ ಅಜ್ಜ ಅಜ್ಜಿಯರನ್ನ ಸಾಯಿಸುವುದು ಮತ್ತು ಹಾಸಿಗೆ ಹಿಡಿಸುವುದಕ್ಕೆ ಎರಡನೇ ಸ್ಥಾನ, ನಮ್ಮ HR ಪ್ರಪಂಚದಲ್ಲಿ. ಹೇಗೆ ಈ ಪ್ರಹಸನ ನಡೆಯುತ್ತದೆ ಅನ್ನುವುದು ನಿಮ್ಮ ಅವಗಾಹನೆಗೆ.

ಒಬ್ಬ ಮಹಾಶಯ ಸಂದರ್ಶನಕ್ಕೆ ಹಾಜರಾಗುತ್ತಾನೆ, ಪರವಾಗಿಲ್ಲ ಈ ಪುಣ್ಯಾತ್ಮ ಅಂತ ಈ ಟೆಕ್ನಿಕಲ್ ಪ್ಯಾನಲ್ ನಿರ್ಧರಿಸಿದ ಮೇಲೆ ನಾವು HR ಗಳು ಹಳ್ಳಕ್ಕೆ ಬಿದ್ದು, ಅವನಿಗೆ ಆಫರು ಲೆಟರು ಕೊಡುತ್ತೇವೆ. "ನೋಡಪ್ಪಾ ನಿನಗೆ ನಾವು ಕೆಲಸ ಕೊಡುವಾ ಅಂತ ಮಾಡಿದ್ದೇವೆ, ಇಷ್ಟಿಷ್ಟು ಸಂಬಳ ಕೊಡುವ ವಿಚಾರ ಇದೆ, ಹೇಗೆ ನಿಂಗೆ ಆಗಬಹುದೋ?, ಯಾವಾಗ ಸೇರ್ತೀಯಾ ಕೆಲಸಕ್ಕೆ" ಇತ್ಯಾದಿ ಮಣ್ಣಾಂಗಟ್ಟಿ ವಿಷ್ಯಗಳು ಅವನಿಗೆ ಕೊಡೋ ಲೆಟರೊಳಗಿರುತ್ತದೆ.

ಮೂರು ನಾಲ್ಕು ಸುತ್ತು ಇಂಟರ್ವ್ಯೂ ಮುಗಿವುವ ೧೫ ದಿನಗಳ ವರೆಗೆ ಈ ಮನುಷ್ಯ ಅತ್ಯಂತ ವಿಧೇಯ. ದಿನಕ್ಕೆರಡು ಫೋನು, ಗುಡ್ ಮಾರ್ನಿಂಗು ವಿಷ್ ಮೈಲು, ಆಹಾ! . ಈ ಯಡವಟ್ಟು ರಿಕ್ವೈರುಮೆಂಟುಗಳಿಗೆ ಜನ ಹುಡುಕೋದೆ ಕಷ್ಟ, ನಮಗೂ ಖುಶಿಯೇ, ಇವನೊಬ್ಬ ಸೇರುತ್ತಾನಲ್ಲ ಕಂಪನೀನ ಅಂತ. ಆದರೇನು ಮಾಡುತ್ತೀರಿ?, ಆಫರು ಲೆಟರು ಸಿಕ್ಕಿದ ಮಾರನೇ ದಿನವೇ ಗಿರಾಕಿ ನಾಟ್ ರೀಚೆಬಲ್! ನಾವು ದಿನಾ ಹೊತ್ತಿಂದ ಹೊತ್ತಿಗೆ ಅವನ ಫೋನೊಳಗೆ ಹಿಡಿಯಲು ಒದ್ದಾಡಿ ಸಾಯಬೇಕು. ಅಂತೂ ಒಂದು ದಿನ ಫೋನಿಗೆ ಸಿಗುತ್ತದೆ ಪ್ರಾಣಿ.

ನಾವು ಮಾತಾಡುವ ಮೊದಲೇ ಬರುತ್ತದೆ ಉತ್ತರ.
"sorry sir, my grand pa is not well you know?" ನಮಗೆ ಹೇಗೆ ಗೊತ್ತಿರಬೇಕು?!

"its ok, when can join Mr... "

"ಇಲ್ಲ ಸಾರ್ ನಂಗೆ ಈಗಲೇ ಹೇಳೋಕೆ ಆಗಲ್ಲ, ನಮ್ಮಜ್ಜನ ಪರಿಸ್ಥಿತಿ criticalಉ, ಹೇಳೋಕೆ ಆಗಲ್ಲ, ಇವತ್ತು ನಾಳೇ ಅನ್ನೋ ಹಾಗಿದೆ, ನಾನೊಬ್ಬನೇ ಮೊಮ್ಮಗ you know?"

ಅಲ್ಲಿಗೆ ಅವನ ಹಣೆಬರಹ ತಿಳಿದಂತೆ. ನಿಜವಾಗಿ ಏನಾಗಿರತ್ತೆ ಅಂತೀರಾ?
ಆ ಪುಣ್ಯಾತ್ಮ ನಮ್ಮ ಕಂಪನಿಯ ಆಫರು ಲೆಟರು ಹಿಡಕೊಂಡು ಮತ್ತೆ ಒಂದು ಇಪ್ಪತ್ತು ಇಂಟರ್ವ್ಯೂ ಅಟೆಂಡು ಮಾಡಿ,
"ನೋಡಿ ನಂಗೆ ಇವರು ಇಷ್ಟು ಕೊಡುತ್ತಾರಂತೆ ಸಂಬಳಾನ, ನೀವೆಷ್ಟು ಕೊಡುತ್ತೀರಿ ಅಂತ ಚೌಕಾಸಿ ಶುರು ಮಾಡಿರುತ್ತಾನೆ. ಎಲ್ಲೋ ಕೆಲಸವೂ ಗಿಟ್ಟಿರುತ್ತದೆ.

ಮತ್ತೆ ವಾರವೋ, ಹದಿನೈದು ದಿನವೋ ಬಿಟ್ಟು ಫೋನ್ ಮಾಡಿ ನೋಡಿದರೆ,
" i am not interested in your offer, already join " ......." ಕಂಪನಿ you know? "ಅನ್ನುತ್ತಾನೆ!

ನಾವು ಮತ್ತೆ ಹೊಸದಾಗಿ ಕುರಿಯಾಗಲು ಇನ್ಯಾರಿಗಾರೂ ಫೋನು ಮಾಡುತ್ತೇವೆ.

ಗುರುವಾರ, ಮೇ 10, 2007

ಒಂದೆರಡು ಹಳೆಯ ಹನಿಗಳು

ನಿನ್ನೆ ಮನೇಲಿ ಧೂಳು ಜಾಡಿಸುವಾಗ ಹಳೆಯ ಡೈರಿ ಸಿಕ್ಕಿತು. ಯಾವಾಗಲೋ, ಅಂದ ಕಾಲತ್ತಿಲೆ ಬರೆದ ಹನಿಗಳು. ಬೈಕೋಬೇಡಿ, ಬಾಲಿಶವಾಗಿದೆ ಅಂತ. ಕ್ಲಾಸಲ್ಲಿ ಕೂತು ಪಾಠ ಕೇಳುತ್ತಿದ್ದಾಗ ಗೀಚಿದವು ಇವುಗಳೆಲ್ಲ.

ಮಾನ

ಯಾಕ್ ಸ್ವಾಮಿಗಳೆ
ನೀವು ಹತ್ತೋದಿಲ್ಲ
ವಿಮಾನ,
"ಉಳ್ಸಬೇಕಲ್ಲಯ್ಯಾ
ನಾವು
ಕಾವೀ
ಮಾನ."

ಈ ಹೊಸಗಾಲದ ಹುಡುಗರ ಇಂಗ್ಲೀಷು ನೋಡಿ ಹಿರಿಯರೊಬ್ಬರು ಬೈಕೊಂಡಿದ್ದು ಹೀಗೆ:
ಮಾತು ಮಾತಿಗೂ
ಗೋ ಯಾ
ಕಮ್ ಯಾ,
ಇವರಿಗೇನು
ಬುದ್ಧಿ
ಕಮ್ಮಿಯಾ?!

ಬದಲಾವಣೆ

ಮದುವೆಯಾಗಿ
ದೊರೆತ ಮೇಲೆ ರಮಣ,
ಹುಡುಗಿ ತೂಗುವಳು
ನೂರು
ಮಣ!

ಬುಧವಾರ, ಮೇ 09, 2007

ಅಡ್ದ "ಪಲ್ಲಕ್ಕಿ" ಉತ್ಸವ.

ಇಲ್ಲ, ನಾನು ಯಾವುದೇ ಮಠಾಧೀಶರ ವರ್ಧಂತಿಯ ಬಗ್ಗೆಯೋ, ದೇವಸ್ಥಾನಗಳ ಜಾತ್ರೆಗಳ ಬಗ್ಗೋ ಬರೆಯಲು ಹೊರಟಿಲ್ಲ. ಇದು ಬೇರೆಯದೇ ವಿಚಾರ. ಒಂದು ಸಿನಿಮಾನ ಸ್ವಲ್ಪ ಪೋಸ್ಟ್ ಮಾರ್ಟಂ ಮಾಡೋಣ ಅನ್ನಿಸಿತು. ಸಿನಿಮಾಕ್ಕೂ, ಈ ಟೈಟಲ್ ಗೂ ಏನು ಸಂಬಂಧ ಅಂತಾನಾ?! "ಪಲ್ಲಕ್ಕಿ" ಸಿನಿಮಾದ ಬಗ್ಗೆ ಹೇಳೋಕೆ ಹೊರಟಿರೋದು ನಾನು. ಮೊನ್ನೆ ಮೊನ್ನೆ ಈ ಚಲನ ಚಿತ್ರ ನೋಡಿದೆ, "ಕೊಂದ ಪಾಪ ತಿಂದು ಪರಿಹಾರ" ಅಂತ ಒಂದು ಗಾದೆ ಇದೆ ಕನ್ನಡದಲ್ಲಿ, ಗೊತ್ತಲ್ಲ?!, ಹಾಗಾಗಿ ಇದರ ಬಗ್ಗೆ ಬರಿಯೋಣ ಅನ್ನಿಸಿತು.

ಪಲ್ಲಕ್ಕಿ ಸಿನಿಮಾದ ಹೀರೋ ಪ್ರೇಮ್. ಆತ ಹಿಂದೆ ಎರಡು ಒಳ್ಳೆಯ ಚಿತ್ರಗಳಲ್ಲಿ ನಟಿಸಿದ್ದು, ಮತ್ತು ಈ ಚಿತ್ರಕ್ಕೆ "ಪಲ್ಲಕ್ಕಿ" ಅನ್ನುವ ಒಳ್ಳೆ ಹೆಸರಿದ್ದದ್ದು, ಈ ಸಿನ್ಮಾ ನೋಡಲು ಪ್ರೇರೇಪಿಸಿತು ನನ್ನ. ಜೊತೆಗೆ ಬೆಂಗಳೂರು ತುಂಬಾ ಅದರ ಸೊಗಸಾದ ಪೋಸ್ಟರುಗಳು ಬೇರೆ. ಬೆಣ್ಣೆಯಂತೆ ಕಾಣುವ ಹೀರೋಯಿನ್ನು, ಹೂವು, ಅದೂ ಇದು ಪೋಸ್ಟ್ರು ತುಂಬಾ.

ಚಿತ್ರದ ಕತೆ ಬಗ್ಗೆ ಹೇಗೆ ಹೇಳಬೇಕು ಅಂತ ತಿಳೀತಿಲ್ಲ ನಂಗೆ. ಹೀರೋ ಅಪಾಪೋಲಿಯಂತೆ ಕಂಡರೂ ಊರಿಗುಪಕಾರಿ. ಅವನ "ಏರಿಯಾ"ಕ್ಕೆ ಅವನೇ ಲೀಡರ್ರು ( ಎಲ್ಲಾ ಸಿನ್ಮಾಲೂ ಹೀಂಗೆ ಇರತ್ತೆ ಅಲ್ವಾ?) ಅವನಿಗೆ ೩ ಜನ ಸ್ನೇಹಿತರು, ಮತ್ತು ಅವರು ಯಾವಾಗಲೂ ಕಾಮಿಡಿಯನ್ನೇ ಮಾಡುವವರು! ಅವನಿಗೆ ಸಿಕ್ಕಾಪಟ್ಟೆ ಕನ್ನಡ ಪ್ರೇಮ. ಹೆಚ್ಚಿನ ಸಿನಿಮಾದಂತೆ ಇಲ್ಲೂ ಚಂದಾ ಸಂಗ್ರಹಿಸಿ,ಕನ್ನಡ ರಾಜ್ಯೋತ್ಸವದಂದು ಕನ್ನಡ ಕನ್ನಡ ಅಂತ ಹಾಡು ಹಾಡುತ್ತಾನೆ ಹೀರೋ!. ರೌಡಿಗಳನ್ನ ಚಚ್ಚುವುದರ ಬಗ್ಗೆ ಬೇರೆ ಹೇಳಬೇಕಾಗಿಲ್ಲ.

ಒಂದು ಹುಡುಗೀನ ನೋಡಿ ಮೊದಲ ನೋಟದ ಪ್ರೇಮ ಆಗಿಬಿಡುತ್ತದೆ, ಇಂಟರ್ವಲ್‌ವರೆಗೂ ಅವಳನ್ನ "ಪ್ರಪೋಸ್ ಮಾಡಲು" ಸುತ್ತುತ್ತಾನೆ, ಇಂಟರ್ವಲ್ ಗೆ ಮುಂಚೆ ಅವಳು ಇವನಿಗೆ, "ನೀನು ಏನು ಸಾಧನೆ ಮಾಡಿದ್ದೀಯಾ, ನಿಂಗೆ ಜವಾಬ್ದಾರಿ ಇದೆಯಾ" ಅಂತಾಳೆ. ಇಂಟರ್ವಲ್ ಆದ್ಮೇಲೆ ಹೀರೋಗೆ ಮೈ ಮೇಲೆ ಜವಾಬ್ದಾರಿಯ ದೇವರು ಬಂದು ಅಪ್ಪನ ರೇಷ್ಮೇ ಸೀರೆಯ ಫ್ಯಾಕ್ಟರಿ ಸೀಝ್ ಆಗಿದ್ದನ್ನ ಬಿಡಿಸಿ ಕೆಲ್ಸ ಶುರು! ಇಷ್ಟು ದಿನ ಆ ಕಡೆಗೆ ತಲೆ ಕೂಡಾ ಹಾಕದವನು ಆರಾಮಾಗಿ ಮಶೀನು ರಿಪೇರಿ ಸಹ ಮಾಡುತ್ತಾನೆ. ಮೈ ಪರಚಿಕೊಳ್ಳುವಷ್ಟು ಖುಷಿಯಾಯಿತು ನನಗೆ.

ಅಮೇಲೆ ಏನಾಗುತ್ತದೆ ಅಂತ ಹೇಳೋದು ಬೇಕಿಲ್ಲವಲ್ಲ! ಹೀರೋ ದಿನ ಬೆಳಗಾಗುವುದರೊಳಗೆ ಶ್ರೀಮಂತ! ಹೀರೋಯಿನ್‌ದು ಸ್ವಲ್ಪ ಫ್ಲಾಶ್ ಬ್ಯಾಕು, ಅಪ್ಪ- ಅಮ್ಮ ಕಣ್ಣೀರು, ಆಸ್ಪತ್ರೆಯಲ್ಲಿ ಕ್ಲೈಮಾಕ್ಸು. ನಿಮಗೆ ನಾನು ಬೇರಾವುದೋ ೭೦- ೮೦ರ ದಶಕದ ಸಿನಿಮಾ ಕಥೆ ಹೇಳುತ್ತಿದ್ದೇನೆ ಅನ್ನಿಸಿದರೆ ಅದು ನನ್ನ ತಪ್ಪಲ್ಲ. ಯಾರು ಕಥೆ ಹೇಳಿದರೋ, ಯಾಕಾದರೂ ಇದನ್ನ ಚಿತ್ರ ಮಾಡಿದ್ದಾರೋ, ದೇವರಿಗೇ ಗೊತ್ತು. ರೇಷ್ಮೆ ಸೀರೆ ಕಾರ್ಖಾನೆಯ ಕಾನ್ಸೆಪ್ಟು ಹೊಳೆದದ್ದು ರುದ್ರ ಭೀಕರ!

ನಾಯಕಿ ರಮಣೀತೋ ಚೌಧರಿ ನೋಡಲು ಚೆನ್ನಾಗಿದ್ದಾಳೆ, ಅವಳಿಗೆ "ನಟಿಸುವ" ಕೆಲಸವೇನೂ ಇಲ್ಲ ಇಲ್ಲಿ. ಪ್ರೇಮ್ ಅಳುವುದು ಥೇಟ್ ನಕ್ಕಂತೆಯೇ ಕಾಣುತ್ತದೆ ಮತ್ತು ಕೇಳಿಸುತ್ತದೆ. ನೋಡುವ ನಮಗೆ ನಗಬೇಕೋ , ಅಳಬೇಕೋ ಒಂದೂ ತಿಳಿಯುವುದಿಲ್ಲ. ಚಿತ್ರದ ಹಾಸ್ಯ ಅತ್ಯಂತ ಹಾಸ್ಯಾಸ್ಪದವೂ, ಸಂಗೀತ ಶಂಕಾಸ್ಪದವೂ ಆಗಿದೆ. ಗುರುಕಿರಣ್ ಹಿಂದಿಯ ಫನಾ ಚಿತ್ರದ ಬೀಟ್ಸುಗಳನ್ನ ಕದ್ದಿದ್ದಾರೆ! ನಾವೆಲ್ಲ ಕನ್ನಡ ಪ್ರೇಮಿಗಳಾಗಿರುವುದರಿಂದ ಫನಾ ನೋಡಿಲ್ಲ ಅಂತ ಅವರು ಅಂದುಕೊಂಡಿರಬಹುದು. ಹಾಡುಗಳು ಯಾವುವೂ ನೆನಪಿನಲ್ಲಿ ಉಳಿಯುವುದಿಲ್ಲ. ಒಂದು ಹಾಡಿನ "ಕಥಕ್ಕಳಿ" ಕೊರಿಯೋಗ್ರಫಿ ಚೆನ್ನಾಗಿದೆ.

ಚಿತ್ರ ನಿರ್ದೇಶಕರು- ಕೆ.ನರೇಂದ್ರ ಬಾಬು. ಇವರ ಹೆಸರು ಯಾಕೆ ಹೇಳಿದೆ ಅಂದರೆ, ಮುಂದೆ ಇವರು ಬೇರಾವುದಾದರೂ ಸಿನಿಮಾ ಮಾಡಿದರೆ "ಸ್ವಲ್ಪ ಎಚ್ಚರ ಇರಲಿ" ಅಂತ ಅಷ್ಟೆ. ಇನ್ನು ಯಾರಾದರೂ, "ಕನ್ನಡ ಚಿತ್ರರಂಗ ಉದ್ಧಾರ ಆಗುತ್ತಿರುವ ಈ ಸಮಯದಲ್ಲಿ ಈ ತರ ಕೆಟ್ಟ ವಿಮರ್ಶೆ ಮಾಡಬಾರದು" ಅಂತ ಬೊಂಬ್ಡಾ ಹೊಡಕೊಂಡರೆ, ನಾನೇನೂ ಮಾಡಲಾಗದು.
ಯಾರಿಗೂ ಮೂರು ತಾಸು ಸಮಯ ಮತ್ತು ದುಡ್ಡು ಬಿಟ್ಟಿ ಬರುವುದಿಲ್ಲ.

ಮಂಗಳವಾರ, ಮೇ 08, 2007

ಹಣ"ಕ್ರಾಸಿ"ನ ವಿಷಯ.

ಹೊಸ ೨ ರೂಪಾಯಿ ನಾಣ್ಯದ ಬಗೆಗಿನ ಲೇಖನ ಇದು. "ಪುಂಗವ"ಪತ್ರಿಕೆಯಿಂದ ಎತ್ತಿಕೊಂಡದ್ದು. ಚಿತ್ರ- ಲೇಖನ ಓದೋಕೆ ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.
ಈ ಬರಹವೇ ಎಲ್ಲವುದನ್ನ ಹೇಳುವುದರಿಂದ, ನಾನು ಹೊಸದಾಗಿ ಏನನ್ನೂ ಹೇಳುವ ಅಗತ್ಯ ಕಾಣುವುದಿಲ್ಲ.
ಅಭಿಪ್ರಾಯಗಳಿಗೆ ಸ್ವಾಗತ!


ಈ ಲೇಖನವನ್ನ ಗಮನಕ್ಕೆ ತಂದವನು ಸಂದೀಪ, ಚಿತ್ರ ಜೋಡಿಸಿದ್ದು ವಿಕಾಸ. ಅವರಿಬ್ಬರಿಗೂ ಕೃತಜ್ಞ.

ಪೂರಕ ಓದಿಗಾಗಿ :

೧. ವಿಕಿಪೀಡಿಯಾ
೨. ನ್ಯೂಸ್ ಟುಡೇ



ಸೋಮವಾರ, ಮೇ 07, 2007

ನಿಯಾನು ದೀಪಗಳ ಕೆಳಗೆ.

ಬಸ್ಟ್ಯಾಂಡು ರೈಲ್ವೇ ಸ್ಟೇಶನ್ನುಗಳ
ನಿಯಾನು ದೀಪಗಳ ಕೆಳಗೊಮ್ಮೆ
ನಿಂತು ನೋಡಿದರೆ
ವಿದಾಯದ ಹಲವು ಭಾವಗಳು
ಸುಳಿಯುವುದು ಕಾಣುವುದು, ಎಂದೂ.

ಇಲ್ಲಿಯ ತನಕ ಬೆಚ್ಚಗೆ ಬೆಸೆದಿದ್ದ
ಕೈಯ ಬಿಸುಪುಗಳೆಲ್ಲ ಅನಾಥವಾಗಿ ನಿಂತಿದ್ದು,
ಅಪ್ಪುಗೆ ಆಲಿಂಗನಗಳು ಅಸಹಾಯಕರಾಗಿ
ಅಲೆಯುವುದು,
ಸಂಧಿಸಿದ ಕಣ್ಣುಗಳ ಬಂಧಿಸಿದ ಬಂಧ
ಕಡಿದುಅಲ್ಲೆ ಬಿದ್ದಿರುವುದು

ಹುಸಿ ಮುನಿಸು, ಕಾತರ ನಿರೀಕ್ಷೆಗಳು
ಮುದುರಿ ಕುಳಿತಿರುವುದು
ಅಗಲಿದ ತುಟಿಗಳ ನಡುವಿನ ಮುತ್ತು
ಆಶ್ರಯ ಹುಡುಕುವುದು,
ಬೀಸಿದ ಕೈಗಳ ತುದಿಯ ಬೇಸರ ಅಳುತ್ತಿರುವುದು,
ಜೊತೆಗೆ ಸರಿವ ಭಾರ ಉಸಿರು.

ಕಾಣಲೇಬೇಕೆಂದಿಲ್ಲ ಇವುಗಳೆಲ್ಲ, ಎಲ್ಲರಿಗೂ.
ಆದರೆ ಕಣ್ಣಿಗೆ ಬೀಳಲೇಬೇಕು,
ಪ್ಲಾಟ್ ಫಾರಂ ಬೆಂಚಿನ ಮೇಲೆ ಬಿಟ್ಟು ಹೋದ ಒದ್ದೆ ಕರ್ಚೀಫು,
ಅಲ್ಲೆ ಪಕ್ಕದಿ ಗುಲಾಬಿಯ ಒಂಟಿ ಪಕಳೆ
ಅರೆಗತ್ತಲ ಮೂಲೆಯಲಿ ಬಿದ್ದ ಕಣ್ಣೀರ ಬಿಂದು,
ಮತ್ತು ನಿಧಾನವಾಗಿ
ದೂರ ಸಾಗುತ್ತಿರುವ ಒಂಟಿ ಪಾದಗಳು.

ಗುರುವಾರ, ಮೇ 03, 2007

ಅರಿವಿಂದ ಹೊರಗೆ. . .

ಚಕ್ರಕೆ ಪರಿಭ್ರಮಣದಿ ಸವೆವ ಭ್ರಮೆ,
ಸುಖದ ದಾರಿಯಲಿ ಸುತ್ತುವ
ಕನವರಿಕೆ

ಕುದುರೆಗೆ ಧೂಳೆಬ್ಬಿಸುವ ಹುಚ್ಚು
ಓಡುವ ಆತುರದ ಜೊತೆ
ಆಯಾಸದ ಭಯ

ಚಾಟಿಗೆ ಅಶ್ವದ ಮೈಸವರುವ ಚಪಲ!
ಏಟು ಉದ್ದೇಶವಲ್ಲ , ಮತ್ತು
ಎತ್ತಿದ ಕೈ ನೆಪ.

ಸಾರಥಿಗೆ ಖಾಲಿ ಕಣ್ಣುಗಳ ದೃಷ್ಟಿ,
ಎಲ್ಲ ಹಾದಿಯೂ ಒಂದೇ,
ಮನೆಯದನು ಬಿಟ್ಟು.

ಬತ್ತಳಿಕೆಯ ಬಾಣಕ್ಕೆ ಸ್ವಾತಂತ್ರದ ತುಡಿತ
ಶಿಂಜಿನಿಯ ದಾಟಿ ಗಾಳಿ ಸೀಳಿದರೆ,
ನೀಳ ಉಸಿರು.

ಯೋಧನಿಗೆ ಮರೀಚಿಕೆ ಮುಟ್ಟುವ ಗುರಿ
ಬಿರುದು ಹೊರುವಾಸೆ ಸುಪ್ತ
ಅಳುಕು ಬಿಡದು

ನೋಡುವಗೆ ಅಚ್ಚರಿ, ಬೆರಗು, ತಲ್ಲಣ
ನಿಜದಿ ಅಲ್ಲೇನು ಇಲ್ಲ, ಎಲ್ಲ
ಕಾಗದದ ಚಿತ್ರ.

ಬುಧವಾರ, ಮೇ 02, 2007

ಸಂಜೆಯಾಗುತಿದೆ ನಡೆ ನಡೆ ಗೆಳೆಯಾ..

ಒಂದು ಪುಟ್ಟ ದಿಬ್ಬ, ನಡುವೆ ಸಂಪಿಗೆಯ ಮರ, ಮರಕ್ಕೆ ಹುಲ್ಲಿನ ಮಾಡು, ಮಾಡಿನ ಕೆಳಗೆ ಜೋತು ಬಿದ್ದ ಪುಟ್ಟ ಪುಟ್ಟ ಕೊಳಲುಗಳು, ಗಾಳಿಗೆ ಅವು ತುಯ್ದಾಡುವಾಗ ಹೊರಡುವ ಸದ್ದು, ಸುತ್ತ ಅಲ್ಲಲ್ಲಿ ಮರ, ಗಿಡಗಳು, ದೀಪಸಾಲು, ತಂಪುಗಾಳಿ , ದಿಬ್ಬದೊಳಗಿಂದ ಹೊಮ್ಮುತಿರುವ ವೇಣು ನಿನಾದ, ಮರಳ ಹಾಸಿನ ಮೇಲೆ ಅಲ್ಲಲ್ಲಿ ಕುಳಿತು ತಲೆದೂಗುತ್ತಿರುವ ಸಂಗೀತ ಪ್ರಿಯ ಜೀವಗಳು.. ಸಂಜೆಯೊಂದು ಇದಕ್ಕೂ ಮಧುರವಾಗಲು ಸಾಧ್ಯವಿಲ್ಲ! ನ ಭೂತೋ, ಮತ್ತು ಪ್ರಾಯಶಃ ನ ಭವಿಷ್ಯತಿ.

ಸಂಜೆಯಾಗುತಿದೆ ನಡೆ ನಡೆ ಗೆಳೆಯಾ ಬೃಂದಾವನದ ಕಡೆ.. ಅನ್ನುವ ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಈ ಸಾಲುಗಳ ಸರಿಯಾದ ಭಾವ ಸ್ಫುರಣೆ ನನಗಾಗಿದ್ದು ಮೊನ್ನೆ ಮೊನ್ನೆ. ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ. ಸಂದರ್ಭ, ಸ್ಥಳ: ವಿಶ್ವ ಗೋ ಸಮ್ಮೇಲನದ ಬೃಂದಾವನ.

ಈ ನಾದವನ್ನ ಸವಿಯಲು, ಯಾರು ಬೇಕಾದರೂ , "ಯಾವಾಗ ಬೇಕಾದರೂ" ಹೋಗಬಹುದಿತ್ತು. ಹೌದು, ಯಾವಾಗ ಬೇಕಾದರೂ!! ಗೋ ಸಮ್ಮೇಲನ ನಡೆದ ೯ ದಿನಗಳಲ್ಲಿ, ಎಷ್ಟು ಹೊತ್ತಿಗೆ ಬೇಕಿದ್ದರೂ ಬೃಂದಾವನದ ಕಡೆ ಕಾಲು ಹಾಕಬಹುದಿತ್ತು, ಕಿವಿಗೊಡಬಹುದಿತ್ತು,ಮನ ತೆರೆದಿಡಬಹುದಿತ್ತು.ಇಪ್ಪತ್ತ ನಾಲ್ಕು ಘಂಟೆ ಗುಣಿಸು ೯ ದಿನ! , ವೇಣುವಿನುಣಿಸು. ಅಬ್ಬಾ!! ಕೊಳಲಿಗೆ ದನಿಯಾದವರಲ್ಲಿ ಪಂಡಿತ ವೆಂಕಟೇಶ ಗೋಡ್ಕಿಂಡಿ, ಅವರ ಶಿಷ್ಯ ಬಳಗ, ರೋಣು ಮಜುಂದಾರ್, ಇವರೆಲ್ಲ ಸೇರಿದ್ದರು. ಕಿರಣ ಗೋಡ್ಕಿಂಡಿ, ರಾಜೇಶ್ ನಾಕೋಡ್ ಸಾಥೀಗಳು. ಪ್ರವೀಣ್ ಗೋಡ್ಕಿಂಡಿಯವರ ಮಗನೂ ಒಂದು ಇಳಿ ಸಂಜೆ "ಕೃಷ್ಣಾ ನೀ ಬೇಗನೆ ಬಾರೋ" ಅಂತ ಕರೆದ, ತನ್ನ ಪುಟ್ಟ ಬೆರಳಲ್ಲಿ ಕೊಳಲು ಸವರುತ್ತಾ..

ದಿನ ಪೂರ್ತಿ ಮುರುಳಿವಾದನವಿದ್ದರೂ, ಅದಕ್ಕೆ ರಂಗು ಬಳಿಯುತ್ತಿದ್ದುದು ಸಂಜೆ ಮತ್ತು ಅದರ ಜೊತೆಗೆ ಬರುವ ನಿಷೆ. ಸುತ್ತ ಬೆಳಕು ಕಡಿಮೆ ಕಡಿಮೆಯಾಗುತ್ತ ಬಂದ ಹಾಗೆ, ಸಾಲಾಗಿ ನಿಲಿಸಿದ ಬಿದಿರ ಪುಟ್ಟ ಗೂಡುಗಳೊಳಗೆ ದೀಪ ಹೊತ್ತಿಕೊಳುತ್ತಿದ್ದ ಹಾಗೆ,ಕೃಷ್ಣನ ಮೂರ್ತಿಯ ಎದುರಿಗೆ ಬೆಳಕು ಬಿದ್ದ ಮೇಲೆ, ಕೊಳಲಿನುಸಿರ ಬಲ ಜಾಸ್ತಿಯಾಗುತ್ತಿತ್ತು. ಆಗಸದಲ್ಲಿ ತುಂಡು ಮೋಡಗಳು, ಅಲ್ಲೇ ಮೇಲೆ ನಮ್ಮ ಜೊತೆಗೇ ಬಾನ್ಸುರಿ ಕೇಳುವ ಬಾನ ರಾಜ ಚಂದಿರ.. ಇಲ್ಲಿ ಯಾರಿಗೂ ಅವಸರವಿರಲಿಲ್ಲ, ಸಂಜೆ ಬಸ್ಸಿಗೆ ಓಡಬೇಕೆಂಬ ಚಿಂತೆಯಿರಲಿಲ್ಲ, ಸಭಾಂಗಣವನ್ನ ಮತ್ತೊಬ್ಬರಿಗೆ ಬಿಟ್ಟು ಕೊಡುವ ಗಡಿಬಿಡಿಯಿರಲಿಲ್ಲ.. ಹೊತ್ತು ಕಳೆದಂತೆ ಆನಂದವೂ ಜಾಸ್ತಿ.. ಜೀವ ಉದ್ದೀಪನವಾದ ಅನುಭವ. ಸಂಗೀತವನ್ನ ನಿಜಕ್ಕೂ ಸವಿಯುವುದು ಹೇಗೆ ಅನ್ನುವದನ್ನ ನನಗೆ ಕಲಿಸಿಕೊಟ್ಟಿದ್ದು ಈ ವೃಂದಾವನೀ.

ಕೃಷ್ಣನ ಮಧುರೆಯ ಬೃಂದಾವನ ಹೀಗೆಯೇ ಇದ್ದಿರಬೇಕು. ಸುತ್ತ ಗೋಪಾಲಕರು, ಗೋವುಗಳ ಚಾಮರ ಸೇವೆ, ಗೋಪಿಕೆಯರ ಗುಂಪು, ಮರದ ತಂಪಲ್ಲಿ ನಡುವೆ ಮುರುಳೀಧರ. ಸಿದ್ಧಲಿಂಗಯ್ಯನವರು ಇತ್ತೀಚೆಗೆ ನಡೆದ ಕವಿಗೋಷ್ಠಿಯೊಂದರಲ್ಲಿ "ಬಿದಿರ ತುಂಡನ್ನು ದ್ವಾಪರದ ಭಾಗ್ಯವನ್ನಾಗಿಸಿದ ಒಬ್ಬ ಗೊಲ್ಲ" ಅಂದಿದ್ದರು. ಎಷ್ಟು ಸತ್ಯ ಆ ಸಾಲು! ಆ ಭಾಗ್ಯ ಕಲಿಯುಗಕ್ಕೂ ವಿಸ್ತರಿಸಿದೆ ಅಂತ ನನಗೆ ಖಾತ್ರಿಯಾಯಿತು, ಈ ಕಲಿಯುಗ ಬೃಂದಾವನನ್ನ ಕಂಡ ಮೇಲೆ.ಶುಕ್ರವಾರ ಸಂಜೆ- ರಾತ್ರೆ ನಾನೊಬ್ಬನೇ ಕೂತು ಕೇಳುತ್ತಿದ್ದರೆ, ಮಿತ್ರವರ್ಗ ಜೊತೆಗಿಲ್ಲವಲ್ಲಾ ಅನ್ನುವ ಖಾಲೀ ಭಾವ. ಮಾರನೇ ದಿನ ಬರಲಿದ್ದ ಸುಶ್ರುತಂಗೆ, ವಿಕಾಸಂಗೆ, ತಂಗಿಗೆ ಮೆಸೇಜು ಮಾಡೀ ಮಾಡೀ ಇಟ್ಟೆ. ಸುಶ್ರುತ ಮತ್ತು ವಿಕಾಸರು ಒದೆಯುವ ಮತ್ತು ಇತ್ಯಾದಿ ಧಮಕೀ ಹಾಕಿದ ಮೇಲೆ ಹೆದರಿ ಸುಮ್ಮನಾಗಬೇಕಾಯಿತು.

ಮರುದಿನ ಇಷ್ಟ ಮಿತ್ರರೆಲ್ಲ ಜೊತೆಗೂಡಿ ನಡುರಾತ್ರೆಯವರೆಗೂ ಮುರುಳಿಯುಲಿಯಲ್ಲಿ ಮಿಂದೆವು. ಸುಮ್ಮನೆ ಒಂದು ರೀತಿಯ ಸಮ್ಮೋಹಿನಿಗೊಳಗಾದಂತೆ ಕೇಳಿದೆ ನಾನೂ. ಮಾತಿಗಲ್ಲಿ ಜಾಗವಿರಲಿಲ್ಲ..
ಈ ಕ್ಷಣ ಕಣ್ಣು ಮುಚ್ಚಿದರೂ ನನಗೆ ಆ ಅನಾಮಧೇಯ ಕೊಳಲ ಗಾರುಡಿಗ, ಗೋಧೂಳಿ ಸಮಯ ಮತ್ತು ವಾತಾವರಣದಲ್ಲಿ, "ಧರಣಿ ಮಂಡಲ ಮಧ್ಯದೊಳಗೆ" ಹಾಡನ್ನ ತನ್ನ ಉಸಿರೊಳಗಿಂದ ವೇಣುವಿಗೆ ತಂದು, ಕೂತ ನಮ್ಮೆಲ್ಲರ ಕಣ್ಣನ್ನ ಒದ್ದೆಯಾಗಿಸಿದ್ದು ಅನುಭೂತಿಗೆ ಬರುತ್ತದೆ.